ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂದಿರ,ಮಸೀದಿ,ಚರ್ಚುಗಳ ಅಕ್ರಮ ಸಂಪತ್ತು ರಾಷ್ಟ್ರೀಕರಣಗೊಳ್ಳಬೇಕು

ಧಾರ್ಮಿಕ ಕೇಂದ್ರಗಳು ಮತ್ತು ರಾಷ್ಟ್ರೀಕರಣದ ಪ್ರಶ್ನೆಗಳು

ಡಾ. ಅಪ್ಪಗೆರೆ ಸೋಮಶೇಖರ್

ನಮ್ಮ ದೇವಾಲಯ, ಮಂದಿರಗಳು ವಿದ್ಯಾ ಕೇಂದ್ರಗಳಾಗಬೇಕು, ವಿದ್ಯಾರ್ಥಿನಿಲಯ ಹಾಗೂ ಗ್ರಂಥಾಲಯಗಳಾಗಬೇಕು’ ಎಂದು ಹೇಳಿದ ಕೇರಳಾದ ನಾರಾಯಣ ಗುರು; ‘ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರ ಬನ್ನಿ’ ಎಂದು ಹೇಳಿದ ಕುವೆಂಪು; ‘ಆಧುನಿಕ ಭಾರತದ ನಿಜವಾದ ದೇವಾಲಯಗಳೆಂದರೆ ಅಣೆಕಟ್ಟೆಗಳು, ಆಸ್ಪತ್ರೆಗಳು, ಶಾಲೆ ಮತ್ತು ಹಾಸ್ಟಲ್ಗಳು’ ಎಂದು ಹೇಳಿದ ನೆಹರು; ‘ದಲಿತರಿಗೆ ದೇವಾಲಯ ಪ್ರವೇಶಕ್ಕಿಂತ, ಲೋಕಸಭೆ ಮತ್ತು ವಿಧಾನಸಭೆಗಳ ಪ್ರವೇಶ ಮಹತ್ತರವಾದುದು’ ಎಂದು ಹೇಳಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತುಗಳನ್ನು ಗಂಭೀರವಾದ ಚರ್ಚೆಗೆ ಒಳಪಡಿಸಬೇಕಿದೆ.

ಈ ಬಗೆಯ ಅಭಿಪ್ರಾಯಗಳ ಹಿಂದಿರುವ ಕಾರಣಗಳೇನು? ಎಂಬ ಪ್ರಶ್ನೆಗಳನ್ನ ಕೇಳಿಕೊಂಡದ್ದೇ ಆದರೆ ಅವುಗಳ ಮಹತ್ವ, ಅನಿವಾರ್ಯತೆ ಹಾಗೂ ಅಗತ್ಯತೆಗಳು ಸ್ಪಷ್ಟವಾಗುತ್ತವೆ. ಜಾತಿ, ಅಸ್ಪೃಶ್ಯತೆ, ಅಸಮಾನತೆಗಳು ಈ ದೇಶಕ್ಕೆ ಕಂಟಕಗಳಾಗಿರುವ ಹಾಗೆ, ಮಂದಿರ ಮಸೀದಿ, ಚರ್ಚುಗಳು ಸಹಾ ಸಾಮಾಜಿಕ ಸಮಸ್ಯೆಗಳಾಗಿ ಪರಿಣಮಿಸಿರುವುದು ದುರಂತವೆ ಸರಿ. ಇದಕ್ಕೆ ಸಾಕ್ಷಿಯಾಗಿ ನಮ್ಮ ಮುಂದೆ ಬಾಬ್ರಿ ಮಸೀದಿಯ ದ್ವಂಸ, ರಾಮಜನ್ಮ ಭೂಮಿಯ ತಕರಾರು, ಗೋದ್ರಾ ಘಟನೆ, ಬಾಬಾ ಬುಡನ್ಗಿರಿಯ ಸಮಸ್ಯೆ, ಬದನವಾಳು ದುರಂತ, ದೇವದಾಸಿಯರನ್ನ ಸೃಷ್ಟಿಸುವ ಸವದತ್ತಿ ಎಲ್ಲಮ್ಮ, ಗುಲ್ಬರ್ಗಾದ ಮಾಪುರತಾಯಿ ದೇವಾಲಯಗಳು ಹಾಗೂ ಚರ್ಚುಗಳ ಮೇಲಿನ ದಾಳಿಯ ಘಟನೆಗಳಿವೆ.

ಇದರ ಅಪಾಯಗಳನ್ನ ಅರಿತಿದ್ದ ಕವಿರಾಜಮಾರ್ಗಕಾರ ಪರರ ಧರ್ಮ, ಪರರ ವಿಚಾರವನ್ನು ಸೈರಿಸುವುದೆ ನಿಜವಾದ ಚಿನ್ನ ಎಂಬ ಉದಾತ್ತ ಮೌಲ್ಯವನ್ನು ಪ್ರತಿಪಾದಿಸಿರುವುದನ್ನು ಕಾಣಬಹುದು. ಈ ಕಾರಣದಿಂದಲೇ ಪಿ. ಲಂಕೇಶ್ ಹೇಳಿದ್ದು ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರವೆಂದು. ಸಾಮರಸ್ಯದ ತಾಣಗಳಾಗಬೇಕಿದ್ದ ಧಾರ್ಮಿಕ ಕೇಂದ್ರಗಳು ಅಸಮಾನತೆಯ, ಅಜ್ಞಾನದ, ಅನೈತಿಕತೆಯ ನೆಲೆಗಳಾಗಿವೆ.

ಈ ದೇಶದ ಧಾರ್ಮಿಕ ಕೇಂದ್ರಗಳು ಜಾತಿ, ಅಸ್ಪೃಶ್ಯತೆ, ಅಸಮಾನತೆ, ಮತಾಂಧತೆಯನ್ನ ಆಚರಿಸುವ; ಮೌಢ್ಯ ಕಂದಾಚಾರಗಳನ್ನ ಪ್ರತಿಪಾದಿಸುವ; ತೆರೆಮರೆಯಲ್ಲಿ ಜಾತಿರಾಜಕಾರಣವನ್ನ ನಿರ್ದೇಶಿಸುವ, ನಿಯಂತ್ರಿಸುವ; ಅನ್ಯ ಧರ್ಮೀಯ, ಜನಾಂಗಿಕ ದ್ವೇಷವನ್ನು ಬಿತ್ತುವ; ಸಮಾಜ ಸೇವೆಯ ನೆಪದಲ್ಲಿ ರಾಷ್ಟ್ರ ಸಂಪತ್ತನ್ನು ದೋಚುವ; ಅಕ್ಷರ ಸೇವೆಯನ್ನ ಬಂಡವಾಳ ಮಾಡಿಕೊಂಡು ಬಿಸಿನೆಸ್ಸ್ ಮಾಡುವ; ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿನ ನೇಮಕಾತಿ ಹಾಗೂ ಪ್ರವೇಶಾತಿ ಪ್ರಕ್ರಿಯೆಯಲ್ಲ್ಲಿ ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರುವ; ನ್ಯಾಯಯುತವಾದ ತೆರಿಗೆಯನ್ನ ಕಟ್ಟದೆ ಸರ್ಕಾರಕ್ಕೆ ವಂಚನೆ ಎಸಗುತ್ತ ಸಂವಿಧಾನಕ್ಕೆ ದ್ರೋಹ ಬಗೆಯುವಲ್ಲಿ ಸಕ್ರಿಯವಾಗಿವೆ.

ಗಾಂಧೀಜಿಯವರು ಒಮ್ಮೆ ಉಡುಪಿಗೆ ಬಂದಿದ್ದ ಸಂದರ್ಭದಲ್ಲಿ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ಕೊಡುತ್ತಾರೆ. ದೇವಾಲಯವನ್ನು ಪ್ರವೇಶಿಸುವ ಮುನ್ನ ಅಲ್ಲಿನ ಪುರೋಹಿತರನ್ನ ‘ಈ ದೇವಾಲಯಕ್ಕೆ ಎಲ್ಲ ಜಾತಿಯ ಜನರಿಗೆ ಮುಕ್ತ ಪ್ರವೇಶವಿದೆಯೆ?’ ಎಂದು ಪ್ರಶ್ನಿಸುತ್ತಾರೆ. ಕೆಳಜಾತಿ ಜನರಿಗೆ ಪ್ರವೇಶವಿಲ್ಲ ಎಂಬ ವಿಚಾರ ತಿಳಿದಾಗ ‘ಕೆಳಜಾತಿಯ ಜನರ ಪ್ರವೇಶವನ್ನು ನಿರಾಕರಿಸಿರುವ ಈ ದೇವಾಲಯವನ್ನ ನಾನು ಪ್ರವೇಶಿಸುವುದಿಲ್ಲ’ ಎಂದು ಹೇಳಿ, ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಮಾಡುತ್ತಾರೆ.

ಇವತ್ತಿಗೂ ಉಡುಪಿಯ ಕೃಷ್ಣ ದೇವಾಲಯದಲ್ಲಿ ಆಚರಣೆಯಲ್ಲಿರುವ ಪಂಕ್ತಿಭೇದ ನೀತಿ; ಕನಕ ಗೋಪುರದ ವಿಚಾರವಾಗಿ ಹುಟ್ಟಿಕೊಂಡಿರುವ ವಿವಾದ, ಕುಕ್ಕೆಸುಬ್ರಹ್ಮಣ್ಯ ದೇವಾಲಯದ ಮಡೆಮಡೆಸ್ನಾನದ ಆಚರಣೆ, ದೇವರಿಗೆ ಕೆಳಜಾತಿಯ ಹೆಣ್ಣುಮಕ್ಕಳನ್ನು ಬಸವಿ ಬಿಡುವ, ಬೆತ್ತಲ ಸೇವೆ, ಬೇವಿನುಡುಗೆ-ಗಂಧದುಡುಗೆ ಸೇವೆ, ಓಕುಳಿ ಆಚರಣೆ, ದೇವದಾಸಿ ಪದ್ಧತಿಗಳು ದೇವಾಲಯಗಳಲ್ಲಿ ಇಂದಿಗೂ ಜೀವಂತವಾಗಿರುವ ಅಸ್ಪೃಶ್ಯತೆಯ ಆಚರಣೆಯನ್ನು ಸಾಬೀತುಪಡಿಸುತ್ತವೆ. ಈ ಸಮಾಜದಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಅಸ್ಪೃಶ್ಯತೆ ಆಚರಣೆ ಬಯಲಾಗಿದ್ದು ಎರಡು ಸಂದರ್ಭಗಳಲ್ಲಿ. 1. ಸರ್ಕಾರ ಶಾಲೆಗಳಲ್ಲಿ ಬಿಸಿಊಟ ಪದ್ಧತಿಯನ್ನು ಜಾರಿಗೆ ತಂದಾಗ 2. ಮಕ್ಕಳ ಶಿಕ್ಷಣ ಹಕ್ಕು ಅಧಿನಿಯಮ(ಆರ್ಟಿಇ) 2009 ಕಾಯ್ದೆಯನ್ನ ಜಾರಿಗೆ ತಂದಾಗ.

ಶಾಲೆಗಳಲ್ಲಿ ದಲಿತ ಹೆಣ್ಣು ಮಗಳು ಅಡಿಗೆ ಮಾಡಿದರೆ ನಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲವೆಂದು ಜಾತಿವಾದಿ ಪೋಷಕರು ಪ್ರತಿಭಟಿಸಿದಾಗ; ಕೆಳಜಾತಿಯ ಮಕ್ಕಳನ್ನು ಆರ್ಟಿಇ ಕಾಯ್ದೆ ಮೂಲಕ ನಮ್ಮ ಶಾಲೆಗೆ ಸೇರಿಸಿಕೊಂಡರೆ ಸಮುದ್ರಕ್ಕೆ ಕೊಳಚೆ ನೀರು ಬಿಟ್ಟಂತೆ ಎಂದು ಹೇಳಿದ ಅಜ್ಞಾನಿಗಳಿಗೆ ಬುದ್ಧಿ ಹೇಳದ ನಮ್ಮ ಸರ್ಕಾರ ಶಾಲೆಗಳಿಗೆ ಬಿಸಿಊಟ ಹಂಚುವ ಹೊಣೆಗಾರಿಕೆಯನ್ನು ಮಠಮಾನ್ಯಗಳಿಗೆ ವಹಿಸಿತು. ಆ ಮಠಮಾನ್ಯಗಳು ಬಿಸಿಊಟದ ಜೊತೆ ಕೋಮುವಾದ, ಮತಾಂಧತೆಯನ್ನ ಹಂಚಲಾರಂಭಿಸಿದವು. ಈ ಕಾಯಕಕ್ಕೆ ಸರ್ಕಾರ ಅಧಿಕೃತ ಒಪ್ಪಿಗೆ ಕೊಟ್ಟದ್ದಲ್ಲದೆ, ಅನುದಾನವನ್ನು ಕೊಟ್ಟು ಕೃತಾರ್ಥವಾಯಿತು.

ಇದರ ಜೊತೆಗೆ ಇವತ್ತಿನ ಕೋಮುವಾದಿ, ಜಾತಿವಾದಿ ಸರ್ಕಾರಗಳು ಸಾರ್ವಜನಿಕರ ತೆರಿಗೆಯ ಹಣವನ್ನು ಜಾತಿವಾದಿ ಮಂದಿರ, ಮಠಗಳಿಗೆ ಅನುದಾನ ನೀಡುವ ಮೂಲಕ ಜಾತಿಕೇಂದ್ರಗಳನ್ನ ಬೆಂಬಲಿಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ಸಾರ್ವಜನಿಕರಿಂದ ತೆರಿಗೆಯ ಸ್ವರೂಪದಲ್ಲಿ ಸಂಗ್ರಹವಾದ ಸಾರ್ವಜನಿಕ ಹಣವನ್ನು ಕೆಲವೇ ಜಾತಿವಾದಿ ಮಠ ಮಂದಿರಗಳಿಗೆ ಅನುದಾನವಾಗಿ ನೀಡುವುದು ಯಾವ ಬಗೆಯ ನೈತಿಕತೆ? ಇದು ಒಂದು ರೀತಿಯಲ್ಲಿ ಸರ್ವಾಧಿಕಾರಿ ಧೋರಣೆಯಾಗಿದೆ.

ನಮ್ಮ ನಡುವೆ ಇವತ್ತಿಗೂ ಜ್ವಲಂತ ಸಮಸ್ಯೆಯಾಗಿರುವ ಹಸಿವು, ಬಡತನ, ನಿರುದ್ಯೋಗ ನಿವಾರಣೆ ಹಾಗೂ ಅಸಂಖ್ಯಾತ ಕೊಳಗೇರಿಗಳಲ್ಲಿನ ಮೂಲಭೂತ ಸೌಕರ್ಯಗಳಿಗಾಗಿ ಬಳಸಬೇಕಾದ ಸಾರ್ವಜನಿಕ ಹಣವನ್ನು ಮಠಮಾನ್ಯಗಳಿಗೆ ಹಂಚುವುದು ಎಷ್ಟರಮಟ್ಟಿಗೆ ಸರಿ? ಉತ್ತರ ಕರ್ನಾಟಕದಲ್ಲಿ ನೆರೆಹಾವಳಿ ಬಂದು ಮನೆಮಠ, ಬದುಕನ್ನು ಕಳೆದುಕೊಂಡವರಿಗೆ; ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ; ಹಸಿವು, ಬಡತನದ ಕಾರಣ ಹಳ್ಳಿಗಳಿಂದ ಗುಳೆ ಹೊರಟ ಅಸಂಖ್ಯಾತ ಬಡವರಿಗೆ; ಬಾಲ್ಯ ಕಳೆದುಕೊಂಡ ಬಾಲಕಾರ್ಮಿಕರಿಗೆ; ಮೈಮಾರಿಕೊಂಡು ಬದುಕುತ್ತಿರುವ ವೇಶ್ಯೆಯರಿಗೆ; ಬದುಕಿನ ಅಸ್ತಿತ್ವದ ಹುಡುಕಾಟದಲ್ಲಿ ಕಂಗಾಲಾಗಿರುವ ಅಸಂಖ್ಯಾತ ವಿದ್ಯಾವಂತ ನಿರುದ್ಯೋಗಿಗಳಿಗೆ; ನಮ್ಮ ನಗರಗಳನ್ನ ಚಂದಗಾಣಿಸುತ್ತ ತಾವು ಮಾತ್ರ ಕೊಳಗೇರಿಗಳಲ್ಲಿ ಬದುಕುತ್ತ, ಮ್ಯಾನ್ಹೋಲ್ಗಳಲ್ಲಿ ಉಸಿರುಕಟ್ಟಿ ಸಾಯುತ್ತಾ, ಕಾಯಕಕ್ಕೆ ತಕ್ಕ ಕೂಲಿಸಿಗದೆ ಗುತ್ತಿಗೆದಾರರ ಶೋಷಣೆಯಿಂದ ಬಸವಳಿದ ಪೌರಕಾರ್ಮಿಕರಿಗೆ ಸದ್ಬಳಕೆಯಾಗಬೇಕಿದ್ದ ಸಾರ್ವಜನಿಕ ಹಣ ಮಠಮಾನ್ಯಗಳಿಗೆ ಹಂಚಿಕೆಯಾಗುತ್ತಿರುವುದು ಸಾಮಾಜಿಕ ಅಪರಾಧವಲ್ಲವೆ? ಬಸವಣ್ಣನ ವಾರಸುದಾರರೆಂದು ಬೀಗುವ ಸ್ವಾಮೀಜಿಗಳು ಕನಿಷ್ಠ ವಿವೇಕವಿಲ್ಲದೆ ಪೈಪೋಟಿಯಿಂದ ಸರ್ಕಾರದಿಂದ ಅನುದಾನದ ಹಣ ಪಡೆಯುತ್ತಿರುವುದು ನಾಚಿಕೆತರುವಂತಹದ್ದು. ಸರ್ಕಾರದ ಅನುದಾನವನ್ನು ಪಡೆದಿರುವ ಮಠ, ಸ್ವಾಮೀಜಿಗಳು ಒಂದರ್ಥದಲ್ಲಿ ಸಾಮಾಜಿಕ ಅಪರಾಧಿಗಳೆ.

ಹಾಗೆಯೆ ಸರ್ಕಾರ ಕೂಡಾ ಯಾವ ಯಾವ ಜಾತಿ ಮಠಗಳಿಗೆ ಅನುದಾನ ಕೊಟ್ಟಿದೆ, ಯಾವ ಮಠಗಳಿಗೆ ಕೊಟ್ಟಿಲ್ಲ? ಸರ್ಕಾರ ಅನುದಾನ ಕೊಡುವ ಧಾರ್ಮಿಕ ಸಂಸ್ಥೆಗಳ ಪಟ್ಟಿಯಲ್ಲಿ ಮಸೀದಿ, ಚರ್ಚು ಹಾಗೂ ಅನ್ಯ ಧಾರ್ಮಿಕ ಸಂಸ್ಥೆಗಳು ಇದ್ದಾವೆಯೆ? ಇಲ್ಲವೆ? ಎಂಬುದನ್ನು ನೋಡಿದರೆ ಅದರ ಜಾತಿವಾದಿ ತಾರತಮ್ಯ ಧೋರಣೆ ಬಯಲಾಗುತ್ತದೆ. ಸಾರ್ವನಿಕ ಹಣವನ್ನು ಮಠಮಾನ್ಯಗಳು ಕೊಳ್ಳೆಹೊಡೆಯುತ್ತಿದ್ದಾಗ, ಸರ್ಕಾರ ಕೊಡಲು ಬಂದ ಅನುದಾನದ ಹಣವನ್ನು ಬೇಡವೆಂದ ಏಕೈಕ ಮಠವೆಂದರೆ ಅದು ಕೈವಾರ ತಾತಯ್ಯನ ಮಠ. ಅಷ್ಟರಮಟ್ಟಿಗೆ ಅದು ತನ್ನ ನೈತಿಕತೆಯನ್ನ ಕಾಪಾಡಿಕೊಂಡಿದೆ.

ಸರ್ಕಾರ ಮಠಮಾನ್ಯಗಳಿಗೆ ಅನುದಾನ ಕೊಡುತ್ತಿರುವ ಸಂಗತಿಯು, ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ದಲ್ಲಿ ಬರುವ ಒಂದು ಘಟನೆಯನ್ನು ನೆನಪಿಗೆ ತರುತ್ತದೆ. ರಾಜ ಹರಿಶ್ಚಂದ್ರ ತನ್ನ ಅರಮನೆಗೆ ಸಾಧು-ಸಂತರನ್ನ, ಋಷಿ-ಮುನಿಗಳನ್ನ ಬರಮಾಡಿಕೊಂಡು ಅವರನ್ನ ಸತ್ಕರಿಸಿ, ದಾನಧರ್ಮ ಮಾಡುತ್ತಿರುವ ವಿಚಾರ ತಿಳಿದ ವಿಶ್ವಾಮಿತ್ರ ಆತನನ್ನು ಪರೀಕ್ಷಿಸುವ ಸಲುವಾಗಿ, ತಾನು ಬೇಡಿದ್ದೆಲ್ಲವನ್ನು ನೀಡುವೆಯಾ? ಎಂದು ಪ್ರಶ್ನಿಸುತ್ತಾನೆ. ಹರಿಶ್ಚಂದ್ರ ಇದಕ್ಕೊಪ್ಪಿದಾಗ ‘ಎತ್ತರದ ಆನೆಯ ಮೇಲೆ ಬಲಿಷ್ಠನಾದ ವ್ಯಕ್ತಿಯೊಬ್ಬ ನಿಂತು, ತನ್ನ ತೋಳ್ಬಲದಿಂದ ಕವಡೆಯನ್ನು ಆಕಾಶದೆತ್ತರಕ್ಕೆ ಜೋರಾಗಿ ಚಿಮ್ಮಿದರೆ ಅದು ಎಷ್ಟು ಎತ್ತರಕ್ಕೆ ಹೋಗುತ್ತದೊ ಅಷ್ಟು ಎತ್ತರದ ಹೊಸ ಹೊನ್ನ ರಾಶಿ ಬೇಕು’ ಎಂಬ ಬೇಡಿಕೆಯನ್ನ ವಿಶ್ವಾಮಿತ್ರ ಹರಿಶ್ಚಂದ್ರನ ಮುಂದಿಡುತ್ತಾನೆ.

ಈ ಬೇಡಿಕೆಗೆ ಹರಿಶ್ಚಂದ್ರ ಒಪ್ಪುತ್ತಾನೆ. ಪ್ರಶ್ನೆ ಇರುವುದು ಇಲ್ಲೆ. ಹರಿಶ್ಚಂದ್ರ ಕೊಡಲೊಪ್ಪಿರುವ, ಬೊಕ್ಕಸದಲ್ಲಿ ಸಂಗ್ರಹವಾಗಿರುವ ಹೊಸ ಹೊನ್ನ ರಾಶಿ ಯಾರದು? ಪ್ರಜೆಗಳ ಸುಂಕದಿಂದ ಸಂಗ್ರಹಿಸಲಾದ ಬೊಕ್ಕಸದ ಹಣವನ್ನ ಪ್ರಜೆಗಳ ಒಪ್ಪಿಗೆ ಇಲ್ಲದೆ ದಾನ ಮಾಡಲಿಕ್ಕೆ ಹರಿಶ್ಚಂದ್ರನಿಗೆ ಯಾವ ನೈತಿಕ ಹಕ್ಕಿದೆ? ಇದೇ ಪ್ರಶ್ನೆಗಳನ್ನು ಇವತ್ತು ಮಠಮಾನ್ಯಗಳಿಗೆ, ಸರ್ಕಾರದ ಸಾರ್ವಜನಿಕ ಹಣವನ್ನು ಅನುದಾನ ನೀಡುತ್ತಿರುವ ರಾಜಕಾರಣಿಗಳನ್ನ ಕೇಳಬೇಕಿದೆ.

ಪಾಶ್ಚಾತ್ಯ ಚಿಂತಕರೊಬ್ಬರು ಹೇಳುವ ಹಾಗೆ ‘ಧರ್ಮ ಅಫೀಮು ಇದ್ದ ಹಾಗೆ’. ದೇವರು, ಧರ್ಮ, ಮತಗಳಿಗೆ ಸಂಬಂಧಿಸಿದ ನಂಬಿಕೆ, ಆಚರಣೆಗಳು ಎಲ್ಲಿಯವರೆಗೆ ಖಾಸಗಿಯಾದ, ವೈಯಕ್ತಿಕ ನೆಲೆಯ ಮುಗ್ಧತೆಯ ಗೆರೆಗಳನ್ನ ದಾಟುವುದಿಲ್ಲವೋ ಅಲ್ಲಿಯವರೆಗೆ ಅವುಗಳಿಂದ ಯಾವುದೇ ಅಪಾಯವಿಲ್ಲ. ಆ ಎಲ್ಲೆಗಳನ್ನ ಮೀರಿದ್ದೇ ಆದಲ್ಲಿ ದುರಂತಗಳು ಸಂಭವಿಸುತ್ತವೆ. ಹಾಗಾಗಿ ಇವತ್ತು ಧಾರ್ಮಿಕ ನೆಲೆಯ ಮತಾಂಧತೆ ಜಾಗತಿಕ ಮಟ್ಟದ ಬಹುದೊಡ್ಡ ಸಮಸ್ಯೆಯಾಗಿದೆ. ನಮ್ಮನ್ನು ಕಾಡುತ್ತಿರುವ ಭಯೋತ್ಪಾದನೆಯ ಮೂಲ ಬೇರುಗಳು ಧಾರ್ಮಿಕ ಕೇಂದ್ರಗಳಲ್ಲಿರುವುದು ವಾಸ್ತವ ಹಾಗೂ ಭಯಾನಕ ಸಂಗತಿಯಾಗಿದೆ.

ಇನ್ನು ನಮ್ಮ ರಾಜಕಾರಣಿಗಳು ಅಧಿಕಾರ ವಹಿಸಿಕೊಳ್ಳುವಾಗ, ಯಾರ್ಯಾರ ಹೆಸರಿನಲ್ಲಿ; ಯಾರ್ಯಾರ ಪಾದ ಮುಟ್ಟಿ; ಯಾವ್ಯಾವ ಧರ್ಮ, ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದ ಅವರ ನಡವಳಿಕೆಗಳು ನಾಚಿಕೆ ತರಿಸುವಂತವು. ಇದು ಒಂದರ್ಥದಲ್ಲಿ ಸಂವಿಧಾನ ವಿರೋಧಿ ನಿಲುವೇ ಆಗಿದೆ. ಸಂವಿಧಾನಕ್ಕೆ ಬದ್ಧರಾಗಿಲ್ಲದ ನಮ್ಮ ಅಪ್ರಾಮಾಣಿಕ ರಾಜಕಾರಣಿಗಳು ಇಂಗ್ಲೇಂಡಿನ ‘ಚಾರ್ಲ್ಸ್ ಬ್ರಾಡ್ಲಾ’ ನಿಂದ ಪಾಠ ಕಲಿಯಬೇಕಿದೆ. ಗುಮಾಸ್ತನ ಮಗನಾದ ಚಾರ್ಲ್ಸ್ ಬ್ರಾಡ್ಲಾ ತನ್ನ ಜನಾನುರಾಗಿ ವ್ಯಕ್ತಿತ್ವದಿಂದಾಗಿ 1880ರಲ್ಲಿ ನಾರ್ತಂಪ್ಟನ್ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗುತ್ತಾನೆ.

ಅವತ್ತಿನ ಇಂಗ್ಲೇಂಡಿನ ಪದ್ಧತಿಯ ಪ್ರಕಾರ ರಾಜಕಾರಣಿಗಳು ಅಧಿಕಾರ ಸ್ವೀಕರಿಸುವಾಗ ಕಡ್ಡಾಯವಾಗಿ ‘ದೇವರ ಅನುಗ್ರಹದಿಂದ’ ಎಂದು ಹೇಳಬೇಕಿತ್ತು. ಆದರೆ ಬ್ರಾಡ್ಲಾ, ‘ನಾನು ಪ್ರಜೆಗಳ ಪ್ರತಿನಿಧಿ’ ಎಂದು ಹೇಳಿ ಆ ಸಂಪ್ರದಾಯವನ್ನು ವಿರೋಧಿಸಿದ ಕಾರಣ ಅಧಿಕಾರವನ್ನು ಕಳೆದುಕೊಂಡು ಜೈಲು ಶಿಕ್ಷೆಗೆ ಗುರಿಯಾಗಬೇಕಾಯಿತು. ಬ್ರಾಡ್ಲಾನ ಪರ ಸುಮಾರು 8000 ಜನ ಪ್ರತಿಭಟನೆ ನಡೆಸುತ್ತಾರೆ. ತನ್ನ ನಿಲುವಿಗೆ ಬದ್ದನಾಗಿದ್ದ ಬ್ರಾಡ್ಲಾನನ್ನು ಜನ ಮುಂದೆ ನಾಲ್ಕು ಸಲ ಅತಿ ಹೆಚ್ಚು ಬಹುಮತದಿಂದ ಗೆಲ್ಲಿಸುತ್ತಾರೆ.(‘ವೇದಾಂತ ರೆಜಿಮೆಂಟ್’-ಬಿ.ವಿ. ವೀರಭದ್ರಪ್ಪ) ಇಷ್ಟೆಲ್ಲಾ ವಿಚಾರ ವಿಶ್ಲೇಷಣೆಯ ಮೂಲ ಉದ್ದೇಶ : ಭೂಮಿಯನ್ನೂ ಒಳಗೊಂಡಂತೆ, ಈ ದೇಶದ ಮಂದಿರ, ಮಸೀದಿ, ಚರ್ಚುಗಳು; ಅವುಗಳ ಅಕ್ರಮ ಆಸ್ತಿ, ಸಂಪತ್ತು ರಾಷ್ಟ್ರೀಕರಣಗೊಳ್ಳಬೇಕು.

ಎಲ್ಲ ಜಾತಿ, ಮತ, ಧರ್ಮದ ಜನ ಮುಕ್ತವಾಗಿ ಮಂದಿರ, ಮಸೀದಿ, ಚರ್ಚುಗಳನ್ನು ಪ್ರವೇಶಿಸಿ ತಮಗಿಷ್ಟಬಂದ ದೇವರುಗಳನ್ನ ತಮಗಿಷ್ಟಬಂದಂತೆ ಆರಾಧಿಸುವಂತಾಗಬೇಕು. ದೇವರು, ಧರ್ಮಗಳ ವಿಚಾರಗಳು ಖಾಸಗಿಯಾಗಿರಬೇಕು. ನಾವೆಲ್ಲ ಭಾರತೀಯರೆಂಬ ವಾಸ್ತವ ಮಾತ್ರ ಸಾರ್ವಕಾಲಿಕ ಸತ್ಯವಾಗಬೇಕು.

‍ಲೇಖಕರು avadhi

6 April, 2013

5 Comments

  1. ಹನುಮಂತ ಹಾಲಿಗೇರಿ

    ಚಲೋ ಬರೆದಿರಿ ಸೋಮಣ್ಣಾರೆ, ಇವತ್ತಿನ ನಿಮ್ಮ ಒಂಟಿ ದನಿ ನಾಳೆ ನೂರಾಗಲಿ.

  2. bmbasheer

    ಮುಸ್ಲಿಮರ ಸಾವಿರಾರು ಕೋಟಿ ರು. ವಕ್ಫ್ ಆಸ್ತಿ ಯಾರ್ಯಾರದೋ ಕೈಯಲ್ಲಿದೆ….ಮುಸ್ಲಿಮರ ಸಮಗ್ರ ಅಭಿವ್ರುದ್ಧಿಗೆಂದು ಯಾರ್ಯಾರೋ ಪುಣ್ಯಾತ್ಮರು ದಾನ ಮಾಡಿದ ಈ ಆಸ್ತಿಯನ್ನು ಶ್ರೀಮಂತ ಕುಳಗಳು ಲೂಟಿ ಹೊಡೆಯುತ್ತಿವೆ. ಅನುಭೋಗಿಸುತ್ತಿವೆ. ಮುಸ್ಲಿಮರಲ್ಲಿ ಬಾಬರಿ ಮಸೀದಿ ಕುರಿತು ಇರುವ ಆಸಕ್ತಿ ಈ ಲಕ್ಷಾಂತರ ಕೋಟಿ ಬೆಲೆಬಾಳುವ ಭೂಮಿಗಳ ಮೇಲೆ ಇಲ್ಲದೆ ಇರೋದು ವಿಪರ್ಯಾಸ.

  3. Pramod

    ಯಸ್. ಇದು ಆಗಬೇಕು. ಜನರ ಮೇಲಿನ ಧರ್ಮಗಳ ಹಿಡಿತ ಕಮ್ಮಿ ಆಗಬಹುದು.

  4. Ambresh nayak

    Nimma lekanakke namma sampoorna bembala mathu adu yellarindalu agathya….vandanegalu

  5. ಲಿಂಗರಾಜು ಬಿ.ಎಸ್.

    ಸರ್,
    ನಿಮ್ಮ ಲೇಖನ ವಿಚಾರಪೂರ್ಣವಾಗಿದೆ. ಧಾಮರ್ಿಕ ಕೇಂದ್ರಗಳ ಎಲ್ಲಾ ಸಂಪತ್ತು ಅಕ್ರಮವೇ. ಈ ಎಲ್ಲಾ ಸಂಪತ್ತು ರಾಷ್ಟ್ರೀಕರಣಗೊಳ್ಳಬೇಕು ಎಂಬ ನಿಮ್ಮ ದನಿ ತುಂಬಾ ಹಳೆಯದಾದರೂ ಇನ್ನೂ ಬಹುಕಾಲ ಇರುವಂಥದ್ದು.
    ನಮ್ಮ ಜನರಿಗೆ ಧರ್ಮದ ಮೇಲೆ ಇರುವುದು ಪ್ರೀತಿಯಲ್ಲ, ಭಯ. ಇನ್ನು ಆಳುವವರಿಗೆ ಧರ್ಮ ಎಂಬುದು ಒಂದು ಅಧಿಕಾರಕ್ಕೆ ಬರಲು ಬಳಸಬಹುದಾದ ಸಾಧನ. ಆಳುವವರು ಹಾಗು ಧಾಮರ್ಿಕ ನೇತಾರರ ಸಂಬಂಧ ರಾಜ ಮತ್ತು ಪುರೋಹಿತರ ನಡುವಿನ ಸಂಬಂಧದಂತೆ. ಒಬ್ಬರಿಗೊಬ್ಬರು ಎಂದಿಗೂ ಬಿಟ್ಟುಕೊಡುವವರಲ್ಲ. ಪರಸ್ಪರ ಅವಲಂಬಿಗಳಾಗಿಯೇ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬಯಸುವವರು. ಇವರಿಬ್ಬರ ನಡುವಿನ ಸಂಬಂಧ ಮಧುರವಾಗಿರುವಷ್ಟು ಕಾಲ ಜನರ ಹಿತ ಯಾರ ಗಮನಕ್ಕೂ ಬರುವುದಿಲ್ಲ. ಈ ರೀತಿಯ ಆಳುವವರು ಎಂದಿಗೂ ಜನಪರವಾಗಿರುವುದಿಲ್ಲ. ಆಳುವವರು ಜನವಿರೋಧಿಯಾದರೆ ಮಠಗಳು ಅವರ ಪರವಾಗಿ ವಕಾಲತ್ತು ವಹಿಸಿ ಜನರನ್ನು ಮೂರ್ಖರನ್ನಾಗಿಸುತ್ತವೆ.
    ಅವರು ಮಠ( ಮಠ ಎಂದರೆ ಎಲ್ಲಾ ಧಾಮರ್ಿಕ ಸ್ಥಾವರಗಳು ಎಂದರ್ಥ)ಮಾನ್ಯಗಳಿಗೆ ಹೇರಳವಾಗಿ ಅನುದಾನ ನೀಡುತ್ತಾ ಹೋಗುತ್ತಾರೆ. ಮಠಗಳೂ ಯಾವ ಅಳುಕಿಲ್ಲದೆ ಅನುದಾನ ಪಡೆದುಕೊಳ್ಳುತ್ತವೆ. ಅಲ್ಲದೆ ಪಡೆದುದಕ್ಕೆ ಸಮರ್ಥನೆಯನ್ನೂ ಕೊಡುತ್ತವೆ. ಈ ರೀತಿ ಅನುದಾನ ಪಡೆದು ನಂತರ ಇವರ ಪರವಾಗಿ ನಂತರ ಬಹುಪರಾಕ್ ಹಾಕುವ ಮಠಗಳ ಮುಖ್ಯಸ್ಥರಿಗೂ ಹಿಂದಿದ್ದ ವಂಧಿಮಾಗದರಿಗೂ ಅಥವಾ ಇಂದಿನ ಪುಡಾರಿಗಳಿಗೂ ಯಾವ ವ್ಯತ್ಯಾಸವೂ ಇಲ್ಲ ಎಂಬುದು ನನ್ನಭಿಪ್ರಾಯ.
    ಈ ರೀತಿ ಆಭಿಪ್ರಾಯ ವ್ಯಕ್ತಪಡಿಸುವವರ ಮೇಲೆ ಅವರ ಹಿಡಿತದಲ್ಲಿರುವ ಕೆಲವು ಮಾಧ್ಯಮಗಳು ದಾಳಿ ನಡೆಸುತ್ತವೆ. ಬಹಳ ನಾಜೂಕಾಗಿ ಅದಕ್ಕೊಂದು ದೇಶಭಕ್ತಿಯ ಬಣ್ಣ ಬಳಿದು ಹೇಳುವ ಕಲೆ ಸಿದ್ಧಿ ಸಿಕೊಂಡಿರುವವರು ಆ ಮಾಧ್ಯಮಗಳಲ್ಲಿ ಹಲವರಿರುತ್ತಾರೆ. ಎಲ್ಲರೂ ಸೇರಿ ಸೋ ಕಾಲ್ಡ್ ಬುದ್ಧಿಜೀವಿಗಳು ಎಂದೆಲ್ಲ ದಾಳಿ ನಡೆಸುತ್ತಾರೆ.( ಹಾಗೆಂದು ಅಂಥವರಿಲ್ಲ ಎನ್ನಲಾಗದು. ಕನರ್ಾಟಕ ಕಾಪಾಡಲು ಸಮರ್ಥ ಎಂದರೆ ಜೈಲಿಗೆ ಹೋಗಿ ಬಂದವರೇ ಸರಿ ಎಂದು ಹೇಳಿದ ಚಂಪಾ ಅವರಂಥವರಿದ್ದಾರೆ.) ಹಾಗಂಥ ನಾವೇನೂ ಅಂಜಬೇಕಿಲ್ಲ. ಆದರೆ ನಮ್ಮ ಜವಾಬ್ದಾರಿ ಮರೆತು ಕುಳಿತಿರುವ ನಾವೇ ಇದಕ್ಕೆ ಕಾರಣ ಎಂದು ಬಿಡಿಸಿ ಹೇಳಬೇಕಿಲ್ಲ ಎಂದುಕೊಳ್ಳುತ್ತೇನೆ. ಸಮಾಜದ ಮುಂದಿನ ಪೀಳಿಗೆಯನ್ನು ಈ ಕುರಿತು ಎಚ್ಚರಿಸಬೇಕಿದೆ. ಅದು ಶಾಲಾ ಮಟ್ಟದಲ್ಲೇ ಆಗಬೇಕು. ಆದರೆ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಹಾಗಾಗಿ ಲಭ್ಯ ವೇದಿಕೆಗಳನ್ನು ಬಳಸಿಕೊಳ್ಳುತ್ತಲೇ ಇನ್ನಷ್ಟು ವೇದಿಕೆಗಳನ್ನು ಸೃಷ್ಟಿಸುತ್ತಲೇ ನಮ್ಮ ಕೆಲಸ ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ಮಾಡಬೇಕಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading