ಮಂಜುಳಾ ಹುಲಿಕುಂಟೆಯ ‘ದೀಪದುಳುವಿನ ಕಾತರ’

 

 

 

 

ಅಕ್ಕನ ಪ್ರೇಮ ಮತ್ತು ಗಾಲಿಬ್‌ನ ವಿರಹ ಪ್ರಪಂಚಗಳ ನಡುವೆ

ಕೆ.ವೈ.ನಾರಾಯಣಸ್ವಾಮಿ

 

 

 

 

ಹುಲಿಕುಂಟೆ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಕಾರಣಕ್ಕೋ, ಹೆಣ್ಣಾಗಿ ಬೆಳೆದ ಕಾರಣಕ್ಕೋ,  ಅಸ್ಪೃಶ್ಯತೆ, ಬಡತನ ಮತ್ತು ಜಾತಿಯ ಅಪಮಾನಗಳ ಜೊತೆ ಬೆಂದ ಕಾರಣಕ್ಕೋ ಕವಿಯಾದವಳು ಮಂಜುಳಾ.

ಹುಲಿಕುಂಟೆ ಮೂರ್ತಿ ಎಂಬ ಜೀವ ಕಾರುಣ್ಯವನ್ನು ಜನಾರಣ್ಯದಲ್ಲಿ ಅವಿಶ್ರಾಂತವಾಗಿ ಹುಡುಕುತ್ತಿರುವ ತಲ್ಲಣದ ತರುಣ ಅಂಜನ ಮೂರ್ತಿ ಈಕೆಯ ಅಣ್ಣ ಎಂಬ ಕಾರಣವು  ನಿಮಿತ್ತವಾಗಿರಬಹುದು. ಇಂತಹ ಪೂವೋತ್ತರವುಳ್ಳ ಈಕೆ  ಬರೆದ ಕವಿತೆಗಳು ನನ್ನನ್ನು ಚಕಿತಗೊಳಿಸಿವೆ.

ಈಕೆಯ ಅಂತರಂಗವೆಲ್ಲ ಗಾಲಿಬ್ ಎಂಬ ಅಪ್ಪಟ ಪ್ರೇಮದ ದೀಪ ಚೆಲ್ಲುತ್ತಿರುವ ಮಂದ ಬೆಳಕಿನಿಂದ ತುಂಬಿ ಹೋಗಿರುವುದನ್ನು ಕಂಡು ನಾನು ಅಚ್ಚರಿಗೊಂಡಿದ್ದೇನೆ. ಗಾಲಿಬ್ ಈಕೆಯ ಕವಿತೆಗಳ ಭಾಷೆಯಾಗಿದ್ದಾನೆ. ಲೋಕ ಸಂವಾದದ ಸೇತುವೆಯಾಗಿದ್ದಾನೆ. ನುಡಿವ ನಾಲಿಗೆ ಆಲಿಸುವ ಕಿವಿ ಅನುಭವವನ್ನು ರಸವಾಗಿಸುವ ವಿಭಾವವೂ ಅವನೇ ಆಗಿದ್ದಾನೆ. ಈ ಕವಿತೆಗಳ ಲೋಕವು ಹೀಗೆ ಪ್ರೇಮದ ನಿರೀಕ್ಷೆಗಿಂತ ವಿರಹದ ಅನುಭೂತಿಯನ್ನು ಕವಿತೆಯಾಗಿಸುವ ಕಡೆತುಡಿಯುತ್ತಿವೆ.

ಆದರೆ ಈ ಕವಿಗೆ ಪ್ರಜ್ಞಾಪೂರ್ವಕವಾಗಿ ಮನಸ್ಸಿನ ಒಳಗೆ ಬಂದ ಗಾಲಿಬ್‌ನ ಗುರುತು ಇರುವಂತೆ ಕನ್ನಡ ಭಾಷೆಯ ಭಾವೋಪಯೋಗಿ ವ್ಯಾಪಾರದ ಮೂಲಕವಾಗಿಯೇ ತನ್ನಲ್ಲಿ ಅಪ್ರಜ್ಞಾಪೂರ್ವಕವಾಗಿ, ಅಜ್ಞಾತವಾಗಿ ಕುಳಿತಿರುವ ಅಕ್ಕನ ಇರವು ಅರಿವಿಗೆ ಬಂದಿಲ್ಲದಿರುವುದನ್ನು ಈ ಕವಿತೆಗಳು ತೋರುತ್ತಿವೆ,  ಮಾತ್ರವಲ್ಲ ಈ ಕವಿ ಮುಂದೆ ಸಾಗಬೇಕಾದ ಗುರಿಯನ್ನು ಸಹ ತೋರುತ್ತಿವೆ. ಮಂಜುಳಾ ಬರೆದಿರುವ ಎಷ್ಟೋ ಕವಿತೆಗಳು ಗಾಲಿಬ್ ಜತೆ ನಡೆಸುವ ಸಂವಾದಗಳಂತೆ ಕಂಡರೂ ಅವು ಉತ್ಕಟವಾದ ನಿವೇದನೆಗಳು ಆಗಿರುವುದನ್ನು ನಾವು ಗುರುತಿಸಬಹುದು.

ಈ ಪದ್ಯಗಳು ಹೊಸ ತಲೆಮಾರಿನವರ ಬಗ್ಗೆ ನಾನು ತಳೆದಿದ್ದ ಅಭಿಪ್ರಾಯವನ್ನು ಬದಲು ಮಾಡುವಷ್ಟು ಬಲವಾಗಿವೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಹುಟ್ಟಿ ಈಗ ಹರೆಯಕ್ಕೆ ಬಂದ ಹುಡುಗ ಹುಡುಗಿಯರು ನಾವು ಇನ್ನೂ ಒಪ್ಪಿಕೊಳ್ಳಲು ಹೆಣಗುತ್ತಿರುವ ಜಾಗತೀಕರಣದ ವಾಸ್ತವದಲ್ಲಿ ರೂಪ ಪಡೆದುಕೊಂಡವರಾಗಿದ್ದಾರೆ. ಈ ಕಾರಣದಿಂದಲೇ ಇರಬೇಕು ಬದುಕು ಎಂದರೆ ಸದ್ಯ ಮಾತ್ರ ಎಂಬಂತೆ ನೆನ್ನೆಯಕಹಿಯ ನಿರಾಶೆಯಾಗಲಿ ಅಥವಾ ನಾಳಿನ ನಿರೀಕ್ಷೆಯ ಸಿಹಿಯ ಹಂಗಾಗಲಿ ಇಲ್ಲದೆ ಅತ್ಯಂತಿಕ ವರ್ತಮಾನದಲ್ಲಿ ಮಾತ್ರ ಬದುಕುವ ಜನಾಂಗ ಎಂಬ ಹಣೆ ಪಟ್ಟಿಯನ್ನು ಹೊತ್ತುಕೊಂಡಿದ್ದಾರೆ.

ಈ ಅನಿಸಿಕೆ ಸಟೆಯೂ ಇರಬಹುದು, ದಿಟವೂ ಇರಬಹುದು. ಇದು ಇಂದಿನವರ ಹಾಗೆ ವರ್ತಮಾನಕ್ಕೆ ಹೊಂದಿಕೊಳ್ಳಲಾಗದವರ ಅಸಂಗತ ಗ್ರಹಿಕೆಯೂ  ಆಗಿರಬಹುದು. ಒಂದು ಮಾತ್ರ ನಿಜ ಕವಿತೆಯನ್ನು ಬೆನ್ನು ಹತ್ತುವುದೆಂದರೆ ಹುಲಿಯ ಸವಾರಿ ಎಂದೇ ಅರ್ಥ. ಆದರೆ ಕವಿಯ ಅರಿವಿಗೆ ಬರುವುದು ಸವಾರಿ ಮಾಡುವಾಗಲೇ ಹೊರತು ಏರುವ ಮುನ್ನವಲ್ಲ. ಕವಿತೆಯನ್ನು ಕನ್ನಡಿಯಾಗಿಸಿಕೊಂಡ ಕವಿಗಳು ತಮ್ಮ ಒಳಗಿನ ಕತ್ತಲೆಯ ರೂಪವಗಳನ್ನು ಬಣ್ಣಿಸುತ್ತಿರುತ್ತಾರೆ. ಕವಿತೆಯನ್ನು ದೀಪವಾಗಿಸಿಕೊಂಡವರು ಕಣ್ಣ ಮುಂದಿನ ದಾರಿಯಲ್ಲಿರುವ ಕತ್ತಲ ಸಂಕಗಳನ್ನು ದಾಟಲು ಬಳಸುತ್ತಾರೆ. ಮಂಜುಳಾ ತನ್ನ ಕವಿತೆಗಳಲ್ಲಿ ಈ ಎರಡೂ ವಿಧಾನಗಳನ್ನು ಬಳಸುವುದನ್ನು ಕಾಣಬಹುದು. ಆದಕಾರಣ ಈ ಕವಿತೆಗಳು ಆಪ್ತವೂ ಆಗುತ್ತವೆ ಹಾಗೆಯೇ ಓದುಗರನ್ನು ಅನುಭವದಲ್ಲಿ ಪಾಲ್ಗೊಳ್ಳುವಂತೆ ವಶೀಕರಣ ಮಾಡುತ್ತವೆ.

ಇವೊತ್ತಿನ ವರ್ತಮಾನದಲ್ಲಿ ಉತ್ಕಟವಾದ ಪ್ರೀತಿ ಮತ್ತು ತನ್ಮಯಗೊಂಡ ಭಕ್ತಿ ಎರಡೂ ಸಾದ್ಯವಿಲ್ಲದ ಸಂಗತಿಗಳಾಗಿವೆ. ಮನುಷ್ಯ ಸಹಜವಾಗಿ ಪಡೆಯುವ ಅನುಭವದ ದಾರಿಗಳು ಇಂದು ಮುಚ್ಚಿ ಹೋಗಿವೆ. ವಸ್ತು ಜಗತ್ತಿನ ಜೊತೆ ಏರ್ಪಡುವ ಸಂಬಂಧಗಳ ಆಧಾರದಲ್ಲಿಯೇ ಅನುಭವಗಳು ಮೂಡುವುದಲ್ಲವೆ? ಆದರೆ ಇಂದು ವರ್ಚೂಯಲ್ ಪ್ರಪಂಚದ ಲೋಕಾನುಭವವು ಈ ಸಹಜ ಪ್ರಕ್ರಿಯೆಯನ್ನು ಭಗ್ನಗೊಳಿಸಿದೆ. ಸಹಜ ಅನುಭವದ ಸಾವಯವತೆ ಮರೆಯಾಗಿದೆ. ಇದು ಸಂಬಂಧಗಳ ಜಾಲವಾಗಿದ್ದ ಮನುಷ್ಯ ಲೋಕವನ್ನು ಛಿದ್ರಗೊಳಿಸಿದೆ. ಸಮಾಜ, ವಿವಾಹ , ಕುಟುಂಬ, ದೇವರು ಮುಂತಾದ ಸಂಸ್ಥೆಗಳನ್ನು ಒಡೆದು ಹಾಕಿದೆ. ನಾವು ವ್ಯವಹರಿಸುತ್ತಿದ್ದ ಕಾಲ ದೇಶದಕಲ್ಪನೆ, ನಮ್ಮನ್ನು ನಿಯಂತ್ರಿಸುತ್ತಿದ್ದ ಮೌಲ್ಯವ್ಯವಸ್ಥೆ ಇವು ಇಂದು ತಮ್ಮ ಗುರುತು ಕಳೆದುಕೊಂಡಿವೆ.

ಅಡಿಗರು ಹೇಳಿರುವಂತೆ ‘ಮಂತ್ರ ಮರೆತು ಬರಿದೇ ತಿರುಗಿಸುತ್ತಿದ್ದೇನೆ ಮಂತ್ರದಂಡ’ ಎಂಬಂತಾಗಿದೆ ಜೀವಯಾನದ ಪ್ರಯಾಣ. ಇಂತಹ ಪರಿವರ್ತನಾ ಕಾಲಘಟ್ಟಕ್ಕೆ ಸೇರಿರುವ ಮಂಜುಳ ಮಾತ್ರ ಈ ಸವಾಲುಗಳನ್ನು ದಾಟಲು ದಾರಿ ಹುಡುಕಿಕೊಂಡಿರುವುದು ಈ ಸಂಕಲನದ ಎಷ್ಟೋ ಕವಿತೆಗಳಲ್ಲಿ ಕಾಣುತ್ತದೆ. ಬದುಕಿನ ದಟ್ಟ ವಿಷಾದವನ್ನು ನಿರೂಪಿಸುವಾಗಲೂ ಮಾತು ಒರಟಾಗದಂತೆ ಭಾಷಾ ಪ್ರಯೋಗದಲ್ಲಿ  ನವಿರುತನವನ್ನು ಜೊತೆಗೆ ಭಾವೋತ್ಕರ್ಷವನ್ನು ಕಾಯ್ದುಕೊಂಡಿದ್ದಾಳೆ.

ಗಾಲಿಬ್ ನ ಕಾವ್ಯ ಸೃಷ್ಟಿ ಜಗತ್ತಿಗೆ ಮಾರು ಹೋಗಿರುವ ಮಂಜುಳಾ ಬರೆದಿರುವ ಕಾವ್ಯ ನಿರ್ಮಿತಿಯೇ ಈ ಮಾತಿಗೆ ಉದಾಹರಣೆಯಾಗಿದೆ.

ಕೊನೆಗೆ ಬಯಸಿದ ಪ್ರೇಮವೊಂದು

ನನ್ನದೇಆಗಿಬಿಟ್ಟಿದ್ದರೆ

ಕಳೆದುಕೊಂಡವರ ನೋವಿನೆದೆಯ ಕೂಗು

ಅಥವಾ

ಪ್ರೇಮದ ಜೀವಂತಿಕೆಯೇ ಆದ

ವಿರಹದ ಕುರಿತು ನನಗೆಂದೂ ಅರಿವಾಗುತ್ತಿರಲಿಲ್ಲನೋ?

ಪ್ರೀತಿಯನ್ನು ಅಮರವೆಂದು ಬರೆದ ಪುರುಷರ ಮಾತಗಳನ್ನು ಅನುಮಾನಿಸುವ ಕವಿಯತ್ರಿಯರು ತನ್ನ ನಿರೂಪಣೆಗಳಲ್ಲಿ ಹೆಣ್ಣಿನ ಬಲಿಪಶುತನವನ್ನು ಪರಕೀಯ ಕೋಪ ಮತ್ತು ಸ್ವಕೀಯ ಕನಿಕರಗಳಿಂದ ಬರೆಯುವುದು ರೂಡಿಯಾಗಿತ್ತು. ಮಂಜುಳಾ ಕವಿತೆಗಳಲ್ಲಿ ಕ್ರಿಯೆಯ ಕರ್ತೃವನ್ನು ಗಂಡಿಗೆ ಕೊಡದೆ ಇರುವ ನೆಲೆ ಮಹಿಳಾ ಕಾವ್ಯ ಪಡೆದುಕೊಳ್ಳುತ್ತಿರುವ ಅರ್ಥಪೂರ್ಣ ತಿರುವನ್ನು ಸೂಚಿಸುತ್ತದೆ.

ಈವರೆಗೆ ತನಗೆ ಬೇಕಾದ ಹೆಣ್ಣುಗಳನ್ನು ಸೃಷ್ಟಿಸಿಕೊಂಡು ಅವರನ್ನು ರಮಿಸಿ, ಹಿಂಸಿಸಿ, ಆರಾಧಿಸಿ, ಅಸಹಾಯಕಳನ್ನಾಗಿಸಿ ಆಟವಾಡುತ್ತಿದ್ದ ಪುರುಷನನ್ನು ಏಕ ರೂಪದಲ್ಲಿ ಚಿತ್ರಿಸುತ್ತಿದ್ದ ರಚನೆಗಳು ಇಲ್ಲಿ ಬದಲಾಗಿವೆ. ಅಲ್ಲದೆ ಮಂಜುಳಾ ತನಗೆ ಬೇಕಾದ ಸಂಗಾತಿಯನ್ನು ರೂಪಿಸಿಕೊಳ್ಳುವ ಆಯ್ದುಕೊಳ್ಳುವ ಪ್ರಯತ್ನವನ್ನು ಮಾಡಿದ್ದಾಳೆ. ಈ ಕವಿತೆಗಳು ಪುರುಷನ ಬೇಟೆಯ ಹಕ್ಕನ್ನು ನಯವಾಗಿಯೇ ತಿರಸ್ಕರಿಸಿರುವುದು ಬಹು ದಿಟ್ಟ ಹೆಜ್ಜೆ ಎಂದು ನನಗೆ ಅನ್ನಿಸಿದೆ. ಹಾಗಾಗಿಯೇ ಮಂಜುಳಾ ಕವಿತೆಗಳು ಗಾಲಿಬ್ ನ ಕಡುವಿರಹ ಪ್ರಪಂಚದಿಂದ ಅಕ್ಕನ ತೀವ್ರ ಅನುಭಾವಕ್ಕೆ ಪಯಣ ಬೆಳೆಸಲು ಹವಣಿಸುತ್ತಿವೆ.

ಈ ಲಕ್ಷಣಗಳು ಮಂಜುಳಾ ಬರೆಯುವ ನಾಳಿನ ಕವಿತೆಗಳಲ್ಲಿ ಸ್ಪಷ್ಟವಾಗಿ ರೂಪು ತಳೆಯಲಿವೆ. ಆ ಕಾರಣದಿಂದಲೇ ಅಕ್ಕನ ವಚನಗಳ ಎಷ್ಟೊ ಪ್ರತಿಮೆಗಳಾದ ಕನಸು ಕಾಯುವ ನಿರೀಕ್ಷೆ ಮತ್ತು ಕೂಡದ ಅಗಲಿಕೆಯಂತಹ ಮನೋವ್ಯಾಪಾರಗಳು ಹೊಸ ಬಗೆಯ ಕಾವ್ಯ ಪರಿಕರಗಳಾಗಿ ಇಲ್ಲಿನ ಕವಿತೆಗಳಲ್ಲಿ ಯಥೇಚ್ಛವಾಗಿ ತುಂಬಿಕೊಂಡಿವೆ. “ಮುಟ್ಟದೆಯೇ ಮುತ್ತಿಡುವ ಮೋಹಕತೆಗೆ ಸ್ಪರ್ಷದ ಹಂಗಿಲ್ಲ ಕಣೋ” ಇಂತಹ ಆಶಯಗಳು ಕೂಡಲು ಕಾಯದ ಹಂಗಿಲ್ಲ ಎನ್ನುವ ಅಕ್ಕನ ಮಾತಿನ ಮತ್ತೊಂದು ವರಸೆಯಂತೆ ಕಾಣಿಸಿಕೊಳ್ಳುತ್ತದೆ.

ಮಂಜುಳಾ ಅವರ ಕವಿತೆಗಳಲ್ಲಿ ಮತ್ತೂ ಒಂದು ವಿಶೇಷತೆಯಿದೆ. ಇಲ್ಲಿನ ಕವಿತೆಗಳು ಕಣ್ಣನ್ನು ಹೊರಗೆ ಹೊರಳಿಸಿದ ತಕ್ಷಣ ಸಮಾಜದಲ್ಲಿ ನಡೆಯುತ್ತಿರುವ ಜಾತಿ- ಶೋಷಣೆ-ಹೆಣ್ಣಿನ ಪ್ರಶ್ನೆಗಳು  ಮುಂತಾದ ಸಾಮಾಜಿಕ ತರತಮಗಳು ಕವಿತೆಯ ವಸ್ತುವಾಗುತ್ತವೆ. ಶಿಕ್ಷಣದ ಭಾಗವಾಗಿ ಮಂಜುಳಾ ಕಲಿತಿರುವ ನ್ಯಾಯಾನ್ಯಾಯದ ವಿಶ್ಲೇಷಣೆಗಳು ಪೊಲಿಟಿಕಲ್ ಕರೆಕ್ಟ್ನೆಸ್ ನ ಕಡೆಗೆ ವಾಲುತ್ತವೆ. ಉದಾಹರಣೆಗಾಗಿ ಯುದ್ಧವನ್ನು ಕುರಿತ ಕವಿತೆ ನೋಡಬಹುದು. ಯುದ್ಧ ಎನ್ನುವುದನ್ನು ನಾವು ಅರ್ಥೈಸುವಾಗ ರಾಷ್ಟ್ರೀಯತೆಯ ಭಾವನಾತ್ಮಕತೆಗೆ ಒಳಗಾಗಿ ಯುದ್ಧದ ಪರಿಣಾಮವನ್ನು ತ್ಯಾಗದ ಬಲಿದಾನದ ನೆಲೆಯಲ್ಲಿ ಪುರುಷ ದೃಷ್ಟಿಕೋನದಿಂದ ಅರ್ಥೈಸುವ ನಿಲುವನ್ನು ಪ್ರಶ್ನಿಸುತ್ತದೆ.

‘ಯುದ್ದೋನ್ಮಾದದಲ್ಲಿ ಅಬ್ಬರಿಸುವ ಯಾರ ಮನೆಯ ಮಗನೂ ಗಡಿಯಲ್ಲಿ ಇಲ್ಲ’,  ಯುದ್ಧ ಎಲ್ಲಿ ನಡೆದರೂ, ಯಾವರಾಷ್ಟ್ರಗಳ ನಡುವೆ ನಡೆಯುತ್ತಿದ್ದರು ಎರಡೂ ಗಡಿಗಳಲ್ಲಿ ಸಾಯುವ ಯುವಕರು ಆ ದೇಶಗಳ ಬಡ ಕುಟುಂಬಗಳಿಗೆ ಸೇರಿದವರೇ ಆಗಿರುತ್ತಾರೆ ಹಾಗೂ ಸತ್ತವನ ಕುಟುಂಬ ಬೀದಿಪಾಲಾಗುವ ಧಾರುಣತೆಯು ರಾಷ್ಟ್ರಭಕ್ತಿಯಲ್ಲಿ ಮುಚ್ಚಿ ಹೋಗುತ್ತಿರುವ ಅಮಾನವೀಯ ನಡೆಯನ್ನುಈ ಕವಿತೆ ಕಟ್ಟಿಕೊಡುತ್ತದೆ. ಈ ಪದ್ಯ ವರ್ತಮಾನದಲ್ಲಿ ನಮ್ಮ ರಾಜಕೀಯ ವ್ಯವಸ್ಥೆ ನಿರೂಪಿಸುತ್ತಿರುವ ರಾಷ್ಟ್ರೀಯತೆ ಕಲ್ಪನೆಯನ್ನು ಮರು ವಿಮರ್ಶೆಮಾಡಲು ಒತ್ತಾಯಿಸುತ್ತದೆ.

ದೇಶ ಹತ್ತಿ ಉರಿಯುವಾಗ ಪ್ರೇಮದ ಕವಿತೆ ಬರೆಯುತ್ತೇನೆ ಎಂದು ಟೀಕೆಗೆ ಎಲ್ಲರ ಎದೆಯಲ್ಲಿ ಪ್ರೇಮ ಅರಳಿದ ದಿನ ದೇಶವನ್ನು ಕುರಿತು ಕವಿತೆ ಬರೆಯುತ್ತೇನೆ ಎನ್ನುವ ಸಾಲುಗಳು ಹೊಳೆಯಿಸುವ ಅರ್ಥ ನಮ್ಮ ಬದುಕು ಪ್ರೇಮವಂಚಿತವಾಗಿ ಸೃಷ್ಟಿಸುತ್ತಿರುವ ಹಿಂಸೆಯ ವಿವಿಧ ಆಯಾಮಗಳನ್ನು ಗ್ರಹಿಕೆಗೆ ತರುತ್ತದೆ. ನಿಜವಾದ ಕವಿತೆ ಎಲ್ಲಾ ಕಾಲದಲ್ಲೂ ದು:ಖವನ್ನು ಬೆನ್ನತ್ತಿ ಹೋಗುವ ಗುಣವುಳ್ಳದ್ದಾಗಿರುವುದರಿಂದ ಅದು ನಮ್ಮನ್ನು ಕಾಡುವಗುಣವನ್ನು ಪಡೆದುಕೊಂಡಿರುತ್ತದೆ. ಇಲ್ಲಿನ ಎಷ್ಟೋ ಸಾಲುಗಳಿಗೆ ಇಂಥಕಾಡುವ ಗುಣವಿದೆ.

ಈ ಸಂಕಲದ ಕವಿತೆಗಳು ಪ್ರೇಮವನ್ನು ಪ್ರಾಶ್ನಾತೀತವಾದ ವಿಶ್ವಾಸದ ನೆಲೆಗೆ ಕೊಂಡೊಯ್ಯುತ್ತವೆ. ಕವಿತೆಗಳಲ್ಲಿ ಅಭಿವ್ಯಕ್ತವಾಗುವ ಸಮರ್ಪಣಾ ಭಾವತೀವ್ರತೆಯೂ ಕನ್ನಡ ಕೀರ್ತನಾ ಪರಂಪರೆಯ ಭಕ್ತಿಯ ತಾದ್ಯಾತ್ಮವನ್ನು ನೆನಪಿಗೆ ತರುತ್ತದೆ. ಪ್ರೇಮದ ನಿರೂಪಣೆಯನ್ನು ಶರತ್ತುರಹಿತವಾಗಿ ನೀಡುವಾಗಲೂ ಆ ಪ್ರಯಾಣ ಸಾಗುವ ದಾರಿಯ ಕುರಿತಂತೆ ಕವಿಗೆ ಮುಂದೊದಗುವ ದುರಂತದ ಅರಿವಿದೆ. ಇಂತಹ ಭಾವನಿಂದನೆಯ ಪ್ರಕರಣವನ್ನುಈ ನಿರೂಪಣೆಗಳು ನಿಬಾಯಿಸುವ ರೀತಿ ಮಾತ್ರ ಓದುಗರಲ್ಲಿ ನಿಬ್ಬೆರಗನ್ನು, ತಣ್ಣಗಿನ ವಿಷಾದವನ್ನು ಮುಟ್ಟಿಸುವಲ್ಲಿ  ಯಶಸ್ಸು ಪಡೆಯುತ್ತವೆ.

ಪ್ರೇಮದ ಉತ್ಕಟವಾದ ಅಪ್ಪುಗೆಯಲ್ಲಿನ ಕೇಡನ್ನು ಗುರುತಿಸುವ ರೀತಿ ಮತ್ತು ಎದುರುಗೊಳ್ಳುವ ಛಾತಿ ಮಂಜುಳಾ ಕವಿತೆಯ ಮೂಲಕ ಕವಿಯಾಗಿ ಮಾಗುತ್ತಿರುವ ಪ್ರಕ್ರಿಯೆಯನ್ನು ತೋರುತ್ತವೆ. ಪ್ರೇಮ ಮತ್ತು ವಿರಹವನ್ನು ಕುರಿತು ಬರೆಯುವುದು ಎಂಥಾ ಕವಿಗಾದರೂ ಇಂದು ಸವಾಲಿನ ಕೆಲಸ. ಪ್ರೇಮ ಮತ್ತು ವಿರಹದ ಕುರಿತು ಬರೆ ಬರೆದು ಎಲ್ಲಾ ಮಾತು ಪ್ರತಿಮೆ ರೂಪಕಗಳು ಸವಕಲಾಗಿವೆ. ಆದರೆ ಈ ಸಂಕಲನದಲ್ಲಿ ಪ್ರಯೋಗಗೊಂಡಿರುವ ಪ್ರೇಮ ಮತ್ತು ವಿರಹದ ಕುರಿತ ಹೊಸ ಪದ ಪ್ರಯೋಗಗಳು ತಮ್ಮ ನವೀನ್ಯತೆಯ ಕಾರಣದಿಂದಲೆ ಮನ ಸೆಳೆಯುತ್ತವೆ ಹಾಗೂ ಬಹು ಕಾಲ ಮನಸ್ಸಿನಲ್ಲಿ ಉಳಿಯುತ್ತವೆ.

ಪ್ರೇಮವೆಂದರೆ ಮುತ್ತು-ಮೋಹ,  ಹಸಿವು- ದಾಹ

ಎಲ್ಲವುಗಳಲ್ಲಿಯೂ ಕಾಡುವ ಬದುಕಷ್ಟೆ ಎನ್ನುತ್ತೇನೆ.

ಮಂಜುಳ ಕವಿತೆಗಳ ಮೂಲಕ ಪ್ರೇಮವನ್ನು ನೋವಿನ ಆಲಾಪದಿಂದ ಬಿಡಿಸಿ ನೆನಪಿನ ಹಾಡಾಗಿಸುವ ಹದವನ್ನು ಪಡೆದುಕೊಂಡಿದ್ದಾರೆ. ಇಲ್ಲಿನ ಎಷ್ಟೋ ಕವಿತೆಗಳು ಹಾಡಾಗಲು ಹಂಬಲಿಸುತ್ತಿರುವ ರಚನೆಗಳಾಗಿವೆ. ಹಾಡನ್ನು ಕುರಿತಂತೆ ಈ ಕವಿತೆಗಳಲ್ಲಿ ತೀವ್ರ ಹುಡುಕಾಟ ನಡೆದಿರುವುದನ್ನು ಗುರುತಿಸಬಹುದು. ಹಾಡು ತಾನು ಕಟ್ಟಬೇಕಾಗಿರುವಂತೆ ತಾನು ಕೇಳಬೇಕಾದ ಹಾಡಿನ ಸ್ತರವನ್ನು ಒಳಗೊಂಡಿದೆ. ಹಾಡು ನೇಯುತ್ತೇನೆ ಎಂಬ ಪದ ಪ್ರಯೋಗ ಹಾಡನ್ನು ಹೊಸ ಅರ್ಥದಲ್ಲಿ ಪಡೆದುಕೊಳ್ಳಲು ಹವಣಿಸುತ್ತಿರುವ ಪ್ರಯತ್ನವಾಗಿ ಕಾಣುತ್ತದೆ. ಪಟ್ಟ ಪಾಡೆಲ್ಲವು ಹುಟ್ಟು ಹಾಡಾಗಬೇಕು ಎಂಬ ಅಂಬಿಕಾತನಯದತ್ತರ ಮಾತಿಗೆ ಹಾಡಿಕೊಳ್ಳಲು ಬಿಟ್ಟು ಬಿಡಿ ನನ್ನ ಎಂಬ ಕವಿತೆಯು ನಿದರ್ಶನದಂತೆ ಕಾಣುತ್ತದೆ.

ಈ ಸಂಕಲನದ ಮತ್ತೊಂದು ವಿಶೇಷವೆಂದರೆ (ಒಂದೆರಡು ಅಪವಾದಗಳ ಹೊರತು ಪಡಿಸಿ) ಕವಿತೆಗಳಿಗೆ ಹೆಸರುಗಳು ಇಲ್ಲದಿರುವುದು. ಈ ಪ್ರಯೋಗ ಕವಿತೆಗಳನ್ನು ಒಂದೇ ಪ್ರೇಮ ಪ್ರಸ್ತಾನದಂತೆ ಓದಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಅಲ್ಲದೆ ಓದುಗರು ತಮಗಿಷ್ಟ ಬಂದ ಹಾಗೇ ಕವಿತೆಗಳನ್ನು ಮುರಿದು ಅಥವಾ ಸಾಲುಗಳನ್ನು ತಾವೇ ಜೋಡಿಸಿಕೊಂಡುವ ಓದುವ ತೆರೆದ ಪಠ್ಯದ ಅನುಭವವನ್ನು ಒದುಗಿಸಿಕೊಟ್ಟಿದೆ.

ಬದುಕು ವಿಸ್ತಾರವಾಗದೆ ಅನುಭವಗಳು ವಿಸ್ತಾರವಾಗಲಾರವು ಎಂಬ ಮಾತಿದೆ. ಬದುಕು ಎಂದರೆ ತಾನು ಕಂಡು ಉಂಡದ್ದು ಮಾತ್ರವಾಗಬೇಕಿಲ್ಲ ಕನಸಿದ್ದು ಕೂಡ ಬದುಕಿನ ಗಡಿಗಳನ್ನು ವಿಸ್ತರಿಸಬಲ್ಲದು ಎಂಬ ಮಾತಿಗೆ ಇಲ್ಲಿನ ಅನೇಕ ಕವಿತೆಗಳು ಸಾಕ್ಷಿಒದಗಿಸುತ್ತವೆ.

ಈ ಕವಿತೆಗಳು ಹೆಣ್ಣಿನ ಮನೋ ಲೋಕದ ಸಂಗತಿಗಳನ್ನು ನಿರೂಪಿಸುತ್ತಲೇ, ಪುರುಷ ಸಮಾಜದ ಸ್ತ್ರೀಯರ ಮೇಲಿನ ನಡೆಸುವ ಯಜಮಾನಿಕೆಯ ನೆಲೆಗಳು ಹೇಗೆ ಕಾಲ ದೇಶಗಳನ್ನುದಾಟಿ ಬಂದಿವೆ? ಹೆಣ್ಣು ದಮನದ ಧಾರುಣ ಪ್ರಕ್ರಿಯೆನ್ನು ಗುರುತಿಸುವ ಕೆಲಸವನ್ನು ಮಾಡುತ್ತವೆ. ಪುರಾಣಗಳಲ್ಲಿ ನೊಂದ ಹೆಣ್ಣುಗಳಾದ ಅಹಲ್ಯ, ಸೀತೆ, ದ್ರೌಪತಿ ಮುಂತಾದ ಹೆಣ್ಣಿನ ಮಾದರಿಗಳು ಪಾತಿವ್ರತ್ಯ ಮತ್ತು ಹೆಣ್ಣಿನ ಲೈಂಗಿಕತೆಯನ್ನು ನಿಯಂತ್ರಿಸುವ ಹುನ್ನಾರದಿಂದಲೇ ರೂಪಗೊಂಡಿರುವ ರಚನೆಗಳು ಎಂಬ ನಿಲುವನ್ನುಇಲ್ಲಿನ ಕವಿತೆಗಳು ಸಾರುತ್ತವೆ. ಸಾಮಾಜಿಕ ಠೊಳ್ಳುತನವನ್ನು ಬಯಲಿಗಿಡುವ ಪ್ರಯತ್ನವನ್ನು ಈ ಕವಿತೆಗಳು ದಿಟ್ಟವಾಗಿ ಮಾಡಿವೆ.

ಮಂಜುಳಾ  ಈ ಕವಿತೆಗಳಲ್ಲಿ ಚಿರ ವಿರಹದ ಮೂಲಕ ಶೋಧಿಸುತ್ತಿರುವ  ಲೋಕ ಸಹಜವಾಗಿಯೇ ಜಾತಿ ನಾಶದ, ಎಲ್ಲ ಬಗೆಯ ಶೋಷಣೆ ಇರದ ಸಮಾಜದ ಕನಸನ್ನೇ ಎನ್ನುವುದು ಈ ಕವಿತೆಗಳ ಹಿಂದಿನ ಪ್ರೇರಕ ಶಕ್ತಿಯಾಗಿದೆ. ಆಡಿದ ಮಾತು ಪ್ರಮಾಣದಂತೆ ನಿಜವೆನ್ನಿಸುವ ಹಾಗೆ ಈ ಕವನಗಳು ನಮ್ಮನ್ನುತಟ್ಟುತ್ತವೆ.

ನನಗೆ ದೀಪವೆಂದರೆ

ಬದುಕ ಸುಟ್ಟಕೊಂಡ ನೆನಪು

ಸದಾ ಉರಿವ ಒಡಲ ನೋವು

ಬೆಳಕ ಬಣ್ಣಕ್ಕೆ ಮರುಳಾಗಿ

ಮತ್ತೆ ಮತ್ತೆ ರೆಕ್ಕೆ ಸುಟ್ಟುಕೊಳ್ಳುವ

ಪುಟ್ಟಚಿಟ್ಟೆಯ ಸಾವು.

ಕವಿತೆಯನ್ನು ಆರಂಭಿಸುವಾಗಲೇ ಹೀಗೆ ಕಾದ ನೆಲದ ಮೇಲೆ ಮೊದಲ ಮಳೆ ಹನಿ ಬಿದ್ದಂತೆ ಬರೆಯುತ್ತಿರುವ ಮಂಜುಳಾ ತನ್ನ ಕವಿತೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಏಕ ರೂಪಿ ಭಾಷಿಕ ಪ್ರಯೋಗಗಳ ಬಗ್ಗೆ ಗಮನ ಹರಿಸಿದರೆ ಆಕೆಯ ಅಭಿವ್ಯಕ್ತಿಗಳು ಇರಿಯುವ ಗುಣದೊಂದಿಗೆ ಮಾಯಕದ ನೆಲೆಗಳನ್ನು ಪಡೆದುಕೊಳ್ಳುತ್ತವೆ.

ದಟ್ಟ ಹಳ್ಳಿಯ ನೆನಪುಗಳಿರುವ ಮಂಜುಳಾ ಜನ ನುಡಿಯಲ್ಲಿರುವ ಲಯಗಳ ಬಗೆಗೆ ಮನಗೊಡುವುದು ಅತ್ಯಗತ್ಯ. ಕಾವ್ಯದಲ್ಲಿ ಚಕಿತಗೊಳಿಸುವ ವಾಕ್ಯಗಳನ್ನು ರಚಿಸುವಷ್ಟು ಜಾಣೆಯಾಗಿರುವ ಈಕೆ ಹಲವು ಸ್ತರಗಳುಳ್ಳ ಪ್ರತಿಮೆಗಳನ್ನು ಸೃಷ್ಟಿಸುವುದನ್ನುಅಭ್ಯಾಸ ಮಾಡಿದರೆ ಈ ಕವಿತೆಗಳಿಗೆ ಮತ್ತಷ್ಟು ಆಳ ಮಾತ್ರವಲ್ಲ ಚೆಲವು ಕೂಡ ದಕ್ಕುವುದರಲ್ಲಿ ಅನುಮಾನವಿಲ್ಲ.

‘ರೈನ್ ಮೇಕರ್’ ನಾಟಕದಲ್ಲಿ ಅಮೇರಿಕಾದ ನಾಟಕಕಾರ ರಿಚರ್ಡ್ ನ್ಯಾಶ್ ಹೀಗೆ ಬರೆಯುತ್ತಾನೆ. “ನಾವು ಕಲ್ಪಿಸಿಕೊಂಡಾಗ ವಸ್ತು ಎಷ್ಟು ಸುಂದರವಾಗಿರುವುದೋ ನಾವು ಅದನ್ನು ಪಡೆದುಕೊಂಡಾಗಲೂ ಅಷ್ಟೇ ಸುಂದರವಾಗಿರಬೇಕು. ಅದೇ ಸೌಂದರ್ಯ”ಎಂದು. ಇದು ಕವಿ ಕಾವ್ಯ ನಿರ್ಮಿತಿಗೂ ಅನ್ವಯವಾಗುವ ಮಾತೆಂದು ನನಗೆ ತೋರಿದೆ.

ಮಂಜುಳಾ ಕಾವ್ಯದ ಮೂಲಕ ಬದುಕನ್ನು ಪ್ರೀತಿಸುವ ಹೊಣೆಯ ಕರಗವನ್ನು ಹೊತ್ತುಕೊಂಡಿದ್ದಾಳೆ. ನಿಲ್ಲದೆ ನಡೆದರೆ ಕನ್ನಡ ಕಾವ್ಯವನ್ನು ವಿಸ್ತರಿಸುವ ಕಾರಯತ್ರಿ ಪ್ರತಿಭೆ ಈಕೆಗೆ ಇದೆ. ಮಂಜುಳಾ ಅವರ ಕಾವ್ಯ ಪಯಣ ಭೃಂಗ ಮಾರ್ಗವಾಗಲಿ ಎಂದು ಹಾರೈಸುತ್ತೇನೆ.

‍ಲೇಖಕರು avadhi

August 25, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಅಶೋಕ ಶೆಟ್ಟರ್

    ಮಂಜುಳಾ ಅವರ ಕವಿತೆಗಳ ಸಾಧನೆಗಳನ್ನು ಶೋಧಿಸುತ್ತಲೇ ಅವರ ಕಾವ್ಯದ ಮಿತಿಗಳನ್ನು ಮತ್ತು ಕವಯತ್ರಿಗೆ ಅರಿವಿಗೆ ಬರದೇ ಅವರೊಳಗಿರಬಹುದಾದ ಸಾಧ್ಯತೆಗಳನ್ನು ಇಲ್ಲಿ ನಾರಾಯಣಸ್ವಾಮಿಗಳು ಸೂಚಿಸಿದ್ದಾರೆ. ಸಮತೂಕದ ಮುನ್ನುಡಿ ಇದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: