ಮಂಜುಳಾ ಸುಬ್ರಹ್ಮಣ್ಯ ಅವರ ಪಾತ್ರ ಲೋಕ

ಸುಧಾ ಚಿದಾನಂದ ಗೌಡ

ಕಲಿಯಬೇಕೆಂದು ಕಲಿತದ್ದಲ್ಲ ಈ ಕಲೆ. ಯಾರೂ ಸಿಗದಿದ್ದ ಕಾರಣಕ್ಕೆ ನೀ ಬಾರೇ ನೀ ಬಾರೇ ಎಂದು ಪಕ್ಕದ ಮನೆಯವರು ಕರೆದ ಕಾರಣಕ್ಕೆ ವೇದಿಕೆ ಹತ್ತಿದ್ದು. ಈಗಲೂ ಶಾಸ್ತ್ರೀಯ ನೃತ್ಯಕ್ಕೆ, ರಂಗಭೂಮಿ ಚಟುವಟಿಕೆಗಳಿಗೆ ಪ್ರೇಕ್ಷಕರನ್ನು ಹೊಂದಿಸುವುದು ಕಷ್ಟದ ಕೆಲಸ. ಅದರಲ್ಲೂ ನನ್ನನ್ನು ಭರತನಾಟ್ಯದವರು ಅವಳು ನಾಟಕ ಮಾಡ್ತಾಳೆ ಎಂದೂ, ರಂಗಭೂಮಿಯವರು ಅವಳು ಶಾಸ್ತ್ರೀಯದವಳು ಎಂದೂ ಇಬ್ಬರೂ ಕಮೆಂಟ್ ಮಾಡಿದ ಉದಾಹರಣೆಯಿದೆ.

ಕಲೆಯನ್ನೇ ಜೀವನಾಧಾರ ಮಾಡಿಕೊಳ್ಳುವುದು ಸಾಧ್ಯವಾಗದ ಮಾತೇ. ನಾನು ನೃತ್ಯಶಾಲೆ ಇತ್ಯಾದಿ ಬೇರೇನೋ ವೃತ್ತಿ ಮಾಡಿಕೊಂಡು ಇರೋದರಿಂದ ನಡೀತಿರೋದು. ನೃತ್ಯ, ನಾಟಕ ಎರಡೂ ಮನಸಿನ ತೃಪ್ತಿ ತಂದುಕೊಟ್ಟಂಥವು. ಇದನ್ನೆ ಮುಂದುವರಿಸಿಕೊಂಡು ಹೋಗುವುದಷ್ಟೆ. ಶಾಸ್ತ್ರೀಯ ನೃತ್ಯದ ವಿದ್ಯಾರ್ಥಿನಿ ಮತ್ತು ಗುರುವಾದ ಮಂಜುಳಾ ಅವರು ಹೇಳುವ ಮುಕ್ತ ಮನಸಿನ ಮಾತುಗಳಿವು.

ಮಂಗಳೂರಿನ ಬಳಿಯ ಪುತ್ತೂರಿನವರಾದ ಮಂಜುಳಾ ಭರತನಾಟ್ಯವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿದವರು. ಪುತ್ತೂರಿನಲ್ಲಿ ನಾಟ್ಯರಂಗ ಎಂಬ ನೃತ್ಯಶಾಲೆಯನ್ನು ಕಟ್ಟಿಕೊಂಡು ಮುನ್ನಡೆಸುತ್ತಿರುವವರು. ರಂಗಭೂಮಿ ಅವರನ್ನು ಆಕರ್ಷಿಸಿದ್ದು ಸಹಜವೇ. ಮಂಜುಳಾ ತಮ್ಮ ತಂಡದೊಂದಿಗೆ ಮೊದಲು ಕೈಗೆತ್ತಿಕೊಂಡದ್ದು ಯಶೋಧರಾ.

ಮಂಜುಳಾ ಸುಬ್ರಹ್ಮಣ್ಯ

ಹಾಗೆ ನೋಡಿದರೆ ಸಿದ್ಧಾರ್ಥನ ಪತ್ನಿಯನ್ನು ಇನ್ನೊಂದು ದೃಷ್ಟಿಕೋನದಿಂದ ನೋಡಿದ್ದೆ ಒಂದು ಹೊಸಹೆಜ್ಜೆ. ಮಹಿಳೆಯ ನೆಲೆಗಟ್ಟಿನಲ್ಲಿ ನಿಂತು ನೋಡಿದಾಗಲೂ ಉನ್ನತವಾದ ಅನುಭಾವವನ್ನು ಕೊಡುವುದು ಬುದ್ಧದರ್ಶನ. ಆತನಿಗೆ ಯಶೋಧರೆ ಕೇಳುವ ಪ್ರಶ್ನೆಗಳು ಬೇರೆಯೇ ಅರ್ಥ ಹೊಳೆಯಿಸುವಂಥವು. ಏಕೆ ಹೋದೆ ಎಂದಲ್ಲ. ನನಗೆ ಹೇಳದೆ ಹೋದದ್ದೇಕೆ? ನಾನೂ ಬರುತ್ತಿದ್ದೆ. ನನ್ನ ಪಾಡಿಗೆ ನಾನು ನಿನ್ನ ಬೆನ್ನಿಗಿರುತ್ತಿದ್ದೆನಲ್ಲಾ ಎಂಬ ಭಾವಾರ್ಥದ ವ್ಯಕ್ತಿತ್ವ ಯಶೋಧರೆಯದು.

ಇದನ್ನು ರಂಗರೂಪಕ್ಕೆ ತರುವುದರ ಮೂಲಕ ನಾಟಕ ಮಾಧ್ಯಮಕ್ಕೆ ಪಾದಾರ್ಪಣೆ ಮಾಡಿದ ಮಂಜುಳಾ ಮತ್ತೆ ಮತ್ತೆ ಪ್ರಯೋಗಗಳಿಗೆ ಒಡ್ಡಿಕೊಂಡವರು. ಅದರ ಮುಂದುವರಿದ ಭಾಗವೇ ಭರತಗಾಥಾ, ಕೃಷ್ಣಸಖಿ ಮುಂತಾದ ನೃತ್ಯ ಮತ್ತು ಅಭಿನಯ ಬೆರೆತ ಸಂಯೋಜನೆ.

ಇಲ್ಲಿಯೂ, ಇತರನೇಕ ಕಲಾವಿದೆಯರಂತೆ, ಮಂಜುಳಾ ಸಹಾ ಬೆನ್ನು ಹತ್ತಿರುವುದು ಮಹಿಳೆಯ ಭಾವುಕತೆಯ ಹಿಂದಿನ ಬೌದ್ಧಿಕ ತೊಳಲಾಟವನ್ನೆ. ಭಾವನೆ ಮತ್ತು ಬುದ್ಧಿ ಎರಡನ್ನೂ ಅಲಕ್ಷಿಸಿ ಕೇವಲ ದೇಹದ ನೆಲೆಗಟ್ಟಿನಲ್ಲಿ ಮಾತ್ರವೇ ಮಹಿಳೆಯ ಅಸ್ತಿತ್ವವನ್ನು ಗುರುತಿಸುವ ಪುರುಷಸಮಾಜ ಎಷ್ಟರಮಟ್ಟಿಗೆ ಇಂಥ ಪ್ರಯೋಗಗಳನ್ನು ಸ್ವೀಕರಿಸಬಲ್ಲುದು ಎಂಬುದು ಈ ಘಟ್ಟದಲ್ಲಿ ಮುಖ್ಯವಲ್ಲ ಮತ್ತು ಮುಖ್ಯವಾಗಬಾರದು ಎಂಬುದು ನನ್ನ ಅನಿಸಿಕೆ.

ಇಲ್ಲಿ ಹೆಣ್ಣು ತನ್ನ ಒಳಗನ್ನು ತಾನು ತೋಡಿಕೊಳ್ಳಲು ಅಭಿವ್ಯಕ್ತಗೊಳಿಸಲು ಆರಂಭಿಸಿದಳೆಂಬುದೇ ಮುಖ್ಯಘಟ್ಟ. ಸಮಾಜ ಸ್ವೀಕಾರ ಎಂಬುದೊಂದು ಅಂಶ ನಂತರದ್ದು ಮಾತ್ರವೇ ಎಂದು ಪರಿಗಣಿಸಬೇಕಾದ, ಕೆಲವು ಸಲ ಅನಿವಾರ್ಯವಾಗಿ ಅಲಕ್ಷಿಸಲೂಬೇಕಾದ ಘಟ್ಟ ಎಂದೇ ಹೇಳಬೇಕಾಗುತ್ತದೆ. ಪುರುಷ ಪ್ರಧಾನ ಸಮಾಜದ ಮೂಲದೃಷ್ಟಿಕೋನವೇ ಪೂರ್ವಾಗ್ರಹದಿಂದ ಕೂಡಿದ್ದು ಎಂಬುದೇ ಈ ಅನಿಸಿಕೆಗೆ ಕಾರಣ.

ಹೆಣ್ಣಿನ ಬಗೆಗಿನ ಆಗ್ರಹ ಸಾಮಾಜಿಕ ಯೋಚನಾಧಾಟಿಯಲ್ಲಿಯೇ ಇರುವಾಗ ಈ ಪೂರ್ವಾಗ್ರಹ ಸಹಜವಾಗಿಯೇ ಕಲಾಮಾಧ್ಯಮಕ್ಕೆ ಸಹಜವಾಗಿ ಎಂಬಂತೆ ವಿಸ್ತರಣೆಗೊಂಡುಬಿಟ್ಟಿದೆ. ಶತಮಾನಗಳಿಂದ ಬದಲಾಗದ ಈ ವ್ಯವಸ್ಥೆ ಹಲಬಾರಿ ಅಲಕ್ಷ್ಯಕಷ್ಟೇ ಯೋಗ್ಯವಾದದ್ದು.

ಎದುರು ಪ್ರವಾಹದ ಈಜು ಮಹಿಳೆ ತನಗಾಗಿ ತಾನು ಮಾಡಲೇಬೇಕಾದ ಪ್ರಕ್ರಿಯೆ. ಅಸ್ಮಿತೆಯ ಪ್ರಶ್ನೆಯಾದುದರಿಂದ ಈ ಪ್ರವಾಹಕ್ಕೆದುರಾಗಿ ಎದೆಯೊಡ್ಡುವುದು ಪ್ರತಿಬಾರಿಯೂ ವಿಮೋಚನೆಯ ಹೆಜ್ಜೆಯಾಗಿಯೇ ಒದಗುತ್ತದೆ. ಅದಕ್ಕೆ ಊರ್ಮಿಳಾ, ರಾಧಾ ತಕ್ಷಣಕ್ಕೆ ಒದಗುವ ಉದಾಹರಣೆಗಳು. ಏಕವ್ಯಕ್ತಿ ರಂಗಪ್ರಯೋಗವೆಂಬ ವೇದಿಕೆಯ ಹೊಸದೃಶ್ಯಕ್ಕೆ ಮಂಜುಳಾ ಆಯ್ಕೆ ಮಾಡಿಕೊಂಡದ್ದೂ ಈ ಮುರಿದು ಕಟ್ಟಿದ ಪಾತ್ರಗಳನ್ನೆ.

ಊರ್ಮಿಳಾ ಈಗಾಗಲೇ ಹಲವು ಕಲಾವಿದೆಯರಿಂದ, ಹಲವು ಬಾರಿ ಪ್ರದರ್ಶಿತಗೊಂಡ ಪ್ರಯೋಗವಾದರೆ ರಾಧೆಯು ಹೊಸ ಆಯಾಮದಿಂದ ಸೃಷ್ಟಿಸಲ್ಪಟ್ಟ ಹೊಸದೇ ಆದ ಕೃತಿಯಾಗಿತ್ತು. ಎರಡರಲ್ಲೂ ಮಂಜುಳಾ ಯಶಸ್ವಿಯಾಗಿದ್ದರೆ ಅದಕ್ಕೆ ಕಾರಣ ಅವರ ಪರಕಾಯಪ್ರವೇಶ ಮಾಡುವ ಸಾಮರ್ಥ್ಯವೇ ಎನ್ನಲಡ್ಡಿಯಿಲ್ಲ. ಕಲಾಮಾಧ್ಯಮದ ಯಾವ ಪ್ರಕಾರದಲ್ಲಾದರೂ ತಮ್ಮನ್ನು ತಾವು ಗುರುತಿಸಿಕೊಳ್ಳುವ ಒಂದು ಘಟ್ಟ ಒದಗಿಬರುವುದೊಂದು ಅನಿವಾರ್ಯ ಪ್ರಸಂಗ.

ಊರ್ಮಿಳೆಯಲ್ಲೂ, ರಾಧೆಯಲ್ಲೂ ಈ ಹೊತ್ತಿನ ಮಹಿಳೆ ಕಂಡುಕೊಳ್ಳುವ ಸಮಾನಭಾವಗಳೆಂದರೆ ಪರಾಕ್ರಮದ ಅಭಿವ್ಯಕ್ತಿ, ವ್ಯವಸ್ಥೆಯಲ್ಲಿ ಭಾವನೆಗಳಿಗೆ ಸಿಗದ ಬೆಲೆ, ಹಾಗಾದಾಗ ತನ್ನದೇ ಆದ ರೀತಿಯಲ್ಲಿ ಒಳಬಂಡಾಯ. ಬಂಡಾಯವೇಳುವ ಗುಣ ರಾಧೆಗೂ, ಊರ್ಮಿಳೆಗೂ ಇತ್ತು. ಜೊತೆಗೆ ಕೌಟುಂಬಿಕ ಒಳಬಿಕ್ಕಟ್ಟುಗಳೊಡನೆ ಅವರ ಹೋರಾಟ.

ಸಮಚಿತ್ತದ ನಡವಳಿಕೆಯೊಂದಿಗೇನೇ ತೀವ್ರವಾಗಿ ಪ್ರಶ್ನಿಸುವ ಗುಣ, ದೀರ್ಘಕಾಲದ ವಿರಹವನ್ನೂ ಸಹಿಸಬಲ್ಲ ತಾಳ್ಮೆ, ಅದರೊಟ್ಟಿಗೆ ಪುಟಿದೇಳುವ ನೀವು ಮಾಡಿದ್ದು ಸರಿಯೇ? ಎಂಬ ಮೊನಚು ಪ್ರಶ್ನೆಯೊಂದಿಗೆ ವ್ಯವಸ್ಥೆ ಮೀರಿಯೂ ಮೆಚ್ಚುವ ರೀತಿಯಲ್ಲಿ ನಾ ಬದುಕಿದ್ದೇನೆ ನೋಡಿ ಎಂಬ ಸವಾಲೆಸೆಯುವ ಮನೋಧಾರ್ಢ್ಯದಿಂದಾಗಿ ಅವರಿಬ್ಬರೂ ಒಂದು ರಿತಿಯಲ್ಲಿ ಸಮಾಜದ ಇತರ ಮಹಿಳೆಯರಿಗೆ ಮೇಲ್ಪಂಕ್ತಿಯನ್ನೂ ಹಾಕಿ ಕೊಟ್ಟವರೆಂದರೆ ತಪ್ಪಾಗಲಾರದು.

ನೃತ್ಯಮುಖೇನ ಯಶೋಧರೆಯನ್ನು ವೇದಿಕೆಗೆ ತಂದ ಮಂಜುಳಾ ಸುಬ್ರಹ್ಮಣ್ಯ ಏಕವ್ಯಕ್ತಿ ಅಭಿನಯದ ಮೂಲಕ ಪೂರ್ಣಪ್ರಮಾಣದ ನಾಟಕದಲ್ಲಿ ತೊಡಗಿಸಿಕೊಂಡವರು. ರಾಧೆ ಕೆಲದಿನಗಳಲ್ಲೆ ಇಪ್ಪತ್ತು ಪ್ರಯೋಗಗಳನ್ನು ಕಂಡ ಯಶಸ್ವಿ ಪ್ರಯೋಗ. ಊರ್ಮಿಳೆಯೂ ಯಶಸ್ಸಿಗೆ ಹೊರತಲ್ಲ. ವೇದಿಕೆಯಿಂದಿಳಿದ, ಬಣ್ಣವಳಿಸಿದ ಗಳಿಗೆಗಳಲ್ಲೂ ಸಹಾ ಹೊಸಬದುಕೊಂದನ್ನು ಅರಳಿಸಿಕೊಳ್ಳಲು ಈ ಪಾತ್ರಗಳು ಪ್ರೇರೇಪಣೆ ನೀಡಿರುವುದೂ ಸುಳ್ಳಲ್ಲ.

ಪ್ರೇಕ್ಷಕರ ಮನಸಿನಲ್ಲಿ ವೈಚಾರಿಕ ಪ್ರಶ್ನೆಗಳ ತರಂಗಗಳನ್ನೆಬ್ಬಿಸುವ ಈ ಮುರಿದು ಕಟ್ಟಿದ ಪಾತ್ರಗಳು ಅಭೀನಯಿಸಿದ ಅಭಿನೇತ್ರಿಯರನ್ನೂ ಪ್ರಭಾವಿಸುವುದರಲ್ಲಿ ಸಂಶಯವಿಲ್ಲ. ಕಲೆಯನ್ನೆ ನಂಬಿ ಬದುಕು ಕಟ್ಟಿಕೊಳ್ಳುವುದು ತುಂಬ ಕಷ್ಟ. ನಾವೇನೂ ತುಂಬ ಆಧುನಿಕ ಕಾಲಘಟ್ಟವನ್ನು ತಲುಪಿಲ್ಲ. ಅದನ್ನೊಂದು ಪ್ರವೃತ್ತಿಯನ್ನಷ್ಟೆ ಮಾಡಿಕೊಳ್ಳಲು ಸಾಧ್ಯ.

ಜೀವನಕ್ಕೆ ನಾನು ಬೇರೆ ವೃತ್ತಿಯನ್ನೆ ಆಧರಿಸಿದ್ದೇನೆ. ಪ್ರಯೋಗಗಳಿಂದ ಹೊಸತನ್ನು ಸಾಕಷ್ಟು ಕಲಿತೆ. ಮನ್ನಣೆ ಗ್ರಾಮಾಂತರ ಪ್ರದೇಶಗಳಲ್ಲಲಿ ದೊರಕಿಸಿಕೊಳ್ಳುವುದು ಕಷ್ಟವೇ. ನಗರ ಪ್ರದೇಶಗಳಲ್ಲಿ ಸೌಕರ್ಯಗಳು ಸುಲಭವಾಗಿ ದೊರೆತಂತೆ ಹಳ್ಳಗಳಲ್ಲಿ ಸಿಗುವುದಿಲ್ಲ. ಆಸಕ್ತ ಪ್ರೇಕ್ಷಕ ವರ್ಗಕ್ಕೂ ಹಳ್ಳಿಗಳಲ್ಲಿ ತತ್ವಾರವೇ.

ಬೆಂಗಳೂರಿಗೆ ಬನ್ನಿರೆಂಬ ಆಹ್ವಾನಗಳು ತುಂಬ ಇವೆ. ಕೆಲವು ದಿನಗಳು ಅಲ್ಲಿದಲ್ದೆ ಸಹಾ. ಆದರೂ ನಗರ ಸಹವಾಸ ಏತಕ್ಕೊ ಬೇಡವೆನಿಸುತ್ತದೆ. ನಾನು ಪುತ್ತೂರಲ್ಲೆ ಗಟ್ಟಿ ಎನ್ನುವ ಮಂಜುಳಾ ರಾಧೇಯನ್ನು ಆವಾಹಿಸಿಕೊಂಡಂತೆ ನಟಿಸುವವರು. ಅನೇಕ ಬಾರಿ ನಮ್ಮನ್ನೆ ನಾವು ಪಾತ್ರಗಳಲ್ಲಿ ಕಂಡುಕೊಳ್ಳುತ್ತೇವೆ. ಧನ್ಯತಾಭಾವದ ಕ್ಷಣಗಳು ಅವು ಎಂಬ ಮಾತು ಅವರವು.

ಇತ್ತೀಚೆಗಿನ ಆಧುನಿಕ ನಾಟಕಗಳು ಕಟ್ಟಿಕೊಡುವ ಅನುಭವಗಳೊಂದಿಗೆ ಸಾಮಾಜಿಕ ಬಾಧ್ಯತೆಗಳ ಅರಿವಿನೊಂದಿಗೆ ಸಾಗಿದ ಈ ಪಯಣ ಹೀಗೇ ಮುಂದುವರಿಸಿಕೊಂಡು ಹೋಗುವುದು. ಮತ್ತು ಹೊಸಹೊಸ ಪ್ರಯೋಗಗಳಿಗೆ ಒಡ್ಡಿಕೊಂಡು ವೇದಿಕೆಗೆ ವೈಚಾರಿಕ ಪ್ರಜ್ಙೆಯ ಪ್ರಯೋಗಗಳನ್ನು ಕೊಡುವ ಗುರಿ ಹೊಂದಿರುವ ಮಂಜುಳಾ ಈ ಹೊತ್ತಿನ ಅಸ್ಮಿತೆಯ ಸವಾಲುಗಳನ್ನೂ ಸ್ವೀಕರಿಸಿದವರು.

ರಂಗವನ್ನು ಅಕಾಡೆಮಿಕ್ ಆಗಿ ಅಧ್ಯಯನ ಮಾಡಿರುವ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಕೂಡಾ ಲಭ್ಯವಾಗಿತ್ತು. ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರದರ್ಶನ ಕೊಡುವುದರ ಜೊತೆಗೆ ರಂಗ ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುವ ಮಂಜುಳಾ ಈ ನೆಪದಲ್ಲಿ ಕರ್ನಾಟಕ ಸುತ್ತಿದ್ದಾರೆ.

ಕಲಾಪ್ರಕಾರದ ಕುರಿತ ತಮ್ಮ ಅನುಭವಗಳನ್ನು ಕಲೆಹಾಕಿ ಆಗಾಗ ಲೇಖನಗಳನ್ನು ಬರೆಯುವ ಮಂಜುಳಾ ಈ ಹೊತ್ತಿನ ಅಸ್ಮಿತೆಯ ಅಧ್ಯಯನದ ಸಂದರ್ಭದಲ್ಲಿ ಮುಖ್ಯವಾದ ವ್ಯಕ್ತಿ.

ಇದಿಷ್ಟು ಬೌದ್ಧಿಕ ಜಿಜ್ಙಾಸೆಯಾಯಿತು. ಆದರೆ ರಾಧೆಯನ್ನು ಒಂದು ನಾಟಕವಾಗಿಯಷ್ಟೆ ನೋಡಿದಾಗಲೂ ಅದೊಂದು ಅದ್ಭುತ ದೃಶ್ಯಕಾವ್ಯವೇ ಸರಿ. ಇದೊಂದು ಸರಳತೆಯಲ್ಲಿ ಲಾಲಿತ್ಯ ಮೆರೆಯುವ ಶೋ. ವೇದಿಕೆಯ ಮೂಲೆಮೂಲೆಗಳನ್ನು ಉಪಯೋಗಿಸಿಕೊಳ್ಳುವ ಕಲೆಯಲ್ಲಿ ಮಂಜುಳಾ ಅವರು ಮೊದಲೇ ನಿಷ್ಣಾತರು. ಸ್ವತಃ ಭರತನಾಟ್ಯ ಕಲಾವಿದೆಯಾಗಿ ಮುಖಭಾವನೆಗಳ ಅಭಿವ್ಯಕ್ತಿಯಲ್ಲಿಯೂ ಪರಿಣಿತೆ. ಅದೆಲ್ಲವನ್ನು ಬೆರೆಸಿ ಮಧುರ ಸಂಗೀತಕ್ಕೆ ಹೆಜ್ಜೆ, ಲಯತಾಳಗಳೊಡನೆ ಬೆರೆತ ಅಭಿನಯ ಪ್ರೇಕ್ಷಕರನ್ನು ಪ್ರೇಮಭರಿತ ಯಮುನಾತೀರಕ್ಕೆ ಪಯಣ ಬೆಳೆಸಿದ ಅನುಭವ ಕೊಟ್ಟಿದ್ದರೆ ಅತಿಶಯೋಕ್ತಿಯೇನಲ್ಲ.

ಅದಷ್ಟೆ ಆಗಿದ್ದರೆ ಇನ್ನುಳಿದ ಗೋಪಿಕಾಸ್ತ್ರಿಯರಲ್ಲಿ ರಾಧೆಯೂ ಒಬ್ಬಳಾಗಿ ಹೋಗಿರುತ್ತಿದ್ದಳು. ರಾಧೆಯ ಅಂತಃಶಕ್ತಿ ಇರುವುದು ಗೋಕುಲ ನಿರ್ಗಮನದ ಬಳಿಕವೂ ಆಕೆ ಅಷ್ಟೇ ಸಶಕ್ತ ರೀತಿಯಿಂದ ಬಾಳಿದಳು ಎಂಬುದರಲ್ಲಿ. ಕೃಷ್ಣನ ಬದುಕು ಹೇಗೆ ದ್ವಾರಕೆಯಲ್ಲಿ ಪುನಃಸೃಷ್ಟಿಯಾಯಿತೋ ಹಾಗೆ ಕೃಷ್ಣನಿರ್ಗಮನದ ಬಳಿಕವೂ ರಾಧೆ ತನ್ನದೇ ಆದೊಂದು ಬದುಕನ್ನು ರೂಪಿಸಿಕೊಂಡಳು.

ಏಕಾಂತವೂ ಸಹಾ ಸಮಾಜಮುಖಿಯೂ, ಸ್ವಪರಿಶ್ರಮದ ಅಂತರ್ಮುಖಿಯೂ ಏಕಕಾಲಕ್ಕೆ ಆಗಬಲ್ಲಂಥ ಸಶಕ್ತ ಆಯ್ಕೆ ಎಂಬುದನ್ನು ತೋರಿಸಿಕೊಟ್ಟಳು. ವಿರಹ, ವಿರಸ, ಪರಿತಾಪ, ದುಃಖ, ಕೊನೆಗುಳಿಯುವ ಅನುಭಾವ.., ಎಲ್ಲದರಲ್ಲೂ ಸರ್ವವ್ಯಾಪಿಯಂತೆ, ಅವಳ ಒಳಗಿನೊಡನೆಯೇ ಕೃಷ್ಣನಿದ್ದಾನೆ.

ಕೃಷ್ಣನ ರಾಜಕೀಯ ಬದುಕಿನಲ್ಲಿ ರಾಧೆಯ ನೆನಪು ಸಹಾ ಇರಲಿಲ್ಲವೆಂದು ಕರಾರುವಾಕ್ಕಾಗಿ ಹೇಳಬಲ್ಲವರಾರು? ಇದ್ದರೂ ಇದ್ದೀತು. ಇಲ್ಲದೆಯೂ ಇದ್ದೀತು.
ಅದು ಮುಖ್ಯವಲ್ಲ ರಾಧೆಗೆ. ಅವಳಿಗೆ ತಾನೇನು ಎಂಬುದೇ ಮುಖ್ಯ. ಈ ಕಾರಣದಿಂದಲೇ ಅವಳಿಗೆ ಸ್ವಂತಿಕೆಯನ್ನು ರೂಢಿಸಿಕೊಳ್ಳಲು ಸಾಧ್ಯವಾಗಿದೆ. ಅವಳನ್ನು ನೋಡುವ, ಗಮನಿಸುವ, ಅಧ್ಯಯನ ಮಾಡುವ ಮತ್ತು ಕೃಷ್ಣನೆಂಬ ಪ್ರೇಮಭಾವವನ್ನು ಧ್ಯಾನಿಸುವ ಮುಖ್ಯ ವ್ಯಕ್ತಿಯಾಗಿ ಒದಗುವುದು ಸಾಧ್ಯವಾಗಿದೆ.

ಉತ್ತಮ ನಿರ್ದೇಶನ, ನೆರಳು ಬೆಳಕಿನ ಸಂಯೋಜನೆ, ಆಧುನಿಕ ರಂಗಭೂಮಿಯ ಎಲ್ಲ ಪರಿಕರಗಳ ಬಳಕೆ, ಕಲಾತ್ಮಕವಾದ ಮತ್ತು ಸರಳವಾದ ರಂಗಸಜ್ಜಿಕೆ, ಮಧುರ ಸಂಗೀತ ಎಲ್ಲದರೊಂದಿಗೆ ಮಂಜುಳಾ ಅವರ ರಾಧೆಯೊಳಗೆ ಬೆರೆತು ಹೋದಂಥ ಅಭಿನಯದೊಂದಿಗೆ ಕೆಲವೇ ದಿನಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಶೋ ಕಂಡ ಈ ಏಕವ್ಯಕ್ತಿ ಪ್ರಯೋಗಕ್ಕೆ ಸಂಬಂಧಪಟ್ಟವರೆಲ್ಲರೂ ಅಭಿನಂದನಾರ್ಹರು. ಮಂಜುಳಾ ಅವರು ಇಂತಹ ಇನ್ನೂ ಅನೇಕ ಪ್ರಯೋಗಗಳಲ್ಲಿ ದುಡಿಯಬಲ್ಲರೆಂಬುದು ನಿರ್ವಿವಾದ.

‍ಲೇಖಕರು avadhi

October 5, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: