‘ಪಡ್ಡಾಯಿ’ ಕಟ್ಟಿದ ಕಥೆ- ಯುದ್ಧದ ಹಿಂದಿನ ದಿನಗಳು

ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದವರು ಅಭಯ ಸಿಂಹ. ಇವರು ನಿರ್ದೇಶಿಸಿದ ಮೊದಲ ಚಲನಚಿತ್ರ ‘ಗುಬ್ಬಚ್ಚಿಗಳು’. ೨೦೦೮ ರಲ್ಲಿ ಆರಂಭವಾದ ಇವರ ಚಿತ್ರ ಪಯಣಕ್ಕೆ ಈಗ ದಶಕದ ವಸಂತ.

ಕಡಲ ಅಲೆಗಳ ಅಬ್ಬರವನ್ನು ಆಲಿಸುತ್ತಲೇ ಬೆಳೆದ ಹುಡುಗನಿಗೆ ಮನಸ್ಸು ಮತ್ತೆ ಮತ್ತೆ ಅತ್ತಲೇ ಎಳೆದದ್ದು ಆಕಸ್ಮಿಕವಲ್ಲ. ತಾನು ಬಾಲ್ಯದಿಂದಲೂ ಕಂಡ ಸಮುದ್ರ, ಮೀನುಗಾರರು, ದೋಣಿ, ಬಲೆ, ಹಡಗು ಎಲ್ಲವನ್ನೂ ಸೇರಿಸಿ ಕಟ್ಟಿದ ಚಿತ್ರವೇ ‘ಪಡ್ಡಾಯಿ’.

ತುಳು ಭಾಷೆಯ ಈ ಸಿನೆಮಾ ಕೇವಲ ಭಾಷೆಯ ಕಾರಣಕ್ಕಾಗಿ ಮಾತ್ರ ನೋಡುಗರನ್ನು ಕಾಡಲಿಲ್ಲ. ಬದಲಿಗೆ ಇದು ಯಶಸ್ವಿಯಾಗಿ ತುಳು ನೆಲದ ಸಂಸ್ಕೃತಿಯನ್ನು ಕಟ್ಟಿಕೊಟ್ಟ ಚಿತ್ರ. ಈ ಚಿತ್ರಕ್ಕೆ ಮತ್ತೆ ರಾಷ್ಟ್ರ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿತು.

ಅಭಯ ಸಿಂಹ ಹೇಗೆ ತಮ್ಮ ಸಿನೆಮಾವನ್ನು ಕಟ್ಟುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಈ ಪ್ರಶ್ನೆಯನ್ನು ನಾವೂ ಕೇಳಬೇಕು ಎಂದುಕೊಂಡಿದ್ದಾಗಲೇ ಅಭಯ ಸಿಂಹ ‘ಅಕ್ಷರ ಪ್ರಕಾಶನ’ದ ಮೂಲಕ ‘ಪಡ್ಡಾಯಿ’ ಕಟ್ಟಿದ ಕಥೆಯ ಕೃತಿಯನ್ನು ಹಿಡಿದು ಬಂದರು.

ಕನ್ನಡದಲ್ಲಿ ಸಿನೆಮಾ ಕುರಿತ ಕೃತಿಗಳು ಬೆರಳೆಣಿಕೆಯಷ್ಟು. ಇಂತಹ ಸಂದರ್ಭದಲ್ಲಿ ಚಿತ್ರಕಥೆಯ ಸಮೇತ ಅಭಯ ಸಿಂಹ ಪಡ್ಡಾಯಿ ಕಟ್ಟಿದ ಕಥೆಯನ್ನು ಹೇಳಿದ್ದಾರೆ. ಓದಿ-

ಈ ಕೃತಿ ಕೊಳ್ಳುವ ಆಸಕ್ತಿ ಇದ್ದಲ್ಲಿ  ಇಲ್ಲಿ ಒತ್ತಿ 

। ನಿನ್ನೆಯಿಂದ ।

4

ಯುದ್ಧದ ಹಿಂದಿನ ದಿನಗಳು

ಚಿತ್ರಕಥೆ ಒಂದು ಹಂತಕ್ಕೆ ಬಂದಿದೆ ಎಂದು ಅನಿಸಿದಾಗ, ಇದನ್ನು ಯಾರು ನಿರ್ಮಿಸುತ್ತಾರೆ, ಯಾರು ಅಭಿನಯಿಸಬೇಕು ಇತ್ಯಾದಿ ಯೋಚನೆಗಳು ಸುಳಿಯಲಾರಂಭಿಸಿದವು. ಆಗ ನನಗೆ ಕಾರ್ಕಳದ ಉದ್ಯಮಿ, ನಿತ್ಯಾನಂದ ಪೈ ಪರಿಚಯವಾದರು.

ಪರಸ್ಪರ ಪರಿಚಯದ ಹಿರಿಯ ಗೆಳೆಯರೊಬ್ಬರು ನಮ್ಮಿಬ್ಬರನ್ನೂ ಭೇಟಿ ಮಾಡಿಸಿದರು. ನಿತ್ಯಾನಂದ ಪೈ, ಕಾರ್ಕಳ ವಲಯದಲ್ಲಿ, ಸಾಹಿತ್ಯ, ಸಂಗೀತ ಹೀಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಸಿದ್ಧರು. ವೃತ್ತಿಯಾಗಿ ಅಡುಗೆ ಅನಿಲ ಸಿಲಿಂಡರ್ ವಿತರಣೆಯಲ್ಲಿ ತೊಡಗಿಕೊಂಡಿರುವ ಇವರು, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಸಾಕಷ್ಟು ತೊಡಗಿಸಿಕೊಂಡಿರುವವರು. ಅದಕ್ಕೆ ಹಣ ಸಹಾಯ, ಆಯೋಜನೆಯ ಬೆಂಬಲವನ್ನೂ ನೀಡುತ್ತಾ ಬಂದಿರುವವರು.

ಅವರೊಂದಿಗೆ ಮಾತನಾಡುತ್ತಾ, ಮ್ಯಾಕ್ಬೆತ್ ಕಥೆಯನ್ನು ನಾನು ನಮ್ಮ ಊರಿನ ಸಂದರ್ಭಕ್ಕೆ ಅಳವಡಿಸಿಕೊಂಡಿರುವುದು, ಮೀನುಗಾರಿಕೆಯ ಹಿನ್ನೆಲೆಯಲ್ಲಿ, ತುಳು ಭಾಷೆಯಲ್ಲಿ ಸಿನಿಮಾ ಮಾಡಬೇಕೆಂದಿರುವುದನ್ನು ವಿವರಿಸಿದೆ. ಅವರಿಗೆ ಈ ಯೋಜನೆಯ ಬಗ್ಗೆ ಆಸಕ್ತಿ ಮೂಡಿ, ತಾನೇ ಇದನ್ನು ನಿರ್ಮಿಸುತ್ತೇನೆ ಎಂದು ಬಿಟ್ಟರು!

ಪಡ್ಡಾಯಿ ಚಿತ್ರ ನಿರ್ಮಾಪಕರಾದ ನಿತ್ಯಾನಂದ ಪೈ.

ಚಿತ್ರ ಹೇಗೆ, ಯಾವಾಗ, ಎಲ್ಲಿ ಮಾಡಬೇಕು ಎನ್ನುವುದು ಸಂಪೂರ್ಣವಾಗಿ ನಿಮಗೆ ಬಿಟ್ಟದ್ದು, ಅದರ ಆರ್ಥಿಕ ಜವಾಬ್ದಾರಿ ನನ್ನದು. ಇದು ಉಳ್ಳವರು ಮಾಡುವ ಸಿನಿಮಾ ಅಲ್ಲ. ತಂಡದವರು ಸೇರಿ, ಶ್ರದ್ಧೆಯಿಂದ, ಕಾಳಜಿಯಿಂದ ಮಾಡುವ ಸಿನಿಮಾವಾಗಲಿ ಎಂದು ನನಗೆ ಭರವಸೆ, ಬೆಂಬಲ ನೀಡಿದರು, ನಿತ್ಯಾನಂದರು.

ತುಳು ಚಿತ್ರರಂಗಕ್ಕೆ ಸಾಕಷ್ಟು ಪ್ರೇಕ್ಷಕರು ಇದ್ದರೂ, ಇದೊಂದು ಸೀಮಿತ ಮಾರುಕಟ್ಟೆ. ಹೀಗಾಗಿ ಸಿನಿಮಾದ ಬಜೆಟ್ ಕೂಡಾ ನಿಯಂತ್ರಣದಲ್ಲಿರಬೇಕಾದದ್ದು ವ್ಯಾವಹಾರಿಕವಾಗಿ ಅಗತ್ಯವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಒಂದಷ್ಟು ಮಾತುಕತೆ, ಸಿದ್ಧತೆಗಳನ್ನು ಮಾತನಾಡಿಕೊಂಡು ರಣವೀಳ್ಯ ಸ್ವೀಕರಿಸಿದೆ.

ಮುಂದಿನ ದಿನಗಳಲ್ಲಿ, ನಟ-ನಟಿಯರ ಹುಡುಕಾಟ, ತಾಂತ್ರಿಕ ತಂಡದೊಂದಿಗೆ ಮಾತುಕತೆ, ಚಿತ್ರೀಕರಣ ಸ್ಥಳಗಳ ಹುಡುಕಾಟ ಹೀಗೆ ಹಲವು ಮಗ್ಗಲುಗಳಲ್ಲಿ ಕೆಲಸ ಆರಂಭವಾಯಿತು. ಹೆಗ್ಗೋಡಿನ ನೀನಾಸಮ್ ನಾಟಕ ಶಾಲೆಯೊಂದಿಗೆ ನನ್ನ ಸಂಬಂಧ ಬಹಳ ಹಳೆಯದು. ನಾನು ನೇರವಾಗಿ ಅಲ್ಲಿನ ವಿದ್ಯಾರ್ಥಿಯಲ್ಲದಿದ್ದರೂ, ಅಲ್ಲಿ ಹುಟ್ಟಿದ್ದ ಚಿಂತನೆಗಳು, ಜನರು, ತಿರುಗಾಟದ ನಾಟಕಗಳು ನಿರಂತರವಾಗಿ ನನ್ನನ್ನು ಪ್ರಭಾವಿಸಿವೆ, ರೂಪಿಸಿವೆ.

 

ನಾನು, ಹಿರಿಯ ಮಿತ್ರರಾದ ಎನ್.ಎ.ಎಮ್. ಇಸ್ಮಾಯಿಲ್ ಮತ್ತು ಓಂ ಶಿವಪ್ರಕಾಶ್ ಸೇರಿಕೊಂಡು, ‘ಸಂಚಿ ಫೌಂಡೇಶನ್’ ಎನ್ನುವ ಹೆಸರಿನಲ್ಲಿ ಸಾಂಸ್ಕೃತಿಕ ದಾಖಲೀಕರಣಗಳ ಕೆಲಸಕ್ಕಿಳಿದ ಮೇಲೆ, ನೀನಾಸಮ್ ಜೊತೆಗಿನ ಸಂಬಂಧ ಇನ್ನಷ್ಟು ಗಾಢವಾಗಿತ್ತು. ಅಲ್ಲಿ ಚಲನಚಿತ್ರ ನಿರ್ಮಾಣ ಕಾರ್ಯಾಗಾರ, ನಾಟಕಗಳ ದಾಖಲೀಕರಣಗಳನ್ನು ನಿಯತವಾಗಿ ನಡೆಸುತ್ತಿದ್ದೆವು.

ಸಹಜವಾಗಿ, ಅಲ್ಲಿನ ಅನೇಕ ವಿದ್ಯಾರ್ಥಿಗಳೊಂದಿಗೆ ಒಳ್ಳೆಯ ಗೆಳೆತನ ಬೆಳೆದಿತ್ತು. ಅವರಲ್ಲಿ ಮೋಹನ್ ಶೇಣಿ, ಬಿಂದು ರಕ್ಷಿದಿ, ಅವಿನಾಶ್ ರೈ, ಶ್ರೀನಿಧಿ ಆಚಾರ್, ಸದಾಶಿವ ಧರ್ಮಸ್ಥಳ ಇವರೆಲ್ಲರೂ ಒಳ್ಳೆಯ ನಟರು ಮಾತ್ರವಲ್ಲದೇ ರಂಗದ ಮೇಲಿನ ಎಲ್ಲಾ ಕೆಲಸಗಳಲ್ಲೂ ದೈತ್ಯರು. ಇವರ ಹಲವು ನಾಟಕಗಳನ್ನೂ ನಾನು ನೋಡಿದ್ದೆ. ಜೊತೆಗೆ ಇವರೆಲ್ಲರೂ ಮನೆಯಲ್ಲಿ ತುಳು ಭಾಷೆ ಮಾತನಾಡುವವರು. ಹೀಗಾಗಿ ಚಿತ್ರಕ್ಕೆ ನಟರ ಆಯ್ಕೆಯ ಸಂದರ್ಭದಲ್ಲಿ ಮೊದಲಾಗಿ ನೆನಪಾದವರು ಇವರೇ.

ಜಪಾನಿನ ಶ್ರೇಷ್ಟ ನಿರ್ದೇಶಕರಲ್ಲಿ ಒಬ್ಬರಾದ ಅಕಿರಾ ಕುರೋಸಾವಾ ಅವರ ಮ್ಯಾಕ್‌ಬೆತ್ ಅಳವಡಿಕೆಯಾದ ಥ್ರೊನ್ ಆಫ್ ಬ್ಲಡ್ ಚಿತ್ರದಲ್ಲಿ ನಾಯಕ ತುಷಿರೋ ಮ್ಯುಫಿನೇ ಕಂಡಂತೆ ಕಾಣಿಸುತ್ತಿದ್ದ ಮೋಹನ್ ಶೇಣಿ, ನಮ್ಮ ಸಿನಿಮಾದಲ್ಲೂ ಮ್ಯಾಕ್ಬೆತ್ ಅಂದರೆ ಮಾಧವನ ಪಾತ್ರಕ್ಕೆ ಸೇರಿಕೊಂಡರು.

ಲೇಡೀ ಮ್ಯಾಕ್‌ಬೆತ್ ಪಾತ್ರಕ್ಕೆ, ನಮ್ಮಲ್ಲಿ ಸುಗಂಧಿಯಾಗಿ ಬಿಂದು ರಕ್ಷಿದಿ ಆಯ್ಕೆಯಾದರು. ಇವರು ಸಕಲೇಶ್‌ಪುರದವರು. ಈಕೆಯ ತಂದೆ, ತಾಯಿ ಇಬ್ಬರೂ ರಂಗಭೂಮಿಯಲ್ಲಿ ಸಾಕಷ್ಟು ಕೆಲಸ ಮಾಡಿದವರು. ಹೀಗಾಗಿ, ಬಿಂದುವಿಗೆ ಅಭಿನಯ ಸಹಜವೇ ಆಗಿತ್ತು. ಧರ್ಮಸ್ಥಳದ ಸದಾಶಿವ ನೀನಾಸಮ್ ಪದವೀಧರ. ಅಲ್ಲಿಯೇ ಒಂದು ವರ್ಷ ಉಪನ್ಯಾಸಕರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ ಸದಾಶಿವ, ನಾಟಕ ನಿರ್ಮಾಣ, ನಟನಾ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ.

ಶ್ರೀನಿಧಿ ಆಚಾರ್ ಮತ್ತೊಬ್ಬ ನೀನಾಸಮ್ ಪದವೀಧರ. ಬೆಂಗಳೂರಿನ ನಂಟು ಹೆಚ್ಚಿರುವ ಇವರು, ಬೆಳಕಿನ ವಿನ್ಯಾಸದಲ್ಲಿ ಪರಿಣಿತರು. ಇವರಿಬ್ಬರೂ ಸಂಜೀವ ಹಾಗೂ ಮಂಜೇಶ ಎನ್ನುವ ಎರಡು ಪ್ರಮುಖ ಪಾತ್ರಗಳಿಗಾಗಿ ನಮ್ಮ ಸಿನಿಮಾ ಪ್ರಯಾಣಕ್ಕೆ ಆಯ್ಕೆಯಾದರು. ಸದಾಶಿವ ಪಾತ್ರಕ್ಕೆ ಸಿನಿಮಾ, ಧಾರವಾಹಿಗಳಲ್ಲಿ ಸಾಕಷ್ಟು ಪರಿಚಿತರಾಗಿರುವ, ಅನುಭವಿ ಕಲಾವಿದ ರವಿ ಭಟ್ ಆಯ್ಕೆಯಾದರು. ಇವರು ನನಗೆ ಬಹಳ ಕಾಲದ ಪರಿಚಿತರು ಹಾಗೂ ಕೌಟುಂಬಿಕ ಸ್ನೇಹಿತರು.

ಬ್ಯಾಂಕೋ ಪಾತ್ರಕ್ಕೆ, ನಮ್ಮಲ್ಲಿ ಬನ್ನಂಜೆಯಾಗಿ ಸೇರಿಕೊಂಡವರು, ಮಂಗಳೂರಿನ ಚಂದ್ರಹಾಸ ಉಳ್ಳಾಲ್. ಇವರನ್ನು ಮೊದಲು ಪರಿಚಯವಾದದ್ದು ನನ್ನ ತಂದೆಯ ಗೆಳೆಯರಾಗಿ. ಆದರೆ, ಅವರ ‘ಕೋರ್ಟ್ ಮಾರ್ಷಲ್’ ಇತ್ಯಾದಿ ನಾಟಕಗಳನ್ನೂ, ‘ಹಸೀನಾ’ದಂಥಾ ಚಿತ್ರಗಳಲ್ಲೂ ನೋಡಿ, ಅವರ ನಟನೆಯ ಅಭಿಮಾನಿಯಾದವನು ನಾನು. ನನ್ನ ಚಿತ್ರ ನಿರ್ಮಾಣ ಪಯಣದುದ್ದಕ್ಕೂ, ನಾನು ಕೇಳಿಕೊಂಡಾಗಲೆಲ್ಲಾ, ನನ್ನನ್ನು ತೀರಾ ಆತ್ಮೀಯವಾಗಿ ನಡೆಸಿಕೊಂಡು ಪ್ರೋತ್ಸಾಹಿಸಿದ ಹಿರಿಯ ಗೆಳೆಯರು, ಹಿತೈಷಿಗಳು ಇವರು.

ಮಂಗಳೂರಿನಲ್ಲಿ ಇನ್ನೊಬ್ಬ ಹಿರಿಯ ಗೆಳೆಯರಾಗಿ, ನಮ್ಮ ಸಿನಿಮಾಗೆ ಒದಗಿ ಬಂದವರು, ಗೋಪಿನಾಥ್ ಭಟ್. ಬ್ಯಾಂಕ್ ಕೆಲಸದಲ್ಲಿ ಉನ್ನತ ಹುದ್ದೆಯಲ್ಲಿದ್ದರೂ, ನಟನೆಯ ಅಭಿರುಚಿಯಿಂದಾಗಿ, ನಾಟಕಗಳಲ್ಲಿ, ತುಳು, ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ, ತಮ್ಮ ದೇಹಭಾಷೆ, ಕಂಠಧ್ವನಿಗಳೆರಡರಿಂದಲೂ, ಸಾಕಷ್ಟು ಹೆಸರು ಮಾಡಿದವರು ಗೋಪಿಯವರು. ನಮ್ಮ ಸಿನಿಮಾದಲ್ಲಿ, ದಿನೇಶಣ್ಣನ (ಮೂಲದಲ್ಲಿ ಡಂಕನ್) ಪಾತ್ರಕ್ಕೆ, ಇವರ ತೂಕದ ವ್ಯಕ್ತಿತ್ವ ಹಾಗೂ ಧ್ವನಿ ಅತ್ಯಂತ ಸೂಕ್ತವಾಗಿತ್ತು.

ಮಂಗಳೂರಿನ ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿರುವ ಸಂತೋಷ್ ಶೆಟ್ಟಿ ಆಯ್ದ ಕೆಲವು ಸಿನಿಮಾಗಳಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು. ನಮ್ಮ ಸಿನಿಮಾದ ಒಂದು ಪೊಲೀಸ್ ಪಾತ್ರಕ್ಕೆ ಅವರನ್ನು ವಿನಂತಿಸಿದಾಗ, ಅವರೂ, ತುಂಬು ಮನಸ್ಸಿನಿಂದ ನಮ್ಮ ತಂಡವನ್ನು ಸೇರಿಕೊಂಡರು.

ಪ್ರಭಾಕರ್ ಕಾಪಿಕಾಡ್ ಮಂಗಳೂರಿನ ರಂಗಾಸಕ್ತರು, ನಟರು, ಸಹೃದಯಿ. ಇವರನ್ನು ನೋಡಿದಾಗ, ನನ್ನ ಚಿತ್ರಕಥೆಯಲ್ಲಿ ಬರುವ ಐತಪ್ಪ ಎನ್ನುವ ಪಾತ್ರ ನೆನಪಾಯಿತು. ಮಲ್ಲಿಕಾ ಜ್ಯೋತಿ ಗುಡ್ಡೆ, ಮೋಹನ ಶೇಣಿಯ ಮೂಲಕ ಪರಿಚಿತರಾದವರು. ಸರಳ, ಸಹಜ ಅಭಿನಯದ ಇವರು ನಮ್ಮ ಸಿನಿಮಾದಲ್ಲಿ ಸುಗಂಧಿಯ ಗೆಳತಿಯ ಪಾತ್ರಕ್ಕೆ ಆಯ್ಕೆಯಾದರು.

ಸಿನಿಮಾದಲ್ಲಿ ಡಂಕನ್ ದೊರೆಯ ಪತ್ನಿಯ ಪಾತ್ರವೊಂದನ್ನು ಸೃಷ್ಟಿಸಿದ್ದೆ. ಈ ಪಾತ್ರಕ್ಕೆ ಸಂಭಾಷಣೆಯಿಲ್ಲ. ಸುಗಂಧಿ ಮಾತನಾಡಿ ಮಾಡುವ ಎಲ್ಲಾ ರಾಜಕೀಯಗಳಿಗೂ, ಮೌನವಾಗಿ, ತೀಕ್ಷ್ಣವಾಗಿ ಉತ್ತರಿಸುವ ದಿಟ್ಟ ಪಾತ್ರ ಇದು. ಇದಕ್ಕಾಗಿ ತೀಕ್ಷ್ಣ ಅಭಿವ್ಯಕ್ತಿಯಿರುವ ಪಾತ್ರವೊಂದಕ್ಕೆ ಹುಡುಕಾಟ ನಡೆಸಿದ್ದೆವು. ಆಗ ನಮಗೆ ನೆನಪಿಗೆ ಬಂದವರು, ವಾಣಿ ಪೆರಿಯೋಡಿಯವರು. ಇವರು ನನ್ನ ತಾಯಿಯ ಸಹಪಾಠಿಯೂ ಹೌದು. ಇವರು ಮಂಗಳೂರಿನ ವಲಯದಲ್ಲಿ ರಂಗಭೂಮಿಯಲ್ಲಿ ಸಾಕಷ್ಟು ತೊಡಗಿಸಿಕೊಂಡವರು. ವಾಣಿಯವರನ್ನು ವಿನಂತಿಸಿದಾಗ, ಅವರೂ ಪ್ರೀತಿಯಿಂದ ನಮ್ಮೊಂದಿಗೆ ಸೇರಿಕೊಂಡರು.

ಹೀಗೆ, ಹಿರಿಯ ಕಿರಿಯ ಪಾತ್ರಗಳು, ಪಾತ್ರಧಾರಿಯನ್ನು ಪಡೆಯುತ್ತಾ ಸಾಗಿದವು. ಪಾತ್ರ ಎಷ್ಟೇ ದೊಡ್ಡದಿರಲಿ, ಸಣ್ಣದಿರಲಿ, ಒಂದೊಂದು ಪಾತ್ರಧಾರಿಯನ್ನೂ ಸರಿಯಾಗಿ ಆಯ್ಕೆ ಮಾಡದಿದ್ದರೆ, ಒಟ್ಟಾರೆ ಸಿನಿಮಾ ಒಂದು ಅನುಭವವಾಗಿ ನಿಲ್ಲುವುದಿಲ್ಲ. ಹೀಗಾಗಿ ಜಾಗ್ರತೆಯಿಂದ ಪಾತ್ರಧಾರಿಗಳ ಆಯ್ಕೆಯನ್ನು ಮಾಡಿದೆವು.

ಇನ್ನು ತಾಂತ್ರಿಕ ವರ್ಗದ ಆಯ್ಕೆಯೂ ಒಂದು ಚಿತ್ರದ ಒಟ್ಟಂದದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅನೇಕ ವರ್ಷಗಳಿಂದ ಜೊತೆಗೆ ಕೆಲಸ ಮಾಡುತ್ತಿದ್ದ ವಿಷ್ಣುಪ್ರಸಾದ್, ಮೂಲತಃ ಕನ್ನಡದ ಹಿರಿಯ ಛಾಯಾಗ್ರಾಹಕರಾಗಿದ್ದ ಎಸ್. ರಾಮಚಂದ್ರ ಅವರ ಶಿಷ್ಯ. ವಿಷ್ಣು, ಪಡ್ಡಾಯಿಗೆ ಕ್ಯಾಮರಾ ಕೆಲಸ, ಬೆಳಕಿನ ವಿನ್ಯಾಸದ ಜವಾಬ್ದಾರಿ ಹೊತ್ತರು.

ಬಹಳ ವರ್ಷಗಳ ಗೆಳೆಯ, ಜಾಗತಿಕ ಸಿನಿಮಾಗಳ ರಸಿಕ, ಪ್ರಶಾಂತ್ ಪಂಡಿತ್ ಸಂಕಲನದ ಕೆಲಸ ಒಪ್ಪಿಕೊಂಡರು. ಉಡುಪಿಯವರೇ ಆಗಿದ್ದರೂ, ಬೆಂಗಳೂರಿನಲ್ಲಿ ಎರಡು ವರ್ಷ ಹಿಂದೆ ಪರಿಚಿತರಾಗಿ, ಒಳ್ಳೆಯ ಸ್ನೇಹಿತನಾಗಿದ್ದ, ಜೇಮಿ ಡಿಸಿಲ್ವಾ, ಸಿಂಕ್ ಸೌಂಡ್ (ಸ್ಥಳದಲ್ಲೇ ಧ್ವನಿ ದಾಖಲೀಕರಿಸುವ ವಿಧಾನ) ಜವಾಬ್ದಾರಿ ತೆಗೆದುಕೊಂಡರು. ಜೇಮಿ, ಈ ಕೆಲಸವನ್ನು ಚೆನ್ನೈಯಲ್ಲಿ ಕಲಿತಿದ್ದರು.

 

ಹೆಗ್ಗೋಡಿನ ಗೆಳೆಯ, ಧ್ವನಿ ವಿನ್ಯಾಸದಲ್ಲೆ ಪದವಿ ಗಳಿಸಿರುವ ಶಿಶಿರ ಕೆ.ವಿ ಧ್ವನಿ ವಿನ್ಯಾಸಕ್ಕೆ ಒಪ್ಪಿಕೊಂಡರು. ಸಂಗೀತ ಸಂಯೋಜನೆಗೆ, ಖ್ಯಾತ ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್ ತಂಡಕ್ಕೆ ಸೇರಿಕೊಂಡರು. ಮಂಗಳೂರಿನವರೇ ಆದ ಮಣಿಕಾಂತ್, ಭಾರತದ ಹೆಮ್ಮೆಯ ಸ್ಯಾಕ್ಸೊಫೋನ್ ವಾದಕ, ಕದ್ರಿ ಗೋಪಾಲನಾಥ್ ಅವರ ಮಗ. ಮಣಿಕಾಂತ್ ತಮ್ಮ ಶಾಸ್ತ್ರೀಯ ಸಂಗೀತದ ಕಲಿಕೆ, ಸಿನಿಮಾ ಸಂಗೀತದ ಗ್ರಹಿಕೆಯಿಂದ ಪಡ್ಡಾಯಿಗೆ ಒಂದು ವಿಶಿಷ್ಟ ಸಂಗೀತ ಕಟ್ಟಿಕೊಟ್ಟರು.

ನಿರ್ಮಾಣ ನಿರ್ವಹಣೆಗೆ ರಾಜೇಶ್ ಕುಡ್ಲ ಹಾಗೂ ಅವರ ಸಹಾಯಕ ಶಬರೀಶ್ ಕಬ್ಬಿನಾಲೆ ಸೇರಿಕೊಂಡರು. ಸ್ಥಳೀಯ ಚಿತ್ರೋದ್ಯಮದ, ಸಾಧ್ಯತೆಗಳ ಬಗ್ಗೆ ಇವರಿಬ್ಬರಿಗೂ ಇರುವ ಅರಿವು, ನಮ್ಮ ಸಿನಿಮಾಕ್ಕೆ ಸಾಕಷ್ಟು ಸಹಾಯ ಮಾಡಿತು.

ರಕ್ಷಿತ್ ಕಾರಂತ್ ಕುಳಾಯಿ, ಹಿಂದೊಮ್ಮೆ ನಾನು ನಡೆಸಿದ ಸಿನಿಮಾ ಕಾರ್ಯಾಗಾರದಲ್ಲಿ ವಿದ್ಯಾರ್ಥಿಯಾಗಿ ಬಂದಿದ್ದ ಗೆಳೆಯ. ಸತತವಾಗಿ ಸಿನೆಮಾದಲ್ಲೆ ದುಡಿಯುತ್ತಾ, ಉತ್ತಮ ಸಿನೆಮಾ ತಂಡಗಳ ಭಾಗವಾಗಲು ಪ್ರಯತ್ನಿಸುತ್ತಿದ್ದವನು. ಅವನ ಇದೇ ಅನ್ವೇಷಣೆ ಅವನನ್ನು ಕನ್ನಡದಲ್ಲಿ ಕಳೆದ ವರ್ಷ ಬಂದ ‘ಒಂದು ಮೊಟ್ಟೆಯ ಕಥೆ’ ತಂಡವನ್ನು ಸೇರುವಂತೆ ಮಾಡಿತು.

ನಾನು ತುಳು ಸಿನಿಮಾವೊಂದನ್ನು ಮಾಡುವ ಪ್ರಯತ್ನದಲ್ಲಿದ್ದೇನೆ ಎಂದು ಗೊತ್ತಾದಾಗ, ಸಂಪರ್ಕಿಸಿ ನಮ್ಮ ತಂಡವನ್ನೂ ಸೇರಿದ. ಇತರ ಅನೇಕ ಸ್ಥಾನಗಳಿಗೆ ಜವಾಬ್ದಾರಿಯುತ, ಸಿನೆಮಾ ಆಸಕ್ತರು ಬೇಕೆಂದಾಗ, ರಕ್ಷಿತ್ ತನ್ನೊಂದಿಗೆ ‘ಒಂದು ಮೊಟ್ಟೆಯ ಕಥೆ’ ಚಿತ್ರದಲ್ಲಿ ಕೆಲಸ ಮಾಡಿದ ಸಮಾನಾಸಕ್ತರನ್ನು ಪರಿಚಯಿಸಿದ. ಹೀಗೆ ಚೇತಕ್, ಪ್ರದೀಪ್, ಬಾಸಿಲ್ ಚಿತ್ರ ತಂಡವನ್ನು ಸೇರಿಕೊಂಡರು.

ಚಂಚಲಾಕ್ಷಿ ಭಟ್ ಉಡುಪಿಯವರೇ ಆದರೂ, ಬೆಂಗಳೂರಿನ ಧಾರವಾಹಿ, ಸಿನೆಮಾ ಕ್ಷೇತ್ರದಲ್ಲಿ ತೊಡಗಿಕೊಂಡವರು. ಅವರೂ ಚಿತ್ರ ತಂಡ ಸೇರಿಕೊಂಡರು. ಚಿತ್ರತಂಡಕ್ಕೆ ಸೇರಿಕೊಂಡ ಇನ್ನೊಬ್ಬ ಸಿನಿಮಾ ಆಸಕ್ತ ಗೆಳೆಯ, ಪ್ರಯಾಗ್. ಮೂಲತಃ ಪಶುವೈದ್ಯರಾದರೂ, ಸಿನೆಮಾ ಆಸಕ್ತಿ ಅವರನ್ನು, ಕೆಲಸಕ್ಕೆ ಸಣ್ಣ ರಜೆ ಹಾಕಿ, ನಮ್ಮ ಸಿನೆಮಾ ತಂಡ ಸೇರಿಕೊಳ್ಳುವಂತೆ ಮಾಡಿತ್ತು.

ನಿರ್ಮಾಪಕ ಸುಹಾನ್ ಪ್ರಸಾದ್, ನಿರ್ದೇಶಕ ರಾಜ್ ಶೆಟ್ಟಿ, ಸಂಕಲನಕಾರ ಪ್ರವೀಣ್, ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಹೀಗೆ ಒಬ್ಬೊಬ್ಬರಾಗಿ ಸೇರುತ್ತಾ, ಸ್ಥಳೀಯ ಚಿತ್ರೋದ್ಯಮದ ಅನೇಕರು ನಮ್ಮ ಬೆಂಬಲಕ್ಕೆ ನಿಂತರು. ಮಂಗಳೂರಲ್ಲೆ ಹುಟ್ಟಿ ಬೆಳೆದ ನಾನು ಮಂಗಳೂರು ಬಿಟ್ಟು ಹದಿನೈದು ವರ್ಷವೇ ಆಗಿದೆ. ಈ ಸಮಯದಲ್ಲಿ, ಮಂಗಳೂರಿನಲ್ಲಿ ಸಿನಿಮಾ ಉದ್ಯಮವಾಗಿ ಸಾಕಷ್ಟು ಬೆಳೆದಿದೆ. ಅದರ ನೇರ ಸಂಪರ್ಕದಲ್ಲಿ ಇಲ್ಲದ ನನಗೆ, ಈ ಗೆಳೆಯರ ಬೆಂಬಲ, ಸದಾ ನೆನಪಲ್ಲಿ ಉಳಿಯುವಂಥಾದ್ದು.

ಹೀಗೇ ಒಬ್ಬೊಬ್ಬರೇ ಸೇರುತ್ತಾ, ಸುಮಾರು ಒಂದು ತಿಂಗಳ ಅವಧಿಯಲ್ಲಿ, ನಾವು ಒಂದು ಸಿನಿಮಾಗೆ ಬೇಕಾದ ಸಂಪೂರ್ಣ ತಂಡವಾಗಿ ನಿಂತಿದ್ದೆವು. ಎಲ್ಲರೂ ಏಕಚಿತ್ತದಿಂದ ಪಡ್ಡಾಯಿಯನ್ನು ಮೂಲ ಕಲ್ಪನೆಯಂತೆ ಸಂಪೂರ್ಣ ಸೌಂದರ್ಯದಲ್ಲಿ ರೂಪಿಸಲು ನಿರ್ಧರಿಸಿದ್ದಾಗಿತ್ತು.

ನಮ್ಮ ಚಿತ್ರಕ್ಕೆ ಮಳೆಯಲಿ ಮಿಂದೆದ್ದ ಪರಿಸರ ಬೇಕಾಗಿತ್ತು. ಹೀಗಾಗಿ ಮಳೆ ಕಡಿಮೆಯಾಗುವ ವೇಳೆ ಎಂದು ಆಗಸ್ಟ್ ಕೊನೆಯ ಭಾಗದಲ್ಲಿ ಚಿತ್ರೀಕರಣ ಎಂದು ಅಂದಾಜು ಮಾಡಿದ್ದೆವು. ಹೀಗಾಗಿ ಜುಲೈ ತಿಂಗಳಿಡೀ ಮಂಗಳೂರಿನಿಂದ ತೊಡಗಿ ಮರವಂತೆಯವರೆಗೂ ನನ್ನ ಕಾರಿನಲ್ಲಿ ವಿಷ್ಣು, ರಕ್ಷಿತ್ ಹೀಗೆ ಸಣ್ಣ ತಂಡವನ್ನು ಮಾಡಿಕೊಂಡು, ಚಿತ್ರೀಕರಣಕ್ಕೆ ಸೂಕ್ತ ಸ್ಥಳಗಳನ್ನು ಹುಡುಕಲಾರಂಭಿಸಿದೆವು.

ಇದೇ ಸಂದರ್ಭದಲ್ಲಿ ಪರಿಚಯವಾದ ಗೆಳೆಯ, ಪಡುಕರೆಯ ರಂಜಿತ್. ಮೊಗವೀರ ಹಳ್ಳಿಯವನೇ ಆದ ರಂಜಿತ್, ಕ್ಷಣಾರ್ಧದಲ್ಲಿ, ಈ ಚಿತ್ರದ ಭಾಗವೇ ಆಗಿಬಿಟ್ಟ. ಬೆಳಗ್ಗೆ ಎರಡೋ ಮೂರೋ ಗಂಟೆಗೆ ಎದ್ದು, ಪುಟ್ಟ ದೋಣಿ ಏರಿಕೊಂಡು, ಮೀನು ಹಿಡಿಯಲು ಕಡಲಿಗೆ ಹೋಗುವ ರಂಜಿತ್, ಹತ್ತು ಗಂಟೆಯ ಸುಮಾರಿಗೆ ಮಲ್ಪೆಯ ಬಂದರಿಗೆ ತನ್ನ ದೋಣಿಯನ್ನು ತರುತ್ತಿದ್ದ. ಅದರಲ್ಲಿ ತುಂಬಿದ ಮೀನು, ದಡ ಸೇರುತ್ತಿದ್ದಂತೆಯೇ, ಹರಾಜಾಗಿ ಹೋಗುತ್ತಿತ್ತು. ಮತ್ತೆ ರಂಜಿತ್ ನಮ್ಮ ಮುಂದಾಳು. ಅವನು ಹೇಳಿದ ದಾರಿ, ಹೇಳಿದ ಮನೆ ನೋಡುತ್ತಾ ಸಾಗಿದೆವು.

ಹೊಸ ತಲೆಮಾರಿನ ಮೀನುಗಾರಿಕೆ, ಇಂದಿನ ಸತ್ಯಗಳು ಕಣ್ಣೆದುರು ತೆರೆಯುತ್ತಾ ಸಾಗಿತ್ತು. ಈ ಪ್ರಕ್ರಿಯೆಯಲ್ಲಿ, ಮೊಗವೀರರ ಮಾತಿನ ಶೈಲಿ, ಮೀನುಗಾರಿಕೆಯಲ್ಲಿನ ವ್ಯವಹಾರದ ಮಾತು, ಹೀಗೆ ಅವರ ಸಂಸ್ಕಂತಿ ಒಂದೊಂದೇ ನಮ್ಮ ಚಿತ್ರಕಥೆಗೂ ಸೇರುತ್ತಾ ಹೋಯಿತು. ಮೂಲ ಕಥೆಗೆ ಸಾಕಷ್ಟು ಬದ್ಧವಾಗಿಯೇ ಇದ್ದರೂ, ನಮ್ಮ ನಡೆ, ತುಳುನಾಡಿನದ್ದೇ ಆಗಬೇಕೆಂಬ ಎಚ್ಚರಿಕೆಯಿಂದಲೇ ನಾವು ಮುಂದೆ ನಡೆದೆವು.

| ಇನ್ನು ಉಳಿದದ್ದು ನಾಳೆಗೆ ।
ಅಮೆಜಾನ್ ಪ್ರೈಮ್ ನಲ್ಲಿ ಪಡ್ಡಾಯಿ ಸಿನಿಮಾ ಇದೆ.
Link to audience in UK:
Link to audience in USA:
Link to audience in India:

‍ಲೇಖಕರು avadhi

October 5, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: