ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಗರವಾಸಿಗಳ ಕರ್ಮ ಸರ್ ಇದು..

ನನಗೆ ಮನುಷ್ಯತ್ವದಲ್ಲಿ ನಂಬಿಕೆ ಇದೆ ಅಂದ ನನ್ನ ಗೆಳೆಯ …

manjunatha netkal

 

 

 

 

 

 

 

ಮಂಜುನಾಥ್ ಸಿ ನೆಟ್ಕಲ್

teneನಾನು ನನ್ನ ಗೆಳೆಯ ರೇಣುಕಾರಾಧ್ಯ ಮತ್ತು ಅವನ ಪತ್ನಿ ಜೊತೆಯಾಗಿ ಸಿಕ್ಕಿಂ ಮತ್ತು ಈಶಾನ್ಯ ಭಾರತ ಪ್ರವಾಸಕ್ಕೆ ಹೋಗಿದ್ದೆವು.  ಸಿಕ್ಕಿಂನಿಂದ ನಾವು ದಾರ್ಜಿಲಿಂಗ್ ನೋಡಿಕೊಂಡು ನ್ಯೂ ಜಲೈಪೈಗುರಿಗೆ ಹೋಗಬೇಕಾಗಿತ್ತು.  ಅಲ್ಲಿಂದ ರೈಲಿನಲ್ಲಿ ಕಲ್ಕತ್ತಾಗೆ ಬಂದು ಬೆಂಗಳೂರು ವಿಮಾನ ಹಿಡಿಯಬೇಕಿತ್ತು.

ನಿಗದಿತ ಸಮಯಕ್ಕೆ ನಡೆದರೆ ನಾವು ನಮ್ಮ ಯೋಜನೆ ಪ್ರಕಾರ ಬೆಂಗಳೂರು ತಲುಪುತ್ತಿದ್ದೆವು. ನ್ಯೂ ಜಲಪೈಗುರಿ ರೈಲು ಮಿಸ್ ಆದರೆ ನಾವು ಅಲ್ಲೇ ಉಳಿಯಬೇಕಾಗಿ ಬಂದು ಖರ್ಚು ಹೆಚ್ಚಾಗುತ್ತಿತ್ತು.  ಹೀಗಾಗಿ ಗ್ಯಾಂಗ್ ಟಕ್ ನಿಂದ ಟ್ಯಾಕ್ಸಿ ಬುಕ್ ಮಾಡಿ ನಮಗೆ ದಾರ್ಜಿಲಿಂಗ್ ಒಂದನ್ನು ಮಾತ್ರ ತೋರಿಸಿ ಸಂಜೆ 5 ಗಂಟೆಯ ಹೊತ್ತಿಗೆ ರೈಲು ನಿಲ್ದಾಣ ತಲುಪಿಸಲು ಕೇಳಿಕೊಂಡೆವು.

ಆತ 2000 ಸಾವಿರ ಆಗುತ್ತೆ. ಆದರೆ ನನಗೆ 3000 ಸಾವಿರ ಕೊಡಿ ನಿಮಗೆ ದಾರಿಯಲ್ಲಿ ಭೂಲೋಕದ ಸ್ವರ್ಗ ಎನಿಸುವ “ಮಿರಿಕ್” ಎಂಬ ಸ್ಥಳ ಹಾಗೂ ನೇಪಾಳದ ಗಡಿವರೆಗೆ ಕರೆದುಕೊಂಡು ಹೋಗುತ್ತೇನೆ ಎಂದ. ಮೊದಲಿಗೆ ನಮಗೆ ಅವನ ಮಾತಿಗೆ ಅನುಮಾನ ಬಂತು.ಇವನೆಲ್ಲಿ ನಮಗೆ ಅದನ್ನೆಲ್ಲಾ ತೋರಿಸಲು ಆಗುತ್ತೆ ಸಮಯ ಕಡಿಮೆ ಇದೆ ಬೇಡ ಎಂದೆವು. ಆದರೂ ಆತ ನನ್ನ ನಂಬಿ ಸರ್ ಮತ್ತೆ ಮತ್ತೆ ಇಲ್ಲಿಗೆ ಬರಕ್ಕಾಗಲ್ಲ.ಈಗ ಬಂದಿದ್ದೀರಿ ಅವಕಾಶ ಮಿಸ್ ಮಾಡ್ಕೋಬೇಡಿ ಎಂದು ನಮ್ಮನ್ನು ಒಪ್ಪಿಸಿದ.

ದಾರ್ಜಿಲಿಂಗ್ ತೋರಿಸಿ ಅಲ್ಲಿಂದ  ಬೇಗ ಹೊರಡಿಸಿ ಮಿರಿಕ್ ಸಹ ತೋರಿಸಿದ. ಅಲ್ಲಿಂದ ನೇರವಾಗಿ  ನೇಪಾಳ ಗಡಿಯ ಹತ್ತಿರ ಬಂದೆವು. ನೇಪಾಳದೊಳಗೆ ಹೋಗಲು ಯಾವುದೇ ಪಾಸ್ ಪೋರ್ಟ್ ಅಥವಾ ವೀಸಾ ಬೇಡ ಎನ್ನುವುದು ಗೊತ್ತಾಯಿತು. ಬಹಳ ಖುಷಿಯಾಯಿತು. ಮೊದಲ ಬಾರಿಗೆ  ವಿದೇಶದೊಳಗೆ ಹೋಗುವ ಸುವರ್ಣಾವಕಾಶ ಅದೂ ಅನಿರೀಕ್ಷಿತವಾಗಿ . ಬಯಸದೇ ಬಂದ ಭಾಗ್ಯ. ಅದೂ ಹೆಚ್ಚಿನ ಖರ್ಚಿಲ್ಲದೆ. ನಮಗೆ ಕುಣಿದಾಡುಷ್ಟು ಸಂತೋಷವಾಯಿತು.

ಅಲ್ಲಿ ಶಾಪಿಂಗ್ ಮಾತ್ರ ಮಾಡಬಹುದಾಗಿತ್ತು. ಬೇರೆ ಏನೂ ನೋಡಲು ಅಲ್ಲಿ ಅವಕಾಶ ಇರಲಿಲ್ಲ. ಅದು ಹೇಗಾದರೂ ಇರಲಿ . ವಿದೇಶದ ಮಣ್ಣಲ್ಲಿ ಕಾಲಿಡುವ ಮೊದಲ ಅನುಭವಕ್ಕೆ ಮೈ ಪುಳಕಗೊಂಡಿತ್ತು. ಸರಿ ಶಾಪಿಂಗ್ ಗೆ ಹೊರಡಲು ಸಿದ್ದರಾದೆವು. ಆದರೆ” ಒಂದು ಕಂಡೀಶನ್ ಇದೆ ಸರ್”  ಎಂದು ನಮ್ಮ ಟ್ಯಾಕ್ಸಿ ಚಾಲಕ ಹೇಳಿದ. ಏನದು ಎಂದು ಕೇಳಿದೆವು.  “ ನೀವು ನಿಮ್ಮ ಹಣ ಮಾತ್ರ ತೆಗೆದುಕೊಂಡು ಹೋಗಬಹುದು ಆದರೆ ಬೇರೆ ಯಾವುದನ್ನು ತೆಗೆದುಕೊಂಡು ಹೋಗುವಂತಿಲ್ಲ. “ ನಮಗೋ ನೇಪಾಳ ನೋಡುವ ತವಕ ತಕ್ಷಣ ಆಯಿತು ಅದಕ್ಕೇನಂತೆ ಎಂದು ಒಪ್ಪಿಕೊಂಡೆವು.

ನಮ್ಮ ಕೈಲಿದ್ದ ಐವತ್ತು ಸಾವಿರ ಬೆಲೆಬಾಳುವ ಎರಡು ಕ್ಯಾಮೆರಾಗಳು. ಈಗಾಗಲೇ ಖರೀದಿಸಿದ್ದ ಸುಮಾರು ಅರವತ್ತು ಸಾವಿರ ರೂಪಾಯಿ ವಸ್ತುಗಳು, ಹೊಸ ಬಟ್ಟೆಗಳು . ಮನೆಯಿಂದ ತಂದಿದ್ದ ನಾಲ್ಕಾರು ಸೂಟ್ ಕೇಸ್ ಗಳು ಬ್ಯಾಗ್ ಗಳು ಇವೆಲ್ಲವನ್ನೂ ಕಾರಿನಲ್ಲಿಯೇ ಬಿಟ್ಟು ಲಗುಬಗೆಯಿಂದ ಹೊರಟೆವು. ಬೇಗ ರೈಲು ನಿಲ್ದಾಣ ತಲುಪುವ ಧಾವಂತ ಬೇರೆ.

ನೇಪಾಳ ಗಡಿಯಲ್ಲಿ ನಮ್ಮನ್ನು ಪರಿಶೀಲಿಸಿ ಬಿಟ್ಟರು. ಒಂದು ಗಂಟೆಯಲ್ಲಿ ವಾಪಸ್ ಬರಲು ಹೇಳಿದರು. ನಾವು ಒಳ ನುಗ್ಗಿದ ಕೂಡಲೆ ರೋಮಾಂಚನವಾಯಿತು.  ಒಂಥರಾ ಖುಷಿ, ಒಂಥರಾ ಹೆಮ್ಮೆ. ಒಟ್ಟಿಗೆ ಆದವು.  ಎಲ್ಲಾ ಅಂಗಡಿಗಳನ್ನು ನೋಡುತ್ತಾ ನಮಗೆ ಬೇಕಾದ್ದನ್ನು ತೆಗೆದುಕೊಳ್ಳುವಷ್ಟರಲ್ಲಿ ಅರ್ಧ ಗಂಟೆ ಆಯಿತು ಬೇಗ ಹೊರಡೋಣ ಅಂದುಕೊಂಡೆವು.

portrait onn paperಆಗ ಇದ್ದಕ್ಕಿದ್ದಂತೆ ನೆನಪಾಯಿತು ನಾನು “ ಲೇ  ಆರಾಧ್ಯ ನಾವು ಎಲ್ಲಾ ಸಾಮಾನು ಅಲ್ಲೇ ಬಿಟ್ಟು ಬಂದೆವಲ್ಲೋ !!!  ಕಾರಿನ ನಂಬರ್ ಸಹ ಬರೆದುಕೊಳ್ಳಲಿಲ್ಲ.  ಕಾಲ್ ಮಾಡಲಿಕ್ಕೆ ನಮ್ಮ ಹತ್ತಿರ ಇದ್ದ ಮೊಬೈಲ್ ಸಹ ಕಾರಿನಲ್ಲಿಯೇ ಇದೆ. ಅವನೇನಾದರೂ ಮೋಸ ಮಾಡಿದನೋ ಹೇಗೆ ? ನಮ್ಮನ್ನು ಬರಿಗೈ ಮಾಡಿ ಕಳಿಸಿ ಕಾರ್ ತೆಗೆದುಕೊಂಡು ಪರಾರಿಯಾಗಿದ್ದರೆ ಏನೋ ಮಾಡೋದು. ವಾಪಸ್ ಹೋಗಲಿಕ್ಕೆ ದುಡ್ಡು ಹೇಗೋ ಹೊಂದಿಸಿಕೊಳ್ಳಬಹುದು . ಆದರೆ ತಂದ ಎಲ್ಲ ವಸ್ತುಗಳನ್ನು ಕಳ್ಕೊಂಡುಬಿಡ್ತೀವಲ್ಲೋ”  ಎಂದು ಹೇಳಿದೆ.

ಅವನಿಗೂ ಸ್ವಲ್ಪ ಗಾಬರಿಯಾಯಿತು  ಮೊದಲಿಗೆ “ ಕಾರಿನ ನಂಬರ್ ಸಹ ಬರೆದು ಕೊಳ್ಳದೆ ತಪ್ಪುಮಾಡಿದೆವು “ ಎಂದ. ಆದರೂ ಮನುಷ್ಯರನ್ನು ನಂಬಬೇಕು ಕಣೋ. ಹಾಗೆಲ್ಲ ಎಲ್ಲರೂ ಮೋಸ  ಮಾಡುವುದಿಲ್ಲ ಎಂದು ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಾ ಹೇಳಿದ. ನಾನು ಹೇಳಕ್ಕಾಗಲ್ಲಪ್ಪ ಯಾವ ಮನುಷ್ಯ ಯಾವಾಗ ಯಾರಿಗೆ ಮೋಸ ಮಾಡ್ತಾನೋ ಯಾರಿಗೆ ಗೊತ್ತು” ಎಂದೆ

“ಯಾರು ಏನೇ ಹೇಳಿದರೂ ನನಗೆ ಮನುಷ್ಯತ್ವದಲ್ಲಿ ನಂಬಿಕೆ ಇದೆ. ನಾನು ಮನುಷ್ಯರನ್ನು ನಂಬುತ್ತೇನೆ “ ಎಂದ. ನನಗೂ ಅವರ ಫಿಲಾಸಫಿ ಸರಿ ಅನಿಸಿತು. ಬೇರೆ ದಾರಿ ಇರಲಿಲ್ಲ ನಂಬಲೇಬೇಕಿತ್ತು.  ಅದೇ ಆತಂಕದಲ್ಲಿಯೇ ನೇಪಾಳ ಗಡಿ ದಾಟಿ ಬಂದೆವು.  ಬಂದ ಕೂಡಲೇ ಕಾರು ಕಾಣಿಸಿತು. ನೆಮ್ಮದಿಯ ನಿಟ್ಟುಸಿರು ಬಂತು. ಅಲ್ಲಿಯೇ ಗೆಳೆಯರೊಂದಿಗೆ ಮಾತಾಡುತ್ತಾ ಕುಳಿತ ಚಾಲಕ ನಮ್ಮನ್ನು ಕಂಡ ತಕ್ಷಣ ಎದ್ದು  ಹತ್ತಿರ ಬಂದು “ ಎಲ್ಲಾ ಆಯಿತಾ ಸರ್ ನಡೆಯಿರಿ ಹೊರಡೋಣ “ ಎಂದ ಆರಾಮವಾಗಿ. ಅವನಿಗೆ ನಮ್ಮ ಆತಂಕ ಗೊತ್ತಿರಲಿಲ್ಲ.

ಬೆಂಗಳೂರಿನಲ್ಲಿ ಪ್ರತಿದಿನ ಪತ್ರಿಕೆ ಟಿವಿಗಳಲ್ಲಿ ಮೋಸ , ದರೋಡೆ , ಕಳ್ಳತನದ ಸುದ್ದಿಗಳನ್ನೇ ಓದಿ ನೋಡಿದ್ದ ನಮಗೆ ಇದನ್ನೆಲ್ಲಾ ನಂಬಲಿಕ್ಕೆ ಆಗಲಿಲ್ಲ ಅವನಿಗೆ ನೇರವಾಗಿ ಕೇಳಿದೆವು . “ ನಾವು ಆಕಡೆ ಹೋದಾಗ ನೀವು  ನಮಗೆ ಮೋಸ ಮಾಡಬಹುದಿತ್ತಲ್ಲ .ನೀವು ಇಷ್ಟು ಪ್ರಾಮಾಣಿಕರಾಗಿರಲು ಕಾರಣವೇನು “ ಎಂದಾಗ ನಿಮ್ಮ ದುಡ್ಡು ಎಷ್ಟುದಿನ ತಿನ್ನಬಹುದು ಸರ್?. ಹಾಗೆ ತೆಗೆದುಕೊಂಡು ಹೋಗಿ ನಾನು ನೆಮ್ಮದಿಯಾಗಿ ಇರಲು ಸಾಧ್ಯವೇ ಸಾರ್ ? ಸದಾ ಪೊಲೀಸರ ಭಯದಲ್ಲಿ ಅದಕ್ಕಿಂತ ಹೆಚ್ಚಾಗಿ ನನ್ನ ಆತ್ಮಸಾಕ್ಷಿಯ ಜೊತೆ ಹೇಗೆ ವಂಚನೆಯಿಂದ ಇರಲಿ ಸರ್.  ನಾಳೆ ನನ್ನ ಪತ್ನಿ ಮಕ್ಕಳಿಗೆ ಹೇಗೆ ಮುಖತೋರಿಸಲಿ ಸರ್. ನಮಗೆ ನಮ್ಮ ನಿಯತ್ತಿನ ದುಡಿಮೆ ಸಾಕು ಸರ್. ಅದರಲ್ಲಿ ಇರುವ ನೆಮ್ಮದಿ ತೃಪ್ತಿ ಮೋಸ ಮಾಡಿದರೆ ಸಿಗಲ್ಲ ಸರ್

ನಾನೊಬ್ಬನೇ ಅಲ್ಲ ಸಾರ್,ಪ್ರಕೃತಿ ಮಡಿಲಲ್ಲಿರುವ  ಇಲ್ಲಿನ ಬಹುತೇಕ ಜನ  ಪ್ರತಿ ದಿನ ಬೆಳಗ್ಗೆ ಎದ್ದತಕ್ಷಣ ಬೆಟ್ಟ ಗುಡ್ಡ ,ಗಿಡ ಮರ, ಬಳ್ಳಿ ಹೂವು, ಹಣ್ಣುಗಳು,  ಆಕಾಶ, ಮೋಡಗಳು, ಸೂರ್ಯೋದಯ ,ಸೂರ್ಯಾಸ್ತ, ರಾತ್ರಿಯಾದರೆ , ಚಂದ್ರ, ನಕ್ಷತ್ರಗಳು,  ನೀಹಾರಿಕೆಗಳು ಹೀಗೆ ಸದಾ ಕಾಲ  ಪ್ರಕೃತಿಯನ್ನೇ ನೋಡುತ್ತಿರುತ್ತಾರೆ ಸರ್, ಇವುಗಳನ್ನೆಲ್ಲಾ ನೋಡಿದರೆ ಮನಸ್ಸಿಗೆ ಆನಂದವಾಗುತ್ತದೆ. ದೇಹದಲ್ಲಿ ಉಲ್ಲಾಸ ಮೂಡುತ್ತದೆ. ಏಕೆಂದರೆ ನಿಸರ್ಗದಲ್ಲಿ ಮೋಸ, ವಂಚನೆ, ಸುಳ್ಳು,  ಕಪಟ, ದುರಾಸೆ, ಸೇಡು, ಕೋಪ, ತಾಪ  ಇದಾವುದೂ ಕಾಣುವುದಿಲ್ಲವಲ್ಲ ಸರ್. ಹಾಗಾಗಿ ಇಲ್ಲಿ ಬಹಳಷ್ಟು  ಜನಗಳ ಮನಸ್ಸಿನಲ್ಲಿ ಕೆಟ್ಟ ಭಾವನೆಗಳು ಮೂಡುವುದು ತುಂಬಾ ಕಡಿಮೆ ಸರ್.

ಅದೇ ನಿಮ್ಮ ಪಟ್ಟಣಗಳಲ್ಲಿ ದಿನ ಬೆಳಗಾದರೆ  ಕಾಮ, ಕ್ರೋಧ, ಲೋಭ, ಮೋಹ ಮದ , ಮಾತ್ಸರ್ಯಗಳೇ ತುಂಬಿರುವ  ತರತರ ವಿಚಿತ್ರವಾದ ಜನಗಳನ್ನು ಅವರ ವಿವಿಧ ಮುಖ ಚಹರೆಗಳನ್ನು ನೋಡುತ್ತಲೇ ಇರುತ್ತೀರಿ.  ಹೀಗಾಗಿ ನೀವು ನೆಮ್ಮದಿಯ ಪ್ರಶಾಂತವಾದ ಮನಸ್ಥಿತಿಯಲ್ಲಿ ಇರುವುದು ತುಂಬಾ ಕಷ್ಟವಾಗುತ್ತದೆ ಸರ್. ಅದಕ್ಕೆ ಯಾವಾಗಲೂ ಉದ್ವಿಗ್ನರಾಗೇ ಇರುತ್ತೀರಿ. ನಗರದ ಟೆನ್ಶನ್ ಕಳೆದು ಕೊಳ್ಳಲು ಮತ್ತೆ ಪ್ರಕೃತಿ ಮಡಿಲಿಗೇ ಬರುತ್ತೀರಿ.  ನಗರವಾಸಿಗಳ ಕರ್ಮ ಸರ್ ಇದು”  ಎಂದು ನಮ್ಮ ಟ್ಯಾಕ್ಸಿ ಚಾಲಕ ಹೇಳುತ್ತಲೇ ಇದ್ದ

ನಾವು ಅವನ ಜೀವನಾನುಭವದ ಮಾತುಗಳನ್ನು ಕೇಳುತ್ತಾ ದಾರ್ಜಿಲಿಂಗ್ ನ ಟೀ ಎಸ್ಟೇಟ್ ಗಳ ಸೌಂದರ್ಯವನ್ನು ಸವಿಯುತ್ತಿದ್ದೆವು. ಮಾತಿನ ಮಧ್ಯೆ ಜಗಜೀತ್ ಸಿಂಗ್ ನ ಘಜಲ್ ಗಳ ಪ್ರಸ್ತಾಪ ಮಾಡಿದ. ಕಾಗದದ ದೋಣಿ… ಗೀತೆ ಬಗ್ಗೆ ಹೇಳಿದ. ನಮ್ಮೆಲ್ಲ ಐಸಿರಿಯನ್ನು ತೆಗೆದುಕೊಂಡು ನನ್ನ ಬಾಲ್ಯವನ್ನು ನನಗೆ ಮರಳಿಸು ಎಂದು ಕೇಳುವ ಮನುಷ್ಯನ ಸ್ಥಿತಿ ಬಗ್ಗೆ ಮರುಕ ವ್ಯಕ್ತಪಡಿಸಿದ.

ಬಂಗಾಳಿಗಳು ಊಟ ಚೆನ್ನಾಗಿ ಮಾಡುತ್ತಾರೆ, ಪ್ರತಿ ವರ್ಷ ಪ್ರವಾಸ ತಪ್ಪಿಸುವುದಿಲ್ಲ. ಜೀವನದಲ್ಲಿ ಮನೆ ಕಟ್ಟುವುದು ಬಂಗಾಳಿಗಳ ಪರಮ ಧ್ಯೇಯ ಈ ಮೂರಕ್ಕೆ ಬಹಳ ಪ್ರಾಧಾನ್ಯತೆ ಕೊಡುತ್ತಾರೆ ಎಂದು ಹೇಳುತ್ತಿದ್ದ. ಅದಕ್ಕಾಗಿ ಪ್ರಾಮಾಣಿಕವಾಗಿ ಕಷ್ಟಪಟ್ಟು ಎಲ್ಲಿ ಬೇಕಾದರೂ ದುಡಿಯುತ್ತಾರೆ ಎಂದೂ ಸೇರಿಸಿದ. ಅವನ ಶುದ್ದವಾದ ಹಿಂದಿಯಲ್ಲಿ ಆಡುತ್ತಿದ್ದ  ಮಾತುಗಳನ್ನು ಕೇಳುತ್ತಿದ್ದರೆ ಒಂದು ಕ್ಷಣ ಅವನು ಟ್ಯಾಕ್ಸಿ ಚಾಲಕ ಎನ್ನುವುದೇ ಮರೆತು ಹೋಗುತ್ತಿತ್ತು. ದೊಡ್ಡ ವಿದ್ವಾಂಸರೊಬ್ಬರ ಭಾಷಣಕ್ಕೆ ಮಂತ್ರಮುಗ್ಧರಾಗಿ ಕೇಳುವವರಂತೆ ಅವನ ಮಾತುಗಳನ್ನು ಕೇಳುತ್ತಿದ್ದೆವು.

ಸಂಜೆ ನಾವು ರೈಲು ನಿಲ್ದಾಣ ತಲುಪಿದಾಗ ರೈಲು ಹೊರಡಲು ತಯಾರಾಗಿ ನಿಂತಿತ್ತು. ನಾವು ಅವನು ಕೇಳಿದಂತೆ  ಮೂರುಸಾವಿರ ಕೊಟ್ಟು ಕಾರಿಳಿದೆವು. ಬಹಳ ಖುಷಿಯಿಂದ ತೆಗೆದುಕೊಂಡ. ನಮಗೆ ಶುಭ ಹಾರೈಸಿ ಕಳಿಸಿಕೊಟ್ಟ. ನಾವು ಲಗೇಜ್ ಒಳಗಿಟ್ಟು ಕಾಲಿಟ್ಟ ಕೂಡಲೆ ರೈಲು ಕಲ್ಕತ್ತಾ ಕಡೆ ಹೊರಟಿತು.  ಮನುಷ್ಯಲೋಕದಲ್ಲಿ ಇನ್ನೂ ಪ್ರಾಮಾಣಿಕತೆ ಮಾಯವಾಗಿಲ್ಲ. ಇಂಥಹ ವ್ಯಕ್ತಿಗಳಿಂದಲೇ ಜಗತ್ತಿನಲ್ಲಿ ನಂಬಿಕೆ ಪ್ರೀತಿ ವಿಶ್ವಾಸ ಉಸಿರಾಡುತ್ತಿದೆ ಎಂದುಕೊಳ್ಳುತ್ತಾ ಮನಸ್ಸಿನಲ್ಲೇ ಅವನಿಗೆ ಶುಭ ಹಾರೈಸಿದೆವು.

‍ಲೇಖಕರು Admin

7 February, 2016

3 Comments

  1. ಪ್ರೊ.ಬಸವರಾಜ ಪುರಾಣಿಕ

    ನಿಮ್ಮ ವರದಿ ಓದಿ ಗಾಲಿಬ್ ನ ೊಂದು ಶೇರ್ ನೆನಪಾಯಿತು:
    “ಬಸ್ ಕೆ ದುಷ್ವಾರ್ ಹೈ ಹರ ಕಾಮ ಕಾ ಆಸಾನ ಹೋನಾ
    ಆದ್ಮೀ ಕೊ ಮುಯಸ್ಸರ್ ನಹೀ ಹೈ ಇನ್ಸಾನ್ ಹೋನಾ”

    ತಾಯಿಯ ಒಡಲಿಂದ ಹುಟ್ಟಿದ ಪ್ರತಿಯೊಬ್ಬ ಆದ್ಮಿ
    ಆದರೆ ಆ ಆದ್ಮಿ ಇನ್ಸಾನ್ ಆಗುವುದು ದುಷ್ಕರ.
    ನೀವೆನ್ನುವ “ಮನುಷ್ಯತ್ವ” ವೇ ಇನ್ಸಾನಿಯತ್, ಅದಕ್ಕೆ ” ಇನ್ಸಾನ ಬನೋ ” ಇಂದು ಎಚ್ಚರಿಸುತ್ತಲೇ ಬಂದಿದೆ ಕವಿವಾಣಿ. ನಿಮಗೆ ಸಿಕ್ಕ ಡ್ರೈವರ್ ಅಂಥ ಇನ್ಸಾನರಲ್ಲಿ ಒಬ್ಬ. ನೀವು ನಿಮ್ಮ ರೇಣುಕಾರಾಧ್ಯ ದಂಪತಿ ನಿಜವಾಗಿ ಭಾಗ್ಯಶಾಲಿಗಳು

  2. Vihi wadawadagi

    Tumba olle anubhava sir maanaviyate innu ide ennalu iduve nidarshana allade maanavà parisarada koosaadare yaava ketta yochanegalu suliyuvudilla

  3. ಶಮ, ನಂದಿಬೆಟ್ಟ

    ನಿಸರ್ಗದಲ್ಲಿ ಮೋಸ, ವಂಚನೆ, ಸುಳ್ಳು, ಕಪಟ, ದುರಾಸೆ, ಸೇಡು, ಕೋಪ, ತಾಪ ಇದಾವುದೂ ಕಾಣುವುದಿಲ್ಲವಲ್ಲ ಸರ್. ಹಾಗಾಗಿ ಇಲ್ಲಿ ಬಹಳಷ್ಟು ಜನಗಳ ಮನಸ್ಸಿನಲ್ಲಿ ಕೆಟ್ಟ ಭಾವನೆಗಳು ಮೂಡುವುದು ತುಂಬಾ ಕಡಿಮೆ ಸರ್.

    Sooooper

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading