ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಜುನಾಥ್ ಲತಾ ಹೊಸ ಕವಿತೆ: ಸೀಯದಿರಲಿ ಇನ್ನೊಂದು ಒಡಲು

– ಮಂಜುನಾಥ್ ಲತಾ


ಜೀವ ಸುಲಿದು ಉರಿ ಉರಿದು
ಮುಕ್ಕಾಲು ಉರಿ ತಣ್ಣಗಾಗುವ ಮುನ್ನ
ಮತ್ತೊಂದು ಕಾಲ ಕಡೆ
ಹೊತ್ತಿಕೊಂಡಿದೆ ಉರಿ.
ಉಳಿದಿರುವುದೊಂದು ಮೊಂಡುಗೈ
ಬೆರಳುಗಳಾಡಿಸಿ ಬೆಂಕಿ ಬೇಗುದಿ ಆರಿಸುವಂತಿಲ್ಲ.

ಒಡಲು ಸೀದ ವಾಸನೆ ಹೊಲಮಾಳಗಳಲ್ಲಿ ಹರಡಿ
ಚೆಲ್ಲಿದ ಹಸಿ ಗೊಬ್ಬರದೊಂದಿಗೆ
ಕಲಸಿದ ಹಳಸು ಪರಿಮಳ.

ಬೆಂದವರ ನೋವ
ಬೆಂಕಿಯೇನು ಬಲ್ಲದು
ಅದಕೆ ಸುತ್ತಿದ ಬಟ್ಟೆಯೇನು ಬಲ್ಲದು
ಅದಕೆ ಸಿಕ್ಕಿಸಿದ ಕಟ್ಟಿಗೆಯೇನು ಬಲ್ಲದು
ಅದ ಹಿಡಿದು ಹದವಾಗಿ ಸುಟ್ಟ
ಕೈಯೇನು ಬಲ್ಲದು!

ಇಲ್ಲಿರುವ ಹುತಾತ್ಮ ಮಣ್ಣಿಗೆ
ನಿಚ್ಚವೂ ಪೂಜೆ, ಮೆಚ್ಚುಗೆ
ಮಣ್ಣಾಳದಲ್ಲಿ ಉಂಡೆಗಟ್ಟಿರುವುದು ಹೆಂಟೆಯಲ್ಲ; ಹೆಪ್ಪುಗಟ್ಟಿದ ರಕ್ತ ಗ್ರಂಥಿಗೆ!

ಸುಟ್ಟವರು ಯಾರೋ
ಅರೆಬೆಂದ ಒಡಲ ಕಿತ್ತು ತಿಂದವರು ಯಾರೋ

ಹತ್ತಿರದ ಹುತ್ತದ ಕೊಳವೆಯಿಂದ ಬೆಂಕಿಯ ಹಾವ ನಾಲಿಗೆ ಎದ್ದು
ಹೊಲಗಳತ್ತ ಹರಿಯುತ್ತಿದೆ…

ಇನ್ನಾದರೂ ಸೀಯದಿರಲಿ
ಇನ್ನೊಂದು ಒಡಲು

      

‍ಲೇಖಕರು avadhi

31 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading