ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಗ್ಳೂರ್ ಜನ ಲೋಕದಲ್ಲಿರೋ ದೇವರನ್ನೆಲ್ಲಾ ಅಲ್ಲೇ ಹಿಡಿದಿಟ್ಕೊಂಡಿದ್ದೀರಲ್ಲಾ?

Chidambara Baikampady                                                                                         ಚಿದಂಬರ ಬೈಕಂಪಾಡಿ

ಒಂದು ಸುದ್ದಿಯನ್ನು ಒಬ್ಬ ವರದಿಗಾರ ನೋಡುವ ವಿಧಾನಕ್ಕೂ ಅದೇ ಸುದ್ದಿಯನ್ನು ಡೆಸ್ಕ್ ನಲ್ಲಿ ಕುಳಿತ ಉಪಸಂಪಾದಕರು ನೋಡುವುದಕ್ಕೂ ತುಂಬಾ ವ್ಯತ್ಯಾಸವಿರುತ್ತದೆ. ವರದಿಗಾರ ಕೊಡುವ ಅವಸರದ ಸುದ್ದಿಯನ್ನು ಡೆಸ್ಕ್ ನಲ್ಲಿದ್ದವರು ತಿದ್ದಿ ಹೊಳಪು ಕೊಟ್ಟು ಮತ್ತಷ್ಟು ಆಕರ್ಷಕವಾಗಿ ಓದುಗರಿಗೆ ಉಣಬಡಿಸಬಹುದು. ನಿರ್ಜೀವ ಸುದ್ದಿಗೆ ಜೀವ ತುಂಬುವ ಮಾಂತ್ರಿಕ ಶಕ್ತಿ ಡೆಸ್ಕ್ ನಲ್ಲಿದ್ದವರಿಗಿರುತ್ತದೆ, ಆದರೆ ಎಷ್ಟರ ಮಟ್ಟಿಗೆ ತಮ್ಮ ಜವಾಬ್ದಾರಿಯನ್ನು ಅವರು ನಿಭಾಯಿಸುತ್ತಾರೆ ಎನ್ನುವುದರ ಮೇಲೆ ಅವಲಂಭಿಸಿರುತ್ತದೆ.

ವೈಎನ್ಕೆ ಸಂಪಾದಕರಾಗಿ ತಮ್ಮ ಕೈಕೆಳಗಿನವರಿಂದ ಕೆಲಸ ಮಾಡಿಸಿದರು ಅಥವಾ ಚೆನ್ನಾಗಿ ಕೆಲಸ ತೆಗೆದುಕೊಳ್ಳುತ್ತಿದ್ದರು. ಅವರ ಮುಖ್ಯವಾದ ಗುಣವೆಂದರೆ ತಮಗೆ ಬೇಕೆನಿಸಿದ ಸುದ್ದಿ ಲೇಖನಗಳನ್ನು ಬೇಕೆನಿಸಿದವರಿಂದಲೇ ಬರೆಸುತ್ತಿದ್ದರು. ಹಾಗೆ ಬರೆಸುವಾಗ ಸಂಪಾದಕರು ಹೇಳಿದ್ದಾರೆಂದು ಬೇರೆಯವರಿಂದ ಫೋನ್

A worker at a jewellery showroom displays gold idols of Hindu elephant god Ganesh (L) and Hindu goddess Lakshmi in Kolkata August 30, 2013. REUTERS/Rupak De Chowdhuri/Files

ಮಾಡಿಸಿ ಅವರು ತಾವು ಹೇಳಿದ ಕೆಲಸವನ್ನು ಮಾಡಿದ್ದಾರೋ ಇಲ್ಲವೋ ಎನ್ನುವುದನ್ನು ತಾವು ಹೇಳಿದವರಿಂದ ಕೇಳಿ ತಿಳಿದುಕೊಳ್ಳುವ ಕೆಲಸ ಮಾಡುತ್ತಿರಲಿಲ್ಲ. ತಾವೇ ಒನ್ ಟು ಒನ್ ಫೋನ್ ಮಾಡಿ ಕಡ್ಡಿ ಮುರಿದಂತೆ ಹೇಳಿ ಕೆಲಸ ಮಾಡಿಸುತ್ತಿದ್ದರು ಮತ್ತು ಅದನ್ನು ತಾವೇ ಮಾನಿಟರ್ ಮಾಡುತ್ತಿದ್ದರು. ತಾನು ಸಂಪಾದಕ ಆ ಲೇಖನ, ಸುದ್ದಿ ಯಾಕೆ ನೋಡಬೇಕೆನ್ನುವ ಬಿಗುಮಾನವಾಗಲೀ, ಕೆಳಗಿನ ಹಂತದವರು ನೋಡಿಕೊಳ್ಳಲಿ ಎನ್ನುವ ಉದಾಸೀನ ವರ್ತನೆಯೂ ಅವರದ್ದಾಗಿರಲಿಲ್ಲ.

ವೈಎನ್ಕೆ ಹೇಳುವುದನ್ನು ಖಡಕ್ಕಾಗಿ ಹೇಳಿದರೂ ಕೆಲಸ ಮಾಡಿದ ಮೇಲೆ ಅವರು ಫೋನಾಯಿಸಿ ಮೆಚ್ಚುಗೆ ಹೇಳುತ್ತಿದ್ದ ಕಾರಣ ವೃತ್ತಿಯಲ್ಲಿ ಖುಷಿಯಾಗುತ್ತಿತ್ತು. ಆದರೆ ತಪ್ಪು ಸುದ್ದಿ ಪ್ರಕಟವಾಗಿದ್ದರೆ ಮುಲಾಜಿಲ್ಲದೆ ಬೆಂಡೆತ್ತುತ್ತಿದ್ದರಂತೆ, ಪುಣ್ಯಕ್ಕೆ ಅವರಿಂದ ಬೆಂಡೆತ್ತಿಸಿಕೊಳ್ಳುವ ಸಂದರ್ಭ ಬರಲಿಲ್ಲ ಎನ್ನುವುದೇ ನನಗೆ ಹೆಮ್ಮೆ.

ದೊಡ್ಡ ನಾಯಕರು ಮಂಗಳೂರಿಗೆ ಬಂದಾಗಲೆಲ್ಲಾ ಅವರ ಸುದ್ದಿ ಬರೆದ ಮೇಲೆ ಎರಡು ಮೂರು ಸಲವಾದರೂ ಓದಿಯೇ ಬೆಂಗಳೂರಿಗೆ ಕಳುಹಿಸುತ್ತಿದ್ದೆ. ಯಾಕೆಂದರೆ ವೈಎನ್ಕೆ ಸುದ್ದಿ ಮೇಲೆ ನಾಳೆ ಕಣ್ಣಾಡಿಸಿ ಸ್ವಲ್ಪ ತಪ್ಪಿದ್ದರೂ ಪ್ರಶ್ನೆ ಮಾಡುತ್ತಾರೆನ್ನುವ ಭಯ. ಡೆಸ್ಕ್ ನವರೂ ಕೂಡಾ ವೈಎನ್ಕೆ ಕಾಲದಲ್ಲಿ ಹೆಚ್ಚು ಮುತುವರ್ಜಿ ವಹಿಸುತ್ತಿದ್ದರು. ಆದರೂ ಕೆಲವೊಮ್ಮೆ ಕಣ್ತಪ್ಪಿನಿಂದಾಗಿ ಮುದ್ರಾರಾಕ್ಷಸರ ಹಾವಳಿ ಇದ್ದೇ ಇರುತ್ತಿತ್ತು. ಆದರೂ ಸಹಿಸಿಕೊಳ್ಳಬಹುದಾದಂತ ಕಾಗುಣಿತ ತಪ್ಪು ಹೊರತು ಸುದ್ದಿಯ ಮೂಲಕ್ಕೆ ಯಾವುದೇ ಅಪಚಾರವಾಗುತ್ತಿರಲಿಲ್ಲ.

ಕೆಲವೊಮ್ಮೆ ವೈಎನ್ಕೆ ನಿಜಕ್ಕೂ ಕುತೂಹಲದಿಂದ ಪ್ರಶ್ನೆ ಕೇಳುತ್ತಿದ್ದರೂ ಅಥವಾ ನನ್ನನ್ನು ಟೆಸ್ಟ್ ಮಾಡಲು ಕೇಳುತ್ತಿದ್ದರೋ ಎನ್ನುವ ಅನುಮಾನ ಬರುತ್ತಿತ್ತು. ಅದೊಂದು ದಿನ ಮುಸ್ಸಂಜೆ ಹೊತ್ತಿಗೆ ವೈಎನ್ಕೆ ಫೋನ್ ಮಾಡಿದರು. ಸೆಕ್ರೆಟರಿ ಕನೆಕ್ಟ್ ಮಾಡುವುದರಿಂದ ಅತ್ತ ಮಾತನಾಡುತ್ತಿರುವವರು ವೈಎನ್ಕೆ ಎನ್ನುವುದು ಮುಂಚಿತವಾಗಿಯೇ ಗೊತ್ತಾಗುತ್ತಿತ್ತು. ಆದರೆ ಆದಿನ ನೇರವಾಗಿ ಅವರೇ ಫೋನ್ ಮಾಡಿದ್ದರು. ಫೋನ್ ಕರೆ ಸ್ವೀಕರಿಸಿದೆ.

ಏ ಬೈಕಂಪಾಡಿ ಮಂಗ್ಳೂರಿಂದ ಧರ್ಮಸ್ಥಳಕ್ಕೆ ಎಷ್ಟು ಕಿ.ಮೀ? ನೇರ ಪ್ರಶ್ನೆ. ಹೇಳಿದೆ, ಬಸ್ಸಲ್ಲಿ ಎಷ್ಟು ಗಂಟೆ ಬೇಕು ಅಲ್ಲಿಗೆ ಹೋಗ್ಲಿಕ್ಕೆ, ಕಾರಲ್ಲಾದರೆ ಎಷ್ಟೊತ್ತು ?, ಹೇಳಿದೆ, ಫೋನ್ ಕುಕ್ಕಿದರು.

ಯಾಕೆ, ಏನು ಎನ್ನುವ ಯಾವ ವಿಷಯವೂ ಇಲ್ಲದೆ ಮಾಹಿತಿ ಕೇಳಿ ಏನನ್ನೂ ಹೇಳದೆ ಫೋನ್ ಕುಕ್ಕಿದ ಮೇಲೆ ನನಗೆ ದಿಗಿಲು ಶುರುವಾಯ್ತು.

ಈಗಲೇ ಧರ್ಮಸ್ಥಳಕ್ಕೆ ಹೊರಡು ಎನ್ನುತ್ತಾರೋ ಏನು ಗತಿಯಪ್ಪ ಎನ್ನುವ ಚಿಂತೆ. ಇಷ್ಟಕ್ಕೂ ಧರ್ಮಸ್ಥಳ ದೇವಸ್ಥಾನಕ್ಕೆ ವೈಎನ್ಕೆ ಹೋಗುತ್ತಾರೆಯೇ? ಎನ್ನುವ ಪ್ರಶ್ನೆ. ಆದರೆ ಅವರು ಮಂಗಳೂರಿಗೆ ಬಂದಾಗಲೂ ದೇವಸ್ಥಾನಗಳಿಗೆ ಹೋದ ಉದಾಹರಣೆ ನನಗೆ ಗೊತ್ತಿರಲಿಲ್ಲ.

ಆದರೆ ಅದೊಂದು ಸಲ ಬೆಂಗಳೂರಲ್ಲಿ ಮೀಟಿಂಗ್ ಗೆ ಹೋಗಿದ್ದಾಗ ಎಲ್ಲವೂ ಮುಗಿದು ಅಲ್ಲಿಂದ ಹೊರಡುವ ಮುನ್ನ ಅವರಿಗೆ ಹೇಳಿ ಬರಲು ಅವರ ಚೇಂಬರ್ ಗೆ ಹೋಗಿದ್ದೆ. ಅವರು ತುಂಬಾ ಒಳ್ಳೆ ಮೂಡ್ ನಲ್ಲಿದ್ದರು. ಏನ್ ಬೈಕಂಪಾಡಿ ಅಂದರು.

YNKಸಾರ್ ನಾನು ಹೊರಡ್ತಾ ಇದ್ದೀನಿ ಅಂದೆ. ನಿಮ್ಮೂರ ದೇವರು ಕರೀತಾ ಇದ್ದಾರೋ ಕೇಳಿದರು. ಇಲ್ಲಾ ಸಾರ್ ನಿಮ್ಮಲ್ಲಿ ಹೇಳಿ ಹೋಗಲು ಬಂದೆ ಎಂದೆ.

ಏ ಬೈಕಂಪಾಡಿ ನೀವು ಮಂಗ್ಳೂರ್ ಜನ ಲೋಕದಲ್ಲಿರೋ ದೇವರನ್ನೆಲ್ಲಾ ಅಲ್ಲೇ ಹಿಡಿದಿಟ್ಕೊಂಡಿದ್ದೀರಲ್ಲಾ ಎಷ್ಟು ದೇವರಿದ್ದಾರೆ ನಿಮ್ಮೂರಲ್ಲಿ ಕೇಳಿದರು.

ಸಾರ್ ಘಟ್ಟದ ಕೆಳಗಿರುವುದು ನಾಗಲೋಕ, ಮಂಗ್ಳೂರು ನಾಗಲೋಕ, ಆದರೆ ದೇವರ ಸಂಖ್ಯೆ ಎಷ್ಟೆಂದು ಗೊತ್ತಿಲ್ಲ ಎಂದೆ.

ಅದಕ್ಕೆ ತಟ್ಟನೆ ಅವರೇ ಹೇಳಿದ್ದರು ದೇವರಿಗೂ ಗೊತ್ತಿಲ್ಲ ಬಿಡು ತಾವು ಎಷ್ಟು ಜನ ಇದ್ದೀವಿ ಅಂತ, ಆಯ್ತು ಆಯ್ತು ದೇವರ ನಾಡವರು ನೀವು, ಹೊರಡು ಎಂದರು. ಬದುಕಿದೆಯಾ ಬಡಜೀವವೇ ಅಂದುಕೊಂಡು ಅಲಿಂದ ರೈಟ್ ಹೇಳಿದೆ.

ಇನ್ನೂ ಸ್ವಲ್ಪ ಹೊತ್ತು ಅಲ್ಲೇ ಇದ್ದಿದ್ದರೆ ಅವರಿಗೆ ಉತ್ತರಿಸುವ ಭರದಲ್ಲಿ ತಪ್ಪು ಹೇಳಿ ಬೈಸಿಕೊಳ್ಳುತ್ತಿದ್ದೆನೇನೋ ಬಚಾವ್ ಆಗಿದ್ದೆ.

ಆದರೆ ಅವರು ಫೋನ್ ಮಾಡಿ ಧರ್ಮಸ್ಥಳದ ಮಾಹಿತಿ ಕೇಳಿದ್ದು ಮಾತ್ರ ರಹಸ್ಯವಾಗಿಯೇ ಉಳಿಯಿತು. ಬಹಳ ಹೊತ್ತು ಕಾದೆ ಮತ್ತೆ ಫೋನ್ ಬರಬಹುದೆಂದು ಬರಲಿಲ್ಲ.

ಮರು ದಿನ ಬೆಳಿಗ್ಗೆ ಬೆಳಿಗ್ಗೆ ವೈಎನ್ಕೆ ಫೋನ್ ಮಾಡಿ ಧರ್ಮಸ್ಥಳದಲ್ಲಿ ಇವೊತ್ತು ಸಂಜೆ ಎಸ್.ಕೆ.ಜೈನ್ ಕಾರ್ಯಕ್ರಮ ಇದೆಯಂತೆ, ಕವರ್ ಮಾಡು ಫೋಟೋ ಬೇಕು ಎಂದರು.

ಸಹೋದ್ಯೋಗಿ ಉಭಯರಿಗೂ ಹೇಳಿದೆ. ಅವರಿಗೆ ಶಂಕರನ್ ನಾಯರ್ ಫೋನ್ ಮಾಡಿ ಕವರ್ ಮಾಡಲು ಹೇಳಿದ್ದರಂತೆ.

ಕಾರಿನಲ್ಲಿ ಧರ್ಮಸ್ಥಳಕ್ಕೆ ಹೋಗಿ ಪ್ರೋಗ್ರಾಮ್ ಕವರ್ ಮಾಡಲು ಉಭಯ ಸಜ್ಜಾಗಿದ್ದರು. ಅವರ ಜೊತೆ ನಾನು ಸೇರಿಕೊಂಡೆ. ಆದರೆ ನಮಗಿದ್ದ ಸಮಸ್ಯೆ ಅದೇ ದಿನವೇ ಆ ಸುದ್ದಿ ಬೆಂಗಳೂರಿಗೆ ಹೋಗಬೇಕಿತ್ತು, ಮರುದಿನದ ಪತ್ರಿಕೆಯಲ್ಲಿ ಪ್ರಕಟವಾಗಬೇಕು. ಆಗ ಮಂಗಳೂರು ಆವೃತ್ತಿ ಆರಂಭವಾಗಿರಲಿಲ್ಲವಾದ ಕಾರಣ ನಮ್ಮದೇ ಫೋಟೋಗ್ರಾಫರ್ ಇರಲಿಲ್ಲ. ಧರ್ಮಸ್ಥಳದ ಎಲ್ಲಾ ಕಾರ್ಯಕ್ರಮಗಳಿಗೆ ಕೀರ್ತಿ ಅಫೀಷಿಯಲ್ ಫೋಟೋಗ್ರಾಫರ್ ಆದರೆ ಆ ದಿನವೇ ಅವರೂ ಫೋಟೋ ಕೊಡುವುದು ಸಾಧ್ಯವಿಲ್ಲ. ಇದು ನಮ್ಮಿಬ್ಬರಿಗೂ ದಿಗಿಲುಂಟು ಮಾಡಿತು.

ಉಭಯರು ಇಂಥ ಸಮಯದಲ್ಲಿ ಏನಾದರೂ ಪರ್ಯಾಯ ದಾರಿ ಹುಡುಕುತ್ತಾರೆ. ಧರ್ಮಸ್ಥಳದಲ್ಲೇ ಸ್ಟುಡಿಯೋ ಫೋಟೋಗ್ರಾಫರ್ ಗೆ ಕೆಲಸ ವಹಿಸಿ ಕಾರ್ಯಕ್ರಮ ಮುಗಿದ ಒಂದು ಗಂಟೆಯಲ್ಲಿ ಫೋಟೋ ಕೈಗೆ ಸಿಕ್ಕಿತು. ಮತ್ತೆ ಕಾರಿನಲ್ಲಿ ಮಂಗಳೂರಿಗೆ ಬಂದು ಫೋಟೋ ಸುದ್ದಿ ಕಳುಹಿಸಿ ಇಬ್ಬರು ರಾತ್ರಿ ತಡವಾಗಿ ಮನೆಗೆ ಹೋದೆವು. ಎಸ್.ಕೆ ಜೈನ್ ಸುದ್ದಿ ವಿಚಾರದಲ್ಲಿ ತಡಮಾಡುವ ಪ್ರಶ್ನೆಯೇ ಇರಲಿಲ್ಲ, ಅದೂ ವೈಎನ್ಕೆಯೇ ಖುದ್ದು ಹೇಳಿದ್ದ ಕಾರಣ ಅಲರ್ಟ್ ಆಗಿ ಸುದ್ದಿ ಕಳುಹಿಸಿ ಡೆಸ್ಕ್ ನವರಿಗೂ ಹೇಳಿದ್ದೆ.

editorಮರುದಿನ ಫೋಟೋ ಸಮೇತ ಸುದ್ದಿ ಪ್ರಕಟವಾಗಿತ್ತು ಕನ್ನಡಪ್ರಭದಲ್ಲಿ, ಆದರೆ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಸುದ್ದಿಯೂ ಇಲ್ಲ, ಫೋಟೋವೂ ಪ್ರಕಟವಾಗಿರಲಿಲ್ಲ. ಇದು ಉಭಯರನ್ನು ಕೆರಳಿಸಿತು. ಅವರಿಗೆ ಅತಿಯಾದ ಕೆಟ್ಟ ಸಿಟ್ಟು ಬರಲು ಕಾರಣವೆಂದರೆ ಅವರೇ ಕಾರು ಮಾಡಿ ಧರ್ಮಸ್ಥಳಕ್ಕೆ ನನ್ನನ್ನು ಕರೆದುಕೊಂಡೂ ಹೋಗಿದ್ದು, ಆದರೆ ನನ್ನ ಪತ್ರಿಕೆಯಲ್ಲಿ ಪ್ರಕಟವಾಗಿ ಅವರ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲ ಎನ್ನುವುದು.

ಉಭಯರು ಬೆಂಗಳೂರು, ಚೆನ್ನೈಗೆ ಫೋನ್ ಮಾಡಿ ಮಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರಯಾಣಿಸಿ ಸುದ್ದಿ, ಫೋಟೋ ಕಳುಹಿಸಿದರೂ ಪ್ರಕಟವಾಗಿಲ್ಲವೆಂದು ಕೆಂಡಕಾರಿದರು. ಇವರು ಸಿಟ್ಟಿನಲ್ಲಿ ಉರಿಯುತ್ತಿದ್ದಾಗಲೇ ವೈಎನ್ಕೆ ಫೋನ್ ಮಾಡಿ ಫೋಟೋ, ಸುದ್ದಿಗೆ ಗುಡ್ ಗುಡ್ ಎಂದು ಹೇಳಿದರು.

ವೈಎನ್ಕೆ ಇಷ್ಟು ಚಿಕ್ಕ ವಿಚಾರಕ್ಕೆ ಫೋನ್ ಮಾಡಿದ ಮೇಲೆ ಉಭಯರು ಮತ್ತೂ ಕೆಂಡಾಮಂಡಲವಾಗಿ ಶಂಕರನ್ ನಾಯರ್ ಅವರಿಗೇ ಫೋನ್ ಮಾಡಿ ಡೆಸ್ಕ್ ನವರು ಕೇರ್ ಲೆಸ್ ಮಾಡಿದ್ದಾರೆಂದು ಅಲವತ್ತುಕೊಂಡರು. ಕನ್ನಡಪ್ರಭ ಎಡಿಟರ್ ಅಪ್ರಿಶಿಯೇಟೆಡ್ ಹಿಸ್ ರಿಪೋರ್ಟರ್ ಎಂದೆಲ್ಲಾ ಹೇಳಿಕೊಂಡರು. ಏನೇ ಹೇಳಿದರೂ ಮರುದಿನವೇ ಆ ಸುದ್ದಿ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾಗುವುದು.

ಅದೆಷ್ಟೂ ಬಾರಿ ಉಭಯರು ವೈಎನ್ಕೆಯವರಿಂದ ಬೈಗುಳ ಕೇಳಿದ್ದರೂ ಏನೇ ಆಗ್ಲಿ ಚಿದು, ವೈಎನ್ಕೆ ಕೆಲಸದ ಮಟ್ಟಿಗೆ ಸೀರಿಯಸ್ ಮಾತ್ರವಲ್ಲಾ ಕೈಕೆಳಗಿನವರನ್ನು ಹುರಿದುಂಬಿಸುವ ಗುಣವಿದೆ. ಗುಣಕ್ಕೆ ಮತ್ಸರ ಇರಬಾರದು ಎನ್ನುತ್ತಾ ವೈಎನ್ಕೆಯನ್ನು ನನಗಿಂತಲೂ ಹೆಚ್ಚು ಕಾಲದಿಂದ ನೋಡುತ್ತಾ ಬಂದಿದ್ದ ಉಭಯರು ಹೇಳಿದ ಮೇಲೆ ವೈಎನ್ಕೆಗೆ ವೈಎನ್ಕೆಯೇ ಸಾಟಿ ಅನ್ನಿಸಿತು.

‍ಲೇಖಕರು admin

3 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading