ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಗಳಾ ಪ್ರಿಯದರ್ಶಿನಿ ಓದಿದ- ‘ಪೆಣ್ ಕಥನ’

ಡಾ ಮಂಗಳಾ ಪ್ರಿಯದರ್ಶಿನಿ

ಸಮಸ್ತ ಸ್ತ್ರೀಕುಲಕ್ಕೆ ತಮ್ಮ ಅನುವಾದದ ಮೂಲಕ ಮಲೆಯಾಳಿ ಭಾಷೆಯಿಂದ ಪೆಣ್ ಕಥೆಗಳನ್ನು ಕನ್ನಡಕ್ಕೆ ತಂದು ಕೊಟ್ಟವರು ನಮ್ಮ ಹೆಮ್ಮೆಯ ಲೇಖಕಿ ಡಾ. ಕಮಲಾ ಹೆಮ್ಮಿಗೆಯವರು. ಈಗಾಗಲೇ ಅವರು ‘ಕೇರಳ ಕಾಂತಾ ಸಮ್ಮಿತ’ ಎಂಬ ಮಲೆಯಾಳಂ ಲೇಖಕಿಯರ ಕಥೆಗಳನ್ನು ಕನ್ನಡಿಗರ ಕೈಗಿತ್ತಿದ್ದಾರೆ .ಅದಲ್ಲದೆ ಅಲ್ಲಿನ ಪ್ರಮುಖ ಲೇಖಕಿಯರಾದ ಲಲಿತಾಂಬಿಕಾ ಅಂತರ್ಜನಂ ಅವರ ಕಾದಂಬರಿ ಹಾಗೂ ರಾಜಲಕ್ಷ್ಮಿಯವರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸ್ವತಂತ್ರ ಲೇಖಕಿಯಾಗಿ ಅರು ಕವನ ಸಂಕಲನಗಳು, ನಾಲ್ಕು ಕಥಾ ಸಂಕಲನಗಳನ್ನೂ ಪ್ರಕಟಿಸಿದ್ದಾರೆ.

ಎಲ್ಲ ಹೆಣ್ಮಕ್ಕಳೂ ಸಮಾನ ದುಃಖಿಗಳು, ಒಂದೇ ದೋಣಿಯಲ್ಲಿ ತೇಲುತ್ತಲೇ ಇರುವವರು. ಲಿಂಗ ತಾರತಮ್ಯ, ಪುರುಷ ದೌರ್ಜನ್ಯ, ಅವಿದ್ಯಾವಂತಿಕೆ – ಇವುಗಳು ಕೇರಳದ ಮಹಿಳೆಯರನ್ನೂ ಬಾಧಿಸದಿಲ್ಲ. ಚೇರ – ಚೋಳರ ನಿರಂತರ ಯುದ್ಧಗಳು – ಕ್ರಮೇಣ ಸಾಮ್ರಾಜ್ಯದಲ್ಲಿ ತಲೆದೋರಿದ ರಾಜಕೀಯ, ಆರ್ಥಿಕ, ಸಾಮಾಜಿಕ ಬದಲಾವಣೆಗಳಿಂದ ಪಿತೃ ಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳು ಕಾಣಿಸಿಕೊಂಡು ಮಾತೃ ಪ್ರಧಾನಾತ್ಮಕವಾದುದು ಕೇರಳದ ಸಾಂಸ್ಕೃತಿಕ ಬದುಕಿನಲ್ಲೊಂದು ದೊಡ್ಡ ಪಲ್ಲಟವಾದರೂ, ಯಥಾ ಪ್ರಕಾರದ ಕಟ್ಟುನಿಟ್ಟಾದ ಪುರುಷ ಸಂಹಿತೆಯ ಕಾನೂನು ಕಟ್ಟಳೆಗಳು ಸ್ರೀಯರ ಹಕ್ಕುಗಳನ್ನು ಹತ್ತಿಕ್ಕಿದುದು ಶೋಚನೀಯ ವಿಚಾರವೇ ಸರಿ.

ಇಪ್ಪತ್ತನೆಯ ಶತಮಾನದ ಆರಂಭದ ದಿನಗಳಲ್ಲೂ ಹೆಣ್ಣು ಮಕ್ಕಳು ತಮ್ಮ ಸ್ತನದ ಗಾತ್ರಕ್ಕೆ ತಕ್ಕಂತೆ ಕರ ತೆರಬೇಕಾದ ಪರಿಸ್ಥಿತಿ. ಸ್ತನಗಳನ್ನು ಮರೆ ಮಾಡಿಕೊಂಡು ತಮ್ಮ ಮಾನ ಕಾಪಾಡಿಕೊಳ್ಳುವ ಅವಕಾಶ ಕೆಳ ಜಾತಿಯ ಹೆಣ್ಣು ಮಕ್ಕಳಿಗಿರಲಿಲ್ಲ. ಅಷ್ಟೇ ಏಕೆ, ಕೆಳ ಜಾತಿಯ ಹೆಣ್ಣೊಬ್ಬಳು ತನ್ನ ಎದೆಗಳನ್ನು ಬಟ್ಟೆಯಿಂದ ಮುಚ್ಚಿಕೊಂಡದ್ದು ಬಹಳ ದೊಡ್ಡದೇ ಅಪರಾಧವಾಗಿ, ಅಟ್ಟಂಗಾರ್ ರಾಣಿ ಆಕೆಯ ಮೊಲೆಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಎಂಬ ಹುಕುಂ ಹೊರಡಿಸುತ್ತಾಳೆ. ಇಂಥ ಪರಂಪರೆಯಲ್ಲಿ ಬೆಳೆದ ದೇವರ ನಾಡಿನ ಹೆಣ್ಣು ಕಥೆಗಳ ಆಳದಲ್ಲಿ ವಿಷಾದ, ಆಕ್ರೋಷ, ಪ್ರತಿಭಟನೆಗಳಿರುವುದು ಸಹಜ.

ಕಮಲಾ ಅವರು ಆಧುನಿಕ ಮಲೆಯಾಳಂ ಮಹಿಳಾ ಸಾಹಿತ್ಯದಲ್ಲಿ ಕಾಣಿಸಿಕೊಂಡ ಮಹಿಳಾ ಕಥೆಗಳನ್ನು ಲೇಖಕಿಯರ ಕ್ರಾನಲಾಜಿಕಲ್ ಆದ ಕಾಲಮಾನದಲ್ಲಿಯೇ ಪ್ರಕಟಿಸಿದ್ದು, ಈ ಕಥಾ ತಂತ್ರಗಳು, ಮನೋಭಾವ, ಸಮಸ್ಯೆಗಳ ಸ್ವರೂಪಗಳು ಕಾಲದಿಂದ ಕಾಲಕ್ಕೆ ವ್ಯತಸ್ತನವಾದ , ವಿಕಾಸಗೊಂಡ ಮಾದರಿಗಳನ್ನು ದಾಖಲಿಸುತ್ತವೆ. ಇಪ್ಪತ್ತನೇ ಶತಮಾನದ ಆರಂಭದ ಲೇಖಕಿಯಾದ ಲಲಿತಾಂಬಿಕಾ ಅಂತರ್ಜನಂರಿಂದ ಹಿಡಿದು ಇತ್ತೀಚಿನ ಇಂದು ಮೆನನ್ ಅವರ ವರೆಗಿನ ಹದಿನಾಲ್ಕು ಪ್ರಾತಿನಿಧಿಕ ಮಹಿಳಾ ಲೇಖಕಿಯರ ಕಥೆಗಳನ್ನು ಅಚ್ಚುಕಟ್ಟಾಗಿ ಅನುವಾದಿಸಲಾಗಿದೆ. ಕಮಲಾ ಅವರು ಈ ಲೇಖಕಿಯರ ತಲಾ ಮೂರು ಕಥೆಗಳನ್ನು ಅನುವಾದಿಸಿ ಈ ಲೇಖಕಿಯರ ಧೋರಣೆಗಳನ್ನು ಸ್ಥೂಲವಾಗಿಯಾದರೂ ಅರ್ಥೈಸಿಕೊಳ್ಳಲು ಸಹಾಯ ಮಾಡಿದ್ದಾರೆ .

ಫ್ರಧಾನ ಸಂಸ್ಕೃತಿಯಲ್ಲಿ ಉದ್ಯೋಗಸ್ಥ , ಆರ್ಥಿಕವಾಗಿ ಸಬಲೀಕೃತಳಲ್ಲದ, ಲೈಂಗಿಕ ದೌರ್ಜನ್ಯಗಳಲ್ಲಿ ಮುಳುಗಿ ಹಳಹಳಿಸುವ ಹೆಣ್ಣುಗಳಿಗಿಂತ ಇಲ್ಲಿ ಲೈಂಗಿಕ ಸ್ವಾತಂತ್ರ್ಯದತ್ತ ಮುಖಮಾಡಿಕೊಂಡು ಅದನ್ನು ಪಡೆಯುವತ್ತ ಧಾವಿಸುವ ಹೆಣ್ಣುಗಳೇ ಕಾಣಿಸುತ್ತಾರೆ. ಗಂಡಿನ ಲೈಂಗಿಕ ಅಸಾಮರ್ಥ್ಯ, ಸಹಜ ಕಾಮ, ಬಯಕೆಗಳ ಅತೃಪ್ತತೆ, ಅದರ ಮೂಲಕ ವ್ಯಭಿಚಾರಿಯರಾಗುವ ಹೆಣ್ಣುಗಳು, ಅವರನ್ನು ಕಾಡುವ ಸಹಜ ಕಾಮದ ಕನಲುವಿಕೆಗಳು, ವಿವಾಹೇತರ ಸಂಬಂಧಗಳ ಅನಿವಾರ್ಯತೆ – ಮುಂತಾದ ಸಮಸ್ಯೆಗಳ ಬಗೆಗೆ ಮಾಧವೀ ಕುಟ್ಟಿ – ಕಮಲಾ ಸುರಯ್ಯಾ ಅಂತಹ ಲೇಖಕಿಯರು ಕೇಂದ್ರೀಕರಿಸುತ್ತಾರೆ .

ಕೆ ಸರಸ್ವತಿಯಮ್ಮನವರು ‘ವಿರೋಧವೊಂದೇ ಸಾಲದು, ಆಕ್ರಮಣ ಮಾಡಬೇಕು’, ಎಂದರೆ, ಉಳಿದ ಅನೇಕ ಲೇಖಕಿಯರು ತಮ್ಮ ಕಥೆಗಳಲ್ಲಿ ಪತಿವ್ರತೆ, ದೇವರು, ಧರ್ಮ – ಇವುಗಳಿಗೆ ತಮ್ಮದೇ ಆದ ವ್ಯಾಖ್ಯಾನಗಳನ್ನು ಕಂಡುಕೊಳ್ಳುತ್ತಾರೆ. ಅದರೊಂದಿಗೆ ಆಧುನಿಕ ಬದುಕಿನ ಸಂದರ್ಭದಲ್ಲಿ ಹೆಣ್ಣು ಸಾಗಬೇಕಾದ ಹೊಸ ಮಾರ್ಗ, ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ, ಹೊಸ ಪ್ರಯತ್ನಗಳ ಕಡೆಗೆ ನಡೆಯುವ ಸ್ಪಷ್ಟ ಪ್ರಯತ್ನಗಳಿವೆ.

ಈ ಲೇಖಕಿಯರು ತಮ್ಮ ಸಾಹಿತ್ಯಕ್ಕೆ ‘ಮಹಿಳಾ ಸಾಹಿತ್ಯ‘ ಎಂಬ ಹಣೆ ಪಟ್ಟಿ ಕಟ್ಟುವ ಪ್ರತ್ಯೇಕತೆಯನ್ನು ಸುತರಾಂ ಬಯಸುವುದಿಲ್ಲ . ಕಮಲಾದಾಸ್, ಗ್ರೇಸಿ , ಚಂದ್ರಮತಿ , ಸಿತಾರಾ ಅವರು ತಾವು ಮಾನವತಾವಾದದ ಹಿನ್ನೆಲೆಯಲ್ಲಿ ಬರೆಯುತ್ತೇವೆ, ಎನ್ನುತ್ತಾರೆ . ಎಷ್ಟರ ಮಟ್ಟಿಗೆಂದರೆ, ‘ಸ್ತ್ರೀ ಸಾಹಿತ್ಯ’ ಎಂದು ಮುಖ್ಯವಾಹಿನಿಗೆ ಬಿಡದೆ ಪ್ರತ್ಯೇಕಿಸಿದವರು ಪುರಷರು, ಅದನ್ನು ನಾವು ವಿರೋಧಿಸುತ್ತೇವೆ, ಎಂಬುದು ಅವರ ನಿಲುವು. ಅಷ್ಟರ ಮಟ್ಟಿಗಿನ ಹೆಣ್ಣಿನ ಅಸ್ಮಿತೆ, ಅನನ್ಯತೆಗಳು ಇವರ ಕಥೆಗಳಲ್ಲಿ ಪ್ರಕಟಗೊಳ್ಳುತ್ತವೆ .

ಈ ಕೃತಿಯ ಮಹತ್ವದ ಅಂಶವೆಂದರೆ, ರಾಘವೇಂದ್ರ ಪಾಟೀಲರ ಪ್ರಬುದ್ಧ ಮುನ್ನುಡಿ, ಅನುವಾದಕಿ ಕಮಲಾ ಹೆಮ್ಮಿಗೆಯವರ ವಿದ್ವತ್ಪೂರ್ಣವಾದ ಆಧುನಿಕ ಮಲಯಾಳ ಮಹಿಳಾ ಕಥನ ಸಾಹಿತ್ಯ ಚರಿತ್ರೆಯ ಪ್ರವೇಶಿಕೆ, ಹಾಗೂ ಮತ್ತೊಬ್ಬ ಸೃಜನಶೀಲ ಅನುವಾದಕಿ ಶ್ಯಾಮಲಾ ಮಾಧವರ ಬೆನ್ನುಡಿ ಓದುಗರಿಗೆ ತುಂಬ. ಸಹಾಯಕವಾಗಿದೆ. ಸ್ತ್ರೀಯಾತ್ಮಕತೆ, ಸ್ತ್ರೀ ಸಂವೇದನೆಯ ಕಥೆಗಳು ಅಪ್ಪಟ ದೇಸಿ ಅನುಭವಗಳ ಪರಿಧಿಯಲ್ಲೇ ಅರಳಿಕೊಳ್ಳುತ್ತವೆ. ಸಾಕ್ಷರತೆಯ ಪ್ರಮಾಣ ಹೆಚ್ಚಿರುವ ನಾಡಿನಲ್ಲಿ ನಾರಿ ನಡೆದು ಬಂದ ದಾರಿ ಆಡಂಬೊಲವೇನಾಗಿರಲಿಲ್ಲ ಎಂಬುದು ಗಮನೀಯ. ಅವರದೂ ಕಲ್ಲು ಮುಳ್ಳುಗಳ, ಏಳು -ಬೀಳುಗಳ ದಾರಿಯೇ.

ಕಮಲಾ ಹೆಮ್ಮಿಗೆಯವರು ನೆರೆ ನಾಡಿನ, ನೆರೆ ಭಾಷೆಯ ಮಹಿಳಾ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅನುವಾದದ ಗುಣಮಟ್ಟದ ಬಗೆಗೆ ಹೇಳಬೇಕೆಂದರೆ, ನನಗೆ ಮಲೆಯಾಳಂ ಭಾಷೆ ಬಾರದಿದ್ದರೂ ಇದು ಅನ್ಯರದ್ದು ಎಂದು ಅನ್ನಿಸಲಿಲ್ಲ. ಕಾರಣ, ಈ ಕಥೆಗಳ ಅನುಭವ ಸಾಂದ್ರತೆ, ದಟ್ಟತೆ, ಎಲ್ಲ ಭಾಷೆ, ಜಾತಿ, ಜನಾಂಗಗಳ ಹೆಣ್ಣಿನ ಸಂವೇದನೆಗಳೇ ಆಗಿರುವಂತಹವು. ಅಷ್ಟರ ಮಟ್ಟಿಗೆ ಇವು ನಿಜಾರ್ಥದಲ್ಲಿ ‘ಪೆಣ್ಣು ಕಥೆಗಳು’.

‍ಲೇಖಕರು Admin

9 March, 2022

1 Comment

  1. T S SHRAVANA KUMARI

    ಪರಿಚಯ ಪುಸ್ತಕವನ್ನು ಓದುವ ಕುತೂಹಲ ಹುಟ್ಟಿಸಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading