ನಾ ದಿವಾಕರ್
Politics is the last resort of the scoundrel ( ರಾಜಕಾರಣ ಠಕ್ಕರ ಅಂತಿಮ ಆಶ್ರಯ ತಾಣ ) ಎಂದು ದಾರ್ಶನಿಕರೊಬ್ಬರು ಹೇಳಿದ್ದರು. ಇದು ಸಾರ್ವತ್ರಿಕ ಸತ್ಯ ಎನ್ನಲಾಗುವುದಿಲ್ಲ. ಆದರೆ ಜಾಗತಿಕ ಇತಿಹಾಸದಲ್ಲಿ ರಾಜಕೀಯ ಬೆಳವಣಿಗೆಗಳನ್ನು ನೋಡಿದಾಗ ಈ ಮಾತಿನಲ್ಲಿ ಹುರುಳಿಲ್ಲ ಎನ್ನಲಾಗುವುದಿಲ್ಲ. ಸಮಕಾಲೀನ ಭಾರತದ ರಾಜಕಾರಣದ ನೆಲೆಯಲ್ಲಿ ಈ ನಾಣ್ಣುಡಿಯನ್ನು ಕೊಂಚ ಬದಲಿಸಿ ರಾಜಕಾರಣ ಭ್ರಷ್ಟರ ಅಂತಿಮ ಆಶ್ರಯ ತಾಣ ಎಂದು ಹೇಳಬಹುದು. ಇಲ್ಲಿ ರಾಜಕಾರಣಿಗಳು ಮಾತ್ರವೇ ಭ್ರಷ್ಟರಾಗಿಲ್ಲ. ಒಂದು ಸ್ವಾಸ್ಥ್ಯ ಸಮಾಜದಲ್ಲಿ , ಪ್ರಾಮಾಣಿಕವಾದ ಪರಿಸರ ಇರುವ ರಾಜಕೀಯ ಚೌಕಟ್ಟಿನಲ್ಲಿ ಭ್ರಷ್ಟರು ಕಾಣಿಸಿಕೊಂಡರೆ, ಹೊಲಗದ್ದೆಗಳಲ್ಲಿನ ಕಳೆಯಂತೆ ಕಿತ್ತೊಗೆಯಬಹುದು. ಆದರೆ ಭಾರತದ ದುರಂತವೆಂದರೆ ಇಲ್ಲಿ ರಾಜಕೀಯ ಕ್ಷೇತ್ರವೇ ಭ್ರಷ್ಟವಾಗಿದೆ. ಇಲ್ಲಿ ಕಳೆಯ ನಡುವೆ ಅಲ್ಲೊಂದು ಇಲ್ಲೊಂದು ಇರುವ ಆರೋಗ್ಯವಂತ ಪೈರುಗಳನ್ನು ಹೆಕ್ಕಿ ತೆಗೆಯಬೇಕಾಗುತ್ತದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಕೆಲವು ರಾಜಕಾರಣಿಗಳಿಗೆ ಶಿಕ್ಷೆಯಾಗಿದ್ದರೂ ಅವರ ಅಪರಾಧಕ್ಕೆ ತಕ್ಕ ಶಿಕ್ಷೆಯಾಗಿಲ್ಲ. ಸಾರ್ವಜನಿಕರ ನೆನಪು ಅಲ್ಪಕಾಲಿಕ ಎಂಬ ನಾಣ್ಣುಡಿಯೂ ಒಂದಿದೆ. ಇದು ರಾಜಕೀಯದ ಮಟ್ಟಿಗಂತೂ ಅಕ್ಷರಶಃ ಸತ್ಯ. ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತು ಜೈಲುವಾಸ ಅನುಭವಿಸಿ, ಕರ್ನಾಟಕದ ರಾಜಕಾರಣವನ್ನು ಭ್ರಷ್ಟತೆಯ ಕೂಪಕ್ಕೆ ತಳ್ಳಿ ನೈತಿಕ ಅಧಃಪತನದತ್ತ ಕೊಂಡೊಯ್ದಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಗೌರವಯುತ ಸಂಸದರಾಗಿ ಮೆರೆಯುತ್ತಿದ್ದಾರೆ. ಅವರ ಮೇಲಿನ ಆರೋಪಗಳು ಇನ್ನೂ ಇವೆ, ಅವರ ನಿರಪರಾಧಿತ್ವ ಇನ್ನೂ ಸಾಬೀತಾಗಿಲ್ಲ, ಅವರ ಪ್ರಾಮಾಣಿಕತೆಯೂ ಸಾಬೀತಾಗಿಲ್ಲ. ಆದರೆ ಆರೋಪಿ ಮುಕ್ತನಾಗಿದ್ದಾನೆ. ಇದು ನ್ಯಾಯಾಂಗದ ವಿಡಂಬನೆಯೋ, ವ್ಯವಸ್ಥೆಯ ಲೋಪವೋ ಅಥವಾ ವಿಧಿಯ (ನಮ್ಮ ವಿದ್ಯುನ್ಮಾನ ಜೋತಿಷ್ಯ ವಿದ್ವಾಂಸರ ಅಭಿಪ್ರಾಯದಲ್ಲಿ) ಕೈವಾಡವೋ ಇತಿಹಾಸವೇ ನಿರ್ಧರಿಸಬೇಕು.
ಆದರೆ ಒಂದು ಮಾತಂತೂ ಸತ್ಯ. ಸಕಲ ರೋಗಗಳನ್ನೂ ಹೊತ್ತು ತಿರುಗುವ ಒಬ್ಬ ವ್ಯಕ್ತಿ ಎಷ್ಟೇ ಔದಾರ್ಯ ತೋರಿದರೂ ಮತ್ತೊಬ್ಬರಿಗೆ ರಕ್ತದಾನ ಮಾಡಿ ಜೀವ ಉಳಿಸಲು ಸಾಧ್ಯವಿಲ್ಲ. ದುರಂತವೆಂದರೆ ಭಾರತದ ರಾಜಕೀಯ ವ್ಯವಸ್ಥೆ ಇಂತಹ ಒಂದು ರೋಗಿಷ್ಠನಂತಾಗಿದೆ. ಒಂದು ಭ್ರಷ್ಟ ವ್ಯವಸ್ಥೆ ತನ್ನೊಳಗಿನ ಭ್ರಷ್ಟರನ್ನು ರಕ್ಷಿಸುವುದೇ ಹೊರತು ಶಿಕ್ಷಿಸಲಾಗುವುದಿಲ್ಲ. ಆದರೂ ಅಲ್ಲೊಬ್ಬ ಲಲ್ಲೂ ಯಾದವ್ ಇಲ್ಲೊಬ್ಬ ಯಡಿಯೂರಪ್ಪ ಮತ್ತು ಇದೀಗ ಸೆಲ್ವಿ ಜಯಲಲಿತಾ ನಮ್ಮ ನ್ಯಾಯಾಂಗ ವ್ಯವಸ್ಥೆಯ ಕೃಪೆಯಿಂದ ಶಿಕ್ಷೆಗೊಳಗಾಗುತ್ತಾ ವ್ಯವಸ್ಥೆಯಲ್ಲಿನ ಕ್ಯಾನ್ಸರ್ ವೈರಾಣುಗಳನ್ನು ಮರೆಮಾಚುತ್ತಾ ಇರುತ್ತಾರೆ. Justice delayed is Justice denied ಎಂಬ ನಾಣ್ಣುಡಿ ಇದೆ. ಇದು ಸಾರ್ವತ್ರಿಕ ಸತ್ಯ ಅಲ್ಲದೆ ಹೋದರೂ ನ್ಯಾಯ ವಿತರಣೆಯಲ್ಲಿನ ವಿಳಂಬ ಎಷ್ಟೋ ಅಪರಾಧಿಗಳನ್ನು ನಿರಪರಾಧಿಗಳನ್ನಾಗಿ ಮಾಡಿಬಿಡುತ್ತದೆ. ಸಾಕ್ಷ್ಯಾಧಾರಗಳು ನಶಿಸಿಹೋಗುತ್ತವೆ. ಕರಂಚೇಡು, ಕಂಬಾಲಪಲ್ಲಿ, ಭಗಲ್ಪುರ ಘಟನೆಗಳು ಒಂದು ನಿದರ್ಶನವಷ್ಟೆ. ಬಹುಶಃ ಬಾಬ್ರಿ ಮಸೀದಿ ಭವಿಷ್ಯದ ಮತ್ತೊಂದು ಇಂತಹ ಘಟನೆಯಾಗಬಹುದು. ಏನೇ ಆಗಲಿ ಸಾರ್ವಭೌಮ ಪ್ರಜೆಗಳು ಭ್ರಷ್ಟಾಚಾರದ ವಿರುದ್ಧ ತಮ್ಮ ದನಿ ಎತ್ತುತ್ತಿರುವ ಸಂದರ್ಭದಲ್ಲಿ ಇಂತಹ ಒಂದು ತೀಪರ್ು ಹೊರಬಿದ್ದಿರುವುದು ಸ್ವಾಗತಾರ್ಹ. ನ್ಯಾಯಾಂಗದ ಕವಾಟದಲ್ಲಿ ಇನ್ನೆಷ್ಟು ಜಯಲಲಿತಾಗಳು ಇರುವುದೋ ಕಾದು ನೋಟಬೇಕು.
ಯಡಿಯೂರಪ್ಪ, ಲಲ್ಲೂ ಪ್ರಸಾದ್ ಯಾದವ್, ಉಮಾಭಾರತಿ, ರಷೀದ್ ಮಸೂದ್, ಶಿಭು ಸೊರೇನ್ ಇವರ ಸಾಲಿಗೆ ಸೇರಿರುವ ಜಯಲಲಿತಾ ಜೈಲು ಸೇರಿದ ಮುಖ್ಯಮಂತ್ರಿಯಾಗಿ ಪ್ರಸಿದ್ಧಿಯಾಗಿದ್ದಾರೆ. ಜಯಲಲಿತಾ ಸಹ ಇನ್ನು ಹತ್ತು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ದಿಸುವ ಅರ್ಹತೆ ಕಳೆದುಕೊಂಡಿದ್ದಾರೆ. ಆದರೆ ನ್ಯಾಯಾಂಗದ ಹಾದಿಯಲ್ಲಿ ಇನ್ನೂ ಸಾಕಷ್ಟು ಅವಕಾಶಗಳಿವೆ. ತಮಿಳುನಾಡಿನಲ್ಲಿ ಭದ್ರ ನೆಲೆಯೂರಲು ಯತ್ನಿಸುತ್ತಿರುವ ಬಿಜೆಪಿ ಈಗ ಅಣ್ಣಾ ಡಿಎಂಕೆ ಪಕ್ಷದ ಅಸಹಾಯಕತೆಯನ್ನು ಬಳಸಿಕೊಂಡು ತನ್ನ ಧ್ಯೇಯ ಸಾಧಿಸಬಹುದು. ಬಿಜೆಪಿಯ ಈ ಅನಿವಾರ್ಯತೆಯನ್ನು ತನ್ನ ಲಾಭಕ್ಕೆ ಬಳಸಿಕೊಂಡು ಸೆಲ್ವಿ ಜಯಲಲಿತಾ ತಮ್ಮ ಮುಂದಿನ ಹಾದಿಯಲ್ಲಿನ ಸಂಭಾವ್ಯ ಮುಳ್ಳುಗಳನ್ನು ಕಿತ್ತೊಗೆಯಲು ತಂತ್ರ ಹೂಡಲೂಬಹುದು. ಈ ಎರಡೂ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ. ಅಂದರೆ ಸಾರ್ವಜನಿಕ ಉತ್ತರದಾಯಿತ್ವ ಎಲ್ಲಿದೆ ? ಇದು ನ್ಯಾಯಾಂಗದ ಮುಂದಿರಬೇಕಾದ ಪ್ರಶ್ನೆ. ಸಂವಿಧಾನದ ಮುಂದಿರಬೇಕಾದ ಜಿಜ್ಞಾಸೆ.

ಭ್ರಷ್ಟಾಚಾರವನ್ನು ರಾಜಕೀಯ ನೆಲೆಯಲ್ಲಿ ಮಾತ್ರವೇ ವಿಶ್ಲೇಷಿಸಿದಾಗ ಇಂತಹ ಪ್ರಕರಣಗಳು ರೋಚಕವಾಗಿ ಕಾಣುತ್ತವೆ. ಅದರೆ ಈ ದೇಶದ ಸಾಮಾಜಿಕ-ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ವಿಷವೃಕ್ಷದ ಬೇರುಗಳು ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಿಸಿವೆ. ಇಂದು ಭ್ರಷ್ಟಾಚಾರ ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ವಿಸ್ತರಿಸಿದೆ. ರಾಜಕಾರಣಿಗಳ ಭ್ರಷ್ಟತೆ ಬಹುತೇಕ ಸ್ವೀಕೃತ ಸತ್ಯವಾಗಿದೆ. ಅಧಿಕಾರಶಾಹಿಯ ಭ್ರಷ್ಟತೆಗೆ ರಾಜಕೀಯ ಭ್ರಷ್ಟತೆಯ ಚಾಮರ ಆಸರೆಯಾಗುತ್ತದೆ. ಆದರೆ ಈ ಎರಡೂ ಕ್ಷೇತ್ರಗಳನ್ನು ಹೊರತುಪಡಿಸಿ ನೋಡಿದಾಗ ದೇಶದಲ್ಲಿ ತಮ್ಮ ವೈಭವಯುತ ಜೀವನವನ್ನು ಜನಸಾಮಾನ್ಯರ ಶ್ರಮದ ಬಳುವಳಿಯಾಗಿ ಪಡೆದು ಅನುಭೋಗಿಸುತ್ತಿರುವ ಸಾವಿರಾರು ಧನಗಾಹಿಗಳು ಕಣ್ಣೆದುರು ಗೋಚರಿಸುತ್ತಾರೆ. ತಾತ್ವಿಕ ನೆಲೆಯಲ್ಲಿ ಯೋಚಿಸುವಾಗ ಭ್ರಷ್ಟಾಚಾರ ಕೇವಲ ಒಂದು ರಾಜಕೀಯ ವಿದ್ಯಮಾನವಾಗಿ ಕಾಣುವುದಿಲ್ಲ. ಒಂದು ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ, ಸಮಾನತೆ ಮತ್ತು ಭ್ರಾತೃತ್ವವನ್ನು ಸಾಂವಿಧಾನಿಕವಾಗಿ ಪ್ರತಿಪಾದಿಸುವ ರಾಷ್ಟ್ರದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸಂವಿಧಾನ ಮತ್ತು ಸಾಂವಿಧಾನಿಕ ತತ್ವಗಳಿಗೆ ಬದ್ಧರಾಗಿರುವುದು ಅಗತ್ಯ. ವಿಪಯರ್ಾಸವೆಂದರೆ ಸಮಾನತೆಯನ್ನು ಸಾರುವ ಸಂವಿಧಾನ ಸಮಾನತೆಯನ್ನು ಸಾಧಿಸಲಾಗಿಲ್ಲ. ಕಾರಣ ಇಲ್ಲಿ ಸಮಾನತೆ ಕೇವಲ ಘೋಷಣಾ ವಾಕ್ಯವಾಗಿ ಮಾತ್ರವೇ ಉಳಿದಿದೆ.
ತಾವು ಅನುಸರಿಸುವ ವೃತ್ತಿ ಅಥವಾ ಉದ್ಯಮ ಅಥವಾ ಕಸುಬು ನ್ಯಾಯಯುತವಾಗಿ ನೀಡುವ ಆದಾಯಕ್ಕಿಂತಲೂ ಹೆಚ್ಚಿನ ಲಾಭ ಗಳಿಸಿ ಜನಸಾಮಾನ್ಯರ ನಿರೀಕ್ಷೆಗಿಂತಲೂ ಹೆಚ್ಚಿನ ಆಸ್ತಿ ಗಳಿಸಿ ಐಷಾರಾಮಿ ಜೀವನ ನಡೆಸುವ ಪ್ರತಿಯೊಬ್ಬ ವ್ಯಕ್ತಿಯೂ ತಾತ್ವಿಕವಾಗಿ ಭ್ರಷ್ಟನಾಗಿಯೇ ಕಾಣುತ್ತಾನೆ. ಮನುಕುಲ ಜೀವಂತವಾಗಿರುವುದೇ ಪರಿಸರದಿಂದ, ನೈಸಗರ್ಿಕ ಸಂಪನ್ಮೂಲಗಳಿಂದ ಮತ್ತು ನಿಸರ್ಗದೊಡಲಿನ ಸಂಪತ್ತಿನಿಂದ. ಈ ಸಂಪನ್ಮೂಲಗಳನ್ನೇ ವಿನಾಶದತ್ತ ಕೊಂಡೊಯ್ದು, ಪರಿಸರವನ್ನು ವಿನಾಶದಂಚಿಗೆ ಕೊಂಡೊಯ್ದು ತಮ್ಮ ಔದ್ಯಮಿಕ ಹಿತಾಸಕ್ತಿಗಾಗಿ, ತಮ್ಮ ವೈಭವಯುತ ಜೀವನಕ್ಕಾಗಿ ಭವಿಷ್ಯದ ಪೀಳಿಗೆಗೆ ಬರಿದಾದ ನಿಸರ್ಗದೊಡಲನ್ನು ಉಳಿಸಿ ತಮ್ಮ ಸ್ವ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಆಧುನಿಕ ಉದ್ಯಮಿಗಳು ಭ್ರಷ್ಟರಲ್ಲವೇ ?
ಜನತೆಯ ಸ್ವಾಸ್ಥ್ಯವನ್ನು ರಕ್ಷಿಸುವ ನೆಪದಲ್ಲಿ ರೋಗಿಗಳ ಅನಿವಾರ್ಯತೆ, ಅಸಹಾಯಕತೆಯನ್ನು ಉಪಯೋಗಿಸಿಕೊಂಡು ಅಗತ್ಯಕ್ಕಿಂತಲೂ ಹೆಚ್ಚಿನ ಹಣ ವಸೂಲಿ ಮಾಡುವ ವೈದ್ಯರು, ರೋಗಿಗಳ ಶುಶ್ರೂಷೆಗಿಂತಲೂ ತಮಗೆ ಬರುವ ಆದಾಯ ಮತ್ತು ಲಾಭವನ್ನೇ ಪ್ರಧಾನವಾಗಿ ಪರಿಗಣಿಸುವ ವೈದ್ಯಕೀಯ ಉದ್ಯಮಿಗಳು, ಕಾನೂನಿನ ಚೌಕಟ್ಟಿಗೆ ಸಿಲುಕಿ ನ್ಯಾಯ ದೇವತೆಯ ಬಳಿ ನ್ಯಾಯ ಕೇಳುವ ಅಸಹಾಯಕ, ಅಮಾಯಕ ಜನರ ಅನಿವಾರ್ಯತೆಯನ್ನು ಬಳಸಿಕೊಂಡು ತಮ್ಮ ಸಂಪತ್ತು ವೃದ್ಧಿಸಿಕೊಳ್ಳುವ ವಕೀಲರು, ಜನತೆಗೆ ಶಿಕ್ಷಣ ನೀಡುವ ಸೋಗು ಹಾಕಿಕೊಂಡು, ಅತ್ಯುತ್ತಮ ಶಿಕ್ಷಣ ಒದಗಿಸುವ ನೆಪದಲ್ಲಿ ಮಧ್ಯಮ ವರ್ಗಗಳ ಅಲ್ಪಾದಾಯಕ್ಕೇ ಲಗ್ಗೆ ಹಾಕುವ ಶೈಕ್ಷಣಿಕ ಸಂಸ್ಥೆಗಳು, ಜನಸಾಮಾನ್ಯರ ದೈವತ್ವದಲ್ಲಿನ ನಂಬಿಕೆ ಮತ್ತು ವಿಶ್ವಾಸವನ್ನು ಭಕ್ತಿ ಭಾವನೆಗಳ ಹೆಸರಿನಲ್ಲಿ, ಧಾಮರ್ಿಕ ನೆಲೆಯಲ್ಲಿ ಶೋಷಣೆ ಮಾಡುತ್ತಾ ಕೋಟ್ಯಂತರ ರೂಗಳ ಆಸ್ತಿ ಸಂಪಾದಿಸುತ್ತಿರುವ ದೇವಾಲಯಗಳು, ಆಧ್ಯಾತ್ಮವನ್ನು, ಜನರ ನಿತ್ಯ ಜೀವನದ ನಂಬಿಕೆಗಳನ್ನು ತಮ್ಮ ಬತ್ತಳಿಕೆಯ ಅಸ್ತ್ರವನ್ನಾಗಿ ಬಳಸಿಕೊಂಡು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಜನರನ್ನು ಮೌಢ್ಯದ ಕೂಪಕ್ಕೆ ತಳ್ಳಿ ತಮ್ಮ ವೈಭೋಗವನ್ನು ಹೆಚ್ಚಿಸಿಕೊಳ್ಳುವ ಗುರೂಜಿಗಳು-ಸ್ವಾಮೀಜಿಗಳು, ಜ್ಯೋತಿಷಿಗಳು, ವಾಸ್ತು ಪಂಡಿತರು, ತಮ್ಮ ಯೋಗ್ಯತೆಗೂ ಮೀರಿ ಜನರಿಗೆ ಮನರಂಜನೆ ನೀಡುವ ಮೂಲಕ ಕೋಟ್ಯಂತರ ರೂಗಳ ಆದಾಯ ಗಳಿಸಿ, ಕವಡೆ ಕಾಸಿನ ತೆರಿಗೆಯನ್ನೂ ಪಾವತಿಸದ ಸಿನಿಮಾ ನಟರು, ಇವರೆಲ್ಲರೂ ಭ್ರಷ್ಟರಲ್ಲವೇ ?
ಇವರನ್ನು ನಮ್ಮ ಸಮಾಜ ಭ್ರಷ್ಟರೆಂದು ಪರಿಗಣಿಸುವುದಿಲ್ಲವೆಂದರೆ ಅದಕ್ಕೆ ಕಾರಣ ಇವು ಸಾರ್ವಜನಿಕವಾಗಿ ಸ್ವೀಕೃತವಾದ ವಿದ್ಯಮಾನಗಳಾಗಿವೆ. ಕೊಳ್ಳೆ ಹೊಡೆದ ಆಸ್ತಿಯನ್ನು ಹಂಚುವವನನ್ನು ಔದಾರ್ಯದ ಪರಾಕಾಷ್ಠೆ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ವಿವಿಧ ರೀತಿಯಲ್ಲಿ ಸಮಾಜದ ಆಂತರ್ಯವನ್ನು ಬಗೆದು ಸಂಪನ್ಮೂಲಗಳನ್ನು ದೋಚುವ ಖೂಳರು ಭ್ರಷ್ಟತೆಯ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ. ಜನಸಾಮಾನ್ಯರ ಅಜ್ಞಾನ, ಅಸಹಾಯಕತೆ ಮತ್ತು ಅನಿವಾರ್ಯತೆಗಳನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವುದರಲ್ಲಿ ಸಾಮಾಜಿಕ ಉತ್ತರದಾಯಿತ್ವ ಹೊಂದಿರಬೇಕಾದ ಮಾಧ್ಯಮಗಳೂ ಹಿಂದೆ ಬಿದ್ದಿಲ್ಲ. ಜನರ ನಂಬಿಕೆಗಳನ್ನೇ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡಿರುವ ವಿದ್ಯುನ್ಮಾನ ಮಾಧ್ಯಮಗಳು ಜಯಲಲಿತಾ ಕುರಿತು , ಭ್ರಷ್ಟಾಚಾರವನ್ನು ಕುರಿತು ಗಂಟೆಗಟ್ಟಲೆ ಚರ್ಚೆಗಳನ್ನು ನಡೆಸುವುದು ವ್ಯರ್ಥಾಲಾಪ ಮಾತ್ರವಲ್ಲ ಆತ್ಮವಂಚನೆಯೂ ಹೌದು. ಭ್ರಷ್ಟಾಚಾರ ಎನ್ನುವುದು ಪ್ರಾಮಾಣಿಕ ಮನುಕುಲದ ಮೇಲೆ ಧನಗಾಹಿಗಳು ಎಸಗುವ ಅತ್ಯಾಚಾರ. ಈ ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕಾದರೆ ವಿಶ್ವದ ಜನಸಮುದಾಯದಲ್ಲಿ ಸಮಾನತೆಯ ಪ್ರಜ್ಞೆ ಗಟ್ಟಿಯಾಗಿ ಬೇರೂರಬೇಕು. ಇದು ಸಾಧ್ಯವೇ ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ ಹೊರಟಾಗ ಜಯಲಲಿತಾ , ಯಡಿಯೂರಪ್ಪ, ಲಲ್ಲೂ ಯಾದವ್ ಹಿಮಗಡ್ಡೆಯ ತುದಿಯಾಗಿ ಮಾತ್ರ ಕಾಣುತ್ತಾರೆ. ಹಿಮಾಲಯದಷ್ಟೆತ್ತರ ಬೆಳೆದಿರುವ ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕುವವರಾರು ?






0 Comments