“ಸಂಗೀತದ ಸಾಂಗತ್ಯವಿಲ್ಲದಿದ್ದರೆ ಬದುಕು ಅಸಂಗತವಾಗುತಿತ್ತೇನೊ? ‘ಭ್ರಮೆಯ ಪರಿಕಲ್ಪನೆ ಮೂಡಿದ್ದು ವಾಸ್ತವದ ಒತ್ತಡದ ನಡುವೆ. ಅದರ ಅಯಸ್ಕಾಂತೀಯ ಶಕ್ತಿಯನ್ನು ಅರ್ಥ ಮಾಡಿಕೊಳ್ಳವುದೇ ನಮ್ಮ ಗುರಿ. ನಮ್ಮದೇ ಸಂಗೀತದಿಂದ ನಮ್ಮದೇ ವಾಸ್ತವವನ್ನು ಕಂಡುಕೊಳ್ಳವುದೇ ನಮ್ಮ ಉದ್ದೇಶ. ಬದುಕು ಮತ್ತು ಕಲೆಗಳ ನಡುವಿನ ಅವಿನಾವ ಸಂಬಂಧವನ್ನು ಹೇಳುತ್ತಲೇ ವಾಸ್ತವಿಕ ಮತ್ತು ಭ್ರಮಾತ್ಮಕ ಜಗತ್ತನ್ನು ಒಂದುಗೊಳಿಸುತ್ತಲೇ ಈ ‘ಭ್ರಮೆ’ ವಾಸ್ತವವನ್ನು ಮಾತ್ರ ಒಪ್ಪಿಕೊಳ್ಳುವ ಆಯ್ಕೆಗಳನ್ನು ಪ್ರಶ್ನಿಸುತ್ತದೆ. ನಮಗೆ ‘ಭ್ರಮೆ’ಯೇ ವಾಸ್ತವ. ನಿಮ್ಮಂತೆ ಸಂಗೀತದಂತೆ ಅದು ನಿರಂತರ ಸತ್ಯ. ಈ ‘ಭ್ರಮೆ’ ಇಲ್ಲದಿದ್ದರೆ ನಾವು ಬದುಕಲಾರೆವ. ನೀವು?” ಭ್ರಮೆ ತಂಡ ಕೇಳುತ್ತದೆ.
ಅಪರಿಚಿತ ಲೋಕವನ್ನು ಪರಿಚಿತಗೊಳಿಸುವ, ಪರಿಚಿತ ಲೋಕಕ್ಕೆ ಅಪರಿಚಿತದ ಸ್ಪರ್ಶ ಕೊಡುವ ಈ ಭ್ರಮೆ ಅನಾವರಣಗೊಳ್ಳುತ್ತಿದೆ.
ಒಂದೇ ವೇದಿಕೆಯಲ್ಲಿ ವೈವಿಧ್ಯಮಯ ಸಂಗೀತ ಪ್ರಕಾರಗಳ ರಸಾನುಭವವನ್ನು ಪಡೆಯುವುದು ವಿರಳವೇ! ರಾಗದಂತೆ ಇಲ್ಲಿ ಭಾವವೂ ಪ್ರಧಾನ. ವಿವಿಧ ಭಾವಾನುಭಾವಗಳಲ್ಲಿ ಸಂಚರಿಸುತ್ತಾ ಏಕತಾನತೆಯನ್ನು ಮೀರಿ ವಿಧ ವಿಧ ಲಯಗಳನ್ನು ಪರಿಚಯಿಸುವುದರ ಮೂಲಕ ಭ್ರಮಾತ್ಮಕ ವಾತಾವರಣವನ್ನು ವಾಸ್ತವದಲ್ಲಿ ಮೂಡಿಸುವುದು.
ಪ್ರತಿ ಶೈಲಿಗೂ ಅದರದೇ ರಸ ರುಚಿ ವೈಶಿಷ್ಟ್ಯಗಳಿವೆ. ಮೂಲದ ಸೊಗಡನ್ನು ಉಳಿಸಿಕೊಳ್ಳುತ್ತಲೇ ನಾವಿನ್ಯವನ್ನು ತುಂಬುವುದು ಪ್ರತಿ ಪ್ರಯೋಗದ ಹಿಂದಿರುವ ಹಂಬಲ.
ಭ್ರಮೆಯಿಂದ ಏನನ್ನು ನಿರೀಕ್ಷಿಸಬಹುದು?

ಒಂದೇ ವೇದಿಕೆಯಲ್ಲಿ ಒಂದೇ ಸೂರಿನಡಿಯಲ್ಲಿ ಭಾರತದ ಹಲವು ಪ್ರಕಾರಗಳ ಸಂಗೀತವನ್ನು ಆಲಿಸುವ ಸುಯೋಗ ಸದ್ಯದಲ್ಲಿ ಯಾರೂ ಒದಗಿಸಿಲ್ಲ. ಅಂಥದೊಂದು ಪ್ರಯತ್ನ ಭ್ರಮೆ ತಂಡದಿಂದ ನಡೆಯುತ್ತಿದೆ. ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ, ಭಜನ್, ದಾಸರಪದಗಳು, ಭಾವಗೀತೆ, ಸಿನಿಮಾಗೀತೆ, ಘಜಲ್, ಜಾನಪದ, ಕವಾಲಿ, ಫ್ಯೂಶನ್ ಹಾಗೂ ಭ್ರಮೆ ತಂಡವೇ ಸಂಯೋಜಿಸಿದ ಗೀತೆಗಳ ಭರಪೂರ ಸಂಗೀತದೌತಣ ವಿಭಿನ್ನವೆನಿಸುವುದು ಖಂಡಿತ. ಆದರೆ ಭ್ರಮೆ ಯಾವುದೇ ಕಾರಣಕ್ಕೂ ಮೂಲಗೀತೆಗಳ ಮತ್ತು ಮೂಲಸಂಯೋಜನೆಗಳ ಹಾಗೂ ಸಾಹಿತ್ಯಗಳನ್ನು ವಿಕೃತಗೊಳಿಸದೇ ಕೇಳುಗರಿಗೆ ಅದನ್ನು ಇನ್ನಷ್ಟು ಆಪ್ತವಾಗಿಸುವ ಆಶಯಹೊಂದಿದೆ. ಭ್ರಮೆಯ ಮೂಲಮಂತ್ರ ತಾಜಾತನ ಮತ್ತು ಸುಶ್ರಾವ್ಯತೆ. ಮೆಲೋಡಿಗಳ ಮೂಲಕ ಕೇಳುಗರನ್ನು ಮಾಯಾಲೋಕದಲ್ಲಿ ತೇಲುವಂತೆ ಮಾಡುವುದು ಭ್ರಮೆ ಕಾಣುತ್ತಿರುವ ಕನಸು. ಭ್ರಮೆ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ತುಳುಗೀತೆಗಳನ್ನು ಶುದ್ಧವಾಗಿ ಹಾಗೂ ಸುಲಲಿತವಾಗಿ ಹಾಡಬಲ್ಲ ಸಾಮರ್ಥ್ಯ ಭ್ರಮೆ ತಂಡಕ್ಕಿದ್ದರೂ ಭ್ರಮೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಕನ್ನಡ ಮತ್ತು ಹಿಂದಿ ಗೀತೆಗಳಿಗೆ ಮಾತ್ರ.
’ಭ್ರಮೆ’ ತಂಡದ ಗಾಯಕ – ಗಾಯಕಿಯರು ವಿಕಾಸ್ ವಸಿಷ್ಟ, ಸ್ಪರ್ಶ ಆರ್ ಕೆ ಅಲಕಾ ಸುಬ್ರಹ್ಮಣ್ಯ, ವಿಶ್ವಾಸ್ ವಸಿಷ್ಟ, ಸಂದೀಪ್ ರವಿಕುಮಾರ್ ಮುಂತಾದವರು.






Good luck.