ಭೂಮಿಯೇ ಹಾಸಿಗೆ, ಆಗಸವೇ ಹೊದಿಕೆ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಕೆಲವೊಮ್ಮೆ ನಾವು ಅಂದುಕೊಳ್ಳುವುದು ಒಂದು, ಆಗುವುದು ಇನ್ನೊಂದು! ನಾವು ಯಾವುದನ್ನೇ ಆದರೂ ಮುಕ್ತ ಮನಸ್ಸಿನಿಂದ ಸ್ವೀಕರಿಸಲು ತಯಾರಿದ್ದಾಗ ಕೆಲವೊಮ್ಮೆ ಹೀಗೆ ಅಚ್ಚರಿಗಳು ಸಂಭವಿಸಿಬಿಡುತ್ತದೆ.

ಅದೊಂದು ಪುಟಾಣಿ ಗೆಸ್ಟ್‌ ಹೌಸ್.‌ ಮುನ್ನಾ ದಿನವಷ್ಟೇ ಜೈಸಲ್ಮೇರಿನಲ್ಲಿ ಕೂತು ಸಮ್‌ ಡ್ಯೂನಿಗೋ, ಕುಡಿ ಡ್ಯೂನಿಗೋ ಎಂದು ಡೋಲಾಯಮಾನವಾಗಿದ್ದ ಮನಸ್ಸನ್ನು ಒಂದೆಡೆ ವಾಲಿಸಲು ಸರ್ಕಸ್ಸು ಮಾಡಿ ಕೊನೆಗೂ, ಸಮ್‌ನ ಕಮರ್ಷಿಯಲ್‌ ಪ್ರವಾಸಿಗರಿಂದ ತಪ್ಪಿಸಿಕೊಳ್ಳಲು ಕುಡಿಯೇ ಬೆಸ್ಟು ಎಂದು ಅಂದುಕೊಂಡು ಕುಡಿಗೆ ಜೈ ಅಂದಿದ್ದೆವು. ಕುಡಿ ಮುಗಿಸಿಕೊಂಡು ಸಮ್‌ನಲ್ಲೊಂದು ಮೈನವಿರೇಳಿಸುವ ಡೆಸರ್ಟ್‌ ಜೀಪ್‌ ಸಫಾರಿ ಮಾಡಬೇಕೆಂದು ಮಗನ ಬೇಡಿಕೆ.

ಹಾಗಾಗಿ ಮರುದಿನ ಬೆಳಗ್ಗೆ ಜೈಸಲ್ಮೇರಿನಿಂದ ಹೊರಟು ಕುಡಿಯ ದಾರಿ ಹಿಡಿದಿದ್ದೆವು. ಹಾದಿ ಮಧ್ಯದಲ್ಲಿ ಪಾಳುಬಿದ್ದ ದೆವ್ವದೂರಾಗಿ ಬದಲಾಗಿರುವ ಕುಲ್ಧಾರಾ ನೋಡಿಕೊಂಡು, ಅಕ್ಟೋಬರಿನಲ್ಲೂ ನಿಗಿನಿಗಿ ಬಿಸಿಲಿನ ತಂಪಿಗೆ ಮುಖವೊಡ್ಡಿ ಗಾಳಿ ಕುಡಿಯುತ್ತಾ, ನಾಲ್ಕೂ ದಿಕ್ಕಿನಲ್ಲೂ ಒಂದು ಸುತ್ತು ತಿರುಗಿ ನೋಡಿದರೂ  ಯಾರೆಂದರೆ ಯಾರೂ ಕಾಣಿಸದಂತಹ ಖಾಲಿ ಊರಿನಲ್ಲಿ, ಏರು ತಗ್ಗಿಲ್ಲದ ಹದವಾದ ಸಪೂರ ದಾರಿಯಲ್ಲಿ ಕಾರು ಓಡಿಸುತ್ತಾ ಒಂದು ವಿಚಿತ್ರ ಫೀಲಿನಲ್ಲಿ ಮಧ್ಯಾಹ್ನದ ಸೂರ್ಯ ನೆತ್ತಿ ಮೇಲೆ ಬಂದಾಗ ಜಿತು ಎಂದು ಪರಿಚಯಿಸಿಕೊಂಡ ಅವರ ಗೆಸ್ಟ್‌ ಹೌಸ್‌ ತಲುಪಿದ್ದೆವು.

ವಾಸ್ತವದಲ್ಲಿ ಅದು ಜಿತು ಅವರ ಮನೆ ಅರ್ಥಾತ್‌ ಧಾಣಿ. ಜೈಸಲ್ಮೇರಿಗಿರುವ ಪ್ರವಾಸಿಗರನ್ನು ಸೆಳೆಯುವ ತಾಕತ್ತಿಗೆ, ತಾನೂ ಒಂದು ಕೈ ನೋಡಲೆಂಬಂತೆ ತನ್ನ ಮನೆಯನ್ನು ಹೋಂಸ್ಟೇ ಮಾದರಿಯಲ್ಲಿ ಬದಲಾಯಿಸಿದ್ದ. ಹೋದ ತಕ್ಷಣ ಬಿಸಿಬಿಸಿ ರೋಟಿ, ದಾಲ್‌, ಸಬ್ಜಿ, ಅನ್ನ, ಪಲ್ಯ ಎಲ್ಲ ಬಡಿಸಿ ಸತ್ಕರಿಸಿದ. ಆದರೆ, ನಮಗೆಂದು ಕೊಟ್ಟ ರೂಮು ನೋಡಿ ಮಾತ್ರ ನಮಗೆ ಇದರಲ್ಲಿ ಇವತ್ತು ನಿದ್ದೆ ಮಾಡೋದು ಕಷ್ಟವೇ ಅನಿಸಿಬಿಟ್ಟಿತ್ತು.

ಸೆಗಣಿ ಸಾರಿಸಿದ ನೆಲ, ನೇಯ್ದ ರಾಜಸ್ಥಾನಿ ಶೈಲಿಯ ಚಾರ್‌ಪಾಯಿಗಳ ಬಗ್ಗೆ ನಮ್ಮದೇನೂ ತಕರಾರಿರಲಿಲ್ಲ. ಅದೆಲ್ಲ ಅಭ್ಯಾಸವೂ ಆಗಿತ್ತು. ಆದರೆ, ಸಣ್ಣ ಕಿಂಡಿಯಂತಹ ಕಿಟಕಿ ಬಿಟ್ಟರೆ ಅಷ್ಟಾಗಿ ಗಾಳಿ ಬೆಳಕಿಲ್ಲದ ಕೋಣೆ, ಜೊತೆಗೆ ಸದಾ ಆಕ್ರಮಣಕ್ಕೆ ರೆಡಿಯಾಗಿ ಕುಳಿತಿದ್ದಂತಹ ಬೃಹತ್‌ ಜೇಡಗಳಿಂದಾಗಿ ಆ ರಾತ್ರಿ ಭಯಾನಕವೇ ಆಗಿಬಿಡುವುದರಲ್ಲಿ ಸಂಶಯವಿಲ್ಲ ಎಂದು ಅನಿಸಿಬಿಟ್ಟಿತ್ತು.

ಜೈಸಲ್ಮೇರಿನಿಂದ ಇಷ್ಟು ದೂರ, ಜನರೇ ಇಲ್ಲದ ಮರುಭೂಮಿಯ ದಾರಿಯಲ್ಲಿ ಬಂದಾಗಿದೆ, ಇವೆಲ್ಲ ಸಣ್ಣ ಪುಟ್ಟ ಅಡಚಣೆಗಳನ್ನು ತೊಂದರೆ ಎಂದು ತಿಳಿದುಕೊಂಡರೆ ನಿಜಕ್ಕೂ ಮನಸ್ಸಿಗೆ ಕಿರಿಕಿರಿಯೇ. ಆದರೆ, ಆ ತೊಂದರೆಯೇ ಬೇರೊಂದು ದಾರಿ ತೋರಿಸಿಕೊಟ್ಟರೆ? ಇಲ್ಲೂ ಆಗಿದ್ದು ಅದೇ. ಈ ಧಾಣಿ ಎಂಬಂಥ ಮನೆಗಳ ರಚನೆಯೇ ಬಲು ಆಪ್ತ.

ಪ್ರತ್ಯೇಕ ಪ್ರತ್ಯೇಕವಾಗಿರುವ ಕೋಣೆಗಳು, ಕೂಡು ಕುಟುಂಬಗಳು ಕೂಡಿ ನೆಲೆಸಬಹುದಾದಂತಹ ಮನೆಗಳು. ವೃತ್ತಾಕಾರದಲ್ಲೋ, ಚೌಕಾಕಾರದಲ್ಲೋ ಗುಡಿಸಲುಗಳ ಗುಂಪು. ನಡುವೆ ಒಂದೇ ಅಂಗಳ. ಅಂಗಳದಲ್ಲಿ ಸಾಮಾನ್ಯವಾಗಿ ಹಾಸಿಕೊಂಡಿರುವ ಚಾರ್ಪಾಯಿ. ಆ ನೇಯ್ಗೆ ಮಂಚದಲ್ಲಿ ಗಾಳಿ ಕುಡಿದುಕೊಂಡು ಸುಖಾಸುಮ್ಮನೆ ಬಿದ್ದುಕೊಂಡಿರುವುದೂ ಸುಖವೇ. ಹಾಗೆ ಬಿದ್ದುಕೊಂಡಿರಲು, ಜಿತು ತನ್ನ ಡೆಸರ್ಟ್‌ ಸಫಾರಿಯ ಕಥೆ ಮುಂದಿಟ್ಟ.

ಒಬ್ಬರಿಗೊಂದು ಒಂಟೆ, ಇಲ್ಲಿಂದ ಒಂದೈದಾರು ಕಿಮೀ ಈ ಥಾರ್‌ ಮರುಳುಗಾಡಲ್ಲಿ ಹೋಗಿ ರಾತ್ರಿ ಅಲ್ಲೇ ʻಭೂಮಿಯೆ ಹಾಸಿಗೆ, ಆಗಸವೇ ಹೊದಿಕೆʼ ಎಂಬಂತೆ ಬಿದ್ದುಕೊಂಡು ಬೆಳಗ್ಗೆದ್ದು ಬರುವುದು ಬಹಳ ಚೆನ್ನಾಗಿರುತ್ತದೆ. ನೀವು ನಾಳೆ ಚೆಕೌಟ್‌ ಮಾಡಿಕೊಂಡು ಹೋಗುವವ ಯೋಚನೆ ಇರೋರು. ಆದರೆ, ಸಮಯ ಇದ್ದರೆ ಇದನ್ನು ಮಾಡಬಹುದಿತ್ತು ನೋಡಿ ಎಂದ. ಅರೆ, ಇದೊಂದು ಒಳ್ಳೆ ಪ್ಲಾನ್ ಅಲ್ವಾ? ಈ ರೂಮಲ್ಲಿ ಇವತ್ತು ಬಿದ್ದುಕೊಂಡಿರೋದರ ಬದಲು ಅಲ್ಲೇ ಹೋಗ್ಬೋದಲ್ವಾ ಅನಿಸಿತು. ಜಿತುಗೆ ಆಶ್ಚರ್ಯ. ಈಗಲಾ? ನೀವಿನ್ನೂ ಬಂದಿದ್ದಷ್ಟೆ. ಸುಧಾರಿಸಿಕೊಂಡಿಲ್ಲ. ಇವತ್ತು ರೂಮಲ್ಲಿ ರೆಸ್ಟ್‌ ತೆಗೊಂಡು ನಾಳೆ ರಾತ್ರಿಗೆ ಈ ಪ್ರೋಗ್ರಾಂ ಇಡಬಹುದಲ್ವಾ ಎಂದು ನಮಗೇ ಪ್ರಶ್ನೆಯೆಸೆದ. ಇಲ್ಲ ಇಲ್ಲ. ನಾಳೆ ಮಾತ್ರ ಮಧ್ಯಾಹ್ನದ ಹೊತ್ತಿಗೆ ಹೊರಡಲೇಬೇಕು. ಈಗಲೇ ಹೋಗೋದಾದ್ರೆ ಹೋಗೋಣ. ಇನ್ನೂ ಹೊತ್ತು ಮೀರಿಲ್ಲ ತಾನೇ? ಎಂದೆವು.

ಆಗಿನ್ನೂ ಸಂಜೆ ನಾಲ್ಕರ ಸಮಯ. ನಾವು ಒಡನೆಯೇ ಹೊರಡಲು ತಯಾರಾಗಿ ನಿಂತಿದ್ದು ಅವನಿಗೆ ಆಶ್ಚರ್ಯ. ಕೂಡಲೇ ತನ್ನದೇ ಇನ್ನೊಂದು ಸಂಬಂಧಿಕ ಕುಟುಂಬಕ್ಕೆ ಫೋನಾಯಿಸಿದ. ಒಂಟೆ ಇದೆಯಾ ಕೇಳಿದ. ಅವರು ಇದೆ ಎಂದರು. ಈತ ಆಕಾಶ ನೋಡಿದ. ಅಕ್ಟೋಬರ್‌ ತಿಂಗಳಾದರೂ, ಸೂಚನೆ ಕೊಡದೆರುವ ದಿಢೀರ್‌ ಮಳೆಗಳಿರುತ್ತವೆ. ಅಂಥದ್ದೇನಾದರೂ ಸಾಧ್ಯತೆ ಇದೆಯಾ ಎಂಬುದು ಅವನ ದೂರಾಲೋಚನೆ.

ಆಕಾಶದ ಒಂದು ಬದಿ ತಿಳಿನೀಲಿಯಿದ್ದರೂ, ಇನ್ನೊಂದು ಬದಿ ಕಡಲಿನಂತೆ ಕಡುಕಪ್ಪು ಬಣ್ಣಕ್ಕೆ ತಿರುಗುವ ಲಕ್ಷಣ ಕಾಣುತ್ತಿತ್ತು. ಒಂಥರಾ ಅರ್ದಂಬರ್ಧ ಮನಸ್ಸಿನಿಂದ, ನೀವು ಹೂಂ ಅಂದರೆ ಹೊರಡುವ, ಒಂಟೆ ರೆಡಿ ಇದೆ, ಇನ್ನೇನು ಅರ್ಧ ಗಂಟೇಲಿ ಇಲ್ಲಿಗೆ ಬರಬಹುದು. ಆದರೆ ಮಳೆಯದ್ದೂ ಸಣ್ಣ ಚಿಂತೆ ಇದೆ ಎಂದ. ನಾವೂ ಮೇಲೆ ನೋಡಿದೆವು. ಜೀತು ಹೇಳುತ್ತಿರುವುದನ್ನು ಅಲ್ಲಗಳೆಯಲಾಗಲಿಲ್ಲ.

ಅರ್ಧ ಗಂಟೆಯಲ್ಲಿ ಚುರುಕಿನ ಸುಮಾರು ೧೫ವಯಸ್ಸಿನ ಹುಡುಗನೊಬ್ಬ ಕತ್ತಿನ ಹಿಂದಿದ್ದ ತನ್ನ ಬೆವರನ್ನು ಗರಗರನೆ ಅಡ್ಡಡ್ಡ ಒರೆಸಿಕೊಳ್ಳುತ್ತಾ ಬೈರಾಸಿನ ಎರಡೂ ತುದಿಗಳನ್ನು ತನ್ನ ಎರಡು ಕೈಗಳಿಂದ ಹಿಡಿದು ಬೀಡಾ ಜಗಿಯುತ್ತಾ ಒಳಗೆ ಬಂದು ಕೂತ. ಹೊರಗಡೆ ಒಂಟೆಗಳು ಕೂತಿದ್ದವು. ಹತ್ತೇ ನಿಮಿಷದಲ್ಲಿ ದಡಬಡನೆ ತೀರಾ ಅಗತ್ಯದ ವಸ್ತುಗಳನ್ನೊಂದು ಬ್ಯಾಗಿಗೆ ತುಂಬಿಸಿಕೊಂಡು ಹೊರಬಿದ್ದಿದೆವು.

****

ಒಂಟೆಯ ಮೇಲೆ ಕೂತು ಮರುಳುಗಾಡಲ್ಲಿ ಹೋಗುವುದೂ ಕೂಡಾ ಸಾಹಸವೇ. ಒಂದ್ಹತ್ತು ನಿಮಿಷ ಕೆಳಗೆ ಬೀಳದಿದ್ದರೆ ಸಾಕು ಎಂದು ಅನಿಸಿದರೂ, ನಿಧಾನಕ್ಕೆ ಅಭ್ಯಾಸವಾಯಿತು. ಮಗ ಹತ್ತಿದ್ದ ಒಂಟೆ ಮಾತ್ರ ಕುದುರೆಯಂತೆ ಓಡಹತ್ತಿತು. ಎಲ್ಲಿ ಕೆಳಗೆ ಬೀಳುತ್ತಾನೋ ಎಂದು ನಾನು ಅಂದುಕೊಂಡರೂ ಅವನ ಖುಷಿಯನ್ನು ಅವನ ಕಣ್ಣುಗಳೇ ಹೇಳುತ್ತಿತ್ತು. ಒಂಟೆಯ ಮಾಲಿಕನಿಗೂ ೧೫ ದಾಟಿರಲಿಕ್ಕಿಲ್ಲ. ಪುಟಾಣಿ ಹುಡುಗ ಸಿಕ್ಕಿದ್ದಕ್ಕೆ ಒಂಟೆಯ ಜೊತೆ ಸೇರಿಕೊಂಡು ಅಗ್ರಿಮೆಂಟು ಮಾಡಿಕೊಂಡವರಂತೆ ಹುಚ್ಚೆದ್ದು ಓಡುತ್ತಿದ್ದರು. ನಮ್ಮ ಒಂಟೆಯೋ ನಮ್ಮನ್ನು ಅರಿತಂತೆ ನಿಧಾನಕ್ಕೆ ಹೆಜ್ಜೆ ಹಾಕುತ್ತಿತ್ತು.

ಒಂದೂವರೆ ಗಂಟೆಗಳ ಕಾಲ ಒಂಟೆಯ ಕಾಲ ಮೇಲೆ ನಡೆದ ನಾವುಗಳು ಸೂರ್ಯ ಜಾರಿ ಹೋಗುವ ಮುನ್ನ ತಲುಪಬೇಕಾದಲ್ಲಿ ತಲುಪಿದ್ದೆವು. ಜಿತು ಹಾಗೂ ಹುಡುಗ ರಾತ್ರಿಯ ಅಡುಗೆಗೆ ತಯಾರಿ ಮಾಡಲು ಹೊರಟರೆ, ಮಗ ಮಾತ್ರ ಅದಾಗಲೇ ಎತ್ತರದ ಮರಳು ದಿಬ್ಬದಿಂದ ಜಾರುವ ಆಟ ಶುರು ಮಾಡಿದ್ದ. ನಾನು ಕ್ಯಾಮರಾ ನೇತಾಕಿಕೊಂಡು, ಸೂರ್ಯನ ಕೆಂಪಿನಲ್ಲಿ ಒಂಟೆಯನ್ನು ಕಪ್ಪಾಗಿಸುವ ಸರ್ಕಸ್ಸಿಗೆ ತೊಡಗಿದ್ದೆ. ಕೆಂಪು ಬಾನು, ಮರಳ ದಿಬ್ಬಗಳು, ಎತ್ತಲೋ ದೃಷ್ಟಿ ನೆಟ್ಟು ಕೂತು ಎಲ್ಲೆಲ್ಲೋ ಮೇಯ್ದು ಬಂದದ್ದನ್ನ ಮತ್ತೆ ಮೆಲುಕು ಹಾಕುತ್ತಾ ಕೂರುವ ನಿರ್ಲಿಪ್ತ ಒಂಟೆಗಳು. ಕ್ಯಾಮರಾ ನೇತಾಕಿಕೊಂಡು ತಿರುಗಾಡುವವರ ಕನಸಿನ ಪರದೆಯನ್ನು ಕಣ್ಣೆದುರೇ ತಂದಿಟ್ಟ ಹಾಗೆ ಇದು!

ರಾತ್ರಿ ಏಳು ದಾಟಿತ್ತು. ಮಗ ಜಾರಿ ಜಾರಿ ಮೈಯ್ಯೆಲ್ಲ ಹೊಯಿಗೆ ಮೆತ್ತಿಕೊಂಡು ಸುಸ್ತಾಗಿ ಬಿದ್ದುಕೊಂಡಿದ್ದ. ಸುತ್ತ ಕತ್ತಲೋ ಕತ್ತಲು. ಹಿಮಾಲಯ ಚಾರಣ ಬಿಟ್ಟರೆ ಇಂಥ ಕತ್ತಲು ಎಲ್ಲೂ ದಕ್ಕಿರಲಿಲ್ಲ. ಇಂದಿನ ಕತ್ತಲೇ ಇಲ್ಲದ ಮಿರಮಿರ ಮಿಂಚುವ ಝಗಮಗ ಜಗತ್ತಿನಲ್ಲಿ ನಮಗೆಲ್ಲ ಬೆಳಕು ಎಷ್ಟು ಅಭ್ಯಾಸವಾಗಿಬಿಟ್ಟಿದೆಯೆಂದರೆ, ಕತ್ತಲೆಯನ್ನು ಕತ್ತಲೆಯಾಗಿ ನೋಡುವ ತಾಳ್ಮೆ, ಅನುಭವಿಸುವ ತಾಕತ್ತು ಯಾರಿಗೂ ಉಳಿದಿಲ್ಲ. ಆದರೆ ಕತ್ತಲಲ್ಲಿ ಕೂತಾಗಲೇ ತಲೆಯ ಮೇಲಿನ ಬೆಳಕು ಕಾಣುವುದು. ಅದಕ್ಕೇ ಇರಬೇಕು, ಈ ಸಲ ಆಗಸದ ಬೆಳಕು ಮಾತ್ರ ಹಿಂದೆಂದಿಗಿಂತಲೂ ಪ್ರಕಾಶಮಾನವಾಗಿದೆ ಅನಿಸತೊಡಗಿತ್ತು. ಶುಭ್ರ ಆಗಸದಲ್ಲಿ ನಕ್ಷತ್ರಲೋಕ. ಕೆಳಗಿನ ಭೂಮಂಡಲವಿಡೀ ಕತ್ತಲೋ ಕತ್ತಲು.

ಜಿತು ಮತ್ತು ಆ ಒಂಟೆಯ ಮಾಲಿಕ ಬೇರೆಯೇ ದುನಿಯಾದಲ್ಲಿದ್ದರು. ಅಗತ್ಯ ಬಿದ್ದಾಗ ಮೊಬೈಲಿನ ಲೈಟು ಬಿಟ್ಟರೆ ಬೇರೆ ದೀಪ ಹಚ್ಚಿ ಇಟ್ಟಿರಲಿಲ್ಲ. ಒಂದು ದೀಪ ಹಚ್ಚಿದರೆ ಸಾಕು, ಅದೆಲ್ಲಿಂದಲೋ ರಾಶಿ ರಾಶಿ ಕೀಟಗಳು ತಲೆ ಮೇಲೆ ಗಿರಕಿ ಹೊಡೆಯಲು ಶುರು ಮಾಡುತ್ತಿದ್ದವು. ಈ ಕಾರಣಕ್ಕೆ ಒಂದು ಬೆಳಕಿನ ಚುಕ್ಕೆಯೂ ಇಲ್ಲದೆ ಕೂತಿದ್ದೆವು. ಮರಳಿನ ಹಾಸಿಗೆ ಮೆತ್ತಗಿತ್ತು. ಮೇಲೆ ಆಕಾಶದಲ್ಲಿದ್ದ ಮೋಡ ರಾತ್ರಿ ಅಂಗಾತ ಮಲಗಿದ್ದಾಗ ಮಳೆ ಸುರಿಸಿದರೆ, ಖಂಡಿತ ಒದ್ದೆಯೇ ಆಗಬೇಕಷ್ಟೇ. ಆದರೂ ಮಳೆ ಬರಲಿಕ್ಕಿಲ್ಲ ಭಂಡ ಧೈರ್ಯದಿಂದ ಕೂತಿದ್ದೆವು. ನಮ್ಮ ಧೈರ್ಯಕ್ಕೆ ಮೋಡಕ್ಕೂ ನಮ್ಮನ್ನು ಎದುರು ಹಾಕಿಕೊಳ್ಳಲು ಭಯವಾಗಿರಬೇಕು.

ಸಂಜೆ ಕಂಡಿದ್ದ ಮೋಡಗಳು ಬೀಸಿದ ಗಾಳಿಗೆ ಆಗಲೇ ಎಲ್ಲೋ ತೂರಿ ಹೋಗಿದ್ದವು. ಅಷ್ಟರವರೆಗೆ ಕಾಣೆಯಾಗಿದ್ದ ಜಿತು ನಮ್ಮಿಂದ ಬಹಳ ದೂರದಲ್ಲೊಂದು ಮಿಣಿ ಮಿಣಿ ದೀಪ ಇಟ್ಟು ನಾವು ಕೂತಲ್ಲಿಗೆ ರೋಟಿ, ಸಬ್ಜಿ, ದಾಲ್‌ ಎಲ್ಲ ಮಾಡಿ ತಂದಿಟ್ಟು ಬಡಿಸಿದ. ದೀಪ ಇಲ್ಲಿ ತಂದರೆ, ದೀಪದ ಹಿಂದೆ ಬೀಳುವ ಕೀಟಗಳು ದಾಲ್‌ಗೆ ಬಿದ್ದಾವು ಎಂದ. ತರಬೇಡಿ, ತೊಂದರೆಯೇನಿಲ್ಲ ಎಂದ ನಾವು ಕತ್ತಲಲ್ಲಿ ತಿನ್ನುವ ಅಪರೂಪದ ಸುಖ ಕಾಣುತ್ತಿದ್ದೆವು. ಕಂಡೂ ಕಾಣದಂತ ಮಿಣಿ ಮಿಣಿ ಬೆಳಕಿನಲ್ಲಿ ನಮ್ಮ ಕೈ ಮಾತ್ರ ಸರಾಗವಾಗಿ ತಟ್ಟೆಯಿಂದ ಬಾಯಿಗೆ ಹೋಗುತ್ತಿತ್ತು. ಅರ್ಜುನನಿಗೆ ಆಗ ಈ ಸತ್ಯ ಹೊಳೆಯದೇ ಇದ್ದಿದ್ದರೆ, ಬಹುಶಃ ನಮಗೇ ಈ ಕತ್ತಲಲ್ಲಿ ಈ ಸತ್ಯ ಹೊಳೆಯುತ್ತಿತ್ತೇನೋ ಎಂದು ನಾವು ನಾವು ತಮಾಷೆ ಮಾಡಿಕೊಂಡು ನಕ್ಕೆವು.

ಎರಡು ಚಾರ್ಪಾಯಿಗಳನ್ನು ಜಿತು ಅದೆಲ್ಲಿಂದಲೋ ಹೊತ್ತು ತಂದಿದ್ದ. ಅದನ್ನು ಜೋಡಿಸಿಕೊಂಡು ಮಲಗಿದರೂ, ರಾತ್ರಿಯಿಡೀ ಒಂದು ಬೇರೆಯದೇ ಲೋಕದಲ್ಲಿದ್ದಂತೆ ಎಚ್ಚರ. ಆಗಾಗ, ಊಳಿಡುವ ನರಿ, ಸದ್ದೇ ಇಲ್ಲದ ಕತ್ತಲ ಮೌನ ಕೇವಲ ಕಾಡೊಳಗೆ ಮಾತ್ರವಲ್ಲ, ಒಂದೇ ಒಂದು ಮರವೂ ಇಲ್ಲದ ಮರುಳುಗಾಡಿನಲ್ಲೂ ವಿಚಿತ್ರ ಅನುಭವ ನೀಡುತ್ತದೆ ಎಂದು ಮೊದಲ ಬಾರಿಗೆ ಅರಿವಾಯಿತು. ನಡುರಾತ್ರಿಯವರೆಗೂ ಒಂಟೆ ಮೆಲ್ಲುವ ಚರ್‌ ಪರ್‌ ಸದ್ದು ಮಾತ್ರ ಕೇಳುತ್ತಲೇ ಇತ್ತು.

****

ಸೂರ್ಯನಿಗೆ ಇಲ್ಲಿ ಕೆಲಸ ಸುಲಭ. ಕಿರಣಗಳು ಮರಗಳನ್ನು ಸೀಳಿಕೊಂಡು ಬರುವ ಕಷ್ಟವೆಲ್ಲ ಇಲ್ಲಿ ಬೇಕಾಗಿಲ್ಲ. ಆತ ಅನಾಯಾಸವಾಗಿ ಎದ್ದು ಕೂತಿದ್ದೇ ತಡ, ನಾವೂ ಚುರುಕಾಗಿ ಬಿಟ್ಟೆವು. ಬೆಳಕಿನ ಹಿತವಾದ ಗಾಳಿಗೆ, ತಂಪು ಬೆಳಕಿಗೆ ಮಗ ಮತ್ತೆ ತನ್ನ ಜಾರುವ ಕೆಲಸ ಮುಂದುವರಿಸಿದ. ಆದರೆ, ನಡುರಾತ್ರಿಯವರೆಗೂ ಮೆಲ್ಲುತ್ತಿದ್ದ ಒಂಟೆಗಳೆಲ್ಲಿ ಹೋದವು ಎಂದು ಎಂದು ನೋಡಿದರೆ, ಜಿತು, ಮೇಯಲು ಹೋಗಿದಾವೆ, ಬರುತ್ತವೆ ಹೊರಡುವಷ್ಟರಲ್ಲಿ ಎಂದ.

ಬರಬೇಕಾದ ಒಂಟೆಗಳು ಗಂಟೆ ಒಂಭತ್ತು ಕಳೆದರೂ ಬರಲಿಲ್ಲ. ಜಿತುಗೆ ಚಿಂತೆಯಾಯಿತು. ಒಂಟೆ ಕಾಣ್ತಾ ಇಲ್ಲ. ಹುಡುಕಲು ಹೋಗಬೇಕು, ನೀವಿಲ್ಲೇ ಇರಿ ಎಂದು ಎಲ್ಲೋ ಓಡಿದ. ಮರುಳುಗಾಡಿನ ಚೂಪು ಎಲೆಗಳ, ಬರಡು ಮರಗಳೆಡೆಯಲ್ಲಿ ಹೊರಟಷ್ಟೇ ವೇಗದಲ್ಲಿ ಕಾಣೆಯಾದ ಜಿತು ಎಲ್ಲಿ ಹೋದ ಅಂತ ಗೊತ್ತಾಗಲಿಲ್ಲ. ಬಿಸಿಲು ಖಾರವಾಗಲು ಶುರುವಾಗಿತ್ತು. ಸುಮಾರು ಅರ್ಧ ಗಂಟೆಯ ಹೊತ್ತಿಗೆ ದೂರದಲ್ಲಿ ಒಂಟೆಗಳೆರಡು ಪ್ರತ್ಯಕ್ಷವಾದವು ಎಂಬಲ್ಲಿಗೆ ನಾವು ಮತ್ತೆ ಒಂಟೆ ಏರಲು ಸನ್ನದ್ಧರಾದೆವು. ಮೇಯ್ತಾ ಮೇಯ್ತಾ ದೂರ ಹೋಗಿದ್ದ ಒಂಟೆಗಳು ತಮ್ಮ ಕೊರಳ ಗಂಟೆ ಸದ್ದು ಮಾಡುತ್ತಾ ಓಡೋಡಿ ಬಂದವು. ಮತ್ತೊಂದು ಗಂಟೆ ಅಷ್ಟೆ! ನಾವು ಮತ್ತದೇ ಜಿತುವಿನ ಧಾಣಿ ತಲುಪಿದ್ದೆವು.

ಮುನ್ನಾ ದಿನ ಕಂಡಿದ್ದ ಜೇಡಗಳೆರಡೂ ಮಾತ್ರ ಇನ್ನೂ ಅದೇ ಕೋಣೆಯಲ್ಲಿ ಇನ್ನೂ ಹಾಗೇ ಕೂತಿದ್ದವು! ʻನೀವು ಹೀಗೇ ಅಲ್ಲಾಡದೆ ನಾಲ್ಕು ಗೋಡೆಯೊಳಗೆ ಬಿದ್ದರಿʼ ಎನ್ನುತ್ತಾ ಬ್ಯಾಗು ಪ್ಯಾಕು ಮಾಡಿಕೊಂಡು ಸಮ್‌ನತ್ತ ಹೊರಟೆ. ಮನದ ತುಂಬಾ ಆ ರಾತ್ರಿಯ ಪ್ರಜ್ವಲಿಸುವ ನಕ್ಷತ್ರಗಳು…

‍ಲೇಖಕರು Admin

July 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Jayasrinivasa Rao

    Ooh…what a lovely description!! Makes one want to go and spend a night in the desert … thank you for this…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: