ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭೂತಾಯಿಯ ‘ಲಾಲಿ’ ಹಾಗೂ ಕೊನೆಯ ಭೇಟಿ

ಕೆ ರಾಜಕುಮಾರ್

ಮುಖಪುಟ ಕಲೆ: ಪಂಜು ಗಂಗೊಳ್ಳಿ

ಭಾರತದಲ್ಲಿ ಪರಿಸರ ಎಂಬುದಕ್ಕೆ ಅನ್ವರ್ಥದಂತಿದ್ದವರು ಡಾ. ಸುಂದರಲಾಲ್ ಬಹುಗುಣ. ಭಾರತದಲ್ಲಿ ಪರಿಸರದ ಜೊತೆಗೆ ಸಮೀಕರಿಸಬಹುದಾದ ಅಗ್ರಗಣ್ಯ ಹೆಸರೂ ಅವರದೇ. ಸುಂದರಲಾಲ್ ಬಹುಗುಣ ತಮ್ಮ ಹೆಸರಿನಂತೆಯೇ ನಮ್ಮನ್ನು ಹೊತ್ತ ಧರಿತ್ರಿಯೂ ಸುಂದರವಾಗಿ, ಸಸ್ಯ ಶ್ಯಾಮಲೆಯಾಗಿ ಉಳಿಯಬೇಕೆಂಬ ಉತ್ಕಂಠ ಘೋಷ ಅವರದಾಗಿತ್ತು.

ಉತ್ತರಖಂಡ ಮೂಲದ ಅವರು ಹಿಮಾಲಯದ ಪರಿಸರದಲ್ಲಿನ ಮರಗಳನ್ನು ಕಡಿಯಬಾರದೆಂದು ಅವುಗಳನ್ನು ಅಪ್ಪಿಕೊಂಡು ಜಾಗೃತಿ ಮೂಡಿಸಿದವರು. ಇದು ಚಿಪ್ಕೋ ಚಳವಳಿಯೆಂದೇ ಖ್ಯಾತವಾಯಿತು. ಅವರೊಂದು ಅದ್ಭುತ ಚೇತನ. ಮದ್ಯಪಾನ ವಿರೋಧಿ ಹೋರಾಟ, ಸ್ವಾತಂತ್ರ್ಯ ಸಂಗ್ರಾಮ, ಆಸ್ಪೃಶ್ಯತೆಗಳ ವಿರೋಧಿ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರು ಚಳವಳಿಯ ಕಣ ಪ್ರವೇಶಿಸಿದಾಗ ಅವರಿಗಿನ್ನೂ ಹದಿಮೂರರ ಅಂದದ ಹರೆಯ. ಮೀಸೆಯೂ ಮೊಳೆಯದ ವಯಸ್ಸು.

ದೇಹದಲ್ಲಿ, ತಾರುಣ್ಯದ ಬಿಸುಪು ಮೂಡುವ ಮುನ್ನವೇ ಹೋರಾಟದ ಕಾವು ಅವರ ಮನಸ್ಸನ್ನು ಆವರಿಸಿತು. ಗಾಂಧೀಜಿಯವರ ಅನುಯಾಯಿಯಾದರು. ಗಾಂಧೀಯ ಆರ್ಥಿಕತೆಯನ್ನು ಅನುಸರಿಸಿದರು. ಅಹಿಂಸೆ ಅವರ ಮಾರ್ಗವಾಯಿತು. ಅವರ ಆತ್ಮ ಇಂದು ಪಂಚಭೂತಗಳಲ್ಲಿ ಲೀನಗೊಂಡಿದೆ. ಪ್ರಕೃತಿಯ ಋಣವನ್ನು ಸಂದಾಯ ಮಾಡಿ ಬದುಕಿಗೆ ವಿದಾಯ ಹೇಳಿ ಇಹದಿಂದ ಹೊರ ನಡೆದಿದೆ. ಹಿಂದೆ ಪರಿಸರದ ಉಳಿವಿಗಾಗಿ, ಪರ್ವತ ಪ್ರಾಂತ್ಯದಲ್ಲಿ ಬರಿಗಾಲಲ್ಲೇ ಸುಮಾರು 5000 ಕಿಮೀ ನಡೆದಿದ್ದ ಜೀವಕುಲ ಪ್ರೇಮಿ ಅವರು.

ಭಾರತ ಸರ್ಕಾರದ ಎರಡನೆಯ ಅತಿ ದೊಡ್ಡ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದರು.

ಅವರ ಕೃತಿ ‘ಧರ್‌ತೀಕಿ ಪುಕಾರ್’. ಅದನ್ನು ಕನ್ನಡದಲ್ಲಿ ಧರಣಿಯ ಕರೆ ಎನ್ನಬಹುದು. ಆ ಕರೆ ಇಂದು ಆಕ್ರಂದನವಾಗಿದೆ‌. ನಿಸರ್ಗದ ಗೋಣು ಹಿಸುಕುವ ಕಾರ್ಯ ಅವ್ಯಾಹತವಾಗಿ ನಡೆದಿರುವ ಸಂದರ್ಭದಲ್ಲಿ ಬಹುಗುಣರಂತಹ ಮುತ್ಸದ್ದಿಯ, ಪರಿಸರಪರ ಕಾಳಜಿಯ ಹಲವು ಜೀವಿಗಳ ಅಗತ್ಯವಿದೆ. ಆಳುವ ಪ್ರಧಾನಿಗಳನ್ನೇ ಮಣಿಸಿದ ದೀರ್ಘಕಾಲದ ಉಪವಾಸ ಸತ್ಯಾಗ್ರಹಗಳು ಅವರದು. ವಿಶೇಷವೆಂದರೆ ಈ ದೇಶದಲ್ಲಿ ನಡೆದ ಎಲ್ಲ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ ಅವರ ಮತ್ತು ಅವರ ಅಪ್ಪಿಕೋ ಚಳವಳಿಯ ಕುರಿತಾದ ಒಂದು ಪ್ರಶ್ನೆ ಇರುತ್ತಿತ್ತು! ಇದು ಅವರ ಹೋರಾಟದ ಪ್ರಸ್ತುತತೆಗೆ ಸಾಕ್ಷಿ.

ಲಾಲ್ ಎಂದರೆ ಹಿಂದಿಯಲ್ಲಿ ಕೆಂಪು ಎಂಬರ್ಥವಿದೆ. ಆದರೆ ಅವರು ಹೋರಾಡಿದ್ದು ಹಸಿರೇ ಉಸಿರಾಗಬೇಕೆಂದು! ಲಾಲ್ ಎಂದರೆ, ಇನ್ನೊಂದು ಅರ್ಥ ಕಂದ ಎಂದು. ನಿಜಕ್ಕೂ ಭೂಮಾತೆಯ ಲಾಲ ಈ ಸುಂದರಲಾಲ. ಅದಕ್ಕೂ ಮಿಗಿಲಾಗಿ ತನ್ನ ಹೆತ್ತ ಭೂತಾಯಿಯನ್ನೇ ಲಾಲಿಸಿದ ಸುಂದರಲಾಲ ಈ ಸಿರಿಗುಣ; ಬಹುಗುಣ!

ಕಡೆಯ ಭೇಟಿ

ಸಂತೋಷ ಕೌಲಗಿ

ಕಡೆಯ ಭೇಟಿಸುಮಾರು ೧೦ ವರ್ಷದ ಹಿಂದೆ ಒಂದು ದಿನ ಗೆಳೆಯ ಪಾಂಡುರಂಗ ಹೆಗಡೆ ಬೆಳ್ಳಂಬೆಳಗ್ಗೆ ಫೋನು ಮಾಡಿ ಬಹುಗುಣ ದಂಪತಿಗಳು ಬೆಂಗಳೂರಿನಲ್ಲಿದ್ದಾರೆ ಒಂದು ನಾಲ್ಕುದಿನ ಬಿಡುವಾಗಿದ್ದಾರೆ ಸುರೇಂದ್ರ ಭಾಯ್ ಮನೆಗೆ ಹೋಗಲೇ ಎನ್ನುತ್ತಿದ್ದಾರೆ, ಕಳುಹಿಸಲೇ ?ಎಂದರು. ಅದಕ್ಕೇನು ಕಳುಹಿಸು ಮಾರಾಯ ಎಂದೆ. ಮಾರನೆಯ ಬೆಳಿಗ್ಗೆ ಬಹುಗುಣ ದಂಪತಿಗಳು ಮೇಲುಕೋಟೆಗೆ ಬಂದರು. ನಾಲ್ಕು ದಿನ ಆರಾಮವಾಗಿದ್ದರು. ಅದರಲ್ಲಿ ಒಂದು ದಿನ ಸ್ವಲ್ಪ ಜ್ವರ ಬಂದು ದೇಹಾಲಸ್ಯವಾಯಿತು.

ಅದೇ ದಿನ ಅವರೊಂದಿಗೆ ಸಂವಾದ ಎಂದು ಪ್ರಕಟಿಸಿದ್ದರಿಂದ ನೂರಾರು ಸ್ನೇಹಿತರು ಹೊಸ ಜೀವನ ದಾರಿಗೆ ಆಗಮಿಸಿದ್ದರು. ಆರೋಗ್ಯ ಸರಿಯಲ್ಲದಿದ್ದರೆ ಕಾರ್ಯಕ್ರಮ ರದ್ದು ಮಾಡೋಣವೇ ಎಂದೆ. ಬೇಡ,ಬೇಡ ಕಾರ್ಯಕ್ರಮ ನಡೆಯಲಿ ಎಂದರು. ಒಂದು ತಾಸು ಮಾತನಾಡಿದರು ಆನಂತರ ಪ್ರಶ್ನೋತ್ತರ, ಫೋಟೋ , ಊಟ ಹೀಗೆ ಇಡೀ ದಿನ ಕಳೆದರು. ನಾಲ್ಕು ದಿನ ಹೇಗೆ ಕಳೆಯಿತೋ ತಿಳಿಯಲಿಲ್ಲ. ನನ್ನ ಅಪ್ಪ ಮತ್ತು ಅವರು ತಮ್ಮ ಸರ್ವೋದಯ ಚಳುವಳಿಯ ದಿನದ ಅನೇಕ ಘಟನೆಗಳನ್ನು ಮೆಲಕು ಹಾಕಿದರು, ಅನೇಕರನ್ನು ನೆನಪಿಸಿ ಕೊಂಡು ಹರಟೆ ಹೊಡೆದರು.

ವರ ನೆನಪಿನ ಒಂದಿಷ್ಟು ಫೋಟೋಗಳು ಮಾತ್ರ ಈಗ ಉಳಿದಿವೆ. ನಮ್ಮೆಲ್ಲರಲ್ಲೂ ಒಂದಿಷ್ಟು ಪರಿಸರ ಪ್ರಜ್ಞೆ ಯನ್ನು ಉಂಟುಮಾಡಿದ ದೊಡ್ಡ ಜೀವ ನಮ್ಮಿಂದ ದೂರ ಹೊರಟು ಹೋಗಿದೆ.ಈ ಮಧ್ಯೆ ಟೆಕ್ಸಾಸ್ ಯುನಿವರ್ಸಿಟಿಯ ಪ್ರೊ ಜಾರ್ಜ ಜೇಮ್ಸ್ ಅವರು ಬರೆದ ಬಹುಗುಣ ಅವರ ಜೀವನ ಚರಿತ್ರೆ Against the Tide ಪುಸ್ತಕದ ಕನ್ನಡ ಅನುವಾದವನ್ನು ನನ್ನ ಅಪ್ಪ ಅದನ್ನು ಅರ್ಧದಲ್ಲಿಯೇ ಬಿಟ್ಟು ಹೋದರು. ಈಗ ನನ್ನ ಸೊಸೆ ಅರ್ಚನಾ ಅದನ್ನು ಪೂರ್ಣ ಗೊಳಿಸುತ್ತಿದ್ದಾರೆ. ಪುಸ್ತಕ ಬೇಗ ಹೊರಬರಲಿ ಎಂದು ಆಶಿಸುತ್ತೇನೆ.

ನೆನಪಿನ ಒಂದಿಷ್ಟು ಫೋಟೋಗಳನ್ನು ನಿಮಗಾಗಿ ಇಲ್ಲಿ ಹಾಕಿದ್ದೇನೆ.

‍ಲೇಖಕರು Avadhi

21 May, 2021

1 Comment

  1. Malati Hegde

    Nice article

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading