ಭುವನೇಶ್ವರಿ ಹೆಗಡೆ ಅಂಕಣ- ಈ ಪುಸ್ತಕಗಳು ಯಾಕಾದರೂ ಬರುತ್ವೋ…

18

ಹೆಚ್ಚಿನ ನಗರಗಳ ಅಪಾರ್ಟ್ ಮೆಂಟು ಗಳಂತೆ ಮಂಗಳೂರಿನ ನನ್ನ ಅಪಾರ್ಟ್ಮೆಂಟಿನಲ್ಲಿಯೂ ದೀಪಾವಳಿ ಹಾಗೂ ಕ್ರಿಸ್ಮಸ್ ಎರಡರ ಆಚರಣೆಯನ್ನು ಝಗ ಝಗ ದೀಪಗಳ ಮಾಲೆಯನ್ನು ಜೋತಾಡಿಸಿ ತೂಗುದೀಪಗಳನ್ನು ತೂಗಾಡಿಸಿ ಸಿಹಿ ಹಂಚಿ ಆಚರಿಸುತ್ತೇವೆ. ಕೆಲವು ಬಾರಿ ಅಪಾರ್ಟ್ಮೆಂಟಿನ ಮಕ್ಕಳಿಗೆ ಹಾಡು ಡಾನ್ಸು ಗಳ ಉಮೇದು ಬಂದು (ಕೊರೋನಾ ಪೂರ್ವದಲ್ಲಿ) ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಉಂಟು.

ಸಾಮೂಹಿಕ ಭೋಜನದ ಬಳಿಕ ಮನೆಮನೆಗೆಹೋಗಿ ಸಿಹಿತಿಂಡಿಯ ಬಾಕ್ಸ್ ಕೊಟ್ಟು ಹ್ಯಾಪಿ ದೀಪಾವಳಿ ಎಂದೋ ಹ್ಯಾಪಿ ಕ್ರಿಸ್ಮಸ್ ಎಂದೋ ಶುಭಾಶಯ ವಿನಿಮಯ ಮಾಡಿಕೊಂಡು ಆರಕ್ಕೇರದ ಮೂರಕ್ಕಿಳಿಯದ ಸಂಭ್ರಮದಲ್ಲಿ ಹಬ್ಬಗಳನ್ನು ಆಚರಿಸುವ ಪರಿಪಾಠವಿದೆ. ಆದರೆ ಆಗಸ್ಟ್ ಹದಿನೈದು ಜನವರಿ ಇಪ್ಪತ್ತಾರು ನವೆಂಬರ ಒಂದು ಮಕ್ಕಳು ಶಾಲೆಗಳಲ್ಲಿ ಮಾತ್ರ ಆಚರಿಸುವ ದಿನಾಚರಣೆಗಳ ಆಗಿವೆ. ನಾವು ಕಾಲೇಜು ಪ್ರಾಧ್ಯಾಪಕರು ಒಂದಿಬ್ಬರು ನಮ್ಮ ನಮ್ಮ ಕಾಲೇಜುಗಳಲ್ಲಿಯೇ ಧ್ವಜಾರೋಹಣ ಮಾಡಿ ಭಾಷಣ ಕೇಳಿ ಕೊಟ್ಟು ಬರುವುದಿದೆ.

ಈ ಬಾರಿ ನನ್ನ ಮನೆಯಲ್ಲಿ ನವೆಂಬರ್ ಒಂದು ಕನ್ನಡ ರಾಜ್ಯೋತ್ಸವ ತುಂಬ ವಿಶಿಷ್ಟವಾಗಿ ಆಚರಿಸಲ್ಪಟ್ಟಿತು. ಬರಹವನ್ನು ಅವಲಂಬಿಸಿಕೊಂಡ ಬರಹಗಾರರಿಗೆ ಕವಿಗಳಿಗೆ ಓದುವ ಜನಾಂಗವನ್ನು ಕಂಡರೆ ಎಲ್ಲಿಲ್ಲದ ವಾತ್ಸಲ್ಯ ಇರುವುದು ಸಹಜವಷ್ಟೆ?.

ಬಸ್ಸ್ಟ್ಯಾಂಡ್, ರೈಲ್ವೇ ಸ್ಟೇಶನ್ ಗಳಂಥ ಸಾರ್ವಜನಿಕ ಸ್ಥಳಗಳಲ್ಲಿ, ರೈಲುಗಳ ಒಳಗೆ ಯಾವುದಾದರೂ ಪುಸ್ತಕ ಹಿಡಿದು ಕುಳಿತು ಓದುವವರನ್ನು ಕಂಡರೆ ಯಾವಾಗಲೂ ನನಗೆ ಒಂದು ಬಗೆಯ ಪ್ರೀತಿ ಅಭಿಮಾನ. ಇವರು ಓದುವುದರಿಂದ ತಾನೆ ನಾವು ಬರೆಯುವುದು ಎಂಬ ವಿನೀತ ಭಾವ ಜಾಗ್ರತವಾಗುತ್ತದೆ. ಕನ್ನಡ ಪುಸ್ತಕಗಳು ಕಣ್ಣಿಗೆ ಬಿದ್ದಾಗಲಂತೂ ಇನ್ನಿಲ್ಲದ ಬಾಂಧವ್ಯ. ಅವರ ಬಳಿ ಹೋಗಿ ಮಾತನಾಡಿಸಿ ನೀವು ಓದುವುದನ್ನು ನೋಡಿ ಖುಷಿಯಾಯ್ತು ಎಂದು ಮೆಚ್ಚುಗೆ ಪ್ರಕಟಿಸುವುದೂ ಉಂಟು. ಇಂಥ ಪ್ರಕರಣಗಳಲ್ಲಿ ಪರಿಚಿತರಾದವರನೇಕರು ನನ್ನ ಗಾಢ ಸ್ನೇಹದ ಪರಿಧಿಯೊಳಗೆ ಬಂದು ಇಂದಿಗೂ ಆತ್ಮೀಯರಾಗಿ ಮುಂದುವರಿದಿದ್ದಾರೆ. ಈ ಸರಣಿಯಲ್ಲಿ ಈ ಬಾರಿ ನನ್ನ ವರ್ತುಲದೊಳಗೆ ಸೇರಿಕೊಂಡವರು ಎಂಭತ್ತೈದು ವರ್ಷದ ಓರ್ವ ಅಜ್ಜಿ. ಸಾಹಿತ್ಯಾಸಕ್ತಿಗೆ, ಓದುವ ಸುಖಕ್ಕೆ ವಯಸ್ಸು ಅಡ್ಡ ಬರುವುದಿಲ್ಲ ಎಂಬುದನ್ನು ಕಲಿಸಿದ ಅಜ್ಜಿ ಈಕೆ.

ಕಳೆದೆರಡು ತಿಂಗಳಿನಿಂದ ನಮ್ಮ ಮನೆಯ ಮೇಲಿನ ಡಾಕ್ಟರ್ ಒಬ್ಬರ ಮನೆಗೆ ಬಂದುಉಳಿದ ಓರ್ವ ಅಜ್ಜಿಯಿಂದ ನಾನು ಏನೆಲ್ಲವನ್ನು ಕಲಿತೆ ! ನಮ್ಮ ಮನೆಯ ಕೆಲಸದ ಗೀತಾ ಮೇಲಿನ ಫ್ಲಾಟಿ ನಲ್ಲಿಯೂ ಕೆಲಸ ಮಾಡುತ್ತಾಳಾದ್ದರಿಂದ ಅವರ ಮನೆಗೆ ಅಜ್ಜಿ ಯೋರ್ವರು ಆಗಮಿಸಿದ್ದು ಅವಳಿಂದಲೇ ತಿಳಿಯಿತು ಮತ್ತು ಆ ಅಜ್ಜಿಗೆ ಓದುವುದೇ ಕೆಲಸ ಎಂಬ ವಿಚಿತ್ರ ಸುದ್ದಿಯನ್ನು ಗೀತಾ ತಂದಳು. ಗೀತ ಬಳ್ಳಾರಿ ಜಿಲ್ಲೆಯವಳು
ಖಡಕ್ ಮಾತಿಗೆ ಹೆಸರಾದವಳು. ನನಗೆ ಆಗಾಗ ಒಂದೊಂದು ಸಲಹೆಯನ್ನು ಬಿಸಾಡಿ ಹೋಗುವುದು ಅವಳ ಅಭ್ಯಾಸ. ನಾನು ಕಾಲು ಮುರಿದುಕೊಂಡು ಬ್ಯಾಂಡೇಜ್ ಬಿಗಿದು ಮಂಚದ ಮೇಲೆ ಕುಳಿತಾಗ ಆಗಾಗ ‘ಎಲ್ಲೀ ದ್ತೆಗಿಯವ್ವ ಡಾಕ್ಟರುಗಳ ಹೇಳ್ತಾವೆ ಅಂತ ಹೀಗೆ ಕೂತರೆ ನಡೀತೈತೆನವ್ವ ನಾವು ಧೈರ್ಯ ಮಾಡಿ ನಾಕು ಹೆಜ್ಜೆ ಹಾಕ ಬೇಕು ತಾನೇ ಸರಿಹೋಗುತ್ತದೆ ನೀವೋ ನಿಮ್ಮ ಡಾಕ್ಟರುಗಳೋ’ ಎಂದು ಜಬರ್ ದಸ್ತ್ ಮಾಡುತ್ತಿದ್ದಳು.

ನಮ್ಮ ಮನೆಯಲ್ಲಿ ಎಲ್ಲೆಂದರಲ್ಲಿ ಅಡುಗೆ ಮನೆಯಲ್ಲಿ ಸಹ ಪುಸ್ತಕಗಳು ಬಿದ್ದಿರುವುದು ಅತೀವ ಆಶ್ಚರ್ಯ ಅವಳಿಗೆ. ಈ ಪುಸ್ತಕ ಇಟ್ಕೊಂಡು ಏನು ಮಾಡುತ್ತಿರವ್ವ ಎಂದು ಆಗಾಗ ಕೇಳುವುದು ಉಂಟು. ನಾನು ಭಾಷಣಗಳಿಗೆ ಹೋಗಿ ವಾಪಸ್ ಬರುವಾಗ ಕೈಯಲ್ಲಿ ಪುಸ್ತಕಗಳನ್ನು ತಂದಾಗ ಈ ಗೀತಾಗೆ ಅಸಹನೆ. ಮತ್ತೆ ಬಂದವು ಪುಸ್ತಕಗಳು ಎಂದು ಗೊಣಗುತ್ತಾ ಅವುಗಳನ್ನು ಒಂದು ಕಡೆ ಜೋಡಿಸುತ್ತಾಳೆ. ಮರುದಿನ ಮತ್ತೆ ಪುಸ್ತಕಗಳು ಹರಡಿ ಬಿಟ್ಟಿದ್ದರೆ ನಿನ್ನೆಯಷ್ಟೇ ಜೋಡಿಸಿ ಹೋಗಿದ್ದೆ ನನ್ನವ್ವ ಪುನಃ ಇವತ್ತು ಹೀಗೆ ಬಿದ್ದಿವೆ ಈ ಪುಸ್ತಕಗಳು ಯಾಕಾದರೂ ಬರುತ್ವೋ…

ಹೀಗೆ ಪುಸ್ತಕದ ಕುರಿತು ವಿಚಿತ್ರವಾಗಿ ನೋಡುವ ಗೀತಾಳಿಗೆ ಮೇಲಿನ ಮನೆಯಲ್ಲಿ ಓದುವ ಅಜ್ಜಿ ಆಗಮಿಸಿದ ದಿನದಿಂದ ಒಂದು ಸಂಭ್ರಮ ಉಂಟಾಗಿ ಬಿಟ್ಟಿತ್ತು. ಅಜ್ಜಿ ಓದಲು ಪುಸ್ತಕಗಳನ್ನು ಹುಡುಕುತ್ತಿದ್ದಾಗ ಗೀತಾ ‘ಕೆಳಗೊಬ್ಬ ಲಚ್ಚರ್ ಇದ್ದಾರೆ ಅವರ ಮನೇಲಿ ರಾಶಿ ಪುಸ್ತಕ ಇದೆ’ ಎಂದು ಹೇಳಿದಳಂತೆ. ಮೇಲಿನ ಅಜ್ಜಿಗೆ ಪುಸ್ತಕ ಬೇಕಂತೆ ಕೊಡುತ್ತೀರಾ ಎಂದು ಕೇಳಿ ತೆಗೆದುಕೊಂಡು ಹೋಗಿ ಕೊಡು ಹತ್ತಿದಳು. ಅಜ್ಜಿಯೋ ಎರಡು ದಿನದಲ್ಲಿ ಆರು ಪುಸ್ತಕ ಓದಿ ಮುಗಿಸಿ ಬಿಡುತ್ತಾರೆ. ನನಗೋ ದಿಗಿಲು! ಒಂದೊಂದೇ ಪುಸ್ತಕದ ಕಪಾಟುಗಳು ಖಾಲಿಯಾದವು (ಕ್ಲೀನ್ ಆದವು.) ಪುಸ್ತಕಗಳ ಸೆಟ್ ಗೀತಾ ಕೊಂಡು ಹೋಗೋದು ಎರಡು ದಿನದಲ್ಲಿ ವಾಪಸ್ ತರುವುದು ನನಗಂತೂ ವಿಚಿತ್ರವಾಗಿ ಕಂಡಿತ್ತು.

ನನ್ನ ಪುಸ್ತಕಗಳು ಮುಗಿದು ಬೇರೆಯವರ ಕೃತಿಗಳು ವಿಮರ್ಶಾ ಗ್ರಂಥಗಳು, ಅಭಿನಂದನಾ ಗ್ರಂಥಗಳು ಹೀಗೆ ಕಪಾಟಿಗೆ ಕಪಾಟೇ
ಮಗುಚಲ್ಪಟ್ಟು ಎಲ್ಲ ಪುಸ್ತಕಗಳು ಹೊರಬಂದವು. ಅಕ್ಷರವನ್ನೇ ಉದ್ಯೋಗವನ್ನಾಗಿಸಿಕೊಂಡ ನನ್ನಂಥವರಿಗೆ ಹೀಗೆ ಯಾರೋ ಒಂದೇ ಸವನೆ ಓದುವವರಿದ್ದಾರೆ ಎಂದರೆ ಅವರ ಕುರಿತು ಅಕ್ಕರೆ ಗೌರವ ಮೂಡದಿರುತ್ತದೆಯೆ? ‘ನಿನ್ನ ಆ ಅಪರೂಪದ ಓದುವ ಅಜ್ಜಿಯನ್ನೊಮ್ಮೆ ನನಗೆ ತೋರಿಸು ಗೀತಾ’ ಎಂದೆ.

ಮರುದಿನ ಗೀತಾ ಬರುವಾಗ ಓರ್ವ ಕೃಶಕಾಯದ ಪುಟ್ಟ ಅಜ್ಜಿಯನ್ನು ಕರೆತಂದಳು. ಬಂದವರೇ ನನ್ನಮ ನೆಯ ಪುಸ್ತಕದ ಕಪಾಟು ಷೋಕೇಸಿನ ಲ್ಲಿರುವ ಪ್ರಶಸ್ತಿ ಸ್ಮರಣಿಕೆ ಇವುಗಳನ್ನೆಲ್ಲ ಮಗುವಿನಂತೆ ಕಣ್ಣರಳಿಸಿ ನೋಡತೊಡಗಿದರು.. ನನ್ನ ಬಾಲ್ಯದಲ್ಲಿ ನಾವು ಓದಿ ಹೇಳುತ್ತಿದ್ದ ಅಪಾರ ಆಸಕ್ತಿಯಿಂದ ಕೇಳುತ್ತಿದ್ದ ಅಜ್ಜಿಯರು ನೆನಪಾದರು.. ಈ ಅಜ್ಜಿ ಕುಂದಾಪುರದವರು ಹೆಸರು ಭವಾನಿ ಅಮ್ಮ, ಕನ್ನಡ ಮಾಧ್ಯಮದಲ್ಲಿ ಓದಿದವರು, ಎಂಬೆಲ್ಲ ವಿವರಗಳನ್ನು ಅವರ ಬಾಯಿಯಿಂದಲೇ ಕೇಳಿ ತಿಳಿದೆ. ನೀವು ಯಾರ್ಯಾರ ಪುಸ್ತಕ ಓದಿದ್ದೀರಿ ಎಂದು ಕೇಳಿದಾಗ ಅಜ್ಜಿ ಕೊಟ್ಟ ಪಟ್ಟಿ ನನಗೆ ಆಶ್ಚರ್ಯವನ್ನು ಉಂಟು ಮಾಡಿತ್ತು.

ನಮ್ಮ ಸಾಹಿತ್ಯದ ಅಧ್ಯಾಪಕರು ಸಹ ಇಷ್ಟು ಕೃತಿಗಳನ್ನು ಓದಿರಲಾರರು. ಎಂ ಕೆ. ಇಂದಿರಾ, ವಾಣಿ ಮೊದಲಾದ ಮಹಿಳೆಯರ ಕೃತಿಗಳನ್ನು
ಹಿಡಿದು ಕಾರಂತರು ಅಡಿಗರು ಮೊದಲಾದವರ ಕೃತಿಗಳನ್ನು ಅಜ್ಜಿ ಹೆಸರಿಸಿದಾಗ ನನಗೆ ರೋಮಾಂಚನವಾದಂತೆ ಆಯಿತು. ‘ನಿಮ್ಮ ಪುಸ್ತಕಗಳನ್ನು ಓದುವ ತನಕ ಹಾಸ್ಯ ಸಾಹಿತ್ಯ ನನಗೆ ಪರಿಚಯವೇ ಇರಲಿಲ್ಲ. ನಿಮ್ಮದೊಂದು ಪುಸ್ತಕವನ್ನು ಸಹಿ ಹಾಕಿ ಕೊಡಿ’ ಎಂದು ಅಜ್ಜಿ ಕೇಳಿದಾಗ ನನಗೆ ಕಣ್ತುಂಬಿ ಬಂತು.

ನಮ್ಮ ಹಳೆಯ ತಲೆಮಾರು ಈ ಬಗೆಯಲ್ಲಿ ಅಕ್ಷರ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಕಾರಣಕ್ಕಾಗಿ ನನಗೆ ಗೌರವ. ತಮ್ಮ ವೃದ್ಧಾಪ್ಯವನ್ನು ಲೆಕ್ಕಿಸದೆ ಪುಸ್ತಕವನ್ನು ಓದುವ ಸುಖವನ್ನು ಅನುಭವಿಸುತ್ತಿರುವ ಈ ವೃದ್ಧೆಗೆ ನನ್ನ ನಮನಗಳನ್ನು ಸಲ್ಲಿಸಿ ನನ್ನ ಸ್ವಂತ ಕೃತಿಯ ಸಹಿ ಹಾಕಿದ ಪ್ರತಿಯೊಂದನ್ನು ಅವರ ಕೈಗಿಟ್ಟು ನಮಸ್ಕರಿಸಿದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: