ಭುವನೇಶ್ವರಿ ಹೆಗಡೆ ಅಂಕಣ- ʼನಂಬಿಕೆಗಿಂತ ಬೇರೆ ಬಲವುಂಟೆ ಡಾಕ್ಟ್ರೆ?ʼ

26

ಅಷ್ಟರಲ್ಲಿ ಇಡೀ ಕುಟುಂಬಕ್ಕೆ ಸಂಬಂಧ ಪಟ್ಟ ಎಲ್ಲ ವಿವರಗಳನ್ನು ಅಕ್ಷರಗಳಲ್ಲಿ ಬರೆದು ನೀಡಬಲ್ಲ ಏಕೈಕ ಲಿಪಿಕಾರ್ತಿಯಾದ ನನ್ನ ತಂಗಿ ಸುಮಾರು ಹದಿಮೂರು ಬಾಟಲಿಗಳನ್ನು ತುಂಬಿದ ಚೀಲವೊಂದನ್ನು ತಂದು ನನ್ನ ಕೈಗಿತ್ತಳು. ‘ಸದರಿ ಬಾಟಲಿಗಳ ಮೇಲೆ ಹೆಸರು ಅಂಟಿಸಿದವರಿಗೆ ಆಗುತ್ತಿರುವ ರೋಗ ಲಕ್ಷಣಗಳನ್ನು ಈ ಚೀಟಿಲ್ಲಿ ಬರೆದಿದ್ದೇನೆ’ ಎಂದು ಫುಲ್‌ಸ್ಕೇಪ್ ಹಾಳೆಗಳ ಒಂದು ಕಟ್ಟನ್ನೂ ಕೈಗಿತ್ತಳು. ‘ಕಾದಂಬರಿ ಪ್ರಕಾರವೊಂದನ್ನೇ ಓದುವ ಅಭ್ಯಾಸ ಇಟ್ಕೋಬೇಡ ಅಂತ ಇದಕ್ಕೇ ಹೇಳೋದು. ಕಾಯಿಲೆ ಚೀಟೀನ ಯಾರಾದ್ರೂ ಇಷ್ಟಿಷ್ಟುದ್ದ ಫುಲ್‌ಸ್ಕೇಪ್ ಹಾಳೆ ತುಂಬಾ ಬರೀತಾರೇನೆ?’ ಎಂದೆ ತಂಗಿಗೆ.

“ಇಲ್ಲ ಕಣೆ. ಹೊಸ ಡಾಕ್ಟು್ರು ನಿಮ್ಮ ರೋಗ ಲಕ್ಷಣಗಳನ್ನು ವಿವರವಾಗಿ ತಿಳಿಸಿದಷ್ಟೂ ನಮ್ಮ ಡಯಾಗ್ನೆಸ್‌ನ ಖಚಿತತೆ ಹೆಚ್ಚಿ ನಾವು ಕೊಡುವ ಔಷಧಿ ಬೇಗ ಕೆಲಸ ಮಾಡುತ್ತದೆಂದು ಹೇಳ್ತಾರೆ. ಕಳೆದ ಬಾರಿ ಶೀತವಾದಾಗ ಹೋದನನ್ನಲ್ಲಿ ಅವರು ಕೇಳಿದ ದೀರ್ಘ ಪ್ರಶ್ನಾವಳಿಯನ್ನೇ ಆಧಾರವಾಗಿಟ್ಟುಕೊಂಡು ನಾನೀ ವಿವರಣೆ ಬರೆದಿದ್ದೇನೆ” ಎಂದಳು.

ನನಗೆ ಗೊತ್ತಿದ್ದ ಹಾಗೆ ನಮ್ಮ ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗ್ರಾಮಾಂತರ ಸೇವೆಗಾಗಿ ಬಂದಿರೋ ಯಾವ ಎಂ.ಡಿ ಸರ್ಜನ್‌ಗಳೂ ಜನಾದರಗಳಿಸಿದ ದಾಖಲೆ ಇಲ್ಲ. ಅವರುಗಳು ಮಾತೆತ್ತಿದರೆ ಕೊಡುವ ಇಂಜಕ್ಷನ್‌ಗಳು, ಮೆಡಿಕಲ್ ಶಾಪಿಗೆ ಬರೆದುಕೊಡುವ ಗುಳಿಗೆಗಳ ಸರಮಾಲೆಗಳು… ಚುಟುಕಾಗಿಡಾಕ್ಟರ ಗತ್ತಿನಲ್ಲಿ ಮಾತನಾಡಿ ರೋಗಿಗಳನ್ನು ಹೊರಕಳಿಸುವ ಅವರ ಸ್ಟ್ಯಾಂಡರ್ಡ್   ನಡೆವಳಿಕೆಗಳು..ಇವ್ಯಾವುದೂ ನಮ್ಮ ಹಳ್ಳಿಯ ಜನರಿಗೆ ಮಿಕ್ಸ್ಚರ್ ಕೊಡುವ ಸಾಂತ್ವನವನ್ನು ನೀಡಿದ್ದಿಲ್ಲ. ಹಾಗಾಗಿಯೇ ಅಲ್ಲಿಗೆ ಬರುವ ಡಾಕ್ಟರುಗಳೆಲ್ಲತಿಂಗಳುಗಟ್ಟಲೆ ರಜೆ ಹಾಕಿ, ಹಾಗೂ ಹೀಗೂ ವರ್ಷ ಪೂರೈಸಿ ಟ್ರಾನ್ಸ್ಫರ್ ಮಾಡಿಸಿಕೊಳ್ಳುವುದೇ ಹೆಚ್ಚು. ಇದ್ದರೂ ಜನರ ಬಾಯಲ್ಲಿ ಈ ಡಾಕ್ಟರು ಏನೂ ಸುಖವಿಲ್ಲ ಎಂಬ ಬಿರುದೇ ಗತಿ. 

ಈ ಥರಾ ಬಾಟಲಿ ತರ ಹೇಳುವ ಹೊಸ ಡಾಕ್ಟರು ಹೇಗಿರಬಹುದಪ್ಪಾ ಎಂದು ಕುತೂಹಲದಲ್ಲ ತಂಗಿ ಕೈಗಿತ್ತ ಚೀಟಿಗಳ ಮೇಲೆ ಕಣ್ನಾಡಿಸಿದೆ.

ಬಾಟ್ಲಿ ನಂ. ೧ :ಹೆಸರು ಗೋದತ್ತೆ. ವಯಸ್ಸು-೬೦.  ಕೆಲಸ-ಅಡುಗೆ ಮಾಡುವುದು. ಬೇರೆಯವರಿಗೆ ಸಲಹೆ ಕೊಡುವುದು. ಕಾಯಿಲೆಯ ಲಕ್ಷಣ-
ಇಂಥದ್ದೆಂದು ಹೇಳಲಾಗದ ಕೊನೆಗಾಲಕ್ಕೇ ಬಂದಿದ್ದೆಂದು ತೋರುವ ಮೈ- ಕೈ ಕೀಲು-ಕಾಲುಗಳ ನೋವು. ಚಟ-ಎಲೆ ಅಡಿಕೆ ಮಾತ್ರ.

ಬಾಟ್ಲಿ ನಂ. ೨: ಹೆಸರು-ಪಿಲ್ಟು, ವಯಸ್ಸು-೩. ಕೆಲಸ-ಇಡೀ ಮನೆಯನ್ನು ಧೂಳೀಪಟ ಮಾಡುವುದು. ಹಿರಿಯರೆಂಬ ರಾಕ್ಷಸ ಯಾ ರಕ್ಷಕರು ಎಳೆದೆಳೆದು ಬಿಟ್ಟಾಗ ರಂಪಾಟ ಮಾಡುವುದು. ಕಾಯಿಲೆಯ ಲಕ್ಷಣ–ಅನ್ನ ಕಂಡರೆ ವಾಕರಿಕೆ. ಬಿಸ್ಕತ್ತು ಚಾಕಲೇಟುಗಳಿಗೆ ಸದಾ ಬೇಡಿಕೆ. ಒಬ್ಬೊಬ್ಬರ ಬಳಿ ಇರುವಾಗ ಒಂದೊಂದು ಥರದ ಕಾಯಿಲೆ. ಉದಾ: ತಾಯಿ ಕಂಡ್ರೆ ತಲೆಬೇನೆ.ಚಟ ಎಂಬ ಕಾಲಮ್ಮನ್ನು ಅವಳು ಹಾಗೇ ಬಿಟ್ಟಿದ್ದಳು. ನಾನು ಅದನ್ನುಚಟ-ಹಠ ಎಂದಷ್ಟೇ ಬರೆದು ಪೂರ್ತಿಗೊಳಿಸಿದೆ.

ಬಾಟ್ಲ ನಂ. ೩ : ಹೆಸರು-ರಂಗರಾಜು (ಎಲ್ಲರೂ ಕರೆಯುವುದು ಮಂಗ್ರಾಜು) ವಯಸ್ಸು-೨೦. ವಿದ್ಯಾರ್ಥಿ. ಕೆಲಸ-ಬೆಳೆಗ್ಗೆ ನಿದ್ದೆ. ಹಗಲು
ಕಾಲೇಜು (ಎಂದು ತೋರುತ್ತದೆ.) ಸಂಜೆ-ಕ್ರಿಕೆಟ್ ಬ್ಯಾಟ್ ಜತೆ ಊರಿಡೀ ಅಲೆತ. ರಾತ್ರಿ ಅನಂತ ಕಾಲದವರೆಗೆ ಟಿ.ವಿ. ವೀಕ್ಷಣೆ. ಕಾಯಿಲೆಯ ಲಕ್ಷಣ- ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದ ದಿನದಿಂದ ಮೈನಡುಕ, ಜ್ವರ, ಊಟಸೇರದಿರುವಿಕೆ  ಇತ್ಯಾದಿ. ಚಟ-ರಬ್ಬರ್ ರೂಪೀ ಅಂಟು ಪದಾರ್ಥವೊಂದನ್ನು ಸದಾ ಬಾಯಲ್ಲಿಟ್ಟು ಜಗಿಯುತ್ತಾ ಜಗತ್ತಿನತ್ತ ದಿವ್ಯ ನಿರ್ಲಕ್ಷ್ಯದ ನೋಟಹರಿಸುವುದು.

ಬಾಟ್ಲಿ ನಂ. ೪: ಹೆಸರು-ಕುಸುಮಾ. ವಯಸ್ಸು-೨೨ ಡಿಗ್ರಿ ಮುಗಿದಿದೆ. ಕೆಲಸ-ಕತೆ ಕವಿತೆ ಬರೆಯುವುದು. ಪೋಸ್ಟಿಗೆ ಹಾಕುವುದು. ಚಿತ್ರಗೀತೆ
ಕೇಳುವುದು.  ಧಾರಾವಾಹಿ ನೋಡುವುದು ಕಾಯಿಲೆಯ ಲಕ್ಷಣ-ಕನಸು ಕಾಣುವುದು. ಹೊಸಕತೆ ಬರೆದೆನೆಂದು ಕುಣಿಯುವುದು ಅದು ಸಂಪಾದಕರಿಂದ ವಾಪಾಸ್ ಬಂದಾಗ ಅಳುವುದು. ಹೀಗೆ ದೀರ್ಘ ಪ್ರವರ ಪೂರಿತ ಬಾಟಲಿಗಳು. ಇದು ಕಾಯಿಲೆಯ ಕಥೆಯಲ್ಲ ಕಾದಂಬರಿ ಎನ್ನುತ್ತಲೇ ಮೆಟ್ಟಿಲಿಳಿದೆ. ಅಂತೂ ದಾರಿಯುದ್ದಕ್ಕೂ ಗುಜರಿಯವರ ಹಾಗೆ ಸಪ್ಪಳ ಮಾಡುತ್ತಿದ್ದ ಬಾಟಲಿಗಳ ಚೀಲವನ್ನು ಟಣ ಟಣಾಯಿಸುತ್ತಾ ಆಸ್ಪತ್ರೆಗೆ ಹೋಗಿ ಮುಟ್ಟಿದೆ. ನನ್ನ ಹಿಂದೆಯೇ ಪಾತ್ರೆಗೆ ಕಲಾಯಿ ಹಾಕುವವರ ಹಾಗೆ ಸಪ್ಪಳ ಮಾಡುತ್ತಾ ಬಾಟಲಿ ಚೀಲವೊಂದು ಬರುತ್ತಿತ್ತು.  ಅವರ ಮನೆಯಲ್ಲೂ ಸಾಮೂಹಿಕ ರೋಗಗಳ ಕಥೆ ಎನಿಸಿತು. ಆಸ್ಪತ್ರೆ ಪ್ರವೇಶಿಸಿ ನೋಡಿದಾಗ ಕಿಕ್ಕಿರಿದ ರೋಗಿಗಳು. ಬಾಟಲಿಗಳು. ಹೆಚ್ಚಿನವರು ನನ್ನ ಹಾಗೆ ಶೀತ ಪೀಡಿತರು.

ಸೊರ ಸೊರ ಸಪ್ಪಳ ಮಾಡುತ್ತಾ ಕುಳಿತಿದ್ದರು. ಬೆಂಚ್‌ಫುಲ್ ಆಗಿದ್ದ ಹಾಲಿನಲ್ಲಿ ಕಾಲಿಂಚು ಜಾಗ ಪಡೆದು ನನ್ನ ಬಾಟಲಿಗಳನ್ನು ನೆಲಕ್ಕಿಟ್ಟು ಕುಳಿತೆ. ಹಾಲಿನಲ್ಲಿರುವ ಗೋಡೆಗೆ ಒಂದು ಕಾಂಪೌಂಡರ್  ಕಿಂಡಿ ಮತ್ತು ಅದರಾಚೆಯಿಂದ ಆಗಾಗ ಬಾಟಲಿಗಳ ಸಪ್ಪಳ.ನಲ್ಲಿ ನೀರು ಬಿಟ್ಟಂತಹ ಸಪ್ಪಳ ಕೇಳಿಬರುತ್ತಿತ್ತು. ರೋಗಿಗಳನ್ನು ಬ್ಯಾಚುಬ್ಯಾಚಾಗಿ ಒಳಬಿಟ್ಟು ಮತ್ತೆ ಬಾಗಿಲು ಹಾಕುವ ಕೆಲಸಕ್ಕಾಗಿ ಒಬ್ಬ ಹುಡುಗಬಾಗಿಲಲ್ಲಿ ನಿಂತಿದ್ದ. ನಾನು ಹೋಗುವಷ್ಟರಲ್ಲಿ ಒಂದು ಬ್ಯಾಚ್ ರೋಗಿಗಳು ಒಳರೂಮಿಗೆ ಪ್ರಮೋಷನ್ ಪಡೆದು ಹೋಗಿದ್ದರಿಂದ ಔಷಧಿ ಪಡೆದು ಹೊರಬೀಳುವುದು ಮಾತ್ರ ಕಾಣುತ್ತಿತ್ತು.

ಅಷ್ಟರಲ್ಲಿ ಕಾಂಪೌಂಡರ್ ಕಿಂಡಿಯಲ್ಲಿ ಒಂದು ತಲೆ ಮಾತ್ರ ಗೋಚರಿಸಿ ಅದು ಈಚೆ ಕುಳಿತ ಜನರ ಜತೆ ಸಹಾನು ಭೂತಿಯಿಂದ ಕಿಂಡಿ ಸಂಭಾಷಣೆ ನಡೆಸತೊಡಗಿತು. “ಪಟೇಲರೇ ಗಡಿಬಿಡಿ ಏನಿಲ್ಲ ತಾನೆ? ಇವತ್ತು ಕಂಡಾಬಟ್ಟೆ ರಶ್ಯು ಮಾರಾಯ್ರೆ.”

“ಓ ಲಕ್ಷ್ಮಕ್ಕ! ನಿಮ್ಮನೆ ಮಾಣಿ ಪರೀಕ್ಷೆ ಮುಗಿಸಿ ಬಂದ್ನಾ? ದೊಡ್ಡವರನ್ನ ಕಂಡ್ರೆ ಈಗ್ಲೂ ಹಂಗೇ ಮಾಡ್ತಾನಾ?”

“ದ್ಯಾವಾ ಏನಂತೈತಿ ನಿಮ್ಮ ಜರ್ಸಿ ಹಸು….?”….

ಮೊದಲಾಗಿ ಅಲ್ಲಿಂದಲೇ ಪ್ರಶ್ನಾವಳಿ ಹರಿಸಿ ಉತ್ತರ ಪಡೆಯುತ್ತಿದ್ದ ಆ ತಲೆ ಡಾಕ್ಟರರದ್ದೇ ಆಗಿರಬಹುದೆಂದು ಮೊದಲು ನನಗೆ ಅಂದಾಜಾಗಲಿಲ್ಲ.
ಆದರೆ ಕಾಯುವಿಕೆಯಲ್ಲಿ ತಾಳ್ಮೆಗೆಟ್ಟ ರೋಗಿಗಳಲ್ಲಿ ಆಗ ಹೊರಬಿದ್ದ ಒಂದು ಬಗೆಯ ನಿಟ್ಟುಸಿರಿನ ಸಪ್ಪಳ, “ದೇವ್ರಂಥಾ ಜನ ಕಣ್ರೀ” ಎಂಬ ಉದ್ಗಾರಗಳನ್ನು ಕೇಳಿದಾಗಲೇ ಆ ಕಿಂಡಿಯಲ್ಲಿ ಗೋಚರಿಸಿ ಮಾಯಾವಾದ ವ್ಯಕ್ತಿಯೇ ಹೊಸಡಾಕ್ಟರು ಎಂದು ಗೊತ್ತಾಗಿ ಹೋಯ್ತು. ಕೆಲವು ರೋಗಿಗಳಂತೂ ಆ ಕಿಂಡಿದರ್ಶನದಲ್ಲೇ ಅರ್ಧ ಗೆಲುವಾಗಿಬಿಟ್ಟಂತೆ ತೋರಿತು. 

ನನ್ನ ಸರದಿ ಬಂದು ಒಳ ಹೋದಾಗ ನನ್ನ ಕಣ್ಣಿಗೆ ಪೂರ್ತಿ ಗೋಚರಿಸಿದ ವ್ಯಕ್ತಿ ಡಾಕ್ಟರರು ಎಂದು ಹೇಳಲಾಗದಷ್ಟು ಸರಳವಾಗಿ ಖಯಾಲಿ ಮನುಷ್ಯನಂತೆ ಕಂಡುಬಂದರು. ಅವರ ಟೇಬಲ್ಲಿನ ಮೇಲೆ ತುಂಬಿಕೊಂಡ ಎಲೆ ಅಡಿಕೆಯಕವಳದ ಬಟ್ಟಲು ಗೋಚರಿಸಿದಾಗಂತೂ ಇವರು ನಮ್ಮ ಹಳ್ಳಿಯ ಜನರಜನಾದರ ಗಳಿಸಿದ ಗುಟ್ಟೇಗೋಚರಿಸಿದಂತಾಯ್ತು. 

ಪ್ರಥಮ ಬಾರಿಗೆ ಭೆಟ್ಟಿಯಾದ್ದರಿಂದ ಇಂಥವರ ಮಗಳು ಇಂಥವರ ಹೆಂಡತಿ ಎಂದೆಲ್ಲ ವಿವರ ಕೊಟ್ಟು ನನ್ನನ್ನು ಪರಿಚಯಿಸಿಕೊಂಡೆ. ಸರಿ ತುಂಬಾ ಸಮಾಧಾನದಲ್ಲಿ ನನ್ನ ವೃತ್ತಿಯ ಬಗೆಗೆ, ಸಂಬಳದ ಬಗೆಗೆ, ವೃತ್ತಿಯಲ್ಲಿನಪಿರಿಪಿರಿ ಕರಕರೆಗಳ ಬಗೆಗೆ ಕೇಳಿದರು. ಮನೆ ಬಾಡಿಗೆ ಹಾಲು ನೀರುಗಳದರ ಕೇಳಿ ಲೊಚ ಲೊಚ ಪಶ್ಚಾತ್ತಾಪ ವ್ಯಕ್ತಪಡಿಸಿದರು. ಪತಿರಾಯರ ಸ್ವಭಾವ,ಮಗಳ ಆರೋಗ್ಯ ಎಲ್ಲವನ್ನೂ ಕೇಳಿ ವಿಚಾರಿಸಿ ತುಂಬ ಕಾಲದಿಂದ ಪರಿಚಿತ ಬಂಧುವಿನಂತೆ- “ಬಹಳ ಟೆನ್‌ಶನ್ ಮಾಡ್ಕೋತೀರಾ ಹೇಗೆ? ಟೆನ್ಶನ್‌ನಿಂದ ಸಹಾ ನೆಗಡಿ ಬರುತ್ತೆ” ಎಂದೆಲ್ಲ ಮಾತನಾಡಿ ನನಗೂ ಅರ್ಧ ಶೀತ ಗುಣವಾದ ಹಾಗೇ ಭಾಸವಾಗತೊಡಗುವಂತೆ ಮಾಡಿದರು.

‘ಏನು ಡಾಕ್ಟ್ರೆ ನಮ್ಮೂರಿನಲ್ಲೇ ಪ್ರಥಮ ಬಾರಿಗೆ ಭಾರೀ ಜನಪ್ರಿಯ ಡಾಕ್ಟರರನ್ನು ನೋಡ್ತಿದೇನೆ. ಏನಿದರ ಗುಟ್ಟು?’ ಎಂದು ಕೇಳಿ ಬಿಟ್ಟೆ. ಡಾಕ್ಟರರುಜೋರಾಗಿ ನಗುತ್ತಾ. ‘ನೋಡಿ, ನಾನು ನಿಮ್ಮೂರ ಜನರ ಜತೆ ಮಿಕ್ಸ್ ಆಗ್ತೀನಿ ಮತ್ತು ಮಿಕ್ಸ್ಚರ್ ಕೊಡ್ತೀನಿ. ಇವೆರಡೂ ಇಲ್ಲದ ಚಿಕಿತ್ಸೆ ನಿಮ್ಮೂರ ಮಟ್ಟಿಗೆ ನಿರರ್ಥಕ ಅಲ್ವೆ?’ ಎನ್ನುತ್ತಾ ನಕ್ಕರು. ‘ಇದು ಹಳ್ಳಿ. ಸಿಟಿಗಳ ಹಾಗೆ ಸ್ಪೆಷಲಿಸ್ಟುಗಳು ಮಾತ್ರ ಗುಣಪಡಿಸಬಹುದಾದ ಕಾಯಿಲೆಗಳು ಇವರಿಗೆ ಬರೋದು ಅಪರೂಪ. ಅಂಥಾ ಘನ ಕಾಯಿಲೆಗಳಿಗೆ ತುತ್ತಾದ ರೋಗಿಗಳನ್ನು ನಾನು ಈಗಲೂ ಸಾಗರ, ಶಿವಮೊಗ್ಗಗಳಿಗೆ ಕಳಿಸ್ತೇನೆ.

ಇಲ್ಲಿಯ ಚಿಲ್ಲರೆ ಕಾಯಿಲೆಗಳಾದ ಸುಳ್ಳೇ ಪಳ್ಳೇ ಕೆಮ್ಮು ಶೀತ ವಾತಗಳೆಲ್ಲ ಔಷಧ ಇಲ್ಲದೆಯೂ ಒಂದು ವಾರದಲ್ಲಿ ಗುಣವಾಗುತ್ತದೆ. ನನ್ನ ಮೃದು ಮಾತು ಖಡಕ್-ಮಿಕ್ಸ್ಚರ್ ಮತ್ತು ಯಾವುದಾದರೊಂದು ಸಾಂತ್ವನಪರ ಗುಳಿಗೆ… ಇವಿಷ್ಟೇ ಸಾಕು ನೋಡ್ರೀ! ಎಂದರು ಆತ್ಮವಿಶ್ವಾಸದ ನಗೆ ಸುರಿಸುತ್ತಾ, ಸಾಂತ್ವನ ಪರ ಗುಳಿಗೆ! ಕೇಳ್ತಿರೋದೆ ಮೊದಲು ಸಾರ್ ಎಂದೆ. ಅದಕ್ಕೆ ವಿಟಾಮಿನ್ ಗುಳಿಗೆ ಅಂತೀವಮ್ಮ ಎಂದು ತುಂಟ ನಗೆ ನಕ್ಕ ಡಾಕ್ಟ್ರು ನೆಕ್ಸ್ಟ್ ಎಂದರು.

ನನ್ನ ಹದಿಮೂರು ಬಾಟಲಿಗಳಿಗೆ ಒಂದೇ ಕ್ಯಾನಿನ ಕೆಂಪು ದ್ರಾವಣವನ್ನು ಕಾಂಪೌಂಡರ್ ತುಂಬಿಸಿದ್ದನ್ನು ಕಂಡೂ ಕಾಣದಂತೆ ನಟಿಸುತ್ತಾ,
“ನಂಬಿಕೆಗಿಂತ ಬೇರೆ ಬಲವುಂಟೆ ಡಾಕ್ಟ್ರೆ?” ಎಂದೆ. ಆ ದ್ರಾವಣ ಕೈ ಕಡಿದು ಗಾಯ ಮಾಡಿಕೊಂಡ ತಮ್ಮ, ಮೈ ಕೈ ನೋವಿನ ಗೋದತ್ತೆ,
ಥಂಡಿಯ ಅಣ್ಣ… ಎಲ್ಲರಿಗೂ ಏಕ ಪ್ರಕಾರದ ಸಾಂತ್ವನ ನೀಡುವ ವಿಚಿತ್ರ ಶಕ್ತಿ ಹೊಂದಿರುವುದನ್ನು ಕಂಡು ಆಗ ‘ಮೂಕವಿಸ್ಮಿತ’ಳಾಗುವುದೊಂದೇ ನನಗೆಸಾಧ್ಯವಾಯ್ತು.

ನಗರದ ಸ್ಪೆಷಲಿಸ್ಟುಗಳ ಕನ್ಸಲ್ಟೇಶನ್ ಫೀಯೆದುರು ತೃಣ ಮಾತ್ರ ಎನ್ನಬಹುದಾದ ಅವರ ಬಿಲ್ಲುಕೊಟ್ಟು ಹೊರಡಲು ದ್ಯುಕ್ತಳಾದವಳಿಗೆ ಡಾಕ್ಟು,
“ಹೋಯ್, ಮೇಡಮ್. ಇನ್ನು ಈ ಮಿಕ್ಸ್ಚರ್ ಮಹಾತ್ಮೇನ ಮನೆಮಂದಿಗೆಲ್ಲ ಹೇಳಿ ನನ್ನ ಪ್ರಾಕ್ಟೀಸು ಮತ್ತು ಅವರ ಸ್ವಾಸ್ಥ್ಯ ಎರಡನ್ನೂ ಕೆಡಿಸೋದಿಲ್ಲ ತಾನೇ?” ಎಂದರು.

“ಛೆ, ಛೆ ಎಲ್ಲಾದ್ರೂ ಉಂಟೆ ಡಾಕ್ಟ್ರೆ? ನನ್ನೂರ ಜನ ಕಡಿಮೆ ಖರ್ಚಿನಲ್ಲಿ ಹೆಚ್ಚು ಆರೋಗ್ಯವಂತರಾಗಿರಬೇಕು ಅಂತ ನನಗೂ ಆಸೆ ಇಲ್ವಾ?”
ಎನ್ನುತ್ತಾ ಖಡಕ್ ಮಿಕ್ಸ್ಚರ್ ತುಂಬಿದ ಬಾಟಲಿಗಳ ಮೂಟೆ ಹೊತ್ತು ಜಾಗ ಖಾಲಿ ಮಾಡಿದೆ. ನನ್ನ ಹಿಂದೆ ಟಣ್ ಟಣಾ ಎನ್ನಿಸುತ್ತ ಬಂದ ಚೀಲದೊಡತಿ ಒಳಗೆ ಹೋಗಿದ್ದನ್ನು ನೋಡಿದೆ. ಮೃದು ಮಾತು. ಖಡಕ್ ಮಿಕ್ಸ್ಚರ್! ಮನೆ ತಲುಪುವಷ್ಟರಲ್ಲಿ ನನಗೂ ಶೀತ ಕಡಿಮೆಯಾದಂತೆ ಭಾಸವಾಗತೊಡಗಿತ್ತು.        

ಈ ಬಾರಿ ಹಳ್ಳಿಗೆ ಹೋದಾಗ ನಮ್ಮೂರಿನಲ್ಲಿಯೇ ನಿವೃತ್ತರಾದ ಬಳಿಕ ನೆಲೆಸಿದ್ದ ಆ ದೇವರಂತಹ ಡಾಕ್ಟ್ರು ತೀರಿಕೊಂಡರು ಎಂಬ ಸುದ್ದಿ ಕೇಳಿ ಆಘಾತವಾಯಿತು. ಒಂದನೆ ಎರಡನೆ ಅಲೆಯಲ್ಲಿ ನೂರಾರು ಶೀತ ಬಾಧಿತ ರೋಗಿಗಳನ್ನು ಮೂರ್ನಾಲ್ಕು ದಿನಗಳಲ್ಲಿ ಗುಣಮಾಡಿ ಕರೋನಾ ಪೇಶೆಂಟ್ಸ್ ಲೆಕ್ಕಕ್ಕೆ ನಮ್ಮೂರ ಜನರು ಸೇರದಂತೆ ಮಾಡಿ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು ಎಂಬುದನ್ನು ಗ್ರಾಮಸ್ಥರು ಹೇಳಿಕೊಂಡು ಮರುಗುತ್ತಿದ್ದರು.              

ಇಂಥ ಡಾಕ್ಟ್ರು ಕೆಲ ತಿಂಗಳ ಹಿಂದೆ ರಾತ್ರಿ ಮಲಗಿದವರು ತಣ್ಣಗೆ ಯಾರಿಗೂ ಹೇಳದೆ ಇಹಲೋಕ ತ್ಯಜಿಸಿದರು ಎಂಬುದನ್ನು ಕೇಳಿ ಈ ಕೊರೋನಾ ಅವಾಂತರವನ್ನು ನೋಡುವುದು ಏಗುವುದು ಅವರ ಪ್ರಾಮಾಣಿಕ ವೃತ್ತಿ ನಿಷ್ಠೆಗೆ ಸಾಧ್ಯವಾಗದೆ ಬೇಡವೇ ಬೇಡ ಎಂದು ಹೊರಟುಬಿಟ್ಟರೋ ಏನೋ ಎಂಬ ಭಾವನೆ ತುಂಬಿಕೊಂಡು ನಮ್ಮ ಮನೆಯಲ್ಲಿದ್ದ ಖಾಲಿ ಬಾಟಲಿಗಳನ್ನು ನೋಡುತ್ತಾ ನಿಡುಸುಯ್ಯುವ ಸರದಿ  ನನ್ನದಾಯಿತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

January 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: