ಭುವನಾ ಎಂಬ ಈ ಕವಯಿತ್ರಿ ಕಾವ್ಯ ಲೋಕದಲ್ಲಿ ಸಾಕಷ್ಟು ದೂರ ನಡೆಯಬಲ್ಲವಳು..

“ಟ್ರಯಲ್ ರೂಮಿನ ಅಪ್ಸರೆಯರು”

ಆಶಾ ಜಗದೀಶ್ 

“ಕಡಲ ತಡಿಗೂ ಆಲಿಂಗನಕ್ಕೂ ಸಮತ್ವದ ನೆರಳಿದೆ”

ಎಂದು ವಿನೀತವಾಗಿ ಬರೆಯುವ ಭುವನಾರ ಕವಿತೆಗಳು ಅದೇ ಲಯದಲ್ಲಿ ಹುಟ್ಟುವುದನ್ನು ಕಾಣಬಹುದು. ಇಲ್ಲಿನ ಕವಿತೆಗಳು ನೇರ ದಿಟ್ಟ ನಿರಂತರ… ಒಂಟಿ ತೀರದ ನಡಿಗೆಗೆ ಜೊತೆಯಾದ ಕಡಲ ಮಾರ್ದವತೆ ಇಲ್ಲಿನ ಎಲ್ಲಾ ಕವಿತೆಗಳಲ್ಲೂ ಮೆಲೋಡ್ರಾಮಾದ ರೀತಿ ಮೊರೆಯುತ್ತಾ ತನ್ನ ಹ್ಯಾಂಗೋವರಿಗೆ ಕೆಡವಿಕೊಂಡುಬಿಡುತ್ತವೆ.

ಸಂಕಲನದ ಅರಿಕೆಯನ್ನು ಓದಿದಾಕ್ಷಣವೇ ಅವಳೆಲ್ಲ ಪದ್ಯಗಳ ಅಷ್ಟೂ ಸಾಲುಗಳು ಒಮ್ಮೆ ಕಣ್ಣ ಮುಂದೆ ಬಂದು ಹಾದು ಹೋದವು. ತೀವ್ರ ಭಾವುಕ ಅಳುವೋ ಖುಷಿಯೋ ಅಥವಾ ಎರೆಡೂ ಅಲ್ಲದ ಏನೋ ಒಂದು ಗಂಟಲಲ್ಲಿ ಒತ್ತಿ ಕೂತಿತು. ಒಂದಷ್ಟು ಹೊತ್ತು ಬೇಕಾಯ್ತು ಸಾವರಿಸಿಕೊಳ್ಳಲು.

ಚಿಟ್ಟೆಯಂತೆ ಕನಸ ಪಾದವೂ
ಹೂವ ಧೂಳಿನಲ್ಲಿ ಪವಿತ್ರವಾಗಬಹುದು
(ನೀಲಿ ಚಿಟ್ಟೆಯ ಪಾದದ ಧೂಳು)

ಎಂದು ನಂಬಬೇಕೆನಿಸುತ್ತದೆ. ದೃಢವಾಗಿ ಉಸುರುವ ಸಾಲುಗಳು ನಂಬಿಕೆ ಹುಟ್ಟಿಸುತ್ತವೆ.

ಹೆಣ್ಣಿನ ಅಸ್ಮಿತೆಯ ಪ್ರಶ್ನೆ ಎತ್ತುವ “ಟ್ರಯಲ್ ರೂಮಿನ ಅಪ್ಸರೆಯರು” ಅವಳ ಸ್ಪಷ್ಟ ಧ್ವನಿಯ ಉಲ್ಲೇಖ.

ಒಂದು ಹದಕ್ಕೆ ತಂದಿದ್ದೇನೆ 
ಅವನನ್ನು
ಎಷ್ಟು ದಿನ ಅವನ ಹದಕ್ಕೆ ನಾನು ?

ಎಂದು ಕೇಳುತ್ತಾ ಹೋಗುವ ತುಸು ಬಂಡಾಯದ “ಕುಪ್ಪಸಗಳ ಅಂತರಂಗ” ಕವಿತೆ ಪುರುಷ ದೃಷ್ಟಿಯನ್ನು ಚಿತ್ರಿಸುತ್ತಾ ಹತಾಶ ಭಾವಕ್ಕೆ ಹೊರಳಿದರೆ “ಒಂದು ಹದಕ್ಕೆ ತಂದಿದ್ದೇನೆ” ಎನ್ನುವ ಕವಿತೆ ಪುರೋಗಾಮಿ ಕಾಮ ವ್ಯವಸ್ಥೆಯನ್ನು ಒಡೆದು, ಇಷ್ಟು ದಿನದ್ದು ಆಯಿತು ಈಗಲಾದರೂ ತಾನೊಂದೆರೆಡು ಹೆಜ್ಜೆ ಮುಂದಿಡಬಹುದಲ್ಲ ಎಂದು ಕೇಳುವ ಮಾತಲ್ಲಿ ಅಹಂಕಾರವಿಲ್ಲ.

“ನಮ್ಮಿಬ್ಬರ ಮಧ್ಯೆ ಒಂದು ಝರಿಯೂ ಹರಿದಿಲ್ಲ”, “ಸಂಬಂಧಗಳೆಂಬ ಅಲಂಕೃತ ಸತ್ಯಗಳು”, “ಆತ್ಮಗಳ ಮೈಮಾಟವನ್ನು ತಿದ್ದಲಾರೆವು ನಾವು”… ಇನ್ನೂ ಹಲವು ಓದಲು ಬೆನ್ನಟ್ಟುವ ಸಾಲುಗಳ ಪಡೆಯೇ ಇದೆ ಈ ಸಂಕಲನದಲ್ಲಿ.

ಖಾಲಿ ಹೊಟ್ಟೆಗಳ ನಾದ, ನಿರ್ಲಕ್ಷ್ಯವೇ ನಿಯಮ, ನೀಲಿ ಚಕ್ರಕ್ಕೆ ಕಾಲಿರಬೇಕಿತ್ತು, ಗೊರ್ಲಕ್ಕಿಯ ಪಾದ ಮತ್ತು ಹಸಿವು, ತವರೂರ ಹಾದೆಲ್ಲ ಹುರಿಗೆಜ್ಜೆ… ಇತ್ಯಾದಿ ಭಿನ್ನ ನೆಲೆಯ ಕವಿತೆಗಳು ಸಂಕಲನದ ಮಿತಿಯನ್ನು ಮೀರಲು ಯತ್ನಿಸುತ್ತವೆ.

ಇಲ್ಲಿನ ಅಪ್ಸರೆ ಇಂದಿನ ಅತ್ಯಾಧುನಿಕ ಪ್ರಪಂಚದ ರಾಯಭಾರಿ. ಯುವ ಮನಸ್ಸು ಯಾವ ದಿಕ್ಕಿನತ್ತ ತುಡಿಯುತ್ತಿದೆ ಎನ್ನುವಲ್ಲಿಂದ ವಯೋಮಾನ ಸಹಜ ಭಾವಗಳು ತಮ್ಮದೊಂದು ಸ್ಫುಟ ದಾಖಲೆಗೆ ಜಾಗ ಸಿಕ್ಕ ಖುಷಿಯಲ್ಲಿ ಮತ್ತಷ್ಟು ಕವಿತೆಗಳ ಹುಟ್ಟಿಗೆ ಎದೆ ಕೊಡಬಲ್ಲವು ಎನ್ನಲ್ಲಿಯವರೆಗೂ ಇವು ಇಂದಿನ ಈ ಕ್ಷಣದ ತಾಜಾ ಕವಿತೆಗಳು. ಭುವನಾಗೆ ತನ್ನದೇ ಆದ ಕವಿತೆ ಕಟ್ಟುವ ಶೈಲಿಯಿದೆ ಎನ್ನುವುದೂ ಸಹ ಖುಷಿಯ ವಿಚಾರ.

ವಸ್ತು ವೈವಿಧ್ಯತೆಯ ದೃಷ್ಟಿಯಿಂದ ಏಕಪಕ್ಷೀಯವಾಗಿ ಕಾಣುವ ಇಲ್ಲಿನ ಕವಿತೆಗಳು ಇನ್ನಷ್ಟು ವೈವೀಧ್ಯತೆಗೆ ತೆರೆದುಕೊಳ್ಳಬಹುದು. ಓದಿನ ಸಲಿಲತೆಯ ದೃಷ್ಟಿಯಿಂದ ಈ ರೀತಿ ಆಗಿದ್ದರೆ ಅದು  ಸ್ವಾಗತಾರ್ಹ. ಅಷ್ಟಕ್ಕೂ ಯಾವ ಹಂತದಲ್ಲಿ ಯಾವುದು ನಮ್ಮನ್ನು ಹೆಚ್ಚು ಕಾಡುತ್ತದೋ ಅದೇ ಕವಿತೆಯಾಗಬೇಕು. ಮತ್ತು ಪ್ರೇಮ ಕಾಮ ಕಾಡದ ಮನುಷ್ಯ ಮನುಷ್ಯನೂ ಹೇಗಾಗಬಲ್ಲ.

ಭುವನಾಳ ಓದಿನ ವೈವಿಧ್ಯತೆ ಅವಳ ಕವಿತೆ ಕಟ್ಟುವಲ್ಲಿನ ನಿಖರತೆಯ ಹಿಂದೆ ನೆರಳು ಚೆಲ್ಲುತ್ತದೆಯೇ ಹೊರತು ಅವಳ ಕವಿತೆಗಳಲ್ಲಿ ಯಾವ ಛಾಯೆಯು ಕಾಣುವುದಿಲ್ಲ ಎನ್ನುವುದೊಂದು ಖುಷಿಯ ಸಂಗತಿ.

ಮಹಿಳಾ ಕಾವ್ಯ ಇಂದು ಪಡೆಯುತ್ತಿರುವ ಗಮನಾರ್ಹ ಸ್ಥಿತ್ಯಂತರ ಬಹಳ ಆಶಾದಾಯಕವಾಗಿದೆ ಮತ್ತು ಒಂದು ಮಟ್ಟಿಗಿನ ಮುಕ್ತತೆಯೂ ಸಾಧ್ಯವಾಗಿದೆ ನಿಜ. ಆದರೆ ಅದು ಯಾರೂ ನಿರ್ಮಿಸಿಕೊಟ್ಟದ್ದಲ್ಲ. ಹೆಣ್ಣೊಬ್ಬಳು ಯಾವೆಲ್ಲ ಹಿಂಜರಿಕೆಯಿಟ್ಟುಕೊಂಡು ಈ ಮುಕ್ತತೆಯನ್ನು ಆವಾಹಿಸಿಕೊಳ್ಳಬೇಕಾಗುತ್ತದೆಯೆನ್ನುವ ಎಚ್ಚರದಲ್ಲಿ ಟ್ರಯಲ್ ರೂಮಿನ ಅಪ್ಸರೆಯನ್ನು ಅಪ್ಪಿಕೊಳ್ಳಬೇಕಾಗುತ್ತದೆ. ಪಾಶ್ಚಿಮಾತ್ಯ ಮಹಿಳಾ ಲೇಖಕಿಯರ ಮುಕ್ತ ಬರಹವನ್ನು ಕಂಡು ಬೆರಗುಗೊಳ್ಳುವ ಸಮಯದಲ್ಲೇ ನಮ್ಮ ನೆಲದ ಹೆಣ್ಣುಮಗಳ ಮುಕ್ತ ಬರಹವನ್ನು ಅನುಮಾನಿಸುವ ಈ ಹೊತ್ತಿನಲ್ಲಿ ಅದನ್ನು ಮೀರಿ ಹೊಸ ದಾರಿ ನಿರ್ಮಿಸುವ ಹಾಗೆ ಬರೆದ ಹಲವರನ್ನು ನಾವಿಲ್ಲಿ ನೆನೆಯಬಹುದು.

ಆ ಸಾಲಿನಲ್ಲೀಗ ಭುವನ ತನ್ನ ಅಪ್ಸರೆಯನ್ನು ಹಿಡಿದು ನಿಂತಿದ್ದಾಳೆ. ಲೇಖಕಿಯನ್ನು ಬದಿಗಿಟ್ಟು ಚರ್ಚಿಸಬಹುದಾದ ಪುಸ್ತಕವಿದು. ಮಹಿಳೆ ಬರೆದ ಪುಸ್ತಕ ಎನ್ನುವ ಕಾರಣಕ್ಕೆ ಸ್ತ್ರೀವಾದಿ ನೆಲೆಯ ಐನಕ ತೊಟ್ಟಲ್ಲದೇ ಬಹುಸಾಧ್ಯತೆಗಳ ನೆಲೆಯಲ್ಲಿ ಈ ಕೃತಿಯನ್ನು ನೋಡಬಹುದು. ಭುವನಾಳ ರೂಪಕ ಕಟ್ಟುವ ಕುಶಲತೆ ಮೊದಲ ಪುಸ್ತಕ ಎನ್ನುವ ಎಲ್ಲ ಮುಲಾಜನ್ನೂ ಕಿತ್ತೊಗೆಯುತ್ತದೆ. ಮುಂದಿನ ಅವಳ ಬರಹದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನೂ ಹುಟ್ಟಿಸುತ್ತದೆ. ಅವಳ ಬೇಗುದಿ ಪೊರೆ ಕಳಚಿ ಬಂದಾಗಲಾದರೂ ಆನಂದಿಸುವ ಮನಸ್ಥಿತಿಗಿಂತ ಅರ್ಥೈಸಿಕೊಳ್ಳುವ ಸಾಂತ್ವನಿಸುವ ಸಮತೂಕದ ಆದರಣೆ ಬೇಕು.

ಈ ಕವಯಿತ್ರಿ ಕಾವ್ಯ ಲೋಕದಲ್ಲಿ ಸಾಕಷ್ಟು ದೂರ ನಡೆಯಬಲ್ಲವಳು.

ಸಂಕೀರ್ಣತೆ, ಮುಕ್ತ ವಿವರಗಳು ಮತ್ತು ಕಂಗ್ಲೀಶ್ ಇಲ್ಲಿನ ಕವಿತೆಗಳ ಲಕ್ಷಣ. ಮೂರ್ತ ಪರಿಕರಗಳಿಂದ ಅಮೂರ್ತವನ್ನು ಚಿತ್ರಿಸುವ ಇಲ್ಲಿನ ಕವಿತೆಗಳು  ಪುನಾರಾವರ್ತಿತ ಮತ್ತು ಧ್ಯಾನಸ್ಥ ಓದನ್ನು ಬಯಸುತ್ತವೆ. ಶುರುವಿಂದ ಕೊನೆಗೆ ಬರೆಯಬೇಕೆಂದಿದ್ದನ್ನು ಬ್ಲೆಂಡ್ ಮಾಡುವ ಭುವನಾಳ ಶೈಲಿ ಇಷ್ಟವಾಗುತ್ತದೆ. ತೀವ್ರವಾಗಿ ತಾಕುವ ಕವಿತೆಗಳು ಮನಸಿಂದ ಮರೆಯಾಗಲು ಬಹಳ ಸಮಯವನ್ನೇ ತೆಗೆದುಕೊಳ್ಳುತ್ತವೆ. ಕೆಲ ಜಾಗಗಳಲ್ಲಿ ಕವಿತೆಗಳು ಬೆಚ್ಚಗಾಗಿಸುವಷ್ಟು ಸುಲಭವಾಗಿ ಬೆವರ ಕೀಳಿಸುವುದಿಲ್ಲ.

ಇಂದಿನ ದಿನಗಳಲ್ಲಿ ಬಳಸುವ ಭಾಷೆಯೇ ಬರಹದ ಭಾಷೆಯೂ ಆಗಿರುವುದರಿಂದ ಕಂಗ್ಲೀಷನ್ನೂ ಎಲ್ಲರೂ ಒಪ್ಪಿದ್ದಾಗಿದೆ. ಆದರೆ ಬಲವಂತದ ನುಸುಳುವಿಕೆ ತನ್ನುಪಸ್ಥಿಯಿಂದಲೂ ಬಯಸಿದ ಪರಿಣಾಮವನ್ನುಂಟು ಮಾಡದೆ ಕವಿತೆಯನ್ನು ಶುಷ್ಕಗೊಳಿಸಿ ಬಲಹೀನಗೊಳಿಸಬಹುದು. ಪ್ರಯೋಗಾತ್ಮಕ ದೃಷ್ಟಿಯಿಂದ ಸ್ವೀಕರಿಸಬಹುದಾದರೂ ಏಕತಾನವೆನಿಸತೊಡಗಿದರೆ ಕವಿತೆ ತಾನಾಗಿ ಉಳಿಯಲಾರದು.

ಸಂಕಿರ್ಣತೆಯೂ ಕೆಲವೊಮ್ಮೆ ಕವಿತೆಗೆ ಮುಳುವಾಗಬಹುದು. ಹಲವಾರು ರೂಪಕಗಳ ಇರುವಿಕೆ, ಕವಿತೆ ಸೇರಬೇಕಾದ ಗಮ್ಯಕ್ಕೆ ಅದನ್ನು ತಲುಪಿಸದೆ ಹೋಗಬಹುದು. ಆದರೆ ಮಿತಿಗಳನ್ನು ಮೀರುವ ಶಕ್ತಿ ಕವಯಿತ್ರಿಗಿದೆ.

ಗಂಡು ಹೆಣ್ಣಿನ ಸಂಭಾವ್ಯ ಸಂಬಂಧಗಳ ಸುತ್ತಲೂ ಒಂದಷ್ಟು ಹಸಿ ಹಸಿ ಪದಗಳ ಹೊತ್ತು ಸುತ್ತುವ ಕವಿತೆಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧ್ಯತೆಗಳನ್ನು ಹುಡುಕಿಕೊಳ್ಳಲಿ. ಕವಯಿತ್ರಿ ಕವಿತೆಯ ಆಕೃತಿಯನ್ನೊಂಚೂರು ಧೇನಿಸಲಿ. ಕಾಡ ಝರಿಯ ಸ್ನಿಗ್ಧ ಹರಿವಿನಂತಿರುವ ಇಲ್ಲಿನ ಕಾವ್ಯ  ಕವಯಿತ್ರಿಯ ಬಗ್ಗೆ ನಿರೀಕ್ಷೆ ಹೆಚ್ಚಿಸುತ್ತಿವೆಯಾದ್ದರಿಂದ ಮುಂದಕ್ಕೆ ಪಾತ್ರ ಬದಲಿಸಿ ಹರಿಯಲಿ, ತನ್ನದೇ ಸಾಮರ್ಥ್ಯವನ್ನು ಹುಡುಕುತ್ತಾ ಅನುಮಾನಿಸುತ್ತಾ ಕಂಡರಿಯುತ್ತಾ ನಡೆಯಲಿ ಎಂದು ಹಾರೈಸುವೆ.

‍ಲೇಖಕರು avadhi

February 8, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: