ಭಾರತದ ಸಂವಿಧಾನ c/o ಜಸ್ಟೀಸ್ ಕರ್ಣನ್!

ನೋಡುವುದಕ್ಕೆ ತಮಾಷೆಯಂತೆ ಕಾಣುತ್ತಿರುವ ಈ ಜಸ್ಟೀಸ್ ಕರ್ಣನ್ ವ್ರತ್ತಾಂತ, ನಿಜಕ್ಕೆಂದರೆ ದೇಶದ ಜುಡೀಷಿಯರಿಯನ್ನು ಬೆತ್ತಲುಗೊಳಿಸಿದೆ. ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಏನಾದರೂ ನಾಲಕ್ಕಾಣೆ ವಿಶ್ವಾಸ ಉಳಿದದ್ದಿದ್ದರೆ, ಅದು ನ್ಯಾಯಾಂಗದ ಬಗ್ಗೆ ಇತ್ತು; ಅದೂ ಈಗ ಬೀದಿಪಾಲಾದಂತಾಗಿದೆ.

ಒಬ್ಬರು ಹೈಕೋರ್ಟ್ ನ್ಯಾಯಮೂರ್ತಿ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಸಹಿತ 7 ನ್ಯಾಯಮೂರ್ತಿಗಳಿಗೆ ದಲಿತರ ದೌರ್ಜನ್ಯ ಕಾಯಿದೆಯಡಿ ಐದು ವರ್ಷಗಳ ಶಿಕ್ಷೆ ವಿಧಿಸುವುದು; ಸುಪ್ರೀಂ ಕೋರ್ಟಿನ  ಪೀಠ ಆ ಹೈಕೋರ್ಟ್ ನ್ಯಾಯಮೂರ್ತಿಗೆ ನ್ಯಾಯಾಂಗ ನಿಂದನೆಗಾಗಿ ಆರು ತಿಂಗಳ ಜೈಲುವಾಸ ವಿಧಿಸುವುದು; ಹೈಕೋರ್ಟ್ ನ್ಯಾಯಮೂರ್ತಿ ದೇಶಬಿಟ್ಟು ಪಲಾಯನ ಮಾಡಿರುವುದಾಗಿ-ರಾಷ್ಟ್ರಪತಿಗಳು ಭೇಟಿಗೆ ಅವಕಾಶ ನೀಡಿದರೆ ಮಾತ್ರ ಹಿಂದಿರುಗುವುದಾಗಿ ಸುದ್ದಿ ಹರಡುವುದು – ಇಂತಹ ಸಿಬ್ಬಂದಿ ಕಲಹ ಗ್ರಾಮಪಂಚಾಯತಿ ಮಟ್ಟದ ಕಚೇರಿಯಲ್ಲೋ, ತಾಲೂಕು ಕಚೇರಿಯಲ್ಲೋ ನಡೆದರೆ ಹೋಗಲಿಬಿಡಿ ಎಂದು ನಿರ್ಲಕ್ಷಿಸಬಹುದೇನೋ. ಆದರೆ, ಇದು ನಡೆದಿರುವುದು ದೇಶದ ಸುಪ್ರೀಂ ಕೋರ್ಟಿನಲ್ಲಿ!

ಈ ಪ್ರಕರಣ ಇನ್ನಷ್ಟು ದಿನ ಬೆಳೆಯಲಿದೆ. ಅದು ಹೇಗೇ ಮುಗಿದರೂ, ದೇಶದ ನ್ಯಾಯಾಂಗ ಕೆಲವು ಪ್ರಶ್ನೆಗಳಿಗೆ ಖಚಿತವಾಗಿ ಉತ್ತರಿಸುವ ಮೂಲಕ ದೇಶದ ಸಂವಿಧಾನದ ಮತ್ತು ಪ್ರಜಾತಂತ್ರದ ಗೌರವವನ್ನು ಉಳಿಸಬೇಕಾಗುತ್ತದೆ.

೧.  ಇಷ್ಟೆಲ್ಲ ರಾದ್ದಾಂತಗಳು ಆಗುವ ಆರಂಭದಲ್ಲಿ ಜ| ಕರ್ಣನ್ ಪದೇಪದೇ ನ್ಯಾಯಾಂಗದ ಉನ್ನತ ಮಟ್ಟದ ನೇಮಕಾತಿಗಳಲ್ಲಿ, ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದರು. ಮೊನ್ನೆಮೊನ್ನೆ ಪ್ರಧಾನಿಯವರಿಗೆ ಬರೆದ ಪತ್ರದಲ್ಲಿ  ಜ| ಕರ್ಣನ್ 20ಕ್ಕೂ ಮಿಕ್ಕಿ ನ್ಯಾಯಮೂರ್ತಿಗಳ ಭ್ರಷ್ಟಾಚಾರದ ಬಗ್ಗೆ ಆಪಾದಿಸಿದ್ದಾರೆ, ಅವರಲ್ಲಿ ಕೆಲವರ ಮನೆಯಲ್ಲಿ ನೋಟು ರದ್ಧತಿಯ ಬಳಿಕ ದೊಡ್ಡ ಪ್ರಮಾಣದಲ್ಲಿ ಹಳೆಯ ಕರೆನ್ಸಿ ಸಿಕ್ಕಿದ ಬಗ್ಗೆ ಆಪಾದಿಸಿದ್ದಾರೆ. ಆದರೆ, ಈ ಆಪಾದನೆಗಳು ಕೇವಲ ಆಪಾದನೆಗಳಾಗಿಯೇ ಉಳಿದಿವೆ.

೨. ಹೈಕೋರ್ಟೊಂದರ ನ್ಯಾಯಮೂರ್ತಿ ಹುದ್ದೆ ಸಾಂವಿಧಾನಿಕ ಹುದ್ದೆಯಾಗಿದ್ದು, ಆ ಹುದ್ದೆಯಲ್ಲಿರುವವರನ್ನು ಅಗತ್ಯಬಿದ್ದಲ್ಲಿ ಪದಚ್ಯುತಿ ಮಾಡಲು ಸಂಸತ್ತಿಗೆ ಸಾಂವಿಧಾನಿಕ ಅಧಿಕಾರ  ಇರುವುದು ಸ್ಪಷ್ಟವಾಗಿ ಉಲ್ಲೇಖವಿದೆ.  ಆದರೂ ಆ ಹಾದಿಯಲ್ಲಿ ಸಾಗುವ ಬದಲು ಸುಪ್ರೀಂ ಕೋರ್ಟು ತಾನೇ ಸ್ವತಃ ಕಾರ್ಯಾಚರಿಸಿ, ಹೈಕೋರ್ಟ್ ನ್ಯಾಯಮೂರ್ತಿಗೆ ಶಿಕ್ಷೆ ಪ್ರಕಟಿಸಿದೆ. ಇದು ಸುಪ್ರೀಂ ಕೋರ್ಟ್ ಅಧಿಕಾರ ವ್ಯಾಪ್ತಿ ಮೀರಿದ ತೀರ್ಮಾನ ಎಂದು ನ್ಯಾಯಪಂಡಿತರೆಲ್ಲ ಅಭಿಪ್ರಾಯಪಡುತ್ತಿದ್ದಾರೆ.

೩. ಇನ್ನೂ ಕೌತುಕಮಯ ಕಾನೂನು ಜಿಡುಕೆಂದರೆ, ಜ| ಕರ್ಣನ್ ಅವರ ಮಾನಸಿಕ ಸಮತೋಲನದ ಪರೀಕ್ಷೆ ನಡೆಸಬೇಕೆಂದು ಅಭಿಪ್ರಾಯಕೊಟ್ಟಿರುವ ಸುಪ್ರೀಂ ಕೋರ್ಟ್ ಅದೇ ಕಾಲಕ್ಕೆ ಜ| ಕರ್ಣನ್ ಅವರಿಗೆ ನ್ಯಾಯಾಂಗ ನಿಂದನೆಗಾಗಿ ಶಿಕ್ಷೆ ವಿಧಿಸಿರುವುದು. ಮಾನಸಿಕ ಸಮತೋಲನ ಇಲ್ಲದ ವ್ಯಕ್ತಿಯ ನಡೆವಳಿಕೆಗಳು ಶಿಕ್ಷೆಗೆ ಅರ್ಹವೇ?

೪. ಇದೆಲ್ಲದಕ್ಕಿಂತಲೂ ದೊಡ್ಡ ಪ್ರಶ್ನೆಯೆಂದರೆ, ಇಷ್ಟೊಂದು ವರ್ತನೆಯ ಸಮಸ್ಯೆಗಳಿರುವ ವ್ಯಕ್ತಿಯನ್ನು ಹೈಕೋರ್ಟ್ ನ್ಯಾಯಮೂರ್ತಿಯಾಗಿ 2009ರಲ್ಲಿ ಏನೇನು ಅರ್ಹತೆಗಳ ಆಧಾರದಲ್ಲಿ ನೇಮಕ ಮಾಡಲಾಯಿತು ಎಂಬುದು.

೫. 12-06-2017ರಂದು ಅಂದರೆ ಇನ್ನು ಒಂದು ತಿಂಗಳಲ್ಲಿ ನಿವ್ರತ್ತಿ ಪಡೆಯಬೇಕಿರುವ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರಿಗೆ ಈರೀತಿ ತರಾತುರಿಯಲ್ಲಿ ಶಿಕ್ಷೆ ಪ್ರಕಟಿಸಬೇಕಾದ ತುರ್ತು ಸುಪ್ರೀಂ ಕೋರ್ಟಿಗೆ ನಿಜಕ್ಕೂ ಇತ್ತೇ? ಇಲ್ಲಿ ವ್ರತ್ತಿ ವೈಷಮ್ಯದಂತಹ ಸಂಗತಿಗಳು ಅಡಕವಾಗಿವೆಯೇ ಎಂಬ ಪ್ರಶ್ನೆಗಳು ಕೂಡ ಎದ್ದರೆ ಅಚ್ಚರಿ ಇಲ್ಲ.

೬. ಸುಪ್ರೀಂ ಕೋರ್ಟು ಈ ವಿಚಾರದಲ್ಲಿ ಮಾಧ್ಯಮಗಳನ್ನೂ ಬಿಟ್ಟಿಲ್ಲ. ಜ| ಕರ್ಣನ್ ಅವರ ಹೇಳಿಕೆಗಳು – ಆದೇಶಗಳನ್ನು ಮಾಧ್ಯಮಗಳು ಪ್ರಕಟಿಸುವಂತಿಲ್ಲ ಎಂದು ಹೇಳುವ ಮೂಲಕ ಮಾಧ್ಯಮಗಳಿಗೂ ಸೆನ್ಸಾರ್ ಶಿಪ್ ಭಾರ ಹೊರಿಸಲಾಗಿದೆ. ಇದು ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಬಂದಿರುವ ಆತಂಕವೂ ಹೌದು. ಇಂತಹದೊಂದು ಪೂರ್ವನಿರ್ಣಯ ಮುಂದೆ ಮಾಧ್ಯಮಗಳಿಗೆ ಇನ್ನಷ್ಟು ಇಕ್ಕಟ್ಟು ಮಾಡಲಿರುವುದು ಖಂಡಿತ.

2009ರಿಂದಲೂ ನ್ಯಾಯಾಂಗದ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತುತ್ತಲೇ ಬಂದಿರುವ ಜ| ಕರ್ಣನ್ ಮೊದಲ ಬಾರಿಗೆ ದೇಶವ್ಯಾಪಿ ಸುದ್ದಿಯಾದದ್ದು 2011ರಲ್ಲಿ, ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಕಮಿಷನ್ ಗೆ ದೂರು ನೀಡುವ ಮೂಲಕ. ಆ ದೂರಿನಲ್ಲಿ ಅವರು ತಾವು ದಲಿತರಾಗಿರುವುದರಿಂದ ತಮ್ಮ ಸಹ ನ್ಯಾಯಮೂರ್ತಿಗಳು ತಮಗೆ ಜಾತಿನಿಂದನೆ ಮಾಡುತ್ತಿದ್ದಾರೆ; ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿದ್ದರು

ಮದರಾಸು ಹೈಕೋರ್ಟಿನಲ್ಲಿ ಸ್ವತಃ ಜ| ಕರ್ಣನ್ ಜೊತೆ ಸಹನ್ಯಾಯಮೂರ್ತಿಗಳಾಗಿದ್ದವರು ಮತ್ತು ಆಪಾದನೆಗೊಳಗಾಗಿದ್ದವರು ಈಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿದ್ದಾರೆಂಬುದೂ ಇಲ್ಲಿ ಉಲ್ಲೇಖಾರ್ಹ. ಒಟ್ಟಿನಲ್ಲಿ ಈ ಇಡಿಯ ಪ್ರಕರಣ ನ್ಯಾಯಾಂಗದಲ್ಲಿ ನೇಮಕಾತಿ ಪ್ರಕ್ರಿಯೆಗಳ ದಕ್ಷತೆಯ ಬಗ್ಗೆ, ನ್ಯಾಯಾಂಗದ ಹುದ್ದೆಗಳಲ್ಲಿರುವವರ ಹುಳುಕುಗಳು-ಭ್ರಷ್ಟಾಚಾರದ ಬಗ್ಗೆ, ನ್ಯಾಯಾಂಗ ನಿಂದನೆಯ ವ್ಯಾಖ್ಯೆಯ ಬಗ್ಗೆ, ಸುಪ್ರೀಂ ಕೋರ್ಟಿನ ವ್ಯಾಪ್ತಿಯ ಬಗ್ಗೆ ಪ್ರಜಾತಂತ್ರದ ಪರಮಾಧಿಕಾರದ ಬಗ್ಗೆ ಪ್ರಶ್ನೆಗಳನ್ನೆತ್ತಿದೆ. ಪರಿಸ್ಥಿತಿ ಇನ್ನಷ್ಟು ನಗೆಪಾಟಲಾಗದಿರಲಿ ಎಂದಷ್ಟೇ ಆಶಿಸೋಣ.

ಇಡಿಯ ಪ್ರಕರಣದ ಕುರಿತು ಹೆಚ್ಚಿನ ಓದಿಗಾಗಿ ಮಾಹಿತಿಗಳು ಇಲ್ಲಿವೆ:

http://www.thehindu.com/news/ national/justice-karnan-vs- supreme-court-the-saga-of-a- defiant-judge/article18414667. ece

‍ಲೇಖಕರು avadhi

May 12, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. sharadhi

    “೩. ಇನ್ನೂ ಕೌತುಕಮಯ ಕಾನೂನು ಜಿಡುಕೆಂದರೆ, ಜ| ಕರ್ಣನ್ ಅವರ ಮಾನಸಿಕ ಸಮತೋಲನದ ಪರೀಕ್ಷೆ ನಡೆಸಬೇಕೆಂದು ಅಭಿಪ್ರಾಯಕೊಟ್ಟಿರುವ ಸುಪ್ರೀಂ ಕೋರ್ಟ್ ಅದೇ ಕಾಲಕ್ಕೆ ಜ| ಕರ್ಣನ್ ಅವರಿಗೆ ನ್ಯಾಯಾಂಗ ನಿಂದನೆಗಾಗಿ ಶಿಕ್ಷೆ ವಿಧಿಸಿರುವುದು. ಮಾನಸಿಕ ಸಮತೋಲನ ಇಲ್ಲದ ವ್ಯಕ್ತಿಯ ನಡೆವಳಿಕೆಗಳು ಶಿಕ್ಷೆಗೆ ಅರ್ಹವೇ?”

    There’s no crux or sense in this article. I urge the author to clearly follow up the sequence of events took place before the Supreme court tend to punish Karnan (it’s only after he refused to undergo mental health evaluation). At this state the court had no option but to punish him under ‘contempt of court’. Please don’t create confusion by writing such rubbish articles.

    ಪ್ರತಿಕ್ರಿಯೆ
    • Anonymous

      Thanks. However, the beginning of this series of events date back to 2011. It is a bit surprising to see that the SC is being overactive at the last moment. Hence these questions. – Rajaram Tallur

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: