ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಗವದ್ಗೀತೆಯ ಆಧುನಿಕ ನಿರೂಪಣೆಗಳು ಹಾಗೂ ಸಮಸ್ಯೆಗಳು

ಡಾ. ರಾಜಾರಾಮ ಹೆಗಡೆ

ಇತ್ತೀಚೆಗೆ ಭಗವದ್ಗೀತೆಯ ಕುರಿತು ಅನೇಕ ಚರ್ಚೆಗಳೆದ್ದಿವೆ. ಶಾಲೆಗಳಲ್ಲಿ ಅದನ್ನು ಪ್ರಚಾರ ಮಾಡುವ ಕೆಲಸವನ್ನು ಸಮರ್ಥಿಸಿ ಹಾಗೂ ವಿರೋಧಿಸಿ ಹೇಳಿಕೆಗಳು ಬರುತ್ತಿವೆ. ಈ ಎರಡೂ ಪಕ್ಷಗಳ ವಕ್ತಾರರೂ ಕೂಡ ಭಗವದ್ಗೀತೆಯು ಹಿಂದೂಗಳ ಧರ್ಮಗ್ರಂಥವೆಂಬ ಗ್ರಹಿಕೆಯನ್ನು ಆಧರಿಸಿ ವಾದ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟ. ವಿರೋಧಿಸುವವರ ವಾದವೆಂದರೆ ಸೆಕ್ಯುಲರ್ ರಾಷ್ಟ್ರವಾದ ಭಾರತದಲ್ಲಿ ಎಲ್ಲಾ ಧರ್ಮದವರೂ ಇರುವ ಸಾರ್ವಜನಿಕ ಸಂಸ್ಥೆಗಳಲ್ಲಿ ಹಿಂದೂಗಳಲ್ಲದವರೂ ಭಗವದ್ಗೀತೆಯನ್ನು ಕಲಿಯಬೇಕೆನ್ನುವುದು ಸಂವಿಧಾನ ವಿರೋಧೀ ಕೃತ್ಯವಾಗುತ್ತದೆ. ಹಾಗಾಗಿ ಸೆಕ್ಯುಲರ್ ತತ್ವದ ಪ್ರಕಾರ ಅದು ತಪ್ಪೊಂದೇ ಅಲ್ಲ, ಅದು ಕಾನೂನಿನ ದೃಷ್ಟಿಯಲ್ಲಿ ಅಪರಾಧ ಕೂಡಾ. ಈ ವಿರೋಧವನ್ನು ಖಂಡಿಸಿರುವ ಪರ ಪಕ್ಷದವರು ಭಗವದ್ಗೀತೆಯ ಶಿಕ್ಷಣವನ್ನು ವಿರೋಧಿಸುವವರು ದೇಶ ಬಿಟ್ಟು ತೊಲಗಲಿ ಎನ್ನುತ್ತಿದ್ದಾರೆ. ಅಂದರೆ ಅಂಥ ವಿರೋಧಿಗಳ ರಾಷ್ಟ್ರೀಯತೆಯನ್ನೇ ಪ್ರಶ್ನಿಸುತ್ತಿದ್ದಾರೆ.

ಒಂದೊಮ್ಮೆ ಎರಡೂ ಪಕ್ಷದವರೂ ಒಮ್ಮತಕ್ಕೆ ಬಂದು ಭಗವದ್ಗೀತೆಯನ್ನು ಕೇವಲ ಹಿಂದೂ ಮಕ್ಕಳಿಗೆ ಕಡ್ಡಾಯ ಮಾಡಬಹುದು ಎಂದರೆ ಸಮಸ್ಯೆ ಬಗೆಹರಿಯುತ್ತದೆಯೆ? ಭಗವದ್ಗೀತೆಯು ಹಿಂದೂ ಧರ್ಮಗ್ರಂಥವೆಂದು ನಂಬಿರುವ ವಿರೋಧ ಪಕ್ಷದವರ ಪ್ರಕಾರ ದಲಿತರಿಗೆ ಹಾಗೂ ಶೂದ್ರರಿಗೆ ಅದೊಂದು ಅಪಾಯಕಾರಿ ಗ್ರಂಥವಾಗಿದೆ. ಅದನ್ನು ಶಾಲೆಗಳಲ್ಲಿ ಕಡ್ಡಾಯಮಾಡುವ ಪ್ರಯತ್ನದ ಹಿಂದೆ ಬ್ರಾಹ್ಮಣ ಪುರೋಹಿತಶಾಹಿಯ ಹುನ್ನಾರವಿದೆ. ಈ ಕಾರ್ಯದಿಂದ ಅಲ್ಪಸಂಖ್ಯಾತರಿಗೊಂದೇ ಅಲ್ಲ, ದಲಿತ-ಶೂದ್ರರ ಹಿತಾಸಕ್ತಿಗೂ ಧಕ್ಕೆಯಿದೆ. ಈ ವಾದಕ್ಕೆ ಪರಪಕ್ಷದವರು ನೀಡುವ ಉತ್ತರವೆಂದರೆ ಇಂಥ ಹೇಳಿಕೆಗಳು ಬರುತ್ತಿರುವುದೇ ಹಿಂದೂ ಧರ್ಮದ ಅವನತಿಯ ದ್ಯೋತಕ. ಹಾಗಾಗಿ ಇಂತಹ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಹಾಗೂ ಹಿಂದೂ ಧರ್ಮದ ಐಕ್ಯತೆಯನ್ನು ಸಾಧಿಸಲು ಹಿಂದೂ ಧರ್ಮಗ್ರಂಥಗಳನ್ನು ಕಡ್ಡಾಯವಾಗಿಯಾದರೂ ಹಿಂದೂಗಳಿಗೆ ತಿಳಿಸುವುದು ಅತ್ಯಗತ್ಯ.

ಈ ನಡುವೆ ಶಾಲಾ ಮಕ್ಕಳಿಗೆ ಭಗವದ್ಗೀತೆಯ ಕುರಿತು ಜಾಗೃತಿ ಮೂಡಿಸುವ ಅಭಿಯಾನವನ್ನು ಹುಟ್ಟುಹಾಕಿ ತಮ್ಮ ಶ್ರಮ ಹಾಗೂ ಮಠದ ಹಣವನ್ನು ವೆಚ್ಚಮಾಡುತ್ತಿರುವ ಸ್ವರ್ಣವಲ್ಲೀ ಸ್ವಾಮಿಗಳು ತಮ್ಮ ಕೆಲಸವೇಕೆ ಮಹತ್ವಪೂರ್ಣವಾಗಿದೆ ಎಂಬುದನ್ನು ಬೇರೆಯೇ ರೀತಿಯಲ್ಲಿ ಭಾವಿಸಿದಂತಿದೆ. ಅವರು ತಿಳಿಸುವಂತೆ ಭಗವದ್ಗೀತೆಯು ಮಕ್ಕಳಿಗೆ ಆಧ್ಯಾತ್ಮ ಶಿಕ್ಷಣವನ್ನು ನೀಡುತ್ತದೆಯೇ ಹೊರತೂ ಯಾವುದೇ ಮತಪ್ರಚಾರವನ್ನು ಮಾಡುತ್ತಿಲ್ಲ. ಮಕ್ಕಳಲ್ಲಿ ಒಳ್ಳೆಯ ವಿಚಾರಗಳನ್ನು ಪ್ರಚೋದಿಸಿ, ಅವರಿಗೆ ಮನೋಸ್ಥೈರ್ಯವನ್ನು ಸತ್ಪ್ರೇರಣೆಯನ್ನು ನೀಡುವ ಶಕ್ತಿ ಭಗವದ್ಗೀತೆಗಿದೆ. ಒಂದೊಮ್ಮೆ ಅದು ಹಿಂದೂ ಸಂಸ್ಕೃತಿಯ ಉದ್ಧಾರಕ್ಕೆ ಸಹಕರಿಸುತ್ತದೆ ಎಂಬುದಾಗಿ ಅವರು ನಂಬಿಕೊಂಡಿದ್ದರೂ ಕೂಡ ಅವರು ಸಾಂಪ್ರದಾಯಿಕ ಅರ್ಥದಲ್ಲಿ ಹೇಳುತ್ತಿದ್ದಾರೆಯೇ ಹೊರತೂ ಆಧುನಿಕ ಪರಿಭಾಷೆಯಲ್ಲಿ ಮಾತನಾಡುತ್ತಿಲ್ಲ. ನಮಗೆ ತಿಳಿದುಬರುವುದೇನೆಂದರೆ ಅವರ ಕಾರ್ಯಕ್ರಮದಲ್ಲಿ ಎಲ್ಲಾ ಹಿನ್ನೆಲೆಯ ಮಕ್ಕಳೂ ಭಾಗವಹಿಸಿದ್ದಾರೆ ಹಾಗೂ ಅವರಾಗಲೀ ಅವರ ಪಾಲಕರಾಗಲೀ ಈ ಕಾರ್ಯಕ್ರಮದ ಕುರಿತು ವಿರೋಧವನ್ನು ವ್ಯಕ್ತಪಡಿಸಿಲ್ಲ.

ಭಗವದ್ಗೀತಾ ಅಭಿಯಾನವನ್ನು ಆರ್.ಎಸ್.ಎಸ್. ಹಾಗೂ ಬಿಜೆಪಿ ಕಾರ್ಯಕ್ರಮವನ್ನಾಗಿ ಗುರುತಿಸಿರುವುದರಿಂದ ಭಗವದ್ಗೀತೆಯ ಕುರಿತು ಈ ಚರ್ಚೆಗಳು ಹಾಗೂ ವಿರೋಧಗಳು ಸ್ಫೋಟವಾಗಿವೆ ಎಂಬುದು ಸ್ಪಷ್ಟ. ಏಕೆಂದರೆ ಇಂಥ ಅಭಿಯಾನಗಳಿಲ್ಲದೇ ಭಾರತದ ಸಾರ್ವಜನಿಕ ಕ್ಷೇತ್ರದಲ್ಲಿ ಭಗವದ್ಗೀತೆಯ ಈಗಾಗಲೇ ಸಾಕಷ್ಟು ಪ್ರಚಲಿತದಲ್ಲಿದೆ. ಹಿಂದೂಧರ್ಮದ ಧರ್ಮಗ್ರಂಥ ಯಾವುದು ಎಂಬ ಕುರಿತು ಹಿಂದೂಗಳಿಗೇ ಸ್ಪಷ್ಟತೆಯಿಲ್ಲದಿರುವಾಗ ಭಗವದ್ಗೀತೆಯನ್ನು ಅನ್ಯಧರ್ಮೀಯರು ಭಯದಿಂದ ನೋಡುತ್ತಾರೆ ಅಂತೇನೂ ಅನಿಸುವುದಿಲ್ಲ. ಮತ್ತೆ, ಹಿಂದೂ ಧರ್ಮವು ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿಗಳಂತೆ ಒಂದು ರಿಲಿಜನ್ನು ಎಂಬುದಾಗಿ ಭಾವಿಸಿಕೊಂಡ ರಾಷ್ಟ್ರೀಯಯುಗದ ಚಿಂತಕರು ಅದನ್ನು ಧರ್ಮಗ್ರಂಥವೆಂಬುದಾಗಿ ನಂಬಿದರೂ ಕೂಡ ಭಗವದ್ಗೀತೆಯ ಸ್ವರೂಪ ಹಾಗೂ ವಿಷಯಗಳೂ ಬೈಬಲ್ ಹಾಗೂ ಖುರಾನ್ ಗಳಂತಿಲ್ಲ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ. ಹಾಗಾಗಿ ಭಗವದ್ಗೀತೆಯು ಅನ್ಯಧರ್ಮೀಯರಲ್ಲಿ ವೈರತ್ವವನ್ನು ಹುಟ್ಟಿಸುವ ಗ್ರಂಥವಾಗಿ ಪರಿಣಮಿಸಿಲ್ಲ. ಹಿಂದೂಗಳೆನ್ನುವವರೂ ಕೂಡ ಧರ್ಮಗ್ರಂಥ ಎಂಬ ಪರಿಭಾಷೆಯನ್ನು ಸ್ಕ್ರಿಪ್ಚರ್ (Scripture) ಎಂಬ ಕಲ್ಪನೆಗಿಂತ ಬೇರೆಯದೇ ಆದ ರೀತಿಯಲ್ಲಿ ಬಳಸುತ್ತಾರೆ. ಅವರ ಪ್ರಕಾರ ಈ ಧರ್ಮಗ್ರಂಥಗಳು ಆಧ್ಯಾತ್ಮ/ಮೋಕ್ಷ ಸಾಧನೆಯನ್ನು ಮಾಡುವ ಹಾಗೂ ಮನಃಶಾಂತಿಯನ್ನು ಹೊಂದುವ ಮಾರ್ಗವನ್ನು ತಿಳಿಸುತ್ತವೆ. ಹಿಂದೂ ಚಿಂತಕರು ಬೈಬಲ್ ಹಾಗೂ ಖುರಾನನ್ನೂ ಕೂಡ ಇಂಥದ್ದೇ ಮತ್ತೆರಡು ಗ್ರಂಥಗಳೆಂಬುದಾಗಿ ಭಾವಿಸಿದ್ದಾರೆ. ಹಾಗಾಗಿಯೇ ಎಲ್ಲಾ ಧರ್ಮಗ್ರಂಥಗಳಲ್ಲೂ ಅನುಸರಿಸುವಂಥ ತತ್ವಗಳು ಇವೆ ಎನ್ನುತ್ತಾರೆ. ಹಾಗಾಗಿ ಧರ್ಮಗ್ರಂಥಗಳ ಓದುವಿಕೆಗೆ ಭಾರತದಲ್ಲಿ ಬೇರೆಯದೇ ಒಂದು ಮಹತ್ವವು ಪ್ರಾಪ್ತವಾಗಿ ಅದೊಂದು ಸಂಘರ್ಷಾತ್ಮಕ ವಿಷಯವಾಗಿಲ್ಲ.

ಈ ಮೇಲಿನ ಸಂಗತಿಯನ್ನು ಗಮನಿಸಿದರೆ ಭಗವದ್ಗೀತೆಯನ್ನು ಒಂದು ರಿಲಿಜಿಯಸ್ ಸ್ಕ್ರಿಪ್ಚರ್ ಎಂಬುದಾಗಿ ಪ್ರತಿಪಾದಿಸಿದಾಗ ಸೆಕ್ಯುಲರ್ ಚೌಕಟ್ಟಿನ ಹಂತದಲ್ಲಿ ಅದು ಸಮಸ್ಯೆಗಳನ್ನು ಹುಟ್ಟುಹಾಕುತ್ತದೆಯೇ ವಿನಃ ಜನರಿಗೆ ಇಂದೂ ಅದೊಂದು ಸಮಸ್ಯೆಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸೆಕ್ಯುಲರ್ ತತ್ವದ ಪ್ರಕಾರ ರಿಲಿಜಿಯಸ್ ಸ್ಕ್ರಿಪ್ಚರ್ಅನ್ನು ಒಪ್ಪಿಕೊಳ್ಳುವುದೆಂದರೆ ಒಂದು ರಿಲಿಜನ್ನಿನ ಸತ್ಯವನ್ನು ಒಪ್ಪಿಕೊಳ್ಳುವ ಹಾಗೂ ಅದೇ ವೇಳೆಗೆ ಅನ್ಯ ರಿಲಿಜನ್ನುಗಳ ಸತ್ಯವನ್ನು ನಿರಾಕರಿಸುವ ಕ್ರಿಯೆಯಾಗುವುದರಿಂದ ಅದು ಒಂದು ರಿಲಿಜನ್ನನ್ನು ನಿರಾಕರಿಸಿ ಮತ್ತೊಂದು ರಿಲಿಜನ್ನಿಗೆ ಮತಾಂತರದ ಕ್ರಿಯೆಗೆ ಸಮನಾಗುತ್ತದೆ. ಹಾಗಾಗಿ ಒಂದು ರಿಲಿಜಿಯಸ್ ಸ್ಕ್ರಿಪ್ಚರ್ಅನ್ನು ಸೆಕ್ಯುಲರ್ ಸರಕಾರಿ ಸಂಸ್ಥೆಗಳಲ್ಲಿ ಅನ್ಯಧರ್ಮೀಯರಿಗೆ ಕಡ್ಡಾಯಗೊಳಿಸಿದರೆ ಅದು ಸೆಕ್ಯುಲರ್ ನೀತಿಗೆ ವಿರುದ್ಧವಾಗುತ್ತದೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ದೇಶೀ ರಿಲಿಜನ್ನುಗಳೇ ಇಲ್ಲ. ಹಾಗಾಗಿ ಇಲ್ಲಿ ರಿಲಿಜಿಯಸ್ ಸ್ಕ್ರಿಪ್ಚರ್ಗಳೂ ಇರಲಿಕ್ಕೆ ಸಾಧ್ಯವಿಲ್ಲ. ಹಾಗೂ ಈ ಮೇಲಿನ ಸೆಕ್ಯುಲರ್ ಸಮಸ್ಯೆಗಳೂ ಕೂಡ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಜನಸಾಮಾನ್ಯರಲ್ಲಿ ಬಾಹ್ಯ ಪ್ರಚೋದನೆಯಿಲ್ಲದೇ ಏಳುವುದಿಲ್ಲ. ಹಾಗಾಗಿ ಹಿಂದೂಯಿಸಂ ಎಂಬುದೊಂದು ರಿಲಿಜನ್ನು ಹಾಗೂ ಭಗವದ್ಗೀತೆಯ ಕಲಿಕೆಯು ಒಂದು ಸೆಕ್ಯುಲರ್ ಸಮಸ್ಯೆಯೆಂಬುದಾಗಿ ಭಾವಿಸಿಕೊಂಡ ಕಾರಣದಿಂದಲೇ ಕೆಲವೊಂದು ಇಲ್ಲದ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎನ್ನುವುದು ಸ್ಪಷ್ಟ. ಹಾಗಾಗಿ ಅದನ್ನೊಂದು ರಿಲಿಜಿಯಸ್ ಸ್ಕ್ರಿಪ್ಚರ್ ಎಂಬುದಾಗಿ ಭಾವಿಸಿ ಪ್ರತಿಪಾದಿಸುವವರೇ ಭಗವದ್ಗೀತೆಯ ವ್ಯಾಪ್ತಿಯನ್ನು ಸಂಕುಚಿತಗೊಳಿಸುತ್ತಿದ್ದಾರೆ ಹಾಗೂ ಈ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ ಎಂದೇ ಅನ್ನಬೇಕು: ಅದರಲ್ಲಿ ಹಿಂದುತ್ವವಾದಿಗಳು ಹಾಗೂ ಸೆಕ್ಯುಲರ್ವಾದಿಗಳಿಬ್ಬರೂ ಇದ್ದಾರೆ.

ಈ ಇಲ್ಲದ ಸಮಸ್ಯೆಗೆ ಇನ್ನೂ ಕೆಲವು ಸಲ್ಲದ ಸಮಸ್ಯೆಗಳನ್ನು ಈಚೆಗೆ ಪೇರಿಸಲಾಗಿದೆ. ಅದೆಂದರೆ ಭಗವದ್ಗೀತೆಯು ಜಾತಿ ಶೋಷಣೆಯನ್ನು ಬೋಧಿಸುತ್ತದೆ ಎಂಬ ವಿಚಾರ. ಭಗವದ್ಗೀತೆಗೆ ಈ ಹೊಸ ಪಟ್ಟವನ್ನು ಕಟ್ಟಿ ಬಹಳ ಕಾಲ ಸಂದಿಲ್ಲ. ರಾಷ್ಟ್ರೀಯತಾ ಹೋರಾಟದ ಯುಗದಲ್ಲಿ ಮನುಸ್ಮೃತಿಗೆ ಈ ಪಟ್ಟವನ್ನು ನೀಡಲಾಗಿತ್ತು ಹಾಗೂ ಭಗವದ್ಗೀತೆಯನ್ನು ಒಂದು ತಾತ್ವಿಕ-ಆಧ್ಯಾತ್ಮಿಕ ಗ್ರಂಥವೆಂಬುದಾಗಿಯೇ ತೆಗೆದುಕೊಳ್ಳಲಾಗಿತ್ತು. ಏಕೆಂದರೆ ಭಗವದ್ಗೀತೆಯು ವಯುಕ್ತಿಕ ಆಧ್ಯಾತ್ಮಿಕ ಸಾಧನೆಯ ಗ್ರಂಥವಾಗಿ ಭಾರತೀಯ ಸಂಪ್ರದಾಯಗಳಲ್ಲಿ ಯಾವುದೇ ಗುಂಪಿಗೆ ಸೀಮಿತವಾಗಿರಲಿಲ್ಲ. ಸಾಂಸಾರಿಕರು ಹಾಗೂ ವಿರಾಗಿಗಳಿಬ್ಬರಿಗೂ ಅದು ಅಷ್ಟೇ ಅರ್ಥಪೂರ್ಣವಾಗಿತ್ತು. ಹನ್ನೆರಡನೆಯ ಶತಮಾನದ ನಂತರ ಭಾರತದಲ್ಲಿ ಜನಪ್ರಿಯಗೊಂಡ ವೈಷ್ಣವ ಭಕ್ತಿಮಾರ್ಗವು ಈ ಗ್ರಂಥಕ್ಕೆ ಆದ್ಯ ಸ್ಥಾನವನ್ನು ನೀಡಿತ್ತು. (ಈ ಸಂಪ್ರದಾಯಗಳನ್ನು ಪುರೋಹಿತಶಾಹಿಯ ವಿರುದ್ಧ ಸಾಮಾಜಿಕ ಚಳುವಳಿಗಳೆಂಬುದಾಗಿಯೂ ಗುರುತಿಸಲಾಗಿದೆ.) ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಈ ಗ್ರಂಥವು ವೈರಾಗ್ಯ ದೃಷ್ಟಿಯನ್ನು ಬೋಧಿಸುತ್ತದೆ ಎಂಬ ಅಭಿಪ್ರಾಯವು ಗಟ್ಟಿಯಾಗಿದ್ದಂತೆ ತೋರುತ್ತದೆ. ಲೋಕಮಾನ್ಯ ಟಿಳಕರು ಭಾರತೀಯ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಗವದ್ಗೀತೆಯು ಅನಾಸಕ್ತಿಯೋಗವನ್ನು ಬೋಧಿಸುತ್ತಿಲ್ಲ, ಕರ್ಮಯೋಗವನ್ನು ಬೋಧಿಸುತ್ತದೆ ಎಂಬುದಾಗಿ ನಿರೂಪಿಸಿದರು. ಗಾಂಧಿಯವರು ತಮ್ಮ ಆಧ್ಯಾತ್ಮ ಸಾಧನೆಗೆ ಹಾಗೂ ಸತ್ಯಾಗ್ರಹಕ್ಕೆ ಈ ಗ್ರಂಥದಿಂದಲೇ ಸ್ಫೂತರ್ಿಯನ್ನು ಪಡೆದರು ಹಾಗೂ ಅವರ ರಾಜಕೀಯದಲ್ಲಿ ಭಗವದ್ಗೀತೆಯೂ ಚರಕದಂತೆ ಮಾನ್ಯತೆ ಪಡೆಯಿತೇ ವಿನಃ ಸೆಕ್ಯುಲರ್ ಸಮಸ್ಯೆಗಳನ್ನು ಸೃಷ್ಟಿಸಲಿಲ್ಲ. ವಿವೇಕಾನಂದರಂಥ ಸುಧಾರಣಾವಾದಿಗಳಿಗೂ ಕೂಡ ಭಗವದ್ಗೀತೆಯು ಸನಾತನ ಹಿಂದೂ ಆಧ್ಯಾತ್ಮಿಕ ತತ್ವಗಳನ್ನು ತಿಳಿಸುವ ಗ್ರಂಥವಾಗಿಯೇ ಕಂಡಿತ್ತು. ಕುವೆಂಪು ಅವರೂ ಕೂಡ ಭಗವದ್ಗೀತೆಯನ್ನು ಇದೇ ದೃಷ್ಟಿಯಿಂದಲೇ ಗೌರವಿಸಿದ್ದರು. ಭಗವದ್ಗೀತೆಯ ಕುರಿತು ಚರ್ಚೆಗಳು ಏನೇ ಇದ್ದರೂ, ಅದು ಜಾತಿಶೋಷಣೆಯನ್ನು ಪ್ರತಿಪಾದಿಸುವ ಗ್ರಂಥವೆಂಬ ವಿಚಾರದ ಕುರಿತು ಚರ್ಚೆಗಳು ಎದ್ದಿರಲಿಲ್ಲ.

ಭಗವದ್ಗೀತೆಯು ಜಾತಿ ಶೋಷಣೆಯನ್ನು ಪ್ರತಿಪಾದಿಸುತ್ತದೆ ಎಂಬ ವಾದವು ಬಹುಶಃ ಅದು ಸಂಸ್ಕೃತ ಗ್ರಂಥ ಹಾಗೂ ಹಿಂದೂ ಧರ್ಮಗ್ರಂಥ ಎಂಬ ಕಾರಣದಿಂದ ದಲಿತ ಹಾಗೂ ಪ್ರಗತಿಪರ ಚಿಂತಕರಲ್ಲಿ ಹುಟ್ಟಿದ ತಾರ್ಕಿಕ ನಿರ್ಣಯವಿರಬಹುದು. ಸಂಸ್ಕೃತವು ಬ್ರಾಹ್ಮಣ ಪುರೋಹಿತರ ಭಾಷೆ ಹಾಗೂ ಹಿಂದೂ ಧರ್ಮವು ಜಾತಿವ್ಯವಸ್ಥೆಯನ್ನು ಮಾನ್ಯಮಾಡುತ್ತದೆಯಾದ್ದರಿಂದ ಸಂಸ್ಕೃತ ಭಾಷೆಯಲ್ಲಿರುವ ಈ ಧರ್ಮಗ್ರಂಥವು ಜಾತಿಶೋಷಣೆಯನ್ನು ಬೋಧಿಸಲೇಬೇಕು. ಈ ವಾದಕ್ಕೆ ಮತ್ತೂ ಒಂದು ಮೂಲವಿದ್ದಂತೆ ತೋರುತ್ತದೆ. ಅದೆಂದರೆ 60ರ ದಶಕದಲ್ಲಿ ಡಿ.ಡಿ. ಕೊಸಾಂಬಿಯವರು ಭಗವದ್ಗೀತೆಯ ಸಂದರ್ಭದಲ್ಲಿ ಭಕ್ತಿಯ ಫ್ಯೂಡಲ್ ಮೌಲ್ಯದ ಕುರಿತು ಇಟ್ಟ ವಿಚಾರಗಳು. ಈ ವಿಚಾರಗಳನ್ನು ಕೊಸಾಂಬಿಯವರು ಮತ್ತೂ ಬೆಳೆಸಲಿಲ್ಲ, ಆದರೆ ಭಾರತೀಯ ಎಡಪಂಥೀಯ ಚಿಂತಕರು ಇದನ್ನೊಂದು ವಿಶ್ಲೇಷಣಾ ಮಾದರಿಯನ್ನಾಗಿ ಸ್ವೀಕರಿಸಿ ಸರಳೀಕರಿಸುತ್ತ ಸಾಗಿದರು. ಭಾರತದಲ್ಲಿ ಜಾತಿವ್ಯವಸ್ಥೆಯು ಗಟ್ಟಿಗೊಂಡು ಶೋಷಣಾತ್ಮಕವಾಗಿ ಬೆಳೆದ ಯುಗವನ್ನು ಫ್ಯೂಡಲ್ ಯುಗವೆಂಬುದಾಗಿ ನಂಬಿದ ಎಡಪಂಥೀಯರಿಗೆ ಆ ಯುಗದ ಐಡಿಯಾಲಜಿಯಾದ ಭಕ್ತಿಯನ್ನು ಪ್ರತಿಪಾದಿಸುವ ಗ್ರಂಥವಾಗಿ ಭಗವದ್ಗೀತೆಯು ಕಂಡುಬಂದಿತು. ಇವೆಲ್ಲ ಭಾರತೀಯ ಸಮಾಜವನ್ನು ನಾವು ಗ್ರಹಿಸಲು ಬಳಸುತ್ತಿರುವ ವಿವಿಧ ಸರಳೀಕರಣಗಳು ಅಷ್ಟೆ. ಹಾಗಾಗಿ ಸಧ್ಯಕ್ಕೆ ಇವೆಲ್ಲ ಊಹಾತ್ಮಕ ಪ್ರತಿಪಾದನೆಗಳಾಗಿಯೇ ಉಳಿದಿವೆಯೇ ವಿನಃ ವೈಜ್ಞಾನಿಕ ನಿರ್ಣಯಗಳಾಗಿಲ್ಲ್ಲ.

ಇನ್ನು ದಿನೇಶ್ ಅಮೀನ್ಮಟ್ಟು ಅವರು ದಿನಾಂಕ 18-7-2011ರ ಪ್ರಜಾವಾಣಿಯಲ್ಲಿ ಈ ಮೇಲಿನ ಕಥೆಗಳಿಗೆ ಮತ್ತೊಂದು ಉಪಕಥೆಯನ್ನು ಸೇರಿಸಿದ್ದಾರೆ. ಅದು ಆರ್ಯ-ದ್ರಾವಿಡರದು. ಆರ್ಯ-ದ್ರಾವಿಡರದು ಆಧುನಿಕ ಕಥೆ. ಈ ಆಧುನಿಕ ಕಥೆಯನ್ನು ಇತಿಹಾಸವೆಂಬುದಾಗಿ ಭಾವಿಸಿಕೊಂಡು ರಾಷ್ಟ್ರೀಯತಾ ಯುಗದ ಅನೇಕ ಮುಂದಾಳುಗಳು ತಮ್ಮ ಸಮಾಜಿಕ ಹೋರಾಟಕ್ಕೆ ಅದನ್ನು ಬಳಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಭಾರತೀಯ ಇತಿಹಾಸದ ಹೆಸರಿನಲ್ಲಿ ಕಲ್ಪಿತ ಜನಾಂಗಗಳನ್ನು ಹುಟ್ಟುಹಾಕಿ ನ್ಯಾಯದ ಹೆಸರಿನಲ್ಲಿ ಜಾತಿದ್ವೇಷ-ಪ್ರತೀಕಾರಗಳನ್ನು ಬಡಿದೆಬ್ಬಿಸಿದ ಈ ಕಥೆಯು ತಾನು ಪುರಾಣಗಳಂತೆ ನಿರಪಾಯಕಾರಿಯಲ್ಲ ಎಂಬುದನ್ನು ನಿರ್ದೇಶಿಸಿದೆ. ಆದರೆ ಇಂದು ಗಂಭೀರ ಇತಿಹಾಸಕಾರನೆಂದುಕೊಳ್ಳುವ ಯಾವ ವ್ಯಕ್ತಿಯೂ ಕೂಡ ಇದೊಂದು ಐತಿಹಾಸಿಕ ಸಂಗತಿ ಎಂಬುದಾಗಿ ನಂಬುವುದಿಲ್ಲ. ಇತಿಹಾಸಕಾರರು ಈಗಾಗಲೇ ಕಸದಬುಟ್ಟಿಗೆಸೆದಿರುವ ಈ ಚರ್ಚೆಯನ್ನು ದಿನೇಶ್ ಅಮೀನ್ಮಟ್ಟು ಅವರಿನ್ನೂ ಇತಿಹಾಸ ಎಂಬುದಾಗಿ ನಂಬಿಕೊಂಡಿರುವುದೇ ಆಶ್ಚರ್ಯ.

ಒಟ್ಟಾರೆಯಾಗಿ ನೋಡಿದಾಗ ಭಗವದ್ಗೀತೆಯ ಕುರಿತು ಪತ್ರಿಕೆಗಳಲ್ಲಿ ಬರುತ್ತಿರುವ ಇಂದಿನ ಚರ್ಚೆಗಳೆಲ್ಲವೂ ಹುಟ್ಟುವುದು 1) ಅದು ರಿಲಿಜಿಯಸ್ ಸ್ಕ್ರಿಪ್ಚರ್ ಎಂಬ ಪೂರ್ವಗೃಹೀತದಿಂದ ಹಾಗೂ 2) ಅದು ಜಾತಿ/ಜನಾಂಗ ಸಂಘರ್ಷದ ಇತಿಹಾಸವನ್ನು ದಾಖಲಿಸುತ್ತದೆ ಎಂಬ ನಂಬಿಕೆಯಿಂದ. ಇಂಥ ಚರ್ಚೆಗಳನ್ನು ಎತ್ತುತ್ತಿರುವ ಉದ್ದೇಶ ಒಳ್ಳೆಯದೇ ಅಂದುಕೊಂಡಿದ್ದಾರೆ; ಹಿಂದೂ ಸಂಸ್ಕೃತಿಯನ್ನು ಉಳಿಸಬೇಕು ಎಂಬುದಾಗಿ ಪರ ಪಕ್ಷದವರು ನಂಬಿಕೊಂಡರೆ ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನ ನಡೆಯುತ್ತಿದೆ, ಬ್ರಾಹ್ಮಣ ಪುರೋಹಿತಶಾಹಿ ಮತ್ತೆ ತಲೆಯೆತ್ತುತ್ತಿದೆ, ಅದನ್ನು ತಪ್ಪಿಸಬೇಕು ಎಂಬುದಾಗಿ ವಿರೋಧ ಪಕ್ಷಗಳು ನಂಬಿಕೊಂಡಿವೆ. ನಮ್ಮ ಇತಿಹಾಸ ಪುರಾಣಗಳನ್ನು ಹಿಡಿದುಕೊಂಡು ನಮ್ಮ ವರ್ತಮಾನದ ಪ್ರಸ್ತುತತೆಗೆ ಬೇಕಾದಂತೆ ಅದನ್ನು ನಿರೂಪಿಸಿಕೊಳ್ಳುವ ಸ್ವಾತಂತ್ರ್ಯವನ್ನು ನಮ್ಮ ಸಂಪ್ರದಾಯಗಳು ಯಾವಾಗಲೂ ತೆರೆದಿಟ್ಟಿವೆ. ಹಾಗೂ ಇದನ್ನೇ ಭಾರತೀಯರ ಒಂದು ದೊಡ್ಡ ದೋಷ ಹಾಗೂ ಅನಾಗರಿಕತೆಯ ಲಕ್ಷಣ ಎಂಬುದಾಗಿಯೂ ಪಾಶ್ಚಾತ್ಯರು ಪರಿಗಣಿಸಿದ್ದರು. ಹಾಗಾಗಿ ಈ ಮೇಲಿನ ನಿರೂಪಣೆ ನಡೆಸಿದವರೆಲ್ಲ ಆಧುನಿಕರ ದೃಷ್ಟಿಯಲ್ಲಿ ಅಪರಾಧಿಗಳಾಗಬಹುದೇ ಹೊರತೂ ಸಂಪ್ರದಾಯದ ದೃಷ್ಟಿಯಲ್ಲಿ ಅಪರಾಧಿಗಳಂತೂ ಆಗಲಾರದು.

ಸ್ವರ್ಣವಲ್ಲಿ ಶ್ರೀಗಳು ಅಮೀನ್ಮಟ್ಟು ಅವರ ಹೊಸ ನಿರೂಪಣೆಯನ್ನು ಮಕ್ಕಳಿಗೆ ತಿಳಿಸಬೇಕು ಎಂದು ಸಲಹೆ ನೀಡುವುದಕ್ಕೂ ಮೊದಲು ಈ ಮೇಲಿನ ನಿರೂಪಣೆಗಳಿಗೂ ಸಾಂಪ್ರದಾಯಿಕ ನಿರೂಪಣೆಗಳಿಗೂ ಒಂದು ಮೂಲಭೂತ ವ್ಯತ್ಯಾಸವಿದೆ ಎಂಬುದನ್ನು ಗಮನಿಸಿದರೆ ಒಳ್ಳೆಯದು. ಈ ಹೊಸ ನಿರೂಪಣೆಗಳು ಜನಾಂಗ ದ್ವೇಷ ಹಾಗೂ ಸಂಘರ್ಷಗಳನ್ನು ಪ್ರಚೋದಿಸುವ ಶಕ್ತಿಯನ್ನು ಹೊಂದಿವೆ. ಹಾಗಾಗಿ ಬಹು ಸಂಸ್ಕೃತಿಗಳನ್ನು ಸಾಮರಸ್ಯದಿಂದ ಪಾಲಿಸಬೇಕೆನ್ನುವ ಉದ್ದೇಶವನ್ನೊಳಗೊಂಡ ನಮ್ಮ ಸೆಕ್ಯುಲರ್ ರಾಷ್ಟ್ರದ ಆಶಯಕ್ಕೆ ಭಗವದ್ಗೀತಾ ಅಭಿಯಾನಕ್ಕಿಂತ ಇಂಥ ನಿರೂಪಣೆಗಳೇ ಹೆಚ್ಚು ಧಕ್ಕೆ ತರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಇತಿಹಾಸದ ಹೆಸರಿನಲ್ಲಿ ಬಂದ ಈ ಹೊಸ ನಿರೂಪಣೆಗಳನ್ನು ಸೃಷ್ಟಿಸುವ ಮೂಲಕ ಭಗವದ್ಗೀತೆಗೆ ಹೊಸ ವಿಷದ ಹಲ್ಲುಗಳನ್ನು ಸೇರಿಸುತ್ತೇವೆಯೇ ಹೊರತೂ ನಮ್ಮ ಯಾವ ಸಾಮಾಜಿಕ ನ್ಯಾಯಕ್ಕೂ ಈ ನಿರೂಪಣೆ ಒದಗಿ ಬರುವುದಿಲ್ಲ. ಹಾಗಾಗಿ ಏನೋ ಅನಾಹುತವಾಗುತ್ತಿದೆ ಅದನ್ನು ತಪ್ಪಿಸಬೇಕೆಂದು ಇಂಥ ಹೊಸಹೊಸ ಇತಿಹಾಸಗಳನ್ನು ಕಟ್ಟಿ ಅವುಗಳನ್ನು ನಮ್ಮ ಮಠಾಧಿಪತಿಗಳು ಪ್ರಚಾರಮಾಡುವಾಗ ಆಗುವ ಅನಾಹುತಕ್ಕಿಂತ ಭಗವದ್ಗೀತೆಯ ಅಭಿಯಾನವನ್ನು ಈಗಿದ್ದ ಹಾಗೇ ನಡೆಯಲಿಕ್ಕೆ ಬಿಡುವುದೇ ನಮ್ಮ ಸಾಮಾಜಿಕ ಶಾಂತಿ-ನೆಮ್ಮದಿಯ ದೃಷ್ಟಿಯಿಂದ ಹೆಚ್ಚು ಕ್ಷೇಮಕರ. ಹೆಚ್ಚೆಂದರೆ ಬಹಳಷ್ಟು ಮಂದಿಗೆ ಅದು ಅರ್ಥವಾಗುವುದಿಲ್ಲ ಅಷ್ಟೆ. ಅನರ್ಥ ಹುಟ್ಟಿಸುವುದಕ್ಕಿಂತ ಅದೇ ಎಷ್ಟಕ್ಕೋ ಒಳ್ಳೆಯದು. ಭಗವದ್ಗೀತೆಯನ್ನು ನೂರು ವರ್ಷ ಕಡ್ಡಾಯಮಾಡಿದರೂ ಅದು ಭಾರತದಲ್ಲಿ ಒಂದು ರಿಲಿಜನ್ನನ್ನು ಹುಟ್ಟುಹಾಕಲು ಸಾಧ್ಯವಿಲ್ಲ ಎಂಬ ಅಂಶವನ್ನು ಪರ ಹಾಗೂ ವಿರೋಧದ ಗುಂಪುಗಳೆರಡೂ ಗಮನದಲ್ಲಿಟ್ಟುಕೊಂಡರೆ ಈಗಿರುವ ಸಮಸ್ಯೆಯನ್ನು ಬಗೆಹರಿಸುವ ದಾರಿ ಕಾಣಬಹುದು.

ಭಗವದ್ಗೀತೆಯ ಕುರಿತ ಯಾವ ಸಂಪ್ರದಾಯಸ್ಥರ ನಿರೂಪಣೆಗಳೂ ವರ್ತಮಾನದ ಸಮೂಹಗಳನ್ನು ರಿಲಿಜನ್, ಜನಾಂಗ, ಜಾತಿಗಳ ನೆಲೆಯಲ್ಲಿ ಎತ್ತಿಕಟ್ಟುವ ಕೆಲಸವನ್ನು ಮಾಡಿಲ್ಲ ಎಂಬುದನ್ನು ಗಮನಿಸೋಣ. ವಿಭಿನ್ನ ಸಂಪ್ರದಾಯಗಳು ಸತ್ಯವನ್ನು ಅರಿಯಲಿಕ್ಕಿರುವ ವಿಭಿನ್ನ ಮಾರ್ಗಗಳು ಎಂಬುದನ್ನು ಭಗವದ್ಗೀತೆಯೇ ಸಾರುತ್ತದೆ. ನಮ್ಮ ಈ ಆರ್ಯ-ದ್ರಾವಿಡ, ಬ್ರಾಹ್ಮಣ-ಶೂದ್ರ ಕಥೆಗಳೆಲ್ಲವನ್ನು ನಿರಾಧಾರವಾಗಿ ಅದರ ಮೇಲೆ ಹೇರುವುದಕ್ಕಿಂತ ಈ ಮೇಲಿನ ಐತಿಹಾಸಿಕ ಸಂಗತಿ ನಮ್ಮ ಗಮನವನ್ನು ಮೊದಲು ಸೆಳೆಯಬೇಕು. ಭಗವದ್ಗೀತೆಯಲ್ಲಿ ನಮ್ಮ ಪೂರ್ವಿಕರು, ಸಂತರು, ದಾರ್ಶನಿಕರೆಲ್ಲ ಸಾವಿರಾರು ವರ್ಷ ಏನನ್ನು ಹುಡುಕಿದ್ದಾರೆ? ಅದೇಕೆ ಇಂದಿನವರೆಗೂ ಯಾವ ಅಧಿಕಾರ, ಬಲಗಳ ಸಹಾಯವಿಲ್ಲದೇ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ? ಎಂಬ ಪ್ರಶ್ನೆ ನನಗಂತೂ ಕುತೂಹಲಕಾರಿಯಾಗಿ ಕಾಣಿಸುತ್ತದೆ. ಹಾಗಾಗಿ ಈ ಗ್ರಂಥದ ಕುರಿತು ಉಡಾಫೆಯಿಂದ ಪ್ರತಿಕ್ರಿಯಿಸಿದರೆ ನಮ್ಮ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಅವಕಾಶವನ್ನು ನಾವು ಕಳೆದುಕೊಳ್ಳುತ್ತೇವೆ. ಬದಲಾಗಿ ಅದನ್ನು ಅಧ್ಯಯನ ಮಾಡಿದ ವಿದ್ವಾಂಸರು ಹಾಗೂ ಸಾಧನೆ ಮಾಡಿದವರ ಜೊತೆಗೆ ಸಂವಾದ ಬೆಳೆಸೋಣ.

ಭಗವದ್ಗೀತೆಯಂಥ ಗ್ರಂಥಗಳ ಕುರಿತು ಇಂದು ಇರುವ ಮೇಲಿನ ಚರ್ಚೆಗಳು, ಹೋರಾಟಗಳು ಏನನ್ನು ದೃಷ್ಟಾಂತಪಡಿಸುತ್ತವೆ? ನಮ್ಮ ಸಂಸ್ಕತಿಯಲ್ಲಿ ಅದರ ಸ್ಥಾನಮಾನವೇನು ಹಾಗೂ ಅದರ ಜೊತೆಗೆ ವ್ಯಕ್ತಿಯೊಬ್ಬನು ಯಾವ ಸಂಬಂಧವನ್ನು ಏರ್ಪಡಿಸಿಕೊಳ್ಳಬೇಕೆಂಬುದೇ ನಮಗೆ ಮರೆತುಹೋಗಿದೆ. ಬದಲಾಗಿ ಅದನ್ನೊಂದು ಹಿಂದೂ ರಿಲಿಜಿಯಸ್ ಸ್ಕ್ರಿಪ್ಚರ್ಎಂದೋ ಅಥವಾ ಆರ್ಯ-ಬ್ರಾಹ್ಮಣರ ಮ್ಯಾನಿಫೆಸ್ಟೋ ಅಥವಾ ಇತಿಹಾಸ ಎಂದೋ ಭಾವಿಸಿಕೊಳ್ಳುವುದು ಮಾತ್ರ ನಮಗೆ ಸಾಧ್ಯವಾಗಿದೆ. ಹಿಂದಿನ ಅನೇಕ ತಲೆಮಾರುಗಳ ಅನೇಕ ವ್ಯಕ್ತಿಗಳಿಗೆ ಅದೊಂದು ಜೀವನ ಕಲಿಕೆಯ ಆಕರವಾಗಿದ್ದುದಂತೂ ಹೌದು. ಒಂದು ಸಂಗೀತ ಪುಸ್ತಕದಂತೆ ಆಧ್ಯಾತ್ಮವಿದ್ಯೆಯ ಪುಸ್ತಕವಾಗಿ ಅದು ಸಹಕರಿಸಬಲ್ಲದು ಎಂಬುದಾಗಿ ಸಂಪ್ರದಾಯಸ್ಥರು ಭಾವಿಸಿದ್ದಾರೆ. ಸ್ವರ್ನವಲ್ಲಿ ಶ್ರೀಗಳು ಭಗವದ್ಗೀತೆಯ ಈ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ವಿಧ್ಯಾರ್ಥಿಗಳಿಗೆ ಆ ಗ್ರಂಥದ ಕುರಿತು ಆಸಕ್ತಿ ಮೂಡಿಸುವ ಆದರ್ಶವನ್ನಿಟ್ಟುಕೊಂಡಿದ್ದಾರೆ ಎಂಬುದು ಅವರ ಪ್ರಚಾರ ಟಿಪ್ಪಣಿಗಳನ್ನು ನೋಡಿದರೆ ತಿಳಿಯುತ್ತದೆ. ರಾಜಕೀಯ ಧುರೀಣರು ಈ ಕಾರ್ಯಕ್ರಮವನ್ನು ಸಮರ್ಥಿಸಿಕೊಳ್ಳುವಾಗ ಅವರಿಗೆ ಬೇರೆಯದೇ ರಾಜಕೀಯ ಕಾರಣಗಳಿವೆ ಎಂಬುದು ಸ್ಪಷ್ಟ. ಆದರೆ ಪ್ರಜ್ಞಾವಂತರು ಈ ಇಬ್ಬರ ನಡುವಿನ ವ್ಯತ್ಯಾಸವನ್ನು ಕೂಡ ಗಮನಿಸಬೇಕು. ಇಂಥ ಸ್ವಾಮಿಗಳೆಲ್ಲ ಸತತ ಅಧ್ಯಯನಶೀಲರಾಗಿರುತ್ತಾರೆ. ಅವರಿಗೂ ನಮ್ಮಲ್ಲಿ ಅನೇಕರಂತೆ ಸಮಾಜದ ಕುರಿತು ಕಾಳಜಿಗಳಿವೆ ಹಾಗೂ ಸ್ವಂತ ನಿಲುವುಗಳಿವೆ.

ನಾವು ನಿಜವಾಗಿ ಜ್ಞಾನಾಸಕ್ತರೇ ಆಗಿದ್ದಲ್ಲಿ ಇಂಥ ಸಾಂಪ್ರದಾಯಿಕ ವಿದ್ವಾಂಸರ ಜೊತೆಗೆ ಹೇಗೆ ಸಂವಾದವನ್ನು ಏರ್ಪಡಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ನಾವು ಯೋಚಿಸಬೇಕಾದ ಅಗತ್ಯವಿದೆ. ಹಾಗೂ ಸೆಕ್ಯುಲರ್ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಮಗೆ ನಿಜವಾದ ಕಳಕಳಿ ಇದ್ದಿದ್ದೇ ಹೌದಾದರೆ ಸೆಕ್ಯುಲರಿಸಂನ ಸ್ವರೂಪವನ್ನು ಮೊದಲು ತಿಳಿದುಕೊಳ್ಳೋಣ.

 

 

‍ಲೇಖಕರು avadhi

5 August, 2011

12 Comments

  1. ಸಿ ಪಿ ನಾಗರಾಜ

    ” ಶಾಲಾ ಮಕ್ಕಳಿಗೆ ಭಗವದ್ಗೀತೆಯ ಕುರಿತು ಜಾಗೃತಿ ಮೂಡಿಸುವ ಅಭಿಯಾನವನ್ನು ಹುಟ್ಟುಹಾಕಿ ತಮ್ಮ ಶ್ರಮ ಹಾಗೂ ಮಠದ ಹಣವನ್ನು ವೆಚ್ಚಮಾಡುತ್ತಿರುವ ಸ್ವರ್ಣವಲ್ಲೀ ಸ್ವಾಮಿಗಳು ತಮ್ಮ ಕೆಲಸವೇಕೆ ಮಹತ್ವಪೂರ್ಣವಾಗಿದೆ ಎಂಬುದನ್ನು ಬೇರೆಯೇ ರೀತಿಯಲ್ಲಿ ಭಾವಿಸಿದಂತಿದೆ. ಅವರು ತಿಳಿಸುವಂತೆ ಭಗವದ್ಗೀತೆಯು ಮಕ್ಕಳಿಗೆ ಆಧ್ಯಾತ್ಮ ಶಿಕ್ಷಣವನ್ನು ನೀಡುತ್ತದೆಯೇ ಹೊರತೂ ಯಾವುದೇ ಮತಪ್ರಚಾರವನ್ನು ಮಾಡುತ್ತಿಲ್ಲ. ಮಕ್ಕಳಲ್ಲಿ ಒಳ್ಳೆಯ ವಿಚಾರಗಳನ್ನು ಪ್ರಚೋದಿಸಿ, ಅವರಿಗೆ ಮನೋಸ್ಥೈರ್ಯವನ್ನು ಸತ್ಪ್ರೇರಣೆಯನ್ನು ನೀಡುವ ಶಕ್ತಿ ಭಗವದ್ಗೀತೆಗಿದೆ.”-
    ಶ್ರೀ ರಾಜರಾಮ ಹೆಗ್ಗಡೆಯವರಿಗೆ ,
    ಮಕ್ಕಳಿಗೆ ಬೇಕಾಗಿರುವುದು ಸಾಮಾಜಿಕ ಶಿಕ್ಷಣವೇ ಹೊರತು ಆಧ್ಯಾತ್ಮಿಕ ಶಿಕ್ಷಣವಲ್ಲ . ಅಧ್ಯಾತ್ಮ ಅಥವಾ ಆಧ್ಯಾತ್ಮಿಕ ಎಂಬ ಧಾರ್ಮಿಕನೆಲೆಯ ಪಾರಿಭಾಷಿಕ ಪದವನ್ನು ರಾಮಕೃಷ್ಣ ಪರಮಹಂಸರು ಮತ್ತು ಕುವೆಂಪು ಬಳಸುವಂತೆಯೇ , ಜಾತಿನೆಲಗಟ್ಟಿನಲ್ಲಿ ನಿಂತಿರುವ ಮಠಾಧಿಪತಿಗಳು ಹಾಗೂ ಅಪಾರ ಸಂಪತ್ತಿನ ಮೇಲೆ ಮಲಗಿರುವ ದೇವಮಾನವರು ಬಳಸುತ್ತಿದ್ದಾರೆ . ಈ ಪದಕ್ಕೆ ನಿರ್ದಿಷ್ಟವಾದ ಯಾವ ಅರ್ಥವಿದೆ ? ಈ ಪದವನ್ನು ಬಳಸುವವರು ತಮ್ಮ ತಮ್ಮ ನಿಲುವುಗಳ ಅಭಿವ್ಯಕ್ತಿಗೆ ಅನುಗುಣವಾಗಿ ವ್ಯಾಖ್ಯಾನ ಮಾಡುತ್ತಾರೆ . ಮಕ್ಕಳಿಗೆ ಇಂದು ಮತ್ತು ಎಂದೆಂದಿಗೂ ಬೇಕಾಗಿರುವುದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಲು ಅಗತ್ಯವಾದ ಪ್ರಾಮಾಣಿಕತನ ಮತ್ತು ದುಡಿಮೆಯ ಬಗೆಗಿನ ಅರಿವೇ ಹೊರತು ಅಧ್ಯಾತ್ಮವಲ್ಲ .

    • Santhosh

      ನಾಗರಾಜ್ ರವರೆ

      ೧. ಸಾಮಾಜಿಕ ಶಿಕ್ಷಣಕ್ಕೂ ಆಧ್ಯಾತ್ಮಿಕ ಶಿಕ್ಷಣಕ್ಕೂ ವ್ಯತ್ಯಾಸವಿರಬಹುದು, ಆದರೆ ಸುಮಾರು ೧೫೦ ವರ್ಷಗಳಿಂದ ಸಾಮಾಜಿಕ ಶಿಕ್ಷಣ ಪಡೆದು ವಿದ್ಯಾಬ್ಯಾಸಕ್ಕಾಗಿ ವಿದೇಶಗಳಿಗೆ ಹಾರಿದರೂ ಸಹ ನಮ್ಮ ಮೇಲಿನ ಹಣೆಪಟ್ಟಿ ಇರುವುದು ಬಹುತೇಕರು ಭ್ರಷ್ಟಾಚಾರಿಗಳೆಂದು. ನಿಜವಾಗಿಯೂ ಶಿಕ್ಷಣ ಉತ್ತಮ ವ್ಯಕ್ತಿಗಳಾಗಿ, ಪ್ರಾಮಾಣಿಕರಾಗಿ ಬದುಕಲು ಬೇಕಾದ ಪರಿಸ್ಥಿತಿಗಳನ್ನು ಒದಗಿಸಿಕೊಡುವುದೇ ಆಗಿದ್ದರೆ ಸುಭಿಕ್ಷವಾದ ಭಾರತವನ್ನು ನಾವಿಂದು ಎದುರು ನೋಡಬೇಕಿತ್ತೇ ಹೊರತು ಪ್ರಸ್ತುತದ ಭಾರತವಲ್ಲ.
      ೨. ಭಗವದ್ಗೀತೆ ಪ್ರಾಮಾಣಿಕತೆಯನ್ನು ಕಲಿಸುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ? ಇಂದು ಒಬ್ಬ ಸತ್ಯವಾದಿ ಇದ್ದ ಎಂದು ಹೇಳಬೇಕಾದರೆ ನಾವು ಒಕ್ಕೊರಲಿನಿಂದ ಕೈ ತೋರಿಸುವುದು ಗಾಂಧಿಯ ಕಡೆಗೆ. ಅವರು ಬದುಕಿದ್ದ ಕಾಲದ ವರೆಗೂ ಗೀತೆಯನ್ನು ಅಧ್ಯಯನ ಮಾಡುತ್ತಲೇ ಇದ್ದು, ಅದೇ ಪ್ರೇರಣೆ ಎಂದು ಸಹ ಹಲವೆಡೆ ಹೇಳಿದ್ದಾರೆ.

  2. Nanjunda Raju

    maanyare, idu namma deshada durradrusta. namma dharamakke namma deshadalle keelarime ide embudakke idakkintalu bere saakshi beke. Hogali namma dharmavannu mattelli Odabeku, Helabeku. ottinalli hindudarmada bhunaadi BHAGAVADGEETE yannu namma deshadalli prachaara maadabaradu, bere dharmadavaru, dinavu prachaara maadali, ade naavu maaduvudu beda. bahutEka avarige prachaarada geelu endu kaanuttade. ee modalu namma dharamada mele anya dharmeeyarinda Ada dourjanyagalu arivillavendu bhaavisabahudaagorittade. allave. Heegaadare, avara mundina peelige dharmaandaraagi, bere dharmavannu avalambisidare Ascharyapadabekaagilla. hidudarmaa halaaguttide. bere dharmada prachaara hechchaagi, avara sankye hechchaaguttide. hindugalu alpasankyataraaguttiddare. idu avari kannuvudillave. yochisali.

  3. M SHAKUNTHALA NAYAK

    BHAGAVADGEETHE BHAGAVANTANA GEETE ANDARE NANNADE GEETHE NANNANU NANU ARITU KONDU ITARARANNU HEGE ARITUKOLLABAHUDU EMBUDANNU HELUVA GEETHE OLLEDYAVUDU KETTADYAVUDU ANNODANNU DRUSHTANTHAGALA MULAKA VIVARISI NAMMA VIVEKA PRJNE GALANNU JAGRUTA GOLISUVA GEETHE IDU KHANDITA ONDU MATHA DHARMA JATI GALIGAGI ALLA MANAVA KULAKKAGI MANUSHYANOLAGINA OLITU KEDUKU GALANNU MANA MUTTUVANTE HELUVA GEETHE MANUSHYA RELLARU ARITU A MULAKA TAMMANNE ARITUKOLLA BEKADA GEETHE PRAPANCHADA ELLA SAHITYA GALALLI BARUVA ENENU OLLEDU HAGU KETTADDARA PARINAMAVENU ANNODELL I BHAGAVADGITE YALLIDE DAYAVITTU ADANNU HINDUGALADDU BRAHMANARADDU ENDU HELI ADARA MOULYAVANNU KADIME MADADE YAVUDE PURVAGRAHAVILLADE ELLA VIDYARTHIGALU BHAGAVADGITHE ABHYASA MADUVANTHAGALI

  4. Vasanth

    BJP’s hidden agenda should be understand properly. Otherwise we keep on supporting them. BJP govt. is a threat to our cultural fabric. These Rajaram hegde, Balagangdhar and people of similar mind set are trying to maintain the stereotype. There is no need to engage with any pandits of olden tradition. Let us find our own way which is rational in all sense.

    • Santhosh

      Vasanth

      What kind of stereotypes they are maintaining?

    • Santhosh

      Leave the BJP, hidden agenda and cultural fabric, lets discuss about Bagavadgitha.. that needs intellectual labour rathar than cynic

  5. ಸಿ ಪಿ ನಾಗರಾಜ

    ಶ್ರೀ ಸಂತೋಷ್ ಅವರಿಗೆ ,
    ” ಭಗವದ್ಗೀತೆ ಪ್ರಾಮಾಣಿಕತೆಯನ್ನು ಕಲಿಸುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ? ಇಂದು ಒಬ್ಬ ಸತ್ಯವಾದಿ ಇದ್ದ ಎಂದು ಹೇಳಬೇಕಾದರೆ ನಾವು ಒಕ್ಕೊರಲಿನಿಂದ ಕೈ ತೋರಿಸುವುದು ಗಾಂಧಿಯ ಕಡೆಗೆ. ಅವರು ಬದುಕಿದ್ದ ಕಾಲದ ವರೆಗೂ ಗೀತೆಯನ್ನು ಅಧ್ಯಯನ ಮಾಡುತ್ತಲೇ ಇದ್ದು, ಅದೇ ಪ್ರೇರಣೆ ಎಂದು ಸಹ ಹಲವೆಡೆ ಹೇಳಿದ್ದಾರೆ.” ನೀವು ಹೇಳುವ ಹಾಗೆ ಒಂದು ನೂರು ಕೋಟಿ ಜನಸಮುದಾಯದಲ್ಲಿ ಒಬ್ಬ ವ್ಯಕ್ತಿಯನ್ನು ಮಾತ್ರ ಸತ್ಯವಾದಿಯನ್ನಾಗಿ ಮಾಡುವ ಆಧ್ಯಾತ್ಮಿಕ ಶಿಕ್ಷಣದ ಅಗತ್ಯವಿಲ್ಲ .
    2. ” ಸುಮಾರು ೧೫೦ ವರ್ಷಗಳಿಂದ ಸಾಮಾಜಿಕ ಶಿಕ್ಷಣ ಪಡೆದು ವಿದ್ಯಾಬ್ಯಾಸಕ್ಕಾಗಿ ವಿದೇಶಗಳಿಗೆ ಹಾರಿದರೂ ಸಹ ನಮ್ಮ ಮೇಲಿನ ಹಣೆಪಟ್ಟಿ ಇರುವುದು ಬಹುತೇಕರು ಭ್ರಷ್ಟಾಚಾರಿಗಳು ” ಎಂಬುದು ನಿಮ್ಮ ತಪ್ಪು ಗ್ರಹಿಕೆ . ಯಾವುದೇ ಸಮಾಜದಲ್ಲಿ ಬಹುತೇಕರು ಭ್ರಷ್ಟರಲ್ಲ ; ಕೆಲವರ ಭ್ರಷ್ಟಾಚಾರ ಬಹುತೇಕರ ಬದುಕನ್ನು ಹಾಳುಮಾಡುತ್ತಿದೆ . ಎಲ್ಲಕ್ಕಿಂತ ಮುಖ್ಯವಾಗಿ ನಾವು ಗಮನಿಸಬೇಕಾದ ಮತ್ತೊಂದು ಅಂಶವೆಂದರೆ , ನೂರೈವತ್ತು ವರ್ಷಗಳ ಹಿಂದಿನ ಸಾವಿರಾರು ವರ್ಷಗಳ ಅವಧಿಯಲ್ಲಿ ಭರತಖಂಡದಲ್ಲಿ ಹೇಳಿಕೊಡಲಾಗುತ್ತಿದ್ದ ಶಿಕ್ಷಣದ ಪರಿಧಿಯಿಂದ ಈ ದೇಶದ ಒಟ್ಟು ಜನಸಮುದಾಯದಲ್ಲಿ ಶೇಕಡ ತೊಂಬತ್ತು ಮಂದಿ ಜಾತಿವ್ಯವಸ್ಥೆಯ ಕಾರಣದಿಂದ ಹೊರಗಿದ್ದರೆಂಬ ಸಾಮಾಜಿಕ ಇತಿಹಾಸದ ಅರಿವು ನಮಗಿರಬೇಕು .

    3. ಭಗವದ್ಗೀತೆಯನ್ನಾಗಲಿ ಅಥವಾ ಇನ್ನಾವುದೇ ಆಧ್ಯಾತ್ಮಿಕ ಗ್ರಂಥಗಳನ್ನು ಓದಬಾರದೆಂದು ಯಾರೂ ಹೇಳುತ್ತಿಲ್ಲ . ವ್ಯಕ್ತಿಗತ ನೆಲೆಯಲ್ಲಿ ನಮಗಿಷ್ಟವಾದ ಯಾವುದೇ ಕೃತಿಗಳನ್ನಾದರೂ ಓದಲು ಯಾರಿಂದಲೂ ವಿರೋಧವಿಲ್ಲ . ಸಮುದಾಯದ ನೆಲೆಯಲ್ಲಿ ಶಾಲಾ ಶಿಕ್ಷಣವೆಂಬುದು ಮಕ್ಕಳನ್ನು ಸಾಮಾಜಿಕ ಮನುಷ್ಯರನ್ನಾಗಿ ರೂಪಿಸುವ ಹೊಣೆಗಾರಿಕೆಯನ್ನು ಹೊಂದಿದೆ . ಆದುದರಿಂದ ಶಾಲೆಯಲ್ಲಿ ಆಧ್ಯಾತ್ಮಿಕ ಶಿಕ್ಷಣದ ಅಗತ್ಯವಿಲ್ಲ .

    • Santhosh

      ಶ್ರೀ ನಾಗರಾಜ್ ರವರೆ

      ೧. ನೂರು ಕೋಟಿ ಜನರಲ್ಲಿ ಒಬ್ಬನನ್ನಾದರೂ ಸತ್ಯವಾದಿಯನ್ನಾಗಿ ಮಾಡಿದೆಯಲ್ಲಾ ಹಾಗಾಗಿ ಅದು ಬೇಕು. ನೂರು ಕೋಟಿ ಜನರೂ ಅದನ್ನು ಓದಿದರೆ ಅರ್ಧದಷ್ಟಾದರೂ ನೀವಂದುಕೊಂಡಿರುವ ಪ್ರಾಮಾಣಿಕ ವ್ಯಕ್ತಿಗಳು ಸಮಾಜಕ್ಕೆ ಬರಬಹುದು. ಆದರೆ ಓದಲು ಇಚ್ಚೆಯೂ ಇಲ್ಲ, ಬಿಡುವುದೂ ಇಲ್ಲವೆಂದರೆ ಅದು ದೌರ್ಜನ್ಯವೇ ಸರಿ.

      ೨. ಭಾರತ ಅಂತರರಾಷ್ಟ್ರೀಯ ಮಟ್ಟದ ಒಂದು ವರದಿಯಲ್ಲಿ ೮೭ ನೇ ಸ್ಥಾನವನ್ನು ಭ್ರಷ್ಟಾಚಾರದಲ್ಲಿ ಪಡೆದಿಕೊಂಡಿರುವುದನ್ನು ತಿಳಿದುಕೊಂಡರೆ ಒಳಿತು. ನೀವಂದುಕೊಂಡ ಹಾಗೆ ಶಿಕ್ಷಣವೆಂಬುದು ಕೆಳಜಾತಿಯವರಿಗೆ ಗಗನಕುಸುಮವಾಗಿತ್ತು ಎಂಬುದು ತಪ್ಪು ಗ್ರಹಿಕೆ. ಬ್ರಿಟೀಷರು ಭಾರತಕ್ಕೆ ಬರುವ ಮುನ್ನ ಹಾಗೂ ಬಂದ ನಂತರ ಶಿಕ್ಷಣ ಯಾವ್ಯಾವ ಸಮುದಾಐಗಳು ಪಡೆಯುತ್ತಿದ್ದವೆಂಬುದಕ್ಕೆ ಸಂಶೋಧನೆಗಳಾಗಿವೆ. ಅದನ್ನು ಓದಿದರೆ ನಿಮಗೆ ಆಶ್ಚರ್ಯವಾಗಬಹುದು, ಏಕೆಂದರೆ ನೀವು ಹೇಳುತ್ತಿರುವ ಜಾತಿವ್ಯವಸ್ಥೆಯ ಕತೆಗೆ ವಿರುದ್ದವಾಗಿದೆ. ಭಾರತದಲ್ಲಿ ಬ್ರಿಟೀಷರು ಬರುವವರೆಗೆ ಹಲವಾರು ಸಮುದಾಯಗಳಿಗೆ ಶಿಕ್ಷಣ ದೊರಕಿಲ್ಲ ಎಂದು ವಾದಿಸುವುದು ಅಧ್ಯಯನ ಮಾಡದೆ ಬಾಯಿ ಮಾತಿನಲ್ಲಿ ಹೇಳುವುದಷ್ಟೆ ಆಗಿದೆ. ಆದರೆ ನಿಜವಾಗಿಯೂ ಬ್ರಿಟೀಷರು ತಮ್ಮ ಶಿಕ್ಷಣ ಪದ್ದತಿಯನ್ನು ಜಾರಿಗೆ ತರುವ ಮುನ್ನ ಇಲ್ಲಿನ ಶಿಕ್ಷಣ ಪದ್ದತಿಯ ಸರ್ವೆ ಮಾಡಿದ್ದರು. ಅದರ ಸಂಪೂರ್ಣ ವಿವರಕ್ಕೆ ಬೇಕಾದರೆ ಓದಿ ನೋಡಿ: ಧರಮ್ ಪಾಲ್, “ದ ಬ್ಯೂಟಿಫುಲ್ ಟ್ರಿ”.

      ೩. ಈ ಸಾಮಾಜಿಕ ಮನುಷ್ಯರು ಅಂದರೆ ಯಾರು? ಒಂದೊಮ್ಮೆ ಭಗವದ್ಗೀತೆ ಓದಿದವರು ಅಸಾಮಾಜಿಕರೇ?

  6. mahesh

    ನನಗೆನ್ನಿಸುವಂತೆ ಲೇಖಕರು ಹೇಳುತ್ತಿರುವ ವಿಚಾರ:ಗೀತೆಯ ಬಗ್ಗೆ ಎರಡು ರೀತಿಯ ನಿರೂಪಣೆಗಳಿವೆ. ಒಂದು ಆಧುನಿಕ ನಿರೂಪಣೆ ಇದರಲ್ಲಿ ಸೆಕ್ಯುಲರ್ ವಾದಿಗಳು ಇದ್ದಾರೆ.ಹಿಂದೂ ರಾಷ್ಟ್ರವಾದದವರು ಇದ್ದಾರೆ. ಎರಡನೆಯ ನಿರೂಪಣೆ ಭಾರತೀಯ ಸಂಪ್ರದಾಯದ ನಿರೂಪಣೆ. ಇದರಲ್ಲಿ ಕೆಲವು ಸ್ವಾಮೀಜಿಗಳು ಇದ್ದಾರೆ. ಇವೆರಡು ನಿರೂಪಣೆಗಳು ಗೀತೆಯನ್ನು ಬೇರೆ ಬೇರೆ ರೀತಿಯಲ್ಲಿ ನೋಡುತ್ತವೆ. ನಾವು ಇವುಗಳ ವ್ಯತ್ಯಾಸವನ್ನು ಅರಿಯಬೇಕು. ಆಧುನಿಕ ನಿರೂಪಕರು ಗೀತೆಯನ್ನು ಹಿಂದೂಗಳ ಧರ್ಮಗ್ರಂಥವೆಂಬ ಗ್ರಹಿಸಿದ್ದಾವೆ. ಅವುಗಳು ಈ ಗೀತೆಯನ್ನು ತಮಗೆ ಬೇಕಾದಂತೆ ನಿರೂಪಿಸಿತ್ತವೆ. ಇದರಲ್ಲಿ ಯಾವುದು ಒಂದಕ್ಕಿಂತ ಒಂದು ಉತ್ತಮವು ಅಲ್ಲ. ಅನುಕರಣೀಯವು ಅಲ್ಲ. ಇವುಗಳ ಗ್ರಹಿಕೆಯ ಪ್ರಪಂಚಕ್ಕೆ ಇಳಿದರೆ ಗೀತೆ ಸ್ವರೂಪವು ನಮ್ಗೆ ದಕ್ಕುವುದಿಲ್ಲ. ಇದರಿಂದಚೆಗೆ ಈ ಗೀತೆಯ ಚರ್ಚೆಯನ್ನು ತರಬೇಕು ಎನ್ನುವುದು ಲೇಖಕರ ಆಶಯವೇನ್ನಿಸುತ್ತದೆ. ಅದನ್ನು ಕಡ್ಡಾಯ ಮಾಡುವುದಲ್ಲ ಎನ್ನಿಸುತ್ತದೆ, ಇ ನಿಟ್ವಿನಲ್ಲಿ ಸ್ವಾಮಿಗಳ ಸಹಾಯವನ್ನು ಪಡೆಯ ಬಹುದು ಎನ್ನಿತ್ತಿದ್ದಾರೆ. ಎನಿಸುತ್ತದೆ, ಇರಲಿ ಸ್ವಾಮಿಗಳ ಸಹಾಯಕ್ಕೆ ಕೆಲವರ ತಕಾರಾರು ಇದೆ. ಸ್ವಾಮಿಗಳಲ್ಲಿ ಹಿಂದೂತ್ವದ ಚಿಂತನೆಯ ಸ್ವಾಮಿಗಳು ಇದ್ದಾರೆ. ಸೆಕ್ಯುಲರ್ ಚಿಂತನೆಯ ಸ್ವಾಮಿಗಳು ಇದ್ದಾರೆ. ಇವರದೂ ಆಧುನಿಕ ನಿರೂಪಣೆಯಾದ್ರೆ ಅವನ್ನು ಚರ್ಚೆಗೆ ಒಳಪಡಿಸಬೇಕು.
    ಇತ್ತೀಚೆಗೆ ಬಾಲಗಂಗಾಧರ ರಾವ್ (ಇವರು ಸ್ವಾಮೀಜಿಯಯಲ್ಲ, ಸಂಸ್ಕೃತಿ ಚಿಂತಕರು, ವಿದ್ವಾಂಸರು). ಭಾಷಣ ಒಂದರಲ್ಲಿ ಮಾತನಾಡುತ್ತಾ ಹಿಂದೂತ್ವದದ ವಾದದಲ್ಲಿ ಹುರುಳಿಲ್ಲದನ್ನು, ಅದನ್ನು ತಳ್ಳಿ ಹಾಕುವ ಪ್ರಬಲ ವಾದವನ್ನು ಮಂಡಿಸಿದರು ಅದನ್ನು ನಾನಿಲ್ಲಿ ಮರು ನಿರೂಪಿಸುವ ಯತ್ನ ಮಾಡುತ್ತೇನೆ. ಅದು ಚರ್ಚೆಯಲ್ಲಿ ಯಾವ ಪಾತ್ರ ವಹಿಸುತ್ತದೆ ನೋಡೋಣ:
    ಬಾಲು ಹೇಳುವಂತೆ “ಗೀತೆ ಒಂದು ಆಧ್ಯಾತ್ಮಿಕ ಗ್ರಂಥ. ಯಾರಿಗೆ ಆಧ್ಯಾತ್ಮಿಕ ಮಾರ್ಗದಲ್ಲಿ ಆಸಕ್ತಿ ಇರುತ್ತದೆಯೋ, ಮತ್ತು ಆಧ್ಯಾತ್ಮಿಕ ಮಾರ್ಗದಲ್ಲಿ ಸತ್ಯವನ್ನು ಹುಡುಕುತ್ತಾ ಅಲೆಯುತ್ತಾ ಬರುತ್ತಾರೋ ಅವರಿಗೆ ಗೀತೆ ಕೆಲವು ಮಾರ್ಗ ಗಳನ್ನು ಸೂಚಿಸುತ್ತದೆ. ಇಲ್ಲಿ ಗಮನಿಸ ಬೇಕಾದ ಅಂಶವೆಂದರೆ ಯಾರು ಹುಡುಕಿ ಬರುತ್ತಾರೋ ಅವರಿಗೆ ಮಾತ್ರ ಕೆಲವು ಮಾರ್ಗ ಸೂಚಿಸುತ್ತದೆ. ಹುಡುಕಿ ಬರಬೇಕು. ಸತ್ಯದ ಹಸಿವಿರಬೇಕು. ಅದು ಸೂಚಿಸಿದ್ದನೇ ಒಪ್ಪಬೇಕು ಎಂದಿಲ್ಲ. ಬೇರೆ ಮಾರ್ಗಗಳಿಗೂ ಹೋಗಬಹುದು. ಆದ್ದರಿಂದ ಭಾರತದ ಸಂದರ್ಭದಲ್ಲಿ ಗೀತೆಯನ್ನು ಕಡ್ಡಾಯ ಮಾಡುವುದು ಎಂದರೆ ಗೀತೆಗೆ ಅಪಚಾರ ಮಾಡಿದಂತೆ. ಯಾರಿಗೆ ಹಸಿವೂ, ಅವರು ಹುಡುಕುವ ಮಾರ್ಗ ವಾದ್ದರಿಂದ ಅದನ್ನು ಕಡ್ಡಾಯ ಮಾಡುವುದೆಂದರೆ ಅರ್ಥವಿಲ್ಲ. ಮಾತ್ರವಲ್ಲ ಗೀತೆ ಆಧ್ಯಾತ್ಮಿಕ ಮಾರ್ಗಕ್ಕೆ ಒಂದು ಮಾದರಿಯಾದರೆ ಇಂತಹವೇ ಅನೇಕ ಮಾರ್ಗಗಳನ್ನು ಬೋಧಿಸುವ ಸಾಕಷ್ಷು ಸಂಪ್ರದಾಯಗಳು ಭಾರತದಲ್ಲಿ ಇವೆ. ಬುದ್ದರದು, ಜ್ಯೆನರದ್ದು, ವೀರ ಶ್ ವದ್ದೂ ಹೀಗೆ. ಇವು ಗೀತೆಯ ಮಾರ್ಗವನ್ನು ನಿರಾಕರಿಸಿ ಬೇರೆ ಮಾರ್ಗವನ್ನು ಒಪ್ಪುತ್ತವೆ. ಹೀಗೆ ಇರುವಾಗ ಗೀತೆಯನ್ನು ಒಪ್ಪದವರು ’ದೇಶ ಬಿಟ್ಟು ಹೋಗಿ ಎನ್ನುವುದು ಯಾರನ್ನು ಕುರಿತು ಎನ್ನುವುದರ ಬಗೆಗೆ ಸ್ಪಷ್ಟತೆ ಇಲ್ಲದವರು ಮತ್ತು ಗೀತೆಯು ಯಾವ ತರಹ ಪಠ್ಯವೆಂದು ಅರಿಯದವರು. ಈ ಸಂಪ್ರದಾಯಿಕ ಅರ್ಥದಲ್ಲಿ ಗೀತೆಯ ಕಡ್ಡಾಯಕಕ್ಕೆ ಅರ್ಥವಿಲ್ಲ”.
    ಈ ಅರ್ಥದಲ್ಲಿ ರಾಜರಾಮ್ ರವರು ಸಂಪ್ರಾಯಿಕ ರೀತಿಯಲ್ಲಿ ಈ ಪಠ್ಯವನ್ನು ಪರಿಭಾವಿಸುವ ಅಗತ್ಯವನ್ನು ಒತ್ತಿಹೇಳುತ್ತಿದ್ದಾರೆ. ಎನ್ನಿಸುತ್ತದೆ. ಮಾತ್ರವಲ್ಲ ಗೀತೆಯನ್ನು ನಿರೂಪಿಸು ಸೆಕ್ಯುಲರ್ ಮಾದರಿಯ ಅಪಾಯವನ್ನು ಖಂಡಿಸ ಬೇಕಾದ ಅಗತ್ಯವನ್ನು ಒತ್ತಿಹೇಳುತ್ತಿದ್ದಾರೆ. ಆಧನಿಕ ನಿರೂಪಣೆಯಲ್ಲಿಯಾವುದನ್ನು ಒಪ್ಪಿದರು ಗೀತೆಯ ಸ್ಚರೂಪವನ್ನಾಗಲಿ ಅದನ್ನು ರೊಪಿಸಿದ ಸಂಸ್ಕೃತಿಯ ಬಗೆಗಾಗಲಿ ಏನೂ ದಕ್ಕುವುದಿಲ್ಲ ಎನಿಸುತ್ತದೆ.

    ಮಹೇಶ್ ಕುಮಾರ್

  7. ಸಂದೀಪ್ ಕುಮಾರ್ ಶೆಟ್ಟಿ

    ಶ್ರೀಯುತ ಸಿ. ಪಿ. ನಾಗರಾಜ್ ಅವರಿಗೆ,
    ತಮ್ಮ ಪ್ರತಿಕ್ರಿಯೆಯ ಬಗ್ಗೆ ನನಗೆ ಕೆಲವು ಸಂಶಯಗಳಿವೆ,
    ೧) ಮಕ್ಕಳಿಗೆ ಸಮಾಜದಲ್ಲಿ ಬದುಕಲು ಅಗತ್ಯವಾದ ಪ್ರಾಮಾಣಿಕತನ ಹಾಗೂ ದುಡಿಮೆಯ ಅರಿವನ್ನು ಅಧ್ಯಾತ್ಮ ನೀಡಲಾರದೆ?
    ೨) ಪ್ರತಿಯೊಬ್ಬರಿಗೂ ಆಧ್ಯಾತ್ಮ ಅನ್ನುವುದು ಅನುಭವಕ್ಕೆ ದೊರಕುತ್ತದೆ ಮಕ್ಕಳು ಇದನ್ನು ತಿಳಿದುಕೊಂಡರೆ ಏನು ತಪ್ಪು? ಅಥವಾ ಮಕ್ಕಳನ್ನು ಇಂಥಹ ಅಲೋಚನೆಯೆಡೆಗೆ ಪ್ರೇರೇಪಿಸಿದರೆ ಇರುವ ಸಮಸ್ಯೆಯೇನು?
    ೩) ದೇವಮಾನವರು, ಕುವೆಂಪು ಮತ್ತು ರಾಮಕೃಷ್ಣ ಪರಮಹಂಸರು ಬಳಸುವಂತೆ ಅಧ್ಯಾತ್ಮವನ್ನು ಬಳಸುತ್ತಿದ್ದಾರೆ ಎಂದರೆ ಅವರು ನಮ್ಮ ಸಂಪ್ರದಾಯದಿಂದ ಎನನ್ನೊ ಪಡಕೊಂಡಿದ್ದಾರೆ ಹಾಗೂ ಅದನ್ನು ಎಲ್ಲರೂ ಪಡಕೊಂಡರೆ ಒಳ್ಳೆಯದು ಎಂಬ ಆಶಯದಿಂದ ಅದನ್ನು ತಿಳಿಹೇಳಹೊರಟಿದ್ದಾರೆ. ಅದರೆ “ಜಾತಿವ್ಯವಸ್ಥೆ” ಎಂಬ ತಪ್ಪು ತಿಳುವಳಿಕೆಯಿಂದ ಹಾಗೂ ಸೆಕ್ಯುಲರಿಸಂ ಚಿಂತನೆಳು, ಪ್ರಗತಿಪರರನ್ನು, ಭಗವದ್ಗೀತೆಯ ಮೂಲ ಆಶಯವನ್ನು ಅರಿಯದಂತೆ ಮಾಡಿವೆ ಎಂಬುದು ಹಾಗೂ ಪ್ರಗತಿಪರರ ಈ ರೀತಿಯ ವರ್ತನೆಯಿಂದ ಸಮಾಜದ ಒಂದು ವರ್ಗ ತಮ್ಮ ಸಂಪ್ರದಾಯಗಳನ್ನು ರಿಲೀಜನ್ ಎಂದು ತಿಳಿದು, ಭಗವದ್ಗೀತೆಯನ್ನು ಕಡ್ಡಾಯಗೊಳಿಸುವ ಕುರಿತು ಮಾತನಾಡುತ್ತಾರೆ ಎಂಬುದು ಇಲ್ಲಿ ನಾವು ಆರ್ಥಮಾಡಿಕೊಳ್ಳಬೇಕಾದ ವಿಚಾರವಲ್ಲವೆ?

    ೪) ಈ ಲೇಖನದ ಮಟ್ಟಿಗೆ ಬರುವುದಾದರೆ, ಪ್ರೊ. ರಾಜಾರಾಮ ಹೆಗ್ಡೆಯವರು ಎಲ್ಲೂ ಕೂಡಾ ಭಗವದ್ಗೀತೆಯನ್ನು ಕಡ್ಡಾಯಗಿಳಿಸಬೇಕೆಂದು ಹೇಳುವ ಧ್ವನಿ ಎಲ್ಲೂ ಕೇಳಿಲ್ಲ ಮತ್ತು ಅವರು ಪರ ಹಾಗೂ ವಿರೋಧದ ನಿಲುವುಗಳ ಬೇರುಗಳನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಅನಿಸುತ್ತಿದೆ, ಅಲ್ಲವೆ?
    ೫) ಆದೇ ರೀತಿ ಹೇಗೆ ಭಗವದ್ಗೀತೆಯನ್ನು ವಿರೋಧಿಸುವ ಸೆಕ್ಯುಲರ್ ಹಾಗೂ ಪರವಹಿಸುವ ಸಂಘಟನೆಗಳ ನಿಲುವುಗಳು ಹೇಗೆ ಭಗವದ್ಗೀತೆಯ ಮಹತ್ವವನ್ನು ಕಡಿಮೆಗೊಳಿಸುತ್ತವೆ ಎಂಬುದು ಅವರ ಲೇಖನದ ದ್ವನಿಯಲ್ಲವೆ?
    ೬) ಇನ್ನು ಸಾಮಾಜಿಕ ಶಿಕ್ಷಣದ ಜೊತೆ ಆಧ್ಯಾತ್ಮಿಕ ಶಿಕ್ಷಣ ಬೆರೆತರೆ ಮಕ್ಕಳು ಸಾಮಾಜಿಕ ಮನುಷ್ಯಗುವುದಿಲ್ಲ ಎಂಬ ಭಯ/ ಆತಂಕ ಯಾಕೆ?

    sankushetty

  8. ಸಿ ಪಿ ನಾಗರಾಜ

    ಶ್ರೀ ಸಂದೀಪ್ ಕುಮಾರ್ ಶೆಟ್ಟಿ ಅವರಿಗೆ ,
    ಅಧ್ಯಾತ್ಮ ಎಂಬ ಪರಿಕಲ್ಪನೆಯು ಒಂದು ಭ್ರಮೆ ಅಥವಾ ಸುಳ್ಳು ಅಥವಾ ವಂಚನೆಯ ಉಪಕರಣವೆಂದು ನಾನು ತಿಳಿದಿದ್ದೇನೆ . ಏಕೆಂದರೆ ನಮ್ಮ ಕಣ್ಣ ಮುಂದಿನ ಸಮಾಜದಲ್ಲಿ ನಿತ್ಯವೂ ನಾನು ಮತ್ತು ನೀವು ನೋಡುತ್ತಿರುವ ಜಾತಿನೆಲೆಯ ಮಠಾಧಿಪತಿಗಳು ಮತ್ತು ಕೋಟಿಗಟ್ಟಲೆ ಸಂಪತ್ತಿನ ಗದ್ದುಗೆಯ ಮೇಲೆ ಕುಳಿತಿರುವ ದೇವಮಾನವರು ಎಷ್ಟು ಚೆನ್ನಾಗಿ ಅಧ್ಯಾತ್ಮದ ಬಗ್ಗೆ ಮಾತನಾಡುತ್ತಿದ್ದಾರಲ್ಲವೇ? ಸಾವಿರಾರು ಜಾತಿ ಮತ್ತು ಹತ್ತಾರು ಧರ್ಮಗಳಿಂದ ಕೂಡಿರುವ ಒಟ್ಟು ಸಮುದಾಯದ ಬಗ್ಗೆ ಅವರಿಗೆ ಕಳಕಳಿಯಿದ್ದಿದ್ದರೆ , ತಮ್ಮ ಬಳಿಗೆ ಬಂದು ಆಶೀರ್ವಾದವನ್ನು ಬೇಡುವ ಭ್ರಷ್ಟರಿಗೆ ” ನೀವು ಸಮಾಜಕ್ಕೆ ದ್ರೋಹ ಮಾಡಬೇಡಿ . ಭ್ರಷ್ಟಾಚಾರದಿಂದ ಅಪಾರವಾದ ಸಂಪತ್ತನ್ನು ದೋಚಬೇಡಿ ” ಎಂದು ತಿಳುವಳಿಕೆಯನ್ನು ಹೇಳುತ್ತಿರಲಿಲ್ಲವೇ ?
    ಆದುದರಿಂದ ಆಧ್ಯಾತ್ಮಿಕ ಎನ್ನುವ ವಿಚಾರಗಳನ್ನು ಮತ್ತು ಅದು ಶಾಲಾ ಶಿಕ್ಷಣದ ಭಾಗವಾಗುವುದನ್ನು ನಾನು ಒಪ್ಪುವುದಿಲ್ಲ ,
    ಶ್ರೀ ಸಂತೋಷ್ ಅವರಿಗೆ ,
    ನೀವು ತಿಳಿಸಿರುವ ಧರಮ್ ಪಾಲ್, “ದ ಬ್ಯೂಟಿಫುಲ್ ಟ್ರಿ” ಕೃತಿಯನ್ನು ನಾನು ಓದಿಲ್ಲ .ಅದನ್ನು ಓದುತ್ತೇನೆ . ” ಸಾಮಾಜಿಕ ಮನುಷ್ಯ ” ಎಂದರೆ ” ತನ್ನ ಒಳಿತಿಗಾಗಿ ಹಂಬಲಿಸುವಂತೆ ಇತರರ ಒಳಿತಿಗಾಗಿ ಒಳ್ಳೆಯದನ್ನು ಮಾಡುತ್ತ , ಒಳ್ಳೆಯವನಾಗಿ ಬಾಳಲು ಪ್ರಯತ್ನಿಸುವವನು “

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading