ಯಜಮಾನಿಕೆ ಬದಲಾವಣೆಯ ಹೆಸರು ಸ್ವಾತಂತ್ರ‍್ಯವಲ್ಲ. .

ಡಾ ಕಿರಣ್ ಎಂ ಗಾಜನೂರು
ಅದು 1931 ಮಾರ್ಚ್ 23 ರ ಸಂಜೆ. ಎಲ್ಲಾ ಸಂಜೆಗಳಂತೆ ಆ ಸಂಜೆಯೂ ತಣ್ಣಗೆ ಮುಗಿದು ಬಿಟ್ಟಿದ್ದರೆ ಭಾರತೀಯ ಚರಿತ್ರೆಯ ಅದರಲ್ಲಿಯೂ ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆ ನಿಜವಾದ ಅರ್ಥದಲ್ಲಿ ಜನಹೋರಾಟದ ಚರಿತ್ರೆಯಾಗಿ ಬದಲಾಗಿ ಬಿಡುತ್ತಿತ್ತು ಅನ್ನಿಸುತ್ತದೆ.
ಆದರೆ ಹಾಗಾಗಲಿಲ್ಲ !
1924 ರಲ್ಲಿ ಆ ಕಾಲದ ‘ಬೆಂಕಿಯ ಕಿಡಿಗಳು’ ಎಂದು ಹೆಸರಾದ ಸಚಿಂದ್ರನಾಥ್ ಸಾನ್ಯಾಲ್ ಮತ್ತು ರಾಮ್ ಪ್ರಸಾದ್ ಬಿಸ್ಲಿಲ್ಲರಿಂದ ಸ್ಥಾಪನೆಯಾಗಿದ್ದ ‘ಹಿಂದೂಸ್ಥಾನ್ ಸೊಶಿಯಲಿಸ್ಟ್ ರಿಪಬ್ಲಿಕ್’ ಸಂಘಟನೆಗೆ ಸೇರಿದ, “ಭಾರತೀಯರ ಸ್ವಾತಂತ್ರ್ಯವನ್ನು ಹೋರಾಟದಿಂದ ಮಾತ್ರ ಪಡೆಯಲು ಸಾಧ್ಯ, ವಿಚಾರ ಕ್ರಾಂತಿಯೊಂದೆ ಈ ದೇಶದಲ್ಲಿ ನಿಜವಾದ ಸ್ವಾತಂತ್ರ್ಯವನ್ನು ಧಕ್ಕಿಸಿಕೊಡುವ ಸಾಧನ” ಎಂದು ದೃಢವಾಗಿ ನಂಬಿದ್ದ ಮತ್ತು ಅದಕ್ಕಾಗಿ ತಮ್ಮ ಬದುಕನ್ನೇ ಪಣವಾಗಿಟ್ಟ ಭಗತ್ ಸಿಂಗ್(1907), ಸುಖ್ ದೇವ್(1907) ಮತ್ತು ಶಿವರಾಂ ರಾಜ್ ಗುರು(1908) ಅವರನ್ನು ಬ್ರಿಟೀಷ್ ಸರ್ಕಾರ 1931 ಮಾರ್ಚ್ 23 ರ ಸಂಜೆ ಲಾಹೂರ್ ಜೈಲಿನಲ್ಲಿ ನೇಣಿಗೆ ಹಾಕಿತು. ಅಷ್ಟೆ ಅಲ್ಲದೆ ಅವರ ದೇಹಗಳನ್ನು ಕುಟುಂಬದವರಿಗೆ ನೀಡದೆ ಅಪಹರಿಸಿ ಪೋಲಿಸರು ರಹಸ್ಯವಾಗಿ ಸುಟ್ಟು ಹಾಕಿದರು. ಸಾಯುವಾಗ ಈ ಮೂವರು ತಮಗೆ ಯುದ್ಧ ಖೈದಿಗಳಿಗೆ ನೀಡುವ ಗೌರವವನ್ನು ನೀಡಿ ಎಂದು ಕೇಳಿಕೊಂಡಿದ್ದರು ಆದರೆ ಅಂದಿನ ಸರ್ಕಾರ ಕ್ರಾಂತಿಕಾರಿಗಳನ್ನು ರಾಜಕೀಯ ಖೈದಿಗಳಾಗಿ ಒಪ್ಪಿಕೊಳ್ಳಲು ನಿರಾಕರಿಸಿತ್ತು.
ಆಂಗ್ಲರ ಈ ಧೋರಣೆಯಿಂದ “ಸ್ವಾತಂತ್ರ್ಯಎಂದರೆ ಕೇವಲ ಬಾವುಟ, ಭೂಪ್ರದೇಶಗಳ ಬಿಡುಗಡೆ ಮಾತ್ರ ಎಂದು ಪ್ರತಿಪಾದಿಸುತ್ತಿದ್ದ ಮಧ್ಯಮವರ್ಗದ ಸಂಕುಚಿತ ರಾಷ್ಟ್ರೀಯತೆಯನ್ನು ಧಿಕ್ಕರಿಸಿ, ನಿಜವಾದ ಸ್ವಾತಂತ್ರ್ಯ ಎಂಬುದು ದೇಶವೊಂದರ ಸಾಮಾನ್ಯ ಜನ ಹೊಂದಬಹುದಾದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಘನತೆಯ ಬದುಕನ್ನು ಆಧರಿಸುತ್ತದೆ ಎಂಬ ವಿಶಾಲವಾದ ಅರ್ಥದಲ್ಲಿ ಸ್ವಾತಂತ್ರ್ಯವನ್ನು ಮತ್ತು ರಾಷ್ಟ್ರೀಯತೆಯನ್ನು ವ್ಯಾಖ್ಯಾನಿಸ ಹೊರಟಿದ್ದ ಯುವ ಕ್ರಾಂತಿಕಾರಿಗಳು ರಹಸ್ಯವಾಗಿ ಕೊನೆಯಾದರು” ನಿಮಗೆ ಆಶ್ಚರ್ಯವಾಗಬಹುದು ಈ ಯುವ ಕ್ರಾಂತಿಕಾರಿಗಳು ದೇಶ ಮತ್ತು ಮನುಷ್ಯ ಘನತೆಯ ಸ್ವಾತಂತ್ರ‍್ಯಕ್ಕಾಗಿ ತಮ್ಮ ಜೀವವನ್ನು ನೇಣಿನ ಕುಣಿಕೆಗೆ ಕೊಟ್ಟಾಗ ಅವರ ವಯಸ್ಸು ೨೩ ರಿಂದ ೨೪!!
ಹಾಗೆ ನೋಡಿದರೆ ಭಗತ್ ಸಿಂಗ್ ಕುಟುಂಬ ಆ ಕಾಲದ ಗದಾರ್ ಚಳುವಳಿಯಲ್ಲಿ ಭಾಗವಹಿಸಿತ್ತು. ಅದರ ಹಿನ್ನಲೆ ಮತ್ತು ಮ್ಯಾಜೆನಿಯ ಯಂಗ್ ಇಟಾಲಿ ಚಳುವಳಿ ಯುವ ಭಗತ್ ಸಿಂಗ್ ನನ್ನು ಹೆಚ್ಚು ಆಕರ್ಷಿಸಿತ್ತು ಕ್ರಿ.ಶ 1918-19 ರ ಅವಧಿಯಲ್ಲಿ ಪಂಜಾಬಿನಲ್ಲಿ ನಡೆದ ಕ್ರಾಂತಿಕಾರಿ ಹೋರಾಟಗಳು ಅದರಲ್ಲಿಯೂ ಮುಖ್ಯವಾಗಿ ಜಲಿಯನ್ ವಾಲಾಬಾಗ್ ಘಟನೆ 12 ವರ್ಷದ ಬಾಲಕಭಗತ್ ನ ಆಂತರ್ಯದಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಬೀಜಗಳನ್ನು ಬಿತ್ತಿತ್ತು..ಮಾತ್ರವಲ್ಲದೆ ಆ ಕಾಲದಲ್ಲಿ ಎಲ್ಲರಂತೆ ಈ ದೇಶದ ಮಧ್ಯಮ ವರ್ಗದ ರಾಷ್ಟ್ರೀಯತೆ ಪ್ರತಿಪಾದಿಸುತ್ತಿದ್ದ ಅಸಹಕಾರ ಚಳುವಳಿ ಮತ್ತು ಖಿಲಾಫತ್ ಹೋರಾಟಗಳು ಭಗತ್ ನನ್ನು ಸೆಳೆದಿದ್ದವು.
ಆದರೆ ಗಾಂಧಿ ಪ್ರತಿಪಾದಿತ ರಾಷ್ಟ್ರೀಯತೆಯ ಕುರಿತ ಭಗತ್ ಅಭಿಪ್ರಾಯ ಬಹುಬೇಗ ಬದಲಾಯಿತು ಮತ್ತು ನಮ್ಮ ನಿಜವಾದ ಹೋರಾಟ ಇರುವುದು ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಎಂಬ ಸ್ಪಷ್ಟತೆ ಭಗತ್ ಸಿಂಗ್ ಮನದಲ್ಲಿ ರೂಪುಗೊಂಡಿತ್ತು ಈ ಅಲೋಚನೆ ಆತನಲ್ಲಿ ಬೆಳೆಯಲು ಪ್ರಭಾವಿಸಿದ ಪ್ರಮುಖ ಕಾರಣ 1922 ರಲ್ಲಿ ಗಾಂಧಿ ಅಸಹಕಾರ ಚಳುವಳಿಯನ್ನು ಏಕಾಏಕಿ ಹಿಂದಕ್ಕೆ ಪಡೆದದ್ದು ಮತ್ತು ಪಂಜಾಬಿನಲ್ಲಿ ನಡೆದ ಸರಣಿ ಕೋಮುದಂಗೆಗಳು.
ಈ ಹಿನ್ನಲೆಯಲ್ಲಿ ಕ್ರಿ.ಶ 1925-26 ರ ಮಧ್ಯದಲ್ಲಿ ಭಗತ್ ’ಪ್ರೇಮಮಯ ಮಾತುಗಳಿಂದ ಕೂಡಿದ ಆದರ್ಶ ಹೋರಾಟಗಳು ನನ್ನನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ” ಎಂಬ ಅಭಿಪ್ರಾಯವನ್ನು ದಾಖಲಿಸಿರುವುದನ್ನು ಇತಿಹಾಸಕಾರರು ಗುರುತಿಸುತ್ತಾರೆ.
ಮೇಲಿನ ಎಲ್ಲಾ ಘಟನೆಗಳು ಭಗತ್ ಸಿಂಗ್ ಸ್ವಾತಂತ್ರ್ಯದ ಕುರಿತು ವಿಶಾಲವಾಗಿ, ಕ್ರಾಂತಿಕಾರಿಯಾಗಿ ಯೋಚಿಸುವಂತೆ ಪ್ರೇರೇಪಿಸಿದವು. ನಮ್ಮ ದೇಶದಲ್ಲಿ ನಿಜಕ್ಕೂ ನಡೆಯುತ್ತಿರುವುದು ಕೇವಲ ಅನ್ಯರಿಂದ ಬಿಡುಗಡೆ ಬಯಸುವ ಹೋರಾಟ ಮಾತ್ರವಲ್ಲ, ‘ಭಾರತದಲ್ಲಿನ ಸ್ವಾತಂತ್ರ ಹೋರಾಟವನ್ನು ಕೇವಲ ಬ್ರಿಟೀಷರ ವಿರುದ್ಧದ ಹೋರಾಟ ಎಂಬ ಸಂಕುಚಿತ ನೆಲೆಯಲ್ಲಿ ನೋಡಲಾಗದು ಬದಲಾಗಿ ಅಳದಲ್ಲಿ ಇದು ಸಾಮ್ರಾಜ್ಯಶಾಹಿ ವ್ಯವಸ್ಥೆಯ ವಿರುದ್ಧ ನಡೆಯುತ್ತಿರುವ ದುಡಿಯುವ ವರ್ಗದ ಹೋರಾಟವಾಗಿದೆ’ ಎಂಬ ಸ್ಪಷ್ಟ ನಿಲುವು ಯುವ ಕ್ರಾಂತಿಕಾರಿ ಭಗತ್ ಸಿಂಗ್ ಮನದಲ್ಲಿ ಮೂಡಿತ್ತು.
ಆ ಕಾರಣಕ್ಕೆ ಆತ “ಸ್ವಾತಂತ್ರ‍್ಯವೆಂದರೆ ಬಿಳಿ ಸಾಹೇಬ ಹೋಗಿ ಕಂದು ಸಾಹೇಬ ಬರುವುದಷ್ಟೆ ಅಲ್ಲ! ಯಜಮಾನಿಕೆಯ ಬದಲಾವಣೆಯನ್ನು ಬಿಡುಗಡೆ ಎಂದು ಕರೆಯಲು ಸಾಧ್ಯವಾಗದು. ನಿಜವಾದ ಸ್ವಾತಂತ್ರ‍್ಯ ಎಂದರೆ ಈ ದೇಶದ ಜನರನ್ನು ಹಸಿವಿನಿಂದ, ಅಸಮಾನತೆಯಿಂದ, ಊಳಿಗಮಾನ್ಯ ಶೋಷಣೆಯಿಂದ, ನಿರುದ್ಯೋಗ ಸಮಸ್ಯೆಯಿಂದ ಬಿಡುಗಡೆಗೊಳಿಸಿ ,ವ್ಯಕ್ತಿಯನ್ನು ಮುಕ್ತ ಅಲೋಚನೆಯಿರುವ ವ್ಯಕ್ತಿತ್ವವಾಗಿ ಗುರುತಿಸುವ ವಾತಾವರಣದ ಸೃಷ್ಟಿಯಾಗಿದೆ” ಎಂಬ ಅಭಿಪ್ರಾಯವನ್ನು ದಾಖಲಿಸಿದ್ದ.
ಭಗತ್ ಸಿಂಗ್ ಅಷ್ಟು ಸಣ್ಣ ವಯಸ್ಸಿನಲ್ಲಿಯೇ ಬದಲಾವಣೆಯ ಕುರಿತು ಎಷ್ಟು ಪಕ್ವವಾದ ನಿಲುವುಗಳನ್ನು ಹೊಂದಿದ್ದ ಎಂದರೆ ಕ್ರಾಂತಿಯ ಕುರಿತು ಒಮ್ಮೆ ಮಾತನಾಡುತ್ತಾ “ಬಾಂಬ್ ಮತ್ತು ಪಿಸ್ತೂಲುಗಳು ಕ್ರಾಂತಿಯನ್ನು ಮಾಡಲು ಸಾಧ್ಯವಿಲ್ಲ, ನಿಜವಾದ ಕ್ರಾಂತಿ ಎಂಬ ಖಡ್ಗ ಸ್ಪಷ್ಟ ವಿಚಾರಗಳಿಂದ ಸಾಣೆ ಹಿಡಿಯಲ್ಪಟ್ಟಿರುತ್ತದೆ”ಎಂದಿದ್ದ! ಸಾಮ್ರಾಜ್ಯಶಾಹಿ ಮನುಷ್ಯನ ಅಲೋಚನೆಗಳನ್ನು ಬಂಧಿಸಿದೆ; ಅವುಗಳನ್ನು ವಿಚಾರ ಶಕ್ತಿಯ ಮೂಲಕ ವಿಮುಕ್ತಿಗೊಳಿಸಿ ನಿಜವಾದ ಅರ್ಥದ ವಿಮೋಚನೆಯ ಧಿಕ್ಕಿನಲ್ಲಿ ನಡೆಸಬೇಕಾದ್ದು ನಮ್ಮ ಹೋರಾಟದ ಮಹತ್ವದ ಭಾಗ ಎಂಬುದನ್ನು ಭಗತ್ ಸಿಂಗ್ ನಂಬಿದ್ದ. . ಮಾತ್ರವಲ್ಲ ವೈಚಾರಿಕತೆಯ ನೆಲೆಯಲ್ಲಿ ಸ್ವಾತಂತ್ರ್ಯದ ಹೋರಾಟವನ್ನು ಕಟ್ಟಬೇಕು ಎಂದು ಬಯಸಿ ಆ ಕಾರಣಕ್ಕೆ ತನ್ನ ಸಂಘಟನೆಯ ಹಲವರ ವಿರೋಧದ ನಡುವೆಯೂ ಯಾವ ಪ್ರಾಣಹಾನಿಯಾಗದಂತೆ ಸೆಂಟ್ರಲ್ ಅಸೆಂಬ್ಲಿಯ ಮೇಲಿನ ಬಾಂಬ್ ದಾಳಿಯಲ್ಲಿ ಖುದ್ದಾಗಿ ಭಾಗವಹಿಸಿದ್ದ..
ಆ ತೀರ್ಮಾನ ದ ಮುಖ್ಯ ಉದ್ದೇಶ ಸಾಮ್ರಾಜ್ಯಶಾಹಿ ಶೋಷಿತ ವ್ಯವಸ್ಥೆಯ ಭಾಗವಾದ ಬ್ರಿಟೀಷರು ಹೇಗೆ ನಮ್ಮನ್ನು ಶೋಷಿಸುತ್ತಿದ್ದಾರೆ? ಅದಕ್ಕೆ ಕಾರಣವಾಗಿರುವ ಅಲೋಚನೆಯ ಮಿತಿಗಳೇನು? ಅದನ್ನು ಮೀರುವ ಬಗೆ ಯಾವುದು? ನಿಜವಾದ ಸ್ವಾತಂತ್ರ್ಯ ದ ಅರ್ಥವೇನು? ಎಂಬುದನ್ನು ತುಂಬಿದ ನ್ಯಾಯಾಲಯದಲ್ಲಿ ಸಾರಿ ಸಾರಿ ಹೇಳುವುದಾಗಿತ್ತು. ಅಲ್ಲದೆ ಸಾಮ್ರಾಜ್ಯಶಾಹಿ ವ್ಯವಸ್ಥೆಯ ಕರಾಳತೆಯ ಕುರಿತು ದೇಶವಾಸಿಗಳ ಗಮನ ಸೆಳೆಯುವ ಕಾರಣಕ್ಕಾಗಿ ಸೆಂಟ್ರಲ್ ಅಸೆಂಬ್ಲಿಯ ಮೇಲಿನ ಬಾಂಬ್ ದಾಳಿಯಲ್ಲಿ ಆತ ಭಾಗವಹಿಸಿದ್ದ ಮತ್ತು ತನ್ನ ಯೋಜನೆಯಲ್ಲಿ ಭಾಗಶಃ ಯಶಸ್ವಿಯಾಗಿದ್ದ ಕೂಡಾ. ಆ ಮೂಲಕ ನಿಜವಾದ ಕ್ರಾಂತಿ ಎಂಬುದು ಸಾಮ್ರಾಜ್ಯಶಾಹಿ ವಿಚಾರಗಳನ್ನು ಸೋಲಿಸುವ ಮೂಲಕವೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದ. ತನ್ನ ಹೋರಾಟದ ತಾತ್ವಿಕತೆಯ ಕುರಿತು ಇಷ್ಟು ಸ್ಪಷ್ಟತೆಯಿದ್ದ ಕಾರಣಕ್ಕೆ ಭಗತ್ ಸಿಂಗ್ ಆ ಕಾಲದ ಮತ್ತು ಈ ಕಾಲದ ಯುವಕರ ಪಾಲಿಗೆ ಆದರ್ಶ ಪ್ರಾಯನಾಗಿದ್ದಾನೆ.
ಸ್ವತಂತ್ರ, ಪ್ರಜಾತಂತ್ರ, ಜಾತ್ಯತೀತ, ಸಮಾಜವಾದಿ ಮೌಲ್ಯಗಳ ನೈಜ ಜನಾಧಿಕಾರವುಳ್ಳ ದೇಶ ನಿರ್ಮಾಣದ ಕನಸನ್ನು ಹೊತ್ತಿದ್ದ ೩೨- ೨೪ರ ಹರೆಯದ ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ ತಮ್ಮ ಈ ತಾತ್ವಿಕತೆಗಾಗಿ, ಸಾಮ್ರಾಜ್ಯಶಾಹಿ ಶಕ್ತಿಗಳಿಂದ ಸಾಮಾನ್ಯನ ವಿಮೋಚನೆಗಾಗಿ ತಮ್ಮ ಪ್ರಾಣವನ್ನೆ ಬಲಿದಾನ ಮಾಡಿದರು.
ಆದರೆ ಇಂದು ಈ ಎಲ್ಲಾ ಆಶಯಗಳಿಗೆ ವಿರುದ್ಧವಾದ ಮೂಲಭೂತವಾದ, ಧಾರ್ಮಿಕ ದ್ವೇಷ, ಅನ್ಯಾಯ ಮತ್ತು ನೈತಿಕ ಭ್ರಷ್ಟತೆ ಈ ಸಮಾಜದ ಅಂತಃಶಕ್ತಿಯನ್ನು ಪೊಳ್ಳುಮಾಡುತ್ತಿವೆ. ಮತೀಯ ಹಿಂಸೆಯನ್ನು ಸಾಮಾನ್ಯವೆಂಬಂತೆ ಒಪ್ಪಿಸಲಾಗುತ್ತಿದೆ .ಆ ಮೂಲಕ ವ್ಯವಸ್ಥೆ ಭಗತ್ ಸಿಂಗ್ ಕಂಡ ಕನಸನ್ನೇ ಅಪಹಾಸ್ಯ ಮಾಡುತ್ತಿದೆ.
ಮಾರ್ಚ್ ೨೩ ಭಗತ್ ಸಿಂಗ್ ಬಲಿದಾನವಾದ ದಿನ. ಈ ದಿನವಾದರೂ ನಾವು ಪೊಳ್ಳು ಮತೀಯ ಸಂಕೇತಗಳಿಂದ ಭಗತ್ ನನ್ನು ಬಿಡಿಸಿಕೊಂಡು ಈ ದೇಶದ ಕುರಿತು ಆ ಮಹಾನ್ ಕ್ರಾಂತಿಕಾರಿಗಳ ನೈಜ ಅಲೋಚನೆಗಳನ್ನು ಅರ್ಥಮಾಡಿಕೊಳ್ಳುವ ಸಣ್ಣ ಪ್ರಯತ್ನ ಮಾಡೋಣ. ಭಗತ್ ಸಿಂಗ್ ಇಂದು ಬಹುತೇಕರು ಒಪ್ಪಿರುವಂತೆ ಒಬ್ಬ ವ್ಯಕ್ತಿಯಾಗಿ ನಮಗೆ ಆದರ್ಶವಾದರೆ ಸಾಲದು! ಬದಲಾಗಿ ತನ್ನ ಕಾಲಘಟ್ಟದ ಸಾಮಾನ್ಯರ ಬದುಕನ್ನು ಬದಲಾಯಿಸಲು ವೈಚಾರಿಕ ಸಂಘರ್ಷ ನಡೆಸಿ ಅದಕ್ಕಾಗಿಯೇ ಬಲಿದಾನವಾದ ವಿಚಾರವನ್ನು ನಮ್ಮ ಪ್ರಜ್ಞೆಗೆ ಇಳಿಸಿಕೊಂಡ ದಿನ ಆತನ ತ್ಯಾಗಕ್ಕೆ ಒಂದು ಅರ್ಥ ಬರುತ್ತದೆ. ಭಗತ್ ಉಸಿರಾಗಿದ್ದ ಇಂಕ್ವಿಲಾಬ್ ಜಿಂದಾಬಾದ್ (ಬದಲಾವಣೆಗಾಗಿನ ಹೋರಾಟ ಚಿರಾಯುವಾಗಲಿ) ಎಂಬ ಘೋಷಣೆಗೆ ಮಹತ್ವ ಬರುತ್ತದೆ. ಹಾಗೆ ಆದ ದಿನ ಭಗತ್ ಸ್ಮರಣೆ ಕೇವಲ ಯಾಂತ್ರಿಕವಾಗದೆ ಕ್ರಿಯಾತ್ಮಕ ವಾಗಿ ಅರ್ಥಪೂರ್ಣವಾಗುತ್ತದೆ.





ಉತ್ತಮ ಲೇಖನ. ಧನ್ಯವಾದಗಳು