ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್: ಪದ್ಮ ಕುಮಟಾ ಇನ್ನಿಲ್ಲ

ಅಂತಹ ಆ ‘ಬೆಳ್ಳಿ’
——

ಯಾಕೋ ಮನದ ಅಂಗಳದಲ್ಲಿ ಜಿಟಿ ಜಿಟಿ ಮಳೆ.

ತನ್ನ ಬಟ್ಟಲು ಕಂಗಳಿಂದ ಎಲ್ಲರ ಗಮನ ಸೆಳೆದಿದ್ದ, ಸಿನೆಮಾ ಲೋಕವೇ ಬೆಕ್ಕಸಬೆರಗಾಗುವಂತೆ ಎಳೆಯ ವಯಸ್ಸಿನಲ್ಲೇ ಈಕೆ ನಟಿಸಿದ ಚೋಮನ ದುಡಿ ರಾಷ್ಟ್ರ ಪ್ರಶಸ್ತಿ ಪಡೆಯಿತು. ತನ್ನ ನಟನೆಗಾಗಿ ರಾಜ್ಯ ಪ್ರಶಸ್ತಿ ಪಡೆದ ಪದ್ಮಾ ಕುಮಟಾ ಇನ್ನಿಲ್ಲ ಎನ್ನುವ ಸುದ್ದಿ ನನ್ನೊಳಗೆ ನೆನಪುಗಳ ಮೆರವಣಿಗೆ ಹೊರಡಿಸಿದೆ.

ಶಿವರಾಮ ಕಾರಂತರ ‘ಚೋಮನ ದುಡಿ’ ಯನ್ನು ಬಿ ವಿ ಕಾರಂತರು ತೆರೆಗೆ ತರಲು ಮುಂದಾದಾಗ ಕಂಡ ‘ಬೆಳ್ಳಿ’ಯೇ ಈ ಪದ್ಮಾ. ನಂತರ ಪದ್ಮಾ ಎನ್ನುವ ಹೆಸರೇ ಹಿನ್ನೆಲೆಗೆ ಸರಿದು ಬೆಳ್ಳಿ ಎನ್ನುವ ಹೆಸರೇ ಖಾಯಮ್ಮಾಗಿ ಹೋಗುವಷ್ಟು ಈಕೆ ಜನರ ಮನ ಗೆದ್ದುಕೊಂಡುಬಿಟ್ಟರು.

ಮೊನ್ನೆ ತಾನೇ ಮಾತನಾಡುತ್ತ ಆಡುತ್ತಾ ನಿಮ್ಮ ಮನೆಯ ಹೆಸರೇನು? ಎಂದು ಕೇಳಿದ್ದೆ. ಅವರು ಒಂದು ಮುಗುಳ್ನಕ್ಕರು. ನಾನು ಇದೇನು ಒಳ್ಳೆ ಒಗಟಾಗಿ ನಿಂತಿರಿ ಎಂದೆ. ಅದಕ್ಕೆ ಅವರು ‘ಸರಿ ಇದು ಒಗಟೇ ಎಂದುಕೋ ನೀನೇ ಬಿಡಿಸು ನೋಡೋಣ’ ಎಂದರು.. ನಾನು ಕುಮಟಾದ ಅಷ್ಟೂ ಊರುಗಳ, ದೇವರುಗಳ, ನದಿ ತೊರೆಗಳ ಹೆಸರುಗಳನ್ನು ಹೇಳುತ್ತಾ ಬಂದೆ. ಮತ್ತೆ ತಮ್ಮ ಗಂಭೀರ, ಆದರೆ ಒಂದಿಷ್ಟು ತುಂಟತನದ ಲೇಪ ಇರುವ ದನಿಯಲ್ಲಿ ‘ಬೆಳ್ಳಿ’ ಎಂದರು. ಅರೆ! ಬೆರಗಾಗುವ ಸರದಿ ನನ್ನದಾಗಿತ್ತು

ಅಂತಹ ಬೆಳ್ಳಿ ಇನ್ನಿಲ್ಲ ಎನ್ನುವ ಸುದ್ದಿ ನನ್ನೊಳಗೆ ನಿಟ್ಟುಸಿರಾಗಿ ಆಡುತ್ತಲೇ ಇದೆ.

ನನಗೆ ಆಕೆ ಪರಿಚಯವಾದದ್ದು ರಾಜ್ಯ ಚಲನಚಿತ್ರ ಪ್ರಶಸ್ತಿಯ ತೀರ್ಪುಗಾರರಾಗಿದ್ದಾಗ. ದೊರೆ ಭಗವಾನ್ ಕ್ಯಾಪ್ಟನ್ ಆಗಿದ್ದ ತಂಡ ಅದು. ‘ನೀ ಯಾರೋ ಏನೋ ಎಂತೋ ಅಂತೂ ಪೋಣಿಸಿತು ಕಾಣದಾ ತಂತು’ ಎನ್ನುವಂತೆ ಆಕೆ ಎಲ್ಲರ ಅಕ್ಕನಂತಾಗಿ ಹೋದರು. ಅಲ್ಲಿಂದ ಇಲ್ಲಿಯವರೆಗೆ ನಾವು ಮಾತಾಡಿದ್ದು ಅದೆಷ್ಟೋ.. ಒಂದಷ್ಟು ತಿಂಗಳ ಹಿಂದೆ ಏರ್ಪೋರ್ಟ್ ನಲ್ಲಿ ನಾನು ಅವರೂ ಎದುರುಬದುರಾದೆವು. ಕೆನ್ನೆ ತಟ್ಟುತ್ತಾ ‘ಶಿರಡಿಗೆ ಹೋಗುತ್ತಿದ್ದೇನೆ ನಿನಗೂ ಪ್ರಾರ್ಥಿಸುತ್ತೇನೆ’ ಎಂದರು. ನಾನು ‘ನಿಮ್ಮ ಜೊತೆ ಮಾತನಾಡಿದರೆ ಸಾಕು ಆಯಸ್ಸು ಎರಡು ವರ್ಷ ಹೆಚ್ಚುತ್ತದೆ ಶಿರಡಿ ಬಲ ಏನೂ ಬೇಡ ಬಿಡಿ’ ಅಂದಿದ್ದೆ.

‘ಚಿಗರಿಗಂಗಳ ಚೆಲುವಿ ಚದರಿ ನಿಂತಾಳ ನೋಡಾ ಬೆದರಿ ನಿಂತಾಳ..’ ಎನ್ನುವಂತೆ ಪದ್ಮಾ ಇಲ್ಲವಾಗಿ ಹೋಗಿದ್ದಾರೆ. ‘ಮಹಾನದಿ’ ಶೂಟಿಂಗ್ ಮುಗಿಸಿ ಬರುವಾಗ ಬೆಳ್ಳಿ ಅದರಲ್ಲಿಯೇ ಮುಳುಗಿ ಹೋದರು.

–ಜಿ ಎನ್ ಮೋಹನ್

http://www.cinibuzz.in/%E0%B2%B8%E0%B3%8D%E0%B2%9F%E0%B2%BE%E0%B2%B0%E0%B3%8D-%E0%B2%9F%E0%B2%BE%E0%B2%95%E0%B3%8D/%E0%B2%85%E0%B2%82%E0%B2%A4%E0%B2%B9-%E0%B2%86-%E0%B2%AC%E0%B3%86%E0%B2%B3%E0%B3%8D%E0%B2%B3%E0%B2%BF/

‍ಲೇಖಕರು avadhi

6 March, 2017

3 Comments

  1. vasumathi ramachandra

    ಅವರ ಆತ್ಮಕ್ಕೆ ಶಾಂತಿ ಸಿಗಲಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading