ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್: ಅರೀಫ್ ರಾಜಾಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕನ್ನಡಕ್ಕೆ ಹೊಸ ಸಂವೇದನೆ ನೀಡಿದ ಅರೀಫ್ ರಾಜ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಲೇಖಕ ಪ್ರಶಸ್ತಿ ಸಂದಿದೆ.

‘ಅವಧಿ’ಯ ಅಭಿನಂದನೆ

‘ಸೈತಾನನ ಪ್ರವಾದಿ’  ‘ಜಂಗಮ ಫ಼ಕೀರನ ಜೋಳಿಗೆ’ ಇವರ ಕವನ ಸಂಕಲನಗಳು

ಪಲ್ಲವ ಪ್ರಕಾಶನ ಸಧ್ಯದಲ್ಲೇ ಇವರ ‘ಬೆಂಕಿಗೆ ತೊಡಿಸಿದ ಬಟ್ಟೆ’ ಕೃತಿಯನ್ನು ಹೊರತರಲಿದೆ

ಚಿತ್ರ : ಶಿವು ಕಾಳಯ್ಯ

‘ಅವಧಿ’ಗೆ ಚುಟುಕು ಸಂದರ್ಶನ

 

‘ನನಗೆ ತುಂಬಾ excitement ಅಂತ ಏನೂ ಆಗಿಲ್ಲ. ಆದರೂ ಗಟ್ಟಿ ಸಾಹಿತ್ಯ ಬರೆದರೆ ಮನ್ನಣೆ ಇದೆ ಎನ್ನುವ ನಂಬಿಕೆ ಪುನರ್  ಸ್ಥಾಪನೆಯಾದಂತಾಗಿದೆ’

ಎಂದು ಅರೀಫ್ ರಾಜಾ ‘ಅವಧಿ‘ಗೆ ನೀಡಿದ ಚುಟುಕು ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಎಲ್ಲಾ ಕ್ಷೇತ್ರಗಳಲ್ಲಿಯೂ ಈಗ ಅಸಲಿ- ನಕಲಿಗಳ ಕಾಟ ಆರಂಭವಾಗಿದೆ. ಇದು ಸಾಹಿತ್ಯ ಕ್ಷೇತ್ರವನ್ನೂ ಬಿಟ್ಟಿಲ್ಲ. ಇಲ್ಲೂ ಅಸಲಿ ನಕಲಿ ಇದೆ.

ಎಲ್ಲೆಡೆ ಜರುಗುವ ಕವಿ ಗೋಷ್ಟಿಗಳು, ಪುಸ್ತಕ ಪ್ರಶಸ್ತಿಗಳನ್ನು ನೋಡಿದರೆ ಸಾಕು ಅದು ಗೊತ್ತಾಗುತ್ತದೆ.

ಯಾವುದು ಅಸಲಿ ಎಂಬ ಬಗ್ಗೆಯೇ ನಂಬಿಕೆ ಹೋಗುವ ಕಾಲದಲ್ಲಿ ಅಸಲಿಗೆ ಇನ್ನೂ ಮನ್ನಣೆ ಇದೆ ಎಂದು  ಸಂತೋಷವಾಗಿದೆ’ ಎಂದು ಅರೀಫ್ ಸಂಭ್ರಮಪಟ್ಟರು.

 

+++

ಒಳಗೂ..ಹೊರಗೂ ಬ್ಲಾಗ್ ನ ಕುಮಾರ್ ಎಸ ಕನ್ನಡ ಪ್ರಭ ಸಾಪ್ತಾಹಿಕಕ್ಕೆ ಈ ಹಿಂದೆ ನಡೆಸಿದ ಅರೀಫ್ ರಾಜಾ ಸಂದರ್ಶನ ಇಲ್ಲಿದೆ-

+

ತಾಜ್ಮಹಲ್ ಕಟ್ಟಬೇಕು, ಗೋರಿಯ ಮೇಲಲ್ಲ! “ರಾಜಾಜ್ಞೆ”

`ಉರ್ದು ಕವಿ ಸಾಹಿರ್ ಹೇಳಿದ ಹಾಗೆ `ಗಮ್ ಔರ್ ಭಿ ಹೈ, ದುನಿಯಾಮೆ ಮೊಹಬ್ಬತ್ ಕೆ ಸಿವಾ’. ನಿಮ್ಮ ಕವಿತೆಗಳು ಲೈಂಗಿಕತೆಯನ್ನೇ ಬಂಡವಾಳ ಮಾಡಿಕೊಳ್ಳದೆ ಲೋಕದ ಎಲ್ಲಾ ದಂದುಗಗಳ ಬಗ್ಗೆ ಕಾಳಜಿ ಹೊಂದಿ ವಿಶೇಷವಾದ ವ್ಯಾಪಕತೆ ಪಡೆದುಕೊಂಡಿವೆ…’ ಹೀಗಂತ ಎಚ್.ಎಸ್.ಶಿವಪ್ರಕಾಶ್ ಆರಿಫ್ ರಾಜಾರ ಮೊದಲ ಸಂಕಲನದಲ್ಲಿ ಬರೆದಿದ್ದಾರೆ.ತೀವ್ರ, ಆದ್ರ್ರ, ಭಾವಪೂರ್ಣ, ಮಾನವೀಯ ಕವಿತೆಗಳನ್ನು `ಜಂಗಮ ಫಕೀರನ ಜೋಳಿಗೆ’ ತುಂಬ ತುಂಬಿಕೊಂಡು ನಮ್ಮ ನಡುವೆ ನಿಂತಿರುವ ಕವಿ ಆರಿಫ್ ರಾಜಾ. ರಾಯಚೂರು ಸಮೀಪದ ಗ್ರಾಮವೊಂದರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡುತ್ತಾ ಮಗುವಿನ ಬೆರಗು ಕಣ್ಣನ್ನು, ಗಾಢವಾದ ಭಾವ ಹೊಂದಿದ ಕವಿ.ಸಂಕಲನ ಮೊದಲನೆಯದ್ದೇ ಆದರೂ ರಾಜ್ಯದ ಹಲವು ಪತ್ರಿಕೆಗಳಲ್ಲಿ ಪ್ರಕಟವಾದ ಕವಿತೆಗಳು ಇದರಲ್ಲಿವೆ, ಸಾಕಷ್ಟು ಮೆಚ್ಚಿಸಿಕೊಂಡಿವೆ. ಬಹುಮಾನ, ಅಭಿಮಾನಗಳನ್ನು ಪಡೆದುಕೊಂಡಿವೆ. ಬದುಕು-ಬರಹ `ಜೀವವಿರೋಧಿ’ಯಾಗಬಾರದೆಂದು ಹಂಬಲಿಸುವ ಈ ಕವಿಯ ಮಾತಿನ ಜೋಳಿಗೆ ಬಿಚ್ಚಿಸಿ ಕೂತಾಗ…

ನೀವು ಕವಿತೆಯ ಕೈ ಹಿಡಿದಿರಾ? ಅಥವಾ ಕವಿತೆ ನಿಮ್ಮನ್ನು ಮಡಿಲಿಗೆ ಹಾಕಿಕೊಂಡಿತಾ?

keep a green tree in your heart, singing bird will surely come ಅಂತಾ ಒಂದು ಚೀನಿ ಗಾದೆ. ನನ್ನದೇ ಕವಿತೆಯ ಸಾಲುಗಳಲ್ಲಿ ಹೇಳುವುದಾದರೆ,

ನಾನಾಗ ಕವಿತೆ ಬರೆಯುತ್ತಿದ್ದೆ

ಕವಿತೆ ನನ್ನಿಂದ ಬರೆಯಿಸಿಕೊಳ್ಳುತ್ತಿದೆ.

ಕವಿತೆಯ ಸಖ್ಯ ಯಾಕೆ ಬೇಕು?

ನೀವು ಕೇಳಿದ ಪ್ರಶ್ನೆಯಷ್ಟೇ ನೇರವಾಗಿ, ಸರಳವಾಗಿ ಉತ್ತರಿಸುವುದು ಕಷ್ಟ. ಜಗದ ಮೊದಲ ಹಾಡು ಹೇಗೆ ಹುಟ್ಟಿತು? ಗುಡ್ಡ ಗಾಡುಗಳಲ್ಲಿ ಬೇಟೆಯಾಡಿಕೊಂಡು, ತನ್ನಷ್ಟಕ್ಕೆ ತಾನಿದ್ದ ಮನುಷ್ಯ ಗುಹೆಗಳಲ್ಲಿ ಯಾಕೆ ಚಿತ್ರ ಬರೆಯುವ ಸಾಹಸ ಮಾಡಿದ? ಇದನ್ನು ಸೃಜನಶೀಲತೆ ಎಂದು ಯಾಕೆ ಕರೆದೆವು? ಗುರುತರವಾದ ಬೆರಗೊಂದು ಕಾಲನ ಕೈಯಿಂದ ಜಾರಿ ಶಾಶ್ವತ ನೆನಪಾಗುಳಿಯುವುದನ್ನು ಮನುಷ್ಯ ಸಹಿಸಲಾರ ಎನಿಸುತ್ತದೆ. ಅದಕ್ಕೆ ಈ ಕಲೆ ಕವಿತೆ. ಹಾಗಾಗಿ ಈ ಪ್ರಶ್ನೆಗೆ ಸಾಮುದಾಯಿಕ ನೆಲೆಯಲ್ಲೇ ಉತ್ತರ ಹುಡುಕಬೇಕು ಅನ್ನಿಸುತ್ತೆ.

ಸಾತ್ವಿಕ ಆಕ್ರೋಶ, ಬಿಸಿ ರಕ್ತದ ಸಿಡುಕು, ಅದಮ್ಯ ಪ್ರೇಮ ನಿಮ್ಮ ಕವಿತೆಯಲ್ಲಿವೆ. ಕಾವ್ಯ ಖಡ್ಗ ಆಗಬೇಕು ಅನ್ನಿಸುತ್ತಾ? ತತ್ವದ ಬೆಳಕಾಗಬೇಕು ಅನ್ನಿಸುತ್ತಾ?

ನಾನೊಬ್ಬ ಮನುಷ್ಯ ಎಂದ ಮೇಲೆ ಎಲ್ಲರ ಹಾಗೆ ಬಲ-ಬಲಹೀನತೆಗಳು ಸಹಜವಾಗಿ ನನ್ನ ಬರವಣಿಗೆಯಲ್ಲಿ ಬರಬೇಕು. ಸಂಕೀರ್ಣ ಸನ್ನಿವೇಶದಲ್ಲಿ ಮಾನವ ವರ್ತನೆಯನ್ನು ಇದು ತಪ್ಪು-ಸರಿ, ಇದು ಹಿಂಸೆ, ಇದು ಅಹಿಂಸೆ, ನೈತಿಕ-ಅನೈತಿಕ ಎಂದು ಕಪ್ಪು -ಬಿಳುಪಾಗಿ ವಿಶ್ಲೇಷಣೆ ಮಾಡಲು ಆಗುವುದಿಲ್ಲ. ಖಡ್ಗಕ್ಕೊಂದು ತಾತ್ವಿಕತೆ ಇಲ್ಲ ಅನ್ನುತ್ತೀರಾ?

ಮಂದಿರ, ಮಸೀದಿ, ಬದಲು ತಾಜ್ಮಹಲ್ ಕಟ್ಟಬೇಕೆನ್ನುತ್ತೀರಿ. ನಿಮ್ಮ ಕವಿತೆಗಳಲ್ಲಿ ಹೀಗೆ ಕಾಣಿಸಿಕೊಳ್ಳುವ ಪ್ರೇಮ ಎಂಥದ್ದು ಅನ್ನೋ ಕುತುಹೂಲ..

ಹೌದು, ತಾಜ್ಮಹಲ್ ಕಟ್ಟಬೇಕು. ಯಾರದ್ದೋ ಗೋರಿಯ ಮೇಲಲ್ಲ. ಸಂಬಂಧಗಳಲ್ಲಿ ಸೌಹಾರ್ದತೆಯನ್ನು ಬೆಳೆಸುವ ಸೇತುವೆಯಾಗಿ. ನನ್ನ ಕವಿತೆಗಳಲ್ಲಿ ಕಾಣುವ ಪ್ರೇಮ ಅಂದರೆ ಜೀವನ ಪ್ರೇಮ, ಯಾವ ದೇಶದಲ್ಲೇ ಆಗಲಿ, ಯಾವ ಕಾಲದಲ್ಲೇ ಆಗಲಿ ಇದೊಂದು ಮಾತ್ರ ಅವಮಾನವೀಯವಾಗಿರಲು ಸಾಧ್ಯವಿಲ್ಲವಲ್ಲ. ಅಂಥ ಪ್ರೇಮ ಇಲ್ಲಿದೆ. ಸಾಂಸ್ಕೃತಿಕ ಚಹರೆಗಳು, ಈ ವಿಷಯದಲ್ಲಿ ಕೇವಲ ಹೊರಹೊದಿಕೆಗಳು ಮಾತ್ರ…

ನಿಮ್ಮ ಕವಿತೆಗಳಲ್ಲಿ ನಿಮಗೆ ಇಷ್ಟವಾದ ಸಾಲುಗಳು

..ಜಂಗಮ ಫಕೀರನ ಜೋಳಿಗೆ ಪದ್ಯದ…

ನಿನ್ನ ಯುಗಾದಿಯ ಬೇವು ಬೆಲ್ಲ

ನನ್ನ ರಮ್ಜಾನಿನ ದೂದ್ ಖುರ್ಮಾ

ಎಂದೂ ಒಂದಾಗುವುದಿಲ್ಲ.

ಈ ಹುಡುಗರಿಗೆ ಮತ್ತೆ

ರಕ್ತದಲ್ಲಿ ಪ್ರೇಮಪತ್ರ ಬರೆವ ಹುಚ್ಚು

ನಿಮ್ಮನ್ನು ಪ್ರಭಾವಿಸಿದ್ದು ಯಾರು?

ಎಚ್.ಎಸ್. ಶಿವಪ್ರಕಾಶ್. ಮಾದರಿಗಳೇ ಇಲ್ಲದ ಹೊತ್ತಲ್ಲಿ ಹೊಸ ನಡೆ ಕಂಡುಕೊಂಡವರು, ದೊಡ್ಡ ಸಾಧನೆ ಮಾಡಿದವರು ಶಿವಪ್ರಕಾಶ್. ಹಾಗೆಯೇ ಭಿನ್ನ ನೆಲೆಯಲ್ಲಿ ನಡೆದ ಎಸ್.ಮಂಜುನಾಥ್.

ನಿಮ್ಮ ವಾರಿಗೆಯ ಕವಿಗಳ ಬಗ್ಗೆ ಹೇಳಿ..

ಖುಷಿ ಇದೆ. ಇವತ್ತಿನ ಬರಹಗಾರರು ತಮ್ಮ ಮಿತಿಯೊಳಗೆ ಪ್ರಾಮಾಣಿಕವಾಗಿದ್ದಾರೆ. ಮೈಗೆ ಬೆಂಕಿ ಹಚ್ಚಿಕೊಂಡು ಬರೆಯುತ್ತಾರೆ. ರಕ್ತ ಸುಟ್ಟುಕೊಳ್ಳುತ್ತಾರೆ. ಇಂಥವರು ಎಂದು ಹೆಸರು ಹೇಳುವುದರಲ್ಲೇನಿದೆ. ನಿಜವಾದ ಓದುಗನಿಗೆ ಅವರ್ಯಾರು ಗೊತ್ತಾಗುತ್ತೆ..

ವಾರಿಗೆಯ ಕವಿಗಳಲ್ಲಿ ನೀವು ಸ್ನೇಹಿತನಾಗಿ ಏನನ್ನಾದರೂ ಹೇಳಿಕೊಳ್ಳಲೇಬೇಕು ಅನ್ನಿಸಿದ ಸಂಗತಿ..

ನಾವೆಲ್ಲಾ ಮಾತಿಗಿಂತಲೂ ಕ್ರಿಯೆ ಮುಖ್ಯ ಅನ್ನೋ ಎಚ್ಚರ ಸದಾ ನೆನಪಿನಲ್ಲಿಟ್ಟುಕೊಂಡರೆ ಸಾಕು. ಬರಹಗಾರನಿಗೆ ಮುದ್ರಣ, ದೃಶ್ಯ ಮಾಧ್ಯಗಳಲ್ಲಿ ಇಂದು ತುಂಬಾ ಅವಕಾಶಗಳಿವೆ. ಯಾವುದೇ ಅವಕಾಶ ಲೇಖಕನನ್ನು ಬೆಳೆಸಬೇಕು. ಆದರೆ ಅವನನ್ನು ಅವಕಾಶವಾದಿಯನ್ನಾಗಿ ಮಾಡಿ ವಾಚಾಳಿಯಾಗಿಸಬಾರದು. ಇಂಥ ಅವಕಾಶಗಳ ಬಗ್ಗೆ ಎಚ್ಚರವಹಿಸಬೇಕು ಎನ್ನುವುದು ನನ್ನ ಭಿನ್ನಹ.

ಮತ್ತೇನು ಬರೆಯಬೇಕೆಂದಿದ್ದೀರಿ?

ನಾಟಕ ಬರೀಬೇಕು ಅಂತಿದ್ದೀನಿ. ನಾವು ಮುಖ್ಯವಾಹಿನಿ ಅಂದುಕೊಂಡ ಪಠ್ಯಗಳಲ್ಲಿ ದಾಖಲಾಗದೆ ಉಳಿದ ಪ್ರತಿ ಇತಿಹಾಸ, ಹಾಲು ಜೇನಿನಂತೆ ಬೆರೆತು ಹೋಗಿದ್ದ ಸೂಫಿ-ಶರಣ ತತ್ವಗಳು, ಮೊನ್ನೆ ತಾನೇ ರಾಜಧಾನಿಯಲ್ಲಿ 60 ಸಾವಿರ ಭಿಕ್ಷುಕರನ್ನು ಪ್ರಾಣಿಗಳಂತೆ ಹೊರಹಾಕಿದ್ದು, ದಿಲ್ಲಿ ಬಜಾರು, ದಿಲ್ಲಿ ದರ್ಬಾರು ಇದೆಲ್ಲವೂ ನಾಟಕದಲ್ಲಿ ಇರುತ್ತವೆ..

 

‍ಲೇಖಕರು G

20 December, 2012

15 Comments

  1. Dr. Azad Ismail Saheb

    ಪ್ರತಿಭಾನ್ವಿತರಿಗೆ ಒಂದಲ್ಲ ಒಂದು ಕಡೆ ಗೌರವ ಸಿಗುತ್ತೆ ಮನ್ನಣೆ ಮಣೆ ಹಾಕ್ತಾರೆ ಅನ್ನುವುದಕ್ಕೆ ಆರಿಫ್ ಸಾಕ್ಷಿ… ಅಭಿನಂದನೆಗಳು ಆರಿಫ್ ಕನ್ನಡ ನುಡಿ ಸೇವೆ ನಿರಂತರವಾಗಲಿ ನಿಮಗೆ ನಾಡ ಗೌರವ ಹೆಮ್ಮೆ ನೀವೆಲ್ಲಾ.

  2. basava halli

    ಸಹೋದರರಿಗೆ ಅಭಿನಂದನೆಗಳು.

  3. Gopaal Wajapeyi

    ಅಭಿನಂದನೆಗಳು ಆರಿಫ್…:)

  4. chalam

    abinandanegalu aarif

  5. arun joladkudligi

    ಗೆಳೆಯ ಆರೀಫ್ ರಾಜಾ ಗೆ ಈ ಸಲದ ಕೇಂದ್ರ ಸಾಹಿತ್ಯ ಅಕಾದೆಮಿಯ ಯುವ ಪ್ರಶಸ್ತಿ ಲಭಿಸಿದೆ. ನಮ್ಮ ತಲೆಮಾರಿನಲ್ಲಿ ಕಾವ್ಯವನ್ನು ತನ್ನದೇ ಆದ ಹೊಸ ನುಡಿಗಟ್ಟಿನಲ್ಲಿ ಬರೆಯುವ ಶಕ್ತಿಯುತ ಕವಿ ಆತ. ಕನ್ನಡ ಕಾವ್ಯ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ನುಡಿಗಟ್ಟನ್ನು ಸೃಷ್ಠಿಸಿಕೊಂಡು ಕಾವ್ಯದಲ್ಲಿ ಭಿನ್ನವಾಗುವುದು ತುಂಬಾ ಸವಾಲಿನದು. ಅಂತಹ ಸವಾಲನ್ನು ಆರಿಫ್ ಎದುರುಗೊಂಡಿದ್ದಾನೆಂದೇ ಹೇಳಬೇಕು. ಆರಿಫ್ ನಿತ್ಯವೂ ಕಾವ್ಯವನ್ನು ಧ್ಯಾನಿಸುವ ಸಂತನಂತೆ ಒಮ್ಮೆಮ್ಮೆ ಕಾಣುತ್ತಾನೆ. ಈತನಿಗೆ ಕೇಂದ್ರ ಸಾಹಿತ್ಯ ಅಕಾದೆಮಿಯ ಯುವ ಪ್ರಶಸ್ತಿ ಲಭಿಸಿರುವುದು ನಮಗೆಲ್ಲಾ ಸಂಭ್ರಮದ ಸಂಗತಿ. ಆತನಿಗೆ ಈ ಸಂದರ್ಭದಲ್ಲಿ ನಾವೆಲ್ಲರೂ ಶುಭ ಹಾರೈಸೋಣ.

  6. Beluru Ramamurthy

    Abhinandanegalu. Yaavude Aase Illade Summane Namma Paadige Naavu Namma Kelasa Maadikondiddare Adu Satvashaaliyaagiddare Prashsti Puraskaaragalu Hudukikondu Baruththave.

    Innastu Prashsti Galisuvantha Krutigalu Nimminda Horabarali.

  7. halemanerajashekhar

    abhinandaneglu tumba santosh. prsshitiylli kledu hoguvdilla emba nmbike nndu.

  8. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ.

    ಅಭಿನಂದನೆಗಳು ಆರೀಫ್ ,ತುಂಬಾ ಖುಷಿಯಾಯಿತು.

  9. mmshaik

    abhinandanegaLu..!!

  10. viddullata

    congrats areef. if you salute your work no need to salute any one.
    you saluted poetry only. that’s how you got the recognition. once again
    congrats and thanks to sahitya akademi for selecting such a wonderful poet.

  11. ಸುಧಾ ಚಿದಾನಂದಗೌಡ

    congratulations

  12. Shivu K

    ಗೆಳೆಯ ಆರೀಫ್ ರಾಜಾರವರಿಗೆ ಅಭಿನಂದನೆಗಳು. ಆತ ಪ್ರತಿಭಾವಂತ.ಅದಕ್ಕೆ ತಕ್ಕ ಮನ್ನಣೆ ಸಿಕ್ಕಿದೆ. ನನ್ನ ಗೆಳೆಯರೆಂದು ಹೇಳಿಕೊಳ್ಳುವುದಕ್ಕೆ ತುಂಬಾ ಹೆಮ್ಮೆ ಎನಿಸುತ್ತಿದೆ.

  13. ಡಿ ಎಸ್ ರಾಮಸ್ವಾಮಿ

    ಆರಿಫ್ ನಿನ್ನ ಕವಿತೆಗಳನ್ನು ಓದಿದಾಗಲೆಲ್ಲ ಅವುಗಳ ’ಅಸಲಿಯತ್ತು’ ದಂಗು ಬಡಿಸಿ, ನಿನ್ನ ಕಾವ್ಯಮೋಹವನ್ನು ಉತ್ಕಟತೆಯಿಂದ ನೋಡುವಂತೆ ಮಾಡುತ್ತವೆ. ಪ್ರಶಸ್ತಿ ನಿನಗಲ್ಲ, ನಿನ್ನ ಕಾವ್ಯ ಕರ್ಮವನ್ನು ಮೆಚ್ಚುವ ಎಲ್ಲರಿಗೂ ಸಂದ ಗೌರವ ಅಂತ ಭಾವಿಸಿದ್ದೇನೆ. ಅಭಿನಂದನೆ, ಶುಭಾಷಯ

  14. AMARESHA GINIWAR

    sir, tumba khushiyayitu,

  15. Pramod Ambekar

    Dear Khade I Did not read it you come in to my mind

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading