ನಾರಾಯಣ ರಾಯಚೂರ್
ಜೂಲೈ ೨ ರಂದು ಹಿರಿಯ ರಂಗ-ಮಿತ್ರರೊಬ್ಬರ ಸಂದೇಶ್ ಶಬ್ದ ಮಾಡಿತು. ತೆರೆದು ನೋಡಿದರೆ, ಮಹಾನ್ ರಂಗ ನಿರ್ದೇಶಕ ಪೀಟರ್ ಬ್ರೂಕ್-ನ ಮರಣ ವಾರ್ತೆ! ಓ -ಮೈ -ಗಾಡ್!! ಮನಸ್ಸು ಒಂದು ಕ್ಷಣ ಸ್ಥಂಭಿತವಾಯ್ತು. ಸ್ಮೃತಿಪಟಲದ ನೆನಪಿನ ಸುಳಿ ಬಿಚ್ಚಲಾರಂಭಿಸಿತು
.
ಎಂಭತ್ತರ ದಶಕದ ಉತ್ಧರಾರ್ಧದ ವರ್ಷಗಳಿರಬಹುದು. ನಾನು ನಾಟಕ ರಂಗಕ್ಕೆ ಕಾಲಿಟ್ಟು ಐದಾರು ವರ್ಷಳಿರಬೇಕು. ರವೀಂದ್ರ ಕಲಾಕ್ಷೇತ್ರಕ್ಕೆ ಪೀಟರ್ ಬ್ರೂಕ್-ಮಹಾಭಾರತ-ತಂಡ ಭೇಟಿ ನೀಡಿತ್ತು. ರಂಗ-ಬೆಳಕಿನ-ಭೀಷ್ಮ ವಿ, ರಾಮಮೂರ್ತಿ ನಮ್ಮಂತಹ ಯುವಕರಿಗೆ ಗುರು -ಅಂಡ್- ಗೈಡ್!!. ಬ್ರೆಕ್ಟ್, ಬೆನೆವಿಡ್ಜ್, ಪೀಟರ್ ಬ್ರೂಕ್ ಅವರೆಲ್ಲ ನಮಗೆ ಅವರಿಂದಲೇ ಪರಿಚಯ. ಬೆರಗುಗಣ್ಣು-ತೆರೆದ ಕಿವಿಯಿಂದ ನೋಡಿ ಆಲಿಸಿ ತಲೆಗಿಸಿಕೊಳ್ಳುವುದಷ್ಟೇ ಆಗ ನಮ್ಮ ಕೆಲಸ. ಬ್ರೂಕ್ ತಂಡದವರ ಜೊತೆ ಚಹಾದ ನಂತರ ಮಾರನೆ ದಿನ- “ತಾಜ್-ವೆಸ್ಟ್-ಎಂಡ್”ನಲ್ಲಿ ಪ್ರಧಾನ ಕಾರ್ಯಕ್ರಮ. ಅಲ್ಲಿಯೇ ನಮಗೆ ಬ್ರೂಕ್ ನಿರ್ದೇಶಿತ ಮಹಾಭಾರತದ ತುಣುಕುಗಳ ದರ್ಶನ, ಚರ್ಚೆ, ಪ್ರ್ಯಾತ್ಯಕ್ಷಿಕೆ. ಪೀಟರ್ ಮತ್ತು ವ್ಯಾಸರ, ಪೂರ್ವ-ಪಶ್ಚಿಮ ಸಂಸ್ಕೃತಿಗಳ ಮುಖ-ಮುಖಿಯ ‘ದರ್ಶನ’ದ ಅಪೂರ್ವ,ಅವಿಸ್ಮರಣೀಯ ಅನುಭವ.
ಫ್ರಾನ್ಸ್ ಹಾಗು ಅಮೆರಿಕಗಳಲ್ಲಿ ಜಯಭೇರಿ ಹೊಡೆದು, ಫ್ರೆಂಚ್ ಹಾಗು ಇಂಗ್ಲಿಷ್ ಭಾಷೆಗಳಲ್ಲಿ ನೋಟಕರನ್ನು ವಿಸ್ಮಯಗೊಳಿಸಿದ ‘ಮಹಾಭಾರತ’ ನಾಟಕ- ನೀಗ್ರೋಗಳು, ಫ್ರೆಂಚರು, ಅಮೆರಿಕನ್ನರು ಸೇರಿದಂತೆ ಮೂವತ್ತಾರು ದೇಶದ ನಟನಟಿಯರನ್ನೊಳಗೊಂಡ ವಿಹಂಗಮ-ಸಂಗಮ! ವಿಶ್ವ-ವಿಖ್ಯಾತ ವಿಜ್ಞಾನಿ ವಿಕ್ರಂ ಸಾರಾಭಾಯ್ ಅವರ ಪುತ್ರಿ,ನಟಿ-ನೃತ್ಯಗಾತಿ ಚೆಲುವೆ ಮಲ್ಲಿಕಾ ಸಾರಾಭಾಯ್ ಮಾತ್ರ ದ್ರೌಪಾದಿಯಾಗಿ ಇದರಲ್ಲಿ ಮಿಂಚಿದ ಏಕೈಕ ಭಾರತದ ಪ್ರತಿಭೆ!!

ಅಂದಿನ ಪತ್ರಿಕಾಗೋಷ್ಠಿ ಕನ್ನಡದ ಘಟಾನುಘಟಿ ಸಾಹಿತಿ, ರಂಗಕರ್ಮಿ, ಪತ್ರಕರ್ತರು, ಕಲಾವಿದರಿಂದ ತುಂಬಿ-ತುಳುಕುತ್ತಿತ್ತು. “ಭಾರತದ ಕತೆ ಹೇಳಲು ಅಂತಾರಾಷ್ಟ್ರೀಯ ನಟ ವರ್ಗ ಏಕೆ?” ಎಂಬ ಪ್ರಶ್ನೆಗೆ ” ಇದು ದೇಶದ ಕತೆಯಲ್ಲ; ದೇಶಗಳ ಸ್ವಪ್ರತಿಷೆಯನ್ನು ಮೀರಿದ ಕತೆ. ಒಂದೊಮ್ಮೆ ಇಂಗ್ಲೆಂಡ್ ಜಗತ್ತಿನ ಪ್ರತೀಕ ಎಂದುಕೊಳ್ಳಲಾಗಿತ್ತು, ಅದು ಹುಸಿಯಾಯಿತು; ಅಮೆರಿಕ ತಾನು ಪ್ರತೀಕ ಎಂದು ಕೊಂಡಿತು ಅದೂ ಬೊಗಳೆಯಾಯಿತು; ಇಂದು ಮನು-ಕುಲದ ಕತೆಯ ಅಗತ್ಯವಿದೆ-ಮಹಾಭಾರತ ಮನುಕುಲದ ಕತೆ. ಇದನ್ನು ಮಂಡಿಸಲು ವಿಭಿನ್ನ ಸಂಸ್ಕೃತಿಗಳ ನಟ-ವರ್ಗ!!” ಎಂದು ತಮ್ಮ ಅರ್ಥೈಕೆ ಪರಿ, ನಿಲುವು ಸ್ಪಷ್ಟಪಡಿಸಿದರು ಬ್ರೂಕ್.
ಹತ್ತು-ಹತ್ತು ನಿಮಿಷಗಳ ಪ್ರ್ಯಾತ್ಯಕ್ಷಿಕೆಗಳಲ್ಲಿಯೇ ಕಲಾವಿದರು ಕುಂತಿ, ದ್ರೋಣ, ಭೀಮ, ಅರ್ಜುನ, ದ್ರೌಪದಿಯರ ತವಕ-ತಲ್ಲಣಗಳಿಗೆ ಅಭಿವ್ಯಕ್ತಿಯಾಗುತ್ತಿದ್ದ ಬಗೆ ಅನನ್ಯ. ಹೋಟೆಲ್-ನ ಸಭಾಂಗಣದ ಒಂದು ಭಾಗವನ್ನೇ ‘ರಂಗ-ಸ್ಥಳ’ವನ್ನಾಗಿಸಿ, ಇಂದಿನ ಸಾಮಾನ್ಯ-ಜನರ ವೇಷದೊಂದಿಗೆ ಬಣ್ಣ-ಬಣ್ಣದ ಬ್ರಹದಾಕಾರದ ಉತ್ತರೀಯಗಳಿಂದ ಪಾತ್ರ-ವೈವಿಧ್ಯ ಅಭಿವ್ಯಕ್ತಿಸುತ್ತ, ೯೦,೦೦೦ ಶ್ಲೋಕಗಳ ಮಹಾಕಾವ್ಯಕ್ಕೆ ದೃಶ್ಯ-ರೂಪ ನೀಡಿದ ಬ್ರೂಕ್ ೧೯೭೦ ರಿಂದಲೇ ಈ ಕಾವ್ಯದ ರಂಗ-ರೂಪಾಂತರದ ಕೈಂಕರ್ಯವಹಿಸಿದ್ದು. ಮಹಾಭಾರತದ ಕೇಂದ್ರ ಬಿಂದುವಾಗಿರುವ ದ್ವಂದ್ವ,ವಿಧಿಯ ಲೀಲೆ,ಮನುಷ್ಯನ ಗೀಳು, ಮನುಕುಲದ ತೆವಲು, ಮನುಷ್ಯನ ಆಳದ ಕಾತರಗಳನ್ನು ಸಂಕೇತಿಸುವ ‘ಪಗಡೆಯಾಟ’…ಹೀಗೇ ಹರಡುತ್ತಾ ಹೊರಟರೆ ವ್ಯಾಸ ಮತ್ತು ಪೀಟರ್-ರ ನೈಪುಣ್ಯ, ಕಲೆಗಾರಿಕೆ, ಕುಶಲತೆ ಬೆರಗುಗೊಳಿಸುತ್ತ ಸಾಗುತ್ತವೆ.

ಪೀಟರ್ ಬ್ರೂಕ್, ಪೂರ್ತಿ ಹೆಸರು- ಪೀಟರ್ ಸ್ಟೀಫನ್ ಪಾಲ್ ಬ್ರೂಕ್, ಜನಿಸಿದ್ದು ಮಾರ್ಚ್ ೨೧,೧೯೨೫ ಲಂಡನ್ನಿನಲ್ಲಿ ; ಇಪ್ಪತ್ತನೇ ಎಳೆ ವಯಸ್ಸಿಗೇ ಶೇಕ್ಸಫಿಯರ್-ನ ‘ಕಿಂಗ್ ಜಾನ್’ ನಾಟಕವನ್ನು ಸಮರ್ಥವಾಗಿ ನಿರ್ದೇಶಿಸಿದವ. ಮುಂದೆ ಅನೇಕ ಸಮಕಾಲೀನ ನಾಟಕಕಾರರ ‘ಮೆಷರ್ ಫ಼ಾರ್ ಮೆಷರ್ ”ವಿಂಟರ್ ಟೈಲ್” ಟೈಟ್ಸ್…” ಗಳ ಜೊತೆಗೆ ‘ಟೆಂಪೆಸ್ಟ್ ‘ಹ್ಯಾಮ್ಲೆಟ್’
ಪ್ರಯೋಗಗಳನ್ನೂ ನೀಡಿ ೧೯೭೦ರಲ್ಲಿ ಪ್ಯಾರಿಸ್ ಬಂದು ಅಲ್ಲಿ ಬ್ರೂಕ್ ಆರಂಭಿಸಿದ ‘ಅಂತರ್ ರಾಷ್ಟ್ರೀಯ ರಂಗಭೂಮಿ ಸಂಶೋಧನಾ ಕೇಂದ್ರ’ ವಿಶ್ವದೆಲ್ಲೆಡೆ ಬ್ರೂಕ್ ರಂಗ-ಪರಿಕಲ್ಪನೆ ವಿಸ್ತರಿಸಲು ಇಂಬು ಕೊಟ್ಟಿತು. ಇಲ್ಲಿಯೇ ಬ್ರೂಕ್ ಅಂತರ್-ಶಿಸ್ತೀಯ,ಅಂತರ್-ಸಾಂಸ್ಕೃತಿಕ ರಂಗ-ಭಾಷೆಯನ್ನು ಮೈಗೂಡಿಸಕೊಂಡು ಬೆಳೆಯದದ್ದು -‘ ಮಹಾಭಾರತ’ ,ನಾಟಕ ಮತ್ತು ಸೆಲ್ಲ್ಯುಲಾಯ್ಡ್ರ-ನ ಅನುಪಮ ರೂಪಗಳು ಹೊರಹೊಮ್ಮಲು ಸಾಧ್ಯವಾದದ್ದು. ರಿಚರ್ಡ್ ಅಟೆನ್ – ಬೇರೊ -ನ ‘ಗಾಂಧಿ’ ; ಪೀಟರ್ ಬ್ರೂಕ್-ನ ‘ಮಹಾಭಾರತ’ ಸಹೃದಯ ಕಲಾ ಪ್ರೇಮಿಗಳ ಮನಗೆದ್ದವು; ೧೯೨೧ ರಲ್ಲಿ ಪೀಟರ್ ಬ್ರೂಕ್-ಗೆ ಪದ್ಮಶ್ರೀ ಗೌರವವೂ ದೊರಕಿತು.
ಬ್ರೂಕ-ನ ಕಲಾ-ಕೊಡುಗೆ ಅಪಾರ ಪ್ರಶಂಸೆಗೆ ಪಾತ್ರವಾದಂತೆ, ಈತನ ಮಹಾಭಾರತವೂ ಸೇರಿದಂತೆ ಅನೇಕ ರಂಗ-ಕೃತಿಗಳು ಸೃಜನಾತ್ಮಕ-ಟೀಕೆಗೂ ಗುರಿಯಾಗಿವೆ -ಸಹಜ ಕೂಡ!. ತನ್ನ ಕಾಲದ ಚೆಕೋವ್,ಮಿಲ್ಲರ್,ಶೇಕ್ ಸ್ಪಿಯರ್ ,ವ್ಯಾಸರನ್ನು ಅದ್ಭುತವಾಗಿ ರಂಗಕ್ಕೆ/ಬೆಳ್ಳಿ ತೆರೆಗೆ ತಂದು ಜೀವನದಿಂದ ರಂಗಭೂಮಿಗೆ, ರಂಗಭೂಮಿಯಿಂದ ಜೀವನಕ್ಕೆ ಹೊಸ ಜೀವ ತಂದಿರುವ ಧೀಮಂತ,ರಂಗ-ಸಂತ ಪೀಟರ್ ಬ್ರೂಕ್.-” ನಾನು ಯಾವುದೇ ಖಾಲಿ ಜಾಗವನ್ನು ರಂಗ-ವೇದಿಕೆಯಾಗಿ ಪರಿವರ್ತಿಸಬಲ್ಲೆ- ಒಬ್ಬ ಮನುಷ್ಯ ಇಂತಹ ಖಾಲಿ ಜಾಗದಲ್ಲಿ ಓಡಾಡುತ್ತಿರಲಿ ಮತ್ತು ಅವನನ್ನು ಆ ಕಡೆಯಿಂದ ಇನ್ನೂಬ್ಬ ನೋಡುತ್ತಿರಲಿ; ರಂಗ-ಕ್ರಿಯೆ ಸಂಪನ್ನಗೊಳ್ಳಲು ಇಷ್ಟು ಸಾಕು ” ಎಂದು ತನ್ನ ಅಮರ-ಕೃತಿ “ಎಂಪ್ಟಿ-ಸ್ಪೇಸ್’ ( ಖಾಲಿ ಜಾಗ ) ನಲ್ಲಿ ಪ್ರತಿಪಾದಿಸಿ ತೊಂಬತ್ತೇಳು ವರ್ಷಗಳ ತುಂಬು ಜೀವನ ನಡೆಸಿ ನಿರ್ಗಮಿಸಿದ ಬ್ರೂಕ್ ಈಗ ಖಾಲಿ ಮಾಡಿರುವ ಜಾಗವನ್ನು ಯಾರು ತುಂಬಾ ಬಲ್ಲರು?!- ಕಾಲವೇ ಉತ್ತರಿಸಬೇಕು!!






0 Comments