ಬ್ರಿಟಿಷ್-ಭಾರತದಲ್ಲೊಂದು ಲೈಂಗಿಕ ಬಿಳಿ ಗುಲಾಮಗಿರಿ

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋಛೇಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ‘ಆಫ್ ದಿ ರೆಕಾರ್ಡ್’ ನಲ್ಲಿ.

ಜೋಸೆಲಿನ್ ಮನಸ್ಸು ಭಾರವಾಗಿತ್ತು. ತನ್ನ ನಾಡಿನ ನೆನಪು ಒತ್ತರಿಸುತ್ತಿತ್ತು. ಲಂಡನ್ನಿನಲ್ಲಿ ವಾಸಿಸುತ್ತಿದ್ದ ಅಮ್ಮ-ಅಪ್ಪನ ಬಡತನದ ತಾಕಲಾಟದ ಬದುಕಿನ ನಡುವೆ ಅವಳು ಮಾರಾಟವಾಗಿದ್ದಳು. ಬಿಳಿಯನೇ ಆದ ಪಿಂಪ್ ಒಬ್ಬ ಅವಳನ್ನು ಖರೀದಿಸಿದ್ದ. ಒಂದು ಪುಟ್ಟ ಲಗೇಜಿನೊಂದಿಗೆ ಹಡಗಿನಲ್ಲಿ ಬಂದಿಳಿದ ಜೋಸೆಲಿನ್ ಬಾಂಬೆಯ ಕಾಮಾಟಿಪುರದ ಸಫೆಡ್ ಗಲ್ಲಿಯ ವೈಟ್ ಲೈನ್ ವೇಶ್ಯಾಗೃಹ ಸೇರಿದಳು.

ಮತ್ತದೇ ಯೂನಿವರ್ಸಲ್ ಕಥೆ!

ಜೋಸೆಲಿನ್ ಅಮ್ಮ-ಅಪ್ಪ ಲಂಡನ್ನಿನಲ್ಲಿ ವಾಸವಾಗಿದ್ರು. ಬದುಕು ನಡೆಸುವುದು ದುಸ್ತರದ ಸ್ಥಿತಿ. ಬಲೆ ಬೀಸಿದ ಪಿಂಪ್ ಇವರ ಮನೆಯ ಸ್ಥಿತಿ ಅರಿತ. ನಿಮ್ಮ ಮಗಳಿಗೆ ಭಾರತದಲ್ಲಿರುವ ಬ್ರಿಟಿಷ್ ಕಂಪೆನಿಯಲ್ಲಿ ಉದ್ಯೋಗ ಕೊಡಿಸುವೆನೆಂದ. ಎರಡು ಮೂರು ವರ್ಷಗಳಿಗೊಮ್ಮೆ ಬರುತ್ತಾಳೆ, ಬರುವಾಗ ಕೈತುಂಬ ಹಣ ತರುತ್ತಾಳೆ ನಿಮ್ಮ ಬಡತನ ನೀಗಿ ನೀವೂ ಪ್ರತಿಷ್ಠಿತರಾಗಿ ಬದುಕಬಹುದೆಂಬ ಆಸೆ ಹುಟ್ಟಿಸಿದ. ಅವರ ಕೈಗೊಂದಿಷ್ಟು ಹಣವಿಟ್ಟು ಜೋಸೇಲಿನ್ ಳನ್ನು ಕರೆತಂದ. ಕಾಮಾಟಿಪುರದಲ್ಲಿದ್ದ ಯುರೋಪಿಯನ್ ವೇಶ್ಯಾಗೃಹವೊಂದಕ್ಕೆ ಮಾರಿ ಹೋದ.

Sorry! ಇದು ಕಥೆಯಲ್ಲ…

ಒಮ್ಮೆ ಮುಂಬೈನ ಕಾಮಾಟಿಪುರಕ್ಕೆ ಭೇಟಿ ನೀಡಿದ್ದಾಗ ಶುಕ್ಲಾಜಿ ಸ್ಟ್ರೀಟ್ ನಲ್ಲಿ ಹೋಗುತ್ತಿದ್ದೆವು. ನನ್ನ ಜೊತೆಗಿದ್ದ (ಮುಂಬೈನ) ಸಹೋದ್ಯೋಗಿ ಈ ಸ್ಟ್ರೀಟ್. ಬ್ರಿಟಿಷರ ಕಾಲದ್ದು. ಆಗ ಇದನ್ನು ‘ವೈಟ್ ಲೇನ್’ ಅಂತ ಕರೀತಿದ್ರಂತೆ, ಇಲ್ಲಿ ಯೂರೋಪಿಯನ್ ವೇಶ್ಯಾಗೃಹಗಳಿದ್ದವಂತೆ ಎಂದಳು.

ನನಗೆ ಕುತೂಹಲವಾಯ್ತು. ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಕಾಲಘಟ್ಟದಲ್ಲಿ ಅಂದರೆ ಬ್ರಿಟಿಷ್ ಭಾರತದಲ್ಲೊಂದು ಲೈಂಗಿಕ ಬಿಳಿ ಗುಲಾಮಗಿರಿ ಹುಡುಕಾಟ ಮಾಡಿದೆ. ಅದರ ಪಳೆಯುಳಿಕೆಗಳು ಸಿಕ್ಕವು. ಅವು ಬಿಳಿ ವೇಶ್ಯೆಯರ ಇತಿಹಾಸವನ್ನು ಬಿಚ್ಚಿಟ್ಟವು.

ಬ್ರಿಟಿಷರು ಭಾರತವನ್ನು ಆಕ್ರಮಿಸುತ್ತಿರುವಾಗಲೇ ಅವರ ಸೈನಿಕರೂ ದಂಡು ದಂಡಾಗಿ ಭಾರತ ತಲುಪಿದರು. ಯುರೋಪಿನಿಂದ ಬಂದ ಸೈನಿಕರು ಬಹುತೇಕರು ಅವಿವಾಹಿತರಾಗಿದ್ದರು. ಬಹಳ ದಿನಗಳ ಕಾಲ ಕುಟುಂಬದಿಂದ ದೂರ ಉಳಿಯುವ ಅನಿವಾರ್ಯತೆಯಿತ್ತು.

ಇಲ್ಲಿ ಸಾಕಷ್ಟು ಉಪಕಥೆಗಳಿವೆ. ಆ ಮೂಲಕವೇ ಹೇಳ್ತೀನಿ…

ನಿಧಾನವಾಗಿ ಸೈನಿಕರಲ್ಲಿ ಲೈಂಗಿಕ ರೋಗಗಳು, ಆಯಾಸ, ನಿರುತ್ಸಾಹದಂತಹ ನ್ಯೂನತೆಗಳು ತಲೆದೋರಿದವು. ದಿನಕಳೆದಂತೆ ಈ ಸಮಸ್ಯೆ ಉಲ್ಬಣವಾಯಿತು. ತಜ್ಞರೊಂದಿಗೆ ಉನ್ನತ ಅಧಿಕಾರಿಗಳು ಸಮಾಲೋಚಿಸಿದಾಗ ಸೈನಿಕರಲ್ಲಿ ‘ಸಲಿಂಗ ಕಾಮ ಕ್ರಿಯೆಗಳು’ ಸಕ್ರಿಯವಾಗಿರುವುದರಿಂದ ಈ ಸಮಸ್ಯೆಗಳು ತಲೆದೋರಿವೆ ಎಂಬುದು ಬೆಳಕಿಗೆ ಬಂತು. 

ವ್ಯಾಪಾರಿ ಮನೋಭಾವದ ಬ್ರಿಟಿಷ್ ಅಧಿಕಾರಿಗಳು ತಮ್ಮ ಲಾಭದ ಹಿತಕ್ಕಾಗಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದರು. ಅಲ್ಲದೇ ಬ್ರಿಟಿಷರು ಇದನ್ನು ಅನೀತಿಯುತ ಎಂದೇ ಭಾವಿಸಿದ್ದರು. ಇದೇನಿದ್ದರೂ ಭಾರತ, ಅರಬ್, ಆಫ್ರಿಕಾದಂತಹ ದೇಶಗಳಲ್ಲಿ ಮಾತ್ರ ಇರುತ್ತದೆ ಎಂಬ ಭ್ರಮೆಯಲ್ಲಿದ್ದರು.

ಇದನ್ನು ತಡೆಗಟ್ಟಲು ಗಂಭೀರವಾಗಿ ಚಿಂತಿಸಿದರು. ಈ ಸಮಸ್ಯೆಗೆ ಪರಿಹಾರವಾಗಿ ಅವರು ಯೋಚಿಸಿದ ಯೋಜನೆಯೇ ವೇಶ್ಯೆಯರಿಗೆ ಅನುಮತಿ ನೀಡುವುದು. ಇದಕ್ಕಾಗಿ ಆರಂಭವಾದ ದಂಧೆ ಎಗ್ಗಿಲ್ಲದೇ ನೆಲೆಯೂರಿತು. ಬ್ರಿಟಿಷ್ ಸೈನಿಕ ವ್ಯವಸ್ಥೆಯ ಜೊತೆ ಜೊತೆಯಲ್ಲಿಯೇ ಅಷ್ಟೇ ಪ್ರಮುಖವಾಗಿ ವೇಶ್ಯಾವಾಟಿಕೆಯೂ ಮುನ್ನಡೆಯಿತು. ಆ ಆಲೋಚನೆ ಬಂದ ಕೂಡಲೇ ಬ್ರಿಟಿಷರು ಕಾರ್ಯೋನ್ಮುಖರಾದರು.

ಭಾರತದ ಹಳ್ಳಿಗಳಿಂದ ಹದಿಹರೆಯದ 15ರಿಂದ 25ರೊಳಗಿನ, ದಷ್ಟಪುಷ್ಟವಾಗಿರುವ, ಸುಂದರವಾಗಿರುವ, ಹೆಣ್ಣುಮಕ್ಕಳನ್ನು ಆಯ್ದು ತರಲಾಯಿತು. ಅದೆಷ್ಟೋ ಬಾಲ ವಿಧವೆಯರು ಇಲ್ಲಿಗೆ ತಳ್ಳಲ್ಪಟ್ಟರು. ‘ಚಕ್ಲಾಸ್’ ಎಂದು ಕರೆಯಲ್ಪಡುತ್ತಿದ್ದ ಆ ವೇಶ್ಯಾಗೃಹಗಳಲ್ಲಿ ಅವರನ್ನು ಇರಿಸಲಾಯಿತು. ಅವರ ಮೇಲುಸ್ತುವಾರಿಗಾಗಿ ಅಧೀಕ್ಷಕರು ಇರುತ್ತಿದ್ದರು. 

ಮೆಹಲ್ದಾರ್ನಿ ಅಥವಾ ವೇಶ್ಯಾಗೃಹ ಕೀಪರ್ ಎಂದು ಅವರನ್ನು ಕರೆಯಲಾಗುತ್ತಿತ್ತು. ಇಂತಹ ವೇಶ್ಯಾಗೃಹಗಳ ಪ್ರತಿ ಹೆಣ್ಣಿನ ನೋಂದಣಿ ಮಾಡಿ ಗುರುತಿನ ಚೀಟಿಯೊಂದಿಗೆ ಪರವಾನಗಿ ಕೊಡಲಾಗುತ್ತಿತ್ತು. ಅವರ ಆರೋಗ್ಯ ತಪಾಸಣೆ ನಿಯಮಿತವಾಗಿತ್ತು. ಅದಕ್ಕಾಗಿಯೇ ಪ್ರತ್ಯೇಕ ಆಸ್ಪತ್ರೆಗಳು, ತಜ್ಞ ವೈದ್ಯರುಗಳು ಇರುತ್ತಿದ್ದರು. (ಇವೆಲ್ಲ ಕಾಳಜಿಯೂ ತಮ್ಮ ಸೈನಿಕರ ಹಿತಾಸಕ್ತಿಯಿಂದಲೇ ಹೊರತಾಗಿ ವೇಶ್ಯೆಯರಿಗಾಗಿಯಲ್ಲ ಎನ್ನುವುದು ಸಾಬೀತಾಗಿತ್ತು.)

ಭಾರತದಾದ್ಯಂತ ಸೈನಿಕರ ದಂಡಿನ ರೆಜಿಮೆಂಟ್ ಗಳಿದ್ದವು. ಪ್ರತಿ ರೆಜಿಮೆಂಟ್ ನಲ್ಲಿ ಒಂದು ಸಾವಿರ ಸೈನಿಕರಿರುತ್ತಿದ್ದರು. ಆ ರೆಜಿಮೆಂಟ್ ಗಳ ಸಮೀಪವೇ ವೇಶ್ಯಾಗೃಹಗಳ ಸಮೂಹದ ‘ಲಾಲ್ ಬಜಾರ್’ (Red markets) ಗಳಿರುತ್ತಿದ್ದವು. ಅಲ್ಲಿಯ ಪ್ರತಿ ವೇಶ್ಯಾಗೃಹದಲ್ಲಿ 12ರಿಂದ 15  ಹೆಣ್ಣುಗಳಿರುತ್ತಿದ್ದರು. ಪ್ರತಿಯೊಬ್ಬಳೂ ದಿನಕ್ಕೆ ಸರಾಸರಿ 10ರಿಂದ 12 ಸೈನಿಕರೊಂದಿಗೆ ಸೇರಬೇಕಿತ್ತು.

ಎಷ್ಟೇ ಎಚ್ಚರಿಕೆಯ ಕ್ರಮ ಕೈಗೊಂಡರೂ ಸೈನಿಕರಲ್ಲಿ ಲೈಂಗಿಕ ಸೋಂಕುಗಳು ಉಲ್ಬಣವಾಗಿದ್ದು, ಉನ್ನತ ಅಧಿಕಾರಿಗಳಿಗೆ ಆತಂಕವಾಯ್ತು.

ಯೂರೋಪಿಯನ್ ಮತ್ತು ಭಾರತೀಯ ಮಿಶ್ರಿತ ಮಕ್ಕಳ ಸಂಖ್ಯೆ ಗೋಚರಿಸಲು ಆರಂಭವಾಯ್ತು.

ನಿಜವಾಗಿಯೂ ಆತಂಕಕ್ಕೊಳಗಾದ ಬ್ರಿಟೀಷರು ಇತರೆ ಕಾಯ್ದೆ- ಕಾನೂನುಗಳಂತೆಯೇ ವೇಶ್ಯಾವಾಟಿಕೆಗಳ ನಿಯಂತ್ರಣ ಕಾಯ್ದೆಯನ್ನೂ ಮಾಡಿದರು.

1860ರ,  1864ರ, ಕಂಟೋನ್ಮೆಂಟ್ ಕಾಯ್ದೆಯ ಪ್ರಕಾರ ಕೆಲವು ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾದವು.

ಆ ಪ್ರಕಾರ,

ಲೈಂಗಿಕ ಸೋಂಕುಗಳ ಬಗ್ಗೆ ಜಾಗೃತಿ ಹಾಗೂ ವೇಶ್ಯಾವಾಟಿಕೆಗೆ ಸಂಬಂಧಿಸಿದ ನೀತಿ-ನಿಯಮಗಳನ್ನು ಹೇಗೆ ಪಾಲಿಸಬೇಕೆಂಬ ವಿವರಗಳ ಕಿರುಹೊತ್ತಿಗೆಗಳನ್ನು ಆಯಾ ಪ್ರಾದೇಶಿಕ ಭಾಷೆಯಲ್ಲಿ ಮುದ್ರಿಸಿ ವಿತರಿಸಲಾಯ್ತು.

ಮಕ್ಕಳ ಜನನವಾಗದಂತೆ ಎಚ್ಚರ ವಹಿಸಲಾಯ್ತು.

‘ಲಾಲ್ ಬಜಾರ್’ ನಲ್ಲಿ ನೋಂದಣಿಯಾಗಿರುವ ವೇಶ್ಯಾಗೃಹಗಳಿಗೆ ಬ್ರಿಟಿಷ್ ಸೈನಿಕರಿಗೆ ಮಾತ್ರ ಅನುಮತಿ ನೀಡಲಾಯ್ತು. ಭಾರತೀಯ ಸೈನಿಕರಿಗೆ ಆ ವೇಶ್ಯಾಗೃಹಗಳಿಗೆ ಹೋಗದಂತೆ ನಿಷೇಧಿಸಲಾಯ್ತು.

ದುರಂತವೆಂದರೆ 18ನೇ ಶತಮಾನದಲ್ಲಿ ಭಾರತದಲ್ಲಿ ಬ್ರಿಟಿಷ್ ಆಡಳಿತದ ಸ್ವಾರ್ಥದಿಂದಾಗಿ ಸಾಮಾಜಿಕ ವೇಶ್ಯಾವಾಟಿಕೆಯ ಅಸ್ತಿತ್ವ ಗಟ್ಟಿಯಾಗಿ ನೆಲೆಯೂರಿತು. ಮತ್ತು ಹೆಚ್ಚು ಹೆಚ್ಚು ವೇಶ್ಯಾಗೃಹಗಳ ಸ್ಥಾಪನೆಗೆ ಬೆಂಬಲ ನೀಡಿದ್ದಕ್ಕಾಗಿ ಹೆಣ್ಣಿನ ಮಾರಾಟ ಮತ್ತು ಸಾಗಾಟ ಎಗ್ಗಿಲ್ಲದೇ ಸಾಗಿತು.

ಭಾರತೀಯರ ಸ್ವಾತಂತ್ರ್ಯ ಚಳವಳಿಗಳು, ಪ್ರತಿರೋಧಗಳು ಬ್ರಿಟಿಷರನ್ನು ಕಂಗೆಡಿಸಿದಷ್ಟೇ ತಮ್ಮ ಸೈನ್ಯದ ಸಾಮರ್ಥ್ಯ ಮತ್ತು ಮಾನಸಿಕ ಸುಸ್ಥಿರತೆಯೂ ಸವಾಲಾಗಿತ್ತು. ಆ ಸವಾಲನ್ನು ನಿಭಾಯಿಸಲು ಕಂಡುಕೊಂಡ ಸುಲಭೋಪಾಯವೇ, ಅಮಾಯಕ ಭಾರತೀಯ ಹೆಣ್ಣುಗಳನ್ನು ವೇಶ್ಯಾವಾಟಿಕೆಯೆಂಬ ವಿಷವರ್ತುಲದೊಳಗೆ ದೂಡಿ ದುರ್ಬಳಕೆ ಮಾಡಿಕೊಂಡಿದ್ದಾಗಿತ್ತು.

ಅತ್ಯಂತ ವಿಷಾದವೆಂದರೆ, ಇಡೀ ದೇಶದಾದ್ಯಂತ ಸಾಮಾಜಿಕ ವೇಶ್ಯಾವಾಟಿಕೆಯ ಜಾಲ, ಅದರ ಸ್ವಾರ್ಥ, ಲಾಲಸೆ, ಲಾಭ ಬಡುಕತನ, ಅಮಾಯಕ ಹೆಣ್ಣುಗಳ ಬದುಕುಗಳ ಅಧಃಪತನವನ್ನು ಭಾರತೀಯ ಸ್ವಾತಂತ್ರ್ಯ ಚಳವಳಿಯು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಯಾವತ್ತೂ ಹೆಣ್ಣನ್ನು ಎರಡನೇ ದರ್ಜೆಯಾಗಿ ನೋಡಿದ, ಅವಳ ಬವಣೆಗಳು, ಪರಿಸ್ಥಿತಿಯನ್ನು ಪರಿಗಣಿಸದ ಇತಿಹಾಸ ಇಂತಹ ಕಳಂಕಿತೆಯರ ಬಗ್ಗೆ ಗಮನಹರಿಸಲು ಸಾಧ್ಯವಾಗಿಯೇ ಇಲ್ಲ.

ಭಾರತದಲ್ಲಿದ್ದ ಬ್ರಿಟಿಷ್ ರೆಜಿಮೆಂಟ್ ಗಳ ಸುತ್ತಮುತ್ತ ಆಂಗ್ಲೋ-ಇಂಡಿಯನ್ ಸಂತಾನ ಗೋಚರಿಸ ತೊಡಗುತ್ತದೆ. ತಮ್ಮ ಜನಾಂಗೀಯ ಶ್ರೇಷ್ಠತೆಯ ಅಹಂನ್ನು ನೆತ್ತಿಗೇರಿಸಿ ಕೊಂಡಿದ್ದ ಅವರು ಆತಂಕಗೊಳ್ಳುತ್ತಾರೆ. ಭಾರತೀಯ ಮಹಿಳೆಯರಿಂದ ಯೂರೋಪಿಯನ್ನರಿಗೆ ಹುಟ್ಟುವ ಮಿಶ್ರ ಜನಾಂಗದಿಂದ ಇಡೀ ಬ್ರಿಟಿಷ್ ವ್ಯವಸ್ಥೆಯ ಘನತೆಗೆ ಚ್ಯುತಿಯಾಗುತ್ತದೆ ಎಂದು ಚಿಂತಿತರಾಗುತ್ತಾರೆ. ಹಿಂದುಳಿದ, ಕಪ್ಪು ಬಣ್ಣದ ಜನತೆಯ ರಕ್ತ ನಮ್ಮವರಿಗೆ ಬೆರೆತು ಕಲುಷಿತರಾಗುತ್ತೇವೆ ಎಂದು ಭಾವಿಸುತ್ತಾರೆ.

ಇದಕ್ಕೂ ಇನ್ನೊಂದು ಅಮಾನವೀಯ ಪರಿಹಾರ ಕಂಡುಕೊಳ್ಳುತ್ತಾರೆ !

ಅದು 19ನೇ ಶತಮಾನದ ಆರಂಭ. ಬ್ರಿಟಿಷರು ತಮ್ಮ ವಹಿವಾಟುಗಳನ್ನು ತೀವ್ರಗೊಳಿಸಲು  ಭಾರತದ ಬಂದರುಗಳನ್ನು ಅಭಿವೃದ್ಧಿ ಪಡಿಸುತ್ತಾರೆ. ಅದೇ ಸಂದರ್ಭದಲ್ಲಿ ತಮ್ಮ ಜನಾಂಗೀಯ  ಶ್ರೇಷ್ಠತೆಗಾಗಿ ಯೂರೋಪಿಯನ್ ಹೆಣ್ಣುಗಳನ್ನು ಮಾರಾಟ ಮತ್ತು ಸಾಗಾಟ ಮಾಡಲು ಪರೋಕ್ಷವಾದ ಅನುಮತಿ ನೀಡುತ್ತಾರೆ. ಆ ಜಾಲ ಸಕ್ರಿಯವಾಗುತ್ತದೆ.

ಯೂರೋಪಿನ ಬಡತನದ, ಮಬ್ಬುಬಿಳಿಯ, ಅಷ್ಟೇನೂ ಗಣನೀಯವಲ್ಲದ ಹಿನ್ನೆಲೆಯ ಕೆಳವರ್ಗಗಳ ಹೆಣ್ಣುಗಳು ಸರಕುಗಳಾಗಿ ತಂಡೋಪತಂಡವಾಗಿ ಭಾರತಕ್ಕೆ ಬಂದಿಳಿಯುತ್ತಾರೆ. ಅವರಿಗಾಗಿ ವೈಟ್ ಲೇನ್ ಗಳಲ್ಲಿಯ ವೇಶ್ಯಾಗೃಹಗಳು ಅಲಂಕೃತವಾಗುತ್ತವೆ. ಆನಂತರ ಬ್ರಿಟಿಷ್ ಸೈನಿಕರಿಗೆ ಯೂರೋಪಿಯನ್ ಹೆಣ್ಣೆಂಬ ವಸ್ತುವನ್ನು ಮಾತ್ರ ಬಳಸಬೇಕೆಂದು ತಾಕೀತಾಗುತ್ತದೆ. ಆ ಮೂಲಕ ತಮ್ಮ ಆತಂಕದಿಂದ ಬ್ರಿಟಿಷ್ ವ್ಯವಸ್ಥೆಯು ನಿಟ್ಟುಸಿರು ಬಿಡುತ್ತದೆ.

ಬ್ರಿಟಿಷ್ ಆಳ್ವಿಕೆಯ ಗುಲಾಮಗಿರಿಯಲ್ಲಿದ್ದ ಭಾರತದಲ್ಲಿ ಬಿಳಿ ಗುಲಾಮಗಿರಿ ಸಕ್ರಿಯವಾಗಿತ್ತು. ಬಿಳಿ ಗುಲಾಮಗಿರಿಯ ನನ್ನ ಹುಡುಕಾಟದಲ್ಲಿ, ಕಥೆಯ ದ್ಯೋತಕವಾಗಿ ಜೋಸೆಲಿನ್ ಸಿಕ್ಕಿದ್ದಳು.. ಅವಳದೂ ಅದೇ ಒಡಲ ವೇದನೆ! ತೊಗಲ ಬಣ್ಣ ಮಾತ್ರ ಬದಲಾಗಿತ್ತು ಅಷ್ಟೆ!!

‍ಲೇಖಕರು ಲೀಲಾ ಸಂಪಿಗೆ

November 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Prabhakar Nimbargi

    Only the skin color changes everywhere, other things remain the same. The reasons for entering into this age-old profession and the societal status remain the same.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: