ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬ್ರಾಹ್ಮಣರ ಕೇರಿಯಲ್ಲಿ ಭಾರತಿ ಮತ್ತು ಭಾರತಿ ಮುಟ್ಟಾದ ಕಥೆ' – ಬಿ ವಿ ಭಾರತಿ

ಬಿ ವಿ ಭಾರತಿ

ಆಗ ತಾನೇ ಕಾಲೇಜು ಮುಗಿಸಿದ ಕಾಲ. ಸಾಯುವವರೆಗೆ ಒಟ್ಟಿಗೇ ಇದ್ದುಬಿಡುತ್ತೀವೇನೋ ಅಂತ ಭ್ರಮಿಸಿದ್ದ ಗೆಳತಿಯರೆಲ್ಲ ಚೆಲ್ಲಾಪಿಲ್ಲಿಯಾಗಿ ಹೋಗಿದ್ದ ಹೊಸತು. ಎಂದೂ ಹೆಚ್ಚು ಗೆಳತಿಯರಿಲ್ಲದ, ಯಾರ ಜೊತೆಗೂ ಬೇಗ ಹತ್ತಿರವಾಗದ, ಒಂದು ಚೂರು ವಿಕ್ಷಿಪ್ತಳ ಲೆಕ್ಕಕ್ಕೆ ಸೇರುತ್ತಿದ್ದ ನನಗೆ ಇದ್ದದ್ದೇ ಮೂರೂ ಮತ್ತೊಂದು ಗೆಳತಿಯರು. ಅವರೂ ಈಗ ಬೇರೆಯಾಗಿ ಹೋಗಿ ವಿರಹ ವೇದನೆ ಶುರುವಾಗಿದ್ದ ಕಾಲ. ಅಪ್ಪ ಆಗ ಮಧುಗಿರಿಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ನಾನೂ ಅಲ್ಲಿಗೆ ರವಾನೆಯಾಗಿದ್ದೆ. ಗೆಳತಿಯೊಬ್ಬಳ ಅಪ್ಪ ಬಳ್ಳಾರಿಯಲ್ಲಿದ್ದುದರಿಂದ ಅವಳೂ ಅಲ್ಲಿಗೆ ವಲಸೆ ಹೊರಟಿದ್ದಳು. ಇನ್ನೊಬ್ಬಳು ಬ್ಯಾಂಕಿನಲ್ಲಿ ಕೆಲಸ ಸಿಕ್ಕಿದ್ದರಿಂದ ಮಣಿಪಾಲಕ್ಕೆ ಹೊರಟುಹೋಗಿದ್ದಳು. ಇನ್ನೊಬ್ಬಳಿಗೆ ಅವಳ ಅಪ್ಪ ಅಮ್ಮ ಗಂಡು ಹುಡುಕುತ್ತಿದ್ದುದರಿಂದ ಆ ಕೆಲಸದಲ್ಲಿ ಬಿಜಿಯಾಗಿಹೋಗಿದ್ದಳು. ದಿನದ ಬಹುಪಾಲು ಒಟ್ಟಿಗೇ ಬದುಕುತ್ತಿದ್ದ ಮತ್ತು ಕಾಲೇಜಿನ ಆಗುಹೋಗುಗಳಲ್ಲಿ ಮುಳುಗಿರುತ್ತಿದ್ದ ನಾನು ಅಕ್ಷರಶಃ ನಿರುದ್ಯೋಗಿಯಾಗಿ ಹೋಗಿದ್ದೆ.
ಆಗ ನನಗಿದ್ದ ಏಕೈಕ entertainment ಅಂದರೆ ಗೆಳತಿಯರ ಜೊತೆಗಿದ್ದ ಪತ್ರ ವ್ಯವಹಾರ. ಆಗ ಮೊಬೈಲ್, ಮೇಲ್, ವಾಟ್ಸಪ್ ಯಾವುದೂ ಇರಲಿಲ್ಲವಾದ್ದರಿಂದ ಪತ್ರ ಬರೆಯುವುದೊಂದೇ ದಾರಿಯಿತ್ತಷ್ಟೇ (ಮೊಬೈಲ್ ಇರದಿದ್ದುದೇ ಒಳ್ಳೆಯದಾಯ್ತು – ಇದ್ದಿದ್ದರೆ ಅಪ್ಪ ಬಿಲ್ ಕಟ್ಟಿ ಪಾಪರ್ ಆಗಿಹೋಗಿರುತ್ತಿದ್ದರು!). ಈ ಪತ್ರದ ಕಥೆ ಯಾಕೆ ಹೇಳುತ್ತೀರಿ !! ಗೆಳತಿಯರಿಗೆ ಬದಲು ನನ್ನ ಪ್ರೇಮಿಗೇನಾದರೂ ಈ ರೀತಿ ಪತ್ರ ಬರೆದಿದ್ದರೆ, ಅವನು ನನ್ನ ಪ್ರೀತಿಗೆ ಮರುಳಾಗಿ ನನ್ನ ದಾಸಾನುದಾಸನಾಗಿರುತ್ತಿದ್ದನೇನೋ … ಅಷ್ಟು ಉದ್ದುದ್ದದ ಪತ್ರಗಳು. ಮೊದಲಲ್ಲಿ ಇನ್‌ಲ್ಯಾಂಡ್ ಲೆಟರ್‌ನಲ್ಲಿ ಬರೆದುಕೊಳ್ಳುತ್ತಿದ್ದೆವು. ಅದರಲ್ಲಿ ಸೀಲ್ ಮಾಡಲು ಇರುವ ಮಡಚಿದ ಭಾಗಗಳಲ್ಲೆಲ್ಲಾ ಬರೆದಿರುತ್ತಿದ್ದೆವು. ದಿನಕಳೆದ ಹಾಗೆ ಅದು ಸಾಲದಾಗಿ, ಕವರ್‌ನಲ್ಲಿ ಪತ್ರ ವ್ಯವಹಾರ ಶುರುವಾಯಿತು. ಆಮೇಲಾಮೇಲೆ ಎಕ್ಸ್‌ಟ್ರಾ ತೂಕಕ್ಕೆ ರೂಪಾಯಿಗಟ್ಟಳೆ ಸ್ಟ್ಯಾಂಪ್ ಹಚ್ಚುವಷ್ಟು ಬರೆದುಕೊಳ್ಳಲು ಶುರು ಮಾಡಿದೆವು. ವಾರಕ್ಕೊಂದು ಪತ್ರ! ಬಳ್ಳಾರಿಯ ಭಾರತಿಯ ಪತ್ರ ಬಂದ ದಿನ ಮೊದಲು ಅದನ್ನು ಎರಡು ಘಂಟೆ ಓದಿ ಓದಿ ಮುಗಿಸಿದ ಕೂಡಲೇ ಒಂದಿಷ್ಟು ಬಿಳಿ ಹಾಳೆಗಳು ಎದುರಾಗುತ್ತಿದ್ದವು. ಆ ಕೂಡಲೇ ಬರೆಯಲು ಶುರು ಮಾಡದಿದ್ದರೆ ಸಾವೇ ಎದುರಾಗುತ್ತದೋ ಅನ್ನುವಂತೆ ಉತ್ತರ ಬರೆಯಲು ಶುರು ಮಾಡುತ್ತಿದ್ದೆ! ಅದೆಷ್ಟು ತಾಳ್ಮೆಯಿತ್ತು ಆಗ ಅಂತ ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ.
ಹೀಗೆ ಬರೆದುಕೊಳ್ಳುತ್ತಾ, ಕೊಳ್ಳುತ್ತಾ ಇರುವಾಗ ಒಂದು ದಿನ ಅವಳನ್ನು ನೋಡದಿದ್ದರೆ ಸತ್ತೇ ಹೋಗುತ್ತೇನೆ ಅನ್ನುವ ಸ್ಥಿತಿ ನಿರ್ಮಾಣವಾಗಿಬಿಟ್ಟಿತು. ಈ ಕ್ಷಣ …. ಈ ಕ್ಷಣ ಅವಳನ್ನು ನೋಡಬೇಕು ಅನ್ನಿಸಿ – ನಾನು ಬಳ್ಳಾರಿಗೆ ಹೋಗುತ್ತೇನೆ ಅಂತ ಘೋಷಿಸಿಯೇ ಬಿಟ್ಟೆ. ಹೊರಡುವ ಎರಡು ದಿನ ಮೊದಲು ತಾಳಲಾರದ excitement. ಅಲ್ಲಿಯದ್ದೇ ಕನಸು. ಆ ಉತ್ಸಾಹದಲ್ಲೇ ಪ್ಯಾಕ್ ಮಾಡಿ, ಅಪ್ಪನ ಸಹಾಯದಿಂದ ಬಳ್ಳಾರಿಯ ಬಸ್ ಹತ್ತಿದ್ದಾಯ್ತು. ಹೋಗುವ ಮುಂಚೆಯೇ ಗೆಳತಿ ಅವಳ ಮನೆಯ ಬೀದಿ ಬೀದಿಯ ಮ್ಯಾಪ್ ಬರೆದು ಹಾಕಿ, ಎಲ್ಲಿ ಇಳಿಯಬೇಕು ಅಂತೆಲ್ಲ ಹೇಳಿದ್ದಳು. ಆದರೆ ನಾನೊಬ್ಬಳೇ ಮನೆ ಹುಡುಕಿ ಬರುವ ಸಾಹಸ ಮಾಡಕೂಡದೆಂದೂ, ತೆಪ್ಪಗೆ ಬಸ್ ಸ್ಟ್ಯಾಂಡ್‌ನಲ್ಲಿ ಇಳಿದು ಅವಳಿಗಾಗಿ ಕಾಯಬೇಕೆಂದೂ ಹೇಳಿದ್ದಳು. ನಾನೂ ಶಿಸ್ತಾಗಿ ಹೂಂ ಅಂದಿದ್ದೆ.
ಎಂಟು ಘಂಟೆಯಷ್ಟು ಪ್ರಯಾಣ ಮಾಡಿದೆ ಅಂತ ನೆನಪು. ಅಂತೂ ಬಳ್ಳಾರಿ ಬಂದೇಬಿಟ್ಟಿತು. ಕಂಡಕ್ಟರ್‌ಗೆ ಸತ್ಯನಾರಾಯಣ ಪೇಟೆಗೆ ಹೋಗಬೇಕಾದರೆ ಎಲ್ಲಿ ಇಳಿಯಬೇಕು ಅಂತ ಕೇಳಿದಾಗ, ಅವನಿಗೆ ಅದೇನು ಕೇಳಿಸಿತೋ, ಅದೇನು ಅರ್ಥೈಸಿಕೊಂಡನೋ ಗೊತ್ತಿಲ್ಲ ‘ಇದೇ ಸ್ಟಾಪ್’ ಅಂದ. ನಾನು ದಡಬಡಿಸಿ ಕೆಳಗಿಳಿದೆ. ಸುತ್ತ ಮುತ್ತ ಕಣ್ಣಾಡಿಸಿದರೆ ಗೆಳತಿ ಎಲ್ಲೂ ಕಾಣಲಿಲ್ಲ. ಸತ್ಯಾನಾರಾಯಣ ಪೇಟೆಯ ಮ್ಯಾಪ್ ಎಷ್ಟು ಅಚ್ಚೊತ್ತಿದಂತೆ ರಿಜಿಸ್ಟರ್ ಆಗಿತ್ತೆಂದರೆ – ಇಲ್ಲೇನು ನಿಂತು ಕಾಯುವುದು! ನಾನೇ ಮನೆ ಹುಡುಕಿ ಹೋದರಾಯಿತು ಅನ್ನುವ ತಲೆಹರಟೆ ಯೋಚನೆ ಬಂದಿತು. ಇನ್ನೇನು ತಡ! ಅಲ್ಲೇ ಇದ್ದ ಆಟೋದವನ ಹತ್ತಿರ ಸತ್ಯನಾರಾಯಣ ಪೇಟೆಗೆ ಹೋಗಬೇಕು ಅಂದಕೂಡಲೇ ರೆಡ್ ಕಾರ್ಪೆಟ್ ಹಾಸಿ ಬನ್ನಿ ಅಂದ. ಗೊತ್ತಿಲ್ಲದ ಊರಲ್ಲಿ ಅವ ಸುತ್ತಿಸಿದ, ಸುತ್ತಿಸಿದ, ಸುತ್ತಿಸಿದ … ಎಷ್ಟೆಲ್ಲ ಓಡಾಡಿದರೂ ಅವಳ ಮ್ಯಾಪಿನಲ್ಲಿದ್ದ ಯಾವ ಜಾಗವೂ ಸಿಗಲೇ ಇಲ್ಲ. ಆಗ ನನಗೆ ಗಾಭರಿ ಶುರುವಾಯ್ತು. ತಲೆಹರಟೆ ಮಾಡಿದೆ ಅನ್ನಿಸುತ್ತದೆ. ತೆಪ್ಪಗೆ ಕಾಯಬೇಕಿತ್ತು ಅಂತ ಹಳಹಳಿಸಿದೆ. ಯಾರನ್ನ ಕೇಳಿದರೂ ಅಡ್ರೆಸ್ ಸಿಗದೇ ಅಳು ಬರುವ ಹಾಗಾಗಿ ಹೋಯಿತು. ಕೊನೆಗೊಂದು ಸಲ ‘ಇದು ಲಾಸ್ಟ್ ಛಾನ್ಸ್, ಸಿಗದಿದ್ದರೆ ಬಸ್ ಸ್ಟ್ಯಾಂಡಿಗೆ ಹೋಗಿ ಕುಳಿತು ಬಿಡೋದು’ ಅಂತ ತೀರ್ಮಾನಿಸಿ ಯಾರನ್ನೋ ಕೇಳಿದಾಗ, ಅವಳು ಹೇಳಿದ್ದ ದೇವಸ್ಥಾನದ ಗುರುತು ಹೇಳಿ, ಅಂತೂ ಇದ್ದಕ್ಕಿದ್ದ ಹಾಗೆ ಪಜ಼ಲ್ ಸಾಲ್ವ್ ಆಗುವ ರೀತಿಯಲ್ಲಿ ಮುಂದಿನ ಮೂರು ನಿಮಿಷದಲ್ಲಿ ಅವಳ ಮನೆಯ ಮುಂದೆ ಇಳಿದೆ. ನನ್ನನ್ನು ಹುಡುಕಿ ಹೋದ ಗೆಳತಿಯ ಅಪ್ಪ ನಾನು ಸಿಗಲಿಲ್ಲ ಅಂತ ಹೇಳಿ ವಾಪಸ್ ಬಂದಿದ್ದರಿಂದ ಎಲ್ಲರೂ ಗಾಭರಿಯಲ್ಲಿ ತಲೆ ಮೇಲೆ ಕೈ ಹೊತ್ತು ಕೂತುಕೊಂಡಿದ್ದರು. ನಸುಗತ್ತಲಾಗುವಾಗ ನಾನು ಮನೆಯೆದುರು ಇಳಿದ ಕೂಡಲೇ ಎಲ್ಲರಿಗೂ ಖುಷಿಗಿಂತ ಹೆಚ್ಚು ಸಿಟ್ಟು ಬಂದು ಸಾಮೂಹಿಕ ಬಯ್ಗುಳ ಶುರು ಮಾಡಿದರು. ತಪ್ಪು ನನ್ನದಾಗಿದ್ದರಿಂದ ಬಾಯಿ ಮುಚ್ಚಿಕೊಂಡು ಉಗಿಸಿಕೊಂಡೆ. ಕೊನೆಗಂತೂ ಅವರ ಸಿಟ್ಟೆಲ್ಲ ಇಳಿದು ಸಂಭ್ರಮ ಶುರುವಾಯ್ತು! ಆ ನಂತರ ಶುರುವಾಯ್ತು ಮಾತು … ಮಾತು … ಮಾತು. ಮನೆಯ ಮುಂಬಾಗಿಲಿನಲ್ಲಿದ್ದ ಜಗುಲಿಯ ಮೇಲೆ ಕೂತು ಹರಟು, ಮನೆಯೊಳಗೆ ಹರಟು, ಹಿಂಬಾಗಿಲ ಹೊಸ್ತಿಲ ಮೇಲೆ ಕೂತು ಹರಟು …. ಬಾಯಿ ಒಡೆದುಹೋಗುವಷ್ಟು ಮಾತು. ರಾತ್ರಿಯೆಲ್ಲ ನಿದ್ದೆಯಲ್ಲಿ ಎದ್ದೆದ್ದು ಮಾತಾಡಿದೆವು. ಕೊನೆಗೊಮ್ಮೆ ನಿದ್ರೆ ಬಂದಾಗ ನಡುರಾತ್ರಿಯಾಗಿದ್ದಿರಬೇಕು …
ಮರುದಿನ ಬೆಳಿಗ್ಗೆ ಎದ್ದಾಗಲೇ ಸತ್ಯನಾರಾಯಣಪೇಟೆಯ ದಿವ್ಯ ದರ್ಶನವಾಗಿದ್ದು. ನಸುಕಿನಲ್ಲಿ ಮನೆಯ ಮುಂದೆ ಕಾಫಿ ಲೋಟ ಹಿಡಿದು ಕೂತೆವು. ಸಣ್ಣ ಸಣ್ಣ ಮನೆಗಳ ಸಾಲು ಸಾಲು. ರಸ್ತೆಯ ತುಂಬ ಕೆಂಪು ಸೀರೆಯುಟ್ಟ, ತಲೆ ಬೋಳಿಸಿದ, ಬಿರುಕು ಬಿಟ್ಟ ಪಾದಗಳ, ಚಪ್ಪಲಿಯಿಲ್ಲದ ವಿಧವೆಯರು, ಪಂಚೆಯುಟ್ಟು, ಜನಿವಾರ ತೊಟ್ಟ ಬೆತ್ತಲೆ ಎದೆಯ ಗಂಡಸರು, ಮನೆಯ ಮುಂದೆಲ್ಲ ಅಷ್ಟಷ್ಟಗಲದ ರಂಗೋಲಿ, ಸುಪ್ರಭಾತ … ಥೇಟ್ ಸಿನೆಮಾ ಸೆಟ್ಟಿಂಗಿನ ಹಾಗೆ ಅನ್ನಿಸಿಬಿಟ್ಟಿತು. ನಾನು ಬೆಳೆದ ಪರಿಸರದಲ್ಲಿ ವಿಧವೆಯರು ಈ ರೀತಿ ತಲೆ ಬೋಳಿಸಿಕೊಳ್ಳುವುದು, ಕೆಂಪು ಸೀರೆ ಉಡುವುದೆಲ್ಲ ಯಾವತ್ತೂ ಕಂಡವಳೇ ಅಲ್ಲ. ಗಂಡ ಸತ್ತರೂ ಕುಂಕುಮ ತೆಗೆಯುವವರು ಕೂಡಾ ಬೆರಳೆಣಿಕೆಯಷ್ಟು ಮಾತ್ರ. ಉಳಿದಂತೆ ಎಲ್ಲರೂ ಮೊದಲಿನಂತೆಯೇ ಇರುತ್ತಿದ್ದರು. ಈ ರೀತಿಯ ಆಚರಣೆಗಳನ್ನೆಲ್ಲ ಎಂದೂ ನೋಡದ ನಾನು ತಬ್ಬಿಬ್ಬಾಗಿದ್ದೆ. ಹಾದಿಯಲ್ಲಿ ಹೋಗುವವರೆಲ್ಲರೂ ಇವಳ ಮನೆಯ ಕಡೆ ನೋಡಿ ‘ಈಕಿ ಯಾರವಾ?’ ಅನ್ನುವುದೂ ಮತ್ತು ಇವಳು ಅಷ್ಟೇ ಶಿಸ್ತಾಗಿ ‘ಈಕಿ ನನ್ ಗೆಳತೀರಿ. ಬೆಂಗ್ಳೂರಿಂದ ಬಂದಾಳ … ನನ್ ಜೋಡಿ ಕಾಲೇಜ್ನಾಗೆ ಇದ್ಲು’ ಅಂತ ನನ್ನನ್ನು ಪರಿಚಯಿಸುವ ಕೆಲಸ ಶುರುವಾಯ್ತು. ಒಬ್ಬರಲ್ಲ, ಇಬ್ಬರಲ್ಲ, ಅಲ್ಲಿಂದ ಹಾದು ಹೋದ ಎಲ್ಲರಿಗೂ ನನ್ನ ಪರಿಚಯವಾಯ್ತು. ನಾನು ಅವರಿಗೆಲ್ಲ ರಿಸೆಪ್ಷನ್‌ನಲ್ಲಿ ನಿಂತಾಗ ಶೂನ್ಯ ನಗು ಬೀರುವವಳ ಹಾಗೆ ನಕ್ಕಿದ್ದಾಯ್ತು.
ಹಿಂದಿನ ಬಾಗಿಲಲ್ಲಿ ಕೂತು ಮತ್ತೊಂದು ಸಲ ಕಾಫಿ ಹೀರುವಷ್ಟರಲ್ಲಿ ಬಿಸಿಲೇರಿತು. ಬಳ್ಳಾರಿಯ ಬಿಸಿಲೆಂದ ಮೇಲೆ ಹೆಚ್ಚು ಹೇಳುವುದು ಬೇಕಿಲ್ಲ ಅಂದುಕೊಳುತ್ತೇನೆ. ಇಲ್ಲಿಗೆ ಬರುವ ಮುಂಚೆ ಎಲ್ಲೆಲ್ಲಿಗೋ ಹೋಗಬೇಕು ಅಂತ ಪ್ಲ್ಯಾನ್ ಹಾಕಿದ್ದೆವು. ಈ ಉರಿಬಿಸಿಲು ಕಂಡರೆ ಹೊಸಿಲು ಕೂಡಾ ದಾಟುವ ಮನಸ್ಸಾಗಲಿಲ್ಲ. ಹಿಂದಿನ ರಸ್ತೆಯ ಜನರಿಗೆ ನನ್ನ ಪರಿಚಯ ಮಾಡಿಸಿದಳು ಗೆಳತಿ. ಎಲ್ಲರನ್ನೂ ಕಂಡು ಹಲ್ಲು ಕಿರಿದಿದ್ದಾಯ್ತು. ಅಷ್ಟರಲ್ಲಿ ಬೆಳಗಿನ ಕೆಲಸಗಳು ಶುರುವಾದವು. ಟಾಯ್ಲೆಟ್ ಅನ್ನುವುದು ಮನೆಯಿಂದ ಒಂದಿಷ್ಟು ದೂರದಲ್ಲಿತ್ತು. ಅದರಲ್ಲಿ ನೀರು ಬರಲು ನಲ್ಲಿಯೇ ಇರಲಿಲ್ಲ. ತೊಟ್ಟಿಯಿಂದ ಚೊಂಬಿನಲ್ಲಿ ನೀರು ತೆಗೆದುಕೊಂಡು ಹೋಗಬೇಕಿತ್ತು. ಮಧುಗಿರಿಯಲ್ಲೂ ಅವೆಲ್ಲ ಇರದಿದ್ದರೂ ನಮ್ಮ ಟಾಯ್ಲೆಟ್ ನಮ್ಮ ಕಾಂಪೌಂಡಿನೊಳಕ್ಕೆ ಇದ್ದುದರಿಂದ ಸ್ವಲ್ಪವಾದರೂ ಪ್ರೈವೆಸಿ ಅನ್ನುವುದು ಇತ್ತು. ಇಲ್ಲಿ ಇಡೀ ಊರಿಗೆ ಕಾಣುವ ಹಾಗೆ ಚೊಂಬು ಹಿಡಿದು, ಹಿಡಿ ದೇಹ ಮಾಡಿಕೊಂಡು ಲಂಡನ್ನಿಗೆ ಹೋಗಿ ಬಂದಿದ್ದಾಯ್ತು. ಟಾಯ್ಲೆಟ್ಟಿಗೆ ತೆಗೆದುಕೊಂಡು ಹೋಗಿದ್ದ ಬಕೆಟ್ಟನ್ನೇ ತೊಟ್ಟಿಯಲ್ಲಿ ಮುಳುಗಿಸಿ ಕಾಲು ತೊಳೆದುಕೋ ಅಂದಾಗ ‘ಈ ಮಡಿ ಅನ್ನುವ ಕಾನ್ಸೆಪ್ಟಿಗೂ, cleanliness ಅನ್ನುವ ಕಾನ್ಸೆಪ್ಟಿಗೂ ಸಂಬಂಧವಿಲ್ಲವೇ?’ ಅಂತ ಮನಸ್ಸು ಕಸಿವಿಸಿಗೊಂಡಿತು.

ನನ್ನ ಬದುಕಿನಲ್ಲಿ ಸ್ನಾನ ಅನ್ನುವುದಕ್ಕೆ ನಾನು ಅಂಥ ಪ್ರಾಮುಖ್ಯತೆಯನ್ನೇ ಕೊಟ್ಟಿರಲಿಲ್ಲ. ನನ್ನ ತಾತ ಬದುಕಿರುವಾಗ ಸ್ನಾನಕ್ಕೆ ಮುಂಚೆ ಕಾಫಿಯೊಂದು ಸಿಗುತ್ತಿತ್ತು … ಅದನ್ನು ಬಿಟ್ಟು ಮತ್ತೇನೂ ತಿನ್ನುವುದು ನಿಷಿದ್ಧವಾಗಿತ್ತು. ಅಂಥ ಮನೆಯಲ್ಲಿ ಹುಟ್ಟಿದ ನಾನು ಬರಬರುತ್ತಾ ಹೇಗಾದೆನೆಂದರೆ ಸ್ನಾನಕ್ಕೂ, ತಿಂಡಿ-ಊಟ ತಿನ್ನುವುದಕ್ಕೂ ಯಾವುದೇ ಕನೆಕ್ಷನ್ ಇದೆ ಅನ್ನುವುದನ್ನೇ ಮರೆತೆ … ಅವತ್ತಿಗೂ, ಇವತ್ತಿಗೂ. ಅಮ್ಮ ಸ್ನಾನ ಮಾಡಿ ಊಟ ಮಾಡೇ ಅಂತ ಗದರುವಾಗಲೆಲ್ಲ ‘ಅಂತರಂಗ ಶುದ್ಧಿ – ಬಹಿರಂಗ ಶುದ್ಧಿ’ ಅಂತೇನೇನೋ ವಟಗುಟ್ಟಿ, ಅಮ್ಮನಿಗೆ ತಲೆ ಕೆಡಿಸಿ ಮಾಡಿಟ್ಟಿದ್ದನ್ನು ಕಬಳಿಸುತ್ತಿದ್ದೆ. ನಮ್ಮಮ್ಮ ಇಲ್ಲಿಗೆ ಹೊರಟಾಗಲೇ – ಅವರು ಮಾಧ್ವರು ಕಣೇ. ನೀನು ಸ್ನಾನವಿಲ್ಲದೇ ಗಬಡಾಸಿಯ ಹಾಗೆ ಸ್ನಾನವಿಲ್ಲದೇ ಊಟ-ತಿಂಡಿ ಮೇಯಬೇಡ. ಅವರಾಗೇ ಕೊಟ್ಟರೂ ಸ್ನಾನ ಮಾಡಿ ತಿನ್ನುತ್ತೀನಿ ಅನ್ನು ಅಂತ ತಲೆ ತಿಕ್ಕಿದ್ದಳು. ಅಷ್ಟೆಲ್ಲ ಹೇಳಿದ್ದರೂ ತಿಂಡಿಯ ತಟ್ಟೆ ಎದುರಾದಾಗ ಎಲ್ಲವನ್ನೂ ಮರೆತು ತಿಂಡಿ ಇಳಿಸಿದೆ. ಹೊಟ್ಟೆಗೆ ಬಿದ್ದ ಮೇಲೆ ಸ್ನಾನ ಮಾಡಿಯೇ ಬಿಡೋಣ ಅಂತ ತೀರ್ಮಾನಿಸಿದೆ. ನಮ್ಮ ಮನೆಯಲ್ಲಿರುವಾಗ ನನ್ನದು ದಿನಕ್ಕೊಂದು ಸ್ನಾನದ ಲೆಕ್ಕ. ರಾತ್ರಿ 12ರಿಂದ ಮರುದಿನ ರಾತ್ರಿ 11.59 ರವರೆಗೂ ಒಂದು ಸ್ನಾನದ ವ್ಯಾಲಿಡಿಟಿ! ಅಂಥ ನಾನು ಇಲ್ಲಿ ಬೆಳಿಗ್ಗೆಯೇ ಸ್ನಾನ ಮಾಡಿಬಿಡುವ ತೀರ್ಮಾನ ಕೈಗೊಂಡು ಬಚ್ಚಲು ಹೊಕ್ಕಾಗಲೇ ಆಘಾತವಾಗಿದ್ದು … ಅವಳನ್ನು ನೋಡುವ excitement ಗೋ ಏನೋ ಅರ್ಧ ತಿಂಗಳ ಮುಂಚೆ ‘ಹೊರಗಾಗಿದ್ದೆ’! ಮಿನಿ ಆಘಾತವಾಗಿ ಹೋಯಿತು ನನಗೆ. ಬೆಂಗಳೂರಿನಲ್ಲಿರುವಾಗ ಅವಳ ಮನೆಯಲ್ಲಿ ಹೊರಗಾದಾಗ ತಟ್ಟೆ-ಚೊಂಬು ಹಿಡಿಸಿ, ಚಾಪೆಯ ಮೇಲೆ ಮಲಗಿಸುವ ಕಥೆಯನ್ನು ನೋಡಿದ್ದ ನನಗೆ ಜೀವ ಬಾಯಿಗೆ ಬಂದುಬಿಟ್ಟಿತು. ನೆಲದ ಮೇಲೆ ಮಲಗಿದರೆ ಒಂದರೆಕ್ಷಣ ನಿದ್ದೆ ಬಾರದ ನಾನು ಇಲ್ಲಿ ಮೂರು ದಿನ ಏನು ಮಾಡಬೇಕು ಅಂತಲೇ ತೋಚಲಿಲ್ಲ.
ಸಪ್ಪೆ ಮುಖದಲ್ಲಿ ಹೊರಬಂದವಳು ಅವಳಿಗೆ ಗುಟ್ಟಾಗಿ ಹೇಳಿದೆ. ಅವಳು ಅವಳ ಅಮ್ಮನಿಗೆ ಗುಟ್ಟಾಗಿ ಹೇಳಿದಳು. ಅವರು ಮನೆಯವರಿಗೆಲ್ಲ ಗುಟ್ಟಾಗಿ ಹೇಳಿದರು. ಒಟ್ಟಿನಲ್ಲಿ ಹೇಳಿದ ಮೂರು ನಿಮಿಷಕ್ಕೆ ಅವಳ ತಮ್ಮ ಬಂದು ‘ಏನೇ ಈ ಸಲ ಬೇಗ ಮುಟ್ಟಾಗಿದೀಯಂತೆ’ ಅಂತ ಕೇಳಿದ! ನಾನು ಬಾಯಿ ಬಾಯಿ ಬಡಿದುಕೊಂಡುಬಿಟ್ಟೆ. ಅವರ ಮನೆಗಳಲ್ಲಿ ಇವೆಲ್ಲ ಸಾಮಾನ್ಯ ವಿಷಯ, ನಮ್ಮನೆಯಲ್ಲೋ ಅದು ಮಹಾ ಗುಟ್ಟಿನ ವಿಷಯ. ಬೆಂಗಳೂರಿನಲ್ಲಿರುವಾಗ ಎಷ್ಟೋ ಬಾರಿ ಅವಳು ಹೊರಗಾದಾಗಲೇ ನಾನು ಆಗಿರುತ್ತಿದ್ದೆ. ನಾನು ಅದನ್ನೆಲ್ಲ ಹೇಳದೇ ಮಾಮೂಲಿನಂತೆ ಸುಮ್ಮನಿರುತ್ತಿದ್ದೆನಲ್ಲ, ಹಾಗಾಗಿ ಅವಳಿಗೆ ಗೊತ್ತೇ ಆಗುತ್ತಿರಲಿಲ್ಲ. ಆ ಸಮಯದಲ್ಲಿ ಅವಳಿಗೆ ಸ್ನಾನ ಮಾಡುವ ಅವಕಾಶವಿರಲಿಲ್ಲ. ನಾನು – ಇಂಥ ಸಮಯದಲ್ಲಿ ಸ್ನಾನ ಇಲ್ಲದೇ ಹೇಗಿರ್ತೀಯ ಮಾರಾಯ್ತಿ. ಇದ್ಯಾವ ಸೀಮೆ ಮಡಿ? ಕ್ಲೀನಾಗಿ ಸ್ನಾನ ಮಾಡಿ ಶುಭ್ರವಾಗಿರಬಾರದಾ? ಅಂತ ಕೇಳಿದರೆ ‘ನೀನು ಸುಮ್ಮನಿರೇ. ಇದೆಲ್ಲ ನಮ್ಮ ಮನೆಯ ಪದ್ಧತಿ’ ಅಂತ ಬಾಯಿ ಮುಚ್ಚಿಸುತ್ತಿದ್ದಳು. ಕಾಲೇಜಿಗೆ ಹೋಗಲು ಹಾಕಬೇಕಾದ ಬಟ್ಟೆಯನ್ನು ಅವಳು ಮುಟ್ಟುವ ಹಾಗಿರಲಿಲ್ಲ. ಯಾರಾದರೂ ಒಬ್ಬರು ತೆಗೆದುಕೊಡಬೇಕಿತ್ತು. ಹಾಗಾಗಿ ಅವಳ ಮನೆಗೆ ಹೋದ ‘ಹೊರಗಾದ’ ನನಗೆ ಬಟ್ಟೆ ತೆಗೆದುಕೊಡು ಅನ್ನುತ್ತಿದ್ದಳು!! ನಾನು ಮಡಿ ಮಡಿಯಾಗಿ ತೆಗೆದುಕೊಟ್ಟದ್ದನ್ನು ಹಾಕಿ, ಕಾಲೇಜಿಗೆ ತಯಾರಾಗುತ್ತಿದ್ದಳು! ಅವಳು ಚಾಪೆಯ ಮೇಲೆ ಮಲಗಿದರೆ, ‘ಹೊರಗಾದ’ ನಾನು ಆರಾಮವಾಗಿ ಅವಳ ಮನೆಯ ದೀವಾನ್ ಮೇಲೆ ಮಡಿ ಮುತ್ತೈದೆಯ ಹಾಗೆ ಮಲಗಿರುತ್ತಿದ್ದೆ! ಮುಂದಿನ ತಿಂಗಳಲ್ಲಿ ಯಾವಾಗಲೋ ಡೇಟ್ ಲೆಕ್ಕ ಹಾಕುವಾಗ ನಾನು ಮರೆತು ‘ನಾವಿಬ್ಬರೂ ಹೋದ ತಿಂಗಳು ಒಟ್ಟಿಗೇ ಆಗಿದ್ವಲ್ಲೇ’ ಅಂದುಬಿಡುತ್ತಿದ್ದೆ!! ಅವಳು -ಥೂ ಹೇಳಬಾರದಾ ಮತ್ತೆ! ಇಡೀ ಮನೆಯಲ್ಲಿ ಎಲ್ಲ ಕಡೆ ಓಡಾಡಿದ್ಯಲ್ಲೇ, ಎಲ್ಲ ಮುಟ್ಟಿದ್ಯಲ್ಲೇ ಅಂತ ಉಗಿಯುತ್ತಿದ್ದಳು. ನಾನು – ನೀನು ಕೇಳಿದ್ದರೆ ಹೇಳುತ್ತಿದ್ದೆ. ನೀನು ಯಾಕೆ ಕೇಳಲಿಲ್ಲ ಅಂತ ನಗುತ್ತಿದ್ದೆ.
ಈಗ ಈ ಸುಡು ಸುಡು ಬಳ್ಳಾರಿಯಲ್ಲಿ ಅದಕ್ಕೆಲ್ಲ ಬೆಲೆ ತೆರಬೇಕಾದ ಸ್ಥಿತಿ ಬಂದಿತ್ತು!! ಅಯ್ಯಪ್ಪಾ, ನನ್ನಿಂದಾಗದು. ನಾನು ಇವತ್ತೇ ಬಸ್ ಹತ್ತಿ ಹೊರಡುತ್ತೇನೆ ಅಂತ ಪಟ್ಟು ಹಿಡಿದು ಕೂತು ಬಿಟ್ಟೆ. ಅವಳಿಗೆ ನನ್ನನ್ನು ಕಳಿಸಲು ಮನಸ್ಸಿಲ್ಲ. ಹೇಗೋ ಮಾಡಿ ಮೂರು ದಿನ ಮ್ಯಾನೇಜ್ ಮಾಡು, ಆಮೇಲೆ ಆರಾಮವಾಗಿರಬಹುದು ಅಂತ ಬೆನ್ನು ಬಿದ್ದಳು. ನಾನು ನಾಲ್ಕನೆಯ ದಿನ ಹೊರಡುವವಳೇ ಇದ್ದೆ. ಮತ್ತೇನು ಆರಾಮವಾಗಿರುವುದು, ಹೊರಟುಬಿಡುತ್ತೇನೆ ಅಂತ ಅಳುದನಿಯಲ್ಲಿ ಹೇಳಿದೆ. ಅವಳು ಸುಮ್ನಿರೇ, ನಾನೂ ನಿನ್ನ ಜೊತೆ ಕೂತುಕೊಳ್ತೀನಿ ಅಂತ ಸಮಾಧಾನಿಸಿದಳು. ಅವಳು ಕೂತುಕೊಳ್ಳುತ್ತಾಳೆ ಸರಿ, ಆದರೆ ನಾನು ಅಷ್ಟೆಲ್ಲ ಕಷ್ಟಪಟ್ಟು ಯಾಕೆ ಅಲ್ಲಿರಬೇಕು ಅನ್ನುವುದು ನನ್ನ ವಾದ. ಕೊನೆಗೂ ಬಿಡದೇ ನನ್ನನ್ನು ಒಪ್ಪಿಸಿ ಸ್ನಾನಕ್ಕೆ ಹೋದಾಗಲೇ ಕಥೆ ಸಿನಿಮೀಯವಾಗಿ ಮತ್ತೂ ಒಂದು ತಿರುವು ತೆಗೆದುಕೊಂಡಿತ್ತು! ಅವಳೂ ಲೆಕ್ಕಕ್ಕಿಂತ 15 ದಿನ ಮುಂಚಿತವಾಗಿ ಹೊರಗಾಗಿ ತಟ್ಟೆ-ಚೊಂಬಿನಲ್ಲಿ ಪಾರ್ಟ್‌ನರ್ ಆಗಿಹೋಗಿದ್ದಳು, ಅನಿರೀಕ್ಷಿತವಾಗಿ!! ಗೆಳತಿಯರಿಬ್ಬರೂ ಈಪಾಟಿ ಕ್ಲೋಸ್ ಅಂತ ಮನೆಯವರೆಲ್ಲ ರೇಗಿಸಿದರು.
ಆಮೇಲೆ ಚಾಪೆ ಆಗುವುದೇ ಇಲ್ಲ ಅಂದ ನನಗೆ, ಮೂಲೆಯಲ್ಲೊಂದು ಹಳೆಯ ಕಮಟು ಹಾಸಿಗೆ ಹಾಕಿ ವ್ಯವಸ್ಥೆ ಮಾಡಿದರು. ನಾನು ಇಡೀ ದೇಹ ಹಿಡಿಯಾಗಿಸಿಕೊಂಡು ಕೂತೆ. ಮೊದಲೇ ಬಳ್ಳಾರಿಯ ಬಿಸಿಲು, ಅದರ ಜೊತೆಗೆ ಈ ಕರ್ಮ, ಜೊತೆಗೆ ಸ್ನಾನ ಬೇರೆ ಮಾಡುವ ಹಾಗಿಲ್ಲ ಮೂರು ದಿನ. ತುಂಬ ಖುಷಿಯಲ್ಲಿ ಹೊರಟ ಪ್ರಯಾಣವೊಂದು disaster ಅನ್ನುವ ಸ್ಥಿತಿಗೆ ಬಂದು ತಲುಪಿತ್ತು! ನರಕ ಹಿಂಸೆಯಲ್ಲಿ ಮುಖ ಸಪ್ಪಗಾಗಿಸಿಕೊಂಡು ಹಿತ್ತಲಲ್ಲಿ ಕೂತಿದ್ದೆ. ಪಕ್ಕದಲ್ಲೆ ಅವಳು ಕೂಡಾ. ಪಕ್ಕದ ಮನೆಯ ಹೆಂಗಸು ಯಾರೋ ಹೊರಬಂದವರು ‘ಏನವಾ ಮುಟ್ಟೇನು?’ ಅಂತ ಊಟ ಆಯ್ತಾ ಅನ್ನುವ ರೀತಿಯಲ್ಲಿ ಕೇಳಿದಾಗ ನಾನು ಹೌಹಾರಿದೆ. ಅವಳು ಆರಾಮವಾಗಿ ಹೌದು ಅಂದಕೂಡಲೇ ಇನ್ನೊಂದು ಮನೆಯ ಹೆಂಗಸು ‘ಅಲ್ಲೇ ಮಾರಾಯ್ತಿ, ಹೋದ ಹುಣ್ಣಿವಿಗಲ್ಲೇನು ನೀನು ಮುಟ್ಟಾಗಿದ್ದು? ಇಷ್ಟ್ ಬ್ಯಾಗ ಮತ್ತೆ ಆಯ್ತೇನು?’ ಅಂದಳು. ನಾನು ಬಿಟ್ಟಬಾಯಿ ಬಿಟ್ಟುಕೊಂಡು ನೋಡುತ್ತಾ ಕೂತಿದ್ದೆ – ಹೋದ ತಿಂಗಳು ಯಾವಾಗ ಆಗಿದ್ದಳು ಅನ್ನುವ statistics ಎಲ್ಲ ಬೇರೇ ಇರುತ್ತಾ ಇವರ ಹತ್ತಿರ ಅಂತ!!! ಇವಳು ಅದೇನೂ ದೊಡ್ಡ ವಿಷಯವೇ ಅಲ್ಲ ಅನ್ನುವಂತೆ – ಹೂನ್ರೀ, ಈ ತಿಂಗ್ಳು ಮುಂಚೆ ಆಯ್ತ್ರಿ. ಈಕಿದೂ ಅಷ್ಟೇ’ ಅಂತ ಪೂರ್ತಿ ಡೀಟೇಲ್ಸ್ ಕೊಟ್ಟಳು. ನನಗೆ ಮೈಮೇಲೆಲ್ಲ ಜಿರಳೆ ಹರಿದಾಡಿದಂತೆ ಅಸಹ್ಯವಾಗಲು ಶುರುವಾಯ್ತು. ಈ ಸಂಭಾಷಣೆ ಮುಗಿಯಲಿ ತಂದೆ ಅಂತ ಬೇಡುತ್ತಾ ಕೂತಿದ್ದೆ. ಅಂತೂ ಕೊನೆಗೊಮ್ಮೆ ಮುಗಿಯಿತು ಅದು.
ನನ್ನ ಗೆಳತಿ ಮುಖ ಗಲಬರಿಸಿ, ಪ್ಯಾಕಿಂಗ್ ಬದಲಿಸಲು ಬಾತ್‌ರೂಮಿಗೆ ಹೋದಳು. ನಾನು ಅಲ್ಲೇ ಕೂತಿದ್ದೆ ದ್ರಾಬೆ ಮುಖದಲ್ಲಿ. ಅಷ್ಟರಲ್ಲಿ ಬಚ್ಚಲಿನಿಂದ ನೀರು ಹೊರಕ್ಕೆ ಹರಿಯುವ ಓಪನ್ ಪೈಪಿನಲ್ಲಿ ಕೆಂಪು ಮಿಶ್ರಿತ ನೀರು ಹೊರಬರಲು ಶುರುವಾಯ್ತು! ನಾನು ಅಸಹ್ಯದಿಂದ ಎದ್ದು ನಿಂತೆ .. ನನ್ನ ಮೈಮೇಲೇ ಹಾರಿಬಿಡುತ್ತದೇನೋ ಅನ್ನುವ ಹಾಗೆ. ಅಂದರೆ …. ಅಂದರೆ ನಾನು ಒಳಗೆ ಹೋಗಿ ಬಾಗಿಲು ಹಾಕಿಕೊಂಡಾಗಲೂ …. ಹೀಗೆಯೇ …. ಅಯ್ಯೋ ! ಅಬ್ಬಬ್ಬಾ… ಅಂಥ ಸ್ಥಿತಿ ನನ್ನ ಶತ್ರುವಿಗೂ ಬೇಡ! ಅಸಹ್ಯದಿಂದ ಆ ಕೆಲಸ ಮುಗಿಸಿ ಈಚೆ ಬರುವಾಗ ಮನಸ್ಸು ತುಂಬ ಕೆಸರು ಕೆಸರು. ಅವಳ ಅಮ್ಮ ಮೇಲಿಂದ ಥ್ರೋ ಬಾಲ್ ಥರ ಹಾಕಿದ ದೋಸೆಯನ್ನು ತಿಂದು ಮೂಲೆ ಸೇರಿದೆವು.
ಆಗ ನವರಾತ್ರಿ ಸಮಯ. ಮಧ್ಯಾಹ್ನ ಕಳೆಯುವಷ್ಟರಲ್ಲಿ ಅಕ್ಕ-ಪಕ್ಕದ ಮನೆಯವರು ಅದೇನೇನೋ ಶಾಸ್ತ್ರಕ್ಕೆ ಬಂದು – ಹೋಗಲು ಶುರು ಮಾಡಿದರು. ಬಂದವರೆಲ್ಲ ನಮ್ಮನ್ನು ಕಂಡು, ಮತ್ತೆ ಅದೇ ಪ್ರಶ್ನೆ ಕೇಳುವುದು ಮತ್ತು ಇವಳು ದೊಡ್ಡ ಗಂಟಲಿನಲ್ಲಿ ಅದರ ವಿವರಣೆ ಕೊಡುವುದು ಇದೇ ಕೆಲಸವಾಯಿತು. ‘ಅಮ್ಮಾ, ನನ್ನಿಂದಾಗಲ್ಲ ಕಣೇ, ಮನೆ ಬಿಟ್ಟು ಎಲ್ಲದರೂ ಹೋಗೋಣ ಬಾ’ ಅಂತ ವರಾತ ಹಚ್ಚಿದೆ. ಅವಳು ನನ್ನ ಕಾಟ ತಾಳಲಾರದೆ ಒಪ್ಪಿದಳು. ಮರುದಿನದಿಂದ ಮಧ್ಯಾಹ್ನದ ಬಳ್ಳಾರಿಯ ಸುಡುಬಿಸಿಲಿನಲ್ಲಿ ನಮ್ಮಿಬ್ಬರ ವಾಕಿಂಗ್ ಶುರುವಾಯಿತು! ದಾರಿಯುದ್ದಕ್ಕೂ ಪರಿಚಿತರು ಸಿಗುತ್ತಲೇ ಇರುತ್ತಿದ್ದರಾ? ಇವಳನ್ನು ಕೇಳುತ್ತಿದ್ದರು ಯಾಕೆ ಆ ಅವೇಳೆಯಲ್ಲಿ ಬೀದಿ ತಿರುಗುತ್ತಿದ್ದೀರಿ ಎಂದು. ಸರಿ, ಇವಳು ಬೀದಿಯಲ್ಲಿ ನಿಂತು ಗಟ್ಟಿ ದನಿಯಲ್ಲಿ ‘ಈಕಿ ನನ್ನ ಗೆಳತಿ ಕಾಕಿ / ಮೌಸಿ ..ಬೆಂಗ್ಳೂರಿಂದ ಬಂದಾಳ. ಮುಟ್ಟಾಗಿಬಿಟ್ಳು, ……’ ಮನೆಯಲ್ಲಿ ಮೂಲೆಯಲ್ಲಿ ಕೂತಿದ್ದರೆ, ಇದನ್ನೆಲ್ಲ ನಾಲ್ಕು ಗೋಡೆಯ ಮಧ್ಯೆ ಮಾತಾಡಿರುತ್ತಿದ್ದರು. ನಾನು ಅದೆಲ್ಲ ಅಸಹ್ಯ ಅಂತ ಬೀದಿಗೆ ಬೀಳೋಣ ಅಂದಿದ್ದಕ್ಕೆ, ಈ ಕಥೆ ಬೀದಿಯಲ್ಲಿ ಡಿಸ್ಕಸ್ ಮಾಡುವ ಲೆವೆಲ್ಲಿಗೆ ಬಂದು ನಿಂತಿತ್ತು! ಇನ್ನು ಕೆಲವರು ಗೊತ್ತಿರುವವರು ಸಿಕ್ಕವರು ‘ಈಕೀನೇ ಏನು ಬ್ಯಾಗ ಮುಟ್ಟಾದಾಕಿ?’ ಅಂತ ದೊಡ್ಡ ಗಂಟಲಿನಲ್ಲಿ ವಿಚಾರಿಸುತ್ತ ನಿಂತು ಬಿಡುತ್ತಿದ್ದರು … ಉಫ್!! ಸತ್ಯಕ್ಕೂ ಹೇಳುತ್ತೇನೆ, ಈ ಬ್ರಾಹ್ಮಣತ್ವ-ಮಡಿ-ಮೈಲಿಗೆ ಎಲ್ಲ ಜಿಗುಪ್ಸೆ ತರಿಸಲು ಶುರು ಮಾಡಿತ್ತು. ದೇಹದಲ್ಲಿ ಆಗುವ ಸಾಧಾರಣ ಬದಲಾವಣೆಯೊಂದಕ್ಕೆ ಇಷ್ಟೆಲ್ಲ ಹಾರಾಟ! ನನ್ನ ಎರಡೂ ಅಜ್ಜಿಯ ಮನೆಯಲ್ಲೂ ಈ ‘ಕೂಡಿಸುವ’ ಹಾರಾಟ ಕಾಣದ ನಾನು, ಇಲ್ಲಿ ಅದನ್ನು ಇಂದಿರಾಗಾಂಧಿ ನಮ್ಮ ದೇಶದ ಪ್ರಧಾನಿ ಅನ್ನುವಂಥ ಎಲ್ಲರಿಗೂ ತಿಳಿದಿರುವ ವಿಷಯದಂತೆ ಮಾತಾಡುತ್ತಿದ್ದುದು ನನ್ನ ಕಲ್ಪನೆಗೂ ಮೀರಿದ್ದಾಗಿತ್ತು.
ಬೆಂಗಳೂರಿನಲ್ಲಿ ಅವಳ ಮನೆಯ ಎಲ್ಲ ವಸ್ತುವನ್ನೂ ಮುಟ್ಟಿ ಮೈಲಿಗೆ ಮಾಡಿದ್ದಕ್ಕೆ ವಿಧಿ ಸೇಡು ತೀರಿಸಿಕೊಳ್ಳುತ್ತಿದೆಯೇನೋ ಅನ್ನಿಸಿ ಬಿಟ್ಟಿತು ನನಗಂತೂ ! ಅಂತೂ ಇಂತೂ ಮೂರು ದಿನದ ಮುಟ್ಟಿನ ಪ್ರಹಸನ ಮುಗಿಸಿ, ನಾಲ್ಕನೇ ದಿನ ನೀರು ಹಾಕಿಸಿಕೊಂಡು ಒಳಬರುವವರೆಗಿನ ಕಥೆಯಂತೂ ಕರ್ಮಕಾಂಡ! ಆ ಮೂರು ದಿನದಲ್ಲಿ ಮಡಿ ಮೈಲಿಗೆಯ ಗಂಧ ಗಾಳಿಯಿಲ್ಲದ ನಾನು, ಎಪರು ತೆಪರಾಗಿ ಕರ್ಟನ್ ಸರಿಸಿ ಬಿಡುತ್ತಿದ್ದೆ, ಬಿದ್ದಿದ್ದ ಬಟ್ಟೆ ಮಡಚಿ ಎತ್ತಿಟ್ಟುಬಿಡುತ್ತಿದ್ದೆ, ಮತ್ತೇನೋ ಮುಟ್ಟಿಬಿಡುತ್ತಿದ್ದೆ. ಪಾಪ ನನ್ನ ಗೆಳತಿ ತಲೆ ಚೆಚ್ಚಿಕೊಂಡು ಮೆಲ್ಲ ದನಿಯಲ್ಲಿ ಗದರಿ, ನನ್ನ ಪಾಪಗಳನ್ನೆಲ್ಲ ಅವಳ ಅಮ್ಮನಿಗೆ ಗೊತ್ತಾಗದ ಹಾಗೆ ಗೋರಿಯಲ್ಲಿ ಹೂತಿಡುತ್ತಿದ್ದಳು! ಮೇಲಿಂದ ಬಟ್ಟೆಗೆಲ್ಲ ಹಾರುವಂತೆ ಸುರಿಯುತ್ತಿದ್ದ ಅನ್ನ, ಸಾರನ್ನು ಕ್ಯಾಚ್ ಹಿಡಿಯುವಾಗಂತೂ ಅಳುವೇ ಬಂದುಬಿಡುತ್ತಿತ್ತು. ಇದೇ ಕೊನೆ, ಇನ್ನೆಂದಾದರೂ ಈ ರೀತಿ ಆದರೆ ಅಲ್ಲಿ ಒಂದೇ ಒಂದು ಕ್ಷಣವೂ ಇರುವುದಿಲ್ಲ ಅಂತ ಶಪಥ ತೊಟ್ಟೆ. ಬೆವರಿನ ನಾತ ಹೊಡೆಯುತ್ತಿದ್ದ ಮೈಗೆ ಬಿಸಿ ನೀರು ಸುರಿದಾಗ ಪುನರ್ಜನ್ಮ ಎತ್ತಿ ಬಂದಂತ ಸಂಭ್ರಮ ನನಗೆ. ಬಂಧನ ಕಳಚಿ ಹಕ್ಕಿಯಂತೆ ನನ್ನೂರಿಗೆ ಹೊರಡುತ್ತೇನೆ ಅಂತ ಘೋಷಿಸಿದೆ. ಇನ್ನೊಂದೇ ಒಂದು ದಿನ ಇರು, ಬಂದಾಗಿನಿಂದ ಮುಟ್ಟಿನ ಕಥೆಯೇ ಆಯ್ತು ಅಂತ ಅವಳು ಶುರು ಮಾಡಿದಾಗ, ಅವಳ ಬಾಯಿ ಮುಚ್ಚಿಸಿ ಹೊರಡಲೇ ಬೇಕು ಅಂತ ನಿರ್ಧಾರದ ದನಿಯಲ್ಲಿ ಹೇಳಿದೆ. ಬೆಂಗಳೂರಿಂದ ಬಂದು ಬಳ್ಳಾರಿಯಲ್ಲಿ ಮುಟ್ಟಾಗಿ, ಇಡೀ ಸತ್ಯನಾರಾಯಣ ಪೇಟೆಯಲ್ಲೇ ವರ್ಲ್ಡ್ ಫ಼ೇಮಸ್ ಆಗಿದ್ದ ನನ್ನನ್ನು ಹಲವು ಬಿರುಕು ಪಾದದ, ಕೆಂಪು ಸೀರೆಯ ಅಜ್ಜಿಯರು ನಗುತ್ತಾ ಬೀಳ್ಕೊಟ್ಟರು. ಈ ಬ್ರಾಹ್ಮಣರ ಕೇರಿಯಲ್ಲಿ ಇಷ್ಟೊಂದು ಕಠೋರ ಬದುಕು ಹೇಗೆ ಬದುಕುತ್ತೀರಿ ಅಂತ ನಾಲಿಗೆ ತುದಿಗೆ ಬಂದ ಮಾತನ್ನು ಒಳಗೆ ತಳ್ಳಿ , ಸುಮ್ಮನೇ ಕೈ ಬೀಸಿದೆ ….
ಸತ್ಯನಾರಾಯಣ ಪೇಟೆಯನ್ನು ಹಿಂದಕ್ಕೆ ದೂಡಿ, ಆಟೋ ಮುಂದಕ್ಕೆ ಸಾಗಿತು … ಸಣ್ಣಗೆ ಗಾಳಿ ಬೀಸಲು ಶುರುವಾಯ್ತು …

‍ಲೇಖಕರು G

15 October, 2014

21 Comments

  1. Pururava K V

    ಒಂದು ಮುಟ್ಟಿನ ಕಥೆ. ಇದನ್ನು ನೀವು ಹಾಸ್ಯ ಮಿಶ್ರಿತ ಧಾಟಿಯಲ್ಲಿ ಬರೆದಿದ್ದರೂ ಕೂಡ ಮುಟ್ಟಿನ ಬಗ್ಗೆ ಗಂಡು ಹೆಣ್ಣೆಂಬ ಭೇದವಿಲ್ಲದೆ ಎಲ್ಲರೂ ವೈಜ್ಞಾನಿಕ ಅರಿವನ್ನು ಬೆಳೆಸಿಕೊಳ್ಳಬೇಕಾಗಿರುವ ಅವಶ್ಯಕತೆಯನ್ನೂ ಸೂಚ್ಯವಾಗಿ ತಿಳಿಸಿದ್ದಿರಿ.

    • girijashastry

      being an outsider u hv observed very intensely. Untouchability is practiced in every Barahmin’s house for each n everything. Now those days hv gone. Its still prevail in country side.

  2. Vinod Kumar VK

    ಇದೇ ಬ್ರಾಹ್ಮಣರ ಮಡಿವಂತಿಕೆ..!!!!.. ಬಳ್ಳಾರಿಯ ಸತ್ಯನಾರಾಯಣ ಪೇಟೆಯ ಬಗ್ಗೆ ವಿವರಣೆಗಳು ರವಿಬೆಳಗೆರೆ ಯವರು ತುಂಬಾ ಕಡೆ ಉಲ್ಲೇಖಿಸಿದ್ದಾರೆ.. ಆದರೆ ಒಂದು ಮಟ್ಟನ್ನು ಈ ಲೆವೆಲ್ಲಿಗೆ ಮಾತಾನಾಡಿಕೊಳ್ಳುವುದು ಆಶ್ಚರ್ಯವೇ ಸರಿ.. ಮಡಿವಂತಿಕೆಯೆ ಹೆಸರಿನಲ್ಲಿ ಅಸಮಾನತೆಯನ್ನು ಪ್ರಾಕ್ಟೀಸು ಮಾಡೋ ವಿಧಾನ ಇದು… ಒಂಥರಾ ನನಗೇ ಅಸಹ್ಯ ಆಗೋಯ್ತು ಅವರ ಮನೆ ಜನರ ಮೇಲೆ.. ಈಗಾಲದರೂ ಬದಲಾವಣೆ ಆಗಿದೆಯೋ?.. ಇಲ್ಲಾ ಇನ್ನೂ ಮಡಿವಂತರಾಗೇ ಇದ್ದಾರೋ.. ದೇವರೇ ಬಲ್ಲ.. ಗುಟ್ಟು ಗುಟ್ಟಾಗಿ ಮಾತನಾಡಿಕೊಳ್ಳೋ ವಿಚಾರವನ್ನು ತುಂಬಾ ಸರಳವಾಗಿ ಸುಂದರವಾಗಿ ಬರೆದಿದ್ದೀರಿ ಅಕ್ಕಾ..

  3. Nagesha M N

    ಬಹಳ ಉತ್ತಮವಾದ ಬರಹ …ಈ ಪಿಡುಗು ಹಲವು ಸಂಪ್ರದಾಯಸ್ಥ ಕುಟುಂಬಗಳಲ್ಲಿ ಕಾಣಬಹುದು. ನಾಗರೀಕತೆ ಮುಂದುವರದಂತೆ ಕಂಡರೂ ಈ ಆಚರಣೆಗಳು ಇನ್ನು ಉಳಿದಿರುವುದು ವಿಪರ್ಯಾಸ !!!

  4. ಅಪರ್ಣ ರಾವ್

    ಭಾರತಿ.. ಅಳಲೋ ನಗಲೋ? ಅರ್ಥ ಆಗ್ತಿಲ್ಲ.. ಆದ್ರೆ ಎರಡು ಒಟ್ಟಿಗೆ ಅನ್ನಿಸಿದ್ದು ನಿಜ.. 🙂 ಮತ್ತೆ ನಿನ್ನ ಶೈಲಿಯ ಬರಹ ಚೆನ್ನಾಗಿದೆ.

  5. Girija

    Loved it !!

  6. ಅಮರದೀಪ್ ಪಿ. ಎಸ್

    ಒಬ್ಬೊಬ್ಬರ ಕಟ್ಟುಪಾಡು ಮತ್ತೊಬ್ಬರ ಕುತ್ತಿಗೆಗೆ ಬರುವಷ್ಟಿರುತ್ತವೆ….ಮಡಿ ಬ್ರಾಂಬ್ರ ಎದುರಿಗೆ ಹಾದು ಹೋದರೆ “ಅನಿಷ್ಠ”, “ಮುಂಡೇದೆ” ತರಹದ ಬೈಗಳನ್ನು ಅರಗಿಸಿಕೊಂಡು ನಾವು ಅವ್ರ ಮನೆ ಮುಂದೆ ಗೋಲಿ ಆಡುತ್ತಿದ್ದೆವು. ದುರಂತ ಅಂದ್ರೆ ಆ ವಠಾರದಲ್ಲಿದ್ದ ಏಕಮಾತ್ರ ಶೌಚಾಲಯದ ಕೊಳಚೆ ಹರಿದ ನೀರಲ್ಲೇ ಅವರ ಮನೆಯ ಹುಡುಗನೊಬ್ಬ ಕೈ ಹಾಕಿ ಗೋಲಿ ಆರಿಸಿ ಆಡಲು ಬರುತ್ತಿದ್ದ. ನಿಮ್ಮೊಬ್ಬರ ಈ ಬರಹದ ಉದಾಹರಣೆ ಸಾಕು. ಶಾಸ್ತ್ರಕ್ಕೂ ಬದನೆಕಾಯಿಗೂ ಇರೋ ವ್ಯತ್ಯಾಸ ತಿಳ್ಕೊಳ್ಳೋಕೆ.

  7. Roopa Srinivasan

    Idu indigoo namma atte maneyalli nadeyatte. Avrige bejaar maadodu beda antha virodhisilla. Hennige rest kodbeku antha shuruvaayitheno. Tumba naijavaagi barediddeeri

  8. VidyaShankar

    ಯಪ್ಪಾ! ಭಯಂಕರ!! ನಕ್ಕುನಕ್ಕು ಸುಸ್ತಾಯಿತು 😀

  9. VidyaShankar

    ಒಂದು ಮುಟ್ಟಿನ ಕತೆ 😛 ನಕ್ಕು ನಕ್ಕು ಸುಸ್ತಾಯಿತು… ನಾನೂ ಬಳ್ಳಾರಿ ಜಿಲ್ಲೆಯವನೇ ನಮ್ಮ ಊರಲ್ಲೂ ಸ್ವಲ್ಪ ಹಾಗೆನೇ…. ನಮ್ಮೂರಲ್ಲಿ ಬ್ರಾಹ್ಮಣರು ಕಮ್ಮಿ ಇದ್ದರೂ ನಮ್ಮೂರಿನ ಬ್ರಾಹ್ಮಣ ಹೆಣ್ಣುಗಳು ಬದುಕಿದರು (ಕೊಂಚ ಮಾತ್ರ)…. 😀

  10. Anil Talikoti

    ಮುಟ್ಟನ್ನು ಮೆಟ್ಟಿ ನಿಲ್ಲಲಾಗದೆ ಮೌನ ರೋಧ ಮಾಡಿಕೊಂಡ ಮನ ನೋಯುವ ನಿಮ್ಮ ಕಥೆ ಮನ ಮಿಡಿಯುವಂತಿದೆ.
    ~ಅನಿಲ

  11. ashok shettar

    “ಮುಟ್ಟಾದ ಹೊಲೆಯೊಳಗೆ ಹುಟ್ಟಿಹುದು ಜಗವೆಲ್ಲ
    ಮುಟ್ಟಬೇಡೆ೦ದು ತೊಲಗುವಾ ಹಾರುವನು
    ಹುಟ್ಟಿದನು ಎಲ್ಲಿ ಸರ್ವಜ್ಞ”
    ಎಂಬ ಸರ್ವಜ್ಞನ ವಚನ ನೆನಪಾಯ್ತು..

  12. bharathi b v

    Ellarigoo thanks … 😀

  13. Swarna

    ಬಳ್ಳಾರಿಯ ಸತ್ಯನಾರಾಯಣ ಪೇಟೆ…. ಅದೆಷ್ಟು ಜನರ ಅದೆಷ್ಟು ನೆನಪುಗಳು.
    ಎಸ್. ಏನ್ . ಪೇಟೆ ಇವತ್ತೂ ಹಾಗೇ ಇದೆ
    ಮೂರುದಿನ ಸ್ನಾನ ಇಲ್ಲದೆ ಹೇಗಿರೋದು ಅಂತ ನಾನೂ ಕೆಲವರನ್ನ ಕೆಳಿದ್ದೆ.
    ಚೆನ್ನಾಗಿದೆ

  14. beeresh r surya

    Bharathiyvare,nimma pajeethi kandu ayyo annisithu, nimma anubhavannu heege dhyryavaagi bareddiri.vygnanikavagillada madi
    yarige upayoga heli?

  15. Sandhya, Secunderabad

    Bellary’yallantoo ee dinakkoo ee tarahada aacharange ide. Aadre alpa swalpa badalaavanegalondige – separate bathroom iddare, snana maadabahudu! But I doubt in SN Pet…

  16. Rekha

    Hi Bharathi, I felt happy and meanwhile i felt bad also.. Even i have faced same thing in my friend’s place. While reading I laughed a lot thanks 🙂

  17. bharathi b v

    Thanks all 🙂

  18. ಸುಘೋಷ್ ಎಸ್ ನಿಗಳೆ

    ಆಫೀಸಿನಲ್ಲಿ ನಾನು ಒಬ್ಬನೇ ಜೋರಾಗಿ ನಗುತ್ತಿದ್ದುದನ್ನು ನೋಡಿ, ಅಕ್ಕಪಕ್ಕದವರು ಕುತೂಹಲದಿಂದ ನನ್ನೆಡೆಗೆ ನೋಡತೊಡಗಿದರು. ಅವರಿಗೂ ಲಿಂಕ್ ಕಳಿಸಿದೆ. ಎಲ್ಲರೂ ಸೇರಿ ಹ್ಹೆ..ಹ್ಹೆ…ಹ್ಹೆ…ಹ್ಹೋ…ಹ್ಹೋ..ಹ್ಹೋ…

  19. ಅಜೀಜುರ್ ರಹಮಾನ್

    ನಿಮ್ಮ ನೈಜ ಕಥೆ ಕೇಳಿ ನನಗೆ ನನ್ನ ಹಿಂದಿನ ಕಛೇರಿಯ ಒಂದು ಪ್ರಸಂಗ ಜ್ಞಾಪಕಕ್ಕೆ ಬಂತು. ಸಾಕಷ್ಟು ಬ್ರಾಹ್ಮಣರಿದ್ದ ಕಛೇರಿಯಲ್ಲಿ ಗಂಡಸರು ಹೆಂಗಸು ಸಹೋದ್ಯೋಗಿಗಳಿಗೆ ಸರಾಗವಾಗಿ ಹೇಳುತ್ತಿದ್ದ ಮಾತು “ರೀ ಈವತ್ತು ನಮ್ಮವರು ಹೊರಗಾಗಿದ್ದಾರೇ, ಅದಕ್ಕೇ ಇವತ್ತೆಲ್ಲಾ ನಂದೆ ಅಡಿಗೆ ಡ್ಯೂಟಿ”. ಇದನ್ನು ಕೇಳಿ ಮುಜುಗರ ಆಗ್ತಿದ್ದಿದ್ದು ನಮಗೆ ಅವರಿಗಲ್ಲಾ…

  20. mamtha n suvarna

    ಹಾಸ್ಯ ಮಿಶ್ರಿತ ನೈಜ ಘಟನೆ.ಬರವಣಿಗೆ ಶೈಲಿ ನಿಜಕ್ಕೂ ಅಧ್ಭುತ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading