ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೊಳುವಾರು ಬರೆದ ಬಿಳಿಮಲೆ ಆತ್ಮೀಯ ಕಥನ – ಭಾಗ ೩

(ಇಲ್ಲಿಯವರೆಗೆ)

ಶರಣೆನೆ ಮರಣವಿಲ್ಲ

ತನಗೆ ತಾನೇ ಸಮಾಧಾನ ಮಾಡಿಕೊಳ್ಳಲು ಕೆಲವು ಸಂಗತಿಗಳನ್ನು ಸಂಶೋಧನೆ ಮಾಡಿದ. ತನಗೆ ಅನ್ನ ನೀರು ಕೊಡುತ್ತಿರುವ ದೆಹಲಿಯ ಐದು ಜನರಲ್ಲಿ ಮೂವರು ಮಧುಮೇಹಿಗಳಾಗಿರುವುದರಿಂತ ಉತ್ತೇಜಿತನಾದ. ಹೋಟೆಲುಗಳಲ್ಲಿ ಚಹ ಕುಡಿಯುವಾಗ, ಊಟ ಮಾಡುವಾಗ ನಾಲ್ಕೂ ದಿಕ್ಕು ಕಿವಿಯಾಗತೊಡಗಿದ. ಸಕ್ಕರೆ ರಹಿತ ಚಹ ಬೇಡುವವರನ್ನು ಹತ್ತಿರದ ಬಂಧುಗಳಂತೆ ಆತ್ಮೀಯವಾಗಿ ದಿಟ್ಟಿಸತೊಡಗಿದ.ಐಸ್ ಕ್ರೀಮ್ ಪಾರ್ಲರ್‌ಗಳು ಸಾವಿನಂಗಡಿಗಳಂತೆ ಕಾಣಲಾರಂಭಿಸಿದವು. ಇವನಂಥವರಿಗಾಗಿಯೇ ಸುಗರ್‌ಲೆಸ್ ಸಿಹಿತಿನಿಸು ಮಾರುವ ಅಂಗಡಿಗಳಿದ್ದವು. ಡಯಾಬೆಟಿಕ್ ರೋಗಿಗಳಿಗಾಗಿಯೇ ಆಹಾರ ತಯಾರಿಸುವ ಅಂತರಾಷ್ಟ್ರೀಯ ಕಾರ್ಖಾನೆಗಳೂ ಇದ್ದವು. ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ, ನ್ಯೂಯೋರ್ಕ ವಿಶ್ವವಿದ್ಯಾಲಯ, ಟೆಕ್ಸಾಸ್ ವಿಶ್ವವಿದ್ಯಾಲಯ(ಆಸ್ಟಿನ್) ಮತ್ತು ಹವಾಯಿ ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಉಪನ್ಯಾಸಕ್ಕಾಗಿ ಹೋಗಬೇಕಾದ ಸಂದರ್ಭಗಳಲ್ಲಿ ತಾನೊಬ್ಬ ಮಧುಮೇಹಿ ಎಂಬುದನ್ನು ವಿಮಾನದ ಪರಿಚಾರಿಕೆಗೆ ಮೊದಲೇ ತಿಳಿಸಿಕಡಿಮೆ ಕೊಬ್ಬಿನ, ಸಕ್ಕರೆ ರಹಿತ ಊಟವನ್ನು ಪಡೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡ.

ಇನ್ಸುಲಿನ್ ಸಹವಾಸ ಸುಲಭವಲ್ಲ.

ಸಿಡಿಲು ಹೊಡೆಯುತ್ತಿರುವಾಗ ಕೊಡೆ ಹಿಡಿದುಕೊಂಡು ನೂಲ ಮೇಲೆ ನಡೆದಂತೆ ಅದು.

ದೇಹದಲ್ಲಿನ ಸಕ್ಕರೆಯ ಅಂಶವನ್ನು ಪರಿಗಣಿಸಿಕೊಂಡು ಎಷ್ಟು ಬೇಕೋ ಅಷ್ಟು ಇನ್ಸುಲಿನ್ ತೆಗೆದುಕೊಳ್ಳಬೇಕು.

ಸ್ವಲ್ಪ ಜಾಸ್ತಿ ಆದರೆ ಸಕ್ಕರೆಯ ಪ್ರಮಾಣ ಕಡಿಮೆ ಆಗಿ,ತಲೆತಿರುಗಿಬೀಳಬಹುದು.

ಹಾಗಾದಾಗ ದೇಹದಲ್ಲಿರುವ ರಕ್ತ ಕಣಗಳು ಗಮನಾರ್ಹವಾಗಿ ಕಡಿಮೆಯಾಗಿಬಿಡಬಹುದು.

ಅಗ ಹಿಮೋಗ್ಲೋಬಿನ್ ಮಟ್ಟವೂ ಕಡಿಮೆಯಾಗುತ್ತದೆ.

ಹಾಗಂತ ಕಡಿಮೆ ಇನ್ಸುಲಿನ್ ತಗೊಂಡರೆ ಸಕ್ಕರೆಯ ಅಂಶ ಹೆಚ್ಚಾಗಬಹುದು.

ಆದ ಕಾರಣ ಅಳೆದು ಯೋಚಿಸಿ ಇನ್ಸುಲೆನ್ ತೆಗೆದುಕೊಳ್ಳಬೇಕು.

ಅದು ಅಲಗಿನಂತೆ ಹೋಗುತ್ತಲೂ ಕೊಯ್ಯುವುದು, ಬರುತ್ತಲೂ ಕೊಯ್ಯುವುದು

ಬಿಟ್ಟು ಬಿಡದ ಹುಟ್ಟು ಗುಣ:

ಹೀಗೇ ಸ್ವಲ್ಪ ತಡವಾಗಿಯಾದರೂ ಆರೋಗ್ಯದ ಬಗ್ಗೆ ಯೋಚಿಸತೊಡಗುವ ಸಂದರ್ಭದಲ್ಲಿಯೇ ದೆಹಲಿ ಕರ್ನಾಟಕ ಸಂಘದ ಚುನಾವಣೆ ಘೋಷಿತವಾಯಿತು.ಗೆಳೆಯರನೇಕರು ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸುವಂತೆ ಒತ್ತಾಯಿಸಿದರು. ಕನ್ನಡ ವಿಶ್ವವಿದ್ಯಾಲಯದ ಕೆಟ್ಟ ಅನುಭವದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಇಂಥ ಕಡೆ ಸಿಕ್ಕಿಕೊಳ್ಳಬೇಕೆಂಬ ಮನಸಿರಲಿಲ್ಲ. ಅದರೂ ಹುಟ್ಟು ಗುಣ ಕೈ ಕೊಟ್ಟಿತು.

ಗೆಳೆಯರ ಒತ್ತಾಯಕ್ಕೆ ಮಣಿದು, ರಾಜಧಾನಿಯಲ್ಲಿ ಕರ್ನಾಟಕದ ಧ್ವನಿಯನ್ನು ಗಟ್ಟಿಗೊಳಿಸಲು ಸಾಧ್ಯವಾದರೆ, ಕನ್ನಡದ ಋಣ ತೀರಿಸಲೊಂದು ಅವಕಾಶ ಅಂತ ಭಾವಿಸಿಕೊಂಡು ಚುನಾವಣಾ ಕಣಕ್ಕಿಳಿದ.ಗೆದ್ದ.ಆದರೆ ಈ ಜಯವು ಸಾಕಷ್ಟು ಸವಾಲುಗಳನ್ನು ಮುಂದೆ ತಂದಿರಿಸಿತ್ತು.ಚದುರಿ ಹೋಗಿದ್ದ ದೆಹಲಿ ಕನ್ನಡಿಗರನ್ನು ಒಂದೆಡೆಗೆ ತರಬೇಕಿತ್ತು, ಅಗಲೇ ಮೇಲೇಳುತ್ತಿದ್ದ ಹೊಸ ಕಟ್ಟಡದ ಕೆಲಸಗಳನ್ನು ಪೂರೈಸಲು ಹಣ ಸಂಗ್ರಹ ಆಗಬೇಕಿತ್ತು, ಮತ್ತು ರಾಜಧಾನಿಯಲ್ಲಿ ದುರ್ಬಲವಾಗಿರುವ ಕರ್ನಾಟಕದ ಧ್ವನಿಯನ್ನು ಕರ್ನಾಟಕ ಸಂಘದ ಮೂಲಕ ಬಲಗೊಳಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿತ್ತು.ಕಾರ್ಯಕಾರೀ ಸಮಿತಿಯ ಸೂಕ್ತ ಮಾರ್ಗದರ್ಶನದಲ್ಲಿ ಮೇಲಿನ ಯೋಜನೆಗಳನ್ನು ಕಾರ್ಯಗತಗೊಳಿಸಲು ಶಕ್ತಿಮೀರಿ ದುಡಿಯತೊಡಗಿದ.

ಬೆಳಿಗ್ಗೆ ೮ ಗಂಟೆಗೆ ಗುರ್ಗಾಂವ್ ನಲ್ಲಿರುವ ಕಛೇರಿಗೆ ಹೋಗುವವನುಸಂಜೆ ಆರು ಗಂಟೆಗೆ ಮೋತಿ ಭಾಗ್ ನಲ್ಲಿರುವ ದೆಹಲಿ ಕರ್ನಾಟಕ ಸಂಘಕ್ಕೆ ಧಾವಿಸುತ್ತಿದ್ದ.ರಾತ್ರಿ ೧೧ ಗಂಟೆ ವರೆಗೆ ಅಲ್ಲಿ ಕೆಲಸ ಮಾಡುವುದು ದಿನ ನಿತ್ಯದ ಕಾರ್ಯವಾಗಿತ್ತು.ಶನಿವಾರ-ಆದಿತ್ಯವಾರಗಳೆಲ್ಲ ಸಂಘದ ಕೆಲಸಗಳಿಗೆ, ಕನಾಟಕದಿಂದ ಆಗಮಿಸಿದ ಕನ್ನಡಿಗರಿಗೆ ಸಹಾಯ ಮಾಡುವ ಕೆಲಸಗಳಿಗೆ ಸೀಮಿತವಾಗಿತ್ತು. ಎರಡು ಅವಧಿಗೆ ಅಂದರೆ ಒಟ್ಟು ನಾಲ್ಕು ವರ್ಷಗಳ ಕಾಲ ನಿರಂತರ ಅಧ್ಯಕ್ಷನಾಗಿ ಕೆಲಸ ಮಾಡಿದ ಇವನುಬಿತ್ತಿದ ಬೀಜ ಫಲ ನೀಡಿತ್ತು. ದೆಹಲಿ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿ ಸಂಘದ ಕಡೆ ಬರತೊಡಗಿದ್ದರು. ಸಂಘವು ನಡೆಸುತ್ತಿದ್ದ ವಿಚಾರ ಸಂಕಿರಣ ಮತ್ತಿತರ ಕಾರ್ಯಕ್ರಮಗಳಿಂದ ಸಂಘಕ್ಕೆ ವಿಶ್ವವಿದ್ಯಾಲಯವೊಂದರ ಆಯಾಮ ಬರತೊಡಗಿತ್ತು. ಆದರೆ ಈ ಅವಧಿಯಲ್ಲಿ ಅವನ ಶೈಕ್ಷಣಿಕ ಕೆಲಸಗಳೆಲ್ಲ ಹಿಂದೆ ಸರಿದುಬಿಟ್ಟವು. ಕನ್ನಡಕ್ಕಾಗಿ ಕಟ್ಟಡವೊಂದನ್ನು ಕಟ್ಟುವುದು ಕೂಡಾ ಮುಖ್ಯ ಕೆಲಸ ಅಂದುಕೊಂಡು ಸಮಾಧಾನ ಪಟ್ಟುಕೊಂಡ.

ಇಂಥ ದಣಿವರಿಯದ ದುಡಿತದಿಂದ ಸಂಘದ ಸುಂದರ ಕಟ್ಟಡವು ಇವನ ಶುಗರ್ ಲೆವೆಲಿನಂತೆ ಮೇಲೆ ಮೇಲೆ ಏರತೊಡಗಿತು.

ಪರಿಣಾಮ ಹೊಸದಾಗಿ ಸೇರ್ಪಡೆಕೊಂಡ ಖಾಯಿಲೆ- ರಕ್ತದೊತ್ತಡ.

ಮಧುಮೇಹ ಮತ್ತು ರಕ್ತದೊತ್ತಡದ ಜಂಟೀ ಪರಿಣಾಮವೆಂದರೆ ಪಾರ್ಶ್ವವಾಯು ಮತ್ತು ಹೃದಯಾಘಾತ.

 

ಸತ್ಯದರ್ಶನ

ಇಂಥಹ ಜಾನ್‌ಲೇನಾ ಖಾಯಿಲೆಗಳು ಒಂದು ತರಹದ ಗುಪ್ತರೋಗದಂತೆ. ಅವುಗಳು ಮುನ್ಸೂಚನೆ ನೀಡಿ ಬರುವುದಿಲ್ಲ. ಸೂಚನೆ ಸಿಕ್ಕಾಗ ದೇಹದ ಸ್ಥಿತಿ ಸಿಕ್ಕುಸಿಕ್ಕಾಗಿರುತ್ತದೆ; ಅಪಾಯ ಸಂಭವಿಸಿ ಬಹು ಕಾಲ ಆಗಿರುತ್ತದೆ. ಅದಕ್ಕೆ ಇವನದ್ದೇ ಒಂದೆರಡು ಉದಾಹರಣೆಗಳುಂಟು.

೨೦೧೦ರ ಅಕ್ಟೋಬರದ ಒಂದು ದಿನ ಬೆಳಗ್ಗೆ ಎದ್ದು ಕನ್ನಡಿ ನೋಡಿದಾಗ ಎಡಗಣ್ಣಿನ ಒಳತಳದಲ್ಲಿ ರಕ್ತ ಸೋರಿ ಅರ್ಧ ಕಣ್ಣು ಕಾಣಿಸದಾಯಿತು. ಭಯದಿಂದ ತಕ್ಷಣ ಆಸ್ಪತ್ರೆಗೆ ಓಡಿದ.ಲೇಸರ್ ಕಿರಣಗಳನ್ನು ಉಪಯೋಗಿಸಿ, ಕಣ್ಣೊಳಗಿನ ರಕ್ತದ ಕಲೆಗಳನ್ನು ತೆಗೆದು ಹಾಕಲಾಯಿತು. ಹಾಗೆಯೇ ಕಣ್ಣೊಳಗೆ ಒಡೆದು ಹೋದ ನಾಳಗಳನ್ನು ಅಲ್ಲಿಯೇ ಬತ್ತಿಸಿ ಮತ್ತೆ ರಕ್ತ ಒಸರದಂತೆ ಮಾಡಲಾಯಿತು. ಸುಮಾರು ಮೂರು ತಿಂಗಳುಗಳ ಕಾಲ ನಡೆದ ಈ ಟ್ರೀಟ್‌ಮೆಂಟ್‌ನ ಆನಂತರ ಕಣ್ಣು ಮೊದಲಿನಂತಾಗದಿದ್ದರೂ ಓದಲು ಬರೆಯಲು ಅಡ್ಡಿಯಿಲ್ಲದಂತಾಯಿತು.

ಒಂದು ಅಮೇರಿಕಾ ಪ್ರವಾಸದಲ್ಲಿ ಇದ್ದಕ್ಕಿದ್ದಂತೆ ಆತನ ಎರಡೂ ಪಾದಗಳು ತೀಕ್ಷ್ಣವಾಗಿ ಊದಿಕೊಳ್ಳಲು ಆರಂಭವಾದುವು.ಸುದೀರ್ಘವಾದ ವಿಮಾನ ಪ್ರಯಾಣದಿಂದ ಹಾಗಾಗಿರಬೇಕು ಅಂದುಕೊಂಡಿದ್ದ. ಆದರೆ ನಾಲ್ಕಾರು ದಿನಗಳ ಆನಂತರವೂ ಊತ ಕಡಿಮೆಯಾಗಲಿಲ್ಲ. ಹೇಗೋ ಸುಧಾರಿಸಿಕೊಂಡು ಹಿಂದೂಸ್ತಾನಕ್ಕೆ ಮರಳಿದ. ೨೦೧೧ರ ಎಪ್ರಿಲ್ ತಿಂಗಳ ಕೊನೆಯಲ್ಲಿ, ಸಂಸ್ಥೆಯ ವೈದ್ಯರ ಸಲಹೆಯ ಮೇರೆಗೆ, ದೆಹಲಿಯ ಫೋರ್ಟಿಸ್ ಆಸ್ಪತ್ರೆಗೆ ಹೋಗಿ ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡಿಸಿಕೊಂಡ. ಫಲಿತಾಂಶ ಆಘಾತಕಾರಿಯಾಗಿತ್ತು.

ಯೂರಿನ್ ಕ್ರಿಯೇಟಿನೈನ್ (ಮೂತ್ರ ಉತ್ಪಾದೆನೆಯ ಮಟ್ಟ) ೨.೬ಕ್ಕೆ ಏರಿತ್ತು.

ಆರೋಗ್ಯವಂತರ ದೇಹದಲ್ಲಿ ಅದು ೦.೬ ರಿಂದ ೧.೦೦ ಇರಬೇಕು.

ಥೇಟ್‌ಸಂತನ ಹಾಗೆ ಕಾಣಿಸುತ್ತಿದ್ದ ಡಾ. ಸಂಜೀವ್ ಗುಲಾಟಿ ಹೇಳಿದ್ದರಂತೆ, ನಿಮ್ಮ ಕಿಡ್ನಿಯ ಶೇಕಡಾ ೬೦ ಭಾಗ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಇದು ಡಯಾಬೆಟಿಕ್‌ನ ಪರಿಣಾಮವಾದ್ದರಿಂದ ಇದರ ಅಧ:ಪತನವನ್ನು ಇನ್ನುತಡೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇದು ಏರುತ್ತಾ ಹೋಗಲಿದೆ. ಕಾಲಿನ ನೀರು ದೇಹದಾದ್ಯಂತ ವ್ಯಾಪಿಸಲಿದೆ. ಹೆಚ್ಚೆಂದರೆ ಆರು ತಿಂಗಳುಗಳೊಳಗೆ ನಿಮಗೆ ಡಯಾಲಿಸಿಸ್ ಆರಂಭಿಸಲೇಬೇಕಾಗುತ್ತದೆ.

ಬದುಕುವ ಆಸೆ ಬಿಟ್ಟು ಮನೆಗೆ ಮರಳಿದ್ದ ಈತ ತಿಂಗಳಿಡೀ ಮೌನವಾಗಿದ್ದ.

ದೇಹದಲ್ಲಿ ಎರಡು ಕಿಡ್ನಿಗಳಿರುತ್ತವೆ.

ತಿಂದ ಆಹಾರದಲ್ಲಿ ದೇಹಕ್ಕೆ ಬೇಕಾದ್ದನ್ನು ಉಳಿಸಿ, ಬೇಡವಾದ್ದನ್ನು ಮೂತ್ರದ ಮೂಲಕ ಹೊರ ಹಾಕುವ ಕೆಲಸವನ್ನು ಕಿಡ್ನಿಗಳು ನಿರಂತರವಾಗಿ ಮಾಡುತ್ತಿರುತ್ತವೆ.

ಗೇರು ಬೀಜದ ಆಕ್ರತಿಯಲ್ಲಿರುವ ಕಿಡ್ನಿಯ ಒಳ ಭಾಗದಲ್ಲಿ ನೆಫ್ರೋ (ಕಿಡ್ನಿ ಅಧ್ಯಯನ ಶಾಸ್ತ್ರ -ನೆಫ್ರೋಲೊಜಿ) ಎಂಬ ಹೆಸರಿನ ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಪುಟ್ಟ ಪುಟ್ಟ ಕಣಗಳಿರುತ್ತವೆ.

ಈ ನೆಫ್ರೋಗಳು ತಿಂದ ಆಹಾರದಲ್ಲಿರುವ ಸೋಡಿಯಂ, ಪೊಟಾಷಿಯಂ ಮತ್ತಿತರವುಗಳನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಿ, ಆಯಾ ದೇಹಕ್ಕೆ ಅಗತ್ಯವಿರುವಷ್ಟನ್ನು ರಕ್ತಕ್ಕೆ ದಾಟಿಸುತ್ತದೆ.ಅನಗತ್ಯವಾದ್ದನ್ನು ಮೂತ್ರದ ಮೂಲಕ ಹೊರಹಾಕುತ್ತವೆ.

ಡಯಾಬೆಟಿಸ್ ಮತ್ತಿತರ ಖಾಯಿಲೆಗೆಳು ಈ ಎಲ್ಲ ನೆಫ್ರೋಗಳನ್ನು ನಿಧಾನವಾಗಿ ಸಾಯಿಸುತ್ತವೆ, ಇಲ್ಲವೇ ಶಕ್ತಿಹೀನಗೊಳಿಸುತ್ತವೆ. ಆಗ ದೇಹಕ್ಕೆ ಅನಗತ್ಯವಾಗ ಅಂಶಗಳು ಮೂತ್ರದ ಮೂಲಕ ಹೊರಹೋಗದೆ, ರಕ್ತಕ್ಕೆ ಸೇರಿಕೊಂಡು ದೇಹ ಅಸ್ತವ್ಯಸ್ತಗೊಳ್ಳುತ್ತದೆ.

ಸತ್ತು ಹೋದ ನೆಫ್ರೋಗಳನ್ನು ಮತ್ತೆ ಬದುಕಿಸಲು ಮನುಷ್ಯ ಕಲಿತಿಲ್ಲ.

ತಪಸ್ಸು ಮಾಡದೆಯೇ ತಾನೇನು ಎಂಬುದನ್ನು ಕಂಡುಕೊಂಡುಬಿಟ್ಟಿದ್ದ.

ಹೆಂಡತಿ ಶೋಬಾನಾಳಿಗಾಗಲೀ ಮಗ ಅನನ್ಯನಿಗಾಗಲೀ ಇದನ್ನು ಹೇಳುವ ಧೈರ್ಯ ಇವನಿಗಿರಲಿಲ್ಲ.

ಆದರೆ ದಿನೇ ದಿನೇ ಏರುತ್ತಿರುವ ಇವನ ಕಾಲಿನ ಊತ ಮೊಣಕಾಲಿನವರೆಗೆ ಆವರಿಸಿಕೊಂಡದ್ದನ್ನು ಗಮನಿಸಿದ ಅವರಿಬ್ಬರೂ ಮೌನವಾಗಿ ದು:ಖಿಸುತ್ತಿರುವುದು ಇವನಿಗೂ ಗೊತ್ತಾಗಿತ್ತು.

ಈ ನಡುವೆ ಹೇಗಿದ್ದೀಯಾ ಮಗಾ.. ಎಂದು ಅಕ್ಕರೆಯಿಂದ ವಿಚಾರಿಸುವ ಮತ್ತೊಬ್ಬರೂ ಕಡಿಮೆಯಾಗಿಬಿಟ್ಟರು. ೨೦೧೧ರ ಜೂನ್‌ನಲ್ಲಿತಂದೆ ತೀರಿಕೊಂಡರು. ಇವನು ಹದಿನೈದು ದಿನಗಳ ರಜ ಹಾಕಿ ಊರಿಗೆ ಹೋಗಿದ್ದ. ಕಂಡವರೆಲ್ಲರೂ ಸ್ವಲ್ಪ ಊದಿಕೊಂಡಂತಿದ್ದ ಅವನ ದೇಹದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಮುಖ್ಯವಾಗಿ ಕಣ್ಣುಗಳ ಕೆಳಭಾಗದಲ್ಲಿ ರೆಪ್ಪೆಗಳಡಿಯಲ್ಲಿ ನೀರು ಕಾಣಿಸಿಕೊಂಡಿತ್ತು. ಮೂತ್ರ ಪಿಂಡಗಳು ದೇಹದಲ್ಲಿನ ಅನಗತ್ಯ ನೀರನ್ನು ಹೊರಹಾಕುವಲ್ಲಿ ವಿಫಲವಾದ್ದರಿಂದ ನೀರು ದೇಹದಲ್ಲಿಯೇ ಉಳಿದು ಎಲ್ಲೆಂದರಲ್ಲಿ ಅದು ಶೇಖರವಾಗತೊಡಗಿತ್ತು. ಅವನೀಗ ಉರುಟು ಉರುಟಾಗಿ ಕಾಣಿಸತೊಡಗಿದ್ದ. ಕೇಳಿದವರಿಗೆಲ್ಲರಿಗೂ ಕಿಡ್ನಿ ಸಮಸ್ಯೆಯಿದೆ ಎಂದಷ್ಟೇ ಹೇಳಿದ್ದ.

ಜುಲೈ ತಿಂಗಳಿಗಾಗುವಾಗ ಕಿಡ್ನಿಯ ಕಾರ್ಯಕ್ಷಮತೆ ಶೇಕಡಾ ಮೂವತ್ತಕ್ಕೆ ಇಳಿದಿತ್ತು.

ಅವನು ಡಯಾಲಿಸಿಸ್‌ಗೆ ಮಾನಸಿಕವಾಗಿ ಸಿದ್ಧನಾಗತೊಡಗಿದ್ದ. ಆದರೂ ಕಛೇರಿಯ ಕೆಲಸಗಳನ್ನು ನಿರ್ಲಕ್ಷಿಸಲಿಲ್ಲ. ದೇಹ ಕುಸಿಯುತ್ತಿದ್ದಂತೆ ಹೆಚ್ಚು ಹೆಚ್ಚು ಕೆಲಸ ಮಾಡಲು ಆರಂಭಿಸಿದ.ಗೆಳೆಯ ಉಮಾಪತಿಯ ಒತ್ತಾಯಕ್ಕೆ ಮಣಿದು ವಿಜಯ ಕರ್ನಾಟಕ ಪತ್ರಿಕೆಗೆ ಕಾಲಂ ಬರೆಯಲೂ ಒಪ್ಪಿಕೊಂಡ. ಸಾವಿಗೇ ಸವಾಲು ಹಾಕುವವನಂತೆ.

ನವಂಬರ ತಿಂಗಳಲ್ಲಿ ಹೆಂಡತಿಗೆ ಎಲ್ಲವನ್ನೂ ವಿವರಿಸಿದ.

ಎಲ್ಲವನ್ನೂ ಕೇಳಿಸಿಕೊಂಡ ಆಕೆ, ಡಯಾಲಿಸಿಸ್ ನಿಜಕ್ಕೂ ಪರಿಹಾರವಲ್ಲ. ಜೊತೆಗೆ ಅದನ್ನು ನಿರಂತರವಾಗಿ ಮಾಡುತ್ತಲೇ ಇರಬೇಕು.ಅಂತಿಮವಾಗಿ ದಿನಕ್ಕೆ ಮೂರು ಬಾರಿ ಮಾಡಿಸಿಕೊಳ್ಳಬೇಕು, ಕಾರಣ ಕಿಡ್ನಿ ಕಸಿ (ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್) ಮಾಡಿಸಿಕೊಳ್ಳುವುದೇ ಒಳ್ಳೆಯದು ಅಂತ ಸಲಹೆ ನೀಡಿದಳು.

ಇವನು ಸರಿ ಎಂದು ತಲೆಯಾಡಿಸಿದ.

ಆದರೆ ಕಿಡ್ನಿ ತಪಾಸಣೆಗೆ ಹೊರಟವನಿಗೆ ಬಲುಬೇಗ ಸತ್ಯದರ್ಶನವಾಗಿತ್ತು.

ಸರಕಾರೀ ಕಿಂಡಿಯ ಮೂಲಕವೇ ಕಿಡ್ನಿಗೆ ಬೇಡಿಕೆ ಸಲ್ಲಿಸಿ, ಅದು ಸಿಗುವವರೆಗೆ ವರ್ಷಾನುಗಟ್ಲೆ ತೆಪ್ಪಗೆ ಕಾಯಬೇಕು.

ಅದಕ್ಕೆ ಇರಬೇಕು ಪ್ರಭುದೇವ, ಸಾವನ್ನಕ್ಕರ ಸಾಧನೆ ಮಾಡಿದೊಡೆ ಕಾದುವ ದಿನವಾವುದು ಎಂದು ಪರಿತಪಿಸಿದ್ದು.

ಎಷ್ಟೋ ವರ್ಷಗಳ ನಿರೀಕ್ಷೆಯ ಬಳಿಕ ಸಿಗುವ ಕಿಡ್ನಿಯ ಕಂಡಿಷನ್ ಹೇಗಿರುತ್ತದೆ ಅಂತ ಊಹಿಸುವುದೂ ಕಷ್ಟ.

೬೦ ವರ್ಷ ದಾಟಿದವರ ಕಿಡ್ನಿಯಿಂದ ಹೆಚ್ಚು ಪ್ರಯೋಜನವಿಲ್ಲ.

ಯಾವುದೋ ಅಫಘಾತದಲ್ಲಿ ಆಕಸ್ಮಿಕ ಮರಣ ಹೊಂದಿದ

ತರುಣರ ಕಿಡ್ನಿ ಸಿಕ್ಕರೆ, ಅದು ನಿಮ್ಮ ದೇಹಕ್ಕೆ ಒಪ್ಪಿಗೆಯಾದರೆ ನೀವು ಲಕ್ಷದಲ್ಲಿ ಒಬ್ಬರು,

ಅದು ನಿಮ್ಮ ಪುಣ್ಯ.

ಭಾರತ ದೇಶದಲ್ಲಿ ಸತ್ತಮೇಲೆ ದೇಹದಾನ ಮಾಡುವುದು ಇನ್ನೂ ಜನಪ್ರಿಯವಾಗಿಲ್ಲ.

ಸತ್ತ ಮೇಲಾದರೂ ದೇಶ ಸೇವೆ ಮಾಡಲು ನಮಗೆ ತಿಳಿದಿಲ್ಲ,

ಸತ್ತವರನ್ನು ಸುಟ್ಟು ಹಾಕುವುದೇ ಇಲ್ಲಿ ಜಾಸ್ತಿ.

ಹೀಗಾಗಿ ಕಿಡ್ನಿ ದೊರೆಯುವುದು ಸುಲಭವಲ್ಲ.

ಅವನು ಡಯಾಲಿಸಿಸ್‌ಗೆ ಮಾನಸಿಕವಾಗಿ ಮತ್ತೊಮ್ಮೆ ಸಿದ್ಧನಾಗತೊಡಗಿದ್ದ.

ಟೈಪ್-೨

ನನ್ನ ಬ್ಲಡ್ ಗ್ರೂಪ್ ಮತ್ತು ನಿಮ್ಮದು ಒಂದೇ ಅಲ್ವಾ? ಅಲ್ಲಿ ಇಲ್ಲಿ ಹುಡುಕುವುದು ಯಾಕೇ? ನನ್ನದೆ ಒಂದು ಕಿಡ್ನಿ ತೆಗೆದುಕೊಳ್ಳಿ. ಕಿಡ್ನಿ ದಾನ ಮಾಡಿದವರಿಗೆ ಏನೂ ತೊಂದರೆಯಾಗುವುದಿಲ್ಲ ಅಂತಲ್ಲಾ? ಸುಮಾರು ೨೫ ವರ್ಷಗಳ ಹಿಂದೆ ಹೃದಯವನ್ನು ಕೊಟ್ಟಿದ್ದವಳು ಈಗ ಕಿಡ್ನಿ ತೆಗೆದುಕೋ’ ಎನ್ನುತಿದ್ದಾಳೆ.ಅದೂ ಅತ್ಯಂತ ನಿರ್ಮಲ ಚಿತ್ತದಲ್ಲಿ, ಆತಂಕ ರಹಿತ ಧ್ವನಿಯಲ್ಲಿ.ಆದರೆ ನಿರ್ಣಾಯಕ ವಾಣಿಯಲ್ಲಿ. ದುಷ್ಟ ವ್ಯಾಘ್ರನೆದುರು ಖಂಡವಿದೆ ಕೋ, ಮಾಂಸವಿದೆ ಕೋ ಎಂದಿದ್ದ ಪುಣ್ಯ ಕೋಟಿಯ ಕತೆ ನೆನಪಾಗಿ ಗಳಗಳನೆ ಅಳಲು ಶುರುಮಾಡಿದ್ದ.

ಇವನವಳ ಗಂಡ ಇರಬಹುದು.ಆದರೆ ಅತ್ಯಂತ ಆರೋಗ್ಯವಂತಳಾಗಿರುವ ಅವಳ ಕಿಡ್ನಿ ಕತ್ತರಿಸುವ ಅಧಿಕಾರ ಇವನಿಗೆಲ್ಲಿದೇ? ಲಿಂಗ ಅಸಮಾನತೆಯ ವಿರುದ್ಧ ಇಷ್ಟು ವರ್ಷ ಹೋರಾಡಿದ್ದರ ಅಂತಿಮ ಪರಿಣಾಮ ಇದುವೆಯೇ? ಕೊನೆಯಿಲ್ಲದ ಅಸಂಖ್ಯ ಪ್ರಶ್ನೆಗಳ ಕಡಲಲ್ಲಿ ಮುಳುಗುತ್ತಲೇ ಮತ್ತೂ ಒಂದು ತಿಂಗಳು ಕಳೆದ.

ಕಿಡ್ನಿ ಕಸಿಯ ಆಸೆ ಬಿಟ್ಟ ಇವನು ಡಯಾಲಿಸಿಸ್‌ಗೆ ಸಜ್ಜಾಗತೊಡಗಿದ.

೨೦೧೨ ರ ಜನವರಿ ತಿಂಗಳಿಗಾಗುವಾಗ ಯೂರಿನ್ ಕ್ರಿಯೇಟಿನೈನ್ ೬ಕ್ಕೆ ತಲುಪಿತ್ತು.

ಅದು ಹಿಮ್ಮುಖವಾಗಿ ಚಲಿಸಬಹುದೇ ಎಂಬ ಅವನ ಆಸೆ

ನಿಧಾನವಾಗಿ ಸುಳ್ಳಾಗಲಾರಂಭಿಸಿತ್ತು.

ದೇಹವಿಡೀ ನೀರೇರುತ್ತಿತ್ತು.

ಕಫ ಕಾಣಿಸಿಕೊಂಡಿತು.

ಮೂಗು ಕಟ್ಟಿಕೊಳ್ಳತೊಡಗಿತು

ರಾತ್ರಿ ನಿದ್ರಿಸುವುದು ಕಷ್ಟವಾಗತೊಡಗಿತು.

ಕೈ ಬೆರಳುಗಳು ಬಾಗಲಾರದಾದುವು.

ಚರ್ಮದ ಮೇಲೆ ತುರಿಕೆ ಕಾಣಿಸಿಕೊಂಡು

ದೆಹಲಿಯ ಛಳಿಯಲ್ಲೂ ಬಟ್ಟೆ ಹಾಕಲಾಗದ ಅಸಹನೀಯ ಪರಿಸ್ಥಿತಿ ನಿರ್ಮಾಣಗೊಂಡಿತು.

ಯೂರಿನ್ ಕ್ರಿಯೇಟಿನೈನ್ ೭ಕ್ಕೆ ತಲುಪಿತ್ತು.

ಈ ನಡುವೆ ಅಣ್ಣನ ಮಗಳ ಮದುವೆಗೆಂದು ಊರಿಗೆ ಹೋದವನು ತಂಗಿ ಗುಲಾಬಿ ಬಿಳಿಮಲೆಯ ಒತ್ತಾಯದಿಂದ

ಮಂಗಳೂರಿನಕಿಡ್ನಿ ಡಾಕ್ಟರರೊಬ್ಬರನ್ನು ಭೇಟಿ ಮಾಡಿದ. ಅವರು ಎಲ್ಲ ಪರೀಕ್ಷೆ ಮಾಡಿ ಸದ್ಯ ನಿಮ್ಮ ಕಿಡ್ನಿಯ ೮೯ ಭಾಗ ಕೆಲಸ ಮಾಡ್ತಾ ಇಲ್ಲ. ಸರಿಯಾದ ದಾನಿಗಳು ದೊರೆತು ಕಿಡ್ನಿ ಕಸಿ ಮಾಡಿಸಿಕೊಂಡರೆ ಮಾತ್ರ ಮುಂದಕ್ಕೆ ಕನಿಷ್ಠ ೨೦ ವರ್ಷಕ್ಕೆ ಮೋಸವಿಲ್ಲ ಅಂತ ಹೇಳಿಬಿಟ್ಟರು. ಇವನು ಹಗುರವಾದ ಕಿಡ್ನಿಯೊಂದಿಗೆ ದೆಹಲಿಗೆ ಹಿಂತಿರುಗಿದ.ಒಲವು ಗೆಳೆಯರಿಗೆ ತನ್ನ ಆತಂಕವನ್ನು ಹೇಳಿಕೊಂಡಾಗ, ಕಿಡ್ನಿ ಕಸಿ ಮಾಡಿಸಿಕೊಳ್ಳುವ ಮತ್ತು ಮಾಡಿಸಿಕೊಂಡವರ ಬಗ್ಗೆ ಹಲವು ಮಾಹಿತಿಗಳು ದೊರಕಿದವು.

ಇವನು ಮತ್ತೊಮ್ಮೆ ಕಿಡ್ನಿ ಕಸಿಗೆ ಮಾನಸಿಕವಾಗಿ ಸಿದ್ಧನಾಗತೊಡಗಿದ್ದ! ಇದಕ್ಕೆ ಹೆಂಡತಿಯ ನಿಷ್ಟುರ ಮಾತುಗಳೇ ಕಾರಣ!

ಮುತ್ತೈದೆ ಸಾವು ಇತ್ಯಾದಿ ಬಯಸಿದವಳಲ್ಲ ಶೋಭನಾ. ಇಷ್ಟು ವರ್ಷಗಳ ಕಾಲ ತನ್ನ ಜೊತೆಗಾರನಾಗಿದ್ದವನು ಮತ್ತೊಂದಷ್ಟು ವರ್ಷಗಳ ಕಾಲ ಜೊತೆಯಲ್ಲಿರಲಿ ಎಂಬ ಸಣ್ಣ [?] ಸ್ವಾರ್ಥ ಇದ್ದಿರಲೂಬಹುದು. ಆಕೆಯ ಪುಟ್ಟ ಲೋಕದಲ್ಲಿ ಗಂಡ ಮತ್ತು ಮಗ ಬಿಟ್ಟರೆ ಬೇರಾರೂ ಇದ್ದಂತಿಲ್ಲ. ಗಂಡನನ್ನು ಹೀಗೇ ಉಳಿಸಿಕೊಳ್ಳಲು ಅವಳೆದುರು ಬೇರೆ ದಾರಿ ಯಾವುದೂ ಉಳಿದಿರಲಿಲ್ಲ ಎಂಬುದಂತೂ ಸತ್ಯ. ಮಿತ ಮಾತಿನ, ಆದರೆ ಮಾತಾಡಿದಾಗಲೆಲ್ಲ ನಿರ್ಣಾಯಕವಾಗಿ ಮಾತಾಡುವ ಆಕೆಗೆದುರಾಗಿ ಆತನೆಂದೂ ವಾದಿಸಿರಲಿಲ್ಲ.

ಒಟ್ಟಿನಲ್ಲಿ ಕೊಡುಗೆ ಕೊಡಲು ಅವಳಿಗೆ ಕಾರಣಗಳಿದ್ದವು.

ಆದರೆ ಹೆಂಡತಿಯ ಕೊಡುಗೆ ಸ್ವೀಕರಿಸಲು ಇವನಿಗೆ ಕಾರಣಗಳಿರಲಿಲ್ಲ.

ಕಾರಣಗಳನ್ನು ಹುಟ್ಟಿಸಿಕೊಂಡು ತನ್ನದೇ ಹೃದಯವನ್ನು ಒಪ್ಪಿಸಬೇಕಾಗಿತ್ತು; ಒಪ್ಪಿಸತೊಡಗಿದ್ದ.

ಇನ್ನೂ ಇದೆ..

 

‍ಲೇಖಕರು G

10 October, 2012

1 Comment

  1. Uday Itagi

    ಈ ಲೇಖನ ನನ್ನಂತ ಮಧುಮೇಹಿಗಳಿಗೊಂದು ಸಂಪೂರ್ಣ ತಿಳುವಳಿಕೆ ಮತ್ತು ಎಚ್ಚರವನ್ನು ನೀಡಲಿದೆ. Thanks to Boluvar. ಜೊತೆಗೆ ಸಾವಿನ ದವಡೆಗೆ ಹತ್ತಿರವಿದ್ದುಕೊಂಡೂ ಮಾಡಿ ಮುಗಿಸಬೇಕಾದ ತಮ್ಮ ಕೆಲಸದ ಬಗ್ಗೆ ಯೋಚಿಸುವ ಬಿಳಿಮಲೆಯವರ ಅಗಾಧ ಜೀವನ ಪ್ರೀತಿ ಸ್ಫೂರ್ತಿಯನ್ನು ನೀಡುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading