ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೊಳುವಾರು ಬರೆದ ಬಿಳಿಮಲೆ ಆತ್ಮೀಯ ಕಥನ – ಭಾಗ ೨

ತ್ರಿಪತಿಗಳ ಕರುಣೆ

(ಇಲ್ಲಿಯವರೆಗೆ)

ಕೃಪೆ : ವಾರ್ತಾಭಾರತಿ ವಿಶೇಷಾಂಕ

ಆ ಅಮೇರಿಕಾದ ಸಂಸ್ಥೆಯೇನೋ ಚೆನ್ನಾಗಿತ್ತು. ಆದರೆ ಇವನ ಭಾಷಾಜ್ಞಾನ ಅಲ್ಲಿಗೆ ಸಾಕಾಗುತ್ತಿರಲಿಲ್ಲ. ಅಲ್ಲಿಗೆ ಬರುತ್ತಿದ್ದವರೆಲ್ಲ ಖ್ಯಾತ ವಿದೇಶೀ ವಿದ್ವಾಂಸರೇ ಆಗಿದ್ದರು. ಅವರೊಡನೆ ಸಂವಾದಿಸಲು ಇಂಗ್ಲಿಷ್ ಬೇಕೇ ಬೇಕು. ಸರೀಕರೊಡನೆ ಮಾತಾಡಲು ಹಿಂದಿ ಬೇಕು. ಈ ಎರಡೂ ಭಾಷೆಗಳು ಕನ್ನಡದಲ್ಲಿ ಎಂ.ಎ. ಮಾಡಿದ ಅವನಿಗೆ ಫ್ರೆಂಚ್ ಆಗಿದ್ದವು. ಪ್ರತಿವಾರದ ಕೊನೆಗೆ ವಿವರವಾದ ಪ್ರಗತಿ ವರದಿಯನ್ನು ಇಂಗ್ಲಿಷ್‌ನಲ್ಲಿ ಬರೆದು ಇ-ಮೇಲ್ ಮಾಡಬೇಕು. ಇವನು ಅದುವರೆಗೆ ಕಂಪ್ಯೂಟರ್ ಮುಟ್ಟಿದವನಲ್ಲ. ಅವನೊಳಗಿದ್ದ ಪಂಪ, ರನ್ನ, ಕುಮಾರವ್ಯಾಸ, ಬೇಂದ್ರೆ ಕುವೆಂಪು ಅಲ್ಲಿ ಯಾರಿಗೂ ಬೇಕಾಗಿರಲಿಲ್ಲ. ಜೊತೆಗೆ ದೆಹಲಿಯಂಥಾ ಮಹಾನಗರದಲ್ಲಿ ವಾಸ.

ಹಾಗೆ ನೋಡಿದರೆ ಆತ ಆತನ ಎಳವೆಯನ್ನು ಕಳೆದದ್ದು ವಾಟೆಕಜೆ ಎಂಬ ಪ್ರದೇಶದಲ್ಲಿ. ಬಂಟಮಲೆ ಕಾಡಿನ ನಡುವೆ ಇರುವ ಈ ಪ್ರದೇಶದಲ್ಲಿ ಅವನದ್ದು ಒಂದೇ ಮನೆ. ಆ ಮನೆಗೆ ಎರಡೇ ಮಾಡು. ಮಣ್ಣಿನ ಗೋಡೆಯ ಮೇಲೆ ಬಿದಿರು ಇರಿಸಿ, ಅದರ ಮೇಲೆ ಎಲ್ಲಿಂದಲೋ ಕಾಡಿ ಬೇಡಿ ತಂದ ಅಡಿಕೆ ಮರದ ಸೋಗೆ ಹಾಸಿ ಕಟ್ಟಿದ ಮನೆಯದು. ಅಪ್ಪ ಮನೆಯಿಂದ ದೂರವೇ ಇರುತ್ತಿದ್ದರು. ಅಮ್ಮ ಸೊಪ್ಪು ಸೌದೆ ತರಲು ಕಾಡಿನೊಳಕ್ಕೆ ಹೋಗುವಾಗ ಈತನನ್ನು ಮನೆಯೊಳಕ್ಕೆ ಇರಲು ಹೇಳಿ ಹೊರಗಿನಿಂದ ಬಾಗಿಲು ಮುಚ್ಚುತ್ತಿದ್ದರು. ಆ ಕತ್ತಲು ಕೋಣೆಯೊಳಗೆ ಆತ ಏಕಾಂಗಿಯೇನೂ ಅಲ್ಲ.

ಮನೆಯೆ ಒಡೆದ ಗೋಡೆಯ ತುಂಬಾ ವಾಸಮಾಡುತ್ತಿದ್ದ ಇಲಿಗಳು ಆತನ ಅಮ್ಮ ಬಾಗಿಲು ಮುಚ್ಚಿದ ತಕ್ಷಣ ಕ್ರಿಯಾಶೀಲವಾಗುತ್ತಿದ್ದವು. ಗೋಡೆಯ ಸಂದುಗೊಂದುಗಳಿಂದ ಸರಕ್ಕನೆ ಇಳಿದು ನೆಲದ ಮೇಲೆ ಓಡಾಡುವ ಚಿಕ್ಕ ದೊಡ್ಡ ಇಲಿಗಳನ್ನು ಕಂಡು ಅವನು ದಿಗಿಲಿನ ಜೊತೆಗೆ ಖುಷಿಗೊಳ್ಳುತ್ತಿದ್ದ. ಅವುಗಳನ್ನು ಮುಟ್ಟಲು ಪ್ರಯತ್ನಿಸುತ್ತಿದ್ದ. ಅವುಗಳ ಹಿಂದೆ ಓಡುತ್ತಿದ್ದ. ಕೈಗೆ ಸಿಗದ ಅವುಗಳ ಚುರುಕುತನಕ್ಕೆ ಅಸೂಯೆ ಪಡುತ್ತಿದ್ದ. ಜೊತೆಗೆ ಅನೇಕ ಬಾರಿ ಇಲಿಗಳೊಡನೆ ಮಾತಾಡಲೂ ಪ್ರಯತ್ನಿಸಿದ್ದುಂಟು. ಇಲಿಗಳು ಆತನನ್ನು ಎಂದೂ ಗಂಭೀರವಾಗಿ ಪರಿಗಣಿಸಲೇ ಇಲ್ಲ.

ಅವನಿಗೆ ಪ್ರಿಯವಾಗಿದ್ದ ಇಲಿಗಳ ಸಹವಾಸ ಭಯಾನಕವಾಗುತ್ತಿದ್ದುದು ಅವುಗಳನ್ನು ಹಿಡಿಯಲು ಹಾವುಗಳು ಬರುತ್ತಿದ್ದಾಗ. ಮನೆಯ ಮಣ್ಣಿನ ಗೋಡೆ ಒರಟಾಗಿದ್ದುದು ಮಾತ್ರವಲ್ಲ ಅದರ ತುಂಬಾ ಬಿರುಕುಗಳಿದ್ದುದರಿಂದ ಹಾವುಗಳು ಸುಲಭವಾಗಿ ಅದರ ಮೂಲಕ ಮನೆಯ ಮಾಡನ್ನೇರುತ್ತಿದ್ದುವು. ಹಾವುಗಳಲ್ಲಿ ಕೇರೆ ಹಾವು ಎಂಬ ಪ್ರಭೇದವೊಂದಿದ್ದು ಅವುಗಳಿಗೆ ಇಲಿ ಅಂದರೆ ಪ್ರಾಣ. ಇಲಿಗಳನ್ನು ಕಂಡೊಡನೆ ಅವುಗಳನ್ನು ವೇಗವಾಗಿ ಅಟ್ಟಿಸಿಕೊಂಡು ಹೋಗಿ, ಹಿಡಿದು ನುಂಗಿ ಬಿಡುವ ಕೇರೆ ಹಾವುಗಳು ಮನುಷ್ಯರ ಮಟ್ಟಿಗೆ ನಿರಪಯಕಾರಿ. ಅಮ್ಮ ಮನೆಯೊಳಕ್ಕೆ ಇವನನ್ನು ಬಿಟ್ಟು ಹೋಗುವಾಗ ಎಷ್ಟೋ ಬಾರಿ ಈ ಕೇರೆ ಹಾವುಗಳು ಮಣ್ಣಿನ ಗೋಡೆಯನ್ನೇರಿ ಮೆಲ್ಲನೆ ಮನೆಯೊಳಕ್ಕೆ ಇಣುಕುತ್ತಿದ್ದವು. ಹಾವುಗಳ ಆಗಮನದ ಸೂಚನೆ ದೊರೆತ ಇಲಿಗಳು ಅಡ್ಡಾದಿಡ್ಡಿಯಾಗಿ ಓಡುವಾಗ ಈತನಿಗೂ ಅಪಾಯದ ಅರಿವುಂಟಾಗುತ್ತಿತ್ತು. ಒಮ್ಮೊಮ್ಮೆ ಈ ಕೇರೆ ಹಾವುಗಳು ಆಯತಪ್ಪಿ ಮಾಡಿನಿಂದ ಧೊಪ್ಪನೆ ನೆಲದ ಮೇಲೆ ಬಿದ್ದು ಬಿಡುತ್ತಿದ್ದುವು. ಬಿದ್ದು ಸ್ವಲ್ಪ ಹೊತ್ತು ಸುಮ್ಮನಿರುತ್ತಿದ್ದುವು. ಹೊರಗೆ ಹೋಗಲಾಗದ ಆತ ಮುದುರಿ ಕುಳಿತುಕೊಂಡು, ಹಾವನ್ನು ಹೊರಗೆ ಹೋಗಲು ಬೇಡಿಕೊಳ್ಳುತ್ತಿದ್ದ. ಜಾರಿಬಿದ್ದ ಕಾರಣ ನಾಚಿಕೊಂಡಿತೋ ಎಂಬಂತೆ ಸ್ವಲ್ಪ ಹೊತ್ತಿನ ಆನಂತರ ಕೇರೆ ಹಾವು ಮೆಲ್ಲಗೆ ಹರಿದು, ಗೋಡೆಯ ಬಿರುಕಿನ ಮೂಲಕ ಹೊರಗೆ ಹೋಗುತ್ತಿತ್ತು. ಹಾವಿನ ಬಾಲ ಗೋಡೆಯ ಬಿರುಕಿನಿಂದ ಮಾಯವಾಗುತ್ತಲೇ ಆತ ಇಲಿಗಳನ್ನು ಮತ್ತೆ ಹೊರಗೆ ಕರೆಯುತ್ತಿದ್ದ. ಬಂಟಮಲೆಯಲ್ಲಿ ಕಾಳಿಂಗ ಸರ್ಪ, ನಾಗರ ಹಾವು ಸೇರಿದಂತೆ ಅನೇಕ ಬಗೆಯ ಭಯಾನಕ ವಿಷದ ಹಾವುಗಳಿದ್ದುವು ಆದರೆ ಅವು ಮನೆಯ ಅಂಗಳದವರೆಗೆ ಬರುತ್ತಿದ್ದರೂ ಮನೆಯೊಳಕ್ಕೆ ಬರುತ್ತಿರಲಿಲ್ಲ, ಬರುತ್ತಿದ್ದರೆ ಇವನ್ನೆಲ್ಲಾ ಹೇಳಲು ಅವನು ನಮ್ಮೊಡನೆ ಇರುತ್ತಿರಲಿಲ್ಲ.

ಆತ ಸ್ವಲ್ಪ ದೊಡ್ಡದಾದಾಗ ಮನೆಯೊಳಕ್ಕೆ ಇರಲು ಒಪ್ಪದೆ ಅಮ್ಮನೊಡನೆ ಸೊಪ್ಪು ಸೌದೆ ತರಲು ಕಾಡಿನೊಳಕ್ಕೆ ಬರುವುದಾಗಿ ಹಠ ಹಿಡಿಯತೊಡಗಿದ್ದ.

ನಿಗೂಢವಾದ ಕಾಡು ಆತನಿಗೊಂದು ಕುತೂಹಲ. ಮಳೆಗಾಲದಲ್ಲಿ ಬೀಸುವ ಭಯಾನಕ ಗಾಳಿಗೆ ನಡುರಾತ್ರಿಯಲ್ಲಿ ಧರೆಗೊರಗುವ ಮರಗಳ ಸದ್ದಿಗೆ ಮನೆಯೊಳಗೆ ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಿದ್ದ ಅವನು ಬೆಚ್ಚಿ ಬೀಳುತ್ತಿದ್ದ. ಆ ಮರಗಳು ನೆಲಕ್ಕೊರಗುವಾಗ ತನ್ನೊಡನೆ ಇತರ ಮರಗಳನ್ನೂ ನೆಲಕ್ಕೊರಗಿಸುತ್ತವೆ. ಮರಗಳನ್ನು ಗಾಢವಾಗಿ ಅಪ್ಪಿಕೊಂಡಿರುವ ಬಳ್ಳಿಗಳಿಗೂ ಉಳಿಗಾಲವಿಲ್ಲ. ಒಂದು ಮರವನ್ನು ಅಪ್ಪಿಕೊಂಡು ಮೇಲೇರುವ ಬೃಹತ್ ಬಳ್ಳಿಗಳು ಮೇಲೇರುತ್ತಲೇ ಇನ್ನೊಂದು ಮರದ ಕಡೆಗೆ ಚಾಚಿಕೊಂಡು ವಿಸ್ತಾರವಾಗಿ ಬೆಳೆಯುತ್ತವೆ. ಹೀಗಾಗಿ ಒಂದು ಮರ ಬಿದ್ದರೆ ಈ ಬಳ್ಳಿಗಳು ಇನ್ನೊಂದನ್ನು ಬರಸೆಳೆದು ಬೀಳಿಸುತ್ತವೆ. ಹೀಗೆ ಬೀಳುವಾಗ ಮರದ ಮೇಲೆ ಆಶ್ರಯ ಪಡೆದಿದ್ದ ಕೆಲವು ಹಕ್ಕಿಗಳು ಮತ್ತು ಪ್ರಾಣಿಗಳು ನಡುರಾತ್ರಿಯಲ್ಲಿ ಕಿರುಚಿಕೊಂಡು ಅತ್ಯಂತ ಭಯಾನಕ ವಾತಾವರಣವೊಂದು ನಿರ್ಮಾಣವಾಗುತ್ತಿತ್ತು. ಆದರೂ ಸಾಮಾನ್ಯವಾಗಿ ಮಳೆಗಾಲದಲ್ಲಿ ಬೀಳುವ ಈ ಮರಗಳನ್ನು ನೋಡಲು ಕಾಡಿನೊಳಕ್ಕೆ ಹೋಗಬೇಕೆಂದು ಆಸೆ ಮಾತ್ರ ಅವನಲ್ಲಿ ಮುರುಟುತ್ತಿರಲಿಲ್ಲ.

ಕೊನೆಗೆ ಒಂದು ಬೇಸಗೆಯಲ್ಲಿ ಆವನ ಹಠಕ್ಕೆ ಒಪ್ಪಿ ಕಾಡಿಗೆ ಕರೆದೊಯ್ಯಲು ಅತನ ಅಮ್ಮ ಒಪ್ಪಿದ್ದರು.

ಕೈಯಲ್ಲಿ ಒಂದು ಪುಟ್ಟ ಕತ್ತಿ ಹಿಡಿದು ಅವನು ಅಮ್ಮನನ್ನು ಹಿಂಬಾಲಿಸಿದ.

ಅಮ್ಮ ನೇರವಾಗಿ ಬಿದಿರು ಹಿಂಡಿಲುಗಳಿರುವ ಸಮತಟ್ಟಾದ ಪ್ರದೇಶವೊಂದಕ್ಕೆ ಹೋಗಿ ಬಿದಿರಕ್ಕಿಯನ್ನು ಹೆಕ್ಕಲು ಆರಂಭಿಸಿದರು. ಈ ಬಿದಿರಕ್ಕಿಗೆ ರಾಜನಕ್ಕಿ ಎಂಬ ಹೆಸರೂ ಇತ್ತು. ಸಣ್ಣ ಆಕಾರದ ಈ ಬಿದಿರಿನ ಭತ್ತವನ್ನು ಮನೆಗೆ ತಂದು ಅದರ ಸಿಪ್ಪೆಯನ್ನು ತೆಗೆದು ಗಂಜಿ ಮಾಡಿ ಉಣ್ಣುವುದು ಅವರ ನಿತ್ಯದ ಕೆಲಸ. ತರಗೆಲೆಗಳ ನಡುವೆ ಅಡಗಿಹೋಗುವ ಆ ಅತಿ ಸಣ್ಣ ಭತ್ತದಂತಿರುವ ಬಿದಿರಕ್ಕಿಯನ್ನು ಹೆಕ್ಕಲು ತುಂಬಾ ತಾಳ್ಮೆ ಬೇಕು. ಅವನಿಗೋ ಕಾಡಿನೊಳಕ್ಕೆ ಮತ್ತಷ್ಟು ನುಗ್ಗುವ ತವಕ. ಮೆಲ್ಲನೆ ಅಮ್ಮನ ಕಣ್ಣು ತಪ್ಪಿಸಿ ಆಚೀಚೆ ನಡೆದು, ಕಾಡಿನೊಳಕ್ಕೆ ನೀಳವಾಗಿ, ಅನಾಥವಾಗಿ, ಎಲ್ಲವನ್ನು ಕಡಿದುಕೊಂಡು ಬಿದ್ದಿರುವ ಬೃಹತ್ ಮರಗಳ ಬಳಿ ಸುಳಿದಾಡುತ್ತಿದ್ದ. ಆ ಬಿದ್ದ ಮರಗಳ ಒಂದು ಬದಿಯಲ್ಲಿ ನಿಂತರೆ ಮತ್ತೊಂದು ಬದಿ ಕಾಣುತ್ತಿರಲಿಲ್ಲ. ಬಿದ್ದ ಮರದ ಬೇರುಗಳು ಅಕರಾಳ ವಿಕರಾಳವಾಗಿ ಆಕಾಶದೆತ್ತರಕ್ಕೆ ಚಾಚಿಕೊಂಡಿರುತ್ತಿದ್ದುವು. ಮಳೆಗಾಲದಲ್ಲಿ ಬಿದ್ದ ಈ ಮರಗಳ ತೊಗಟೆಯು ಬಂಟಮಲೆಯ ತೇವಾಂಶದಲ್ಲಿ ನಿಧಾನವಾಗಿ ಕರಗುತ್ತಿದ್ದವು. ಹಾಗೆ ಕರಗುತ್ತಿದ್ದಂತೆ ತೊಗಟೆಯ ಒಳಗಿನಿಂದ ಬಗೆ ಬಗೆಯ ಹುಳುಗಳು ಹೊರಬರುತ್ತಿದ್ದವು. ಹಲವು ಬಣ್ಣಗಳ, ವಿವಿಧ ಆಕಾರಗಳ ಆ ಹುಳುಗಳನ್ನು ನೋಡಿ ಆರಂಭದಲ್ಲಿ ಅವನು ಹೆದರಿದನಾದರೂ ನಿಧಾನವಾಗಿ ಅವುಗಳೊಡನೆಯೂ ಗೆಳೆತನ ಬೆಳೆಸಿದ. ಪ್ರೀತಿಯಿಂದ ಕೈಯಲ್ಲಿ ಸಣ್ಣ ಕೋಲು ಹಿಡಿದು ಆ ಹುಳುಗಳನ್ನು ಕೆಣಕುತ್ತಿದ್ದ. ಆಗೆಲ್ಲ ತಮ್ಮ ಪುಟ್ಟ ಹೆಡೆಬಿಚ್ಚಿ ಪ್ರತಿಭಟನೆ ತೋರುವ ಅವು ತೆವಳುತ್ತಾ ಮತ್ತೆ ಮರೆಗೆ ಸರಿಯುತ್ತಿದ್ದುವು. ಆ ಹುಳುಗಳಿಗೆ ಆತ ಬಗೆ ಬಗೆಯ ಹೆಸರಿಟ್ಟ. ಆ ಹೆಸರಿಂದ ಅವುಗಳನ್ನು ಕರೆಯುವಾಗ ಅವು ತಲೆಯಾಡಿಸುತ್ತಿರುವಂತೆ ಆತನಿಗಂತೂ ಅನ್ನಿಸುತ್ತಿತ್ತು. ಹುಳುಗಳ ಜೊತೆಗಣ ಆತನ ಸಂಭಾಷಣೆಗಳಿಂದ ಅವನ ಅಮ್ಮನಿಗೆ ಸಮಾಧಾನವಾಗುತ್ತಿತ್ತು. ಯಾಕೆಂzರೆ ಬಿದಿರಕ್ಕಿ ಹೆಕ್ಕುತ್ತಿದ್ದ ಆಕಗೆ ಪಕ್ಕದೆಲ್ಲೆಲ್ಲೋ ಮಗ ಕ್ಷೇಮವಾಗಿರುವ ಬಗ್ಗೆ ಸೂಚನೆ ದೊರೆಯುತ್ತಿತ್ತು.

ಇದೆಲ್ಲ ಕಳೆದು ಅರ್ಧ ಶತಮಾನ ಕಳೆದಿದೆ. ಆ ಹುಡುಗ ಈಗ ಅಮೇರಿಕಾ ಸಂಸ್ಥೆಗೆ ಹೊದಿಕೊಳ್ಳಬೇಕಾಗಿದೆ.

ಅವನು ಸೋಲೊಪ್ಪಿಕೊಳ್ಳಲು ಸಿದ್ದನಿದ್ದವನಲ್ಲ.

ಹಿಂದೊಮ್ಮೆ ಉಡುಪಿಯಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಜಾನಪದ ಸೆಮಿನಾರಿನಲ್ಲಿ ಯು ಕ್ಯಾನ್ ಅಂಡರ್ ಸ್ಟಾಂಡ್ ಮೈ ಕನ್ನಡ ಬೆಟರ್ ದೇನ್ ಮ್ಯ್ ಇಂಗ್ಲಿಷ್ ಎನ್ನುತ್ತಲೇ, ಎದುರಿಗೆ ಕಣ್ ಕಣ್ ಬಿಟ್ಟು ನೋಡುತ್ತಿದ್ದ ಪರದೇಶೀ ವಿದ್ವಾಂಸರನ್ನೆಲ್ಲ ಕಂಗಾಲುಗೊಳಿಸುವಷ್ಟು ವಿದ್ವತ್ ಮೆರೆದವನೀತ. ಈಸಬೇಕು ಇದ್ದು ಜೈಸಬೇಕು ಎಂಬ ದಾಸರ ವಾಣಿಯನ್ನು ನೂರಕ್ಕೆ ನೂರು ಪಾಲಿಸಿದವನೀತ; ಪಾಲಿಸಿದ.

ಮತ್ತ್ತೊಮ್ಮೆ ಮಗುವಾಗಿ ೪೩ ನೇ ವಯಸ್ಸಿನಲ್ಲಿ ಎಲ್ಲವನ್ನೂ ಕಲಿಯತೊಡಗಿದ.

ಕಂಪ್ಯೂಟರ್, ಇಂಗ್ಲಿಷ್, ಹಿಂದಿ, ಕೆಟಲಾಗಿಂಗ್, ಡಾಟಾ ಬೇಸ್, ಇ-ಮೇಲ್, ಒರೇಕಲ್, ಪವರ್ ಪಾಯಿಂಟ್, ಪಾಶ್ಚಾತ್ಯ ಸಂಸ್ಥೆಯ ಕೆಲಸದ ಸಂಸ್ಕೃತಿ ಇತ್ಯಾದಿ. ಅದೇನೂ ಬಂಟಮಲೆಯಲ್ಲಿ ಹುಳುಗಳೊಡನೆ ಮಾತಾಡಿದಂತಲ್ಲ. ತುಂಬಾ ಒದ್ದಾಡಬೇಕಾಗಿತ್ತು. ಸಹೋದ್ಯೋಗಿಗಳಿಗಿಂತ ಇವನು ಇಮ್ಮಡಿ ಶ್ರಮ ಹಾಕಲೇ ಬೇಕಾಗಿತ್ತು. ಕೆಲವು ಬಾರಿ ಸೋಲಿನ ಅವಮಾನವನ್ನೂ ನುಂಗಿಕೊಳ್ಳಬೇಕಾಯಿತು. ಒಂದು ಸಣ್ಣ ದೀಪದ ಬೆಳಕನ್ನು ಅಡಗಿಸುವಷ್ಟು ಕತ್ತಲು ಈ ಲೋಕದಲ್ಲಿ ಇಲ್ಲ ಎಂದು ದೃಢವಾಗಿ ನಂಬಿದವನೀತ. ಸಿಡಿಲು ಹೊಡೆದೊಡೆ ಹಿಡಿದ ಕೊಡೆ ಕಾವುದೇ ಎಂಬ ಹರಿಶ್ಚಂದ್ರ ಕಾವ್ಯದ ಮಾತನ್ನು ಸಾರಾಸಗಟಾಗಿ ನಿರಾಕರಿಸುವ ಆಶಾವಾದಿ. ಹತಾಶೆಯನ್ನು ಮೀರುವ ಕಲೆಯನ್ನು ಕಷ್ಟ ಪಟ್ಟು ರೂಢಿಸಿಕೊಂಡ. ಹಗಲೂ ರಾತ್ರಿ ಅಧ್ಯಯನ ನಡೆಸಿದ.

ಅವನ ಕಲಿಕೆಯ ಹಠವನ್ನು ತಡೆಯುವ ಶಕ್ತಿ ಅಲ್ಲಿ ಯಾರಿಗೂ ಇರಲಿಲ್ಲ. ಅವನ ಪ್ರಾಮಾಣಿಕ ನಿಷ್ಠೆ ಮತ್ತು ಬದ್ಧತೆಯನ್ನು ಗುರುತಿದ ಆ ಅಮೇರಿಕಾದ ಸಂಸ್ಥೆ, ನಾಲ್ಕೇ ವರ್ಷಗಳಲ್ಲಿ ಇವನನ್ನು ಸಂಸ್ಥೆಯ ನಿರ್ದೆಶಕನಾಗಿ ನೇಮಿಸಿ ಮನ್ನಣೆ ನೀಡಿತು. ಇವನ ಜವಾಬ್ದಾರಿ ಏರಿತು. ಹಾಗಾಗಿ ಸಕ್ಕರೆಯ ಮಟ್ಟ ೫೦೦ ರಹತ್ತಿರ ತಲುಪಿತು.

ಆರೋಗ್ಯವಂತ ದೇಹದೊಳಗೆ ಅಂತರ್ಗತವಾಗಿರುವ ರೋಗ ನಿರೋಧಕ ಶಕ್ತಿ ಇವನೊಳಗೆ ಮಾಯವಾಗತೊಡಗಿತು.

ದೆಹಲಿಯ ಮೈಕೊರೆಯುವ ಛಳಿಯನ್ನು ತಡೆದುಕೊಳ್ಳುವುದು ಸುಲಭವಲ್ಲ. ಸೆಖೆಗೆ ಮೂಗಿನಿಂದ ರಕ್ತ ಒಸರುತ್ತಿತ್ತು. ಯಾರೋ ಹೇಳಿದರು ಅಂತ ಆಯುರ್ವೇದದ ಮೊರೆ ಹೋದ. ಒಂದಕ್ಕೆರಡಾಯಿತು. ಕಹಿ ಕಷಾಯ ಕುಡಿದಾಗ ಸಕ್ಕರೆಯ ಮಟ್ಟವೇನೋ ಕಡಿಮೆಯಾಗುತ್ತಿತ್ತು. ಆದರೆ ನಿರಂತರ ಕಹಿ ಕುಡಿದು ಪರಿಣಮವಾಗಿ ಲಿವರ್ ದುರ್ಬಲವಾಯಿತು. ಇದರ ಮುಂದಿನ ಹಂತವಾಗಿ ಜಾಂಡಿಸ್ ಕಾಣಿಸಿಕೊಂಡಿತು, ಜೊತೆಜೊತೆಗೆ ಕಾಲಲ್ಲಿ ಟಿ.ಬಿ. ಕಾಣಿಸಿಕೊಂಡಿತು. ಸಾವು ಹತ್ತಿರದಲ್ಲಿ ಎಲ್ಲೋ ಸುಳಿದಾಡುತ್ತಿದ್ದಂತೆ ಅನ್ನಿಸತೊಡಗಿತು. ನಿರ್ಲಕ್ಷಿಸಿದರೆ ಹೆಚ್ಚು ಕಾಲ ಬದುಕುವುದಿಲ್ಲ ಅಂತ ಖಚಿತವಾಗತೊಡಗಿತು.

೨೦೦೪ರ ಜನವರಿ ತಿಂಗಳಲ್ಲಿ ಅವನು ದೆಹಲಿಯ ಪ್ರಖ್ಯಾತವಾದ ಅಪೋಲೋ ಆಸ್ಪತ್ರೆಯ ಅತ್ಯಾಧುನಿಕ ಎಂಡೋಕ್ರಿನೋಲೊಜಿಗೆ ಹೋದ. ಈ ವಿಭಾಗದ ಮುಖ್ಯಸ್ಥರು ಡಾ.ಅಂಬರೀಶ್ ಮಿತ್ತಲ್. ಒಳ್ಳೆಯ ಬರೆಹಗಾರು ಕೂಡ.

ಡಾಕ್ಟರರ ಷಾಪಿಗೆ ಹೋದವರಿಗೆಲ್ಲ ಒಂದು ಅನುಭವವಾಗಿರುತ್ತದೆ; ಒಂದಲ್ಲ ಎರಡು ಮೂರು ಬಗೆಯದು. ಯಾವುದೇ ಡಾಕ್ಟರರ ಷಾಪಿಗೆ ಹೋದರೆ, ಡಾಕ್ಟರು ನಾಡಿ ಹಿಡಿಯುವ ಮೊದಲು ಪೆನ್ನು ಹಿಡಿಯುತ್ತಾರೆ. ಯಾವುದಾದರೊಂದು ಟೆಸ್ಟ್‌ಗೆಚೀಟಿ ಕೊಡುತ್ತಾರೆ.ವಾರದ ಹಿಂದೆ ಮತ್ತೊಬ್ಬ ಡಾಕ್ಟರು ಅದೇ ಪರೀಕ್ಷೆ ಮಾಡಿಸಿ ಬರೆದು ಕೊಟ್ಟಿರುವ ರಿಪೋರ್ಟ್ ಕಣ್ಣೆದುರು ಹಿಡಿದರೂ ಕಣ್ಣು ಮುಚ್ಚಿಕೊಳ್ಳುತ್ತಾರೆ. ಉಪಾಯವಿಲ್ಲದೆ ಹೊಸ ಲ್ಯಾಬ್‌ನಲ್ಲಿ ಮತ್ತೊಂದು ಬಾರಿ ಟೆಸ್ಟ್ ಮಾಡಿಸಿ ರಿಪೋರ್ಟ್ ತಂದುತೋರಿಸುತ್ತಿರುವಾಗ, ಅಲ್ಲೊಂದು ಕೋಟ್ಯಾಧಿಪತಿಸೀನ್ ಕ್ರಿಯೇಟ್ ಆಗುತ್ತದೆ. ತಾನು ನೀಡಿದ ಉತ್ತರ ಸರಿಯೇ ತಪ್ಪೇ ಎಂದು ಕುತೂಹಲದಿಂದ ಕಾಯುವವನನ್ನು ಸತಾಯಿಸುವವ ನಿರೂಪಕನಂತೆ, ಡಾಕ್ಟರು ಎದುರು ಕೂತ ರೋಗಿ ಮತ್ತು ರೋಗಿಯ ಕಡೆಯವರನ್ನು ಒಮ್ಮೆ ಅನುಕಂಪದಿಂದ ದಿಟ್ಟಿಸಿ, ರಿಪೋರ್ಟಿನತ್ತ ಕಣ್ಣುಹಾಯಿಸುತ್ತಾರೆ. ಜೋರಾಗಿ ಉಸಿರೆಳೆದುಕೊಂಡು ಒಮ್ಮೆ ಹುಬ್ಬು ಏರಿಸುತ್ತಾರೆ. ಮತ್ತೊಮ್ಮೆ ತುಟಿ ಕೊಂಕಿಸಿ ಏನೋ ಅನಾಹುತದ ಮುನ್ಸೂಚನೆ ಕಾಣುತ್ತಿರುವವರಂತೆ ಮುಖ ಮುದುಡಿಸುತ್ತಾರೆ.ಬಳಿಕ ರಿಪೋರ್ಟನ್ನು ಬದಿಗೆ ಸರಿಸಿ,ತನ್ನ ಮಾತಿಗಾಗಿ ಕಾತರಿಸಿ ಕುಳಿತವರತ್ತ ನೋಡಿ, ನೋ ಪ್ರಾಬ್ಲೆಮ್, ಎಲ್ಲ ನಾರ್ಮಲ್ ಇದೆ ಎಂದುಬಿಡುತ್ತಾರೆ. ಅಗ, ಆದಾಗಲೇ ಎರಡೆರಡು ಬಾರಿ ದುಬಾರಿ ಬೆಲೆ ತೆತ್ತು ಪರೀಕ್ಷೆ ಮಾಡಿಸಿಕೊಂಡು ಬಂದವನಿಗೆ ತಾನು ಕೇಳುತ್ತಿರುವುದು ಸಂತಸದ ಸಂಗತಿಯೇ ಅಥವಾ ದು:ಖದಸಂಗತಿಯೇ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಸಂತಸದ ಸಂಗತಿಯಾಗಿದ್ದರೆ, ಪರೀಕ್ಷೆಗೆಂದು ಕೊಟ್ಟ ದುಡ್ಡು ದಂಡವೆಂದು ಭಾಸವಾಗುತ್ತದೆ. ಖರ್ಚು ಮಾಡಿದ ದುಡ್ಡು ಸದುಪಯಾಗಿದೆಯೆಂಬ ಸುಖ ಅನುಭವಿಸಬೇಕಾಗಿದ್ದರೆ ಡಾಕ್ಟರಿಂದ ಎಲ್ಲವೂ ಅಬ್‌ನಾರ್ಮಲ್ ಎಂಬ ಮತು ಕೇಳಬೇಕಾಗುತ್ತದೆ. ಆದರೆ, ನಮ್ಮ ಬಿಳಿಮಲೆಗೆ ಇದು ಯಾವುದೂ ಆಗಲಿಲ್ಲ. ಪರೀಕ್ಷೆಗೆಂದು ಖರ್ಚು ಮಾಡಿದ್ದ ದುಡ್ಡು ವ್ಯರ್ಥವಾಗಲಿಲ್ಲ ಎಂಬ ತೃಪ್ತಿ ಮತ್ತು ಸುಖ ಎರಡನ್ನೂ ಬಹಳ ವರ್ಷಗಳಿಂದಲೇ ಹಲವು ಬಾರಿ ಅನುಭವಿಸಿದ್ದ.

ಇವನ ದೇಹವನ್ನು ಬಗೆ ಬಗೆಯಾಗಿ ಪರೀಕ್ಷೆ ಮಾಡಿದ ಮಿತ್ತಲ್ ಸಾಹೇಬರು,ಬಹುಕಾಲದ ಮಧುಮೇಹದ ಪರಿಣಾಮ ಹಾಗೂ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಕಾರಣದಿಂದಈ ಕ್ರಾಂತಿಕಾರಿಯನ್ನುಮೂರು ಇಂಗ್ಲಿಷ್ ರೋಗಗಳು- ಡಯಾಬೆಟಿಕ್ ರೆಟಿನೋಪತಿ, ಡಯಾಬೆಟಿಕ್ ನ್ಯೂರೋಪತಿ ಮತ್ತು ಡಯಾಬೆಟಿಕ್ ನೆಫ್ರೋಪತಿ -ಪ್ರೀತಿಸುತ್ತಿದ್ದು ಹಂತ ಹಂತವಾಗಿ ಕೊಲ್ಲುತ್ತಿದೆಯೆಂಬ ವರದಿ ನೀಡಿದರು. ಕೊನೆಗೊಂದು ಸಲಹೆಯನ್ನೂ ಕೊಟ್ಟಿದ್ದರು, ತ್ರಿಪತಿಗಳ ಕರುಣಿಗೆ ಪಾತ್ರನಾಗಿರುವವನನ್ನುತಿರುಪತಿ ತಿಮ್ಮಪ್ಪನಿಂದಲೂ ಕಾಪಾಡುವುದು ಸಾಧ್ಯವಿಲ್ಲ. ಆದರೆ ನಾನು ಹೇಳಿದಂತೆ ಕೇಳಿದರೆ ಸ್ವಲ್ಪ ಹೆಚ್ಚು ದಿನ ಬದುಕಬಹುದು.

ಡಾಕ್ಟರು ಹಾಗೆಲ್ಲ ಹೇಳಿದಾಗ ಅವನಿಗೆ ನೆನಪಾದದ್ದು, ಹಿಂದೊಮ್ಮೆ ಪಾಠ ಮಾಡುತ್ತಿದ್ದ ಆವ ಕಾಲವನಾದೊಡೆ ಮೀರಿ ಬಪ್ಪುದು ಸಾವ ಕಾಲ ಮೀರಬಹುದೇ? ಎನ್ನುವ ಮೋಹನ ತರಂಗಿಣಿಯ ಮಾತು.ಆ ಮಾತನ್ನು ಸುಳ್ಳು ಮಾಡುವ ಹಟ ಇವನಿಗೂ ಇರಲಿಲ್ಲ. ಹೇಳಿ ಕೇಳಿ ತಾನೊಬ್ಬ ಕ್ರಾಂತಿಕಾರಿ ಎಂದು ನಂಬಿದವನು.ಕ್ರಾಂತಿಕಾರಿಗಳು ಸಾವಿಗೆ ಹೆದರಬಾರದಲ್ಲ?

ಅದರೂ ಮರಣಕ್ಕೆ ಮದ್ದುಗಳಿಲ್ಲ ಎಂದಿದ್ದ ಸರ್ವಜ್ಞನನ್ನು ಸ್ವಲ್ಪ ಮರೆತು, ಅಂಬರೀಶ ಹೇಳಿದಂತೆ ತ್ರಿಪತಿಯ ಒಡೆಯ ಇನ್ಸುಲಿನ್‌ಗೆ ಶರಣಾದ.

 

‍ಲೇಖಕರು G

9 October, 2012

5 Comments

  1. harsha

    WOW What an article… This article not only reflect the capacity of a person but also capacity of a class to achieve things.

  2. H Keshav Nayak

    Boluvaru enu baredroo arthapurna mattu aakarshakavagi bareetare.adbhutavagide.

  3. ರಾಜಾರಾಂ ತಲ್ಲೂರು

    ಕಾಲೇಜಿಗೆ ಹೋಗುವ ದಿನಗಳಲ್ಲಿ ನಾವು ನಮಗೆ ರೋಲ್ ಮಾಡೆಲ್ ಅಂದುಕೊಂಡಿದ್ದವರು ಬಿಳಿಮಲೆ. ಈ ಲೇಖನ ಕೊಟ್ಟ ಸುದ್ದಿ ಶಾಕಿಂಗ್! ಆದರೆ, ಕಥೆ ಶಾಕಿಂಗ್ ಅಲ್ಲ. ೨೦ ವರ್ಷಗಳಿಗಿಂತ ಹೆಚ್ಚು ಅವಧಿಗೆ ಮಧುಮೇಹ ಹೊಂದಿರುವವರೆಲ್ಲ ಅದರ ಅಪಥಿಗಳನ್ನು ಅನುಭವಿಸಲೇ ಬೇಕು. ಈ ರೀತಿ ತೀವ್ರ ಅಪಥಿಗಳನ್ನು ಅನುಭವಿಸಿದ, ಕೈ-ಕಾಲು ಕತ್ತರಿಸಿಹಾಕಬೇಕಾದ ಸ್ಥಿತಿ ತಲುಪಿದ ಮಂದಿ ಪ್ರತೀ ಊರಿನಲ್ಲೂ ಇದ್ದಾರೆ. ವೈದ್ಯಕೀಯ ಅಂದಾಜುಗಳ ಪ್ರಕಾರ ಸುಮಾರಿಗೆ ೨೦೨೦ ವೇಳೆಗೆ ಪ್ರತೀ ೧೦ ಮಂದಿ ಭಾರತೀಯರಲ್ಲಿ ೬ ಮಂದಿ ಮಧುಮೇಹಿಗಳಾಗಲಿದ್ದಾರೆ. ಹಾಗಾಗಿಯೇ ಪ್ರತೀ ಗಲ್ಲಿಯಲ್ಲೂ ಫಿಸಿಷಿಯನ್ ಗಳು ತಮ್ಮ ಬೋರ್ಡುಗಳನ್ನು “ಕಾರ್ಡಿಯೋ ಡಯಾಬೆಟಾಲಜಿಸ್ಟ್” ಎಂದು ಬದಲಾಯಿಸಿಕೊಳ್ಳುತ್ತಿರುವುದು. ಮಧುಮೇಹ ಮತ್ತದರ ಅಪಥಿಗಳು ನೇರಾನೇರ ಜೀವನಶೈಲಿಗೆ ಸಂಬಂಧಿಸಿದವು. ಆದರೆ ಮಧುಮೇಹವನ್ನು ೫೦-೬೦ ವರ್ಷಗಳ ಕಾಲವೂ ಕಟ್ಟುನಿಟ್ಟಾಗಿ ನಿಭಾಯಿಸಿ (ತಮ್ಮ ತೊಂಭತ್ತರ ಹರೆಯದಲ್ಲೂ) ಆರೋಗ್ಯವಂತರಾಗಿರುವವರಿದ್ದಾರೆ. ಮೈ-ಕೈ ನೋವಾಗದಂತೆ ಕುಳಿತೇ ದುಡಿಯುವ ಜೀವನಶೈಲಿ ಇರುವವರಿಗೆಲ್ಲ ಬಿಳಿಮಲೆಯವರ ಬಗ್ಗೆ ಇರುವ ಈ ಲೇಖನ ಒಂದು ಪಾಠ ಆಗಬೇಕು.

  4. naushad

    very great bilimale, a real country talent have shown his talent. good article and way of expression was fine.

  5. Usha Rai

    ಬೋಳುವಾರರ ಬರಹದ ಈ ಭಾಗ ಓದಿ ಇಡೀ ಪುಸ್ತಕ ಓದಬೇಕೆನಿಸುತ್ತಿದೆ. ತುಂಬಾ ಆತ್ಮೀಯ ಬರಹ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading