ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೊಳುವಾರು ಎಂಬ ವಿಶ್ವಮಾನವ ಸಂತ..

ಸ್ವಾತಂತ್ರದ ಓಟ : ಒಂದು ಕಿರುನೋಟ

rajegowda-hosahalli-261x300

ಡಾ ರಾಜೇಗೌಡ ಹೊಸಹಳ್ಳಿ

ಬ್ರಿಟಿಷರು ದೇಶವನ್ನು ಎರಡು ತುಂಡುಮಾಡಿ ಸಣ್ಣ ತುಂಡನ್ನು ಜಿನ್ನಾರಿಗೂ ದೊಡ್ಡ ತುಂಡನ್ನು ನೆಹರೂಗೂ ಹಂಚಿಕೊಟ್ಟಾಗ ದೇಶ ಭಗಭಗನೆ ಉರಿಯಲಾರಂಭಿಸಿರುತ್ತದೆ. ಅಕ್ಕಪಕ್ಕದ ಎರಡು ದೇಶಗಳ ಸ್ವತಂತ್ರ ನಾಗರೀಕರು ತಮ್ಮದಲ್ಲದ ತಪ್ಪಿಗೆ ಮನೆ ಮಾರು ಬಿಟ್ಟು ಅಪರಿಚಿತ ತಾಣಕ್ಕೆ ಓಡುತ್ತಿದ್ದ ಘಳಿಗೆ ಅದು. ಎರಡೂ ರೈಲುಗಳು ಅಕ್ಕಪಕ್ಕದಲ್ಲಿ ನಿಂತಿದ್ದಾಗ ಕ್ಷಣಕಾಲ ಕೂಡಿದ್ದ ಪರಸ್ಪರ ನೋಟಗಳಲ್ಲಿದ್ದುದು ಸಿಟ್ಟೇ? ದ್ವೇಷವೇ? ನೋವೇ? ದುಃಖವೇ? ಅಳುವೇ? (ಪು 1046) ಇದು ದೇಶ ವಿಭಜನೆಯ ಸ್ಥೂಲನೋಟ.

ಉತ್ತರ ಭಾರತದಲ್ಲಿ ಅದರಲ್ಲೂ ಖುಷವಂತ್ ಸಿಂಗ್, ಅಮೃತಾ ಪ್ರೀತಂ, ತರುಣ್ ತೇಜಪಾಲ್ ಇಂತವರ ಬರವಣಿಗೆಯಲ್ಲಿ ದೇಶ ವಿಭಜನೆಯ ಕರಾಳ ದಿನಗಳನ್ನು ಓದಿರಬಹುದು, ಕೇಳಿರಬಹುದು, ನೋಡಿರಬಹುದು. ದಕ್ಷಿಣ ಭಾರತದ ಲೇಖಕರಲ್ಲಿ ಇಂಥದಿಲ್ಲ.

concept: Kiran bhat

concept: Kiran bhat

ಸಮರ್ಥವಾಗಿ ಕನ್ನಡದಲ್ಲಿ ನಮ್ಮೆದುರಿಗೆ ಇರಿಸಿದ ಬೊಳುವಾರ ಅವರ ಕಾದಂಬರಿಯ ಓಟ ಸಾಮಾನ್ಯದ್ದಲ್ಲ. 1111 ಪುಟದ ಮಹಾಯಾನ. ಲೇಖಕರು ತನ್ನ ಹುಟ್ಟೂರಿನ ಕಡೆ ಬ್ಯಾರಿಗಳೆಂಬ ಮುಸ್ಲಿಮರೇ ಹೆಚ್ಚಿರುವ ಸಕಲೇಶಪುರದ ಘಟ್ಟದ ಕೆಳಗೆ ಮುತ್ತುಪಾಡಿ ಎಂಬ ಊರಿಗೆ ವಾಘಾ ಗಡಿಯಿಂದ ಕಥನವನ್ನು ಸಿಂಧೂನದಿ ಕಾವೇರಿ ನೇತ್ರಾವತಿಗೆ ಸೇರಿತೋ ಎಂಬಂತೆ ಹರಿಯ ಬಿಡುತ್ತಾರೆ. ಹೀಗೆ ಹರಿದ ನದಿ ಪುನಃ ವಾಘಾ ಗಡಿಗೆ ಮೇಲ್ಮುಖವಾಗಿ ಹರಿಯುತ್ತಾ ಈ ಕಾದಂಬರಿ ಕೊನೆಗೊಳ್ಳುತ್ತದೆ.

ಈ ಕಾದಂಬರಿ ಓದಲು ಎಂಟೆದೆ ಬೇಕೆನಿಸದೇ ಇರುವುದಿಲ್ಲ. ಸ್ವಾತಂತ್ರ ಸಿಕ್ಕಿತು. ಬ್ರಿಟಿಷರನ್ನು ಓಡಿಸಿ ಆಗಿತ್ತು. ಈಗ ಓಡುವುದು ಭಾರತೀಯರ ಸರದಿ (ಪು 1050) ವಿಭಜಿತ ಭಾರತದಲ್ಲಿ ಎರಡು ಧರ್ಮಗಳು ಹೇಗೆ ಬದುಕಬೇಕು ಉಳಿಯಬೇಕೆಂಬುದನ್ನು ಲಾಹೋರಿನ ಯುವಕ ಮುತ್ತುಪಾಡಿಯಲ್ಲಿ ಚಾಂದ್ ಆಲಿ-ಚಾಂದಚ್ಚ-ಚಾಂದಜ್ಜನಾಗಿ ಬಾಳುವ ಕ್ರಿಯೆ ಭಾರತಕ್ಕೆ ಬೇಕಾಗಿದೆ ಎಂಬ ತಿರುಳು ಇದರಲ್ಲಿದೆ.

ಕುಳಿತುಂಡರೂ ಕರಗದ ಭವ್ಯ ಹವೇಲಿಗೆ ಚಾಂದ್ ಆಲಿ ಕಡೆಯವರು ಲಗ್ಗೆ ಹಾಕಿ ಆಕ್ರಮಣ ಮಾಡಿಕೊಳ್ಳುತ್ತಿದ್ದಾರೆ. ಸಂಪತ್ತಿನ ದಿಢೀರ್ ಒಡೆಯರಾಗುತ್ತಿದ್ದಾರೆ. ಇದೇ ಹವೇಲಿಯ ಗೋಡಾನಿನಲ್ಲಿ ಅದೇ ಮನೆಯ ಇಬ್ಬರು ಹೆಣ್ಣು ಮಕ್ಕಳಾದ ಮೊಹಿಂದರ್ ಬಾಬಿ ಹಾಗೂ ತಂಗಿ ತನ್ವೀರ್ ಕೈ ನೀಡಿ ಚಾಂದ್ ಅಲಿಯನ್ನು ಕರೆಯುತ್ತಿದ್ದಾರೆ. ಅವನು ಕುಲುಮೆ ಕೆಲಸದ ಹುಡುಗ. ಗಡಿ ದಾಟಿಸಲು ಮನಸ್ಸು ಮಾಡುತ್ತಾನೆ. ಗಡಿ ದಾಟಿ ಹಿಂದಕ್ಕೆ ಬರಲಾರದ ಸ್ಥಿತಿಗೆ ಮುಟ್ಟಿ ಬಿಡುತ್ತಾನೆ.

ಮೂವರೂ ಸೇರಿ ರೈಲು ಎಷ್ಟು ದೂರ ಸಾಗುತ್ತದೆಯೋ ಅಲ್ಲಿ ಹೋಗಿ ಬದುಕಲು ನಿರ್ಧರಿಸಿದ್ದಾರೆ. ಬಚ್ಚಿಟ್ಟು ತಂದಿದ್ದ ತೆಂಗಿನಕಾಯಿ ಗಾತ್ರದ ಬಟ್ಟೆಯ ಗಂಟಿನಲ್ಲಿದ್ದ ಒಡವೆ ಹಾಗೂ ಹಣವನ್ನು ಅವನಿಗೆ ನೀಡಿದ್ದಾರೆ. ವಿಧಿ ರೇಲ್ವೆ ಸ್ಟೇಷನ್ನಲ್ಲಿ ಬೇರೆ ಮಾಡಿ ಬಿಡುತ್ತದೆ. ಹುಡುಕುತ್ತಾ ಹುಡುಕುತ್ತಾ ಓಟ ಸಾಗುತ್ತದೆ.

ಜೋಳಿಗೆ ಬಾಬ ಚಾಂದ್ ಅಲಿಗೆ ಸಾಂತ್ವನ ನೀಡುತ್ತಾನೆ. ಗಾಂಧಿಗೆ ಗುಂಡು ಹಾಕುವವರು ತಮ್ಮ ಚಡ್ಡಿ ವೇಷವನ್ನು ಬದಲಾಯಿಸಿ ಆ ಚೀಲ ಇವನ ಬಳಿಯೇ ಬಿಟ್ಟು ಹೋಗಿರುತ್ತಾರೆ. ಕಣ್ಣೆದುರು ಗಾಂಧಿ ಕೊಲೆಯಾಗುತ್ತದೆ. ಹೈದರಾಬಾದ್-ಮದ್ರಾಸು-ಸಕಲೇಶಪುರ ಮುಟ್ಟಿ ಮುತ್ತುಪಾಡಿಗೆ ಚಾಂದಲಿಯ ಓಟ ಬಂದು ನಿಲ್ಲುತ್ತದೆ.

ಅದು ಜೋಳಿಗೆ ಬಾಬನ ಮನೆ. ಬಾಬಾನೊಡನೆ ಬಂದವನು ಚಾಂದ್ ಅಲಿ ಅವನ ಸ್ಥಾನ ತುಂಬಬೇಕಾದ ಪರಿಸ್ಥಿತಿ ಬರುತ್ತದೆ. ಯಜಮಾನನ ಸಾವಾಗುತ್ತದೆ. ಮೊದಲ ಗಂಡನಿಗೆ ಹುಟ್ಟಿದ ಮಗನೇ ಇವನೆಂದು ಆ ಮನೆಯ ವಿಧವೆಯು ಮಸೀದಿಗೆ ಹೇಳುವ ಮೂಲಕ ಆ ಮನೆ ಮಗನಾಗಿ ಬಿಡುತ್ತಾನೆ. ದಿಲ್ಲಿಯಲ್ಲಿ ಸಿಕ್ಕಿದ ಅದೇ ಜೋಳಿಗೆ ಬಾಬ ಇಲ್ಲಿ ಮತ್ತೊಮ್ಮೆ ಮಿಠಾಯಿ ವಾಲಾ ಆಗಿ ಊರಿಗೆ ಆಧ್ಯಾತ್ಮ ಹೇಳುತ್ತಾ ಧರ್ಮಾಧರ್ಮಗಳ ತಿಳಿವು ನೀಡುತ್ತಾ ಸಂಸಾರದ ತನ್ನ ಸ್ಥಾನವನ್ನು ಚಾಂದ್ ಅಲಿಗೆ ಬಿಟ್ಟು ಕೊಟ್ಟು ಭಾರತ ದೇಶದ ಅರ್ಧ ಶತಮಾನದ ಕತೆಯನ್ನು ಕಟ್ಟಿಕೊಡಲು ನೆರವಾಗುತ್ತಾನೆ.

ಬಾಬ ಇವನಾರೆಂಬ ವಿಚಾರ ಪರಸ್ಪರ ಇವರಿಬ್ಬರಿಗೆ ಮಾತ್ರ ಗೊತ್ತು. ಈ ದೇಶದಲ್ಲಿ ಸೂಫಿ-ಸಂತರು ಹಿಮಾಲಯದಿಂದ ಕನ್ಯಾಕುಮಾರಿವರೆಗೆ ಹರಿದಾಡಿರುವ ದಾರಿಯಲ್ಲಿ ಎರಡೂ ಧರ್ಮಗಳ ಹೆಜ್ಜೆ ಗುರುತುಗಳಿವೆ. ಅವಳಿ ಜವಳಿಯಂತೆ ಮಸೀದಿ ಮಂದಿರಗಳಿರುವಲ್ಲಿ ಮತಸಹಿಷ್ಣುತೆ ಇದೆ. ಈ ತಿಳಿವಳಿಕೆಯನ್ನು ಮುತ್ತುಪಾಡಿಯ ಹಿಂದೂ ಮುಸಲ್ಮಾನರು ತಮಗರಿವಿಲ್ಲದಂತೆ ಪಾಲಿಸುತ್ತಿದ್ದಾರೆ.

ಲೇಖಕರ ಉದ್ದೇಶ ಇಸ್ಲಾಮನ್ನು ಮುತ್ತುಪಾಡಿಯಲ್ಲಿ ಇರಿಸುವುದಲ್ಲ. ಅದನ್ನು ಹಿಂದೂಸ್ಥಾನದಲ್ಲಿ ಬೆರೆಸುವುದು. ಇಸ್ಲಾಮಿನ ಮಿದುಳಿಗೆ ಸ್ಥಳಾಂತರಿಸುವುದು. ಕಾದಂಬರಿಯ ಕಡೆಯಲ್ಲಿ ಬರುವ ಚಾಂದ್ ಅಲಿ ಮೊಮ್ಮಗಳ ಮೂಲಕ ಈ ತಿಳಿವಳಿಕೆ ಜಗದಗಲ ಹರಡಿ ಹಿಂದೂ-ಮುಸ್ಲಿಂ ಬೇರೆ ಬೇರೆಯಲ್ಲ ಇದು ಮಾನವ ಧರ್ಮವೆಂದು ತಿಳಿಸುವುದಾಗಿದೆ.

ಕಾದಂಬರಿಕಾರರು ತಮ್ಮ ಮುಂದಿರುವ ವರ್ತಮಾನದ ತಿರುವುಗಳನ್ನು ಭಾರತ ವಿಭಜನೆಯ ಸಂದರ್ಭದೊಳಗೆ ಮಿಲನಗೊಳಿಸುತ್ತಾ ಕಾಲ ದೇಶವನ್ನು ಸಮರ್ಥವಾಗಿ ಕೂಡಿಸುತ್ತಾರೆ. ಘಟನೆಗಳನ್ನು ಚಕ್ಕನೆ ಹೊಂದಿಸಿಕೊಳ್ಳುತ್ತಾರೆ. ಇದು ಕಣ್ಣೆದುರು ನಡೆದ ಕಥೆಯೋ ಕಾದಂಬರಿಕಾರರೇ ಅನುಭವಿಸಿದ್ದಾರೋ ಎಂಬ ಮಟ್ಟಿಗೆ ವರ್ಣಿಸಿ ಬಿಡುತ್ತಾರೆ. ಅದು ಗಾಂಧಿ ಕೊಲೆಯಿರಬಹುದು. ಬಾಬ್ರಿ ಮಸೀದಿ ಧ್ವಂಸ ಇರಬಹುದು. ಘಟ್ಟದ ಕೆಳಗೆ ನಡೆಯುತ್ತಿರುವ ಕೋಮು ಗಲಭೆಗಳಿರಬಹುದು. ಧರ್ಮಸ್ಥಳ ಮುಂತಾದ ವಿವರಗಳಿರಬಹುದು.

ನರಸಿಂಹರಾಯರು, ವಿ.ಪಿ. ಸಿಂಗ್, ಕುಲದೀಪ ನಯ್ಯರ್ ಹೀಗೆ ಯಾರೇ ಅಥವಾ ಯಾವುದೇ ಘಟನೆಯಿರಲಿ ಸತ್ಯ ಕಥೆಯಾಗಿ ಕಾದಂಬರಿಗೆ ಹೊಂದಿಕೊಂಡು ಬಿಡುತ್ತವೆ. ಇದೇ ಕಾದಂಬರಿಯ ಹೂರಣ. ಇಲ್ಲದಿದ್ದಲ್ಲಿ 1111 ಪುಟ ಕಾದಂಬರಿ ಓದಲು ಯಾರಿಗೆ ಸಾಧ್ಯವಾದೀತು! ಒಮ್ಮೆ ಪ್ರಾರಂಭವಾದ ಕಾದಂಬರಿ ಓದಿ ಓದಿ ಕೈತೂಕ ಸೋಲಬೇಕೆ ಹೊರತು ಮನಸ್ಸು ತೂಕ ಇಳಿಯುವುದಿಲ್ಲ. ಓದಿಸಿಕೊಂಡು ಹೋಗುವ ಇತ್ತೀಚಿನ ಬೃಹತ್ ಕಾದಂಬರಿಗಳಲ್ಲಿ ನಾನಿಂಥದನ್ನು ಕಾಣೆ!

ಘಟ್ಟದ ಪರಿಸರದ ಘಟ್ಟದ ಕೆಳಗಿನ ಜಗತ್ತನ್ನು ಇಷ್ಟು ಸವಿಸ್ತಾರವಾಗಿ ಹೇಳುವಾಗ ಭಾರತದೊಳಗೊಂದು ಇಸ್ಲಾಂ ಜಗತ್ತು ಇಷ್ಟು ಸಂಕೀರ್ಣವಾಗಿದ್ದು ಹಿಂದೂ ಜಗತ್ತಿನೊಳಗೆ ಹೊಂದಿಕೊಂಡು ಹೋಗುವ ಹೋಗಲೇಬೇಕಾದ ಸತ್ಯವನ್ನು ಹೇಳುವುದೇ ಕಾದಂಬರಿಯ ಉದ್ದೇಶ.

ಟಿ.ವಿ.ಯಲ್ಲಿ ರಾಮ ಕಾಣಿಸಿಕೊಳ್ಳದೆ ಇರುತ್ತಿದ್ದರೆ ರಸ್ತೆಯಲ್ಲಾಗಲೀ, ಹೋಟಲುಗಳಲ್ಲಾಗಲೀ ಪರಸ್ಪರ ಭೇಟಿಯಾಗುತ್ತಿರುವವರು ಅದುವರೆಗೆ ಹೇಳಿಕೊಂಡು ಬರುತ್ತಿದ್ದ ಗೌರವ ಸೂಚಕವಾದ ‘ನಮಸ್ಕಾರ’ ಪದದ ಜಾಗದಲ್ಲಿ ‘ಜೈ ಶ್ರೀರಾಮ್’ ಎಂಬ ಪದ ಆಕ್ರಮಿಸಿಕೊಳ್ಳುತ್ತಿರಲಿಲ್ಲ. ಅದುವರೆಗೆ ಮುತ್ತುಪಾಡಿಯ ಮನೆಗಳಲ್ಲಿ ಪೂಜೆ ಪಡೆಯುತ್ತಿದ್ದ ವಿಷ್ಣುಮೂರ್ತಿ, ಅನಂತೇಶ್ವರ, ಪಂಜುರ್ಲಿ, ಸಹಸ್ರ ಲಿಂಗೇಶ್ವರ, ಬೊಬ್ಬಯ್ಯ, ಪಂಚಲಿಂಗೇಶ್ವರ ಮೊದಲಾದ ನೂರುದೇವರುಗಳನ್ನು ಎರಡನೆಯ ಸಾಲಿನಾಚೆ ನೂಕಲು ಸಾಧ್ಯವಾಗುತ್ತಿರಲಿಲ್ಲ. (ಪು 782)

ಈ ಮೇಲಿನ ಅಭಿಪ್ರಾಯಗಳಿಗೆ ಪೂರಕವಾಗಿ ಅನೇಕ ಘಟನೆಗಳು ಈ ಕಾದಂಬರಿ ಮೂಲಕ ದೇಶದಲ್ಲಿ ನಡೆದಿವೆ. ಸುಮಾರು ಎರಡು ತಾಸಿನಷ್ಟು ಜಗತ್ತಿನ ಪರಿವೇ ಇಲ್ಲದೆ ರಾಜೀವ ತಾರಾನಾಥರ ಸಂಗೀತ ಕೇಳುತ್ತಿದ್ದವರಿಗೆ ಪಂಡಿತ ರಾಜೀವ ತಾರಾನಾಥರ ಕಛೇರಿಯಲ್ಲಿ ಅಪಸ್ವರ! ತಂತಿಗಳು ತುಂಡಾಗುತ್ತವೆ.. ಹೌದಾ.. ಬಿತ್ತಾ.. ನಿಜವಾಗಿಯೂ ಬಿತ್ತ.. ಬಾಬರಿ ಮಸೀದಿ ಬಿತ್ತಂತೆ (ಪು 934) ನರಸಿಂಹರಾಯರ ಸರ್ಕಾರ ಬಿತ್ತು. ವಾಜಪೇಯಿ ಸರ್ಕಾರ ಬಂತು. ಹೀಗೆ ಕಾದಂಬರಿಯು ಭಾರತ ದೇಶದ ಚರಿತ್ರೆಯನ್ನು ನಮ್ಮ ಮುಂದೆ ಇಡುತ್ತಾ ಹೋಗುತ್ತದೆ.

ಮುಂದೇನಾಯ್ತು.

ಮುತ್ತುಪಾಡಿಯಂತಾ ಹಳ್ಳಿಗೂ ಹಸಿರು – ಕಾವಿ ಬಾವುಟಗಳು ಬರಲಾರಂಭಿಸುತ್ತವೆ. ಆದರೆ ಕಾದಂಬರಿಯ ಮಾನವೀಯ ಪಾತ್ರಗಳೆಲ್ಲ ಒಂದಾಗುತ್ತವೆ. ಬಾವುಟಗಳನ್ನೆಲ್ಲಾ ಕೀಳುವ ಕಾರ್ಯಕ್ರಮವಂತೆ. ಇನ್ನು ಮುಂದೆ ದೇವಸ್ಥಾನ ಮತ್ತು ಮಸೀದಿಯ ಆವರಣದ ಹೊರಗೆ ಯಾರೂ ಬಾವುಟ ಹಾರಿಸಬಾರದು ಅಂತ ತೀರ್ಮಾನವಂತೆ (ಪು 902). ಗ್ರಾಮದೊಳಗಿನ ಪಂಚಾಯ್ತಿಗಳಲ್ಲಿ ಮಸೀದಿಯಲ್ಲಿರಲಿ, ದೇವಸ್ಥಾನದಲ್ಲಿರಲಿ ಅವು ಗ್ರಾಮಗಳನ್ನು ಒಗ್ಗೂಡಿಸುವ ಕ್ರಿಯೆಯಾಗಬೇಕು. ಬ್ಯಾರಿ ಸಮಾಜದ ಈ ಇಸ್ಲಾಂ ಮಂದಿಯ ಗ್ರಾಮದೊಳಗೆ ಎರಡೂ ಧರ್ಮದವರಿದ್ದಾರೆ. ತಪ್ಪಿದವರನ್ನು ಇತಿಮಿತಿಯೊಳಗೆ ಇಟ್ಟುಕೊಳ್ಳುವ ಮನಸ್ಸುಗಳಿವೆ. ಕ್ಷುದ್ರ ಮನಸ್ಸುಗಳು ಸಹಾ ಚಾಂದ್ ಅಲಿ ಅಂತವರಿಗೆ ಒಲಿದ ರೀತಿಗಳಿವೆ. ಇದೇ ಗ್ರಾಮ ಭಾರತ.

svatantryada-otaಮುತ್ತುಪಾಡಿಯ ಮುಸ್ಲಿಂ ಹೆಂಗಸರಿಗೆ ಮನೆಯಿಂದ ಹೋಗಲು ಅವಕಾಶ ಸಿಗುತ್ತಿದ್ದುದು ಕೇವಲ ಎರಡು ಸಂದರ್ಭಗಳಲ್ಲಿ ಮಾತ್ರ ಎಂಬುದನ್ನು ಚಾಂದ್ ಅಲಿ ಬಹಳ ಹಿಂದೆಯೇ ಅರ್ಥ ಮಾಡಿಕೊಂಡಿದ್ದ. ಮೊದಲನೆಯದು ಮಸೀದಿಯ ಪರಿಸರದಲ್ಲಿ ಉರೂಸು- ಮತ ಪ್ರಸಂಗ ನಡೆಯುತ್ತಿದ್ದಾಗ ಮತ್ತು ಎರಡನೆಯದು ಖಾಯಿಲೆ ಬಿದ್ದು ಆಸ್ಪತ್ರೆಗೆ ಹೋಗುವಾಗ (ಪು 335)

ಕಾದಂಬರಿಕಾರರು ಇಸ್ಲಾಂ ಮಹಿಳಾ ಲೋಕವನ್ನು ಹೊರ ಜಗತ್ತಿನಿದಿರಿಗಿಡುತ್ತಾರೆ. ಮೊದಲನೆಯದಾಗಿ ತನ್ನ ಪತ್ನಿಗೆ ಗೌರವ ನೀಡುವುದರ ಮೂಲಕ ಕಾದಂಬರಿ ನಾಯಕ ಚಾಂದ್ ಅಲೀ ಮಾದರಿಯಾಗುತ್ತಾನೆ. ಮದರಸಾದಲ್ಲಿ ಕುರಾನು ಓದುವುದರೊಂದಿಗೆ ಕನ್ನಡ ಕಲಿತು ಹೊರಜಗತ್ತಿಗೆ ತೆರೆದುಕೊಳ್ಳಲು ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ. ಇಲ್ಲಿ ಬರುವ ಲತೀಫ್ ಮಾಸ್ತರು, ಹೆಡ್ ಮಾಸ್ಟರ್ ನಾರಾಯಣಭಟ್ಟರು ಕಾದಂಬರಿಯುದ್ದಕ್ಕೂ ವರ್ತಮಾನದ ಸಾಮಾಜಿಕ ತಿಳಿವಳಿಕೆಯ ಮಾದರಿಯಲ್ಲಿ ಬರುತ್ತಾರೆ. ಹೆಣ್ಣುಮಕ್ಕಳು ಸಹಾ ವಿದ್ಯಾವಂತರಾಗಿ ಪವಾಡಗಳೇ ನಡೆಯುತ್ತವೆ. ಚಾಂದ್ ಅಲೀಯ ಮಗ-ಮಗಳು ವಿದ್ಯಾವಂತರಾಗಿ ದಿಲ್ಲಿಗೆ ಮಣಿಪಾಲದ ಬ್ಯಾಂಕ್ ನೌಕರನಾಗಿ ಮಗನೂ, ಅಮೆರಿಕೆಗೆ ಮೊಮ್ಮಗಳು ಹೋಗುವ ಸಂದರ್ಭ ಬರುತ್ತದೆ. ಇದು ಕಾದಂಬರಿಯು ಮುತ್ತುಪಾಡಿಯಲ್ಲಿ ನಿಂತು ಭೂಗೋಳಿಕರಣ ಹೇಳುವ ಕಥನ.

ಸುಮತಿ ಎಂಬ ಮನೆಕೆಲಸದಾಕೆ ಕಾದಂಬರಿಯಲ್ಲಿ ಬರುವ ಪ್ರಮುಖ ಪಾತ್ರ. ಹಳ್ಳಿಯ ಹೃದಯವು ಧರ್ಮಾತೀತವಾಗಿ ಅದೆಷ್ಟು ವೈಶಾಲ್ಯ ಹೊಂದಿರುತ್ತದೆಂಬುದಕ್ಕೆ ಒಂದು ನಿದರ್ಶನ. ನಿಮ್ಮ ದೇವರಿಗೆ ಹೆಂಡತಿ ಇರುತ್ತಿದ್ದ್ರೆ ಅವರು ಜನಾತುಮ್ಮನ ಹಾಗೇ ಇರುತ್ತಿದ್ದರು. ಎಂದು ಚಾಂದಜ್ಜನಿಗೆ ಹೇಳುವಾಗ ಧರ್ಮದ ಎಲ್ಲೆ ಕೊಚ್ಚಿ ಹೋಗುತ್ತದೆ. ಈ ಗ್ರಾಮೀಣ ಮಹಿಳೆಯ ಮಾತು ಸಣ್ಣದಿರುವಾಗ ಓದಿದ್ದ ಕುರಾನು, ಹಿಂದೂಗಳನ್ನು ಪ್ರೀತಿಸಬಾರದು ಅಂತ ಕಲಿಸಿಲ್ಲ. ದೊಡ್ಡವನಾದ ಬಳಿಕ ಓದಿದ ಭಗವದ್ಗೀತೆ ಮುಸ್ಲಿಮರನ್ನು ಕೊಲ್ಲು ಅಂತ ಹೇಳಲಿಲ್ಲ (ಪು 675) ಎಂಬ ವಿದ್ಯಾವಂತರ ತಿಳಿವಳಿಕೆಗೆ ಸರಿಸಮನಾದುದು. ಆಕೆಯ ಮನೆಯೂ ಒಳಗೊಂಡಂತೆ ಮುತ್ತುಪಾಡಿಯಲ್ಲಿ ಅನೇಕ ಅಂತರ್ಮತೀಯ ವಿವಾಹಗಳಾಗುತ್ತವೆ. ಕಂಡೂ ಕಾಣದಂತೆ ಬಗೆಹರಿಯುತ್ತವೆ.

ರೊಟ್ಟಿಪಾತುಮಾ ಎಂಬ ಬಡ ಮುಸ್ಲಿಂಮಳ ಪಾತ್ರ ಕಾದಂಬರಿಯಲ್ಲಿ ಮಹಿಳಾ ಪರವಾದ ಹೃದಯಭಾಗ. ಆಕೆ ರೊಟ್ಟಿ ತಟ್ಟಿ ಜೀವನ ಸಾಗಿಸುವವಳು. ಸರ್ಕಾರದಿಂದ ನೀಡಿದ ನಿವೇಶನ ಖಾಲಿ ಹಾಗೇ ಬಿಡುವಂತಿಲ್ಲ. ಒಂದೇ ಸಾರಿ ಕೂಡಿಟ್ಟ ಆ ಹಣವಿಲ್ಲ. ತುಸು ಸೆಂಟಿಮೀಟರ್ ಕಿರಿದು ರೊಟ್ಟಿ ಮಾಡಿ, ತಿನ್ನುವುದನ್ನು ತುಸು ಕಡಿಮೆ ಮಾಡಿ ಕೂಡಿಟ್ಟ ಹಣ ಆಕೆ ಎಲ್ಲಿ ಇಡುವುದು! ಯಾರನ್ನು ನಂಬುವುದು. ಮೈಮೇಲೆ ಬೆಳ್ಳಿಯೋ ಬಂಗಾರದ ರೂಪದಲ್ಲಿ ಇಡುವುದೇ!

ಈ ಚರ್ಚೆ ಆತಂಕ ಪ್ರಾರಂಭವಾಗಿ ಊರಿನ ಅಕ್ಕಸಾಲಿ ಅಂಗಡಿ ಮಾಲೀಕನ ಬಳಿ ಕೂಡಿಟ್ಟು ಲೆಕ್ಕ ಬರೆಸುತ್ತಾಳೆ. ಅವಳ ಲೆಕ್ಕ ಅಲ್ಲಿ ನೂರು ಇಟ್ಟರೆ ಮನೆಯಲ್ಲಿ ಒಂದು ಕಾಸು ತೆಗೆದಿಡುವ ಗಣಿತದ್ದು. ಕೂಡಿಟ್ಟ ಹಣವನ್ನು ಹಿಂತಿರುಗಿ ಕೊಟ್ಟಾಗ ಲೆಕ್ಕದಲ್ಲಿ ತುಸು ಜಾಸ್ತಿ ಇದ್ದುದನ್ನು ವಾಪಸ್ ಕೊಡಲು ಹೋಗುತ್ತಾಳೆ. ಇದು ಗ್ರಾಮೀಣ ನಿಯತ್ತು. ಈ ಸನ್ನಿವೇಶದ ವಿಚಾರ ಅದ್ಭುತ ವಿವರಣೆಯದು.

ನಿನ್ನ ಹತ್ರ ಇರುವ ಆ ಇಟ್ಟಿಗೆಯ ಒಂದು ಸಣ್ಣ ಚೂರಾದರೂ ಅವಳಿಗೆ ಕೊಡಬೇಕಂತೆ ಅದನ್ನು ಸೇರಿಸಿಯೇ ಮನೆಗೋಡೆ ಕಟ್ಟಬೇಕೆಂದು ಅವಳಿಗೆ ಕಳೆದ ಒಂದು ವರ್ಷದಿಂದಲೂ ಆಸೆಯಿತ್ತಂತೆ … ಚಂದ್ರಣ್ಣ ಏನೂ ಹೇಳಲಿಲ್ಲ (ಪು 958) ಏಕೆಂದರೆ ಅವನು ರಾಮಜನ್ಮಭೂಮಿ ಶಿಲಾನ್ಯಾಸಕ್ಕೆ ಊರಿನಿಂದ ಯಾರೋ ಪುಸಲಾಯಿಸಿದರೆಂದು ಹೋಗಿ ಬಂದು ತನ್ನ ಹೆಂಡತಿಗೆ ಮುಚ್ಚಿಟ್ಟಿಕೊಂಡು ತಂದಿದ್ದ ಗೋಡೆ ಒಡೆದ ನೆನಪಿಗೆ ಇರಿಸಿಕೊಂಡಿದ್ದ ಇಟ್ಟಿಗೆ ಚೂರನ್ನು ಆಕೆಗೆ ತಂದುಕೊಟ್ಟಾಗ ಅಯ್ಯೋ ರಾಮಾ, ರಾಮಾ…. ಅವರ ಮಸೀದಿಯ ಕಲ್ಲಿನ ತುಂಡನ್ನು ದೇವರ ಕೋಣೆಯಲ್ಲಿ ಯಾರಾದರೂ ಇಡುತ್ತಾರಾ…. ನೀವೆಲ್ಲಾ ಮೆರವಣಿಗೆ ಹೋಗಿ ಕೊನೆಗೆ ಒಡೆದು ಹಾಕಿದ್ದು ನಮ್ಮದೇ ದೇವಸ್ಥಾನವನ್ನ! (ಪು 950). ಈ ಮಾತು ಕೇಳಿ ಆ ಚೂರನ್ನು ಬಾವಿಗೆಸೆದಿರುತ್ತಾನೆ.

ಹೀಗೆ ಕಾದಂಬರಿಕಾರರು ಅಭೇಧ್ಯ ವಿಚಾರಗಳನ್ನು ಮುತ್ತುಪಾಡಿಯಲ್ಲಿ ಹೇಳುವಾಗ ಭಾರತದಲ್ಲಿ ನಡೆಯುತ್ತಿರುವ ವರ್ತಮಾನವನ್ನು ಚಾಂದ್ ಅಲೀ ಒಳಗಿಟ್ಟು ನುಣ್ಣಗೆ ಹೇಳುತ್ತಾರೆ. ಅದ್ವಾನಿಯವರ ರಾಮರಥ ಯಾತ್ರೆಯಲ್ಲಿ …. ಅವತ್ತು ರಾಮ ಶಿಲಾ ಪೂಜನಾ ಕಾರ್ಯಕ್ರಮ ಆಗಿದ್ದಾಗ ಸ್ಟೇಜಿನಲ್ಲಿ ಇದ್ದುದು ನೀವು ಅಂತಾ ಏನಾದ್ರು ಅವ್ರಿಗೆ ಗೊತ್ತಾಗಿಬಿಟ್ರೆ ಉಂಟಲ್ಲಾ? ನಿಮ್ಗೆ ಹುಬ್ಬಳ್ಳಿಯಿಂದ ಸ್ಪೆಷಲ್ ಕಾರು ಕಳಿಸಿ ಅಲ್ಲಿಗೆ ಕರೆಸಿ ಸ್ಟೇಜ್ ಮೇಲೆ ಕೂತುಕೊಳ್ಳಿಸ್ತಿದ್ರು. (ಪು 864) ಈ ಮಾತಿನ ಹಿಂದೆ ಊರಿನಲ್ಲಿ ಏನೂ ಅರಿಯದ ಚಾಂದ್ ಅಲೀಯನ್ನು ದಿಢೀರನೆ ಸ್ಟೇಜ್ ಮೇಲೇರಿಸಿ ಪ್ರಚಾರ ಮಾಡಿದ ಸಂಗತಿ ನಡೆದಿರುತ್ತದೆ. ನಾಚಿಕೆಯೋ ಭೀತಿಯೋ ಒಂದೂ ಅರ್ಥವಾಗುತ್ತಿಲ್ಲ ಅವನಿಗೆ.

ತಲಾಖ್ ವಿಚಾರದಲ್ಲಿ ಕಾದಂಬರಿಯಲ್ಲಿ ಬಹುವಾಗಿ ಚರ್ಚೆ  ನಡೆಯುತ್ತಿರುತ್ತದೆ. ಅವು ಇಂದು ಮುಸ್ಲಿಂ ಜಗತ್ತಿನ ಹೆಣ್ಣುಗಳಿಗೆ ಆತಂಕದ ಕ್ಷಣಗಳು. ಮುತ್ತುಪಾಡಿಯಲ್ಲಿ ಧರ್ಮದ ಅಂಕೆಯೊಳಗೆ ಬಗೆಹರಿಸಿಕೊಳ್ಳುವ ರೀತಿಗಳು ಯೋಗ್ಯ ಮಾದರಿಯಲ್ಲಿವೆ. ಅಂತೆಯೇ ಮೆಕ್ಕಾ ವಿಚಾರವಾಗಲೀ ಮಹಮದನ ವಿಚಾರವಾಗಲೀ, ಅಲ್ಲಿ ಇಹಲೋಕ ತ್ಯಜಿಸುವ ವಿಚಾರಗಳಾಗಿ ಚರ್ಚೆಗೊಳಗಾಗಿ ಧರ್ಮವಲಂಬನೆಗೆ ಮದ್ದು ನೀಡುತ್ತವೆ.

ನಂಬಿಕೆ ಎಂಬುದು ವೈಯಕ್ತಿಕ. ಸಮೂಹಕ್ಕೆ ಮಾರಕವಾಗಬಾರದು ಎಂಬ ಚರ್ಚೆಗಳಿವೆ. ಹೌದು ಮಗು ಯಾವುದೇ ಊರಿನ ಚಂದವನ್ನು ಅಳೆಯಬೇಕಾದ್ದು ಅಲ್ಲಿರುವ ಕಟ್ಟಡಗಳ ಎತ್ತರದಿಂದಲ್ಲ. ಬದುಕುತ್ತಿರುವ ಮನುಷ್ಯರ ಎತ್ತರದಿಂದ (ಪು 1016) ಈ ಮಾತು ಅಮೆರಿಕಾದಿಂದ ಬಂದಿರುವ ಮೊಮ್ಮಗಳು ಶಬನಾಳಿಗೆ ಚಾಂದಜ್ಜ ಹೇಳುವುದು. ಇಡೀ ಕಾದಂಬರಿಗೆ ತಂದು ಕೊಟ್ಟ ಮೌಲ್ಯವಾಗುಳಿಯುತ್ತದೆ. ಶತ್ರುಗಳ ಸಂಖ್ಯೆ ಕಡಿಮೆ ಮಾಡಿದಷ್ಟು ಮಿತ್ರರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. (ಪು 154) ಈ ಮಾತಿನ ತತ್ವವು ಈ ದೇಶಕ್ಕೆ ಬೇಕಾಗಿರುವ ಕಾದಂಬರಿಕಾರನ ಆಶಯ. ಅದು ಸಫಲವಾಗಿರುತ್ತದೆ.

ಈ ಬರವಣಿಗೆಯಲ್ಲಿ ಇಂತವು ಢಾಳಾಗಿ ಕಾಣುತ್ತದೆ. ಮುತ್ತುಪಾಡಿಯೆಂಬುದು ಒಂದು ಊರಲ್ಲ. ಚಾಂದ್ ಅಲಿ ಒಬ್ಬ ಮನುಷ್ಯನಲ್ಲ. ಅವನ ಬದುಕಿನುದ್ದದ ಕೊರಗು ಆತನೊಬ್ಬನದಲ್ಲ. ಅದು ಭಾರತ ದೇಶವು ಅನುಭವಿಸಿದ ದಾಖಲೆಗೊಂಡ ದಾಖಲಿಸಿಕೊಂಡು ವಿಸ್ತರಿಸಿಕೊಳ್ಳಬೇಕಾಗಿರುವ ಒಂದು ಪ್ರಜ್ಞೆ. ಕಾದಂಬರಿಯ ಜೋಳಿಗೆ ಬಾಬನು ಈ ದೇಶದ ಸೂಫಿಗಳ-ಸಂತರ ಪ್ರತಿನಿಧಿ.

ಮಣಿಪಾಲ ಪೈಗಳಲ್ಲಿ ಮಗನು ಕೆಲಸ ಪಡೆದ ಕೃತಜ್ಞತೆ. ಮಗಳನ್ನು ಅನುಕೂಲಸ್ಥರಿಗೆ ಕೊಟ್ಟುದು ಖುಷಿ ಆದರೆ ಆಕೆಯ ಮಗಳು ಅಮೆರಿಕಾ ಸೇರಿ ಒಬ್ಬ ಹಿಂದೂ ಪತ್ರಿಕಾ ಪ್ರತಿನಿಧಿಯನ್ನು ಪ್ರೀತಿಸಿ ಮದುವೆಯಾಗುವುದು ಚಾಂದ್ ಅಲಿಯ ಮನೆಯ ಅಭಿವೃದ್ಧಿ ಸಂಕೇತಗಳಾಗಿ ಕಾಡುವಿಕೆಯ ಜೊತೆಯಲ್ಲೆ ತಾನು ಹಳ್ಳಿಯನ್ನು ಬದಲಾಗಬೇಕಾಗಿರುವ ತನ್ನ ಗ್ರಾಮ ಸಮಾಜವನ್ನು ಎದುರಿಸಬೇಕಾಗಿ ಬಂದ ಸಂದರ್ಭವು ಆತಂಕದಿಂದ ಕೂಡಿದೆ.

ಐವರು ಪ್ರಧಾನ ಮಂತ್ರಿಗಳ ಅವಧಿಯಲ್ಲಿ ಚಾಂದಜ್ಜನ ಮನೆಯಲ್ಲಿ ಏರುಪೇರುಗಳಾಗಿದ್ದವು. ಜೀವನ ಪೂರ್ತಿ ಕರಿಮೆಣಸಿನ ಗಾತ್ರದ ದಪ್ಪಗಿನ ಕಪ್ಪು ಮಚ್ಚೆಯ ಗುರುತಿನ ತನ್ವೀರನ್ನು ಆಗ ಸಿಕ್ಕಾಳು ಈಗ ಸಿಕ್ಕಾಳು ಎಂದು ಅವಳು ನೀಡಿದ ಒಡವೆ ಗಂಟನ್ನು ಜೋಪಾನವಾಗಿಟ್ಟು ಹುಡುಕುತ್ತಯಿರುವಾಗ ನಾನು ಒಬ್ಬ ಪಾಕಿಸ್ತಾನಿ ಎಂಬ ಗುಟ್ಟು ಬಿಡದೆ ಪರದಾಡುವ ಏಕಾಂಗಿ ವೇದನೆಯ ನಡುವೆ ಮೊಮ್ಮಗಳ ಗಂಡ ಮತ್ತು ಆಕೆಯ ಮಾವ ಕರ್ತಾರ್ ಸಿಂಗ್ ನೊಡನೆ ವಾಘಾ ಬಾರ್ಡರ್ ಸಂದರ್ಶಿಸಲು ಹೊರಡಿಸುತ್ತಾರೆ.

circle-birdಅಲ್ಲಿ ಸ್ವರ್ಣ ಮಂದಿರದಲ್ಲಿ ಹುಡುಗನಾಗಿದ್ದಾಗ ಗಡಿ ಧಾಟಿಸುವಾಗ ಮನದೊಳಗೆ ಇಷ್ಟಪಟ್ಟಿದ್ದ ತನ್ವೀರಳು ಕಸಗುಡಿಸುವವಳಾಗಿ ಇದ್ದರೂ ಸತ್ತಂತೆ ಬದುಕುಳಿದು ಸುಮಾರು 60 ವರ್ಷದ ಮೇಲೆ ಇದಿರಾಗುತ್ತಾಳೆ. ಅವಳ ಅಕ್ಕ ಆಪರೇಷನ್ ಬ್ಲೂಸ್ಟಾರ್ ನಲ್ಲಿ ಮಡಿದಿದ್ದಾಳೆ. ಚಾಂದ್ ಅಲೀ ಎಂಬ ಮುಸ್ಲಿಂ ಹುಡುಗ ಗಡಿ ಧಾಟಿಸಿದವನು ಎದುರಿದ್ದರೂ ಆಕೆ ಗುರುತಿಸಿಲ್ಲ ಚಾಂದ್ ಅಲಿ ಗುರುತಿಸಿದ್ದಾನೆ. ಕಥೆ ಕೇಳಿದವನು ಹೇಳುವಂತಿಲ್ಲ! ಮರೆಯಲ್ಲಿ ಅತ್ತು ಸಾಕಾಗಿದ್ದಾನೆ. ಕರ್ತಾರಸಿಂಗ್ ಚಾಂದ ಅಲೀಯ ಮೊಮ್ಮಗಳ ಮಾವನೇ ತನ್ವೀರಳ ಅಣ್ಣ.

ಘಟನೆಗಳನ್ನು ಕಾದಂಬರಿಕಾರರು ಜೋಡಿಸುವ ಕ್ರಿಯೆ ಬೆರಗಾಗಿಸುತ್ತದೆ. ಭೂಮಿ ಗುಂಡಾಗಿದೆ. ಯಾರು ಯಾರಿಗಾದರೂ ಎಲ್ಲಾದರೂ ಎದುರಾಗುವ ಸೂಕ್ಷ್ಮಗಳು ಪವಾಡಗಳು ಇಲ್ಲಿವೆ.

ಮೊಮ್ಮಗಳ ಗಂಡ ಜೆಸ್ವಿನ್ ಸಂಶೋಧಕ ಉರುಳಿಸಿದ ಬರ್ಲಿನ್ ಗೋಡೆ ನೋಡಿ ಬಂದಿದ್ದಾನೆ. ವಾಘಾ ಬಾರ್ಡರ್ ನೋಡುತ್ತಿದ್ದಾನೆ. ಇಬ್ಬರನ್ನು ಆ ಹುಡುಗ ರೈಲು ನಿಲ್ದಾಣದಲ್ಲಿ ಅದಕ್ಕಿಂತ ಮೊದಲೇ ಕೊಂದುಬಿಟ್ಟಿದ್ದ.. ಮೀಸೆ ಮೂಡುತ್ತಿರುವ ಒಬ್ಬ ಹುಡುಗ ಏಕಕಾಲದಲ್ಲಿ ಒಳ್ಳೆಯವನೂ ಆದಾನು ಕೆಟ್ಟವನೂ ಆದಾನು ಎಂದು ಹೇಳಿದರೆ ನೀವು ನಂಬಲಾರಿರಿ, ಯಾರೂ ನಂಬಲಾರರು. ಇಬ್ಬರು ಹೆಣ್ಣು ಮಕ್ಕಳಿಗೆ ಸಹಾಯ ಮಾಡುವುದಾಗಿ ತನ್ನ ಜೀವವನ್ನೆ ಪಣವಾಗಿಟ್ಟುಕೊಂಡು ಹುಟ್ಟಿದ ನೆಲವನ್ನು ಬಿಟ್ಟು ಬರಲು ಧೈರ್ಯ ತೋರಿದವನೊಬ್ಬ ಕರೆದುಕೊಂಡು ಬಂದಿದ್ದ ಇಬ್ಬರನ್ನು ರೇಲ್ವೆ ಸ್ಟೇಷನಿನಲ್ಲಿ ಬಿಟ್ಟು ಪರಾರಿಯಾದನೆಂದರೆ ಏನು ಹೇಳಬೇಕು. (ಪು 1077)

ಈ ಮಾತನ್ನು ಮೊಮ್ಮಗಳ ಮಾವ ಚಾಂದಜ್ಜನಿಗೆ ಹೇಳುತ್ತಿರಬೇಕಾದರೆ ಏನಾಗಿರಬೇಕು! ತನ್ವೀರಳು ತನ್ನ ಗತಕತೆ ಹೇಳುವಾಗ ನೀನು ನಂಬಿಕೆಯಿಟ್ಟು ಕೊಟ್ಟಿದ್ದ ಬಂಗಾರದ ಒಡವೆಗಳನ್ನೆಲ್ಲಾ ಹಾಗೆಯೇ ಇಟ್ಟುಕೊಂಡಿರುವ ಹುಡುಗ ಇಲ್ಲೆ ಇಲ್ಲೆ ನಿನ್ನ ಕಣ್ಣೆದುರೇ ಇದ್ದಾನೆ ತನ್ವೀರ್ ಎಂದು ಗಟ್ಟಿಯಾಗಿ ಚೀರಬೇಕೆನಿಸಿತ್ತು. ಆದರೆ ಒಣಗಿದ ಗಂಟಲೊಳಗಿಂದ ಮಾತೇ ಹೊರಡುತ್ತಿಲ್ಲ ಕರ್ತಾರ್ ಸಿಂಗ್ ಗೆ ಗೊತ್ತಾಗಿ ಬಿಟ್ಟರೆ ಕಚಕ್ಕನೆ ಕತ್ತ ಕತ್ತರಿಸಿ ಕೆರೆಗೆ ಬಿಸಾಡುವುದು ಖಂಡಿತ! ಬೆವರಿದ ಮುಖವನ್ನು ಪಕ್ಕಕ್ಕೆ ತಿರುಗಿಸಿದ. ತಲೆ ತಗ್ಗಿಸಿ ಕುಳಿತು ಬಿಟ್ಟಿದ್ದರು ಚಾಂದಜ್ಜ (ಪು 1075) ಆ ರಾತ್ರಿ ಒಂದು ಹೊತ್ತಿನಲ್ಲಿ ಮೊಮ್ಮಗಳೊಡನೆ ಎದ್ದು ಹೋದ ಚಾಂದಜ್ಜ ಒಡವೆಗಳನ್ನು ಆಕೆಯ ಕಣ್ಣು ತಪ್ಪಿಸಿ ಸ್ವರ್ಣಮಂದಿರ ಕಾಣಿಕೆ ಡಬ್ಬಿಗೆ ಇಳಿಬಿಡುತ್ತಾನೆ.

ಒಂದು ದೇಶ ಒಂದು ಸಮಾಜ ಒಂದು ಕುಟುಂಬ ಬೆರತು-ಬಾಳದೆ ಹಗೆಯ ಕಡೆ ಧಾಟಿದರೆ ಏನೆಲ್ಲಾ ಅವಾಂತರಗಳಾಗುತ್ತವೆ. ಈ ಅವಾಂತರಗಳ ನಡುವೆಯೂ ಮಾನವೀಯತೆ ಹಿಂದೆ ಹೊರಟು ಮನಸ್ಸು ಹೇಗೆ ಮಾಗುತ್ತದೆ. ಆ ಮನಸ್ಸುಗಳು ಇಡೀ ಸಮಾಜವನ್ನು ಕಟ್ಟುವಲ್ಲಿ ಹೇಗೆ ಸಹಕಾರಿಯಾಗುತ್ತವೆ ಎಂಬುದಕ್ಕೆ ಮುತ್ತುಪಾಡಿಯ ಕಥನ ಒಂದು ಉದಾಹರಣೆ.

ಹಿಂದೂ-ಮುಸ್ಲಿಂ ಸಮಾಜವು ಸ್ವಾತಂತ್ರ್ಯ ತರಲು ಭಾರತ ದೇಶದಲ್ಲಿ ಒಂದಾಗಿ ಬ್ರಿಟಿಷರನ್ನು ಎದುರಿಸಿದೆ. ಭಾರತ ವಿಭಜನೆಯೂ ಆಗಿದೆ. ಎರಡೂ ಕಡೆ ಮನಸ್ಸು ಒಡೆದು ಹೋಗಿವೆ. ಒಟ್ಟು ಕುಟುಂಬ ಇಬ್ಭಾಗವಾದಾಗಿನ ಕಲಹ ಮಹಾಭಾರತ ನಡೆಯುತ್ತಲೇ ಇದೆ.

ಬರ್ಲಿನ್ ಗೋಡೆ ಕಿತ್ತೆಸೆದಂತೆ ಭಾರತ ಏಕೀಕರಣದತ್ತ ಪುನಃ ಹೆಜ್ಜೆ ಹಾಕಿದರೆ ಯಾರಿಗೆ ಬೇಡ ಹೇಳಿ ಇದೇ ಈ ಕಾದಂಬರಿಯ ಹೂರಣ. ಈ ನಾಡಿನಲ್ಲಿ ಟಿಪ್ಪು, ಹೈದರ್ ಬಂದು ಹೋಗಿದ್ದಾರೆ. ಬ್ರಿಟಿಷರು ಉರುಳಾಡಿ ಹೋಗಿದ್ದಾರೆ. ಪಶ್ಚಿಮದ ಸಮುದ್ರ ಕನ್ನಡದ ಎಲ್ಲೆಗೆ ಅಲೆಬಡಿದಿದೆ. ಇಸ್ಲಾಂ-ಕ್ರೈಸ್ತ-ಹಿಂದೂಗಳೆಲ್ಲವೂ ಒಂದರ ಮೇಲೊಂದು ಸವಾರಿ ಮಾಡುತ್ತಲೇ ಹೊಂದಾಣಿಕೆಯಾಗಿವೆ. ಇಂಥದರೊಳಗೆ ಬುದ್ಧನ ಗಾಂಧಿಯ ಬಸವನ ತತ್ವಗಳು ಬೇರುಬಿಟ್ಟಿವೆ. ಬೊಳುವಾರು ಇಂತಹ ಬೇರುಗಳನ್ನು ಹಿಡಿದು ವಿಶ್ವಮಾನವ ತತ್ವ ಹರಸುತ್ತ ಹೊರಟ ಸಂತನಂತೆ ಕಾಣುತ್ತಾರೆ.

‍ಲೇಖಕರು Admin

23 December, 2016

2 Comments

  1. Bolwar Mahamad Kunhi

    ನಿಮ್ಮನ್ನು ಯಾರಾದರೂ ಹೊಗಳಿದರೆ, ಅವರಿಗೆ ನೀವು ಸಲ್ಲಿಸಲೇಬೇಕಾಗಿರುವ ಕೃತಜ್ಞತೆಯನ್ನು ಬಹಿರಂಗಗೊಳಿಸಬಾರದು ಎಂದು ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನಂತೆ. ನಿಜವೇ? ನಾನು ಹುಡುಕಿದೆ; ಸಿಗಲಿಲ್ಲ. ನಾನು ಗೀತೆಯ ಮಾತು ಮೀರುವವನಲ್ಲ; ಆದ್ದರಿಂದ ಮೌನವಾಗಿರುವೆ.

  2. ಅಕ್ಕಿಮಂಗಲ ಮಂಜುನಾಥ

    ಲೇಖನ ತುಂಬಾ ಚೆನ್ನಾಗಿದೆ. ಲೇಖನ ಕೊಟ್ಟ ರಾಜೇಗೌಡರಿಗೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಪ್ರೀತಿಯ ಬೊಳುವಾರರಿಗೆ ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading