ಬಿ ಎಂ ಬಷೀರ್
ಹಿಂದೊಮ್ಮೆ ಕುವೆಂಪು ಅವರ ಮಹಾ ಕಾದಂಬರಿಗಳಲ್ಲಿ ಬರುವ ಒಂದು ಸಮುದಾಯದ ಪಾತ್ರಗಳ ಕುರಿತಂತೆ ಹಿರಿಯ ಲೇಖಕ ಬೊಳುವಾರು ಮುಹಮ್ಮದ್ ಕುಂಞ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಕುವೆಂಪು ಕಾದಂಬರಿಗಳಲ್ಲಿ ಮುಸ್ಲಿಮರಿಗೆ ನ್ಯಾಯ ಸಿಕ್ಕಿಲ್ಲ. ಅವರನ್ನು ಅದರಲ್ಲಿ ಕೆಟ್ಟದಾಗಿ ಚಿತ್ರೀಕರಿಸಲಾಗಿದೆ ಎಂದು ಪತ್ರಿಕೆಯಲ್ಲಿ ಬರೆದಾಗ, ಬೊಳುವಾರು ಕೆಲವರ ಕಿಡಿಗಣ್ಣಿಗೆ ಒಳಗಾಗಿದ್ದರು. ಮುಸ್ಲಿಮ್ ಸಮುದಾಯದೊಂದಿಗೆ, ಅವರ ಬದುಕಿನೊಂದಿಗೆ ತೀವ್ರವಾಗಿ ಬೆರೆಯುವ ಅವಕಾಶ ಸಿಕ್ಕದೇ ಇದ್ದ ಕಾರಣಕ್ಕಾಗಿಯೋ ಏನೋ, ತುರುಕರು ಸಣ್ಣದಾಗಿ ಅದರಲ್ಲೂ ಕೆಟ್ಟದಾಗಿ ಕುವೆಂಪು ಕಾದಂಬರಿಗಳಲ್ಲಿ ಬಂದು ಹೋಗುತ್ತಾರೆ. ಬೊಳುವಾರರ ಟೀಕೆ ಸರಿಯಾಗಿಯೇ ಇತ್ತು.
ಇದೀಗ ಬೊಳುವಾರರು ಸ್ವಾತಂತ್ರದ ಓಟ ಮಹಾಕಾದಂಬರಿಯನ್ನು ಬರೆದಿದ್ದಾರೆ. ಸಾಧಾರಣವಾಗಿ ಕರಾವಳಿಯ ಎಲ್ಲ ಬದುಕು ಕೂಡ ಒಂದು ರೀತಿ ರೋಮ್ಯಾಂಟಿಕ್ ಆಗಿ, ರಮ್ಯವಾಗಿ ಈ ಕಾದಂಬರಿಯಲ್ಲಿ ಮೂಡಿ ಬಂದಿದೆ. ಇಲ್ಲಿರುವ ಎಲ್ಲ ಪಾತ್ರಗಳು ಭೂಮಿಯಿಂದ ಹುಟ್ಟಿದವುಗಳು ಎನ್ನುವುದಕ್ಕಿಂತ, ಭೂಮಿಗಿಂತ ತುಸು ಹೆಚ್ಚು ಎತ್ತರದಲ್ಲಿ ಬದುಕುವಂಥವುಗಳು. ಅವರ ಕಲ್ಪನೆಯ ಮುತ್ತುಪ್ಪಾಡಿಯಲ್ಲಿ ಕೊಂಕಣಿ ಬ್ರಾಹ್ಮಣರು, ಮುಸ್ಲಿಮರು…ಹೀಗೆ ಒಂದಾಗಿ ಬದುಕುವ ಸೌಹಾರ್ದದ ರಮ್ಯ ಬದುಕಿನ ಕನಸೊಂದಿದೆ.
ಆದರೆ ಅವರ ಮುತ್ತುಪ್ಪಾಡಿಯಲ್ಲಿ ದಲಿತರನ್ನು ಸಂಪೂರ್ಣ ಮರೆತು ಬಿಟ್ಟಿದ್ದಾರೆ ಯಾಕೆ? ಎನ್ನುವುದು ನನ್ನ ಪ್ರಶ್ನೆ. ಈ ಪ್ರಶ್ನೆಯನ್ನು ನಾನು ಪ್ರೀತಿಯ ಬೊಳುವಾರರಲ್ಲೂ ಕೇಳಿದ್ದೆ. ಅವರು ಒಂದು ಪಾತ್ರವನ್ನು ತೋರಿಸಿ, ಅಲ್ಲಿ ಒಬ್ಬ ಇದ್ದಾನಲ್ಲ ಎಂದು ಮೆಲ್ಲಗೆ ಜಾರಿಕೊಂಡಿದ್ದರು. ಆದರೆ ಸ್ವಾತಂತ್ರದ ಓಟದಲ್ಲಿ ದಲಿತರನ್ನು ಬೊಳುವಾರರು ಸೇರಿಸಿಕೊಂಡಿಲ್ಲ ಎನ್ನುವುದಂತೂ ನೂರಕ್ಕೆ ನೂರು ಸತ್ಯ.
ಹೇಗೆ ಕೊಂಕಣಿ ಬ್ರಾಹ್ಮಣರು, ಕಾಮತರು ಮತ್ತು ಮುಸ್ಲಿಮರ ನಡುವೆ ಕೊಡುಕೊಳ್ಳುವಿಕೆ ಇತ್ತೋ, ಹಾಗೆಯೇ ಕರಾವಳಿಯಲ್ಲಿ ದಲಿತರು ಮತ್ತು ಮುಸ್ಲಿಮರ ನಡುವೆಯೂ ಕೊಡು ಕೊಳ್ಳುವಿಕೆ ಇದೆ. ಆದರೆ ಬೊಳುವಾರರ ಮುತ್ತುಪ್ಪಾಡಿಯಲ್ಲಿ ದಲಿತರು ಬದುಕಿದ್ದು ಕಡಿಮೆ. ಎಲ್ಲೋ ಒಂದು ಪಾತ್ರ ಬದಿಗೆ ಹೀಗೆ ಬಂದು ಹಾಗೆ ಹೋಗುತ್ತದೆ. ಅನಂತಣ್ಣ, ಅಥವಾ ಇನ್ನಿತರ ಪಾತ್ರವಾಗಿ, ಮುಸ್ಲಿಮರೊಂದಿಗೆ ಹೆಚ್ಚು ಅನ್ಯೋನ್ಯದಿಂದ ಬದುಕಬಹುದಾದ ದಲಿತರ ಬದುಕು ಸಂಪೂರ್ಣ ಕಾಣೆಯಾಗಿದೆ. ಬಹುಶಃ ಮುತ್ತುಪ್ಪಾಡಿಯ ಬ್ರಾಹ್ಮಣರಿಗೆ ಬೇಜಾರಾಗಬಾರದು ಎನ್ನುವ ಕಾರಣಕ್ಕಾಗಿ ಬೊಳುವಾರರು ದಲಿತರನ್ನು ಮುತ್ತುಪ್ಪಾಡಿಯಿಂದ ಹೊರಗಿಟ್ಟಿರಬಹುದೆ?
ಸ್ವಾತಂತ್ರದ ಓಟ ಕತಿ ಈ ನೆಲೆಯಲ್ಲೂ ಚರ್ಚೆಯಾಗಬೇಕು ಎನ್ನುವುದು ನನ್ನ ಆಶಯ. ಆಗ ಓಟ ಇನ್ನಷ್ಟು ಅರ್ಥಪೂರ್ಣವಾಗುತ್ತದೆ. ಅಥವಾ ಬೊಳುವಾರರು ಇನ್ನೊಂದು ಸ್ವಾತಂತ್ರದ ಓಟ ಬರೆಯುವಂತಹ ಅನಿವಾರ್ಯತೆ ಸಷ್ಟಿಯಾಗುತ್ತದೆ.




ಲೇಖಕ ಕೃತಿಯಲ್ಲಿ ತನ್ನ ಅಬಿಪ್ರಾಯ ವ್ಯಕ್ತಪಡಿಸುತ್ತಾನೆ ಅಲ್ಲದೆ ಓದುಗನ ಇಸಂ ಅಲ್ಲ.
ಮಲೆಗಳಲ್ಲಿ ಮದುಮಗಳು ಕಾದಂಬರಿಯ ಬಗ್ಗೆ ಬೋಳುವಾರರ ಟೀಕೆ ಅಸಂಬಂಧವಾಗಿದೆ. ಹಾಗೇ ಬೋಳುವಾರರ ಕೃತಿಯ ಬಗೆಗಿನ ನಿಮ್ಮ ಟೀಕೆ ಕೂಡ. ಆಯಾಯ ಕಾದಂಬರಿಗೆ ಒಂದು ಕಾಲ, ಒಂದು ದೇಶ(ಸ್ಥಳ)ಎಂದಿರುತ್ತದೆ. ಆ ಕಾಲದಲ್ಲಿ, ಆ ಸ್ಥಳದಲ್ಲಿ ಆಯಾಯ ಸನ್ನಿವೇಶಕ್ಕೆ ತಕ್ಕಂತೆ ಪಾತ್ರಗಳು ವರ್ತಿಸಿರುತ್ತವೆ. ಮಲೆಗಳಲ್ಲಿ ಮದುಮಗಳು ಕಾದಂಬರಿಯ ಕಾಲದ ಹಿನ್ನೆಲೆಯಲ್ಲಿ ನೋಡಿದರೆ ಈ ಟೀಕೆ ಹೇಗೆ ಅಸಂಬಂಧ ಎಂಬುದು ಗೊತ್ತಾಗುತ್ತದೆ.
ಇದು ಹೇಗೆ ಎಂದರೆ, ಕಾದಂಬರಿಗಳಲ್ಲಿ ಆ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ, ಈ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ ಎಂಬುದು, ಕಾದಂಬರಿಯ ಪಾತ್ರಗಳಿಗೂ ಮೀಸಲಾತಿ ಕೇಳಿದಂತೆ! ಹಿಂದೆ ಅನಾವರಣದ ಒಂದು ಪಾತ್ರ ಒಕ್ಕಲಿಗನಾಗಿದ್ದುದಕ್ಕೆ ಒಬ್ಬರು ವಿಮರ್ಶಕರು ವಾಚಕರವಾಣಿಗೆ ಆಕ್ಷೇಪಣೆ ಪಾತ್ರ ಬರೆದಿದ್ದರು!
“ಬೊಳುವಾರರು ಇನ್ನೊಂದು ಸ್ವಾತಂತ್ರದ ಓಟ ಬರೆಯುವಂತಹ ಅನಿವಾರ್ಯತೆ ಸಷ್ಟಿಯಾಗುತ್ತದೆ.” ಎಂಬ ನಿಮ್ಮ ಮಾತು: ಒಬ್ಬ ಕಾದಂಬರಿಕಾರನಿಗೆ ಬರೆಯುವ ಅನಿವಾರ್ಯತೆ ಒಳಗಿನಿಂದ ಸೃಷ್ಟಿಯಾಗುವಂಥದ್ದು. ಅದನ್ನು ಹೊರಗಿನಿಂದ ಬೇರೊಬ್ಬರು ತುಂಬುವುದು ಹೇಗೆ?
ಒಂದು ಕಲಾಕೃತಿಯಲ್ಲಿ ಏನಿಲ್ಲ ಎಂದು ನೋಡುವುದಕ್ಕಿಂತ, ಇರುವುದರಲ್ಲಿಯೇ ಎಷ್ಟು ಕಲಾತ್ಮಕವಾಗಿದೆ ಎಂದು ನೋಡಬಹುದಲ್ಲವೆ?
ನೀವು ಹೇಳಿದ್ದು ನಿಜವೇ ಆಗಿದೆ. ಆದರೆ ನನ್ನ ಆಕ್ಷೇಪಕ್ಕೆ ಸಕಾರಣವೂ ಇದೆ. ಸ್ವಾತಂತ್ರ್ಯದ ಓಟ ಕೃತಿ ನಡೆಯುವ ಮುತ್ತುಪ್ಪಾಡಿ ಇಡೀ ಒಂದು ದೇಶದ ಪರಿಕಲ್ಪನೆಯನ್ನು ನೀಡುತ್ತದೆ.. ಒಂದು ಮಹಾ ಕಾದಂಬರಿಯಲ್ಲಿ ಇಸವಿಗಳನ್ನು ಹಾಕಿ ಆ ಕಾಲ ಘಟ್ಟವನ್ನು ವಿಶ್ಲೇಷಿಸುತ್ತಾ ಹೋಗುತ್ತಾರೆ ಲೇಖಕರು. ಸ್ವಾತಂತ್ರ್ಯದ ಓಟ ಕ್ಕೆ ಅಂತಹದೊಂದು ಚರಿತ್ರೆಯ ಹಿನ್ನೋಟ ಇದೆ. ಕರಾವಳಿಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಮುಟ್ಟುತ್ತಾ ಆ ಕಾದಂಬರಿ ಹರಿಯುತ್ತದೆ. ಕರಾವಳಿಯಲ್ಲಿ ದಲಿತರ ಬದುಕು ಭಿನ್ನವಾಗಿದೆ. ಮುತ್ತುಪ್ಪಾಡಿಯಲ್ಲಿ ಬೊಳುವಾರು ಎಲ್ಲರಿಗೂ ಜಾಗ ಬದುಕು ಕೊಡುತ್ತಾರೆ. ಆದರೆ ದಲಿತರು ಮುತ್ತುಪ್ಪಾಡಿಯಿಂದ ಬಹುತೇಕ ಹೊರಗಿದ್ದಾರೆ. ಸಾಂಕೇತಿಕವಾಗಿ ಒಂದು ಪಾತ್ರ ಬಂದು ಹೋಗತ್ತೆ. ಅದು ಮುತ್ತುಪ್ಪಾಡಿ ಬದುಕಿನ ನದಿಯಲ್ಲಿ ಹರಿದು ಕೊಂಡು ಹೋಗೋದಿಲ್ಲ. ಬೋಳುವಾರಿಗೆ ದಲಿತರೊಂದಿಗೆ ವ್ಯವಹರಿಸುವ ಸಂದರ್ಭವೇ ಬನ್ದಿರಲಿಕ್ಕಿಲ್ಲವೊ… ಸ್ವಾತಂತ್ರ್ಯ ಎನ್ನೊದಕ್ಕೋ ದಲಿತರಿಗೂ ಸಂಬಂಧವೇ ಇಲ್ಲವೋ ? ತಮ್ಮ ಸ್ವಾತಂತ್ರ್ಯದ ಓಟದಲ್ಲಿ ಎಲ್ಲರನ್ನು ಪ್ರಜ್ಞಾ ಪೂರ್ವಕವಾಗಿ ಸೇರಿಸುವ ಲೇಖಕರು ದಲಿತರನ್ನು ಯಾಕೆ ಹೊರಗಿಟ್ಟರು? ಎನ್ನೋದು ನನ್ನ ಪ್ರಶ್ನೆ
ನನಗೆ ಬಷೀರವರ ಅಭಿಪ್ರಾಯಗಳೊಂದಿಗೆ ಸಹಮತಿ ಇದೆ. ಇನ್ನು ಮುಂದೆ ಲೇಖಕರು ತಮ್ಮ ಕೃತಿಗಳಲ್ಲಿ ಸಂವಿಧಾನ ಪ್ರಕಾರವಾಗಿ ಮೀಸಲಾತಿಯನ್ನು ಅಳವಡಿಸಿಕೊಳ್ಳಬೇಕು. ಆ ಪ್ರಕಾರ ಪಾತ್ರಗಳನ್ನು ಯೋಜಿಸಬೇಕು. ಆಗ ಮಾತ್ರ ಎಲ್ಲ ಸಮುದಾಯ, ಧರ್ಮದವರಿಗೆ, ತುಳಿಯಲ್ಪಟ್ಟವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯ. ಇದು ಇಂದಿನ ತುರ್ತು. ಬೋಳುವಾರ ಅವರು ಆದ ತಪ್ಪನ್ನು ಸರಿಪಡಿಸಲು ಕೂಡಲೇ ಇನ್ನೊಂದು ಕಾದಂಬರಿಯನ್ನು ಬರೆಯಲಿ ಎಂಬ ಪ್ರೀತಿಪೂರ್ವಕ ಆಗ್ರಹ.
ಸಾಹಿತ್ಯದಲ್ಲೂ ಮೀಸಲಾತಿ ಎಂಬ ಪದಗಳೇ ಹಾಸ್ಯಾಸ್ಪದ. ಇದು ಆ ಓದುಗರ ಓದಿನ ಮಟ್ಟ ತೋರಿಸುತ್ತದೆ ಅಷ್ಟೇ!. ಬಿ ಆರ್ ಸತ್ಯನಾರಾಯಣ ಅವರು ‘ಅನಾವರಣದ ……’ ಎಂದು ಹೇಳಿದ್ದಾರೆ. ಆದರೆ ಅದು “ಆವರಣ” ಎಂದಾಗಬೇಕು.
oh god, somalinga u r correct :):):)