ಜಯಶ್ರೀ ಭಟ್
ಬೇಸಿಗೆ ಎಂದರೆ ಉರಿವ ಧಗೆ, ಉದುರಿದ ಮಾವಿನ ಹೂಗಳ ಕ0ಪು, ತೊನೆದಾಡುವ ಹಳದಿ ಹೂಗೊಂಚಲು, ಗದ್ದೆ ಬದಿಯಲಿ ಮೈವೆತ್ತ ಗಿಳಿ ಮೂತಿ ಹೂವಿನ ಕಡುಗೆಂಪು, ಬೆಟ್ಟದಲ್ಲಿ ಬಿದ್ದ ಗೇರುಬೀಜ, ಘೊಮ್ಮೆನ್ನುವ ಹಲಸು, ಮಾವು, ಹುಳ್ಳನೆ ಹುಳಿ ಸಿಹಿ ಕವಳಿ ಹಣ್ಣು, ಮೆ ಫ್ಲವರ್ ಹೂಗಳ ಕಾರ್ಪೆಟ್ ಹೊದ್ದ ಹಾದಿ, ಯಕ್ಷಗಾನ, ಬಯಲಾಟ, ಮಾರಿಕಾಂಬೆಯರ ಜಂಟಿ ಮೇಳ. ಪರೀಕ್ಷೆ, ಪಾಸು ಫೇಲು, ರಜಾ, ನೆಂಟರ ಮನೆ, ಅಜ್ಜನ ಕೂದಲು ಹೊತ್ತು ತರುವ ತಂಗಾಳಿ, ಸಂಜೆ ವೇಳೆ ಘರ್ಜಿಸಿ, ಗದರಿಸಿ ಉದುರುವ ನಾಲ್ಕು ಹನಿ ಆಲಿಕಲ್ಲು ಮಳೆ, ಬೆವರಿಳಿಸುವ ಮಧ್ಯಾಹ್ನದಿ ಮಾವಿನಕಾಯಿ ನೀರುಗೊಜ್ಜು ಉಂಡು ಮಲಗಿದರೆ ನಶೆಯೇರಿಸುವ ನಿದಿರೆ…ಇನ್ನೇನೋ ಮರೆತಿದೆ…..ಮತ್ತಿನ್ನೇನೋ ಇದೆ…ಅದೇ…. ಹಾಂ, ಅದೇ ಜೇನು ಬೇಟೆ!
ಜೇನು ಹಾಗೂ ನಮ್ಮ ಬಾಲ್ಯದ ಬೇಸಿಗೆ ರಜೆಯ ದಿನಗಳು ಬೇರ್ಪಡಿಸಲಾರದ ಜೋಡಿ ಪದಗಳು. ಮೂವರು ಅಣ್ಣಂದಿರು ಬೇಸಿಗೆ ಬಂತೆಂದರೆ ’ಶಿಕಾರಿ’ ಮೋಡಿಗೆ ಬಂದು ಬಿಡುತ್ತಿದ್ದರು. ಹಿರಿಯವನು ಪುಕ್ಕಲ, ಆದರೆ ಹಿರಿಯವನೆಂಬ ಗತ್ತು, ಕೊನೆಯವನು ಶೂರ ಆದರೂ ದುಡುಕು ಸ್ವಭಾವ, ಮಧ್ಯಮನೇ ಜೇನು ಬೇಟೆಯ ಸ್ಟ್ರಾಟಜಿಸ್ಟ್. ಅವನೇ ಜೇನಿನ ಜಾಡು ಹಿಡಿದು, ಹೊಗೆಹಾಕಿ, ಹುತ್ತಕ್ಕಿ ಕೈ ಇಟ್ಟು ’ರಾಣಿ’ ಜೇನನ್ನು ಹಿಡಿದು ತರುವ ಚಾಣಾಕ್ಷ. ಇವನ್ನೆಲ್ಲ ಬೆರಗಿನಿಂದ
ನಿಂತು ನೋಡುವ ಖಾಯಂ ಪ್ರೇಕ್ಷಕಿಯರು ನಾವು!
ಬೇಸಿಗೆ ಬಂತೆಂದರೆ ಜೇನುಗಳಿಗೆ ಗುಂಪು ಒಡೆದು ಹೊಸ ಸಂಸಾರ ಹೂಡುವ ತರಾತುರಿ. ಅವು ತೋಟ ತುಡಿಗೆ ಹಾದು ತಮ್ಮ ಹೊಸ ’ನೆಲೆ’ ಕಂಡುಕೊಳ್ಳಲು ಹವಣಿಸುತ್ತಿದ್ದರೆ ಅವುಗಳಿಗಾಗಲೇ ಹೊಸ ಪೆಟ್ಟಿಗೆ ರೆಡಿ ಮಾಡಿ ಅವುಗಳ ಬೆನ್ನಟ್ಟಿ ಹೋಗಿ ರಾಣಿ ಜೇನು ಹಿಡಿದು ಗೂಡಿಗೆ ತಂದು ಬಿಡುವ ಅಣ್ಣಂದಿರು ಹಾಗೂ ಅವರ ಗೆಳೆಯರು ಆ ಜೇನುಗಳ ಹಿಂದೇ ಓಡುತ್ತಿದ್ದರು. ನಾವೂ ಏದುಸಿರು ಬಿಡುತ್ತಾ ಅವರು ಹೋದ ಹಾದಿಯಲ್ಲೇ ಹೋಗುತ್ತಿದ್ದೆವು. ಬೆಳ್ಳಗಿನ ಮೈಬಣ್ಣದ ನನ್ನ ತಂಗಿ ಬಿಸಿಲಲ್ಲಿ ಓಡಿ ಓಡಿ ಕೆಂಪಾಗಿ ಹೋಗಿರುತ್ತಿದ್ದಳು. ಜೇನಿನ ಹಿಂದೆ ಓಡುವವರಿಗೆ ಹೊತ್ತಿಲ್ಲ ಗೊತ್ತಿಲ್ಲ. ದಿನಂಪ್ರತಿ ಹೊತ್ತಿಗೆ ಸರಿಯಾಗಿ ಸ್ನಾನ, ಊಟ ಮಾಡುವ ನಾವೆಲ್ಲ ಕೈಗೇ ಸಿಗದೆ ಕಾಡು ಮೇಡುಗಳಲ್ಲಿ ಸಂಚರಿಸುವಾಗ ಅಮ್ಮನಿಗೆ ಸಹಜವಾಗೇ ಕಳವಳವಾಗುತ್ತಿತ್ತು.
ಕಾಲಿಗೆ ಕಪ್ಪಿದ ಸೀಗೆ ಮುಳ್ಳನ್ನೂ ಲೆಕ್ಕಿಸದೆ ನಾವೂ ಅವರ ಹಿಂದೆ ಓಡಿ ಬಂದು ಮಾರುದೂರದಲ್ಲೆ ನಿಂತು ಮುಂದಿನ ಮಹತ್ ಕಾರ್ಯಗಳನ್ನು ವೀಕ್ಷಿಸಲು ತಯಾರಾಗುತ್ತಿದ್ದೆವು. ಹಲವಾರು ಸಲ ಹೊಗೆ ಹಾಕಿ ಹುಳುಗಳನ್ನೆಲ್ಲ ಚದುರಿಸಿ ರಾಣಿಯನ್ನು ಹಿಡಿದು ತರುವ ಆಪರೇಶನ್ ಗೆ ತಾಸುಗಟ್ಟಲೆ ಸಮಯ ಆಗುತ್ತಿದ್ದರಿಂದ ಹಸಿವು ತಾಳಲಾರದೆ ನಾವು ಹತಾಶರಾಗಿ ಮನೆಗೆ ಮರಳುತ್ತಿದ್ದೆವು. ಆದರೆ ಹುಡುಗರು ಮಾತ್ರ ಹಿಡಿದ ಕೆಲಸ ಮುಗಿಸದೆ ಮನೆಗೆ ಮರಳಿದ ದಾಖಲೆಯೇ ಇಲ್ಲ.
ಒಂದು ಕ್ಷಣ ನಿಲ್ಲದೆ ರೆಕ್ಕೆ ಬಡಿಯುತ್ತ ಹರಿದಾಡುವ ಆ ಹುಳುಗಳ ಗುಂಪಿನಲ್ಲಿ ಒಂದು ರಾಣಿ ಜೇನು ಅದೆಲ್ಲಿ ಅವಿತು ಕುಳಿತಿರುತ್ತಿತ್ತೋ, ಅದು ಹೇಗೆ ಹುಡುಗರು ಅದನ್ನು ಎತ್ತಿಕೊಂಡು ನಮ್ಮ ಮನೆಯ ಅಂಗಳದಲ್ಲಿರುವ ಜೇನು ಪೆಟ್ಟಿಗೆಯಲ್ಲಿ ಕೂಡಿಹಾಕಿ ’ಗೇಟ್’ ಹಾಕುತ್ತಿದ್ದರೋ ಎಂಬ ನಿಗೂಢ ರಹಸ್ಯ ಇಂದಿಗೂ ಭೇದಿಸಲಾಗಿಲ್ಲ ನನಗೆ. ಇಂದೂ ನನ್ನ ಕಣ್ಣಿಗೆ ಎಲ್ಲಾ ಜೇನುಗಳೂ ಒಂದೇತರ ಕಾಣಿಸುತ್ತವೆ. ಅಥವಾ ಅವೆಲ್ಲಿ ತಮ್ಮ ಮುಳ್ಳಿನ ಬಾಣ ಬಿಟ್ಟಾವೋ ಎಂಬ ಹೆದರಿಕೆಯಲ್ಲಿ ಏನೂ ಕಾಣಿಸುವುದೇ ಇಲ್ಲ.
ಅಂಗಳದಲ್ಲಿ ತಂದಿಟ್ಟ ಅಥವಾ ಬಂಧಿಸಿಟ್ಟ ತಮ್ಮ ರಾಣಿಯ ಹಿಂದೇ ಬರುವ ಜೇನು ಹುಳಗಳಿಗೆ ’ಆಂಗ್ರಿ ಬರ್ಡ್ಸ್’ ಎನ್ನಬಹುದೇನೋ? ಅವು ರೊಚ್ಚಿಗೆದ್ದು ಬಾವಿಯಿಂದ ನೀರು ತರಲು ಹೋದ ಅಮ್ಮ, ಅಕ್ಕ ಯಾರನ್ನೂ ಬಿಡದೆ ತಮ್ಮ ’ಚುಚ್ಚು ಮದ್ದು’ ಕೊಡುತ್ತಿದ್ದವು. ’ಅಯ್ಯಯ್ಯೋ’ ಎಂದು ಕೂಗುತ್ತಾ ಒಳಗೋಡಿ ಬಂದು ಅರಿಶಿನ ತಳೆಯುವಷ್ಟರಲ್ಲಿ ಇಶ್ಟೆತ್ತರ ಉಬ್ಬಿರುತ್ತಿದ್ದ ಹಣೆ, ಮುಖ, ಮೂತಿ, ಮುಂದಿನ ಇಪ್ಪತ್ನಾಲ್ಕು ತಾಸೂ ಉಳಿದವರಿಗೆ ಹಾಸ್ಯದ ಸರಕು. ಉಬ್ಬಿದ್ದು ಇಳಿದ ಮೇಲೆ ಶುರುವಾಗುತ್ತಿದ್ದ ತುರಿಕೆ ತಡೆಯಲಸಾಧ್ಯವಾಗಿದ್ದು ’ಥೂ ಈ ಜೇನು ಸಾಕು, ಎಲ್ಲ ಸಾಕು’ ಎಂಬಂಥ ವೈರಾಗ್ಯ ತರಿಸುತ್ತಿತ್ತು. ಗೆಳೆಯರ ಗುಂಪಿನಲ್ಲಿದ್ದ ಒಬ್ಬನಿಗೆ ವಿಪರೀತ ಉಬ್ಬುಹಲ್ಲು. ಸಿಟ್ಟಿನಿಂದ ಅವನ ಬಾಯಿಯ ಒಳಗೇ ಹೊಕ್ಕ ಜೇನು ಅವನ ವಸಡಿಗೇ ಗುರಿಯಿಟ್ಟು ಬಾಣಬಿಟ್ಟುಬಿಡುತ್ತಿತ್ತು. ಅವನ ಮತ್ತಷ್ಟು ಉಬ್ಬಿದ ವಸಡು ನೋಡಿ ನಮಗೆಲ್ಲಾ ನಗು ಬರುತ್ತಿದ್ದರೆ ಪಾಪ ಅವನಿಗೆ ಆ ’ಉಬ್ಬರ’ ನಂತರದ ತುರಿಕೆ ಎಲ್ಲಾ ಹೇಗನ್ನಿಸುತ್ತಿತ್ತೇನೋ?
ಈ ’ಬೇಸಿಗೆ ಶಿಬಿರಗಳಲ್ಲಿ” ನಾವು ಜೇನುಗಳು ಅವುಗಳ ವಿವಿಧ ಪ್ರಬೇಧಗಳಾದ ಹೆಜ್ಜೇನು, ಕೋಲ್ಜೇನು, ತುಡು ಜೇನು ಮುಂತಾದವುಗಳ ಬಗ್ಗೆಯಷ್ಟೇ ಅಲ್ಲದೆ ಅವುಗಳು ತಯಾರಿಸುವ ತುಪ್ಪ ಯಾವ ಹೂವಿನ ಮಕರಂದದ್ದಾದರೆ ಯಾವ ರುಚಿ ಎಂದೆಲ್ಲಾ ಕಲಿತಿದ್ದೆವು. ಅಷ್ಟೇ ಅಲ್ಲ ಮಲೆನಾಡಿನ ಹಲವಾರು ಜಾತಿಯ ಮರಗಳ ಪರಿಚಯವೂ ಈ ಜೇನು, ಕವಳಿ ಹಣ್ಣಿನ ಬೇಟೆಯ ಸಮಯದಲ್ಲೇ ಆಗಿದ್ದು.
ಅಂಗಳದಲ್ಲಿ ಹೊಸ ಮನೆ ಪ್ರವೇಶ ಮಾಡಿ ಒಂದೆರೆಡು ದಿನಗಳಲ್ಲೇ ’ಆಂಗ್ರಿ ಬರ್ಡ್’ ನಿಂದ ನಾರ್ಮಲ್ ಮೋಡಿಗೆ ಬಂದಿರುತ್ತಿದ್ದ ಜೇನು ಹುಳಗಳು ಮತ್ತದೇ ಶ್ರದ್ಧೆಯಿಂದ ಹೂಗಳ ಮೇಲೆ ಹಾರಿ ಮಕರಂದ ಹೀರುವಾಗ ಅವುಗಳ ’ಅಡಾಪ್ಟಬಿಲಿಟಿ’ ಆಶ್ಚರ್ಯ ಹುಟ್ಟಿಸುತ್ತಿತ್ತು.
ಜೇನು ತುಪ್ಪ ತೆಗೆಯುವ ಕಾಯಕ ಯಾವಾಗಲೂ ಮಧ್ಯಮನಿಗೇ ಸಿಗುತ್ತಿದ್ದುದು ಯಾಕೋ ಏನೋ? ರೊಯ್ಯೆಂದು ತಿರುಗುವ ಡಬ್ಬಿಯಲ್ಲಿ ಅವನು ಒಂದೊಂದೇ ಫ್ರೇಮುಗಳನ್ನಿಟ್ಟು ಜೇನುತುಪ್ಪ ತೆಗೆಯುವಾಗ ಅವನ ಮುಖದಲ್ಲಿ ’ಉತ್ತಿ ಬೆಳೆದವರ ಸಂತೃಪ್ತಿ’ ಎದ್ದು ಕಾಣುತ್ತಿತ್ತು. ನಾವು ’ಆಹಾ!” ಎನ್ನುತ್ತಾ ಸಿಹಿಜೇನು ಸವಿದರೆ ಅವನಿಗೆ ಅಗಳ ಹಾರಿ ಜೇನು ಹಿಡಿದಿದ್ದೂ ಸಾರ್ಥಕವಾಯಿತೆಂಬ ಭಾವ ಕಣ್ಣಲ್ಲಿ ಹಾದು ಹೋಗುತ್ತಿತ್ತು.
ಮಳೆಗಾಲ, ಚಳಿಗಾಲ ಕಳೆದು ಮತ್ತೆ ಬೇಸಿಗೆ ಬಂದು ಮಾವು ಹೂ ಬಿಟ್ಟು ಗಾಳಿಯಲ್ಲಿ ಮಕರಂದದ ಕಂಪು ತುಂಬಿ ಬಾನಿನಲ್ಲಿ ಮೋಡಗಳು ಗರ್ಭ ಧರಿಸಿ ತೇಲಾಡುವವರೆಗೂ ನಮ್ಮ ಮನೆಯ ಹಿತ್ತಲ್ಲಲ್ಲಿ ಗಿಡಗಂಟಿಗಳ ಸಂದಿಯಲ್ಲಿ, ಮಹಡಿಯ ಮೇಲೂ ಅಷ್ಟೆಲ್ಲ ಜೇನು ಪೆಟ್ಟಿಗೆಗಳಿವೆಯೆಂಬ ಗುಮಾನಿಯೂ ಬಾರದಂತೆ ತಮ್ಮಷ್ಟಕ್ಕೆ ತಾವಿದ್ದುಬಿಡುತ್ತಿದ್ದವು ಆ ಶ್ರಮ ಜೀವಿಗಳು. ಬೇಸಿಗೆಯ ತಾಪ ಅವುಗಳಲ್ಲೂ ಹೊಸ ಸಂಚಲನ ಉಂಟುಮಾಡಿ ಮರಿ ರಾಣಿಯು ಮೊಟ್ಟೆಯೊಡೆದು ಹೊರಬರುತ್ತಿದ್ದಂತೆ ತನ್ನದೇ ಸಂಸಾರ ಹೂಡಲು ದೂರ ಹಾರಿಹೂಗುವ, ಅದರ ಬೆನ್ನಟ್ಟಿ ಹೋಗಿ ಹಿಡಿದು ತರುವ ಗುರುತರ ಕೆಲಸಕ್ಕಾಗೇ ಈ ಬೇಸಿಗೆಯ ದೀರ್ಘ ರಜೆಗಳಿವೆಯೇನೋ ಎನಿಸುತ್ತಿತ್ತು ನನಗೆ. ಮಾವಿನ ತೆನೆ ಕಂಡಾಗ, ಶಾಲೆಗೆ ರಜೆ ಬಂದಾಗ, ಬಾಲ್ಯದ ನೆನಪು ಸತಾಯಿಸಿದಾಗ ’ಜೇನು’ ಸವಿದಂತಾಗುತ್ತದೆ (ಲಿಟರಲಿ).
ಉಪಸಂಹಾರ: ಮೊದಲೆಲ್ಲ ತೊಟ್ಟ ಅಂಗಿಯಲ್ಲೇ ಬೆಟ್ಟ ಬೇಣ ಓಡಿ ಜೇನು ಹುಳುಗಳ ಹೆದೆಮುರಿಕಟ್ಟಿ ಕರೆತಂದು ಅಂಗಳದಲ್ಲಿ ಪೆಟ್ಟಿಗೆ ತುಂಬುತ್ತಿದ್ದ ಮಧ್ಯಮನಿಗೀಗಲೂ, ಮೊದಲಿನ ಹುಡುಗಾಟಿಕೆ ಇಲ್ಲವಾದರೂ ಜೇನು ವ್ಯವಸಾಯದ ತಲುಬು ಬಿಟ್ಟಿಲ್ಲ. ಅವನೊಬ್ಬ ಪಕ್ಕಾ ’ಜೇನು ಕುರುಬ’ನೇ ಸರಿ.
ಆದರೀಗ ಅವನು ತಾನೇ ತಯಾರಿಸಿದ ಕೈಗವಸು(ಗ್ಲೌಸು), ಶಿರಸ್ತ್ರಾಣ, ಉದ್ದನೆ ನಿಲುವಂಗಿ ಎಲ್ಲಾ ಧರಿಸಿ ’ಆಸ್ಟ್ರೋನಾಟ್’ತರ ಕಾಣುವ ಗೆಟಪ್ ನಲ್ಲಿ ಜೇನುಗಳ ಜೊತೆ ಇರುತ್ತಾನೆ. ಜೇನುಗಳ ಬಗ್ಗೆ ಅವನ ತಿಳುವಳಿಕೆಯೂ ಅಗಾಧವಾಗಿ ಹೆಚ್ಚಿದೆ. ಮೊದಲಿನ ಹಾಗೆ ’ರಾಣಿ ಸೆಲ್ ಡಿವಿಶನ್’ ಆಗಲು ಬಿಡದೆ ಮೊದಲೇ ರಾಣಿ ಮೊಟ್ಟೆಯ ಪತ್ತೆ ಹಚ್ಚಿ ಅದನ್ನು ನಾಶಮಾಡಿ ತೋಟ ತುಡಿಗೆ ಅಲೆದು ಜೇನು ಹಿಡಿಯುವುದನ್ನು ತಪ್ಪಿಸಿಕೊಂಡು ಬಿಡುತ್ತಾನೆ. ಆದರೂ ಬಾನಿನಲ್ಲಿ ಗುಯ್ಯೆಂದು ಸುತ್ತುತ್ತಾ ಸಾಗುವ ಜೇನು ದಿಬ್ಬಣ ಪ್ರತಿ ಬೇಸಿಗೆಯಲ್ಲೂ ಇದ್ದೇ ಇರುತ್ತದೆ. ಮರಗಿಡ ಕಡಿಯದೆ ಬಿಟ್ಟರೆ ಅದು ಇನ್ನು ಮುಂದೂ ಇರುತ್ತದೆ. ಕ್ಯಾಂಡಿ ಕ್ರಶ್ ಆಡುವ ಮಕ್ಕಳು ಒಮ್ಮೆ ಈ ಕಾಡಿನ ಜಾಡಿನಲ್ಲಿ ಹೋಗಿ ಜೇನು ಹಿಡಿದು ಸಿಹಿತುಪ್ಪ ತಿಂದಿದ್ದರೆ ಎಂದು ನನ್ನ ಹಾಗೆ ನಿಮಗೂ ಅನಿಸಬಹುದಲ್ಲವೇ?







Soo nice.