ಬೇಂದ್ರೆ ಹೇಳಿದ ಕಥೆ
-ಕುಸುಮಾಕರ ದೇವರಗೆಣ್ಣೂರ
ನಿರೂಪಣೆ – ಪಿ. ಚಂದ್ರಿಕಾ
ಒಂದು ದಿನ ಬೆಳಗ್ಗೆ ಒಬ್ಬ ಮಧ್ಯವಯಸ್ಸು ದಾಟಿದ ಗುಜರಾತಿ ಬಗೆಯಲ್ಲಿ ಸೀರೆ ಉಟ್ಟ ಹೆಣ್ಣು ಮಗಳು ತನ್ನ ಮೂವರು ಮಕ್ಕಳೊಂದಿಗೆ ಮುಂಬೈನಿಂದ ಬೇಂದ್ರೆಯವರ ಮನೆಗೆ ಬಂದಳು. ನಾನು ಆಕೆಯನ್ನು ಮನೆಯ ಒಳಗೆ ಕರೆದುಕೊಂಡು ಬರುವುದರೊಳಗೆ ಬೇಂದ್ರೆ ಎದುರಾದರು. ಆ ಹೆಣ್ಣುಮಗಳು ಇದೆ ಮೊದಲು ಸೊಲ್ಲಾಪುರಕ್ಕೆ ಬಂದಿದ್ದು. ಬೇಂದ್ರೆಯನ್ನು ನೋಡಿದ ಒಡನೆಯೇ ಅಷ್ಟು ಹೊತ್ತಿನ ವರೆಗೆ ಆಕೆ ಅಳಲಿಗೆ ಕಟ್ಟಿಕೊಂಡಿದ್ದ ಒಡ್ಡು ಒಡೆದುಹೋಯಿತು. ಬೇಂದ್ರೆಯವರ ಕಾಲ ಮೇಲೆ ಬಿದ್ದು ಅಳತೊಡಗಿದಳು. ಬೇಂದ್ರೆಯವರ ಕಣ್ಣಲ್ಲಿ ನೀರು ಬಂತು. ಅವರ ಮೂವರು ಎಳೆಯ ಮಕ್ಕಳು ಗಾಬರಿಯಾದವು. ಅವೂ ಅಳತೊಡಗಿದವು. ಅಷ್ಟರಲ್ಲಿ ಸೌಭಾಗ್ಯವತಿ ಬೇಂದ್ರೆ ಹೊರಗೆ ಬಂದರು. ಅವಳ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಆಕೆಯೂ ಅಳತೊಡಗಿದರು. ಏನು ನಡೆಯುತ್ತಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಬೇಂದ್ರೆಗೆ ಮಾತ್ರ ಬಂದ ಆ ಹೆಣ್ಣುಮಗಳ ಜೀವನದಲ್ಲಿ ಏನಗಿದೆ ಎಂದು ಊಹಿಸಿ ಗೊತ್ತಿದ್ದಿತು.
ಆಕೆಯನ್ನು ಒಳಗೆ ಕರೆದುಕೊಂಡು ಬಂದರಾದರೂ ಆಕೆಯನ್ನು ಬೇಂದ್ರೆ ಸಮಾಧಾನಿಸಲು ಹೋಗಲಿಲ್ಲ. ಅತ್ತೂ ಅತ್ತೂ ಅವಳ ಒಡಲಲ್ಲಿ ಇದ್ದ ದುಃಖವೆಲ್ಲಾ ಕಣ್ಣೀರಾಗಿ ಹೊರಬಿತ್ತು. ಕಣ್ಣುಗಳು ಬತ್ತಿದವು ಅವಳ ದುಃಖ ಕೋಪದ ಎಂದವಾಯಿತು, ‘ಈಗ ನಾನು ಏನು ಮಾಡಬೇಕು? ನನಗೆ ಗತಿಯೇನು? ನೀವೇ ದಾರಿ ತೋರಿಸಬೇಕು. ನಿಮ್ಮ ಗೆಳೆಯನಿಗೆ, ಈ ಮಕ್ಕಳ ತಂದೆಗೆ ನೀವು ಏನು ಹೇಳುತ್ತೀರ? ಅವರು ನಿಮ್ಮನ್ನು ತಮ್ಮ ಗುರು ಎಂದು ಭಾವಿಸಿದ್ದಾರೆ. ನೀವು ನಿಮ್ಮ ಶಿಷ್ಯನ ಕಿವಿ ಹಿಂಡಿ ಸರಿದಾರಿಗೆ ತರುತ್ತೀರಿ ಎಂದು ನಿಮ್ಮ ಬಳಿಗೆ ಬಂದಿದ್ದೀನಿ ನಾನು ನನಗಾಗಿ ಯೋಚಿಸುತ್ತಿಲ್ಲ. ಆದರೆ ಅವರು ನನಗೆ ಏಕೆ ದ್ರೋಹ ಮಾಡುತ್ತಿದ್ದಾರೆ? ನಾನು ಏನು ತಪ್ಪು ಮಾಡಿದ್ದೇನೆ? ನಾನು ನನಗಾಗಿ ಈ ಪ್ರಶ್ನೆಯನ್ನು ಕೇಳುತ್ತಿಲ್ಲ, ನಾನು ಗಟ್ಟಿಯಾಗಿ ನಿಲ್ಲಬಲ್ಲೇ. ತಂದೆಯಿದ್ದೂ ಈ ಮಕ್ಕಳು ಪರದೇಶಿಯಾಗಬಾರದು. ನನ್ನ ತವರು ಮನೆಯವರು ಶ್ರೀಮಂತರು. ಆದರೆ ನಾನವರನ್ನು ನೆನೆಸಲಿಲ್ಲ.

ಜನಕರಾಯನ ಮಗಳ ಹಾಗೆ ಬನಕ್ಕೆ ತೊಟ್ಟಿಲು ಕಟ್ಟಿದೆ. ನನಗ್ಯಾಕೆ ಈ ಮನುಷ್ಯ ದ್ರೋಹಮಾಡುತ್ತಿದ್ದಾನೆ?’ ಈ ಎಲ್ಲಾ ಮಾತುಗಳನ್ನು ಕೇಳಿ ಅಳುವ ಸರದಿ ಬೇಂದ್ರೆಯದ್ದಾಯಿತು. ಅವರ ಅಳುವಿಗೆ ಕಾರಣಗಳು ಎರಡು. ಒಂದು ತನ್ನ ಅಸಹಾಯಕತೆ- ತನ್ನನ್ನುಗುರು ಎಂದು ಕಾಣುತ್ತಿದ್ದ ಆ ಶಿಷ್ಯ ಹಿಡಿದ ತಪ್ಪು ಹಾದಿಯನ್ನು ಬಿಡುವಂತೆ ಮಾಡುವ ಸಾಮರ್ಥ್ಯ ತನ್ನಲ್ಲಿ ಇಲ್ಲ ಎಂಬ ಅಸಹಾಯಕತೆ. ಮನೆ ಕಳೆದುಕೊಂದ ಈ ಹೆಣ್ಣುಮಗಳಿಗೆ ನಾನೇನು ದಾರಿಯನು ತೋರಬಲ್ಲೆ? ಎಂಬ ಕಳವಳ ಕ್ಷಣ ಹೊತ್ತು ಸ್ಮಶಾನ ಮೌನ ನೆಲೆಸಿತು. ಬೇಂದ್ರೆಯವರ ಕಣ್ಣಲ್ಲಿ ಮಿಂಚು ಮೂಡಿತು. ‘ಈಗ ಸ್ನಾನ ಆಗಲಿ, ನಾವು ಅಳುತ್ತಾ ಕೂತರೆ ಈ ಮಕ್ಕಳೇನು ಮಾಡಬೇಕು? ಈ ಮನೆ ನಿನ್ನದು. ಇದು ನಿನ್ನ ತವರು ಮನೆ ಎಂದು ಭಾವಿಸು. ಮನುಷ್ಯ ದುರ್ಬಲನಲ್ಲ. ಶಾಂತವಾಗು’ ಎಂದು ತಮ್ಮ ಸೌಭಾಗ್ಯವತಿಯ ವಶಕ್ಕೆ ಆಕೆಯನ್ನು ಒಪ್ಪಿಸಿ ತಮ್ಮ ಕೋಣೆಗೆ ಬಂದರು. ನಾನೂ ಅವರ ಜೊತೆ ಹೋದೆ. ಸ್ವಲ್ಪಹೊತ್ತು ಶಾಂತರಾಗಿ ಕುಳಿತರು. ಅವರ ಮುಖ ಭಾವಾಭಿವ್ಯಕ್ತಿಗೆ ಹೇಳಿ ಮಾಡಿಸಿದ ಹಾಗಿತ್ತು. ಅವರು ತಮ್ಮ ಹೃದಯದ ಯಾವ ಭಾವಗಳನ್ನು ಮುಚ್ಚಿಡಲು ಅಸಮರ್ಥರಾಗಿದ್ದರು. ಕಲ್ಲಾಗಿದ್ದೇನೆ, ಚಿಗರೆಕಂಗಳ ಚಲುವಿ ಮತ್ತು ಉಯ್ಯಾಲೆಯಲ್ಲಿನ ಹೆಣ್ಣನ್ನು ಕುರಿತು ಬರೆದಿರುವ ಪದ್ಯಗಳನ್ನು ಓದಿದರು. ಪುಸ್ತಕಮುಚ್ಚಿಟ್ಟರು. ಅಷ್ಟರಲ್ಲಿ ಆ ಮಹಿಳೆ ಬಂದು ಎದುರು ಮೌನವಾಗಿ ಕೂತರು.
ಬೇಂದ್ರೆ ಗಂಭೀರವಾಗಿ ದೃಢತೆಯಿಂದ ಅವಳಿಗೆ ಹೇಳಿದರು ‘ನೀನು ಅಬಲೆಯಲ್ಲ, ನೀನು ಇಲ್ಲಿಗೆ ಬಂದೆ ಒಳ್ಳೆಯದೇ ಆಯಿತು. ನೀನು ಸೀತೆ ನಿಜ ಆದರೆ ನಾನು ವಾಲ್ಮೀಕಿ ಅಲ್ಲ. ಚಿಂತೆಯಿಲ್ಲ, ವಾಲ್ಮೀಕಿ ಸೀತೆಗೆ ಏನು ಮಾಡಿದನೋ ಗೊತ್ತಿಲ್ಲ ಮೊದಲು ನಿನ್ನ ಸಾಮರ್ಥ್ಯ ಗುರುತಿಸಿಕೋ ಆ ಕ್ಷಣ ನಿನಗೇ ಅರಿವಾಗುತ್ತದೆ ನೀನು ನಿರಾಶ್ರಿತೆಯಲ್ಲ ಎನ್ನುವುದು’. ಈ ನಡುವೆ ಆಕೆ ಮಾತಾಡತೊಡಗಿದಳು ‘ನಿಮ್ಮ ಮಾತನ್ನು ಕೇಳಿ ನನಗೆ ಗಾಬರಿಯಾಗುತ್ತಿದೆ. ನನ್ನ ಮಕ್ಕಳನ್ನು ನಾನು ಬೆಳೆಸಬಲ್ಲೆ, ಆದರೆ ಈ ಸುಸಸ್ಕೃತ ಮನುಷ್ಯ ನನಗೆ ಇಂಥಾ ದ್ರೋಹ ಮಾಡಿದನಲ್ಲ ಅದಕ್ಕೆ ಉತ್ತರವೇನು? ನಾನು ನಿರಾಶ್ರಿತೆ ಎನ್ನುವ ಕಾರಣಕ್ಕೆ ನನಗೆ ದುಃಖವಾಗಿಲ್ಲ, ನನ್ನ ಸಮಸ್ಯೆ ಅದು ಅಲ್ಲವೂ ಅಲ್ಲ. ಆದರೆ ಮನುಷ್ಯನಿಗೆ ಆಗುವ ನಿರಾಸೆ, ಅವನು ನಂಬಿದ ಮೌಲ್ಯಗಳಿಗೆ ಆಘಾತ ಉಂಟಾದಾಗ ಏನು ಮಾಡಬೇಕು?’ ಬೇಂದ್ರೆ ವಿಚಾರ ಮಗ್ನರಾದರು. ಅವರಿಗೆ ಒಂದು ಬಗೆಯ ಸಮಾಧಾನ ಆಯಿತು. ವಾಸ್ತವ ಭಯಾನಕವಾಗಿರುವುದಿಲ್ಲ ಆದರೆ ವಾಸ್ತವದ ಕಲ್ಪನೆ ಭಯಾನಕವಾಗಿರುತ್ತದೆ. ಈಗ ಆ ಮಹಿಳೆಯ ಸಂರಕ್ಷಣೆಯ ಭಾರ ತನ್ನದಲ್ಲ ಎಂದು ಅರಿವಾಗಿ ಸಮಾಧಾನವೂ ಆಯಿತು.
ಅಂದಿನಿಂದ ಆ ಹೆಣ್ಣಿಗೆ ಬೇಂದ್ರೆಯವರ ಮನಸೋಪಚಾರ ಶುರುವಾಯಿತು. ಅಲ್ಲಿಂದ ಒಂದು ತಿಂಗಳ ಕಾಲ ಪ್ರತಿದಿನ ರಾತ್ರಿ ಆ ಹೆಣ್ಣುಮಗಳಿಗೆ ಮಾಸ್ತಿಯವರ ‘ಗೌತಮಿ ಹೇಳಿದ ಕಥೆ’ಯನ್ನು ಹೇಳತೊಡಗಿದರು. ಕಥೆಯೇನೋ ಮಾಸ್ತಿಯವರದ್ದು. ಆದರೆ ಗೌತಮಿ ಪ್ರತಿದಿನವೂ ಹೊಸದಾಗಿ ಹುಟ್ಟುತ್ತಿದ್ದಳು. ಅದರಿಂದ ಅವಳ ಮೇಲೆ ದಿನ ದಿನವೂ ಪರಿಣಾಮ ಆಗುತ್ತಿದ್ದುದು ಕಂದುಬರುತ್ತಿತ್ತು. ಆ ಮಹಿಳೆಯ ಮುಖದಲ್ಲಿ ನಗೆ ಅರಳಿತು.
ಈ ನಡುವೆಯೇ ಬೇಂದ್ರೆ ಯಾವ ಕಾರಣವೂ ಇಲ್ಲದೆ ತಮ್ಮ ಕವಿತೆಯನ್ನು ಹಾಡಿದರು ‘ನಾರಿ ನಿನ್ನ ಮಾರಿ ಮ್ಯಾಲ ನಗೀನವಿಲ ಆಡುತ್ತಿತ್ತ’ ಆ ಮಹಿಳೆ ನಾವು ಕೂತಿದ್ದ ಕೋಣೆಗೆ ಬಂದರು ಮನೆಯಲ್ಲಿ ನಗೆಯ ಹಬ್ಬ ಆಯಿತು. ಆ ಮಹಿಳೆ ಮರುಹುಟ್ಟನ್ನು ಪಡೆದಿದ್ದಳು.
ಒಂದು ತಿಂಗಳು ಕಳೆಯಿತು. ಕಾಲ ಹೇಗೆ ಹೋಯಿತೋ ಗೊತ್ತಿಲ್ಲ. ಸೌಭಾಗ್ಯವತಿ ಬೇಂದ್ರೆ ಸೀರೆ ಕುಪ್ಪಸ ತಂದು ಉಡಿತುಂಬಿ ಆಕೆಯನ್ನು ಬೀಳ್ಕೊಟ್ಟರು.
ಇದಾದ ಕೆಲದಿನಗಳಲ್ಲೆ ಇಂಥದ್ದೇ ಇನ್ನೊಂದು ಘಟನೆ ನಡೆಯಿತು. ಸೊಲ್ಲಾಪುರದಲ್ಲಿ ಸರ್ ದೇಶ್ಮುಖ್ ಎನ್ನುವ ಮರಾಠಿ ಪ್ರಾದ್ಯಾಪಕರಿದ್ದರು. ಅವರ ಸಾಂಸಾರಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಆ ಬಿರುಗಾಳಿಯನ್ನು ಬೇಂದ್ರೆ ಶಾಂತಗೊಳಿಸಿದರು. ಅಲ್ಲಿಯೂ ಅವರು ಬಳಸಿದ ಮದ್ದು ‘ಗೌತಮಿ ಹೇಳಿದ ಕಥೆ’ ಒಂದು ತಿಂಗಳ ಉಪಚಾರ ಕ್ರಮ. ದಿನ ದಿನವೂ ಗೌತಮಿಯ ಹೊಸ ಹುಟ್ಟು.
ಮುಂದೆ ಕೆಲವು ವರ್ಷಗಳಾದ ಮೇಲೆ ಸರ್ ದೇಶಮುಖರ ಮನೆಯಲ್ಲಿ ಒಂದು ದುರಂತ ನಡೆಯಿತು. ಹದಿನಾಲ್ಕರ ಅವರ ಮಗ ಒಂದು ದಿನ ಆಡಹೋದವನು ಬಿದ್ದು ತಲೆಗೆ ಚಿಕ್ಕ ಗಾಯ ಮಾಡಿಕೊಂಡು ಬಂದ. ಡಾಕ್ಟರ್ ಹೇಳಿದರು, ‘ಇದೊಂದು ಸಣ್ಣ ಗಾಯ, ಅಯೋಡೆಕ್ಸ್ ಹಚ್ಚಿ ಎಲ್ಲಾ ಸರಿಯಾಗುತ್ತೆ. ನೀವು ಹೆಚ್ಚಿಗೆ ಗಾಬರಿ ಪಡುತ್ತಿದ್ದೀರಿ’ ಎಂದು. ಮೂರನೆಯ ದಿನ ಮಗ ಧನುರ್ವಾಯುವಿನಿಂದ ತೀರಿಕೊಂಡ. ದೇಶಮುಖರು ಖಿನ್ನತೆಗೆ ಒಳಗಾದರು. ಅದರಿಂದ ಹೊರಗೆ ಬರುವುದು ತಿಳಿಯದೆ ಬೇಂದ್ರೆಯವರ ಬಳಿಗೆ ಬಂದರು. ಬೇಂದ್ರೆ ಮತ್ತೆ ‘ಗೌತಮಿ ಹೇಳಿದ ಕಥೆ’ಯನ್ನು ಹೇಳಿ ಅವರನ್ನು ಉಪಚರಿಸಿದರು.
ಇದೆಲ್ಲಾ ಆಗುವಾಗ ಸೊಲ್ಲಾಪುರಕ್ಕೆ ಮಾಸ್ತಿಯವರು ಬಂದಿದ್ದರು. ಅವರು ಬೇಂದ್ರೆಯವರು ಹೀಗೆ ತಮ್ಮ ಕಥೆಯನ್ನು ಹೇಳಿ ಉಪಚರಿಸುತ್ತಾರೆ ಎನ್ನುವುದನ್ನು ಕೇಳಿಬಲ್ಲವರಿದ್ದರು. ಮಾಸ್ತಿಯವರಿಗೆ ತಮ್ಮ ಕಥೆಯನ್ನು ಬೇಂದ್ರೆಯವರ ಬಾಯಿಂದ ಕೇಳಬೇಕು ಎನ್ನುವ ಆಸೆಯಿತ್ತು, ಅದನ್ನು ವ್ಯಕ್ತಪಡಿಸಿದರು. ಬೇಂದ್ರೆ ಆ ಕಥೆಯನ್ನು ಮಾಸ್ತಿಯವರಿಗೆ ಹೇಳಿದರು. ಆ ಗೌತಮಿಯ ಹೊಸ ರೂಪವನ್ನು ಕಂಡು ಮಾಸ್ತಿ ಮಗುವಿನಂತೆ ಮೂಕವಿಸ್ಮಿತರಾದರು ಅದಕ್ಕೇ ನಾನೇ ಸಾಕ್ಷೀ.
ಬೆರಗು: ಬೇಂದ್ರೆಯವರು ಗೌತಮಿ ಹೇಳಿದ ಕಥೆಯನ್ನು ಮಾಸ್ತಿಯವರಿಗೆ ಹೇಗೆ ಹೇಳಿರಬಹುದು. ಕಥೆಯ ನೆಪವಾಗಿ ಗೌತಮಿ ಅವರ ಒಳಗೆ ಹೇಗೆಲ್ಲಾ ಬೆಳೆದಿರಬಹುದು ಇದರ ಒಂದು ವರ್ಷನ್ ಸಿಕ್ಕಿದ್ದರೂ ಎಷ್ಟು ಚೆನ್ನಾ ಅಲ್ಲವೇ?!






You have infused much curiosity in the story of Goutami (kept hidden throughout. I eagerly await to read the version told to Masti. Shall I get the chance to read it soon?
chandrika aa kathe oodabeku annuvahage madide ee lekhana.ooda beku athava avdhiyalle hakidere innu chenna
ಬಹಳ ಸ್ವಾರಸ್ಯವಾಗಿದೆ. ಬಸವನಗುಡಿಯಲ್ಲಿ ೫೦ರ ದಶಕ್ದಲ್ಲಿ ಮಾಸ್ತಿ ಮತ್ತು ಬೇ೦ದ್ರೆ ಒಟ್ಟಿಗೆ ನಡೆಯುತ್ತಿದ್ದನ್ನು ನೋಡಿದ್ದೆ. ಮಾಸಿ ಬೇ೦ದ್ರೆಯವಾ ಹೆಗಲ ಮೇಲೆ ಕೈ ಹಾಕಿಕೊ೦ಡು ನಡೆಯುತ್ತಿದ್ದರು . ಆಪ್ತಮಿತ್ರರೇ ಸರಿ!