ಡಾ.ಎನ್.ಜಗದೀಶ್ ಕೊಪ್ಪ
ಮೈ ಮನಗಳೀಗೆ ಹೊಸ ಭಾವಗಳನ್ನು ತರುತ್ತಿರುವ ಹಾಗೂ ನಾಡಿಗೆ ಆಗಮಿಸಿರುವ ಶ್ರಾವಣ ಕವಿ ಬೇಂದ್ರೆಯವರಿಗೆ ಹುಚ್ಚು ಹಿಡಿಸಿದ ಕಾಲ. ಅವರ ಕಾವ್ಯದ
ಸೃಷ್ಟಿಯುದ್ದಕ್ಕೂ ನಿರಂತರ ಹಲವಾರು ವರ್ಷಗಳವರೆಗೆ ಶ್ರಾವಣ ಪ್ರಸ್ತಾಪವಾಗುತ್ತಾ ದಾಖಲಾಗಿದೆ. ಬೇಂದ್ರೆಯವರ ಶ್ರಾವಣದ ಮಳೆ ಕುರಿತು ವಿವೇಚಿಸುವ ಮುನ್ನ ಕನ್ನಡ ನವೋದಯ ಕಾವ್ಯದ ಕವಿಗಳು ಪ್ರಕೃತಿಯನ್ನ ನೋಡಿದ ಬಗ್ಗೆ ಎ.ವಿ. ನಾವಡ ಅವರ ಮಾತು ಪ್ರಸ್ತುತ ‘ಆಧುನಿಕ ಕನ್ನಡ ಕವಿತೆ ಮೈದಾಳುವ ಮುನ್ನ ಕವಿತೆಯು ಕಥೆ ಹೇಳುವುದನ್ನೇ ತನ್ನ ಬಹು ಮುಖ್ಯ ಉದ್ದೇಶವಾಗಿ ಹೊಂದಿತ್ತು. ಪ್ರಕೃತಿಯ ವಿವರಗಳು ಬಹು ಮಟ್ಟಿಗೆ ಅಲಂಕಾರಿಕವಾಗಿ ಬರುತ್ತಿದ್ದವು. ಕ್ರಮೇಣ ಕಥೆ ಹೇಳುವ ಹೊಣೆಯು ಕಥೆ-ಕಾದಂಬರಿಗಳದ್ದಾದ ಮೇಲೆ ಕವಿತೆಯು ನಿಸರ್ಗವನ್ನು ಕೇವಲ ವರ್ಣನೆಯ ಪರಿಕರವಾಗಿ ಉಳಿಸಿಕೊಳ್ಳದೆ, ಅದರೊಂದಿಗೆ ಮನುಷ್ಯನಿಗಿರುವ ಸಂಬಂಧವನ್ನು ಕುರಿತು ಚಿಂತನೆಯಲ್ಲಿ ತೊಡಗಿತು. ಕುವೆಂಪು-ಬೇಂದ್ರೆ ಪು.ತಿ.ನ. ಮುಂತಾದ ಪ್ರಮುಖ ಕವಿಗಳು ಈ ಸಂಬಂಧವನ್ನು ಕುರಿತು ತಮ್ಮದೇ ಆದ ಸಿದ್ಧಾಂತಗಳನ್ನು ತಮ್ಮ ಕವಿತೆಯ ಸಮಗ್ರ ಶರೀರದಲ್ಲಿ ರೂಪಿಸಿಕೊಟ್ಟದ್ದಾರೆ.
‘ಋತುಮಾನಗಳು ಉಂಟುಮಾಡುವ ವಿಭಿನ್ನ ಪರಿಸರಗಳು ಮನುಷ್ಯನ ನೂರಾರು ಭಾವ, ವಿಚಾರಗಳನ್ನು ಸ್ಪಷ್ಟಪಡಿಸುತ್ತವೆ, ಉದ್ದೀಪಿಸುತ್ತವೆ, ಪ್ರಚೋದಿಸುತ್ತವೆ. ಎಷ್ಟೋ ಸಾರಿ ಕವಿಯ ಮನಸ್ಸನ್ನು ಒಂದು ಲಹರಿಗೆ ತಂದು ನಿಲ್ಲಿಸುವ ಕೆಲಸವನ್ನು ಈ ಪರಿಸರ ಮಾಡುತ್ತದೆ. ಮೋಡವೋ, ಮಿಂಚೋ, ಚಿಗುರೋ, ಹೂವೋ ಕಣ್ಣಿಗೆ ಬಿದ್ದಾಗ ಒಳಗಿನ ವಿಚಾರಗಳನ್ನು ಹೊರತಂದು ಕವಿ ಅವನ್ನು ಅಲ್ಲಿ ತಿಕ್ಕಿನೋಡಬಹುದು.. .. ..ಬಗೆ ಬಗೆಯಾದ ಋತುಮಾನ ಸಂಬಂಧ ಸಾಧಾರಣವಾಗಿ ಇರುವಂತಹದ್ದು, ಕಾಣುವಂತಹದ್ದು. ಆದರೆ ಇದಕ್ಕೆ ವಿರುದ್ಧವಾದ ಅಂದರೆ ಮನುಷ್ಯನ ವಿಚಾರ ನಡವಳಿಕೆಗಳು ಋತುಮಾನದ ಪ್ರಕೃತಿಯ ಸ್ಥಿತಿಯನ್ನು ನಿರ್ಧರಿಸುತ್ತವೆ ಎಂಬ ವಿಚಾರವು ಪೌರಾತ್ಯ ಚಿಂತನೆಯಲ್ಲಿದೆ. ಆಳುವವರ, ಆಳಿಸಿಕೊಳ್ಳುವವರ ಧರ್ಮ-ಕರ್ಮ ಗಳಿಗು ಪ್ರಕೃತಿಯ ಅನುಗ್ರಹ ವಿಕೋಪಗಳಿಗು ಗಂಟು ಹಾಕುವುದರ ಹಿಂದೆ ಮನುಷ್ಯ ನಿಸರ್ಗ ಹಾಗು ಅದರ ಹಿಂದಿನ ಶಕ್ತಿ ಇವುಗಳ ಸಂಬಧವನ್ನು ಒಪ್ಪಿಕೊಂಡ ಮನಸ್ಥಿತಿ ಇದೆ. ಮನುಷ್ಯನ ತಪ್ಪು ಸರಿಗಳಿಗಾಗಿ ‘ಆ ಶಕ್ತಿ’ ನಿಸರ್ಗದ ಮೂಲಕ ಮನುಷ್ಯನನ್ನು ಶಿಕ್ಷಿಸ ಬಹುದು ಅಥವಾ ಅನುಗ್ರಹಿಸ ಬಹುದು ಎಂಬ ಹಿನ್ನೆಲೆಯಲ್ಲಿ ಋತುಗಳು ಒಂದು ರೀತಿಯಲ್ಲಿ ದೇವ ದೂತರಾಗುತ್ತವೆ. ಋತುಮಾನದ ಸಂಬಂಧ ಗ್ರಹಿಕೆಯ ಈ ಮಗ್ಗುಲೇ ಅಲ್ಲದೆ ಬೇಂದ್ರೆಯವರು ಶ್ರಾವಣಕ್ಕೆ ಇನ್ನೂ ಮಹತ್ವದ ಮಗ್ಗಲುಗಳನ್ನು ಕೊಟ್ಟು ದೈವಿಕ ಅಲೆಯೊಂದನ್ನು ಅವರು ಅಲ್ಲಿ ಗುರುತಿಸುವುದರಿಂದ ಬೇಂದ್ರೆಯವರಲ್ಲಿ ಶ್ರಾವಣಕ್ಕೆ ದೈವಿಕ ಅಂಶದ ನೆಲೆ ದೊರೆತಿದೆ. ಕವಿಯ ದೃಷ್ಟಿಯಿಂದ ಅನೇಕ ಮುಖ್ಯ ಘಟನೆಗಳು ಶ್ರಾವಣದಲ್ಲಿ ನಡೆದಿರುವ್ಯದರಿಂದ ಅವರ ಈ ಗ್ರಹಿಕೆಯನ್ನು ಸ್ಥಿರವಾಗಿಸಿವೆ’
ಬೇಂದ್ರೆಯವರ ಸಖೀಗೀತ ಸಂಗ್ರಹದ ‘ಶ್ರಾವಣದ ವೈಭವ’ದಿಂದ ಹಿಡಿದು ‘ನಾಕು ತಂತಿ’ ಸಂಕಲನದ ‘ಮತ್ತೆ ಶ್ರಾವಣಾ’ ‘ಮತ್ತೆ ಶ್ರಾವಣಾ ಬಂದ’ ಕವಿತೆಗಳವರೆಗು ಹಲವಾರು ಶ್ರಾವಣದ ಹಾಡನ್ನು ಹಾಡಿದ್ದಾರೆ. ಈ ಶ್ರಾವಣದ ಮೋಹ ಎಲ್ಲಿಯವರೆಗೆ ಬೇಂದ್ರೆಗೆ ಬೆಳೆದು ಬಂದಿತ್ತೆಂದರೆ ಅವರ ಪತ್ನಿಯ ಸಾವಿನ ಹೃದಯ ವಿದ್ರಾವಕ ಸನ್ನಿವೇಶದಲ್ಲಿಯೂ ಅವರು ಶ್ರಾವಣವನ್ನು ಮರೆಯಲಾರರು.
ತವರು ಮನಿಗೆ ಹೊಂಡೊ
ಸಡಗರವೇ ಸಡಗರ
ಮಲ್ಲಿಗೀ ಮಾಲಿ ತುರುಬಿಗೆ
ಅರಿಶಿಣಾ ಕುಂಕುಮ ಗಲ್ಲಾ, ಹಣೀ
ಹೊಸಾಸೀರಿ, ತುಂಬಿದ ಉಡಿ
ಉರಿಯೋ ಹಸೀಮಣಿಗೆ ಹೊರಟಿತ್ತು ಸವಾರಿ
ಶ್ರಾವಣಕ್ಕೆ ಹೊಸ ಹರೆ.
ಈ ಕವಿತೆಯ ಸಾಲುಗಳು ಬೇಂದ್ರೆಯವರ ಶ್ರಾವಣದ ಪ್ರತಿಭೆಗೆ ತಲೆಬಾಗುವಂತೆ ಮಾಡುತ್ತವೆ. ಬೇಂದ್ರೆಯವರ ಭೂಮಿ ಕುರಿತಾದ ನಿಲುವು ಹಾಗು ಶ್ರಾವಣ ಕುರಿತದ ನಿಲುವು ಸಮ್ಮಿಳನವಾಗುವುದು ಈ ಸಂದರ್ಭದಲ್ಲೆ. ಭೂಮಿ ರೂಪಕದ ಜೊತೆ ಜೊತೆಯಲ್ಲೇ ಇನ್ನೊಂದು ರೂಪಕವಾಗಿ ಶ್ರಾವಣ ಕವಿ ಬೇಂದ್ರೆಯವರ ಮನಸ್ಸಿನಲ್ಲಿ ಕೆಲಸ ಮಾಡುತ್ತದೆ. ಬದುಕಿನ ಕಾಲಘಟ್ಟದಲ್ಲಿ ಸ್ಥಿತ್ಯಂತರವಾದ ಅನೇಕ ಅನೇಕ ಘರ್ಷಣೆಗಳು ಶ್ರಾವಣದ ರೂಪಕದ ಮೂಲಕ ಪರಿವರ್ತನೆಗೊಂಡು ಆಶಾವಾದದ ಸಂಕೇತವಾಗಿ ಶ್ರಾವಣ ಬೇಂದ್ರೆಯವರಲ್ಲಿ ಅಭಿವ್ಯಕ್ತಿಗೊಂಡಿದೆ.
ಭೂಮಿ ಮತ್ತು ಶ್ರಾವಣ ಈ ಎರಡೂ ನೆಲೆಗಳು ಬೇಂದ್ರೆಯವರ ಕಾವ್ಯದ ಮುಖ್ಯ ಕೇಂದ್ರ ನೆಲೆಗಳು ಎಂದರೂ ತಪ್ಪಾಗಲಾರದು. ಶ್ರಾವಣ ಬೇಂದ್ರೆಯವರ ಪಾಲಿಗೆ ಸೃಜನಶೀಲತೆಯ ಸಂಕೇತ. ಅದಕ್ಕೆಂದೆ ಅವರು ಶ್ರಾವಣ ನನಗೆ ಹೊಸತನ ತರುತ್ತದೆ ಎಂದು ಹೇಳಿಕೊಂಡಿದ್ದಾರೆ.
ಶ್ರಾವಣದ ಮಳೆಯು ಸಾಧನಕೇರಿಗೆ ಬರುವ ಸಂಭ್ರಮವನ್ನು ಬೇಂದ್ರೆಯವರು ವಣರ್ಿಸುವುದು ಹೀಗೆ,
ಬಾರೋ ಸಾಧನ ಕೇರಿಗೆ
ಮರಳಿ ನೀನೀ ಊರಿಗೆ
ಮಳೆಯು ಎಳೆಯುವ ತೇರಿಗೆ
ಹಸಿರು ಏರಿದೆ ಏರಿಗೆ
ಹಸಿರು ಸೇರಿದೆ ಊರಿಗೆ
ಹಸಿರು ಚಾಚಿದೆ ದಾರಿಗೆ
ನಂದನದ ತುಣುಕೊಂದು ಬಿದ್ದಿದೆ
ನೋಟ ಸೇರದು ಯಾರಿಗೆ.. .. ..
ಕವಿತೆಯ ಮುಂದಿನ ಭಾಗದಲ್ಲಿ ಸಾಧನ ಕೇರಿಗೆ ಶ್ರಾವಣ ಬರುವ ಸಂಭ್ರಮವನ್ನು ಹರ್ಷದಿಂದ ಹೀಗೆ ಹೇಳುತ್ತಾರೆ,
ಮಾತೆಯ ಮೊಗವೇ ಹೊರಳಿದೆ
ಕೋಕಿಲಕೆ ಸವಿ ಕೊರಳಿದೆ
ಬೇಲಿಗೂ ಹೂ ಬೆರಳಿದೆ
ನೆಲಕೆ ಹರೆಯವು ಮರಳಿದೆ
ಭೂಮಿತಾಯಿ ಒಡಮುರಿದು ಎದ್ದಳೋ
ಶ್ರಾವಣದ ಸಿರಿ ಬರಲಿದೆ.
ಬೇಂದ್ರೆಯವರ ಕವಿತೆಗಳಲ್ಲಿ ‘ಮಳೆಯ’ ರೂಪಕವು ದಾರ್ಶನಿಕ ಹಿನ್ನೆಲೆಯಲ್ಲೂ ಕಾಣಿಸಿಕೊಳ್ಳುತ್ತದೆ. ಮುಗಿಲು ಜ್ಞಾನದ ಸಂಕೇತವಾಗಿ, ಆಧ್ಯಾತ್ಮಿಕ ಸತ್ಯವಾಗಿ ಸಹ ಗೋಚರಿಸಿದೆ. ಈ ಕಾರಣಕ್ಕಾಗಿಯೇ ಅವರು ಭೂಮಿತಾಯಿಯ ಮಗನಾದ ಶ್ರಾವಣನಿಗೆ ತಂದೆ ಮುಗಿಲರಾಯ ಎಂದೇ ಪರಿಭಾವಿಸುತ್ತಾರೆ. ಇದಕ್ಕೆ ಉದಾಹರಣೆ ಅವರ ಶ್ರಾವಣ ಕವಿತೆ
ಮೋಡಗವಿದ ಕಣ್ಣಿನವನು
ಮುದಿಯ ತಂದೆ ಮುಗಿಲರಾಯ
ನಿನ್ನನೇ ಬಯಸಿದಾ
ಕಣ್ಣ – ಕೆನ್ನೆ ತೊಯ್ಸಿದಾ
ಬಿಸಿಲ ಹಣ್ಣು ತಿಂದು ಹೊತ್ತು
ಹೆತ್ತ ನಿನ್ನ ಭೂಮಿ ತಾಯಿ
ಪಾಪ ನಿನ್ನ ನೆನಸಿತು.
ಬೇಂದ್ರೆಯವರ ಪಾಲಿಗೆ ಮನುಷ್ಯನ ಎಲ್ಲಾ ಮಾಯದ ಗಾಯಗಳಿಗೆ ಶ್ರಾವಣ ನೋವು ಶಮನ ಮಾಡುವ ಮುಲಾಮು ಇದ್ದ ಹಾಗೆ. ಅವರ ಪಾಲಿಗೆ ಮನುಷ್ಯನನ್ನು ನೋಯಿಸುವ, ಹಿಂಸಿಸುವ ಎಲ್ಲಾ ಸಂಗತಿಗಳು ಕಾಣೆಯಾಗುತ್ತವೆ. ಅದಕ್ಕೆಂದೆ ಅವರು,
ಶ್ರಾವಣಾ ಬಂತು ಕಾಡಿಗೆ ಬಂತು ನಾಡಿಗೆ
ಬಂತು ಬೀಡಿಗೆ ಶ್ರಾವಣಾ ಬಂತು
ಕಡಲಿಗೆ ಬಂತು ಶ್ರಾವಣಾ ಕುಣಿದ್ಹಾಂಗ ರಾವಣಾ
ಕುಣಿದಾವ ಗಾಳಿ ಬೈರವನ ರೂಪ ತಾಳಿ
ಶ್ರಾವಣಾ ಬಂತು ಘಟ್ಟಕ್ಕೆ ರಾಜ್ಯ ಪಟ್ಟಕ್ಕೆ
ಭಾವ ಮಟ್ಟಕ್ಕೆ
ಏರ್ಯಾವ ಮುಗಿಲು ರವಿ ಕಾಣೆ ಹಾಡೆ ಹಗಲು
ಎಂದು ಹಾಡಿ ಹಷರ್ಿಸುತ್ತಾರೆ. ಕವಿತೆಯ ಮೊದಲ ಸಾಲುಗಳಲ್ಲಿ ಶ್ರಾವಣ ನಾಡಿಗೆ ಬಂದ ಬಗೆಯನ್ನು ಬಣ್ಣಿಸುತ್ತಾರೆ. ಕಡಲಿಗೆ ಶ್ರಾವಣದ ಮಳೆ ಅಪ್ಪಳಿಸುವುದನ್ನು ರಾವಣನ ನೃತ್ಯಕ್ಕೆ, ಶ್ರಾವಣನ ಜೊತೆ ಬರುವ ಬಿರುಗಾಳಿಯನ್ನು ಭೈರವನ ತಾಂಡವ ನೃತ್ಯಕ್ಕೆ ಹೋಲಿಸುತ್ತಾರೆ. ಮುಗಿಲುಗಳ ಆರ್ಭಟದಲ್ಲಿ ರವಿ ಕಾಣೆಯಾದ ಬಗೆಯನ್ನು ಬಣ್ಣಿಸುತ್ತಾ, ರಾಜ್ಯಕ್ಕೆ ಶ್ರಾವಣ ಬರುವ ಸೂಚನೆಯ ಮೂಲಕ ಸಂತೋಷ ಸಮಾನತೆಗಳ ಮೌಲ್ಯವನ್ನು ಆಶಿಸುತ್ತಾ,
ಶ್ರಾವಣ ಬಂತು ಮನಿಗೆ ಕೂಡಿ ದನಿ ದನಿಗೆ
ಮೌನದ ನನಿ ಕೊನಿಗೆ
ಒಡೆದಾವೊ ಹಾಡು ರಸ ಉಕ್ಕುತಾವ ನೋಡು
ಶ್ರಾವಣ ಬಂತು ಬಂತು ಕಾಡಿಗೆ ಬಂತು ನಾಡಿಗೆ
ಶ್ರಾವಣದ ಋತುವಿನಲ್ಲಿ ಮನದ ಚೇತನಕ್ಕೆ ಹಷರ್ೋಲ್ಲಾಸ ಉಂಟಾಗಿ ಹಾಡುಗಳು ಉಕ್ಕುತ್ತವೆ ಎನ್ನುತ್ತಾರೆ.
ಶ್ರಾವಣದ ಮಳೆ ಬೇಂದ್ರೆಯವರ ಪಾಲಿಗೆ ಕೇವಲ ಹರ್ಷ – ಉಲ್ಲಾಸ – ಸಂಭ್ರಮದ ಸಂಗತಿಗಳಾಗಿ ಉಳಿದಿಲ್ಲ. ಬದಲಾಗಿ ಬಿಡುಗಡೆಯ ಸಂಕೇತವಾಗಿ ತೋರಿದೆ. ಅವರು 1944 ರಲ್ಲಿ ‘ಬಂದಿಕಾರ ಶ್ರಾವಣ’ ಕವಿತೆಯಲ್ಲಿ ಶ್ರಾವಣ ಬರಲಿರುವ ಸ್ವಾತಂತ್ರ್ಯದ ಈ ವಂದಿ ಮಾಗಧನ ಬರುವಿಕೆ ಸ್ವಾತಂತ್ರ್ಯ ಬರುವುದರ ಸೂಚನೆ. ಈ ಶ್ರಾವಣ ಬಂಧನವ ಬಿಡಿಸಬಲ್ಲ ಚತುರ, ಸ್ವಾತಂತ್ರ್ಯವನ್ನು ಅಪಹರಿಸಿದವರನ್ನು ಅಸ್ವಾತಂತ್ರ್ಯಕ್ಕೆ ದೂಡುವವನು. ‘ಬಂಧನದೊಳಿಹಲೊ ಜಗವಂದಿತರ ನಿಂದಿತರು ಬಂದೈ
ಬಿಡಿಸೈ ಶ್ರಾವಣ’ ಎಂದು ಪ್ರಾಥರ್ಿಸುತ್ತಾರೆ. ಶ್ರಾವಣದ ನೈಸಗರ್ಿಕ ಸ್ವರೂಪಕ್ಕು, ತನ್ನ ಪ್ರಾರ್ಥನೆಗೂ ಸಾಂಗತ್ಯವಿದೆ ಎಂದು ಪರಿಭಾವಿಸುವ ಕವಿ ‘ಬಂಧು ನೀ ಬೆಳೆಗೆ ಉತ್ಕಂದ ನೀ ಹೊಳೆಗೆ ಆನಂದ ಬಂಧೋ ಶ್ರಾವಣ’ ಎನ್ನುತ್ತಾರೆ. ಅಲ್ಲದೆ,
ಚಂಡ ರಾಹು ಗ್ರಾಸದಿಂದ ಬಿಡಿಸೈ ಜಗದ
ಚಂದಿರನೇ ಶ್ರಾವಣಾ
ನಿಂದಿಸುತ ಬಾಯ್ಮುಚ್ಚಿ ಸ್ಪಂದಿಸುವ ಬಡವರಾ
ಕ್ರಂದಿಸುವರೋ ಶ್ರಾವಣ
ಬಂಧ ಮುಕ್ತಿಯ ದಿನವೇ ಬಂದೆಯಾ ಬಾ ಬಳಿಗೆ ಎಂದು ಕರೆಯೊ ಶ್ರಾವಣ
ಎನ್ನುವ ಈ ಕವಿತೆ ನಾಡ, ಜಗದ ಕಾಳಜಿಯುಳ್ಳ ಕವಿತೆಯಾಗಿದೆ.
ಒಂದು ಋತುಗೀತೆ ಹಾಗೆ ಚಾರಿತ್ರಿಕ-ಪೌರಾಣಿಕ ಹಾಗು ಸಮಕಾಲೀನ ನೆಲೆಯಲ್ಲಿ ವ್ಯಾಪಿಸಬಹುದು ಎಂಬುದಕ್ಕೆ ಈ ಕವಿತೆ ಸಾಕ್ಷಿಯಂತಿದೆ.
ಬೇಂದ್ರೆಯವರು ಶ್ರಾವಣದ ಮಳೆಯನ್ನು ಕೇವಲ ಸಂಭ್ರಮದ ರೂಪಕವಾಗಿ ಮಾತ್ರ ಬಳಸಿಲ್ಲ, ತಮ್ಮ ಉಯ್ಯಾಲೆ ಸಂಕಲನದ ‘ಶ್ರಾವಣದ ಹಗಲು’ ಕವಿತೆಯಲ್ಲಿ ತಮ್ಮ ಬದುಕಿನ ಏಳು-ಬೀಳುಗಳ ಪ್ರತಿಬಿಂಬವನ್ನೇ ಕಾಣುತ್ತಾರೆ.
“ನೆಲ ಹಸಿರು, ಹೊಲ ಹಸಿರು, ಗಿಡ ಗಂಟೆ ಹಸಿರು ಫಲ ಏನು?”
ಎಂಬ ನಿರಾಶೆಯೊಂದಿಗೆ ಪ್ರಾರಂಭವಾಗುವ ಕವಿತೆ, ಅವರ ಬದುಕಿನ ಕಹಿ ವೇದನೆಯನ್ನು ನೆನಪಿಸುವ ಹಾಗೆ,
“ನೆನೆ ನೆನೆಸಿ ಅತ್ತಂತೆ ಆಗಾಗ ಮಳೆಯು
ಅನಿತರೊಳು ನಡು ನಡುವೆ ಹೊಂಬಿಸಿಲ ಕಳೆಯು”
ಎನ್ನುತ್ತಾ ಸುಖ-ದು:ಖಗಳನ್ನು ತುಲನೆ ಮಾಡಿ ನೋಡುತ್ತಾರೆ.
ತಮ್ಮ ಬದುಕಿನ ಸಿಹಿ-ಕಹಿಗಳ ಜೊತೆ ಪ್ರಕೃತಿಕವಿತೆಗಳನ್ನು ಕಟ್ಟುವುದು ಬೇಂದ್ರೆಯವರಿಗೆ ದೈವದತ್ತವಾಗಿ ಬಂದ ಪ್ರತಿಭೆಯೆಂದು ತೋರುತ್ತದೆ. ಸಖೀಗೀತ ಕವಿತೆಯಲ್ಲಿ ಅವರು ಸಾಧನಕೇರಿಯ ತಮ್ಮ ಮನೆಯನ್ನು ಬಣ್ಣಿಸಿರುವುದು ಹೀಗೆ,
ಅಲ್ಲಿ ಸಂಪಿಗೆಯಿತ್ತು, ಪಾರಿಜಾತವಿತ್ತು
ಮಾವು ಮಲ್ಲಿಗೆಯಿತ್ತು ಮನೆಯಿದಿರು
ಮುಗಿಲು ಮಲ್ಲಿಗೆಯಿತ್ತು, ತೆಂಗಿತ್ತು, ಹಲಸಿತ್ತು
ನಿಂಬಿಯ ಇಂಬಿತ್ತು, ಎಡೆಯೆಡೆಗೆ
ಹೊಂಗೆಯು ಹೂವಿನ ರಂಗವಲ್ಲಿಯ ಬಿಡಿಸಿ
ನೆರಳನು ನೀಡುತ ನಿಲ್ಲುವದು
ಮುತ್ತುಗ, ಬೂರಲ ದೀಪಮಾಲೆಯ ಕಂಬ
ಗಗನದ ಬಯಲೊಳಗೆತ್ತುವುದು
ಅದೇ ರೀತಿ ನಿರಾಶೆಯ ಸಂದರ್ಭಗಳಲ್ಲಿ ಬೇಂದ್ರೆಯವರ ಮನದಲ್ಲಿ ಮೂಡುವ ಪ್ರಕೃತಿಗೀತೆಗೆ “ಗರಿ” ಸಂಕಲನದ ಈ ಕವಿತೆ ಸಾಕ್ಷಿ,
ಮಂಜಿಬ್ಬನಿಗಳು ಎರೆಯುವ ಠಾವು
ಬೆಟ್ಟದ ಕೋಡಲಿ ಬೆಳದಿತು ಹೂವು
ಇದ ಮೂಸಿದರೂ ವಾಸನೆಯಿಲ್ಲ
ಹುಟ್ಟತೇಕೋ ಹುಟ್ಟಿಸಿದಾವ ಬಲ್ಲ
ಕಣ್ಣ ಸೆಳೆದರೂ ಸೋಲಿಸಲಿಲ್ಲ
ಮನವ ಸೆಳೆದರೂ ಸೆರೆಗೂಡಲಿಲ್ಲ
ಗಾಳಿ ತಟ್ಟಲಿದು ಅಲೆಯಲೆ ಇಲ್ಲ
ತಟ್ಟದ ಗಾಳಿಯು ನಲಿಯಲು ಇಲ್ಲ
ಸೆಟೆದ ಹೂವು ಸೆಟೆಸೆಟೆದೇ ಇತ್ತು
ಬಿರುಗಾಳಿಯ ಮೈ ಮರಗಟ್ಟಿತ್ತು.
ಬೇಂದ್ರೆಯವರ ಪಾಲಿಗೆ ಪ್ರಕೃತಿಯಲ್ಲಿ ಯಾವುದೂ ನಗಣ್ಯವಲ್ಲ ಎಂಬುದಕ್ಕೆ ಈ ಕವಿತೆಯೆ ಸಾಕ್ಷಿ.
ಕೂಹೂ ಕೂಹೂ ಕೂಹೂ
ಮೈ ತುಂಬ ಮಾವು ಹೂ ಹೂ
ಒಳ ಹೊರಗೂ ಹೂತವೇ ನಾವೂ
ನೀವು ಕೂಹೂ.
ಹೂ ಬಿಟ್ಟ ಮಾವಿನ ಮರ, ಅದರೊಳಗೆ ಕುಳಿತು ಕೂಗುವ ಕಾಜಾಣ ಎಲ್ಲವೂ ಕವಿಗೆ ಮುಖ್ಯವಾಗುತ್ತವೆ. “ಬೇಂದ್ರೆಯವರ ಕಾವ್ಯಸೃಷ್ಟಿಯ ಒಂದು ಮುಖ್ಯ ಪ್ರೇರಕ ಶಕ್ತಿಯಾದ ಶ್ರಾವಣ ಅವರ ಕಾವ್ಯದಲ್ಲಿ ಒಂದು ಮೂಲ ಪ್ರತಿಮೆ, ಜೀವನೋಲ್ಲಾಸ ಮತ್ತು ಅನುಭಾವಿಕ ಶ್ರದ್ಧೆಯನ್ನು ಪ್ರತಿಮಿಸುವ ನೆಲೆ. ಕವಿಯ ಪಾಲಿಗೆ ಶ್ರಾವಣ ಕೇವಲ ಒಂದು ಋತುವಲ್ಲ ಅನೇಕ ಭಾವಲಯಗಳ ಮಹಾದ್ವಾರ, ಅನುಭವದ ಅನೇಕ ಪದರುಗಳೊಂದಿಗೆ ಬೆರೆತು ಹೋಗಿರುವಂತದು, ಜೀವನದ ಅನೇಕ ನಿರೀಕ್ಷೆ, ಕಾತರಗಳನ್ನು ಹುಟ್ಟಿಸುವಂತದ್ದು, ಜೀವನ ಮಂಥನವನ್ನು ಉದ್ದೀಪಿಸುವಂತದ್ದು. ಇಲ್ಲಿ ಶ್ರಾವಣವು ವ್ಯಕ್ತಿ, ರಾಷ್ಟ್ರ ಹಾಗೂ ವಿಶ್ವಜೀವನದ ಚಲನೆಯ ಒಂದು ಮುಖ್ಯ ಬಿಂದು, ಭೂತ, ಭವಿಷ್ಯತ್, ವರ್ತಮಾನದ ಅನೇಕ ವೈಯುಕ್ತಿಕ,ಸಾಮೂಹಿಕ ಸಂಗತಿಗಳ ಚಿಂತನ, ಮಂಥನ, ಭಾವ, ಸ್ಪಂದನಕ್ಕೆ ತೊಡಗಿಸುವಂತ ಒಂದು ಶಕ್ತಿ. ಈ ಅರ್ಥದಲ್ಲಿ ಶ್ರಾವಣ ಕವಿಯ ಹೊರಗಿನ ಆವರಣವಲ್ಲ. ಕವಿಯ ಒಳಹೊರಗನು ಕ್ರಿಯಾಶೀಲವಾಗಿಸುವ, ಸೃಜನಾತ್ಮಕ ಪ್ರೇರಣೆಯನ್ನು ಕೊಡುವಂತ ಒಂದು ವಿಶಿಷ್ಟ ಸತ್ವವಾಗಿದೆ. ಅಂತೆಯೇ ಈ ಅನುಭವದ ನೆಲೆ ಬೇಂದ್ರೆ ಕಾವ್ಯದ ಉದ್ದೇಶಿತ ನೆಲೆಯಾದ ಅನುಭಾವಕ್ಕೆ ಒಂದು ಮುಖ್ಯ ನಿಚ್ಚಣಿಕೆಯಾಗಿದೆ”.
ಡಾ: ವಿಜಯ ದಬ್ಬೆಯವರ ಈ ಮಾತನ್ನು ಗಮನಿಸಿದಾಗ ಬೇಂದ್ರೆಯವರ ನಿಜವಾದ ಶ್ರಾವಣ ಪ್ರತಿಭೆ ದರ್ಶನವಾಗುತ್ತದೆ.
ಆಧುನಿಕ ಕನ್ನಡ ಕಾವ್ಯ ಸಂದರ್ಭದಲ್ಲಿ ಬೇಂದ್ರೆ – ಕುವೆಂಪು ಈ ಇಬ್ಬರು ಬರೆದಷ್ಟು ಪ್ರಕೃತಿ ಕವಿತೆಗಳನ್ನು ಯಾರೂ ಬರೆದಿಲ್ಲವೆಂದರೆ ಅತಿಶಯವಲ್ಲ. ಕುವೆಂಪುರವರು ಧ್ಯಾನಸ್ಥ ಸ್ಮೃತಿಯಲ್ಲಿ, ವೈಚಾರಿಕತೆಯ ನೋಟದಲ್ಲಿ ಪ್ರಕೃತಿಯನ್ನು ನೋಡುವುದಕ್ಕೂ, ಬೇಂದ್ರೆಯವರು ಬದುಕಿನ ಒಂದು ಭಾವವಾಗಿ ಮತ್ತು ಅನುಭಾವದ ನೆಲೆಯಲ್ಲಿ ಪ್ರಕೃತಿಯನ್ನು ನೋಡುವುದಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಕುವೆಂಪು ಪಾಲಿಗೆ ಪ್ರಕೃತಿ ಬದುಕಿನ ಜಂಜಡಗಳಿಂದ ಮುಕ್ತಿ ಪಡೆಯುವ ಒಂದು ಸಾಧನ. ಆದರೆ ಬೇಂದ್ರೆಯವರ ಪಾಲಿಗೆ ಪ್ರಕೃತಿ ತಾಯಿ-ತಂದೆ, ಅನ್ನ-ವಸತಿ ಎಲ್ಲವೂ ಆಗಿದೆ.
ಇಳೆ ಎಂದರೆ ಬರಿ ಮಣ್ಣಲ್ಲ
ನಮಗೋ ನೋಡುವ ಕಣ್ಣಿಲ್ಲ
ಏನು ತಿಂದರೂ ತೀರದಿದೆ
ಏನು ತುಂಬಿಯೂ ಮೀರದಿದೆ
ಎಂದು ಬಣ್ಣಿಸುವ ಬೇಂದ್ರೆಯವರನ್ನು ಜಗತ್ತಿನ ಶ್ರೇಷ್ಠ ಕವಿಗಳ ಪಂಕ್ತಿಯಲ್ಲಿ ನಿಲ್ಲಿಸಿರುವುದು ಇಂತಹ ಕವಿತೆಗಳೆ.








ಶ್ರಾವಣ ಅಂದರೆ ನೆನಪಾಗೋದು ಬೇಂದ್ರೆಯೇ. ಒಳ್ಳೆಯ ಲೇಖನ.