ಬೆಸ್ಟ್ ಕಾರ್ಬನ್ ಕ್ಯಾಪ್ಚರ್ ಟೆಕ್ನಾಲಜಿ ..!

ಪುಟ್ಟರಾಧ್ಯ ಎಸ್

ಮೊನ್ನೆ ಬೆಳಿಗ್ಗೆ ಹೊಸಕೋಟೆ ಕೆರೆಯಲ್ಲಿ ಕೂತು ಬಣ್ಣದ ಕೊಕ್ಕರೆಗಳನ್ನು ನೋಡುತ್ತಾ ಬಲು ಹೊತ್ತಾಗಿತ್ತು, ಇನ್ನೇನು ಹೊರಡಬೇಕು ಮೊಬೈಲು ತೆಗೆದು ಸಮಯ ನೋಡಿದೆ. ಹಾಗೆಯೇ ಅಲ್ಲೊಂದು ಇಲಾನ್ ಮಸ್ಕ್ ಅವರ ಟ್ವೀಟ್ ಕಂಡಿತು. “Am donating $100M towards a prize for best carbon capture technology”. ವಿಶ್ವ ಕಂಡ ಅಪ್ರತಿಮ ಉದ್ಯಮಿಗಳಲ್ಲಿ ಒಬ್ಬರೆಂದ್ರೆ ಇಲಾನ್ ಮಸ್ಕ್. ಮಂಗಳ ಗ್ರಹಕ್ಕೆ ಹೋಗುವ ತಯಾರಿಯಲ್ಲಿರೋ ಇವ್ರು ಸದಾ ಒಂದಿಲ್ಲೊಂದು ಯೋಜನೆಗಳಲ್ಲಿ ತಮ್ಮನ್ನ ತೊಡಗಿಸಕೊಳ್ತಾರೆ.

ನೂರಾರು ವರ್ಷಗಳ ಹಿಂದೆ ದಕ್ಷಿಣ ಪಿನಾಕಿನಿ ಎಂಬ ನದಿ ನಂದಿ ಬೆಟ್ಟದಲ್ಲಿ ಹುಟ್ಟಿ ಮೈದುಂಬಿ ಹರಿದು ಹೊಸಕೋಟೆ ಸೇರಿದಂತೆ ಬೆಂಗಳೂರಿನ ಆಸು ಪಾಸಿನಲ್ಲಿ ಹರಿದು ಮುಂದೆ ತಮಿಳುನಾಡು ಸೇರುತ್ತಿತ್ತು. ದಾರಿಯುದ್ದಕ್ಕೂ ಹಲವು ಕೆರೆ ಕಟ್ಟೆಗಳ ಒಡಲಿಗೆ ನೀರು ತುಂಬುತ್ತಾ ಜೀವ ಸಂಕುಲದ ದಾಹ ತಣಿಸಿ, ಕೃಷಿ ಪ್ರದೇಶಗಳ ಸಮೃದ್ಧಿಗೆ ಕಾರಣವಾಗಿ ಕೋಟ್ಯಂತರ ಜೀವಿಗಳ ಹೊಟ್ಟೆಯೂ ತುಂಬಿಸುತ್ತಿದ್ದ ನದಿ, ಎಲ್ಲರ ಬದುಕಿನ ಅಂಗವಾಗಿತ್ತು.

ಇತ್ತ ಹಳ್ಳಿಯ ಚಿತ್ರಣ ಚದುರಿ ನಾಗರೀಕತೆಯ ಅರ್ಥಗಳು ಬದಲಾಗಿ ನಗರೀಕರಣ ಹೆಚ್ಚಾದಂತೆ ಬೆಂಗಳೂರು ಬೆಳೆಯುತ್ತಾ ಹೋಯಿತು. ಹೆಚ್ಚಿದ ದಾಹ ತೀರಿಸಲು ಭೂಮಿಯ ಒಡಲೊಳಗೆ ನುಗ್ಗಿದ ಬೋರ್ವೆಲ್ಗಳು ಇರುವ ಸತ್ವವನ್ನೆಲ್ಲ ಎಳೆದು ದಾಹ ತೀರಿಸಿಕೊಂಡ ಮೇಲೆ ಪಿನಾಕಿನಿ ನಿಧಾನಕ್ಕೆ ಸಾಯುತ್ತಾ ಹೋಯಿತು.

ಪಿನಾಕಿನಿ ನದಿಯ ಹಾದಿಯಲ್ಲಿ ಬರುವ ಬೆಂಗಳೂರಿನ ಕೆರೆಗಳಲ್ಲಿ ಹೊಸಕೋಟೆ ಕೆರೆಯೂ ಒಂದು. ಹೊಸಕೋಟೆ ಕೆರೆ ಬೆಂಗಳೂರಿನ ಸುತ್ತಮುತ್ತ ನಾ ಕಂಡ ಅತ್ಯುತ್ತಮ ಜೌಗು ಪ್ರದೇಶಗಳಲ್ಲಿ ಒಂದು, even today it’s a precious wetland. ಕೆರೆಯ ಬದಿಯಲ್ಲೇ ಬೆಳೆದ ಆ ಹುಲ್ಲು, ತೇವದ ಮಣ್ಣು ಮತ್ತು ಜಲಸಸ್ಯಗಳಿಂದ ಕೂಡಿದ ಈ ಜೌಗು ಪ್ರದೇಶ ಸಾವಿರಾರು ಪಕ್ಷಿಗಳು, ಅನಂತ ಕೀಟಗಳು, ಏಡಿಗಳು, ಹಾವು ಸೇರಿದಂತೆ ಕೋಟ್ಯಂತರ ಜೀವಿಗಳನ್ನು ಸಾಕುತ್ತಿದೆ.

ಈ ಪ್ರದೇಶಗಳು ಹಲವು ಜೀವಿಗಳಿಗೆ ಮೊಟ್ಟೆ ಇಟ್ಟು ಮರಿಗಳನ್ನು ಮಾಡಲು ಹೇಳಿ ಮಾಡಿಸಿದಂತಿರುತ್ತದೆ ಕಾರಣ ಅಲ್ಲಿ ಸಿಗುವ ಸುಲಭ ಆಹಾರ ಮತ್ತು ರಕ್ಷಣೆ. Wetlands are a set of wild nurseries.

ಮರಗಳು ಭೂಮಿಯ ಶ್ವಾಸಕೋಶವಾದ್ರೆ ಈ ಜೌಗು ಪ್ರದೇಶಗಳು ಕಿಡ್ನಿಗಳಿದ್ದಂತೆ ಯಾಕಂದ್ರೆ ಈ ಪ್ರದೇಶಗಳು ಭಾರಿ ಲೋಹಗಳನ್ನು ಶೋಧಿಸಿ ನೀರನ್ನು ಸ್ವಚ್ಚ ಮಾಡುತ್ತವೆ ಎಂದು ಸಂಶೋಧನೆ ಹೇಳುತ್ತದೆ.

ಬೆಂಗಳೂರಿನಲ್ಲಿದ್ದ ಅನಂತ ಕೆರೆಗಳನ್ನು ಮುಚ್ಚಿ ಹಾಕಿ ಕಟ್ಟಡಗಳನ್ನು ಏರಿಸಿದ ಮೇಲೆ ಆದ ಪರಿಣಾಮ ಎಂದರೆ ಈಗ ಬಂದ ವರದಿ.

“Crops grown in Bangalore high on toxic heavy metals” finds a report which studied 17 lakes around bangalore in December 2020.

ಇನ್ನ ಇಲಾನ್ ಮಸ್ಕ ಅವ್ರ ಟ್ವೀಟಿಗೆ ಬರೋಣ. ಬರೀ ಹಾಳು ಮಾಡುತ್ತಿರುವವರ ಮಧ್ಯೆ ಇವರ ಪ್ರಯತ್ನವನ್ನೂ ಖಂಡಿತ ಮೆಚ್ಚುತ್ತಾ ನಮ್ಮ ಪರಿಸ್ಥಿತಿ ಹೇಗಾಗಿದೆ ಎಂದರೆ ನೈಸರ್ಗಿಕ ಇಂಗಾಲ ಶೋಧಕಗಳಾದ ಜೌಗು ಪ್ರದೇಶಗಳನ್ನು ಮುಚ್ಚಿ ಹಾಕಿ ಸಾವಿರಾರು ಕೋಟಿ ಹಣ ಹೂಡಿ ತಂತ್ರ ಜ್ಞಾನವನ್ನು ಅಭಿವೃದ್ದಿ ಪಡಿಸುವ ಕಾಲ ಬಂದಿದೆ.

The soils found in wetlands can store carbon for hundreds of years. ಮಣ್ಣಿನಲ್ಲಿ ಇಂಗಾಲಂಶ ಹೆಚ್ಚಿರುವುದು ಒಳ್ಳೆಯದು ಆದರೆ ಗಾಳಿಯಲ್ಲಲ್ಲ ಆದ್ರಿಂದ ಇದರ ಪ್ರಾಮುಖ್ಯತೆ ಅರ್ಥವಾಗ್ಬೇಕು.

ಪ್ರಕೃತಿ ಸೃಷ್ಟಿಸಿದ ಸುಂದರ್ಬನ್ಸ್ ಮ್ಯಾಂಗ್ರೋವ್ ಕಾಡಿನ ಅಧ್ಬುತ ಜೌಗುಪ್ರದೇಶಕ್ಕಿಂತ ಒಳ್ಳೆಯ ಕಾರ್ಬನ್ ಕ್ಯಾಪ್ಚರ್ ಟೆಕ್ನಾಲಜಿಯನ್ನ ಮಾನವ ಇನ್ನೂ ಸಾವಿರ ಕೋಟಿ ಸುರಿದರೂ ಸೃಷ್ಟಿಸಲು ಸಾಧ್ಯವಿಲ್ಲ.

ನಮಗೆ ಅರಿವಿಲ್ಲದೆ ಬೆಂಗಳೂರಿನಲ್ಲಿದ್ದ ಅನಂತ ಕೆರೆಗಳು ತಮ್ಮ ಜೌಗು ಪ್ರದೇಶಗಳಿಂದ ನೀರು ಗಾಳಿಯನ್ನು ಸ್ವಚ್ಚವಿಡುತ್ತಾ, ಪಕ್ಷಿ, ಪ್ರಾಣಿ ಕೀಟಗಳನ್ನು ಸಾಕುತ್ತಾ ಬಂದಿದ್ದರೆ ಅದೇ ಕೆರೆಗಳನ್ನು ತ್ಯಾಜ್ಯ, ಕೊಳಚೆ ನೀರಿನಿಂದ ಮುಚ್ಚುತ್ತಾ ಹೋದದ್ದು ಮುಂದಿನ ದಿನಗಳಲ್ಲಿ ಎಂತಹ ಪರಿಣಾಮ ತರಬಹುದು ಎಂಬುದನ್ನು ನಿರೀಕ್ಷಿಸಿ.

ಕಾಡಾಗಲಿ, ನಗರಗಳಾಗಲಿ, ಹಳ್ಳಿಗಳಾಗಲಿ ಎಲ್ಲಿಯಾದರೂ ಆಗಲಿ, ಕೆರೆಯ ಸುತ್ತ ಮುತ್ತ ಹುಲ್ಲು ಬೆಳೆದು ಮಣ್ಣು ತೇವದಿಂದಿದ್ದು ಜೌಗು ಪ್ರದೇಶ ನಿರ್ಮಾಣ ಆಗಿದ್ದರೆ ಅದನ್ನು ತೆರವುಗೊಳಿಸಿ ಮಣ್ಣು ಸುರಿದು ಕಟ್ಟೆ ಕಟ್ಟಿ ನೀರು ತುಂಬಿ ಸುಂದರೀಕರಣ ಮಾಡುವ ಮುನ್ನ ಮತ್ತು ಅತಿಯಾಗಿ ಹೂಳು ತೆಗೆದು ಗುಂಡಿಗಳನ್ನು ಮಾಡುವ ಮುನ್ನ ಆ ಪರಿಸರದ ಪ್ರಾಮುಖ್ಯತೆ ಅರಿಯಬೇಕು. ಅದಕ್ಕೇ ಗಮನಿಸಿ ಕೆರೆಗಳಲ್ಲಿ ಬರೀ ನೀರು ತುಂಬಿದ್ದು ಸುತ್ತಲೂ ತೇವದ ಮಣ್ಣು, ಜಲಸಸ್ಯಗಳು, ಮರ ಗಿಡಗಳು ಇಲ್ಲದೆ ಹೋದರೆ ಅಂತ ಕಡೆ ಒಂದೂ ನೀರು ಕಾಗೆಯೂ ಕಾಣುವುದಿಲ್ಲ.

ಈ ಜೌಗು ಪ್ರದೇಶಗಳು “I will serve you till my last breath” ಎಂದು ಮಾನವನಿಗೆ ಶಪಥ ಮಾಡಿರುವ ಹಠದಂತೆ ಇನ್ನೂ ನಮ್ಮನ್ನು ಸಾಕಿ ಸಲುಹುತ್ತಿವೆ. ಇದೆಲ್ಲದರ ಸೂಕ್ಷ್ಮತೆ ಅರಿಯುವ ದಿನ ಇಂದು. ವಿಶ್ವ ಜೌಗು ಪ್ರದೇಶಗಳ ದಿನ – World Wetlands day with theme being “wetlands and water”.

‍ಲೇಖಕರು Admin

February 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: