ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಳಿಗ್ಗೆ ಅದನ್ನು ಹುಡುಕಲೇ ಬೇಕು..

ಹಕ್ಕಿ ಹಾರುತಿದೆ ನೋಡಿದಿರಾ?

ರಾಜೀವ ನಾರಾಯಣ ನಾಯಕ

ನಮ್ಮ ಸುತ್ತಲಿನ ಸಕಲ ಜೀವಜಗತ್ತು ಮನುಷ್ಯನ ಅಂತರಂಗ ಮತ್ತು ಬಹಿರಂಗಗಳ ಸಮೀಕರಣದ ಭಾಗವೇ ಆಗಿದೆ. ಮರ ಗಿಡ ಬಳ್ಳಿಗಳು ಪಶುಪಕ್ಷಿಗಳು ಮಾನವನೊಂದಿಗೆ ಸಾವಯವ ಸಂಬಂಧಗಳಲ್ಲಿಯೇ ವಿಕಾಸಗೊಂಡಿವೆ. ಹೆಚ್ಚುತ್ತಿರುವ ನಗರೀಕರಣ, ಪರಿಸರ ನಾಶಗಳಿಂದಾಗಿ ಪ್ರಕೃತಿಯೊಂದಿಗಿನ ಮಾನವ ಸಂಬಂಧವು ಸಡಿಲುಗೊಳ್ಳುತ್ತಿರುವುದು ನಿಜವಾದರೂ, ಈ ಜಗತ್ತು ಸಕಲ ಜೀವಿಗಳಿಗಾಗಿ ಎನ್ನುವ ತಿಳಿವಳಿಕೆ ನಿಧಾನವಾಗಿ ವಿಸ್ತರಿಸುತ್ತಿರುವುದು ಆಶಾದಾಯಕ ಅಂಶವಾಗಿ ಕಾಣಿಸುತ್ತಿದೆ.

‘ನ್ಯಾಶನಲ್ ಜಿಯೋಗ್ರಾಫಿಕ್’ ‘ಆನಿಮಲ್ ಪ್ಲಾನಟ್’ ನಂತಹ ಟಿವಿ ಚಾನಲ್ಲುಗಳಿಂದ ಮತ್ತು “ಗೂಗಲ್ ಮಾಮಾ” ನಿಂದ ಮಕ್ಕಳು ವಿಶಿಷ್ಟ ಮತ್ತು ಅಪರೂಪದ ಜೀವಿಗಳ ವಿವರಗಳನ್ನು ಅರಿಯುವುದರ ಪರಿಣಾಮವಾಗಿ ಇಂದಿನ ಯುವ ಜನಾಂಗವು ಅರಣ್ಯ,

ವನ್ಯಜೀವಿಗಳು, ಸಾಕುಪ್ರಾಣಿಗಳ ಬಗ್ಗೆ ಆಸಕ್ತಿ ಮತ್ತು ಪ್ರೀತಿಯನ್ನು ತೋರಿಸುತ್ತಿದೆ. ಲವ್ ಬರ್ಡ್ಸ್, ಕಾಕಟೇಲ್ಸ್, ಪ್ಯಾರಾಕೀಟ್ಸ್-ಮುಂತಾದ ಹಕ್ಕಿಗಳನ್ನೂ, ಅನೇಕ ಬಗೆಯ ಅಲಂಕಾರಿಕ ಮೀನುಗಳನ್ನೂ ಮನೆಯಲ್ಲಿಟ್ಟು ನಲಿಯುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇವು ಯಾವುದೂ ನಿಸರ್ಗದ ಸನಿಹದಲ್ಲಿದ್ದು ಪಡೆದ ಅನುಭವಕ್ಕೆ ಸಮಾನವಲ್ಲವಾದರೂ  ಮನುಷ್ಯ ಕೇಂದ್ರಿತ ಎಂಬ ಭಾವನೆಗಳಾಚೆ  ಆಸಕ್ತಿಗಳು ತೆರೆದುಕೊಳ್ಳಲು ಇಂಥವು ಸ್ವಲ್ಪವಾದರೂ ನೆರವಾಗಬಹುದು.

 

 

ಕುಮಟಾದ ನಿರ್ಮಲಾ ಕಾನ್ವೆಂಟ್ ಹೈಸ್ಕೂಲಿನಲ್ಲಿ ಓದುವ ನನ್ನ ಮಗನೂ ಚಿಕ್ಕವನಿದ್ದಾಗಿಂದಲೂ ಪಕ್ಷಿಪ್ರಾಣಿಗಳ ಬಗ್ಗೆ ತೀವ್ರ ಆಸಕ್ತಿ ತೋರಿಸುತ್ತಿದ್ದ. ಬೀದಿಯಲ್ಲಿ ಅಡ್ಡಾಡುವ ನಾಯಿಗಳನ್ನೂ, ಬೆಕ್ಕುಗಳನ್ನೂ ಮನೆಗೆ ಕರೆದು ತರುತ್ತಿದ್ದ. ಅವುಗಳನ್ನು ಮುಟ್ಟಿದ ನಂತರ ಅವನ ಕೈಗಳನ್ನು ತೊಳೆಸುವುದೇ ಕೆಲಸವಾಗಿ ಬೈಸಿಕೊಳ್ಳುತ್ತಿದ್ದ.

ನಾಯಿಗಳನ್ನೂ ಬೆಕ್ಕುಗಳನ್ನೂ ಹಕ್ಕಿಗಳನ್ನೂ ಮನೆಯಲ್ಲಿ ಸಾಕುತ್ತೇನೆ ಎಂದು ಹಟಮಾಡುತ್ತಿದ್ದ. “ನಿಮ್ಮನ್ನು ಸಾಕೋಕೇ ಸಾಕುಬೇಕಾಗುತ್ತದೆ, ಮತ್ತೆ ಅವೆಲ್ಲ ರಾಮಾಯಣ ತರಬೇಡ” ಎಂದು ಅವನಮ್ಮ ಮಗನ ಆಸೆಯನ್ನು ಆರಂಭದಲ್ಲೇ ಖಡಾಖಂಡಿತವಾಗಿ ತಿರಸ್ಕರಿಸಿದ್ದಳು. ಆದರೂ ಅವನ ವರಾತೆ ಇದ್ದೇ ಇತ್ತು. ನಾನು ಎರಡೂ ಕಡೆ ಇದ್ದೆ. ನಾನು ಹುಟ್ಟಿದ ಹಳ್ಳಿ ವಾಸರೆಯಲ್ಲಿಯ ನಮ್ಮ ಬಾಲ್ಯದ ದಿನಗಳಲ್ಲಿ ಕೇರಿಯ ಎಲ್ಲ ನಾಯಿ ಬೆಕ್ಕು ದನಗಳು ಮನೆಯ ಸದಸ್ಯರೇ ಆಗಿದ್ದವು.

ನಾವು ಬೆಳೆದ ಅಂಕೋಲೆಯ ಬೊಳೆ ಊರಿನಲ್ಲಿ ಮೊಳಕೆ ತಂದ ಬೀಜವನ್ನು ಗದ್ದೆಯಲ್ಲಿ ಬಿತ್ತಿದ ನಂತರ ನಾಲ್ಕಾರು ದಿನಗಳ ವರೆಗೆ ಅವನ್ನು ಹಕ್ಕಿಗಳು ತಿನ್ನದಂತೆ ಕಾಯಬೇಕಾಗುತ್ತಿತ್ತು. ಒಂದೇ ಗುಂಪಿನಲ್ಲಿ  ಸಾವಿರಾರು ಹಕ್ಕಿಗಳನ್ನು ನೋಡಿದ್ದು ಆಗಲೇ! ಹಳ್ಳ ಕೆರೆ ಗದ್ದೆ ಬಯಲು ಬೆಟ್ಟ ಬೇಣಗಳಲ್ಲಿ ಹಾರಾಡುತ್ತಿದ್ದ, ಗೂಡುಕಟ್ಟುತ್ತಿದ್ದ ವಿವಿಧ ಪಕ್ಷಿಗಳೊಂದಿಗಿನ ಒಡನಾಟಗಳಿಂದಲೇ ಬಾಲ್ಯದ ನಮ್ಮ ಕನಸುಗಳಿಗೆ ರೆಕ್ಕೆಮೂಡಿದ್ದು! ಹಳ್ಳಿ ತೊರೆದು ಪೇಟೆಯಲ್ಲುಳಿದು ಅಂಥ ಪರಿಸರದಿಂದ ಮಕ್ಕಳನ್ನು ವಂಚಿತಗೊಳಿಸಿದ ಪಾಪಪ್ರಜ್ಞೆಯಿಂದಾಗಿ  ಮಗ ’’ಸಾಕಿದರೆ ಸಾಕಲಿ ಬಿಡು” ಎಂಬುದು ನನ್ನ ಗುಪ್ತ ಆಸೆಯಾಗಿತ್ತು.

ಆದರೆ ಅವನ ಪರವಾಗಿ ವಕಾಲತ್ತು ವಹಿಸುವ ಅಪಾಯದ ಅರಿವು ಕೂಡ ಇದ್ದದ್ದರಿಂದ ಮೌನವಾಗಿದ್ದೆ! ಸಾಂಪ್ರದಾಯಿಕವಾಗಿ ಸಾಕುತ್ತಿದ್ದ ಪ್ರಾಣಿಗಳ ಜೊತೆಗೆ ಆಮೆ, ಹ್ಯಾಂಪ್ಸಟರ್, ಪೈಥಾನ್ ಮರಿಗಳನ್ನೂ ಮನೆಗಳಲ್ಲಿ ಸಾಕುವ ಬಗ್ಗೆ ಸಚಿತ್ರ ಲೇಖನವನ್ನು ಮಗ ತೋರಿಸಿದಾಗ ಅವನಮ್ಮ ಹಾವು ತುಳಿದವಳಂತೆ”ಇಂಥವೆಲ್ಲ ತೋರಿಸ್ಬೇಡ, ಬೇಕಾದ್ರೆ ಹಕ್ಕಿಮರಿ ಸಾಕಿಕೋ’’ ಅಂದು ಬಾಯ್ತಪ್ಪಿ ನುಡಿದಳು!  ಮರುದಿನವೇ ಮನೆಯೊಳಗೆ ಬಜೀಸ್ ಎನ್ನುವ ಗಿಳಿ ಜಾತಿಯ ಹಕ್ಕಿಗಳು ಚಿಲಿಪಿಲಿಗುಟ್ಟಿದವು!!

ಪ್ರಾಣಿ ಪಕ್ಷಿಗಳ ಒಡನಾಟ ಮಕ್ಕಳ ಖುಶಿಗೆ, ಕ್ರಿಯಾಶೀಲತೆಗೆ ಕಾರಣವಾಗುತ್ತದಾದರೂ ಅವರು ಮನುಷ್ಯರ ಗುಣಾವಗುಣಗಳು, ಸಂವೇದನೆಗಳು, ಆಲೋಚನಾ ರೀತಿಯನ್ನು ಸಾಕಿದ ಪ್ರಾಣಿ ಪಕ್ಷಿಗಳಲ್ಲೂ ನಿರೀಕ್ಷಿಸಿ ನಿರಾಶರಾಗುವ ಖಿನ್ನರಾಗುವ ಸಂಭವವಿರುತ್ತದೆ. ಅಂಥ ಸಂದರ್ಭಗಳಲ್ಲಿ  ದೊಡ್ಡವರಾದವರು ಮಕ್ಕಳಿಗೆ ತಿಳಿವಳಿಕೆ ಧೈರ್ಯ ತುಂಬಬೇಕಾಗುತ್ತದೆ. ಮಗನು ಸಾಕಿದ ಹಕ್ಕಿಗಳು ಮೊದಲ ಬಾರಿಗೆ ಮೊಟ್ಟೆಯಿಟ್ಟಾಗ ತುಂಬಾ ಸಂಭ್ರಮಪಟ್ಟ!

ಆದರೆ ಹಕ್ಕಿಗಳು ಇಟ್ಟ ಮೂರು ಮೊಟ್ಟೆಗಳಲ್ಲಿ ಒಂದನ್ನು ಕೆಳಗುರುಳಿಸಿದವು. ಅಕಸ್ಮಾತಾಗಿ ಬಿದ್ದುಹೋಗಿರಬಹುದು ಎಂದು ಸಮಾಧಾನ ಮಾಡಿಕೊಳ್ಳಲಾಯಿತು. ಉಳಿದ ಎರಡು ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಯಾಗುವ ವರೆಗೂ ಎಲ್ಲರ ಲಕ್ಷ್ಯವೂ ಹಕ್ಕಿಗೂಡಿನತ್ತಲೆ ತಿರುಗುತ್ತಿತ್ತು. ಹೊಸ ಜೀವಗಳು ಈ ಜಗತ್ತಿಗೆ ಕಣ್ತೆರೆಯುವ ಕ್ಷಣಕ್ಕಾಗಿ ಕಾತರದಿಂದ ನೋಡುವಂತಾಯಿತು.

ಒಂದು ಬೆಳಗಿನ ಜಾವದಲ್ಲಿ ಮೊಟ್ಟೆಯೊಡೆದು ಹೊರಬಂದ ಚಿಂವ್ ಚಿಂವ್ ಮರಿಗಳು ಕುಟುಂಬದ ವಿಸ್ತರಣೆಯಾಗಿಯೇ ಕಂಡವು! ಗುಲಾಬಿ ಬಣ್ಣದ ಮರಿಗಳು ಕಣ್ಣೊಡೆಯುವುದನ್ನೇ ಕಣ್ಣಿಟ್ಟು ಕಾದಿರುವಾಗ ನೋಡುತ್ತಾನೆ, ಒಂದು ಮರಿ ಗೂಡಿನಿಂದ ಕೆಳಗೆ ಬಿದ್ದಿದೆ! ಅದನ್ನು ಎತ್ತಿಟ್ಟರೂ ತಾಯಿ ಹಕ್ಕಿ ಕಣ್ಣೆತ್ತಿಯೂ ನೋಡಲಿಲ್ಲ.

ಎಂಥ ಕಠೋರ ಹೃದಯದ ತಾಯಿ! ಮಾರನೇ ದಿನ ಎರಡನೆಯದನ್ನೂ ಕೆಳಗುರುಳಿಸಿತು! ಹುಟ್ಟಿದ  ಮರಿಯನ್ನೇ ನಿಷ್ಕರುಣೆಯಿಂದ ತ್ಯಜಿಸುವ ಜೀವಿಗಳೂ ಈ ಭೂಮಿ ಮೇಲಿರಲು ಸಾಧ್ಯವೆ? ಎಳೆಯ ಮನಸ್ಸಿನ ಮಕ್ಕಳಿಗೆ ಇಂಥ ಪ್ರಶ್ನೆಗಳನ್ನು ಎದುರಿಸುವುದು ತುಸು ಕಷ್ಟವಾಗುತ್ತದೆ. ತೀವ್ರವಾಗಿ ನೊಂದುಕೊಳ್ಳುತ್ತಾರೆ. ಮಗನೂ ಇಂಥ ಭಾವನೆಗಳಿಗೆ ಹೊರತಾಗಿರಲಿಲ್ಲ. ಹಕ್ಕಿಗಳ ಇಂಥ ನಿಷ್ಕಾರುಣ್ಯ ನಡವಳಿಕೆ ನನ್ನ ಅರಿವಿಗೂ ನಿಲುಕಲಿಲ್ಲ. ಮಗನ ಪ್ರಶ್ನೆಗಳಿಗೆ ತಾರ್ಕಿಕ ಮತ್ತು ನಿಖರ ಉತ್ತರ ನೀಡಲು ಸಾಧ್ಯವಾಗದೇ ಮುಂಬೈನ ನಮ್ಮ ಆಫೀಸಿಗೆ ಹತ್ತಿರದಲ್ಲಿರುವ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಗ್ರಂಥಾಲಯದ ಪುಸ್ತಕರಾಶಿಗಳನ್ನು ತಡಕಾಡಿದೆ. ಆವರೆಗೂ ”ಆನಿಮಲ್ ಬಿಹೇವಿಯರ್” ಬಗ್ಗೆನೇ ವ್ಯಾಪಕ ಮಾಹಿತಿಯನ್ನೊಳಗೊಂಡ ಅಷ್ಟೊಂದು ಗ್ರಂಥಗಳು ಇರುವುದು ನನಗೆ ತಿಳಿದಿರಲಿಲ್ಲ!

ಪ್ರಾಣಿಗಳ ವರ್ತನೆಯ ಅಧ್ಯಯನವು ತುಂಬಾ ಸಂಕೀರ್ಣವಾದ ವಿಷಯವಾಗಿದೆ. ಶರೀರ ಶಾಸ್ತ್ರ, ಮನೋ ವಿಜ್ಞಾನ ಮತ್ತು ತಳಿಶಾಸ್ತ್ರಗಳ ವಿಭಿನ್ನ ಧಾರೆಗಳನ್ನು ಒಂದು ಕೇಂದ್ರಕ್ಕೆ ತಂದು ವರ್ತನೆಗಳಿಗೆ ಸೈದ್ಧಾಂತಿಕ ಸ್ವರೂಪ ನೀಡಲಾಗುತ್ತದೆ. ಡಾರ್ವಿನ್ ಮಂಡಿಸಿದ “ಜೀವರಕ್ಷಣೆ ಮತ್ತು ವಂಶಾಭಿವೃದ್ಧಿ”ಯ ಮೂಲಭೂತ ಪ್ರೇರಣೆಗಳು ಪ್ರಾಣಿಗಳ ಜೈವಿಕ ಸ್ವರೂಪವನ್ನಷ್ಟೆ ಅಲ್ಲ ಅವುಗಳ ಕಾರ್ಯತಂತ್ರ ಮತ್ತು ವರ್ತನೆಗಳನ್ನೂ ನಿರ್ದೇಶಿಸುತ್ತವೆ. ತನ್ನ ವಂಶಾಭಿವೃದ್ಧಿಯನ್ನು ಸಫಲಗೊಳಿಸುವ ನಿಟ್ಟಿನಲ್ಲಿ ಪ್ರತಿ ಜೀವಿಯು ಪ್ರವೃತ್ತವಾಗಿರುತ್ತದೆ. ಈ ಗುಣವು ಅದರ ವಂಶವಾಹಿನಿಗಳಿಂದಲೇ ನಿರ್ದೇಶಿತವಾಗಿರುತ್ತದೆ.

ಗಂಡಿನ ಆಯ್ಕೆ, ತಾಯ್ತನದ ವಿನಿಯೋಜನೆ, ಶತ್ರುಗಳಿಂದ ರಕ್ಷಣೆ-ಇತ್ಯಾದಿ ಅಂಶಗಳನ್ನು ಅಸ್ತಿತ್ವದ ಪ್ರಶ್ನೆಯಾಗಿ ದುಡಿಸಿಕೊಳ್ಳುವಂತೆ ನಿಸರ್ಗವೇ ನೋಡಿಕೊಳ್ಳುತ್ತದೆ. ಸಶಕ್ತವಲ್ಲದ, ಮತ್ತು  ಭವಿಷ್ಯದ ವಂಶಾಭಿವೃದ್ಧಿಗೆ ಅಸಮರ್ಥವೆನಿಸುವ ಮರಿಗಳನ್ನು ಹುಟ್ಟಿನಲ್ಲೆ ತ್ಯಜಿಸಲು ಹಕ್ಕಿಗಳಿಗೆ ಯಾವುದೇ ಭಾವನೆಗಳು ಅಡ್ಡಬರುವುದಿಲ್ಲ. ಅಶಕ್ತ ಮರಿಗಳಿಗೆ ಪಾಲನೆ ಪೋಷಣೆ ಮಾಡಿ ಸಮಯ ಮತ್ತು ಶಕ್ತಿ ವ್ಯರ್ಥ ಮಾಡುವುದಕ್ಕೆ ಅವು ಒಪ್ಪುವುದಿಲ್ಲ.

ಬದಲಾಗಿ ಹೊಸ ಸಂತಾನಾಭಿವೃದ್ಧಿಯತ್ತ ಅವು ಕಾರ್ಯಪ್ರವೃತ್ತವಾಗುತ್ತವೆ. ವಿಜ್ಞಾನಿಗಳ ಪ್ರಕಾರ ಪಕ್ಷಿಗಳು ಪಕ್ಕಾ ಅರ್ಥಶಾಸ್ತ್ರಜ್ಞರಂತೆ ಯೋಚಿಸುತ್ತವಂತೆ! ಹುಟ್ಟಿದ ಮರಿಗಳ ಮೇಲೆ ತನ್ನ ಶ್ರಮ ಮತ್ತು ಸಮಯದ ಹೂಡಿಕೆ ಹಾಗೂ ದಕ್ಕುವ ಫಲದ ಲೆಕ್ಕಾಚಾರವು ಅವುಗಳ ವರ್ತನೆಯನ್ನು ನಿರ್ಧರಿಸುತ್ತವಂತೆ. ಈ ಕಾರಣಕ್ಕಾಗಿಯೇ ಅಪಾಯದ ಸುಳಿವಿದ್ದರೆ ತುಂಬಾ ಮೆಹನತ್ತು ಮಾಡಿ ಕಟ್ಟಿದ ಗೂಡನ್ನೂ, ಇಟ್ಟ ಮೊಟ್ಟೆಯನ್ನೂ ತ್ಯಜಿಸಿ ಹೊಸತಾಗಿ ಬದುಕು ಶುರುಮಾಡುತ್ತವೆ; ಸಶಕ್ತ ಸುರಕ್ಷಿತ ಸಂತತಿಗಾಗಿ!

ಈ ಬಗ್ಗೆ ಇನ್ನಷ್ಟು ಖಚಿತ ಮಾಹಿತಿ ಹುಡುಕಿ ಮಗನಿಗೆ ತಿಳಿಸುವ ಮನಸ್ಸಿತ್ತಾದರೂ ಕೆಲಸದ ನಡುವೆ ಮರೆತು ಬಿಟ್ಟೆ. ಅಷ್ಟರಲ್ಲಿ ಹಕ್ಕಿ ಮತ್ತೆ ಮೊಟ್ಟೆ ಹಾಕಿದ ಸುದ್ದಿ ಬಂತು! ಮೊಟ್ಟೆಯಿಟ್ಟಾದ ಮೇಲೆ ಗಂಡುಹಕ್ಕಿಯನ್ನು ಗೂಡಿನಿಂದ ಬೇರೆ ಮಾಡಿದನಂತೆ. ಹೆಣ್ಣು ಹಕ್ಕಿ ಮತ್ತೆ ಬೆದೆಗೆ ಬರಲಿ ಎಂದು ಹಾಕಿದ ಮೊಟ್ಟೆಗಳನ್ನು ಕೆಡಹುವ ಗಂಡು ಹಕ್ಕಿಗಳೂ ಇರುತ್ತವೆ ಎಂಬುದನ್ನು ಯಾರಿಂದಲೋ ಕೇಳಿ  ತಿಳಕೊಂಡಿದ್ದ! ‘’ಗೂಗಲ್ ಮಾಮಾ’’ ಕೂಡ ಅವನಿಗೆ ಒಂದಿಷ್ಟು ಮಾಹಿತಿ ನೀಡಿದ್ದ ಅನಿಸುತ್ತದೆ!

ಈ ಬಾರಿ ಮೊಟ್ಟೆಯಿಂದ ಹೊರಬಂದ ಮರಿಗಳೆಲ್ಲ ಬದುಕುಳಿದವು. ಮಗನೂ, ಅವನಮ್ಮನೂ, ಹಾಸ್ಟೆಲ್ಲಿನಲ್ಲಿ ಓದುತ್ತಿರುವ ಅವನಕ್ಕನೂ ಖುಶಿಯಾದರು! ಮನೆಗೆ ಫೋನ್ ಮಾಡಿದಾಗ ಅವರ ಮಾತಿಗಿಂತ ಹಕ್ಕಿಗಳ ಚಿಲಿಪಿಲಿ ಸದ್ದು ಕೇಳಿಸಿದ್ದೇ ಹೆಚ್ಚು! ಮಗನು ಹಲವಾರು ಹುನ್ನಾರಗಳಲ್ಲಿ ಹಕ್ಕಿಗಳ ಸ್ನೇಹ ವಿಶ್ವಾಸ ಗಳಿಸಿಕೊಳ್ಳಲು ಸಮರ್ಥನಾಗಿದ್ದ. ಒಂದು ಹಕ್ಕಿಯಂತೂ ಪಂಜರದಿಂದ ಹೊರಬಂದು ಅವನ ಕೈಗಳ ಮೇಲೆ ಕುಳ್ಳುವಷ್ಟು ಸಲಿಗೆ ಗಳಿಸಿತ್ತು.

ಈ ನಡುವೆ ಅದೇ ಹಕ್ಕಿ ಮನೆಯಿಂದ ಹೊರಗೆ ಹಾರಿ ಕಣ್ಮರೆಯಾದ ಸುದ್ದಿ ಬಂತು! ಆ ದಿನ ತನ್ನ ಸ್ಕೂಲಿನ ಗೆಳೆಯರನ್ನು ಕರೆದಿದ್ದನಂತೆ. ಸಿಳ್ಳೆ ಹೊಡೆದ ನಂತರ ಹಕ್ಕಿ  ಹಾರಿಬಂದು ತನ್ನ ಹೆಗಲ ಮೆಲೆ ಕುಳ್ಳುವ ತರಬೇತಿಯ ಪ್ರಾತ್ಯಕ್ಷಿಕೆ ನೀಡುವವನಿದ್ದನಂತೆ. ಹಕ್ಕಿ ಅವನ ಸೂಚನೆಗಳನ್ನು ಸರಿಯಾಗಿಯೇ ಪಾಲಿಸಿತು. ಮನೆಯೊಳಗೆ ಎಲ್ಲೇ ಇದ್ದರೂ ಇವನ ಕರೆಗೆ ಓಗೊಟ್ಟು ಹಾರಿ ಬಂತು! ಹಾಗೆ ಹಾರಾಡುತ್ತಿದ್ದ ಹಕ್ಕಿ ಒಮ್ಮೆ ತೆರೆದ ಕಿಟಕಿಯಿಂದ ಹೊರಗೆ ಹಾರಿ ಹತ್ತಿರದ ದಟ್ಟ ಎಲೆಗಳ ಮಾವಿನ ಮರದ ನಡುವೆ ಮಾಯವಾಯಿತು.

ಇವನೂ ಇವನ ಗೆಳೆಯರೂ ಎಷ್ಟೇ ಹುಡುಕಿದರೂ ಕಾಣಲಿಲ್ಲ. ಕತ್ತಲಾಗುವವರೆಗೂ ಇವರು ಮರ ಬಿಟ್ಟು ಸರಿಯಲಿಲ್ಲ. ಅವನಮ್ಮನ ಮೂಲಕ ಫೋನಿನಲ್ಲಿ ನನಗೆ ಈ ಎಲ್ಲ ಘಟನೆಗಳ ನೇರಪ್ರಸಾರ ಆಗುತ್ತಿತ್ತು. ಆ ದಿನ ತಾಯಿ ಮಗ ಇಬ್ಬರೂ ಉಣ್ಣಲಿಲ್ಲ. ಪ್ರೀತಿಯಿಂದ ಸಾಕಿ ಸಲುಹಿದ ಹಕ್ಕಿ ಭಾವನೆಗಳ ಹಂಗೇ ಇಲ್ಲದೇ ಹಾರಿಹೋದ ಬಗ್ಗೆ ಮಗ ನೊಂದುಕೊಂಡಿರಬಹುದು ಎಂದು ಅವನಿಗೆ ಸಮಾಧಾನ ಮಾಡಲು ಫೋನ್ ಮಾಡಿದೆ.

ಅವನು “ಪಪ್ಪ, ನೀನು ತಿಳಿದ ಹಾಗೆ ಸೆಂಟಿಮೆಂಟಲ್ ಕಾರಣಕ್ಕೆ ನನಗೆ ಬೇಸರ ಆಗ್ತಿಲ್ಲ… ಬಜೀಸ್ ಹಕ್ಕಿಗಳು ಗುಂಪಿನಲ್ಲಿ ಮಾತ್ರ ಬದುಕುಳಿಯುತ್ತವೆ. ಪ್ರತ್ಯೇಕವಾಗಿದ್ದರೆ ಅವು ಬೇರೆ ಪಕ್ಷಿ ಪ್ರಾಣಿಗಳ ಬೇಟೆಗೆ ಸುಲಭ ತುತ್ತಾಗುತ್ತವೆ. ಎದ್ದು ಕಾಣುವ ಬಣ್ಣದ ಗರಿಗಳಿಂದ ಆ ಹಕ್ಕಿಗೆ ತನ್ನನ್ನು ರಕ್ಷಿಸಿಕೊಳ್ಳುವುದು ಕಷ್ಟ, ಅದೇ ನನ್ನ ಚಿಂತೆಯಾಗಿದೆ. ಬೆಳಿಗ್ಗೆ ಅದನ್ನು ಹುಡುಕಲೇ ಬೇಕು…” ಎಂದ.

ಜೀವಿಗಳ ಬಗ್ಗೆ ಹೊಸ ತಲೆಮಾರಿಗಿರುವ ಇಂಥ ತಿಳಿವಳಿಕೆ ಮತ್ತು ಕಳಕಳಿ ನಮ್ಮ ಜೀವಜಗತ್ತಿನ ಉಳಿವಿನ ಬಗ್ಗೆ ನನ್ನನ್ನು ಆಶಾವಾದಿಯನ್ನಾಗಿಸಿತು!

‍ಲೇಖಕರು admin

25 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading