ಡಾ ಪ್ರಕಾಶ ಗ ಖಾಡೆ
ಬಾದಾಮಿ ಪರಿಸರವು ಐತಿಹಾಸಿಕ ಮಹತ್ವದೊಂದಿಗೆ ಕೃಷಿ ಸಂಬಂಧಿಯ ಅಧ್ಯಯನದಲ್ಲೂ ಹೊಸ ಹೊಸ ಸಂಗತಿಗಳಿಗೆ ಸಾಕ್ಷಿಯಾಗಿದೆ.ಮೂಲತಃ ಚಾಲುಕ್ಯರು ಬಾದಾಮಿಯ ಕೆಲಬಲದಲ್ಲಿ ವಾಸಿಸುವ ಒಕ್ಕಲಿಗರ ಬಣಕ್ಕೆ ಸಂಬಂಧಿಸಿದವರು.ಚಾಲುಕ್ಯರ ಮೂಲ ನಾಮವು ಚಲುಕಿ,ಚಲ್ಕಿ,ಸಲುಕಿ ಅಥವಾ ಸಲ್ಕಿ ಎಂಬ ಕನ್ನಡ ಪದ.ಇದು ಹಾರೆತಂತಹ ಒಂದು ಕೃಷಿಯ ಉಪಕರಣದ ಹೆಸರು.ಈ ಮನೆತನದ ಮೂಲ ಪುರುಷನು ಇದನ್ನು ತನ್ನ ಅಂಕಿತನಾಮವಾಗಿ ಸ್ವೀಕರಿಸಿರಬೇಕು.ಒಕ್ಕಲು ಮಕ್ಕಳಾದ ಚಾಲುಕ್ಯರು ರಾಜ್ಯವನ್ನು ವಿಸ್ತರಿಸಿದಂತೆ ತಮ್ಮ ಕೃಷಿ ಚಟುವಟಿಕೆಗಳನ್ನು ಕೊಳ್ಕೊಡುಗೆ ಮೂಲಕ ವಿಸ್ತರಿಸಿಕೊಂಡಿರಬಹುದು.ಇದಕ್ಕೆ ಸಾಕ್ಷಿ ಎಂಬಂತೆ ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶದಲ್ಲಿ ಮಾತ್ರ ಕಂಡು ಬರುವ ಕೆಲ ಸಸ್ಯ ಪ್ರಭೇದಗಳು ಇದೀಗ ಬಾದಾಮಿ ಗುಡ್ಡಬೆಟ್ಟದ ಬಯಲು ಪ್ರದೇಶದಲ್ಲಿ ಕಂಡು ಬಂದಿವೆ.ಮಲೆನಾಡಲ್ಲಿ ಸಿಕ್ಕುವ ಅಪರೂಪದ ಸಸ್ಯಗಳನ್ನು ಸಸ್ಯಶಾಸ್ತ್ರ ಸ್ನಾತಕೋತ್ತರ ಪದವೀಧರರಾಗಿರುವ ಬಾಗಲಕೋಟೆಯ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಗುರುತಿಸಿದ್ದಾರೆ.ಇದು ಬಾದಾಮಿ ಪರಿಸರದ ಸಸ್ಯ ಸಂಪತ್ತನ್ನು ಪುನರ್ ಅಧ್ಯಯನಕ್ಕೊಳಪಡಿಸಲು ದಾರಿ ಮಾಡಿಕೊಟ್ಟಿದೆ.
ಪಶ್ಚಿಮ ಘಟ್ಟದ ಹುಲ್ಲುಗಾವಲು ಪ್ರದೇಶಕ್ಕೆ ಸೀಮಿತಗೊಂಡಿರುವ ಸ್ಕ್ರೋಫುಲರೇಸಿ (scrophulariacea) ಕುಟುಂಬಕ್ಕೆ ಸೇರಿದ ಪರ್ಪಲ್ ವಿಚ್(Purple witch)ಸಸ್ಯ ವೈಜ್ಞಾನಿಕ ಹೆಸರು ಸ್ಟ್ರೈಗಾ ಜಸ್ನೋರೈಡ್ಸ್(Striga gesnerioides) ಹಾಗೂ ಕಾಂಪೋಸಿಟೇ (Compositaeac) ಕುಟುಂಬದ ಗ್ರಾಹಮ್ಸ್ ಗ್ರೌಂಡ್ಶೆಲ್ (Grahamis groundsel)ಸಸ್ಯ ವೈಜ್ಞಾನಿಕ ಹೆಸರು Senecio grahami ಸಸ್ಯಗಳು ಬಾದಾಮಿ ಬೆಟ್ಟದಲ್ಲಿ ಕಂಡು ಬಂದಿರುವುದನ್ನು ಅವರು ಶೋಧಿಸಿದ್ದಾರೆ. ಬಾದಾಮಿ ಬೆಟ್ಟಗಳ ಪರಿಸರ ಒಂದು ಬಗೆಯಲ್ಲಿ ಹೊಸ ಸಂಶೋಧಕರಿಗೆ ಅಪಾರವಾದ ಜ್ಞಾನದ ಖಣಿಯಾಗಿದೆ.

ಬಾದಾಮಿಯ ಪುನರ್ಶೋಧನೆ ಹಿನ್ನಲೆಯಲ್ಲಿ ಅಧ್ಯಯನ ಕೈಗೊಂಡಿರುವ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಅವರಿಗೆ ಈ ಸಸ್ಯಗಳು ಕಂಡು ಬಂದಿವೆ. ಅಲ್ಲದೇ ಮಲೆನಾಡು ಹಾಗೂ ಅದರಂಚಿನ ತಂಪು ಪ್ರದೇಶದಲ್ಲಿ ಕಾಣುವ ಹೆಚ್ಚಿನ ಪ್ರಾಮುಖ್ಯತೆ ಹೊಂದಿರುವ ಲಿಲಿಯೇಸಿ ಕುಟುಂಬದ ಸುಂದರ ಆಕರ್ಷಣೀಯ ಅಗ್ನಿಶಿಖೆ ಹೂ ಗ್ಲೋರಿಯೋಸಾ ಸುಪರ್ಬಾ (Gloriosa superba) ಸಹ ಬಾದಾಮಿಯ ಗುಡ್ಡದಲ್ಲಿ ಕಾಣಸಿಗುತ್ತಿವೆ.ವಿಪರೀತ ಮಳೆ ಬೀಳುವ ಹಾಗೂ ತಂಪು ಹವಾಮಾನ ಪ್ರದೇಶದ ಹುಲ್ಲುಗಾವಲುಗಳಲ್ಲಿ ಜುಲೈನಿಂದ ಜನವರಿ ತಿಂಗಳವರೆಗೆ ಹೂ ಬಿಡುವ ಈ ಸಸ್ಯಗಳು ಬಯಲು ಸೀಮೆ ಪ್ರದೇಶದಲ್ಲಿ ಕಂಡುಬಂದಿರುವುದು ವಿಚಿತ್ರವೇ ಸರಿ.

ಐತಿಹಾಸಿಕ ಬಾದಾಮಿ ಪರಿಸರದಲ್ಲಿ ಕಂಡು ಬಂದ ಪರ್ಪಲ್ ವಿಚ್ ಅಥವಾ ಸ್ಟ್ರೈಗ್ರಾ ಸಸ್ಯವು ಇಲ್ಲಿಯ ಹವಾಗುಣಕ್ಕನುಸಾರವಾಗಿ ಸ್ವಲ್ಪ ಗಿಡ್ಡ ಜಾತಿಯದ್ದಾಗಿದ್ದು, ಕೆಂಪುಬಿಳಿ ಮಿಶ್ರಿತ ಬಣ್ಣದ್ದಾಗಿದೆ. ಆದರೆ ಪಶ್ಚಿಮ ಘಟ್ಟದಲ್ಲಿ ಕಂಡು ಬರುವ ಸ್ಟ್ರೈಗಾ ತೀರ ಕೆಂಪುಬಣ್ಣದ್ದಾಗಿದ್ದು, ಆಕರ್ಷಣೀಯವಾಗಿದೆ. ಪಶ್ಚಿಮ ಘಟ್ಟದ ಹುಲ್ಲುಗಾವಲಿನಲ್ಲಿ ಎಕರೆಗಟ್ಟಲೆ ಬೆಳೆಯುವ ಹಾಗೂ ಹಳದಿ ಸೇವಂತಿಗೆ ಹಾಗೂ ಸೂರ್ಯಕಾಂತಿ ಜಾತಿಗೆ ಸೇರಿದ ಹಳದಿ ಗ್ರಾಮಹಮ್ಸ ಗ್ರೌಂಡಸೆಲ್ನಲ್ಲಿ ಹೂ ಸಸ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲವಾದರೂ ಹೆಚ್ಚಿನ ಸಾಂದ್ರತೆಯಿಲ್ಲ ಎನ್ನುತ್ತಾರೆ ಸುಳ್ಳೊಳ್ಳಿ ಅವರು.
ಬೆಳಗಾವಿ ಜಿಲ್ಲೆಯ ಖಾನಾಪೂರ ಅರಣ್ಯ ಪ್ರದೇಶದಲ್ಲಿ ಹುಟ್ಟಿ ಬಯಲು ಸೀಮೆಯಲ್ಲಿ ಹರಿಯುವ ಮಲಪ್ರಭಾ ನದಿಯಲ್ಲಿ ಈ ಸಸ್ಯ ಪ್ರಭೇದದ ಬೀಜಗಳು ಬಹುಶ ತೇಲಿ ಈ ಭಾಗದಲ್ಲಿ ಅಲ್ಲಲ್ಲಿ ಪಸರಿಸಿಕೊಂಡಿರಬಹುದಾಗಿದೆ. ಒಂದಾನೊಂದು ಕಾಲದಲ್ಲಿ ಶತಮಾನಗಳ ಹಿಂದೆ ಈ ಭಾಗದಲ್ಲಿಯೂ ದಂಡಕಾರಣ್ಯಗಳು ಇದ್ದಿರಬಹುದೆಂಬುದಕ್ಕೆ ಐತಿಹಾಸಿಕ ಪುರಾಣಗಳಲ್ಲಿ ಹೇಳಲಾಗಿದೆ. ಆಗಿನ ಕಾಲದಲ್ಲಿದ್ದ ಸಸ್ಯ ಪ್ರಭೇದಗಳು ಈಗಲೂ ಕೆಲವಡೆ ತಮ್ಮ ಜೀವಂತಿಕೆಯನ್ನು ಉಳಿಸಿಕೊಂಡಿರಬಹುದಾಗಿದೆ ಮಂಜುನಾಥ ಸುಳ್ಳೊಳ್ಳಿ (ಮೊ.ನಂ.9632511437) ಅವರು ಈ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಳ್ಳಲಿದ್ದು, ಸ್ಥಳೀಯ ಸಸ್ಯಶಾಸ್ತ್ರಜ್ಞರು ಹಾಗೂ ವಿದ್ಯಾರ್ಥಿಗಳು ಸಹ ಈ ಅಧ್ಯಯನಕ್ಕೆ ಕೈಜೋಡಿಸಲು ಅವರು ಕೋರಿದ್ದಾರೆ.








ಪ್ರಿಯ ಮಿತ್ರರಾದ ಡಾ ಖಾಡೆ ಅವರೆ, ಬಾದಾಮಿ ಬೆಟ್ಟದ ಸಸ್ಯ ಪರಿಸರ ಕುರಿತಂತೆ ಅಪರೂಪದ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು,
ಅಷ್ಟೇ ಅಪರೂಪದ ವಾರ್ತಾಧಿಕಾರಿಯಾದ ಮಂಜುನಾಥ ಸುಳ್ಳೊಳ್ಪಿ ಅವರಿಗೆ ನಮ್ಮೆಲ್ಲರ ಅಭಿನಂದನೆಗಳನ್ನು ದಯವಿಟ್ಟು ತಿಳಿಸಿರಿ
ಕುಂವೀ
Great!
Interesting research.
ಲಿಲಿಯೇಸಿ ಫ್ಯಾಮಿಲಿ ಬದಾಮಿಯಲ್ಲಿ ಕಾಣ್ತದೆ ಅಂದ್ರೆ ಅಚ್ಚರಿ ವಿಷಯ. ಯಾವಾಗಲೋ ಪ್ರವಾಸಿ ಮೂಲಕ ಬಂದಿರಬೇಕು.
Very informative article – Great!
-Anil