ಹೀಗೊಂದು ಬೆಳದಿಂಗಳು
ಶ್ರೀನಿಧಿ ಡಿ ಎಸ್
ಬೆಳದಿಂಗಳ ರಾತ್ರಿಯಲ್ಲಿ ಕೂತು ಸಾಹಿತ್ಯ ಕ್ಷೇತ್ರದ ದಿಗ್ಗಜರ ಜೊತೆ ಹರಟುವುದು ಎಂಬ ವಿಚಾರವನ್ನ ಕೇಳುವುದಕ್ಕೇ ಖುಷಿಯಾಗುವಾಗ, ಅದರಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಾಗ ಬಿಡುವ ಸಾಧ್ಯತೆ ಉಂಟೆ? ಜ್ಯೋತಿ ಮಹಾದೇವ್ ಅವರು ಹೀಗೊಂದು ಕಾರ್ಯಕ್ರಮ ಆಯೋಜಿಸುತ್ತಿರುವುದರ ಕುರಿತು ಹೇಳಿದಾಗ ನಾನಂತೂ ಖಂಡಿತ ಬರುತ್ತೇನೆ ಅಂದಿದ್ದೆ. ಉಡುಪಿಯಿಂದ ಹತ್ತು ಕಿಲೋಮೀಟರ್ ದೂರದ, ಪರ್ಕಳದ ಜ್ಯೋತಿಯವರ ಪ್ರಶಾಂತವಾಗಿರುವ ತೋಟದಲ್ಲಿ ಕಾರ್ಯಕ್ರಮ ಆಯೋಜನೆ. ಬಂದಿದ್ದವರು ಕನ್ನಡದ ಹಿರಿಯ ಕವಿ ಹೆಚ್.ಎಸ್.ವೆಂಕಟೇಶಮೂರ್ತಿ, ಉಡುಪಿಯ ಹಿರಿಯ ಸಂಘಟಕ, ಕತೆಗಾರ,ನಾಟಕಕಾರ ಉದ್ಯಾವರ ಮಾಧವ ಆಚಾರ್ಯ,ಹನಿ ಕವಿ ಡುಂಡಿರಾಜ್ ಕತೆಗಾರ ವಸುಧೇಂದ್ರ, ದತ್ತಾತ್ರಿ, ತ್ರಿವೇಣಿ, ಮಂಗಳೂರು ಆಕಾಶವಾಣಿಯ ವಸಂತ ಕುಮಾರ ಪೆರ್ಲ, ಕಾತ್ಯಾಯಿನಿ ಕುಂಜಿಬೆಟ್ಟು, ಈಶ್ವರ ಕಿರಣ ಭಟ್, ಅಪೂರ್ವಾ ರಾವ್ ಮತ್ತಿತತರು.( ಸುಮಾರು ಜನ ಬರ್ತೇನೆ ಅಂತಂದು ಬಂದಿಲ್ಲ ಎನ್ನುವುದು ಜ್ಯೋತಿಯವರ ಬೇಜಾರು)
ಎಲ್ಲ ಬಂದು ಸೇರುವವರೆಗೆ ಮೊದಲು ಬಂದೋರೆಲ್ಲ ಪಟ್ಟಾಗಿ ಗೋಳಿಬಜೆ ಕಾಪಿ ಕುಡಿದು ಹರಟೆ ಹೊಡೆಯುತ್ತ ಕೂತಿದ್ದೆವು. ಕಾರ್ಯಕ್ರಮಕ್ಕೆ ರೂಪುರೇಷೆ ಅಂತೇನೂ ಇರಲಿಲ್ಲ. ಬೆಳದಿಂಗಳೇ ಎಲ್ಲರ ಮಾತಿಗೂ ಸೂತ್ರ, ಅಷ್ಟೆ. ಮೊದಲಿಗೆ ಹೆಚ್ಚಿಸ್ವಿ ಸೊಗಸಾಗಿ ಮಾತನಾಡಿದರು. ಹನಿ ಕವಿ ಡುಂಡಿರಾಜರು ತಮ್ಮ ಹನಿಗವನಗಳ ಮೂಲಕ ಬೆಳದಿಂಗಳು, ಚಂದ್ರನನ್ನ ನೆನಪಿಸಿಕೊಂಡರು.
ವಸುಧೇಂದ್ರ ತಮ್ಮ ಚಾರಣದ ಜೊತೆಗಿನ ಬೆಳದಿಂಗಳ ಅನುಭವ ಹಂಚಿಕೊಂಡರು. ಎಂ.ಆರ್.ದತ್ತಾತ್ರಿ ಬೆಳದಿಂಗಳ ಕಾಮನಬಿಲ್ಲು ಹುಡುಕಿಕೊಂಡು ಹೊರಟ (ಮೂನ್ ಬೋ!) ತಮ್ಮ ಹುಚ್ಚಿನ ಬಗ್ಗೆ ಹೇಳಿಕೊಂಡರು. ಉದ್ಯಾವರ ಮಾಧವ ಆಚಾರ್ಯರು ಕಳೆದು ಹೋಗಿರುವ ಹಳೆಯ ಬೆಳದಿಂಗಳ ಸಖ್ಯವನ್ನ ನೆನೆಸಿಕೊಂಡರು. ಮುರುಳೀಧರ ಉಪಾಧ್ಯರು ಬೇಂದ್ರೆ ಕವನದ ಬೆಳದಿಂಗಳ ಬಗ್ಗೆ ಹೇಳುತ್ತ, ಹಿರಿಯಡಕದ ಬೆಳದಿಂಗಳಲ್ಲಿ ನಡೆಯುವ ಸಿರಿ ಜಾತ್ರೆ ಬಗ್ಗೆ ಹೇಳಿದರು.
ಜ್ಯೋತಿ ಮಹಾದೇವ್ ತಮ್ಮ ಕವನವೊಂದನ್ನ ವಾಚನ ಮಾಡಿದರು. ವಸಂತಕುಮಾರ್ ಪೆರ್ಲರೂ ತಮ್ಮ ಕವನವೊಂದನ್ನ ವಾಚಿಸಿ, ತಮ್ಮ ಝಮಾನಾದ ಬೆಳದಿಂಗಳ ಕತೆ ಹೇಳಿ- ಹೇಗೆ ತಾನು ಸಾವಿನ ದವಡೆಯಿಂದ ಬೆಳದಿಂಗಳ ರಾತ್ರಿಯೇ ಪಾರಾಗಿದ್ದೆ ಎನ್ನುವುದನ್ನ ಹೇಳಿದ್ರು. ಹೀಗೆ ಅಲ್ಲಿದ್ದ ಎಲ್ಲರೂ, ನನ್ನನ್ನೂ ಸೇರಿದಂತೆ ನಮ್ಮ ನಮ್ಮ ರಾತ್ರಿಗಳನ್ನ, ಬೆಳದಿಂಗಳ ನೆನಪುಗಳನ್ನ ಹಂಚಿಕೊಂಡೆವು. ಎಲ್ಲರೂ ಕೂತು ಒಂದಿಷ್ಟು ನಕ್ಕೆವು, ಕೊಂಚ ಭಾವುಕರಾದೆವು.
ಬೆಳದಿಂಗಳೇ ಚೌಕಟ್ಟಾಗಿ, ನಮ್ಮ ನೆನಪುಗಳ ಭಿತ್ತಿಯಲ್ಲಿ ಒಳ್ಳೆಯ ನೆನಪಿನ ಚಿತ್ರವಾಗಿ ಈ ಕಾರ್ಯಕ್ರಮ ಉಳಿಯುವುದಂತೂ ಖಂಡಿತ. ಇಂತದ್ದೊಂದು ಒಳ್ಳೆಯ ಆಲೋಚನೆ ಮಾಡಿ ಕಾರ್ಯಕ್ರಮ ಆಯೋಜಿಸಿದ ಜ್ಯೋತಿ ಮಹಾದೇವ್ ಗೆ ಕೃತಜ್ಞತೆಗಳು.
(ಆಡಿಯೋ ಕೃಪೆ:ಮುರುಳೀಧರ ಉಪಾಧ್ಯ, ಹಿರಿಯಡಕ)
ಫೋಟೋ : ಮಂಜು ಲಹಿರಿ
ಈ ಸ್ನೇಹ ಕೂಟದ ಚಿತ್ರಗಳು ನಿಮಗಾಗಿ. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಇನ್ನೂ ಹೆಚ್ಚಿನ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ






ಒಳ್ಳೆಯ ನೆನಪು ಈಗ. ತುಂಬಾ ಖುಷಿಯೆನಿಸಿದ ಒಂದು ಕಾರ್ಯಕ್ರಮ. ಜ್ಯೋತಿ-ಮಹಾದೇವ್ ದಂಪತಿಗಳಿಗೂ, ಎಲ್ಲರಿಗೂ, ಕೃತಜ್ಞತೆಗಳು.
obbaradaru abrahammannaru iddare chennagittu.
nimma anubhavagala jotege, lekhakara dhwani saha illi kottiruvudu tumba khushi aytu. Dhanyavada Shreenidhi.