ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಬೆಳಗಾಗಿ ನಾನೆದ್ದು’ ಓದಲೇಬೇಕು

ಕನ್ನಡದ ಪ್ರಾತಃಸ್ಮರಣೀಯರು
(ಓದಿನ ಟಿಪ್ಪಣಿ) 

ಡಾ. ಪಲ್ಲವಿ ಹೆಗಡೆ

ಪುಸ್ತಕ: ಬೆಳಗಾಗಿ ನಾನೆದ್ದು
ಲೇಖಕರು: ಡಾ. ಎಚ್. ಎಸ್.ವೆಂಕಟೇಶಮೂರ್ತಿ
ಪ್ರಕಾಶನ: ಬಹುರೂಪಿ
ಪುಟಗಳು: ೧೪೪

ಸಮಕಾಲೀನ ಸಾಹಿತ್ಯ ಮತ್ತು ಸಾಹಿತಿಗಳ ಕುರಿತು ಆಯಾ ಕಾಲದ ಪ್ರಾಜ್ಞರೇ ಮನದಟ್ಟು ಮಾಡಬಲ್ಲರು. ಕನ್ನಡದ ಇಪ್ಪತ್ತೊಂದು ಹಿರಿಯಸಾಹಿತಿಗಳ  ಆಪ್ತಲೋಕವನ್ನು ಹಿರಿಯರಾದ ಎಚ್. ಎಸ್. ವಿ.ಯವರು ತಮ್ಮ ಸ್ನಿಗ್ಧನೋಟದಿಂದ, ಲಾಲಿತ್ಯದಿಂದ, ಆದರದಿಂದ ಬರೆದ ‘ನುಡಿದೀಪ’ ಈ ಪುಸ್ತಕ.

ಹೊಸಪುಸ್ತಕದ  ನವಿರಾದ ಪರಿಮಳ, ಮುಖಪುಟದ ಸುವರ್ಣದ ಛಾಯೆಯಲ್ಲಿ ಮೂಡಿದ ಎಚ್. ಎಸ್. ವಿ.ಯವರ ನಗು, ಬೆಳಕಿನ‌ ಕಿಂಡಿಯಂತಹ ಸೆಳೆವ ಕಣ್ಣು, ಆಶೀರ್ವಾದವೋ, ಆಹ್ವಾನವೋ ಎಂಬಂತಹ ಹಾವಭಾವ, ಒಳಗಿನ‌ ಪುಟಗಳಲ್ಲಿ ಇಪ್ಪತ್ತೊಂದು ಹಿರಿಯ ಲೇಖಕರ ಅಪರೂಪದ ಭಾವಗಳನ್ನು ಹಿಡಿದಿಟ್ಟ ಕಪ್ಪು-ಬಿಳುಪಿನ ಚಿತ್ರಗಳು, ಈ ಪುಸ್ತಕವನ್ನು ಕೈಯಲ್ಲಿಟ್ಟುಕೊಂಡು ಕಾಪಾಡಿಕೊಳ್ಳುವಂತೆ ಮಾಡುತ್ತವೆ. ಇದು ‘ಬಹುರೂಪಿ’ಯ, ಪುಸ್ತಕಗಳ ಮೇಲಿನ ಅಪ್ಪಟ ಶ್ರದ್ಧೆ ಮತ್ತು ಪ್ರೀತಿಯ ದ್ಯೋತಕ.

‘ಆಪ್– ಯುಗ’ದ ಯುವ ಓದುಗರಿಗೆ ಹಿರಿತಲೆಮಾರಿನ ಮುದ್ರಿತ ಪುಸ್ತಕಗಳ ಓದು, ‘ಇ-ಲೋಕ’ದ ಪರಿಣಾಮದಿಂದಾಗಿ, ಸಮಯಾಭಾವದಿಂದಾಗಿ ಅಪರೂಪವಾಗುತ್ತಿರುವಾಗ ‘ಬೆಳಗಾಗಿ ನಾನೆದ್ದು’ ಪುಸ್ತಕ ಓದಿದರೆ ಕನ್ನಡಸಾಹಿತ್ಯದ ಪರಂಪರೆಯ ಬಗ್ಗೆ ಅಭಿಮಾನ, ಆಸಕ್ತಿ ಹುಟ್ಟುವುದು ಖಂಡಿತಾ.

ಸಂಕಲನದ ಬರೆಹಗಳೆಲ್ಲಾ ತಮ್ಮೊಂದಿಗಿದ್ದ‌ ಒಡನಾಟದ ಅನುಭವ, ಸಾಹಿತ್ಯದೊಂದಿಗಿನ ನಂಟು, ವೇದಿಕೊಂದರಲ್ಲಿ ಜೊತೆಯಾದ‌ ಕ್ಷಣಗಳು, ವಿದ್ವತ್ಪೂರ್ಣ ಚರ್ಚೆ ಇಂತಹ ಅಪರೂಪದ ಆಯ್ದ‌ ಅನುಭವಕಥನದಿಂದಾಗಿ ಇವು‌ ಮಾಹಿತಿಗಳಾಗಿರದೆ ಕಿರಿಯರಿಗೆ ಮಾದರಿಯಾಗಿವೆ. ಹಿರಿಯರ ವ್ಯಕ್ತಿತ್ವದೊಂದಿಗೆ ಬೆಸೆದ ಸೃಜನಾತ್ಮಕ ಒಳ-ಹೊರನೋಟಗಳನ್ನು ಎಚ್. ಎಸ್. ವಿ.ಯವರ ಕಾವ್ಯಾತ್ಮಕ ಶೈಲಿಯಲ್ಲಿ ಒಂದು ಅದ್ಭುತ, ಆಪ್ತದೃಷ್ಟಿಯನ್ನು ದಯಪಾಲಿಸುತ್ತದೆ.

ಹಿರಿಯರಾದ ಪು.ತಿ.ನ ಅವರ ಅಂತಃಚಕ್ಷು ನಮಗೆ ಗೊತ್ತಾ?

ಅಮೂರರ ವಿಮರ್ಶೆಗೆ ಅವರೆಷ್ಟು ಅಧ್ಯಯನಶೀಲರಾಗಿರುತ್ತಿದ್ದರು ಮತ್ತು ತಾವೆಷ್ಟು ವಿನೀತರಾಗಿದ್ದರು ನಮಗೆ ಅರಿವಿದೆಯೇ?

ಒಲವಿನ ಕವಿ ಕೆ. ಎಸ್.ನ ಅವರ ಪ್ರೇಮದ ರೀತಿಯ ಕಂಡಿದ್ದೇವಾ?

ಸು.ರಂ.  ಎಕ್ಕುಂಡಿಯವರ ಲೌಕಿಕ-ಅಲೌಕಿಕ ಪ್ರೌಢತೆಯ ಅನುಭವವಾಗಬೇಕೇ?

ಅಡಿಗರ ಕಾವ್ಯಪ್ರೀತಿ, ಪ್ರಾಣಿಪ್ರೀತಿ, ನಮ್ಮೊಂದಿಗೆ ಇನ್ನೂ ಇರುವ ಅವರ ರೀತಿ ತಿಳಿಯಬೇಕೇ?

ಎಲ್. ಎಸ್. ಶೇಷಗಿರಿರಾಯರು ‘ಬದುಕು ಅದಕ್ಕಿಂತ‌(ಸಾಹಿತ್ಯಕ್ಕಿಂತ) ದೊಡ್ಡದು’ ಎಂಬುದು ಏನೆಲ್ಲಾ ತೆರೆದಿಡುತ್ತದೆ?

ರಾಮಚಂದ್ರಶರ್ಮರ ಕಾವ್ಯನಿಷ್ಠೆ, ದಿಟ್ಟ ವ್ಯಕ್ತಿತ್ವದ ಪರಿಚಯವಿದೆಯೇ?

ರಾಷ್ಟ್ರಕವಿ ಡಾ.ಜಿ. ಎಸ್. ಶಿವರುದ್ರಪ್ಪ ಅವರ ದೋಸೆಪ್ರೀತಿಯ ನೆನಪಿನ‌ ಬಿಲ್ಲು ಬೇಕೇ?

ಚೆನ್ನವೀರ ಕಣವಿಯವರು ಹೃದಯಕ್ಕಿಳಿಯುವ ನಡೆ-ನುಡಿ-ನಗುಗಳ ಸಂಗಮವೆಂದರೆ ಹೇಗೆ? ಕೀರ್ತಿನಾಥ ಕುರ್ತಕೋಟಿಯವರ ಹಳಗನ್ನಡ ಕಾವ್ಯೋನ್ಮಾದ, ಭಕ್ತಿ, ಗುರುತ್ವ ತಿಳಿಯಬೇಕೇ?

ಸಿದ್ಧಲಿಂಗಯ್ಯನವರು ಶಿಸ್ತಿನ ದಿನಚರಿಯ‌ ನಡುವೆಯೂ ಹೇಗೆ ಸ್ನೇಹಮಯಿಯಾಗಿ ಅಷ್ಟೇ ಖಡಕ್ ಆಗಿರುತ್ತಿದ್ದರು ಗೊತ್ತೇ?

ಅನಂತಮೂರ್ತಿಯವರು ನರ್ಸಿಂಗ್ ಹೋಮಿನಲ್ಲಿದ್ದಾಗಲೂ ಕೊನೆಗಾಲದಲ್ಲೂ ಕಾವ್ಯಾಸಕ್ತಿಯನ್ನು ಹೇಗೆ ಉಳಿಸಿಕೊಂಡಿದ್ದರು ಅರ್ಥವಾಗಬೇಕೇ?

ಕೆ.ವಿ.ಸುಬ್ಬಣ್ಣನವರ ವಿಶ್ವರೂಪದರ್ಶನವನ್ನು ನೋಡಬೇಕೆ?

ನಿಸಾರ್ ಅಹಮದರ ಸರಳತೆ-ಶಿಸ್ತು ಎರಡು ಮುಖಗಳ ಪರಿಚಯವಿದೆಯೇ?

ಕಿರಿಯರಿಗೊಂದು ಆಸರೆಯಾದ ಕಂಬಾರರ ಬಗ್ಗೆ ಓದಬೇಕೆ?

ಲಕ್ಷ್ಮೀನಾರಾಯಣ ಭಟ್ಟರ ಕಾವ್ಯಾಂಕುರ, ಸಹಾಯಹಸ್ತ ಚಾಚುತ್ತಿದ್ದ ಪರಿಯನ್ನೆಲ್ಲಾ ನೋಡಬೇಕೆ?

ಸುಮತೀಂದ್ರ ನಾಡಿಗರ ಮೃದುಮನಸ್ಸು, ಕಠಿಣತೆಯ ವೈವಿಧ್ಯತೆಯೇನು?

ಹಸ್ತಪ್ರತಿಯನ್ನು ತಿದ್ದಿತೀಡಿ ಪರಿಪೂರ್ಣವಾಗಿಸಿ ತೃಪ್ತಿಯಿಂದ ಹೊಗಳುತ್ತಿದ್ದ ಗಿರಿಡ್ಡಿಯವರ ಸಾತತ್ಯ ಗೊತ್ತೆ?

ತಿರುಮಲೇಶರ ಅನನ್ಯತೆಯೇನು?

ಜಿ.ಎನ್.ರಂಗನಾಥ್ ರಾವ್ ಅವರು ಸಾಹಿತಿಗಳನ್ನು ಪೊರೆಯುತ್ತಿದ್ದದ್ದು ಹೇಗೆ?

ಕಿರಿಯರ ನೆಚ್ಚಿನ ಚೊಕ್ಕಾಡಿಯವರ ಮುನಿಸೇ ಇಲ್ಲದ ಮುಗ್ಧತೆ, ನಮ್ಮನ್ನೂ ಹೇಗೆ ಚೊಕ್ಕವಾಗಿಸುತ್ತದೆ?

 

ಬೆಳಗಾಗಿ ಈ ಪುಸ್ತಕ ಓದಬೇಕು.

ನನಗೆ  ಗೊತ್ತಿಲ್ಲದ ಜೀವನದರ್ಶನದೊಂದಿಗೆ ಓದಿ ವಿನೀತಳಾದೆ, ಪುನೀತಳಾದೆ.

ಈ ಪುಸ್ತಕವನ್ನೋದಿ ಕನ್ನಡಮ್ಮ ಎಷ್ಟು ಧನ್ಯಳು ಎನಿಸುತ್ತದೆ. ಇದೊಂದು ಸಂಗ್ರಹಯೋಗ್ಯ, ದಿವ್ಯವಾಕ್ಯದಂತೆ ಮನನಮಾಡಬೇಕಾದ ಕೃತಿ.

ಓದದೆ ಇದ್ದಿದ್ದರೆ ನಾನು ಎಷ್ಟೊಂದು ಕಳೆದುಕೊಳ್ಳುತ್ತಿದ್ದೆ? ಒಬ್ಬ ಮನುಷ್ಯನ ಉನ್ನತಿಗೆ ದಾರಿಯನ್ನೂ ಬೆಳಗಿಸುವ, ಬೆಳೆಸುವ ಈ ಓದನ್ನು ನಾನೆಂದೂ ಮರೆಯಲಾರೆ.

ಧನ್ಯವಾದ –  ಡಾ. ಎಚ್. ಎಸ್. ವೆಂಕಟೇಶಮೂರ್ತಿ ಸರ್ ಮತ್ತು ‘ಬಹುರೂಪಿ’.

ಪುಸ್ತಕ ಕೊಳ್ಳಲು-

https://bahuroopi.in/product/belagaagi-naaneddu/

‍ಲೇಖಕರು avadhi

18 July, 2019

1 Comment

  1. Kotresh T A M Kotri

    ಮಾಹಿತಿ ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading