ಬೆಳಕು ಬೀರಿದ ಹಣತೆಯೂ, ಉರಿದ ಮೊಂಬತ್ತಿಯೂ…

ಮ ಶ್ರೀ ಮುರಳಿಕೃಷ್ಣ 

ಕಾರ್ಲ್ ಮಾರ್ಕ್ಸ್ ಎನ್ನುವ ಹೆಸರು ಕೇಳಿದೊಡನೆ, ಪ್ರಪಂಚದಾದ್ಯಂತ ಆತನನ್ನು ಬಲ್ಲ ಹಲವರಲ್ಲಿ ಒಂದೋ ಅಚ್ಚರಿ, ಭರವಸೆಯ ಭಾವ ಮೂಡುತ್ತದೆ, ಇಲ್ಲದಿದ್ದರೇ ಹೇವರಿಕೆ ಕುಡಿಯೊಡೆಯುತ್ತದೆ; ಮೂದಲಿಕೆಯ ಮಾತುಗಳು ತೇಲಿ ಬರುತ್ತವೆ. ಬಹುಶಃ ಈ ರೀತಿಯ ವ್ಯತಿರಿಕ್ತ ಭಾವಗಳನ್ನು ಮೂಡಿಸುವಂತಹ ಚಾರಿತ್ರಿಕ ದಿಗ್ಗಜರು ಕಡಿಮೆ ಎಂದೇ ಹೇಳಬಹುದು.

ನಮ್ಮ ದೇಶದಲ್ಲಿ, ವಿನ್‍ಸ್ಟನ್ ಚರ್ಚಿಲ್‍ನಿಂದ “ಅರೆನಗ್ನ ಫಕೀರ” ಎಂದು ಕರೆಸಿಕೊಂಡ ಮಹಾತ್ಮ ಗಾಂಧೀಜಿಯವರೂ ಇಂತಹವರಲ್ಲಿ ಒಬ್ಬರು. ಕರ್ನಾಟಕಕ್ಕೆ ಸಂಬಂಧಿಸಿದ ಹಾಗೆ ರಾಜರ ಪೈಕಿ ಟಿಪ್ಪು ಸುಲ್ತಾನ ಕೂಡ ಒಬ್ಬ.

ಆದರೆ ಮಾಕ್ರ್ಸ್ ಇಂದಿಗೂ ಜಗತ್ತಿನಾದ್ಯಂತ ಹಲವು ಜನರ ಮನಸ್ಸಿನಲ್ಲಿ ನೆಲೆಸಿದ್ದಾನೆ. ಅನೇಕ ಜನಪರ ಹೋರಾಟಗಳಿಗೆ ಸ್ಪೂರ್ತಿಯಾಗಿದ್ದಾನೆ. 1999ರಲ್ಲಿ ಒಂದು ಸಹಸ್ರ ವರ್ಷದ ಅವಧಿಯ ಅತ್ಯಂತ ಶ್ರೇಷ್ಠ ಚಿಂತಕ ಯಾರು ಎಂಬ ವಿಷಯದ ಬಗೆಗೆ ಜರುಗಿದ ಬಿಬಿಸಿ ನ್ಯೂಸ್ ಆನ್‍ಲೈನ್ ಮತಗಣನೆಯಲ್ಲಿ ಮಾರ್ಕ್ಸ್ ಪ್ರಥಮ ಸ್ಥಾನದಲ್ಲಿದ್ದ. ಎರಡನೆಯ ಸ್ಥಾನದಲ್ಲಿದ್ದದ್ದು ಆಲ್ಬರ್ಟ್ ಐನ್‍ಸ್ಟೀನ್. ಬಿಬಿಸಿ ರೇಡಿಯೊ 4 2005ರಲ್ಲಿ ನಡೆಸಿದ ಎಲ್ಲ ಕಾಲದ ಉತ್ಕೃಷ್ಟ ತತ್ವಶಾಸ್ತ್ರಜ್ಞ ಕುರಿತ ಮತಗಣನೆಯಲ್ಲೂ ಮಾರ್ಕ್ಸ್ ಅಗ್ರಮಾನ್ಯ ಸ್ಥಾನ ಪಡೆದಿದ್ದ !

ಮಾರ್ಕ್ಸ್ (ಮೇ 5, 1818-ಮಾರ್ಚ್ 14, 1883) ಜನಿಸಿ ಎರಡು ಶತಮಾನಗಳಾಗುತ್ತಿವೆ. ಅಂದಿನ ಪ್ರಷ್ಯಾದಲ್ಲಿ (ಇಂದಿನ ಜರ್ಮನಿ) ಜನಿಸಿ, ಬಾನ್‍ನ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಶಿಕ್ಷಣ ಪಡೆದು, ಇತಿಹಾಸ, ತತ್ವಶಾಸ್ರ್ರ, ಸಮಾಜಶಾಸ್ತ್ರ ಮುಂತಾದ ವಿಷಯಗಳ ಅಧ್ಯಯನಗಳಲ್ಲಿ ತೊಡಗುತ್ತಾನೆ. ನಂತರ ಹೆಗೆಲ್‍ನ ತತ್ವಶಾಸ್ತ್ರದಿಂದ ಆಕರ್ಷಿತಗೊಳ್ಳುತ್ತಾನೆ.

‘ರೈನ್ ಪತ್ರಿಕೆ’ಗೆ ಲೇಖನಗಳನ್ನು ಬರೆದು, ಅದರ ಸಂಪಾದಕನೂ ಆಗುತ್ತಾನೆ. ಸಮಾಜದ ದುಡಿಯುವ ವರ್ಗದ ದುಸ್ತರ ಬದುಕಿಗೆ ಬಂಡವಾಳಶಾಹಿ ವ್ಯವಸ್ಥೆಯ ಆಳುವ ವರ್ಗದ ನೀತಿ, ಧೋರಣೆಗಳೇ ಕಾರಣ ಎಂದು ಖಂಡಾತುಂಡವಾಗಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾನೆ. ಈ ಕಾರಣಕ್ಕಾಗಿ ಪ್ರಷ್ಯಾದಿಂದ ಹೊರದೂಡಲ್ಪಡುತ್ತಾನೆ.

ಪ್ಯಾರಿಸ್‍ನಲ್ಲಿ ನೆಲೆ ನಿಲ್ಲುತ್ತಾನೆ. ಅಲ್ಲಿಂದಲೂ ಆತನನ್ನು ಎತ್ತಂಗಡಿ ಮಾಡಲಾಗುತ್ತದೆ. ಕೆಲವು ವರ್ಷಗಳ ತರುವಾಯ ಬೆಲ್ಜಿಯಂನಿಂದ ಉಚ್ಛಾಟಿತಗೊಳ್ಳುತ್ತಾನೆ! ಹೀಗೆ ಒಂದರ್ಥದಲ್ಲಿ ಅನಿಕೇತನನಾಗುತ್ತಿರುತ್ತಾನೆ. ಹೀಗಾಗುತ್ತಲೇ ಕ್ರಾಂತಿಕಾರಿಯಾಗುತ್ತಾನೆ; ವಿಶ್ವಮಾನವನಾಗುತ್ತಾನೆ. ಇಡೀ ವಿಶ್ವ ಗಮನಿಸುವ ಕೊಡುಗೆಗಳನ್ನು ನೀಡುತ್ತಾನೆ. ಕೊನೆಗೆ ಲಂಡನ್‍ನಲ್ಲಿ ವಾಸ್ತವ್ಯ ಹೂಡುತ್ತಾನೆ.

ಹೆಗೆಲ್‍ನ ಭಾವನಾವಾದಿ ತತ್ವಶಾಸ್ತ್ರವನ್ನು ತೀವ್ರ ಪರಾಮರ್ಶೆಗೆ ಒಳಪಡಿಸಿ, ಅದರ ಮಿತಿಗಳನ್ನು ಅರಿತು, ಭೌತವಾದಿ ನೆಲೆಯಲ್ಲಿ ಸಮಾಜದ ಉಗಮ, ವಿಕಸನ ಹಾಗೂ ಸಮಷ್ಟಿಯ ಹಿತದಲ್ಲಿ ತಲುಪಬೇಕಾದ ಅಂತಿಮ ಸಮಸಮಾಜ ಹಂತದ ಬಗೆಗೆ ತನ್ನ ಆಧ್ಯಯನಗಳು, ಸೈದ್ಧಾಂತಿಕ ಪ್ರತಿಪಾದನೆಗಳು ಮತ್ತು ಕಾರ್ಯಾಚರಣೆಗಳ ಮೂಲಕ ನವವ್ಯವಸ್ಥೆಯ ಕನಸುಗಳಿಗೆ ರೆಕ್ಕೆಗಳನ್ನು ಜೋಡಿಸುತ್ತಾನೆ.

“ತತ್ವಶಾಸ್ತ್ರಜ್ಞರು ವಿಶ್ವವನ್ನು ಅನೇಕ ಬಗೆಗಳಲ್ಲಿ ವ್ಯಾಖ್ಯಾನಿಸಿದ್ದಾರೆ. ಆದರೆ ಪ್ರಮುಖ ಪ್ರಶ್ನೆಯೆಂದರೆ ಅದನ್ನು ಬದಲಾಯಿಸುವುದು..” ಎಂದ ಮಾರ್ಕ್ಸ್ ತನ್ನ ಹಿಂದಣ ತತ್ವಶಾಸ್ತ್ರಜ್ಞರನ್ನು “ಜೊಳ್ಳು’’ ಎಂದು ಮೂಲೆಗುಂಪಾಗಿಸಲಿಲ್ಲ. ಅವರ ಕೊಡುಗೆಗಳನ್ನು ಒರೆಗಲ್ಲಿಗೆ ಹಚ್ಚಿ, ತನ್ನ ನಿಲುವುಗಳನ್ನು ಸ್ಪಷ್ಟವಾಗಿ, ಧೈರ್ಯದಿಂದ ಪ್ರಸ್ತುತಪಡಿಸುತ್ತಾನೆ. ಸಮಾಜವಾದಿ ಸಿದ್ಧಾಂತವನ್ನು ಮಾರ್ಕ್ಸ್ ಒಂದರ್ಥದಲ್ಲಿ ಸಂಶೋಧಿಸಲಿಲ್ಲ. ಆತನ ಹಿಂದಿನ ಕೆಲವು ಮುತ್ಸದ್ದಿಗಳಿಗೆ ಅದರ ಕೆಲವು ಹೊಳಹುಗಳಿದ್ದವು. ಆದರೆ ಇದಕ್ಕೆ ಒಂದು ವೈಜ್ಞಾನಿಕ ಆಯಾಮ ನೀಡಿದ್ದು ಮಾರ್ಕ್ಸ್ನ ಹಿರಿಮೆ.

‘ದಾಸ್ ಕ್ಯಾಪಿಟಲ್’, ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೊ’, ‘ಕ್ರಿಟಿಕ್ ಆಫ್ ದಿ ಗೋತಾ ಪ್ರೋಗ್ರಾಂ’ ಮುಂತಾದ ಅನನ್ಯ ಗ್ರಂಥಗಳು, ಪುಸ್ತಕಗಳನ್ನು, ‘ಚಾರಿತ್ರಿಕ ಮತ್ತು ದ್ವಂದ್ವಮಾನ ಭೌತಿಕವಾದ’(Historical & Dialectical Materialism), ‘ಮಿಗುತಾಯ ಮೌಲ್ಯ’ (Surplus Value) ಇತ್ಯಾದಿ ಪರಿಕಲ್ಪನೆಗಳನ್ನು ನೀಡಿ ದುಡಿಯುವ ವರ್ಗದ ನಾಳೆಗಳ ಬದುಕುಗಳಿಗೆ ಆಶಾಕಿರಣವನ್ನು ಮೂಡಿಸಿದ  ಮಾರ್ಕ್ಸ್ ನ ವೈಯಕ್ತಿಕ ಜೀವನ ಸುಗಮವೇನೂ ಆಗಿರಲಿಲ್ಲ.

ಆಪ್ತಮಿತ್ರ ಹಾಗೂ ಸಮಸಮಾಜದ ಸಿದ್ಧಾಂತದ ಸಹಪಯಣಿಗ ಫ್ರೆಡರಿಕ್ ಏಂಗೆಲ್ಸ್ ನೀಡಿದ ನೆರವು, ಸಹಕಾರ ಆತನ ಬಾಳ ಯಾನಕ್ಕೆ ತಂಗಾಳಿಯಾಗಿತ್ತು. ಕಾಡುವ, ಹಿಂಡುವ ಬಡತನ, ಮಕ್ಕಳ ಸಾವು, ಅನಾರೋಗ್ಯ ಮುಂತಾದ ಧೃತಿಗೆಡುವ ಬೆಳವಣಿಗೆಗಳ ನಡುವೆ ಮಾರ್ಕ್ಸ್ ಬೆಳಕನ್ನು ಬೀರುವ ಹಣತೆಯಾದ; ಉರಿದುಹೋದ ಮೊಂಬತ್ತಿಯೂ ಕೂಡ.

‍ಲೇಖಕರು avadhi

May 5, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. M S MURALI KRISHNA

    ಧನ್ಯವಾದ..ಅವಧಿ.. ಮ ಶ್ರೀ ಮುರಳಿ ಕೃಷ್ಣ

    ಪ್ರತಿಕ್ರಿಯೆ
  2. ANANTHA Padmanabha Kadiri

    ಚಿಕ್ಕದಾದರು ಚೊಕ್ಕವಾದ ಲೇಖನ. ಚೆನ್ನಾಗಿದೆ.

    ಪ್ರತಿಕ್ರಿಯೆ
  3. Vishwanath Naik

    ಚಿಕ್ಕ, ಚೊಕ್ಕ, ಮಾಹಿತಿ ಪೂರ್ಣ ವಾದ ಲೇಖನ.
    K.Vishwanath Naik

    ಪ್ರತಿಕ್ರಿಯೆ
  4. Vishwanath Naik

    ಚಿಕ್ಕ, ಚೊಕ್ಕ, ಮಾಹಿತಿ ಪೂರ್ಣ ವಾದ ಲೇಖನ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: