ನನ್ನ ಅಪ್ಪ ಆರ್ ವಿ ಭಂಡಾರಿ..

ಆರ್ ವಿ ಭಂಡಾರಿ ಎಂದರೆ ತಕ್ಷಣ ನನಗೆ ನೆನಪಾಗುವುದು ಅವರ ವಿನಾಕಾರಣ ಪ್ರೀತಿ ಹಾಗೂ ಅವರ ಎಲ್ಲವನ್ನೂ ಒಂದೇ ಪೋಸ್ಟ್ ಕಾರ್ಡ್ ನಲ್ಲಿ ಹೇಳಿಬಿಡಬೇಕು ಎನ್ನುವ ತವಕ.

ಅವರು ನನಗೆ ವರ್ಷಗಟ್ಟಲೆ ಬರೆದ ಪತ್ರಗಳು ನನ್ನೊಂದಿಗೆ ಇವೆ. ಅದರಲ್ಲಿ ಅತಿ ಹೆಚ್ಚಿನದ್ದು ಪೋಸ್ಟ್ ಕಾರ್ಡ್ ಗಳೇ. ಅವರಿಗೆ  ಮಾತನಾಡುವ, ಚರ್ಚಿಸುವ, ಸಂವಾದಿಸುವ ತವಕ ಎಷ್ಟಿತ್ತು ಎನ್ನುವುದಕ್ಕೆ ಆ ಪೋಸ್ಟ್ ಕಾರ್ಡ್ ಗಳೇ ಸಾಕ್ಷಿ. ಅವರು ಬರೆಯುವ ಕಾರ್ಡ್ ನಲ್ಲಿ ಒಂದಕ್ಷರಾದಷ್ಟೂ ಜಾಗ ಅವರು ಉಳಿಸುತ್ತಿರಲಿಲ್ಲ. ಬರದೇ ಬರೆಯುತ್ತಿದ್ದರು.

ನಮ್ಮ ಪುಸ್ತಕದ ಬಗ್ಗೆ, ಅವರು ಓದಿದ್ದರ ಬಗ್ಗೆ, ಅವರ ಪುಸ್ತಕಗಳ ಬಗ್ಗೆ ಹೀಗೆ ಸದಾ ನನ್ನ ಅವರ ನಂಟು

ಇದು ನನ್ನೊಬ್ಬನಿಗೆ ಮಾತ್ರವಲ್ಲ. ಅವರ ಹತ್ತಿರಕ್ಕೆ ಬಂದವರ ಎಲ್ಲರ ಅನುಭವವೂ ಹೌದು. ಬಂಡಾಯ ಸಾಹಿತ್ಯದ ಹಲವು ಮುಖಗಳಲ್ಲಿ ನನಗೆ ಆರ್ ವಿ ಭಂಡಾರಿಯವರದ್ದು ಮರೆಯಲಾಗದ ಮುಖ. ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.

ನಾನು ಮಂಗಳೂರಿಗೆ ಹೋದ ಮೇಲೆ ಅವರು ನೆರೆಯವರೇ ಆದ ಕಾರಣ ಇನ್ನಷ್ಟು ಅವರನ್ನು ಗಮನಿಸಲು ಸಾಧ್ಯವಾಯಿತು. ನಂತರ ಗುಲ್ಬರ್ಗದಲ್ಲಿದ್ದಾಗಲೂ ಅವರ ಕಾರ್ಡ್ ಚಳವಳಿಯಿಂದಾಗಿ ಆ ಸ್ನೇಹದ ತಂತು ಕಡಿದು ಹೋಗಲೇ ಇಲ್ಲ.

ಅವರು ಮೊದಲು ಬದಲಾವಣೆ ತಂದದ್ದು ತಮ್ಮ ಮನೆಯೊಳಗೇ. ಮನೆಯನ್ನು ಮೌಢ್ಯದೊಳಕ್ಕೆ ತಳ್ಳಿ ಸಮಾಜವನ್ನು ಮಾತ್ರ ಬದಲಾಯಿಸಲು ಹೊರಟವರ ನಡುವೆ ಇವರು ತೀರಾ ಭಿನ್ನ. ಹಾಗಾಗಿಯೇ ವಿಠ್ಠಲ, ಮಾಧವಿ, ಯಮುನಾ ಇವತ್ತು ಥೇಟ್ ಅಪ್ಪನಂತೆಯೇ ವಿಚಾರದ ದೀವಿಗೆಗಳು

ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.

ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ

ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ

-ಜಿ ಎನ್ ಮೋಹನ್ 

ಇದು ನನ್ನ ‘ಅಣ್ಣನ ನೆನಪು’

ನೆನಪು 1

ವಿಠ್ಠಲ ಭಂಡಾರಿ

ಅಣ್ಣ ನಮ್ಮನ್ನು ಮುದ್ದಿಸಿದ ನೆನಪು ನನಗಿಲ್ಲ.

ಮೊದಲಿಂದ ಆತ ಒಬ್ಬ ಗಂಭೀರ ವ್ಯಕ್ತಿಯಾಗಿಯೇ ನನಗೆ ಕಾಣಿಸುತ್ತಿದ್ದ.

ಯಾರೊಂದಿಗೂ ಹರಟೆ ಹೊಡೆಯುವುದಾಗಲೀ, ಅನವಶ್ಯಕ ಮಾತುಕತೆಯಾಡುತ್ತಾ ಸಮಯ ಕಳೆಯುವುದಾಗಲೀ, ಲೋಕಾಭಿರಾಮವಾಗಿ ಇನ್ನೊಬ್ಬರನ್ನು ಟೀಕೆ ಮಾಡುತ್ತಾ ಕುಳಿತುಕೊಳ್ಳುವುದಾಗಲೀ ನಾನು ನೋಡೇ ಇಲ್ಲ. ಹಾಗೆ ಅವನನ್ನು ನಾನು ಕಲ್ಪಿಸಲಾರೆ.

ಗೆಳೆಯರೊಂದಿಗೆ ಆತ ನಕ್ಕಾಗ ನಾವು ಕಿಡಕಿಯಲ್ಲಿ ನೋಡಿ ಖುಷಿಪಟ್ಟ ದಿನಗಳಿದ್ದವು. ನಾನು ಯಾರನ್ನಾದರೂ ಟೀಕೆ ಮಾಡುವಾಗಲೆಲ್ಲಾ ಆತನ ನೆನಪು ನನ್ನ ನಾಲಿಗೆಗೆ ಬ್ರೇಕ್ ಹಾಕುತ್ತಿರುತ್ತದೆ.

ಆತನನ್ನು ನಾನು ತೀರಾ ಪ್ರೀತಿಸತೊಡಗಿದ್ದು ಸೈದ್ಧಾಂತಿಕವಾಗಿಯೇ ಎನ್ನಬಹುದು. ಅಂದರೆ ನಾನು ಕಾಲೇಜಿಗೆ ಹೋಗಲು ಪ್ರಾರಂಭಿಸಿದಾಗಲೇ. ಇದಕ್ಕಿಂತ ಮೊದಲು ಅವನನ್ನು ಕಂಡರೆ ವಿಚಿತ್ರ ಭಯ, ಗೌರವ ಮಾತ್ರ ಇತ್ತೆಂದು ಕಾಣುತ್ತದೆ. ಅವನ ಸಹನಾಶೀಲ ಬದುಕಿನ ಬಗ್ಗೆ… ವಿಶ್ವ ಕೋಶದಂತಿರುವ ಜ್ಞಾನದ ಬಗ್ಗೆ… ಒಂದು ನಿಮಿಷವನ್ನೂ ವ್ಯರ್ಥ ಮಾಡದೆ ಓದುವ ಅವನ ಆಸಕ್ತಿಯ ಬಗ್ಗೆ… ಈ ಗೌರವ ಇತ್ತು. ಆದರೆ ಪ್ರೀತಿ ಇತ್ತೇ?

ನಾನಾಗಲೀ ನನ್ನ ಹಿರಿಯಕ್ಕ ಇಂದಿರಾ ಆಗಲಿ ಅಣ್ಣನ ಎದುರು ಕುಳಿತುಕೊಳ್ಳುತ್ತಿರಲೇ ಇಲ್ಲ; ಅಷ್ಟು ಭಯ. ಮಾಧವಿ ಮಾತ್ರ ಭಯ ಇಲ್ಲದೇ ಕೂಡ್ರುತ್ತಿದ್ದಳು. ಹಾಗೆ ಆತ ಆರಾಮ ಕುರ್ಚಿಯಲ್ಲಿ ಕುಳಿತಿರುವಾಗ ಅವನೆದುರು ಭಯವಿಲ್ಲದೆ ಮಂಚದ ಮೇಲೆ ಕುಳಿತು ಕೊಂಡಿದ್ದು ಎಂ.ಎ. ಓದಲು ವಿಶ್ವವಿದ್ಯಾಲಯಕ್ಕೆ ಹೋದ ಮೇಲೆಯೆ. ಇಲ್ಲದಿದ್ದರೆ ನಿಂತೇ ಇರುವುದು.

ಆತ ಯಾವಾಗಲೂ ಒಬ್ಬನೇ ಊಟ ಮಾಡುವುದು. ಅವನಾದ ಮೇಲೆ ನಮ್ಮೆಲ್ಲರ ಊಟ. ಯಾಕೆಂದರೆ ಅವನೊಂದಿಗೆ ಊಟಕ್ಕೆ ಕುಳಿತರೆ ಹರಟೆ ಹೊಡೆಯಲು ಆಗುತ್ತಿರಲಿಲ್ಲ. ಊಟದ ಬಗ್ಗೆ ಏನೂ ಕತೆ ಕಟ್ಟಲು ಸಾಧ್ಯ ಆಗುತ್ತಿರಲಿಲ್ಲ. ತಮಾಷೆಗೆ, ಹರಟೆಗೆ ಅವಕಾಶ ಇರಲಿಲ್ಲ. ಒಂದೂ ಮಾತು ಆಡದೇ ಊಟ ಮಾಡುವುದೆಂದರೆ ಅದು ರುಚಿಸದು. ಆತ ಊಟಕ್ಕೆ ಮತ್ತು ತಿಂಡಿಗೆ ಒಳ ಬಂದರೆ ನಾವು (ನಾನು ಮತ್ತು ಅಕ್ಕ) ಹೊರಗೆ, ಆತನ ಆರಾಮ ಕುರ್ಚಿಯಲ್ಲಿ ಕೂಡ್ರಲು ಸ್ಪರ್ಧೆ ನಮ್ಮೊಳಗೆ; ಆತ ಹೊರಗೆ ಬಂದರೆ ನಾವು ಅಲ್ಲಿಂದ ಮಾಯ.

ಅವನೊಂದಿಗೆ ನನ್ನ ಯಾವ ಬೇಡಿಕೆಯನ್ನು ಮಾತನಾಡುವುದಿದ್ದರೂ ಒಂದು ನಿರ್ದಿಷ್ಟ ಸಮಯವನ್ನು ಎದುರು ನೋಡುತ್ತಿದ್ದೆ. ಅದು ಊಟದ ನಂತರ ಆತ ಹಾಕುವ ಕವಳದ ಗಳಿಗೆ.

‍ಲೇಖಕರು avadhi

May 5, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Yamuna

    ಹೌದು, “ಆ ರವಿ” ಇನ್ನೂ ತುಸು ವರ್ಷ ಬದುಕುವ ಅಗತ್ಯವೂ ಇತ್ತು.

    ಪ್ರತಿಕ್ರಿಯೆ
  2. Mahantesh

    #ಆರ್_ವಿ_ನೆನಪು ಅನಾವಣಗೊಳ್ಳಲಿ

    ನನಗೆ ವಿಠಲ ಸುಮಾರು 30 ವರ್ಷಗಳ ಗೆಳೆಯ ಈಗಲೂ ನಮ್ಮ ಕುಟುಂಬದ ಒಬ್ಬನಾಗಿದ್ದಾನೆ. ವಿದ್ಯಾರ್ಥಿ ಚಳವಳಿಯನ್ನು ಕುವೆಂಪು ವಿವಿಯಲ್ಲಿ ಕಟ್ಟಿದ ನಾಯಕ.ಡಾ.ಕೇಶವ ಶರ್ಮರ ಸಾಹಿತ್ಯದ ಗರಡಿಯಲ್ಲಿ ಬೆಳೆದ ಪ್ರಬುಧ್ದ ವಿದ್ಯಾರ್ಥಿ. ನನ್ನ ಬಿ.ಎ ಶಿಕ್ಷಣ ನಂತರ ನನ್ನನ್ನು ಕುವಂಪು ವಿವಿಗೆ ಸೇರಿಸಲು ಆಸೆ ಪಟ್ಟ ಆದರೆ ನನಗೆ ದಾವಣಗೆರೆಯಲ್ಲೇ ಸಂಘಟನಾ ಕೆಲಸದ ಕಾರಣ ಅಲ್ಲಿಗೆ ಹೋಗಲಾಗಲಿಲ್ಲ.ನಂತರ ಯುವಜನ ಚಳವಳಿಯ ರಾಜ್ಯ ಕಾರ್ಯದರ್ಶಿಯಾಗಿ ಬೆಂಗಳೂರಿಗೆ ಬಂದಾಗ ನನಗೆ ಬೆನ್ನಲುಬಾಗಿ ಕೆಲಸ ಮಾಡಿದ ಸಂಗಾತಿ.ನನಗೆ ನೆನಪಿದೆ ಎಂ.ಎ ಮುಗಿಸಿ ಪೂರ್ಣವಧಿ ಕಾರ್ಯಕರ್ತನಾಗಿ ಅವನು ಕೆಲಸ ಆರಂಭಿಸಿದಾಗ ತಂದೆ ಆರ್.ವಿ. ಭಂಡಾರಿಗೆ ತುಸು ಬೇಸರವಾದಂತಿತ್ತು. ಆದರೆ ವಿಠಲ ಕೆಲಸ ಮಾಡುತ್ತಾ ಮಾಡುತ್ತಾ ಹೋದಂತೆಲ್ಲ ಅದನ್ನು ಸಹಿಸಿಕೊಂಡರು. ನಾನು ಅವರ ಮನೆಯಲ್ಲೇ ಹಲವು ಬಾರಿ ಉಳಿದುಕೊಂಡಿದ್ದೆ. ಯುವಜನ ಚಳವಳಿಗಾಗಿ ವಿಠಲನ ಬೈಕಿನಲ್ಲಿ ಉ.ಕನ್ನಡದ ಕಾಡು ಸುತ್ತಿದ್ದೇನೆ.ಆಗೆಲ್ಲಾ ಸಂಘಟನಾ ಕೆಲಸಗಳಿಗೆ ಅಪ್ಪ ಮತ್ತು ಅಕ್ಕನ ದುಡಿಮೆಯ ಹಣವನ್ನು ಹೇರಳವಾಗಿ ಬಳಸಿದ್ದನ್ನು ಕಣ್ಣಾರೆ ನೋಡಿದ್ದೇನೆ. ಆದರೆ ಯಾವತ್ತೂ ಅಪ್ಪ ಅಕ್ಕ ಅದಕ್ಕೆ ಆಕ್ಷೇಪಿಸಿದ್ದನ್ನು ನಾ ಕಾಣಲಿಲ್ಲ. ಬದಲಾಗಿ ನಾನು ಮನೆಗೆ ಹೋದಾಗಲೆಲ್ಲಾ ಆರ್.ವಿ ಯವರು ವಿಠಲ ಗೆ “ಮಗೂ” ಕೋಳಿ ಪದಾರ್ಥ ಮಾಡಿಸು ಎಂದು ದುಡ್ಡು ಕೊಟ್ಟಿದ್ದು ಇನ್ನೂ ನನ್ನ ಕಣ್ಣೆದಿರು‌ ಮಾಸಿಲ್ಲ. ಆರ್.ವಿ.ಯವರು ಮಕ್ಕಳ ಸಾಹಿತ್ಯ ಕುರಿತಾಗಿ ಹಲವು ಕಿರು ನಾಟಕ.ಕವನ, ಕಿರು ಕಾದಂಬರಿ ಬರೆದಿದ್ದಾರೆ ಅದರಲ್ಲಿ ಅವರ “ಯಶವಂತ ನ ಯಶೋಗಾಥೆ” ಯನ್ನು ನಾನು ಐಕ್ಯರಂಗದಲ್ಲಿ ಪರಿಚಯಿಸಿದ್ದನ್ನು ಓದಿ ನಂತರ ಮನೆಗೆ ಹೋದಾಗ ನನ್ನ ಬರವಣಿಗೆ ಕುರಿತು ಪ್ರಶಂಶೆ ವ್ಯಕ್ತಪಡಿಸಿದ್ದರು.ಆ ಕಾದಂಬರಿ ಓದಿದಾಗ ಅದು ಸ್ವತಃ ಆರ್.ವಿ.ಯವರ ಬಾಲ್ಯವೇ ಇರಬಹುದೇನೋ ಎಂದು ನನಗನಿಸಿತ್ತು…
    ಹೀಗೆ ಆರ್ .ವಿ. ಬಗ್ಗೆ ನೆನಪಿನ ಬುತ್ತಿ ಉರುಳುತ್ತಲೇ ಇದೆ…ವಿಠಲ ಅಪ್ಪನ ಬಗ್ಗೆ ಚಿಕ್ಕದಾಗ “ಅವಧಿ” ಯಲ್ಲಿ ಬರೆಯುತ್ತಿರುವುದು ಆಪ್ತವಾಗಿದೆ…ಆರ್.ವಿಯವರ ನಾವು ನೋಡದ ಬದುಕು ಮಗನ ಮೂಲಕ ಇನ್ನಷ್ಟು ಅನಾವರಣ ಗೊಳ್ಳಲಿ. ಆರ್.ವಿ ಸಾಹಿತ್ಯ ಓದಿರುವ ಕನ್ನಡದ ಓದುಗರಿಗೆ ಅವರ ಬದುಕು ತಿಳಿಯುವಂತಾಗಲಿ
    -ಕೆ.ಮಹಾಂತೇಶ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: