ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ…

ಬಾಲ ಒಂದಿಲ್ಲ ಅಷ್ಟೇ..’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.

ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ.

ಉಳಿದವರೆಲ್ಲಾ ಶಾಲೆ ಅಭಿವೃದ್ಧಿ ಮಾಡ್ತಾರೆನಾನು ಮಕ್ಕಳ ಜೊತೆ ಬಾಲ ಕಟ್ಟಿಕೊಂಡು ಕುಣೀತೀನಿ’ ಅಂತ ತಮ್ಮ ಇಂದಿನ ಐಕಾನಿಕ್ ಸ್ಮೈಲ್ ಕೊಡುತ್ತಾರೆ.

ಹೇಮಾಗೆ ಪುಸ್ತಕ ಎಂದರೆ ಇನ್ನಿಲ್ಲದ ಹುಚ್ಚು. ತಾವು ಓದಿದ ಕೃತಿಗಳ ಪಾತ್ರಗಳು ಇವರನ್ನು ಇನ್ನಿಲ್ಲದಂತೆ ಕಾಡುತ್ತವೆ. ‘ನಿದ್ದೆಯಲ್ಲೂ..’ ಎಂದು ಮಾತು ಸೇರಿಸುತ್ತಾರೆ. ಇಂದಿನಿಂದ ಪ್ರತೀ ವಾರ ಹೇಮಾ ತಮ್ಮನ್ನು ಕಾಡಿದ ಪಾತ್ರಗಳನ್ನು ತಂದು ನಮ್ಮ ಎದುರು ನಿಲ್ಲಿಸಲಿದ್ದಾರೆ.

ಬರೆದಿಲ್ಲ… ಬರೆಯಬೇಕಲ್ಲ… ಎನ್ನುವ ಯೋಚನೆ ಬಂದಾಗಲೆಲ್ಲ ಅನಿಸುತ್ತದೆ: ಇದೆಲ್ಲ ಯಾರಿಗೆ ಬೇಕಾಗಿದೆ? ಆದರೆ ಜಗತ್ತಿನಲ್ಲಿ ಇಂಥ ಯೋಚನೆ ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲವಲ್ಲ! ನನ್ನ ಧ್ವನಿ ಕಿರುದೆರೆಯಲ್ಲಿ‌ ಮೊದಲಾಗಿ ಅನಂತತೆಯಲ್ಲಿ ಅಂತ್ಯಗೊಳ್ಳುತ್ತದೆ ಎಂದು ತಲೆಮೇಲೆ ಕಿರೀಟ ಇಟ್ಟುಕೊಳ್ಳುತ್ತೇನೆ.

ನನ್ನದೇ ಮನೋಗತದಲ್ಲಿ ಓಡುವ ನನಗೆ ಈ ಹಬ್ಬಗಳ ಕಾಲ ಯಾವತ್ತಿಗೂ ಅಡ್ಡಾದಿಡ್ಡಿಯೇ..
ಅಡಿಗರು ಹೇಳುವಂತೆ:
ಕಾಲಗತಿ ಋತುಮಾನ ಎಲ್ಲ ಅಡ್ಡಾದಿಡ್ಡಿ-
ತಂಬೂರಿಗೊಂದು ತನ್ನದೇ ರಾಗ; ಮೃದಂಗಕ್ಕೆ ತನ್ನದೇ ತಾಳ;
ಬಿಗಿಗೆಟ್ಟ ತುಂಟ ಪಿಟೀಲು
ಎಗರಾಡುತಿದೆ ಬಧಿರ; ಗಂಟಲು ಕಟ್ಟಿ
ಕೊಳಲು ತನ್ನುಬ್ಬಸಕೆ ತಾನು ಸುಯ್ಯುತ್ತಿದೆ.
ನಿರ್ದೇಶಕನ ಸನ್ನೆಗೋಲು ಗತಿಗಾಣದೇ
ಕೆತ್ತಿ ನಿಂತಿದೆ ತಲೆಯ ಮೇಲೆ ನಿಶ್ಚಲ ವಿಫಲ!

ಸಾವಿರ ಜನರೊಟ್ಟಿಗೆ ಇದ್ದಾಗಲೂ ಧ್ಯಾನದಂತಹ ಮೌನ ಬೇಕೆನಿಸುತ್ತದೆ. ಒಬ್ಬಳೇ ಇದ್ದಾಗ ಎಂದೋ ದಕ್ಕಿ, ಪರವಶಗೊಳಿಸಿದ ಮೌನಸ್ಪರ್ಶವೊಂದು ಇನ್ನೊಮ್ಮೆ ಬದುಕಿಗೆ ದಕ್ಕಲಿ ಎನಿಸುತ್ತಿದೆ. ಹೀಗೆಲ್ಲ ಅನಿಸುವಂತೆ ಮಾಡುವುದು ಯಾವುದು ‘ಅದು’?

‘ಅದು ಇದೆ ಎದೆಯಲ್ಲಿ ಬೆಳಕಿನ ಬದಿಯಲ್ಲಿ / ರಸಗಂಗಾನದಿಯಲಿ ಅದರುಗಮ / ಹೆಸರದಕೆ ಪ್ರೀತಿಯು ಹಿಗ್ಗಿನ ರೀತಿಯು /ಆತ್ಮದ ನೀತಿಯು ಮಧುಸಂಗಮ’ ಚಿಕ್ಕವಳಿದ್ದಾಗ ಗಸಗಸೆ ಪಾಯಸ ಮಾಡಿ, ಬಳಿದು ಬಂಗಾರ ಬಟ್ಟಲು ತುಂಬಿ, ತುತ್ತು ಮಾಡಿ ಅವ್ವ ಉಣಿಸುತ್ತಿದ್ದರೆ, ನನಗೆ ‘ಇದು’ ಬೇಡ, ‘ಅದು’ ಬೇಕು ಎಂದು ಅಸಾಧ್ಯವಾಗಿ ಹಠ ಮಾಡಿ ಅಳುತ್ತಿದ್ದೆನಂತೆ.

ಈಗಲೂ ಮೊದಲ ಸಾಲಿನ ಬೇಂದ್ರೆ ಅಜ್ಜನ ‘ಅದು’ ಮತ್ತು ನನ್ನ ‘ಅದು’ ಏನು ಎನ್ನುವುದು ಸ್ಪಷ್ಟವಾಗುವುದೇ ಇಲ್ಲ. ಹೀಗೆ ‘ಅದಲ್ಲ’ ‘ಇದು’ ಬೇಕು ಎನಿಸುವುದು ಬದುಕಿನೆಡೆಗಿನ ಭರವಸೆಯನ್ನು ಮತ್ತೆ ಮತ್ತೆ ನವೀಕರಿಸುವ ವಿಧಾನವಿರಬಹುದಾ? ಎನ್ನುವ ಪ್ರಶ್ನೆಯೂ ಅನೇಕ ಸಲ ಕಾಡಿದೆ.

ಮೊನ್ನೆ ಇಳಿಸಂಜೆ ಅಂಗಳದಲ್ಲಿ ಅವ್ವ ಹಚ್ಚಿಟ್ಟ ಹಣತೆ, ಅತ್ತಿಗೆ ತೂಗು ಬಿಟ್ಟ ಆಕಾಶ ಬುಟ್ಟಿ ಬೆಳಕಿನಲ್ಲಿ ಕೂತು, ನೆನೆಪಿನ ದೀವಟಿಗೆ ಹಿಡಿದು ತಿರುಗಿ ನೋಡಿದೆ. ಒಂದು ಕಾಲದಲ್ಲಿ ಎಷ್ಟು ಕಾಡುವ ಹುಡುಗಿಯಾಗಿದ್ದೆ ನಾನು, ಅಂದು ಅಪ್ಪ ರೇಗಿದ್ದರು; ಅವರೇ ಹಿಂದೊಮ್ಮೆ ಬರೆದ, ‘ನನ್ನ ಬದುಕೇನಿದ್ದರೂ ಮುಟ್ಟಿದರೆ ಕಂಪಿಸುವ ಮೊಲದ ಮನಸಿನ ಹೆಣ್ಣುಮಕ್ಕಳಿಗೆ’ ಎನ್ನುವ ಸಾಲನ್ನು – ‘ಹತ್ತಿರ ಬಂದರೆ ಸಾಕು ಚರಪರ ಕಾಲು ಕೆರೆದು ಕಿವಿ ನಿಮಿರಿಸಿ, ಬಾಲ ಕುಣಿಸಿ ಜಗಳಕ್ಕೆ ಸದಾ ಸನ್ನದ್ಧಳಾಗಿರುವ, ಮುದ್ದಿಸಿದರೂ ಮುನಿದು ಓಡುವ ಅಳಿಲಂಥ ಮಗಳಿಗೆ’ ಎಂದು ಬದಲಾಯಿಸಿ ಬಿಡುತ್ತೇನೆ ಎಂದಿದ್ದರು.

ಕಾಲ ಕಳೆದಂತೆ ಬೆರಳೆಣಿಕೆಯ ಆತ್ಮೀಯರ ಜೊತೆ ಬಿಟ್ಟರೆ ಬೇರೆ ಯಾರ ಜೊತೆಯೂ ಬೆರೆಯದ, ಮಾತನಾಡದ ಒಳಮುಚುಗುತನ ನನ್ನನ್ನ ಆವರಿಸಿದೆ. ನೆಲದ ಋತುಗಳು ಬದಲಾಗುವುದನ್ನು ಒಪ್ಪಿಕೊಳ್ಳಲು ಬೇಕಾಗುವ ಚೈತನ್ಯ ಇದ್ದಾಗಲೇ ಬದುಕಿಗೆ ಈ ಹೊಸ ಆಯಾಮ ಎಂದುಕೊಂಡಾಗ ಮನಸು ನಿರಾಳವಾಗುತ್ತದೆ.

ಊರು ಬಿಟ್ಟು ಬದುಕಲಾರೆ ಎನ್ನುತ್ತಿದ್ದವಳು, ಮಹಾನಗರಗಳಲ್ಲೂ ಮನೆಯಲ್ಲಿರುವಷ್ಟೇ ಆರಾಮವಾಗಿ ಬದುಕುವುದನ್ನು ಕಲಿತಿದ್ದೇನೆ. ಊರು ಬಿಟ್ಟು ಬಂದ ದಿನ ಗಿಬ್ರಾನನ ‘ಹುಟ್ಟಿ ಬೆಳೆದ ನೆಲದಲ್ಲಿ ಬಾಳಿ ಬದುಕದಿರುವುದು ನಮ್ಮ ಪಾಲಿನ ದುರಂತವಲ್ಲದೇ ಮತ್ತೇನು?’ ಎಂದು ಮಂಕಾಗಿರುತ್ತಿದ್ದವಳಿಗೆ ‘ಬಾಳಿದಷ್ಟು ಕಾಲ, ವಿಶ್ವದ ಬಾಳ್ವೆಯೊಡನೆ ಬೆರೆತು ಒಂದಾಗು. ಆಗ ಬಾಳಿನ ಸಾವು-ನೋವು, ಸುಖ-ದುಃಖ ಅರ್ಥಪೂರ್ಣ,’ ಎನ್ನುತ್ತ ಬದುಕನ್ನ ಬದುಕು ಸಾಕು ಎಂದು ಒತ್ತಿ ಹೇಳಿದ ಬುದ್ಧನ ಮಾತಿನ ಬೆಳಕು ಈಗ ನನ್ನೊಳಗೆ.

ನಾನು ಪ್ರೀತಿಸಿದ್ದು ಹೆಚ್ಚು ಹೆಚ್ಚು ಖುಷಿಯನ್ನೇ ಕೊಡುವ, ಮುಂದೊಂದು ಹಿಂದೊಂದು ರೀತಿ ವರ್ತಿಸದ ಅಭಿರುಚಿಗಳನ್ನೇ ಆದರೂ ಪುಟಿ ಪುಟಿವ ಮನದ ನನ್ನಂಥ ಜೀವವೊಂದಕ್ಕೆ ಪ್ರಕೃತಿ ಸಹಜ ಜೈವಿಕ ಆಕರ್ಷಣೆಗಳನ್ನು ಮೀರುವ ಬಗೆ ತಿಳಿದಿಲ್ಲ ಎನ್ನುವುದು ಅರ್ಥವಾದ ಗಳಿಗೆ. ಕಳೆದ ಎಲ್ಲ ದಿನಗಳ ಅನುಭವ, ನೋವು, ಸಂತಸ, ಮೈಮುದುಡಿಸುವ ಪೆಟ್ಟು, ಬೇರೆಯಾದ ಕ್ಷಣಗಳು, ದೂರವಾದ ಭಾವನೆ ಎಲ್ಲವೂ ನನಗೇನು ಬೇಕು ಎನ್ನುವುದರ ಸ್ಪಷ್ಟತೆ ಮೂಡಿಸಿದ ಬೆಳಕು ಇದು.

ಕೊರೊನಾ ಕಲಿಸಿದ ಭವಿಷ್ಯದ ಅನಿಶ್ಚಿತತೆಯನ್ನು ನೋಡಿ ಏನೇ ಬರಲಿ ಗೊಣಗದೆ, ಕೊರಗದೆ, ಕೀಳರಿಮೆ ಇಲ್ಲದೆ, ತಿಳಿ ತಿಳಿದೂ ತಪ್ಪು ಮಾಡಿದಾಗಲೂ ಪಾಪಪ್ರಜ್ಞೆಯಿಲ್ಲದ ಹಸನಾದ ಬದುಕೊಂದನ್ನು ಬದುಕಲು ತಿರ್ಮಾನಿಸಿದೆ. ಸಂಕಟದ ಬಾಬತ್ತೇ ಹೆಚ್ಚಾದಾಗಲೂ ಬದುಕೇ ಇನ್ನಷ್ಟು ಸುಂದರವಾಗು ಎಂದು ಮುಗುಳ್ನಕ್ಕೆ. ಪ್ರತಿಸಲ ಏಟು ಬಿದ್ದಾಗಲೂ ಗಟ್ಟಿಗೊಳ್ಳುವ ಬದಲಿಗೆ ಇನ್ನಷ್ಟ ಸೂಕ್ಷ ಗೊಂಡೆ. ಗಟ್ಟಿಗೊಂಡಷ್ಟು ನವೀರು ಭಾವಗಳನ್ನು, ಅನಿರೀಕ್ಷಿತ ಒಲುಮೆಗೆ ಸ್ಪಂದಿಸುವ ಕಂಪನ್ನು ಕಳೆದುಕೊಳ್ಳುತ್ತೇನೆ. ಈವರೆಗೆ ಅಂತಹ ಅನಿವಾರ್ಯತೆ ಬಂದಿಲ್ಲ. ಇದೆಲ್ಲಕ್ಕಿಂತ ಮಿಗಿಲಾದುದನ್ನು ಬೇರಾವುದೋ ರೂಪದಲ್ಲಿ ಜೀವನ ನನಗೆ ದೊರಕಿಸಿ ಕೊಟ್ಟಿದೆ.

ದೂರ ದೇಶದಲ್ಲಿರುವ ಸ್ನೇಹಿತೆಯಂತೆ ಆಪ್ತರನ್ನು ಕಳೆದುಕೊಂಡು ಹುಯಿಲಿಡದಂತೆ, ಎರಡು ನಿಮಿಷ ಕಳೆದಿದ್ದರೆ ಮಕ್ಕಳು ತಲುಪಬೇಕಾದ ಸ್ಥಳ ತಲುಪುತ್ತಿದ್ದರು. ಆದರೆ ಅಪಘಾತ… ಇಂಥ ಯಾವುದೊಂದು ಘಟನೆ ಘಟಿಸದೇ, ಅಯ್ಯೋ ಹೀಗಾಗಬಾರದಿತ್ತು… ಎಂದು ಏನೊಂದಕ್ಕೂ ಪರಿತಪಿಸದಂತೆ ಕಾಣದ ಕೈ ನನ್ನನ್ನು ಔದಾರ್ಯದಿಂದ ಕಾದಿದೆ.

ಹಸುಗೂಸ ಮೈ ಘಮಲನ್ನು ಆಘ್ರಾಣಿಸಬೇಕು ಎಂದಾಗ, ‘ಅವನೆದೆ’ಯ ಮೇಲೊರಗಿ ಪಿಸುನುಡಿಯುವ ಉತ್ಕಟ ಇಚ್ಛೆಯಾದಾಗ, ‘ಉಸ್ಕೇ ಗಲೇ ಲಗನೆ ಕೀ ಮೌಸಮ್ ಬಡೇ ಅಚ್ಛೇ ಹೋತಿ ಹೈಂ’ ಎಂದುಕೊಂಡಾಗ, ಗಾಳಿಯಷ್ಟು ಸರ್ವ ಸ್ವತಂತ್ರಳಾಗಬೇಕೆಂದು ಬಯಸಿದಾಗ, ಅವುಗಳೆಲ್ಲವನ್ನ ನೆರವೇರಿಸಿ, ತಪ್ಪುಗಳನ್ನು ಮನ್ನಿಸಿ ನನ್ನ ಕಣ್ಣ ಬೆಳಕನ್ನು ಮಂಕಾಗದಂತೆ ಕರುಣೆಯಿಂದ ಕಾದ ನಿಯತಿಗೆ ಋಣಿಯಾಗಿದ್ದೇನೆ.

ಅನಿಶ್ಚಯದಲ್ಲಿರುವ ಬೆರಗು, ವಿಸ್ಮಯಕ್ಕಾಗಿ ಎಲ್ಲರೊಡನಿದ್ದೂ ಎಲ್ಲರಂತಾಗದೆ ಸದಾ ಏನೋ ಒಂದು ಬಗೆಯ ಹುಡುಕಾಟದಲ್ಲಿ ಕಟ್ಟಿಕೊಂಡದ್ದನ್ನು ಬಿಟ್ಟು ಎದ್ದು ಹೊರಡುವಾಗ, ಸಂಗದೊಳಗಿದ್ದೂ ನಿಸ್ಸಂಗಿಯಾದವಳನ್ನು ಈ ಸಲದ ದೀಪಾವಳಿ; ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ ಕಿಟಕಿ ಬಾಗಿಲು ತೆರೆದು ಬರಮಾಡು ಒಳಗೆ ಎಂದಿತು. ಎಲ್ಲಿಂದ ಬಂದಿಹುದು? ಏನೆಂದು ಒರೆಯುತಿದೆ? ಯಾರನ್ನು ಹಂಬಲಿಸಿ ಏಕಿಂತು ಕರೆಯುತಿದೆ? ಎಂಬ ಪ್ರಶ್ನೆಯ ಕೆದಕಿ ಮರುಗುಳಿಯದಿರು ಮತ್ತೆ.. ಇದೋ ಬಂದೆ ಎನ್ನುತ್ತಾ ಎದ್ದೇಳು ಸ್ವಾಗತಕೆ… ಎಂದ ಶರದೃತುವಿನ ಶರದ್ಗೀತಕ್ಕೆ ವಂದೇ.

November 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ವಾಸುದೇವ ಶರ್ಮಾ

    ಹೂ! ಒಂಟಿತನದಲ್ಲೇ ಗುಂಪುಗೂಡುವುದು… ಗುಂಪಿನಲ್ಲಿ ಒಂಟಿಯಾಗಿರುವಂತೆ…
    ನಾವು ಅದೆಷ್ಟು ಸುಲಭವಾಗಿ ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತೇವೆ… ಹೊಂದಲಾರದವರನ್ನು ಅದೇ ಪರಿಸರ ತಾನೇತಾನು ಹೊರದೂಡಿಬಿಡುತ್ತದೆ… ಇದೆಲ್ಲವೂ ನಮ್ಮ ನಮ್ಮ ಅನುಕೂಲಕ್ಕೆ ನಾವೇ ಅಂದುಕೊಳ್ಳುವುದೇನೋ!
    ಚೆನ್ನಾಗಿದೆ ಮನಸ್ಸುಗಳಾಳಕ್ಕೆ ಇಳಿದ ಮಾತುಕತೆ.‌

    ಪ್ರತಿಕ್ರಿಯೆ
  2. veda

    ಮನದಾಳದ ಮಾತುಗಳನ್ನು ಎಷ್ಟು ನವಿರಾಗಿ ಬರವಣಿಗೆಯಾಗಿಸಿದ್ದೀರ ಹೇಮಾ ನಿಮ್ಮ ಲೇಖನ ಶೈಲಿ ಬಹಳ ಹಿಡಿಸಿತು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: