ಶ್ರೀದೇವಿ ಕೆರೆಮನೆ
ಈ ಲೇಖನ ಬರೆಯಲು ಕುಳಿತಾಗ ದೀಪಾವಳಿಯ ಖುಷಿ, ಸಂತೋಷದ ಬಗ್ಗೆ ಬರೆಯ ಬೇಕೆಂದುಕೊಂಡಿದ್ದೆ. ಅದೇ ಸಂತೋಷದ ಮೂಡಲ್ಲಿ ಕನ್ನಡ ರಾಜ್ಯೊತ್ಸವದ ಆಚರಣೆಗೆಂದು ಶಾಲೆಗೆ ಹೋದೆ. ಹಳದಿ ಕೆಂಪು ಬಣ್ಣದ ಕನ್ನಡ ಬಾವುಟ ಹಿಡಿದ ಮಕ್ಕಳ ಸಾಲು ನಿಜಕ್ಕೂ ಖುಷಿಕೊಟ್ಟಿತ್ತು. ಅದೆಂತಹ ಸಂಭ್ರಮ… ಅದೆಷ್ಟು ಖುಷಿ. ಕನ್ನಡದ ಹಬ್ಬ ಆಚರಿಸುವ ಮಕ್ಕಳ ಕಣ್ಣಲ್ಲಿ ಅದೇನೋ ಹುರುಪು. ಸುಮ್ಮನೆ ನಿಂತು ಮಕ್ಕಳ ಉತ್ಸಾಹ ಗಮನಿಸುತ್ತಿದ್ದೆ. ದೂರದಿಂದಲೇ ಅವರ ಗದ್ದಲ ನೋಡುತ್ತ ಅವರ ಕಣ್ಣ ಮಿಂಚನ್ನು ಆಸ್ವಾದಿಸುತ್ತ ಹತ್ತಿರ ಹೋದರೆ ಪ್ರಾರಂಭವಾಗಿಯೇ ಬಿಟ್ಟಿತು..ಗುಡ್ ಮಾರ್ನಿಂಗ್ ಮಾಮ್ ಹೇಳುತ್ತ ಹೇಳುತ್ತ ಕೆಲವರು ಹ್ಯಾಪಿ ದಿವಾಲಿ ಮಾಮ್ ಎನ್ನುವ ಶುಭಾಷಯ ಕೂಡ ಬಂತು. ಅದೆಲ್ಲಿಂದಲೋ ಒಬ್ಬಳು ಹುಡುಗಿ, ‘ಹ್ಯಾಪಿ ಕರ್ನಾಟಕ ರಾಜ್ಯೋತ್ಸವ ಮಾಮ್ ಎಂದು ಹಾರೈಸಿ ಆಗಿ ಬಿಟ್ಟಿತ್ತು. ನನಗೆ ಗೊತ್ತು, ನಾನು ಹತ್ತಿರ ಹೋದರೆ ಆ ಮಕ್ಕಳಿಗೆ ಇಂಗ್ಲೀಷ ಭೂತ ಮೆಟ್ಟಿಕೊಳ್ಳುತ್ತದೆ. ಆದರೆ ಅದು ಹೀಗೆ ಕನ್ನಡ ರಾಜ್ಯೋತ್ಸವವನ್ನೂ ಇಂಗ್ಲೀಷ್ನಲ್ಲಿ ಹಾರೈಸುವ ಮಟ್ಟಿಗೆ ಇರುತ್ತದೆ ಎಂದುಕೊಂಡಿರಲಿಲ್ಲ. ನನಗೆ ಒಂದು ಕ್ಷಣ ಕಕ್ಕಾಬಿಕ್ಕಿ. ಹಾಗೆಂದು ನೀವ್ಯಾರೂ ನನಗೆ ಬೈದುಕೊಳ್ಳ ಬೇಕಾಗಿಲ್ಲ.
ಸೀಬರ್ಡ ನಿರಾಶ್ರಿತರ ಮನೆಗಳಿರುವ ನಮ್ಮ ಶಾಲೆಯಲ್ಲಿ ಕೊನೆಯ ಪಕ್ಷ ನನ್ನ ಬಳಿಯಲ್ಲಾದರೂ, ಅದೂ ಕೇವಲ ಕೆಲವು ವಿಶ್ಗಳನ್ನಾದರೂ, ಅವರಲ್ಲಿಯೆ ಚಿಕ್ಕ ಚಿಕ್ಕ ಮಾತುಗಳನ್ನು ಇಂಗ್ಲೀಷನಲ್ಲಿಯೇ ಮಾಡಬೇಕೆಂದು ಕಡ್ಡಾಯಿಸದಿದ್ದರೆ ನಾನು ಇಂಗ್ಲೀಷ್ ಕಲಿಸಿದ್ದೇ ಸುಳ್ಳು ಎನ್ನುವಷ್ಟರ ಮಟ್ಟಿಗೆ ಉಳಿದು ಬಿಡುತ್ತಾರೆ. ಹಾಗೆ ಹೇಳಿದವಳನ್ನು ಹತ್ತಿರ ಕರೆಯಿಸಿ ‘ಇಂದು ರಾಜ್ಯೋತ್ಸವ, ಇವತ್ತೂ ಇಂಗ್ಲೀಷ್ನಲ್ಲಿಯೇ ಮಾತನಾಡಬೇಕು ಎನ್ನುವುದಿಲ್ಲ, ಕನ್ನಡ ಮಾತನಾಡು. ಎಂದು ಬೆನ್ನು ತಟ್ಟಿದರೆ ಸುತ್ತಲಿದ್ದ ಮಕ್ಕಳ ದೊಡ್ಡ ನಗು. ಆದರೆ ಆಕೆ ನಗಲಿಲ್ಲ. ನನಗೆ ಆಶ್ಚರ್ಯ. ನನ್ನ ವಿದ್ಯಾರ್ಥಿಗಳಾರೂ ನನ್ನೊಂದಿಗೆ ತುಂಬಾ ಗಂಭೀರವಾಗಿ ಇರುವುದಿಲ್ಲ.ಅವರಿಗಿಂತ ಮೊದಲೇ ನಾನೆ ನಗುತ್ತೇನಾದ್ದರಿಂದ ಅವರಲ್ಲಿಯೂ ನಗು ತುಂಬಿ ತುಳುಕುತ್ತಿರುತ್ತದೆ… ತರಗತಿಯಲ್ಲಿ ಕಲಿಸುವಾಗ ಹೊರತುಪಡಿಸಿ!! ಹೀಗಾಗಿ ಆತ್ಮೀಯತೆಯಿಂದ ವಿಚಾರಿಸಿದರೆ ಬಿಕ್ಕ ತೊಡಗಿದಳು. ನಾನು ಕಾರಣ ಕೇಳಿದಷ್ಟೂ ಅವಳ ಅಳು ಜೋರಾಯಿತು. ಸುಮ್ಮನೆ ಆಕೆಯನ್ನು ಪಕ್ಕಕ್ಕೆ ಕರೆದೊಯ್ದು ಕೇಳಿದರೆ ತುಂಬಾ ಬೇಸರದಿಂದ ಟೀಚರ್ ಸರ್ವಮಂಗಳನ ಅಪ್ಪ ತೀರಿಕೊಂಡರು. ಎಂದಳು.
ನನಗೆ ನಿಜಕ್ಕೂ ಆಘಾತ. ತುಂಬಾ ಸೈಲೆಂಟ್ ಹುಡುಗಿ ಆಕೆ. ಇಡೀ ತರಗತಿಯಲ್ಲಿ ಮಾತನಾಡದೇ ಸುಮ್ಮನೆ ಕುಳಿತುಕೊಳ್ಳುವುದನ್ನು ಕಂಡರೆ ನನಗೇ ಒಂದು ರೀತಿ ಕಿರಿಕಿರಿ ಆಗುತ್ತಿತ್ತು. ‘ಈಗಿನ ಕಾಲದಲ್ಲಿ ಹುಡುಗಿಯರು ಇಷ್ಟು ಸೈಲೆಂಟ್ ಇದ್ದರೆ ಆಗೋಲ್ಲ. ಸ್ವಲ್ಪನಾದ್ರು ಮಾತನಾಡಬೇಕು.’ ನಾನು ಪದೇ ಪದೇ ಹೇಳುತ್ತಿದ್ದೆ. ಆಕೆಯ ಮನೆಯ ಸಮಸ್ಯೆ ಏನೋ ನನಗೆ ಗೊತ್ತಿರಲಿಲ್ಲ. ಬಹುತೇಕವಾಗಿ ಎಂಟನೇ ತರಗತಿಗೆ ಬಂದ ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ಮಾತನಾಡಿಸಿ ಅವರ ಮನೆಯ ವಿಷಯವನ್ನು, ಅವರ ಪರಿಸರವನ್ನು, ಅವರ ಸಮಸ್ಯೆಗಳನ್ನು ಮಾಮೂಲಿಯಾಗಿಯೇ ಮಾತನಾಡಿಸಿ ತಿಳಿದುಕೊಳ್ಳುತ್ತಿದ್ದೆ. ಸಾಧಾರಣವಾಗಿ ಶಿಕ್ಷಕರು ಕೇಳಿದರೆ ಯಾವ ಮಕ್ಕಳೂ ಇಲ್ಲ ಎನ್ನದೆ ಉತ್ತರಿಸುತ್ತಿದ್ದರು, ಕೆಲವೊಮ್ಮೆ ಅವರ ಕುಟುಂಬದ ತೀರಾ ಖಾಸಗಿ ವಿಷಯಗಳನ್ನೂ ಕೂಡ. ಆದರೆ ಈ ಹುಡುಗಿ ಯಾವುದೇ ವಿಷಯವನ್ನೂ ಹೇಳಿರಲಿಲ್ಲ. ಕೊನೆಯ ಪಕ್ಷ ಅಪ್ಪ ಏನು ಮಾಡ್ತಾರೆ? ಅಮ್ಮನ ಬಗ್ಗೆ ಕೂಡ ಏನನ್ನೂ ಹೇಳಿರಲಿಲ್ಲ. ನಾನೂ ತೀರಾ ಒತ್ತಾಯಿಸಿರಲಿಲ್ಲ. ಕೆಲವು ಮಕ್ಕಳಿಗೆ ಮನೆಯ ವಿಷಯ ಹೇಳಿಕೊಳ್ಳುವುದು ಇಷ್ಟವಾಗುವುದಿಲ್ಲ ಎಂಬ ಕಾರಣಕ್ಕೆ.
ಆದರೆ ಹುಡುಗಿ ಕ್ಲಾಸ್ನಲ್ಲಿ ಕೂಡ ತುಂಬಾ ಅನ್ಯಮನಸ್ಕಳಾಗಿರುತ್ತಿದ್ದಳು. ಯಾವುದೇ ಹೋಂವರ್ಕ ಮಾಡುತ್ತಿರಲಿಲ್ಲ. ಆಕೆಯ ಅಬ್ಯಾಸ ಮಾಡುವ ರೀತಿ ಕೂಡ ಅಷ್ಟೇ. ಕಾಟಾಚಾರಕ್ಕೆ ಶಾಲೆಗೆ ಬಂದವಳಂತೆ, ಯಾಕಾದರೂ ಶಾಲೆಯಲ್ಲಿ ಪಾಠ ಮಾಡುತ್ತಾರೋ ಎಂಬಂತೆ. ಒಂದೂ ಮನೆಗೆಲಸ ಮಾಡಿಕೊಂಡು ಬರದ, ಅಭ್ಯಾಸ ಕೂಡ ಮಾಡದ ಆ ಹುಡುಗಿಗೆ ನಿಜಕ್ಕೂ ಬೈದಿದ್ದೇನೆ, ಆದರೂ ಒಂದೂ ಮಾತನಾಡದ ಆಕೆಗೆ ನಾಳೆ ನಿನ್ನ ಅಪ್ಪನನ್ನು ಕರೆದುಕೊಂಡು ಬಾ ಎಂದು ತಾಕೀತು ಮಾಡಿದ್ದೂ ಇದೆ. ಒಂದೆರಡು ಸಲ ಕರೆದುಕೊಂಡು ಬರದಿದ್ದಾಗ ಕ್ಲಾಸ್ಗೆ ಸೇರಿಸೊದಿಲ್ಲ ಎಂದು ಹೆದರಿಸಿದ್ದಿದೆ. ಪಾಪದ ಅಪ್ಪ ನಿಧಾನವಾಗಿ ಬಂದವರು, ‘ಆಕೆ ಕಲಿಯೂಕೆ ಚುರುಕ್ ಇಲ್ರಿ. ಹ್ಯಾಂಗೋ.. ಸ್ವಲ್ಪ ಒತ್ತಾಯ ಮಾಡಿ ಕಲಿಸ್ರಿ. ಎಂದು ಚಿಕ್ಕ ಮುಖ ಹೇಳುವಾಗ ಪಾಪ ಎನ್ನಿಸಿತ್ತು. ನಾಲ್ಕಾರು ಸಲ ಬಂದು ಮಾತನಾಡಿದ ವ್ಯಕ್ತಿ ಸಡನ್ನಾಗಿ ಇಲ್ಲ ಅಂದರೆ ಬೇಸರವಾಗದಿದ್ದೀತೆ? ಅವಳ ಮನೆಗೆ ಹೋಗಿ ಬರುವಾ? ಅವಳ ಅಮ್ಮ ಮನೇಲೇ ಇದ್ದಾರಾ? ಕೇಳಿದೆ. ಅವಳಿಗೆ ಅಮ್ಮ ಇಲ್ಲ ಟೀಚರ್ ಅವಳು ನಾಲ್ಕನೇ ಕ್ಲಾಸ ಇರೋವಾಗ್ಲೆ ತೀರಿ ಕೊಂಡಾರೆ. ನನಗೆ ಇದು ನಿಜಕ್ಕೂ ಮತ್ತೊಂದು ದೊಡ್ಡ ಶಾಕ್. ಆಕೆಯ ಉದಾಸೀನತೆಯ ಕಾರಣ ಗೊತ್ತಾಗಿತ್ತು. ಅಮ್ಮ ಕೂಡ ಇಲ್ಲದೇ ಅಪ್ಪನ ಆಶ್ರಯದಲ್ಲಿದ್ದ ಹುಡುಗಿ ಈಗ ಅಪ್ಪನೂ ತೀರಿಕೊಂಡ ಮೇಲೆ ಏನು ಮಾಡ್ತಾಳೆ? ಕೇಳಿದರೆ ಆಕೆಯ ಅಪ್ಪ ಇನ್ನೊಂದು ಮದುವೆ ಆಗಿರುವ ಮಾಹಿತಿ ದೊರಕಿತು. ನನಗೆ ಆಕೆಯ ಮನೆಗೆ ಹೋಗಲೇ ಬೇಕೆನಿಸಿತು.

ಶಾಲೆಯಲ್ಲಿ ರಾಜ್ಯೋತ್ಸವದ ಮೆರವಣಿಗೆ, ಭಾಷಣ, ಏಕೀಕರಣದ ಹೋರಾಟ, ಎಲ್ಲವನ್ನೂ ಮುಗಿಸಿ ಆ ಮನೆಗೆ ಹೋದರೆ ಮನೆಯಲ್ಲಿ ನೀರವ ಮೌನ. ಒಳಕೋಣೆಯಲ್ಲಿ ಒಂದಿಷ್ಟು ಬಿಕ್ಕುಗಳು. ಸಮಾಧಾನದ ಪಿಸುನುಡಿಗಳು.. ಅಸಹಾಯಕತೆಯ ನಿಟ್ಟುಸಿರು. ಮಲತಾಯಿಯ ಮಡಿಲಲ್ಲಿ ತಲೆ ಇಟ್ಟು ಮಲಗಿದ ಹುಡುಗಿಯನ್ನು ಕಂಡದ್ದೇ ಒಂದಿಷ್ಟು ಸಮಾಧಾನವಾಯಿತು. ಎಲ್ಲೋ ಮಲತಾಯಿ ಕಷ್ಟ ಕೊಡ್ತಿದ್ದಾಳೆ ಅದಕ್ಕೇ ಹುಡುಗಿ ಹೀಗೆ ಮೌನಿಯಾಗಿದ್ದಾಳೆ ಎಂದುಕೊಂಡ ಮನಸ್ಸಿಗಿಷ್ಟು ನಿರಾಳ. ಅಜ್ಜಿ ಪಕ್ಕದಲ್ಲೇ ಕುಳಿತಿದ್ದರು. ಆ ವಯಸ್ಸಾದ ಜೀವ ತನ್ನೆಲ್ಲ ನೋವನ್ನು ನುಂಗಿ ಮೊಮ್ಮಕ್ಕಳಿಗಾಗಿ ತನ್ನ ಅಳಿಯನಿಗೆ ಮತ್ತೊಂದು ಮದುವೆ ಮಾಡಿಸಿದ್ದರು. ಆಕೆ ತನ್ನ ಮಗಳೂ ಕೂಡ ಇದೇ ಸಮಯಕ್ಕೆ ತೀರಿ ಹೋದ ಕಥೆ ಹೇಳುವಾಗ ನಿಜಕ್ಕೂ ವಿಷಾದ ಎನ್ನಿಸಿತ್ತು. ಆ ಹುಡುಗಿಯ ಅಮ್ಮ ಕೂಡ ಕೇವಲ ನಾಲ್ಕು ವರ್ಷದ ಹಿಂದೆ ಅದೇ ದಿನ ತೀರಿಕೊಂಡಿದ್ದಳಂತೆ. ದೀಪಾವಳಿಯ ನೀರು ತುಂಬುವ ಹಬ್ಬದ ಒಂದು ದಿನ ಮುಂಚಿತವಾಗಿ. ಇಗ ಕೇವಲ ನಾಲ್ಕೇ ವರ್ಷಗಳ ಅಂತರದಲ್ಲಿ ಅದಕ್ಕಿಂತ ಎರಡು ದಿನ ಮೊದಲು ಅಪ್ಪ ತೀರಿ ಹೋಗಿದ್ದಾರೆ. ಥೇಟ್ ಅವಳ ಅಮ್ಮ ತೀರಿಕೊಂಡಂತೆ. ಎದೆ ನೋವು ಎಂದು ಒದ್ದಾಡುತ್ತ, ಅದು ಕಾಕತಾಳೀಯ ಇರಬಹುದು. ಆದರೂ ಗಂಡ ಹೆಂಡತಿ ಇಬ್ಬರೂ ಒಂದೆ ಸಮಯದಲ್ಲಿ ಕೇವಲ ನಾಲ್ಕು ವರ್ಷಗಳ ಅಂತರದಲ್ಲಿ ತೀರಿ ಹೋಗಿದ್ದಕ್ಕೆ ಯಾವ ರೀತಿ ಪ್ರತಿಕ್ರಿಯಿಸುವುದೋ ಅರ್ಥವೆ ಆಗಿರಲಿಲ್ಲ.
ಆದರೂ ಬೆಳಕಿನ ಹಬ್ಬವಾಗಬೇಕಿದ್ದ ದೀಪಾವಳಿ ಆ ಹುಡುಗಿಯ ಪಾಲಿಗೆ ಸತತವಾಗಿ ಕತ್ತಲೆಯನ್ನೆ ಬಳುವಳಿಯಾಗಿ ನೀಡುವ ಕಾರ್ಗತ್ತಲ ಹಬ್ಬವಾಗಿ ಪರಿಣಮಿಸಿದ್ದುದು ಮಾತ್ರ ವಿಪರ್ಯಾಸ. ದುಡಿದು ಬರುತ್ತಿದ್ದ ಅಪ್ಪ ವಿಧಿವಶನಾಗಿದ್ದಾನೆ. ತನ್ನದಲ್ಲದ, ಆದರೂ ತನ್ನದರಂತೆಯೆ ಪ್ರೀತಿಯಿಂದ ಕಾಣುತ್ತಿರುವ ಮಲತಾಯಿಗೆ ಶಿಕ್ಷಣವಿಲ್ಲ. ಇನ್ನೂ ಮೂರನೆ ತರಗತಿಯಲ್ಲಿ ಓದುತ್ತಿರುವ ತಮ್ಮನನ್ನು ಇಟ್ಟುಕೊಂಡು ಆ ಹುಡುಗಿ ಸಂಸಾರ ನಿಭಾಯಿಸಲು ಪಡಬೇಕಾದ ಗೋಳನ್ನು ನೆನೆಸಿಕೊಂಡರೆ ನಿಜಕ್ಕೂ ಖೇದವಾಗುತ್ತದೆ.
ಕೆಲವು ದಿನಗಳ ಹಿಂದೆ ಬೇರೆ ಊರಿಗೆ ಹೋದಾಗ ಅಲ್ಲಿ ಒಬ್ಬ ಫೋಲಿಸ್ ಓಡೊಡಿ ಬಂದು ಮಾತನಾಡಿಸಿದ್ದರು. ತಂಗಿ… ನಾನು..! ನನಗೆ ಒಮ್ಮೆಲೆ ಕನಫ್ಯೂಸ್. ಅರೆ! ರೇಣುಕಾಳ ಅಣ್ಣ ಅಲ್ಲವೇ? ಟೀಚರ್ ಹೇಗಿದ್ದಾರೆ? ಸರ್ ಆರಾಂ ಇದ್ದಾರಾ? ಉಲ್ಲಾಸ ಎಲ್ಲಿರ್ತಾನೆ? ಒಮ್ಮೆಲೆ ನಾಲ್ಕಾರು ಪ್ರಶ್ನೆ ಕೇಳಿದ್ದರು. ನಾನು ಉತ್ತರಿಸುತ್ತ, ರೇಣುಕಾ ಹೇಗಿದ್ದಾಳೆ? ಎಲ್ಲಿದ್ದಾಳೆ ಎಂದಿದ್ದೆ, ಅವರ ಮುಖ ಚಿಕ್ಕದಾಗಿತ್ತು. ನನಗೋ ಆಶ್ಚರ್ಯ, ಏನಾಯ್ತು?’ ಎಂದಿದ್ದೆ. ಮದುವೆ ಆಗಿ ಕೆಲವೇ ವರ್ಷಕ್ಕೆ ಆಕೆಯ ಗಂಡ ತೀರಿ ಹೋದ್ರು. ಅವಳು ಈಗ ನಮ್ಮ ಮನೆಲೇ ಇದ್ದಾಳೆ ನನಗೆ ಕರುಳು ಹಿಚುಕಿದಂತಾಯ್ತು. ಚಿಕ್ಕ ವಯಸ್ಸಿಗೇ ಮದುವೆ ಆಗಿ ಗಂಡನನ್ನೂ ಕಳೆದುಕೊಂಡ ಅವಳ ಬಾಳು ಹೇಗೆ ಛಿದ್ರ ಛಿದ್ರ ಆಗಿದೆ ಎನ್ನಿಸಿತು, ಇದೆಲ್ಲ ಹೇಗಾಯ್ತು? ಕೇಳಲೋ ಬೇಡವೋ ಎಂಬ ಅನುಮಾನದಲ್ಲಿಯೇ ಕೇಳಿದೆ. ಆಕ್ಸಿಡೆಂಟ್ ಅವರು ಹೇಳಿದರು. ಯಾರದ್ದೋ ಗಾಡಿಯ ಮೇಲೆ ಹಿಂದೆ ಕುಳಿತು ಹೊಗುತ್ತಿರುವಾಗ ಆಕ್ಸಿಡೆಂಟ್ ಆಗಿತ್ತು. ವಿಧಿವಿಲಾಸ ಎಂದರೆ ಗಾಡಿ ಚಲಾಯಿಸುತ್ತಿದ್ದವರು ಚಿಕ್ಕ ಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದರೆ ಹಿಂದೆ ಕುಳಿತವನು ಹಾರಿ ಬಿದ್ದು ಕಲ್ಲಿಗೆ ತಲೆ ಅಪ್ಪಳಿಸಿ ಸ್ಥಲದಲ್ಲಿಯೆ ಸಾವನ್ನಪ್ಪಿದ್ದ. ಇಷ್ಟೆಲ್ಲ ಕೇಳಿದ ಮೇಲೆ ನಾನು ನಿಧಾನವಾಗಿ ಕೇಳಿದ್ದೆ. ಇದೆಲ್ಲ ಆದದ್ದು ಯಾವಾಗ? ದೀಪಾವಳಿ ಹಬ್ಬದ ಮಾರನೆಯ ದಿನ ನಾನು ನಡುಗಿ ಹೋದೆ.
ಸುಮಾರು ಇಪ್ಪತ್ತು- ಇಪ್ಪತ್ತೆರಡು ವರ್ಷಗಳ ಹಿಂದೆ ಇಂತಹುದ್ದೇ ಒಂದು ದೀಪಾವಳಿಯ ಮರುದಿನ ನಾನು ಆ ಹುಡುಗಿಗೆ ಅವಮಾನ ಮಾಡಿದ್ದೆ. ಅದನ್ನು ಆಕೆ ಅವಮಾನ ಎಂದುಕೊಂಡಿದ್ದಳೋ ಇಲ್ಲವೋ ಗೊತ್ತಿಲ್ಲ, ಆದರೆ ನಾನು ಮಾತ್ರ ಎಷ್ಟೋ ವರ್ಷಗಳವರೆಗೆ ಆಕೆಯನ್ನು ಕಂಡಾಕ್ಷಣ ಗಿಲ್ಟ್ನಿಂದಾಗಿ ತಲೆತಗ್ಗಿಸುವಂತಾಗಿತ್ತು. ಅದು ನನ್ನ ಜೀವನದ ಎಂದೂ ಮರೆಯಲಾಗದ ದಿನವಾಗಿ ಮನದೊಳಗೆ ದಾಖಲಾಗಿಬಿಟ್ಟಿತ್ತು. ಬಹುಶಃ ಆ ಘಟನೆ ಎಲ್ಲರ ಮನಸ್ಸಿನಿಂದ ಮರೆಯಾಗಿದ್ದರೂ ನನಗೆ ಮಾತ್ರ ಎಚ್ಚರಿಕೆಯ ಘಂಟೆಯಾಗಿ ನನ್ನೊಳಗೆ ಮೊಳಗುತ್ತಲೇ ಇತ್ತು.
ಬಹುಶಃ ನಾನು ಮೂರನೇ ತರಗತಿಯಲ್ಲಿದ್ದೆ. ಆಕೆ ನನಗಿಂತ ಒಂದು ತರಗತಿ ಮುಂದಿದ್ದಳು ಎಂಬ ನೆನಪು, ಅದು ದೀಪಾವಳಿಯ ಮರುದಿನ. ಎಲ್ಲರೂ ಹೊಸ ಹೊಸ ಬಟ್ಟೆ ಹಾಕಿಕೊಂಡು ಬಂದಿದ್ದರು. ಆದರೆ ಆಕೆ ಪಾಪ ತನ್ನ ಎಂದಿನ ಹರುಕು ಅಂಗಿಯಲ್ಲಿಯೇ ಬಂದಿದ್ದಳು. ನಾನು ‘ಇವತ್ತು ದೀಪಾವಳಿ ಮರುದಿನ. ಇವತ್ತಾದ್ರೂ ನೀನು ಹೊಸ ಅಂಗಿ ಹಾಕಿಕೊಂಡು ಬರಬಾರದಿತ್ತೇ?’ ಎಂದು ಬಿಟ್ಟಿದ್ದೆ. ಆಕೆ ಕೂಡ ಅಷ್ಟೇ ಅಮಾಯಕವಾಗಿ ‘ಹೊಸ ಅಂಗಿ ಇಲ್ಲ’ ಎಂದಿದ್ದಳು. ಆ ವಯಸ್ಸಿಗೆ ಎಲ್ಲರ ಮನೆಯಲ್ಲೂ ದೀಪಾವಳಿಗೆ ಹೊಸ ಅಂಗಿ ತಂದೇ ತರುತ್ತಾರೆ ಎಂಬ ತಿಳುವಳಿಯಷ್ಟೇ ನನ್ನದು. ಅದನ್ನೇ ಅವಳಿಗೂ ಕೇಳಿದ್ದೆ. ಅದೆಲ್ಲಿದ್ದರೋ ನನ್ನ ಅಮ್ಮ, ಅದ್ಯಾವಾಗ ನನ್ನ ಹಿಂದೆ ಬಂದು ನಿಂತಿದ್ದರೋ ಗೊತ್ತಿಲ್ಲ. ‘ಬಾ ನನ್ನ ಜೊತೆ’ ಎಂದು ಹೆಚ್ಚು ಕಡಿಮೆ ಕುರಿಮರಿಯನ್ನು ಎಳೆದುಕೊಂಡು ಹೋದಂತೆ ಹೋಗಿದ್ದರು. ಯಾವ ಮಕ್ಕಳೂ ಇಲ್ಲದ ಕೊಠಡಿಯೊಂದರಲ್ಲಿ ಸರಿಯಾಗಿ ಎರಡೇಟು ಬಿದ್ದಿತ್ತು. ಅಳುವಂತೆಯೂ ಇಲ್ಲ. ಅತ್ತರೆ ‘ಟೀಚರ್ ಮಗಳಿಗೆ ಹೊಡೆದರಂತೆ’ ಎನ್ನುವ ಸುದ್ದಿ ಹರಡಿ ಯಾಕೆ ಹೊಡೆದರು ಎನ್ನುವ ಪ್ರಶ್ನೆ ಏಳುತ್ತಿತ್ತು. ಯಾಕೆ ಹೊಡೆದರು ಎನ್ನುವ ಪ್ರಶ್ನೆಗೆ ನನ್ನಲ್ಲೇ ಉತ್ತರ ಇಲ್ಲದಿರುವಾಗ ನಾನು ಉತ್ತರಿಸುವುದಾದರೂ ಹೇಗೆ ಸಾದ್ಯ? ‘ನಿನಗೆ ಇಂತಹ ಬುದ್ಧಿ ಎಲ್ಲಿಂದ ಬಂತು’ ಅಮ್ಮ ಕೇಳುತ್ತಿದ್ದರೆ ‘ನಾನೇನು ತಪ್ಪು ಮಾಡಿದೆ’ ಎಂದು ನಾನು ಯೊಚಿಸುತ್ತಿದ್ದೆ.
ಮಧ್ಯಾನ್ಹ ಮನೆಗೆ ಊಟಕ್ಕೆ ಬಂದರೂ ಅಮ್ಮ ಮಾತನಾಡಿರಲಿಲ್ಲ. ಸುಮ್ಮನೆ ಊಟದ ಬಟ್ಟಲನ್ನು ಎದುರಿಗಿಟ್ಟು ಹೋಗಿದ್ದರು. ಊಟ ಮಾಡುವ ಮನಸ್ಸಿಲ್ಲದಿದ್ದರೂ ಊಟ ಮಾಡಲೇ ಬೇಕಿತ್ತು. ಆಗ ಊಟ ಬೇಡವೆಂದರೆ ರಾತ್ರಿ ಊಟವೂ ಇಲ್ಲ ಎಂಬುದು ಅನುಭವದಿಂದ ಗೊತ್ತಾಗಿತ್ತು. ಆದರೂ ನನಗೆ ನಾನು ಮಾಡಿದ ತಪ್ಪೇನು? ಅಮ್ಮ ಹೊಡೆದದ್ಯಾಕೆ ಎನ್ನುವ ಪ್ರಶ್ನೆ ಕಾಡುತ್ತಲೆ ಇತ್ತು. ಆದರೆ ಮಧ್ಯಾನ್ಹದ ಶಾಲೆ ಮುಗಿಸಿ, ಎಲ್ಲಾ ಮರೆತು, ಸಂಜೆ ಮಾಮೂಲಿಯಾಗಿ ಆಟ ಮುಗಿಸಿ ಅಪ್ಪ ಅಮ್ಮಂದಿರಿಗಿಂತ ಒಂದು ತಾಸು ತಡವಾಗಿ ಮನೆ ಸೇರಿದರೆ ಅಮ್ಮ ಅಪ್ಪನ ಬಳಿ ವರದಿ ಒಪ್ಪಿಸಿದ್ದರು. ಅಪ್ಪ ಮಾತ್ರ ಎಂದಿನಂತೆ ಶಾಂತವಾಗಿ, ‘ಬಾ ಇಲಿ’್ಲ ಎಂದಿದ್ದರು. ಅಪ್ಪ ಕರೆದದ್ದೇ ಸಾಕು ಎಂಬಂತೆ ಅವರ ಕುತ್ತಿಗೆಗೆ ಜೊತು ಬಿದ್ದು ಅತ್ತಿದ್ದೆ. ‘ನಿಮ್ಮ ಮುದ್ದಿನಿಂದಲೇ ಅವಳು ಹಾಗಾಡ್ತಿರೋದು. ಎಂತೆಂತಹ ಮಾತಾಡ್ತಾಳೆ.’ ಅಮ್ಮನ ಸಿಟ್ಟು ಇನ್ನೂ ಮುಗಿದಿರಲಿಲ್ಲ. ‘ಅವಳಿಗೆ ಹಾಗೆ ಯಾಕೆ ಕೇಳಿದೆ?’ ಅಪ್ಪ ಪ್ರಶ್ನಿಸಿದ್ದರು. ‘ಅದರಲ್ಲೇನು ತಪ್ಪಿದೆ? ಹೊಸ ಅಂಗಿ ಹಾಕಿಕೊಂಡು ಬರಬೇಕಿತ್ತು ಅಂದೆ ಅಷ್ಟೆ’ ನನಗೆ ಅರ್ಥ ಆಗದೇ ಮತ್ತೆ ಕೇಳಿದ್ದೆ. ಅಪ್ಪ ಆಗ ಒಂದು ಹೊಸ ಅಂಗಿಯನ್ನೂ ಕೊಳ್ಳಲಾಗದ, ದಿನದ ಎರಡು ಹೊತ್ತಿನ ಊಟಕ್ಕೂ ಕಷ್ಟ ಪಡಬೇಕಾದ ಬಡತನದ ಬಗ್ಗೆ ಮನಮುಟ್ಟುವಂತೆ ವಿವರಿಸಿದ್ದರು. ನಿಜಕ್ಕೂ ಅದು ಅರ್ಥವಾದ ನಂತರ ನನಗೆ ನಾನು ಹಾಗೆ ಹೇಳಿದ್ದರ ಬಗ್ಗೆ ನಾಜಿಕೆಯಾಗಿತ್ತು.
ಅದರ ಮಾರನೆಯ ದಿನದಿಂದ ಆಕೆಯನ್ನು ಕಂಡಾಗಲೆಲ್ಲ ನನಗೆ ಗೊತ್ತಾಗದಂತೆ ನನ್ನೊಳಗೇ ಒಂದು ರೀತಿಯ ಅಪರಾಧಿ ಪ್ರಜ್ಞೆ. ಅದರ ಮಾರನೇ ವರ್ಷ ಆಕೆ ನನ್ನದೇ ತರಗತಿಗೆ ಬಂದಿದ್ದಳು. ಆಗೆಲ್ಲ ನನಗೆ ಆಡಲೂ ಆಗದ, ಅನುಭವಿಸಲೂ ಆಗದ ವೇದನೆ. ಹತ್ತನೆ ತರಗತಿಯವರೆಗೂ ಆಕೆ ನನ್ನದೇ ತರಗತಿಯಲ್ಲಿದ್ದಳು. ಹತ್ತನೆ ತರಗತಿ ಮುಗಿದ ನಂತರ ಕಾಲೇಜಿಗೆ ಬಂದಿರಲಿಲ್ಲ. ಆಕೆ ಕಾಲೇಜಿಗೆ ಹೋಗಬಹುದಿತ್ತು ಅನ್ನಿಸಿದ್ದರೂ ನನಗೆ ನನ್ನನ್ನು ಕಾಡುವ ಗಿಲ್ಟ್ ತಪ್ಪಿದ್ದಕ್ಕೆ ಎಲ್ಲೋ ಒಂದೆಡೆ ನಿರಾಳವಾಗಿತ್ತು. ಅದಾಗಿ ಎರಡೇ ವರ್ಷಕ್ಕೆ ಆಕೆಯನ್ನು ಮದುವೆ ಮಾಡಿಕೊಟ್ಟ ಬಗ್ಗೆ ಮಾಹಿತಿ ಬಂದಿತ್ತು. ಆದರೂ ಕೂಡ ಪ್ರತಿ ವರ್ಷ ದೀಪಾವಳಿಯ ಮರುದಿನ ಹೊಸ ಬಟ್ಟೆ ಧರಿಸಿ ಹೊರಗೆ ಹೊರಟರೆ ನೆನಪಾಗುವುದು ಆಕೆಯೇ. ಆದರೆ ನಾನು ಪ್ರಶ್ನಿಸಿದ ಅದೇ ದೀಪಾವಳಿಯ ಮಾರನೇ ದಿನವೇ ಆಕೆ ತನ್ನ ಬದುಕಿನ ದೀಪವನ್ನೂ ಕಳೆದುಕೊಳ್ಳಬೇಕಾದದ್ದು ನಿಜಕ್ಕೂ ವಿಪರ್ಯಾಸ. ನಾವೆಲ್ಲ ಕಾಲೇಜು ದಿನಗಳನ್ನು ಸಂಭ್ರಮಿಸುತ್ತಿದ್ದರೆ ಆಕೆ ಇಡೀ ಬದುಕಿನ ಸಂಭ್ರಮವನ್ನೇ ಕಳೆದುಕೊಂಡು ಕುಳಿತಿದ್ದಳೇ ಎನ್ನುವ ವಿಚಾರವೇ ನನ್ನನ್ನೀಗ ದಿಗ್ಭ್ರಾಂತಿಗೆ ತಳ್ಳುತ್ತಿದೆ.
ಎಲ್ಲರ ಬದುಕಿನಲ್ಲೂ ಬೆಳಕನ್ನು ತಂದು ಸಂಭ್ರಮ ಮುಡಿಸಬೇಕಾಗಿರುವ ದೀಪದ ಹಬ್ಬ ಕೆಲವರ ಬದುಕಿನಲ್ಲಿ ನೆರಳನ್ನು ಸೃಷ್ಟಿಸಿ ಕಗ್ಗತ್ತಲ ಹಬ್ಬವಾಗಿ ಪರಿಣಮಿಸಿರುವುದು ನಿಜಕ್ಕೂ ಖೇದ ಹುಟ್ಟಿಸುತ್ತಿದೆ ಯಲ್ಲದೆ ನಮ್ಮಲ್ಲೂ ಹಬ್ಬದ ಉತ್ಸಾಹವನ್ನು ಮೊಟಕುಗೊಳಿಸುತ್ತಿದೆ.






ಮಾನವೀಯತೆ ತಟ್ಟುತ್ತದೆ.