ಬೆಳಕಿನ ಹಬ್ಬವೂ ಹೌದು, ಮನೆಯ ಬೆಳಕು ನಂದಿದ ದಿನವೂ ಹೌದು..

ಕದ್ದ ಮೇಣದ ಬತ್ತಿಯಿಂದ ದೀಪಾವಳಿ..

ಕುಟುಂಬದವರೆಲ್ಲ ಸೇರಿ ಮೊನ್ನೆ ದೀಪಾವಳಿಗೆ ‘ಸಹಯಾನ’ಕ್ಕೆ ಹೋಗಿದ್ದೆವು; ಬೆಳಕಿನ ಹಬ್ಬಕ್ಕೆ. ಅಣ್ಣ ಬಹು ಪ್ರೀತಿಸಿದ ಹಬ್ಬ ದೀಪಾವಳಿ. ಮತ್ತು ಆತ ನಮ್ಮನ್ನು ಅಗಲಿದ್ದೂ ದೀಪಾವಳಿಯ ದಿನ. ಹಾಗಾಗಿ ನಮಗೆ ದೀಪಾವಳಿಯೆಂದರೆ ಬೆಳಕಿನ ಹಬ್ಬವೂ ಹೌದು, ಮನೆಯ ಬೆಳಕು ನಂದಿದ ದಿನವೂ ಹೌದು.

ಅಣ್ಣ ನಮ್ಮನ್ನು ಅಗಲಿದ ದಿನ ಅಕ್ಟೋಬರ್ 25. ಅಂದು ದೀಪಾವಳಿಯಾಗಿತ್ತು. ಹಾಗಾಗಿ ನಾವು ಅಂದು ಯಾವುದಾದರೂ ರೀತಿಯಲ್ಲಿ ಅವನನ್ನು ನೆನಪಿಸಿಕೊಳ್ಳುವ ದಿನ ಅದು. ಪ್ರತಿವರ್ಷ ಸುತ್ತಲಿನ ಮಕ್ಕಳೊಂದಿಗೆ ಸೇರಿ ದೀಪ ಹಚ್ಚುತ್ತೇವೆ, ಅಣ್ಣನ ಒಂದಿಷ್ಟು ಕವಿತೆ ಓದುತ್ತೇವೆ. ಈ ಬಾರಿ ದೀಪ ಹಚ್ಚುವುದರೊಂದಿಗೆ ಅಣ್ಣನ ಅಪ್ರಕಟಿತ ಮಕ್ಕಳ ನಾಟಕ ‘ಕಯ್ಯೂರಿನ ಮಕ್ಕಳು’ ಓದಿದೆವು. ಕಿರಣ ಭಟ್, ಮಾಧವಿ, ಯಮುನಾ ಮತ್ತು ನಾನು ಓದಿಗೆ ದನಿಯಾದೆವು. ಮಂಜುನಾಥ ಶೆಟ್ಟಿ, ಮಹೇಶ ಭಂಡಾರಿ ಅಂದಿನ ಕಾರ್ಯಕ್ರಮದಲ್ಲಿ ನಮ್ಮೊಂದಿಗಿದ್ದರು.

ಅಣ್ಣನಿಗೆ ಯಾವಾಗಲೂ ಬೆಳಕೆಂದರೆ ಇಷ್ಟ. “ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು” ಎನ್ನುವ ಬಿ.ಎಂ.ಶ್ರೀ ಅವರ ಕವಿತೆಯನ್ನು ಅಣ್ಣ ನನಗೆ ಹೈಸ್ಕೂಲಿಗೆ ಹೋಗುವಾಗಲೇ ಕೊಟ್ಟು ವಿವರಿಸಿದ್ದು ನೆನಪಿದೆ. ಅದಾದ ಮೇಲೆ ನಿರಂಜನರ ‘ಚಿರಸ್ಮರಣೆ’ ಓದಿಸಿ “ಕಯ್ಯೂರ ಮಕ್ಕಳಿಗೆ ಜಮೀನ್ದಾರರಿಂದ ಬಿಡುಗಡೆಯೇ ಬೆಳಕು” ಎಂದಿದ್ದ. ‘ಮೃತ್ಯುಂಜಯ’ದ ಮೆನೆಪ್ಟಾ ಜಾತ್ರೆಯಿಂದ ತಂದ ಪಾಟಿಯ ಸುದ್ದಿ ಹೇಳುತ್ತಾ ‘ಅಕ್ಷರವೇ ಬೆಳಕು’ ಎಂದಿದ್ದ.

ಆತನ ನಾಟಕದಲ್ಲಿಯ ‘ಬೆಳಕು’ ಒಂದು ಸ್ಥಾಯಿಭಾವ. ‘ಬೆಳಕು ಹಂಚಿದ ಬಾಲಕ,’ ‘ಬೆಳಕಿನ ಕಡೆಗೆ…..’ ಹೀಗೆ ನಾಟಕದ ತುಂಬ ಬೆಳಕಿನ ಕನಸು ಮತ್ತು ಮೆರವಣಿಗೆ. ‘ಬೆಳಕಿನ ಕಡೆಗೆ’ ನಾಟಕದಲ್ಲಿ ‘ಬುದ್ಧ’ ಬೆಳಕಾದರೆ, ‘ಬೆಳಕು ಹಂಚಿದ ಬಾಲಕ’ದಲ್ಲಿ ಅಂಬೇಡ್ಕರ್ ಬೆಳಕಾಗಿದ್ದರು. ಮಾರ್ಕ್ಸ್ ನ ಬಾಲ್ಯ ಮತ್ತು ಬಡತನದ ಹಿನ್ನೆಲೆಯಲ್ಲಿ ಒಂದು ಮಕ್ಕಳ ನಾಟಕ ಬರೆದುಕೊಡುವುದಾಗಿ ಹೇಳಿದ್ದ. ಮಾರ್ಕ್ಸ್ ಬಗ್ಗೆ ಒಂದು ಕವಿತೆ ಇದೆ ಆತನದು; ಅದನ್ನು ವಿಸ್ತರಿಸಿ ಬರೆವ ಮನಸ್ಸಿತ್ತು ಆತನಿಗೆ. ಆದರೆ ಆತ ಬಹುಬೇಗ ತಾನೇ ದೀಪವಾಗಿ ಹೋಗಿಬಿಟ್ಟ.

ದೀಪಾವಳಿ ಆತನಿಗೆ ‘ಬೆಳಕಿನ ಕಾರಣಕ್ಕೆ ಇಷ್ಟವಾದರೆ ಬಲಿ ಚಕ್ರವರ್ತಿಯ ಕಾರಣದಿಂದಲೂ ಆತನಿಗೆ ಇದು ಮಹತ್ವದ ಹಬ್ಬ. ಬಲಿಯ ಕುರಿತು ಆತ ಒಂದು ಮಹತ್ವದ ಸಂಶೋಧನಾ ಲೇಖನವನ್ನೂ ಪ್ರಕಟಿಸಿದ್ದ. ಆತನ ‘ಕಣ್ಣೇಕಟ್ಟೆ ಕಾಡೇಗೂಡೆ’ ಸಂಕಲನದಲ್ಲಿ, ‘ಕೊಲೆಗಾರನ ಪತ್ತೆಯಾಗಲಿಲ್ಲ’ ಸಂಕಲನದಲ್ಲಿ ಮತ್ತು ಇತ್ತೀಚೆಗೆ ಬಂದ ‘ಹದ್ದುಗಳು’ ಸಂಕಲನದಲ್ಲಿ ನಾಲ್ಕೈದು ಕವಿತೆಗಳು ದೀಪಾವಳಿ ಮತ್ತು ಬೆಳಕಿನ ಮೇಲೆಯೇ ಇದೆ.
ಆತನ ಒಂದು ಕವಿತೆ ಹೀಗಿದೆ.

‘ಬೆಳಕು ಮೂಡಿತು
ಶುರುವಾಯಿತು ಕಾಳಗ
ಕತ್ತಲೆಗೂ ಬೆಳಕಿಗೂ
ಸುರಿಯಿತು ರಕ್ತದ ಮಳೆ
ಹರಿಯಿತು ರಕ್ತದ ಹೊಳೆ
ಸಾಗಿತು ಹೆಣದ ಕೊಳೆ
ಕಾಲ ಸರಿದಂತೆ ಬೆಳಕಿನ
ಕೈ ಮೇಲಾಯಿತು.
ಕತ್ತಲೆ ಮುರಿದು ಮಂಡಿಯೂರಿ
ಬೇಡಿತು ‘ಜೀಯಾ ಜೀವದಾನ’
ನೇಗಿಲ ಹೆಗಲೇರಿಸಿದ ಬೆಳಕೆಂದಿತು
ಬದುಕಿಕೋ ಪುರೋಹಿತರ ತಲೆಯ ಸೇರಿ!’ ….’ಕತ್ತಲ x  ಬೆಳಕಿ’ನ ಚಿತ್ರ ಇದು.

ಆತನ ಬೆಳಕಿನ ಕಡೆಗೆ ನಾಟಕದ (ಮಕ್ಕಳ ನಾಟಕ) ಒಂದು ಪದ್ಯ ಹೀಗಿದೆ.

‘ಹೇಳುತ್ತೀವಿ ಕೇಳಿ ಕುಳಿತಂಥ ಜನಗಳೆ
ಕತ್ತಲೆಯು ಅಳಿದ ಕಥೆಯ
ಬೆಳಕು ಬೆಳೆ ಬೆಳೆದ ಕತೆಯ’ ಎಂದು ನಾಟಕದೊಳಗೊಂದು ಅಂಗುಲಿಮಾಲನ ಕತೆ ಬರುತ್ತದೆ. ಮುಂದುವರಿದು ಬುದ್ಧ ಬೆಳಕಾಗಿ, ಅಂಗುಲಿಮಾಲನೊಳಗಿನ ಕತ್ತಲನ್ನು ಓಡಿಸುವ ರೂಪಕ ಇದು;

‘ಬೆಳಕು ಹಂಚಿದ ಬಾಲಕ’ ಅಂಬೇಡ್ಕರ್ ಅವರ ಕುರಿತ ನಾಟಕದಲ್ಲಿ :

“ಸುತ್ತೆಲ್ಲ ನರಳುತಿದೆ ನೂರೊಂದು ಜೀವ
ಮೂಡಣದಿ ಮೂಡುತಿದೆ ಹೊಸದೊಂದು ಭಾವ
ಸುತ್ತೆಲ್ಲ ಮಲಗಿರಲು, ಅವನೊಬ್ಬ ಎದ್ದ
ಬೆಳಕನ್ನು ತಾ ತರುವೆ ಎನುತಿಹನು ಬುದ್ಧ” ಎಂದು ಒಂದು ಹಾಡು ಬರುತ್ತದೆ…….

ಹೀಗೆ ಆತನ ಸಾಹಿತ್ಯದ ತುಂಬಾ ಬೆಳಕು ಒಂದು ಪಾತ್ರವಾಗಿ, ಮೌಲ್ಯವಾಗಿ ಬರುತ್ತದೆ. ಸ್ವತ: ಅಣ್ಣ ಕೂಡ ಕತ್ತಲ ಲೋಕದಿಂದ ಬೆಳಕನ್ನು ಅರಸುತ್ತಾ ಹೊರಟವನು. ಮತ್ತು ಸಿಕ್ಕ ಬೆಳಕನ್ನು ಎಲ್ಲರಿಗೆ ಹಂಚಿದವನು.


ಪ್ರತಿವರ್ಷ ಕೂಡ ಆತ ಒಂದಿಷ್ಟು ಮೇಣದ ಬತ್ತಿ ತರುತ್ತಿದ್ದ. ಮೊದಮೊದಲು ಒಂದು ಡಜನ್, ಆಮೇಲೆ ಒಂದು ಪ್ಯಾಕೆಟ್, ನಾನು ಪಿಯುಸಿ, ಡಿಗ್ರಿಗೆ ಹೋಗುವಾಗ ಎರಡು ಪ್ಯಾಕೆಟ್ ಮೇಣದ ಬತ್ತಿ ತರುತ್ತಿದ್ದ. ಮೂರು ದಿನ ರಾತ್ರಿ ನಾವೆಲ್ಲ ಸೇರಿ ದೀಪ ಹಚ್ಚುತ್ತಿದ್ದೆವು. ಪಕ್ಕದ ಮನೆಯ ತಮ್ಮ, ತಂಗಿ, ಜ್ಯೋತಿ, ಗೌರಿ ಗಂಗೆ…. ಇವರೆಲ್ಲಾ ಬರುತ್ತಿದ್ದರು. ಪಟಾಕಿ ಇರಲಿಲ್ಲ. ಪಟಾಕಿ ತುಳಸಿ ಹಬ್ಬಕ್ಕೆ ಮಾತ್ರ. ಮೇಣದ ಬತ್ತಿಯ ಬೆಳಕಲ್ಲಿ ಬಲೀಂದ್ರ ನಮ್ಮನೆಗೂ ಬರುತ್ತಿದ್ದ. ನಮಗಂತೂ ಇದೇ ನಿಜವಾದ ಹಬ್ಬವಾಗಿ ಕಾಣ್ತಿತ್ತು.

ಇನ್ನಕ್ಕ ಮದುವೆಯಾಗಿ ಇಟಗಿಯಲ್ಲಿದ್ದಳು. ನಾನು ಎಂ.ಎ. ಓದುತ್ತಿದ್ದೆ. ಮಾಧವಿ ಕತ್ತಲಗೆರೆಯಲ್ಲಿ ನೌಕರಿ ಮಾಡುತ್ತಿದ್ದಳು. ಆಗ ನಾವು ಮಕ್ಕಳು ದೀಪಾವಳಿ ಹಬ್ಬಕ್ಕೆ ಬರುತ್ತಿರಲಿಲ್ಲ.
‘ಮನೆಯ ದೀಪಗಳೆಲ್ಲ ದೂರವಾದ ಮೇಲೆ ದೀಪಾವಳಿ ಎಲ್ಲಿ?’ ಅಂತ ಮಾಧವಿಗೆ ಆತ ಪತ್ರ ಬರೆದಿದ್ದ ಎಂದು ಆಕೆ ಈಗಲೂ ನೆನಪಿಸಿಕೊಳ್ಳುತ್ತಾಳೆ.

ಕದ್ದ ಮೇಣದ ಬತ್ತಿ ನಾವು ಸಣ್ಣವರಿರುವಾಗ ಒಂದು ಸಣ್ಣ ಘಟನೆ ನಡೆದಿದ್ದನ್ನು ಆತ ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದ. ಆಗ ಅಣ್ಣನಿಗೆ ಬರುವ ಸಂಬಳವೂ ಅಷ್ಟಕ್ಕಷ್ಟೆ. ದೀಪಾವಳಿ ಬಂತೆಂದರೆ ಮೇಣದ ಬತ್ತಿಯನ್ನು ನೆನಪಿಸುತ್ತಿದ್ದೆವು. ಆದರೆ ಅವನಲ್ಲಿ ಹಣ ಇರಲಿಲ್ಲ. ಒಂದೆರಡು ಮೇಣದ ಬತ್ತಿ ತರುವಷ್ಟೂ ಹಣ ಇರಲಿಲ್ಲ. ಮೇಣದ ಬತ್ತಿ ತರದಿದ್ದರೆ ಮಕ್ಕಳು ಕೇಳುತ್ತಾರೆ. ಬಹು ಆಸೆಯಿಂದ ದೀಪ ಹಚ್ಚಲು ಕಾಯುತ್ತಿದ್ದಾರೆ. ಆತನಿಗೆ ಬೇರೆ ಉಪಾಯ ಕಾಣಲಿಲ್ಲ.


ಅಂದು ಸಂಜೆ ಆತ ನನ್ನ ದೊಡ್ಡಮ್ಮನ ಮನೆಗೆ ಹೋಗಿದ್ದ (ಆತನ ಅಣ್ಣನ ಮನೆ). ಸಾಮಾನ್ಯವಾಗಿ ಬಿಡುವಾದಾಗ ಅಥವಾ ಬಿಡುವು ಮಾಡಿಕೊಂಡು ಆತ ಹೋಗುವ ಮನೆ ಅದು. ಹಾಗೆ ಸಂಜೆ ಅಲ್ಲೇ ಕುಳಿತು ಅವರು ದೀಪ ಹಚ್ಚುವವರೆಗೂ ಮಾತನಾಡುತ್ತಾ ಅಲ್ಲಿದ್ದನಂತೆ. ದೊಡ್ಡಮ್ಮ ಒಳಗೆ ಹೋದಾಗ ಸುಮ್ಮನೆ ಹೊರಬಂದು ಎರಡು ಮೇಣದ ಬತ್ತಿಯ ಬೆಂಕಿ ನಂದಿಸಿಕೊಂಡು ಯಾರಿಗೂ ಕಾಣದಂತೆ ಕಿಸೆಯಲ್ಲಿ ಹಾಕಿಕೊಂಡು ಬಂದನಂತೆ.

ಹೀಗೆ ಹೇಳುವಾಗ ಆತನ “ಹಣದ ವಿಷಯದಲ್ಲಿ ನನ್ನಷ್ಟು ಅಪಮಾನಿತರಾದವರೂ ಯಾರೂ ಇರಲಿಕ್ಕಿಲ್ಲ’ ಎನ್ನುವ ಅವನ ಮಾತು, ಆಗ ಆತನ ಕಣ್ಣನ್ನು ತುಂಬಿಕೊಳ್ಳುವ ಕಣ್ಣೀರ ನೆನಪಾಗುತ್ತದೆ.
ಅಣ್ಣನ ಕುರಿತು ಮಾಧವಿ ಬರೆದ ಕವಿತೆಯ ಸಾಲು ಇದು:

“ಮನೆಯ ದೀಪಗಳೆಲ್ಲ
ದೂರವಾದ ಮೇಲೆ
ದೀಪಾವಳಿ ಎಲ್ಲಿ?
ಅಂದು ಅಂದೆ ನೀನು
ಇಂದು ಕೇಳುತ್ತೇನೆ ನಾನು
‘ಹೆತ್ತ ಜೀವ ದೂರವಾದ ಮೇಲೆ
ಇನ್ನೆಲ್ಲಿಯ ದೀಪಾವಳಿ?’
ಎಲ್ಲಿಂದಲಾದರೂ ಉತ್ತರಿಸು
ಪ್ಲೀಸ್……

‍ಲೇಖಕರು Avadhi

November 18, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: