ಬೆಟ್ಟದೂರು, ಸುರಿವ ಹಿಮ, ಚಾಯ್‌, ಮ್ಯಾಗಿ… ಅಷ್ಟೇ ಅಲ್ಲ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ನೀವು ಬೇಕಾದರೆ ನೋಡಿ, ಈ ಪರ್ವತದೂರುಗಳಿಗೂ, ಮ್ಯಾಗಿಗೂ, ಚಹಾಕ್ಕೂ ಒಂದು ವಿಚಿತ್ರ ಸಂಬಂಧ ಇದೆ. ೨ ನಿಮಿಷದಲ್ಲಿ ತಯಾರಾಗುವ ಈ ಹಳದಿ ಪ್ಯಾಕೆಟ್ಟಿನ ಹೊಟ್ಟೆ ತಣಿಸುವ ತಿಂಡಿಯೊಂದು ಹೇಗೆ ಪುಟ್ಟ ಪುಟ್ಟ ಊರುಗಳನ್ನು ತನ್ನ ತೆಕ್ಕೆಯೊಳಗೆ ಬಂಧಿಸಿ ಬಿಟ್ಟಿದೆಯೆಂದರೆ, ಈ ಜಗತ್ತಿಗಿಡೀ ಒಂದೇ ರುಚಿಯಿದೆ ಅಂತ ನಿಮಗೆ ಅನಿಸತೊಡಗುತ್ತದೆ.

ನೀವು ಯಾವುದೇ ಬೆಟ್ಟ ಹತ್ತಿ, ಯಾವುದೇ ಬೆಟ್ಟದ ತಪ್ಪಲಲ್ಲಿ ಎರಡು ದಿನ ತಂಗಿ, ಅಥವಾ ಸ್ಲೀಪಿಂಗ್‌ ಬ್ಯಾಗು, ಟೆಂಟು ನೇತಾಕಿಕೊಂಡು ನಾಲ್ಕೈದು ದಿನದ ಚಾರಣ ಮಾಡಿ, ಅಲ್ಲೊಂದಿಷ್ಟು ಮ್ಯಾಗಿ ಪಾಯಿಂಟುಗಳು ಇರುತ್ತವೆ. ಅಲ್ಲಿರುವ ಮರದ ತುಂಡಿನ ಬೆಂಚಿನಲ್ಲಿ ಕೂತು, ಬಾಯಿಯಿಂಬ ಹೊಗೆಯುಸಿರು ಬಿಡುತ್ತಾ ಇದೇ ಸ್ವರ್ಗ ಸುಖ ಎಂದು ಮ್ಯಾಗಿ ಮೆಲ್ಲುತ್ತಾ ಚಹಾ ಹೀರುತ್ತಾ ಸ್ಟೇಟಸ್‌ ಅಪ್‌ಡೇಟ್‌ ಮಾಡುವ ಕನಿಷ್ಟ ನೂರು ಮಂದಿ ಸಿಕ್ಕೇ ಸಿಗುತ್ತಾರೆ.

ಅಷ್ಟಕ್ಕೂ, ಈ ಮ್ಯಾಗಿ ಎಂಬ ಪಾತ್ರವೊಂದರ ಪ್ರವೇಶ ಯಾವಾಗ ಆಯಿತೋ, ಅಂದಿನಿಂದ ಅದರದ್ದೇ ರಾಜ್ಯಭಾರ. ಈ ಪರಕೀಯ ಸುಂದರಿ ಭಾರತಕ್ಕೆ ದಾಳಿ ಮಾಡಿದ್ದೇ ತಡ, ನಮ್ಮ ದೇಸೀ ಫುಡ್ಡುಗಳೆಲ್ಲ ಸಪ್ಪೆಯಾಗಿ ಒಂದು ಹೆಜ್ಜೆ ಹಿಂದಕ್ಕಿಟ್ಟಿದ್ದಾರೆ. ಮ್ಯಾಗಿಯ ನೆರಳಲ್ಲಿ ಮಸುಕು ಮಸುಕಾದ ಇವರನ್ನೆಲ್ಲ ಮೂಸುವವರೇ ಇಲ್ಲ! ಸುಲಭದಲ್ಲಿ ಬಹಳ ಜನರಿಗೆ ಇದು ಜೀವನಕ್ಕೆ ದಾರಿ ಮಾಡಿರುವುದೂ ನಿಜವೇ.

ನನಗೆ ಬಹಳ ಸಲ ಅನ್ನಿಸುವುದಿದೆ, ಹೆಚ್ಚೆಂದರೆ ಎರಡು ದಶಕಗಳಿಂದ ಭಾರೀ ಜನಮನ್ನಣೆ ಗಳಿಸಿದ ಈ ಮ್ಯಾಗಿ ಎಂಬ ಸುಂದರಿ ಬರುವ ಮೊದಲು ಈ ಪರ್ವತದೂರಿನವರೆಲ್ಲ ಏನು ಮಾಡುತ್ತಿದ್ದರು? ಚಾರಣಿಗರಿಗೆ ಏನು ತಿನ್ನಲು ಕೊಡುತ್ತಿದ್ದರು? ಪುಟ್ಟ ಪುಟಾಣಿ ಡಾಬಾಗಳಲ್ಲೆಲ್ಲ ಏನು ಮಾರಾಟವಾಗುತ್ತಿತ್ತು? ಈಗಿನಷ್ಟು ವ್ಯಾಪಕವಾಗಿ ಹಿಮಾಲಯದ ಚಾರಣ, ಪ್ರವಾಸೋದ್ಯಮ ಆಗ ಬೆಳೆದಿರಲಿಲ್ಲ, ಇಷ್ಟೆಲ್ಲ ಡಾಬಾಗಳೆಲ್ಲ ಆಗ ಇರಲಿಲ್ಲ ಎಂದೂ ಇಟ್ಟುಕೊಳ್ಳೋಣ, ಆದರೂ ಇದರ ಜಾಗದಲ್ಲಿ ಮೊದಲೊಂದು ಫಟಾಫಟ್‌ ದೇಸೀ ತಿಂಡಿಗಳೂ ಇದ್ದಿರಲೇಬೇಕಲ್ಲ! ಅವೆಲ್ಲ ಎಲ್ಲಿ ಹೋದವು?

ಕಣ್ತಣಿಸುವಷ್ಟೂ ದೂರ ಹಾಸಿರುವ, ಸುರಿವ ಹಿಮದಲ್ಲಿ, ಚಳಿಯಲ್ಲಿ ಒಂದು ಪುಟಾಣಿ ಕಪ್ಪಲ್ಲಿ ಕುಡಿಯುವ ಚಹಾ, ಹೀರುವ ಸೂಪೀ ನೂಡಲ್ಲು ಸುಖವೇ ನಿಜ. ಇವೆಲ್ಲ ಒಂದು ಪಯಣದ ಪುಟ್ಟ ಪುಟ್ಟ ಗಮ್ಮತ್ತೇ, ಎರಡು ಮಾತಿಲ್ಲ. ಆದರೆ, ಇದರ ನೆರಳಲ್ಲಿ ನಮ್ಮ ತಲೆತಲಾಂತರಗಳಿಂದ ಬೆಳೆದು ಬಂದ ಬೆಟ್ಟದೂರುಗಳ ಅಥೆಂಟಿಕ್‌ ತಿಂಡಿತಿನಿಸುಗಳ ರುಚಿ ನೋಡುವ ಭಾಗ್ಯವನ್ನೂ ಪ್ರವಾಸಿಗರು, ಚಾರಣಿಗರು ಕಳೆದುಕೊಳ್ಳುತ್ತಿದ್ದಾರೆ ಎಂಬುದೂ ನಿಜವೇ. ಈಗಿನ ಇನ್ಸ್ಟ್ಯಾಂಟ್‌ ಯುಗದಲ್ಲಿ ಮ್ಯಾಗಿಯಂತಹ ತಿನಿಸುಗಳು ಆಪತ್ಬಾಂಧವ ನಿಜವೇ. ಇವು ಥಟ್ಟನೆ ಹಸಿವಿಂಗಿಸುವ ಅರ್ಹತೆ ಹೊಂದಿರುವುದೂ ಸತ್ಯವೇ.

ಬೆಟ್ಟದ ಮೂಲೆಯಲ್ಲೆಲ್ಲೋ ಇರುವ ಡಾಬಾಕ್ಕೆ ದಿನನಿತ್ಯವೂ ಎಲ್ಲವನ್ನು ಕತ್ತೆಗಳ ಮೇಲೆ ಹೇರಿಕೊಂಡು ಹತ್ತಬೇಕಾಗಿರುವಾಗ ಸವಾಲಿನ ಕ್ಷಣಗಳಲ್ಲಿ ಈ ಮ್ಯಾಗಿಯೊಂದು ಸುಲಭೋಪಾಯವೂ ನಿಜವೇ. ಆದರೂ, ಇದರ ಪ್ರವೇಶ ಯಾವಾಗ ಆಯಿತೋ, ಅಂದೇ ನಮ್ಮ ಈ ಬೆಟ್ಟದೂರಿನ ಹಳ್ಳಿಗಳ ಅಮೂಲ್ಯ ಆಹಾರ ಸಂಸ್ಕೃತಿಯೂ ಮೆಲ್ಲನೆ ಮೆಲ್ಲನೆ ಹಿಂದಕ್ಕೆ ಸರಿಯಿತು ಎಂಬುದೂ ಅಷ್ಟೇ ನಿಜ. ಬೇಕೆಂದರೂ ಇಂದು ಆ ಊರಲ್ಲಿ ಬೆಳೆಯುವ ಧಾನ್ಯದ ರೊಟ್ಟಿಯನ್ನೋ, ಸೊಪ್ಪಿನ ಚಟ್ನಿಯನ್ನೋ ಇಂತಹ ಡಾಬಾಗಳಲ್ಲಿ ಮಾಡಿಕೊಡುವವರಿಲ್ಲ! ಎಲ್ಲೂ ಅಷ್ಟು ಸುಲಭದಲ್ಲಿ ಸಿಗುವುದೂ ಇಲ್ಲ.

ಎಷ್ಟೋ ಚಾರಣಗಳಲ್ಲಿ ದಾರಿಯುದ್ದಕ್ಕೂ ಸಿಗುವ ಡಾಬಾಗಳಲ್ಲಿ ಮ್ಯಾಗಿ, ಸ್ಯಾಂಡ್‌ವಿಚ್ಚುಗಳು ಬಿಟ್ಟರೆ ಬೇರೇನೂ ಸಿಗುವುದೂ ಇಲ್ಲ! ತಿನ್ನದೆ ವಿಧಿಯಿಲ್ಲ! ಆ ಊರಿನ ಜೊತೆಗೆ, ಆಹಾರಕ್ಕೂ ನಾವು ಅಷ್ಟೇ ಪ್ರಾಮುಖ್ಯತೆ ಕೊಡುತ್ತಿದ್ದರೆ, ಆ ಊರಿನ ಒಬ್ಬರ ಮನೆಯಲ್ಲಿ ತಂಗಬೇಕು ಹಾಗೂ ನಮ್ಮ ಇಚ್ಛೆಯನ್ನು ಅವರಿಗೆ ಮೊದಲೇ ತಿಳಿಸಿಬಿಡಬೇಕು, ಅಷ್ಟೇ. ಹಿಮಾಚಲದ ಮೂಲೆಯೊಂದರ ನೆಟ್‌ವರ್ಕು ಕೂಡಾ ಸಿಗದ ಗ್ರಹಣವೆಂಬ ಹಳ್ಳಿಯ ತುಂಬ ಪಿಜ್ಜಾದ ಕಾರ್ನರುಗಳೇ ತುಂಬಿರಬೇಕಾದರೆ ಪರಿಸ್ಥಿತಿ ಹೇಗಿದೆ ಎಂಬುದನ್ನು ಊಹನೆ ಮಾಡಬಹುದು.

ಈಗೆಲ್ಲ ಚಾರಣ ಹೊರಟರೆ ನಾವು ಮೊದಲು ಅವರಿಗೆ ಹೇಳುವುದೂ ಇದನ್ನೇ. ಸಸ್ಯಾಹಾರದಲ್ಲಿ ನೀವೇನು ತಿಂತೀರೋ ಅದನ್ನೇ ನಮಗೂ ಕೊಡಿ. ನೀವು ಕುಡಿಯುವ ನೀರೇ ನಮಗೂ ಇರಲಿ, ಅದು ಬೆಟ್ಟದಿಂದಾಲೂ ಇಳಿದು ಬರಲಿ, ಊರ ತೊರೆಯದ್ದಾದರೂ ಇರಲಿ. ಮಿನರಲ್ಲು ಬಾಟಲ್ಲು, ಪ್ಯಾಕೇಜ್ಡ್‌ ಫುಡ್ಡು ಬೇಡ. ಅವರ ಮನೆಯ ವಾಸ, ಅವರ ರುಚಿರುಚಿಯಾದ ವಿಧವಿಧ ದೇಸೀ ತಿನಿಸುಗಳು, ಅಲ್ಲಿನ ಬೆಟ್ಟದ ಸಿಹಿನೀರು, ಅಲ್ಲಿನ ಪರಿಶುದ್ಧ ಗಾಳಿ ಇವೆಲ್ಲ ಈಗಿನ ಪಯಣದ ಭಾಗವಾಗಿ ಹೋಗಿ, ಹೋದ ಊರುಗಳೆಲ್ಲವೂ ಹಿತವಾದ ನೆನಪುಗಳು, ಅದ್ಭುತ ಅನುಭವಗಳು. ಅಂತಹ ನೆನಪುಗಳಲ್ಲಿ ಕೆಲವು ಇಲ್ಲಿವೆ.

* * * *

ರಾತ್ರಿ ೧೦ ದಾಟಿ ಅರ್ಧ ಗಂಟೆಯೇ ಕಳೆದಿರಬೇಕು. ಹಸಿವೋ ಹಸಿವು. ಆಗ ನಮ್ಮ ತಟ್ಟೆಗೆ ಬಂದು ಬಿದ್ದಿದ್ದು ಬಿಸಿ ಬಿಸಿ ಬಾಜ್ರಾ (ಸಜ್ಜೆ) ಹಾಗೂ ರಾಗಿಯನ್ನು ಬಳಸಿ ಮಾಡಿದ ಚಪಾತಿ ಜೊತೆಗೆ ಒಂಥರಾ ಗುಲಾಬಿ ನೇರಳೆ ಬಣ್ಣದ ಒಂದು ಸಬ್ಜಿ. ಏನಿದು ಸಹಜವಾಗಿಯೇ ಕೇಳಿದ್ದೆವು. ʻಚೋಲೈ ಕೀ ಸಬ್ಜಿ, ಹಿಮಾಚಲ್‌ ಸ್ಪೆಷಲ್‌ʼ ಅಂದಿದ್ದರು ನಮ್ಮ ಗೈಡ್‌ ಚಮನ್.‌

ಹಿಮಾಚಲದ ಮೂಲೆಯ ಹಳ್ಳಿ ಎಂದರೆ ಹಳ್ಳಿ. ಕನಿಷ್ಟ ಆಸ್ಪತ್ರೆಯೂ ಇಲ್ಲದ ಹಳ್ಳಿ. ಚಮನ್‌ ಅವರ ಮನೆಗೆ ಹೋಗುವುದಾಗಿ ಮೊದಲೇ ಮಾತಾಗಿತ್ತು. ನಾವು ಹೊರಡುವ ಮೂರ್ನಾಲ್ಕು ದಿನದ ಮೊದಲು ಚಮನ್‌ ಕರೆ ಮಾಡಿ, ಊಟಕ್ಕೆ ನಿಮಗೇನು ಮಾಡಲಿ ಎಂದಿದ್ದರು. ನಿಮ್ಮ ಹಳ್ಳಿಯ ಊಟ, ಯಾವುದಿದ್ದರೂ ನಾವು ರುಚಿ ನೋಡಲು ಸಿದ್ಧ ಎಂದಿದ್ದೆವು. ಹಾಗಾಗಿಯೇ, ನಾವು ಬರುವ ದಿನವೇ ಚಮನ್‌ ಅವರ ಅಮ್ಮ ನಮಗಾಗಿ ಈ ಚೋಲೈ ಸಬ್ಜಿ ಮಾಡಿದ್ದರು.

ಆಗಷ್ಟೆ ಹೆಸರು ಕೇಳಿದ ಈ ಚೋಲೈ ಅಂದ್ರೇನು ಅಂತ ಖಂಡಿತವಾಗಿಯೂ ಗೊತ್ತಿರಲಿಲ್ಲ. ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ಪ್ರಚಲಿತದಲ್ಲಿರುವ ಛೋಲೆಯಂತೂ ಅಲ್ಲ. ʻಅದೊಂದು ಸೊಪ್ಪು ನೋಡಿ, ನಮ್ಮದೇ ಗದ್ದೆಯಲ್ಲಿ ಬೆಳೆದಿದ್ದುʼ ಎಂದು ಚಮನ್‌ ಹೆಚ್ಚಿನ ವಿವರಣೆ ಕೊಟ್ಟಿದ್ದರು. ಆದರೆ ಅದರ ರುಚಿಗೆ ಮಾತ್ರ ಬೆರಗಾಗಿದ್ದೆ. ಅಂಥದ್ದೊಂದು ಅತ್ತ ಪಲ್ಯವೂ ಅಲ್ಲದ ಇತ್ತ ಚಟ್ನಿಯೂ ಅಲ್ಲದ ಸಬ್ಜಿ ಬಹಳ ಇಷ್ಟವಾಗಿತ್ತು.

ಹಸಿದವರಿಗೆ ಏನು ಕೊಟ್ಟರೂ ಮೃಷ್ಟಾನ್ನ ಭೊಜನವೇ ಎಂಬ ಮಾತಿದೆ. ಆದರೆ ಆ ದಿನದ ಹಸಿವಿಗಿಂತಲೂ ಆ ರುಚಿ ಹೆಚ್ಚು ನೆನಪಿದೆ. ಆಗ ನಮಗೆ ಅದೆಷ್ಟು ಸುಸ್ತಾಗಿತ್ತು ಅಂದರೆ, ನಾಳೆ ಬೆಳ್ಳಂಬೆಳಗ್ಗೆ ಎದ್ದು ಐದು ದಿನಗಳ ಚಾರಣ ಮಾಡ್ತೀವಾ? ಸಾಧ್ಯ ಇದೆಯಾ ಅನಿಸಿತ್ತು. ಅನಿಸಿದ್ದನ್ನು ಅವರ ಬಳಿ ಹೇಳಿಕೊಂಡಾಗ, ʻಇಲ್ಲಿ ಬರಲು ಸಾಕಷ್ಟು ಕಷ್ಟವಾಯ್ತು ನಿಮಗೆ ಅಂತ ಗೊತ್ತಿದೆ. ನಾಳೆ ಚಾರಣ ಮಾಡ್ತೀವಾ ಅನ್ನೋ ತಲೆಬಿಸಿ ಎಲ್ಲ ಈಗ ಮಾಡ್ಬೇಡಿ. ಮೊದಲು ಹೊಟ್ಟೆ ತುಂಬ ಊಟ ಮಾಡಿ. ಆಮೇಲೆ ಚಂದ ನಿದ್ದೆ ಮಾಡಿ. ಬೆಳಗ್ಗೆ ನಿಧಾನಕ್ಕೆ ಎದ್ದು ಯೋಚನೆ ಮಾಡಿದರಾಯ್ತು ಬಿಡಿ. ಇನ್ನು ಒಂದು ವಾರ ನೀವು ನಮ್ಮ ಜವಾಬ್ದಾರಿʼ ಅಂತ ನಮ್ಮ ಹತ್ತಿರದ ಬಂಧುವೋ ಎಂಬಂತೆ ಹೇಳಿ ನಮ್ಮನ್ನು ನಿರಾಳರಾಗಿಸಿದ್ದೂ ಅಲ್ಲದೆ, ಹೊಟ್ಟೆ ತುಂಬ ಊಟ ಬಡಿಸಿದ್ದರು. ಆ ಊಟ, ಅವರು ನಮಗಾಗಿ ಕೊಟ್ಟಿದ್ದ ಮಹಡಿಯ ಆ ರೂಮು ಮೊದಲ ದಿನವೇ ನಮ್ಮದೇ ಮನೆಯ ಫೀಲು ಕೊಟ್ಟಿತ್ತು.

ಆ ದಿನ ೧೮ ಗಂಟೆ ಸತತವಾಗಿ ಹಿಮಾಚಲದ ಕಡಿದಾದ ರಸ್ತೆಗಳಲ್ಲಿ ಡ್ರೈವ್‌ ಮಾಡಿ, ಎಲ್ಲೆಲ್ಲೋ ಗುಡ್ಡ ಹತ್ತಿಳಿದು, ಇನ್ನೆಲ್ಲೋ ಕಾರು ಕೈಕೊಟ್ಟು, ಕಾಮಗಾರಿಯಿಂದ ಮುಚ್ಚಿದ ರಸ್ತೆಗಳಲ್ಲಿ ಗಂಟೆಗಟ್ಟಲೆ ಬಿಸಿಲಲ್ಲಿ ಒಣಗಿ, ಏನೇನೋ ಅಡೆತಡೆಗಳನ್ನೆಲ್ಲ ದಾಟಿ, ಕತ್ತಲ ರಾತ್ರಿಯ ೧೦ ಗಂಟೆಯ ಹೊತ್ತಿಗೆ ಹೇಗೋ ಅವರ ಮನೆಗೆ ತಲುಪಿದ್ದೆವು. ಬಹುಶಃ ಈ ರಾತ್ರಿ ಇವರ ಮನೆಗೆ ತಲುಪುದು ಡೌಟು, ಈ ಚಾರಣವೇ ಡೌಟು ಅನ್ನುವಷ್ಟರ ಮಟ್ಟಿಗೆ ನಮಗೆ ಸಾಕುಬೇಕಾಗಿತ್ತು. ಇಷ್ಟೆಲ್ಲ ಆಗಿ, ಇನ್ನೇನು ಅವರ ಮನೆ ತಲುಪಲು ಒಂದ್ಹತ್ತು ಕಿಮೀ ಅಷ್ಟೇ ಅಂದಾಗ, ಒಂದೇ ವಾಹನ ಹೋಗಬಹುದಾದಂತಹ ಕಡಿದಾದ ದಾರಿಯ ಕಗ್ಗತ್ತಲ ರಾತ್ರಿಯಲ್ಲಿ ಅದ್ಯಾರೋ ಪುಣ್ಯಾತ್ಮ ತನ್ನ ದೊಡ್ಡ ಜೀಪನ್ನು ಮಾರ್ಗದಲ್ಲೇ ಪಾರ್ಕು ಮಾಡಿ ಮನೆಗೆ ಹೋಗಿ ಕಂಠಪೂರ್ತಿ ಕುಡಿದು ನಿದ್ದೆ ಮಾಡಿಬಿಟ್ಟಿದ್ದ.

ಒಂದು ಗಂಟೆ ಆತನನ್ನು ಹುಡುಕಿ ತಂದು ಜೀಪು ತೆಗೆಸುವುದರಲ್ಲೇ ಪ್ರಾಣ ಕೈಗೆ ಬಂದಿತ್ತು. ಚಮನ್‌ ಕಳುಹಿಸಿದ ಆ ಇಬ್ಬರು ಆ ದಿನ ನಮಗಲ್ಲಿ ಸಿಗದೇ ಇದ್ದಿದ್ದರೆ, ಬಹುಶಃ ಆ ರಾತ್ರಿಯಿಡೀ ನಾವು ಆ ಗೊಂಯ್ಯೆನ್ನುವ ಕತ್ತಲ ರಾತ್ರಿಯಲ್ಲಿ ಹಸಿದ ಹೊಟ್ಟೆಯಲ್ಲಿ ಮೇಲಿನ ನಕ್ಷತ್ರಗಳನ್ನೂ, ಕಣ್ಣೆದುರು ಮಿಣುಕುತ್ತಿದ್ದ ಮಿಂಚುಹುಳಗಳನ್ನೂ ನೋಡುತ್ತಾ ಅಲ್ಲೇ ಕೂರಬೇಕಾಗಿತ್ತು. ಇಷ್ಟೆಲ್ಲ ಪುರಾಣ ನಡೆದು, ನಮ್ಮ ದೇಹವಿಡೀ ಹೊಟ್ಟೆ ಎಂದು ಅನಿಸುತ್ತಿರುವಾಗಲೇ ದಕ್ಕಿದ ಆ ಅದ್ಭುತ ಬಾಜ್ರಾ/ರಾಗಿಯ ಚಪಾತಿ, ಚೋಲೈ ಸಬ್ಜಿಯ ದಯೆಯಿಂದಲೋ ಏನೋ ಮರುದಿನ ಬೆಳಗ್ಗೆ ಶಕ್ತಿ ಬಂದು, ಬೇಗ ಎಚ್ಚರವಾಗಿ, ಅಂದುಕೊಂಡ ಹಾಗೆ ಒಂಭತ್ತಕ್ಕೆಲ್ಲ ಚಾರಣ ಶುರು ಮಾಡಿದ್ದೆವು.

ಆ ಹಸಿವಿನಲ್ಲಿ, ಸುಸ್ತಿನಲ್ಲಿ, ಮಬ್ಬುಮಬ್ಬಾದ ಆ ರಾತ್ರಿಯ ಬೆಳಕಿನಲ್ಲಿ ಅವರ ಚಪಾತಿಯ ಜೊತೆಗಿನ ಆ ಸಬ್ಜಿಯ ಫೋಟೋ ತೆಗೆದಿಲ್ಲ ಎಂಬ ಬೇಸರ ಈಗಲೂ ಇದ್ದರೂ, ಹಾಗೆ ಹಿಮಾಚಲದ ಸಾಂಪ್ರದಾಯಿಕ ಶೈಲಿಯಲ್ಲೇ ನಾವಿದ್ದಷೂ ದಿನ ಅಡುಗೆ ಮಾಡಿ ಬಡಿಸಿದ ಚಮನ್‌ ಕುಟುಂಬದ ಮೇಲೆ ಅಕ್ಕರೆಯಿದೆ. ಅಂತಹ ರುಚಿಕಟ್ಟಾದ ಊಟಕ್ಕೆ ಕಾರಣವಾದ ಸೊಪ್ಪು ಯಾವುದು ಎಂಬ ಕುತೂಹಲವನ್ನಿಟ್ಟುಕೊಂಡೇ ಚಾರಣ ಶುರು ಮಾಡಿದ್ದೆ.

ಮನೆ ಬಿಟ್ಟು ಬೆಟ್ಟವೇರುತ್ತಾ, ಊರು ದೂರಾಗುತ್ತಿದ್ದಂತೆ ಗಾಢ ಗುಲಾಬಿ ಬಣ್ಣದ ಕದಿರುಗಳೆಲ್ಲ ಗದ್ದೆಗೆ ಅದೇ ಬಣ್ಣ ಬಳಿದಿದ್ದವು. ಆ ಪಿಂಕ್‌ ಗದ್ದೆಗಳೆಲ್ಲ ಚೋಲೈ ಗದ್ದೆಗಳು ಎಂದು ಅವರೇ ವಿವರಿಸಿದ್ದರು. ಆ ಕದಿರಿನಿಂದ ಸಿಗುವ ಧಾನ್ಯದಿಂದ ಖೀರು, ಲಡ್ಡು ಎಲ್ಲ ಮಾಡ್ತೇವೆ. ನಿನ್ನೆ ತಿಂದ ಸಬ್ಜಿ ಇದರ ಸೊಪ್ಪಿನದ್ದು. ಚಾರಣದಲ್ಲಿ ಲಡ್ಡು ಮಾಡೋಣ ಬಿಡಿ, ರುಚಿ ನೋಡುವಿರಂತೆʼ ಎಂದಿದ್ದರು. ಅಲ್ಲಲ್ಲಿ ಹಸಿರು, ಅಲ್ಲಲ್ಲಿ ಪಿಂಕ್‌ ಆಗಿ ಆ ಊರಿಡೀ ಈಗಷ್ಟೇ ಹೋಳಿ ಆಡಿದ ಮೈದಾನದಂತೆ ಕಾಣುತ್ತಿತ್ತು.

ತಾವಂದ ಮಾತಿನಂತೆ, ಚಾರಣದ ಎರಡನೇ ದಿನ ರಾತ್ರಿ ಗಡಗಡ ನಡುಗುವ ಮೈನಸ್‌ ಡಿಗ್ರಿ ಚಳಿಯಲ್ಲಿ ಲಡ್ಡು ಮಾಡಿ ತಂದು ಕೊಟ್ಟಿದ್ದರು. ಲಡ್ಡು ನೋಡಿದ ತಕ್ಷಣ ʻಓ ಇದಾ? ಇದು ರಾಮ್‌ದಾನಾ ಲಡ್ಡು ಅಲ್ವ?ʼ ಅಂದಿದ್ದೆ. ʻಓಹ್‌ ಗೊತ್ತಾ ನಿಮ್ಗೆ? ಬಹುಶಃ ದೆಹಲಿ ಮಂದಿ ಹಾಗೇ ಹೇಳ್ತಾರೆ ಇರ್ಬೇಕುʼ ಅಂದಿದ್ದರು. ಉತ್ತರ ಭಾರತದ ಮಂದಿ ನವರಾತ್ರಿ, ಶಿವರಾತ್ರಿ, ಕರ್ವಾಚೌತ್‌ ಮತ್ತಿತರ ಉಪವಾಸಗಳಲ್ಲಿ ಈ ರಾಮಧಾನ್ಯ (ಅಮರಾಂತ್)ನ್ನು ಬಳಸುವುದು ನೋಡಿದ್ದೆ.

ಇದರ ಲಡ್ಡು ಮಾರುಕಟ್ಟೆಯಲ್ಲಿ ಧಾರಾಳವಾಗಿ ಸಿಗುತ್ತಿತ್ತು. ಬಹಳ ಸಾರಿ ಹೊಟ್ಟೆಗಿಳಿಸಿಯೂ ಇದ್ದೆ. ಬಹಳ ಕಡಿಮೆ ಕ್ಯಾಲೊರಿ ಇರುವ, ಯಥೇಚ್ಛ ಪೋಷಕಾಂಶಗಳಿರುವ ತೂಕ ಇಳಿಸುವವರಿಗೆ ಹೇಳಿ ಮಾಡಿಸಿದ ಆಹಾರವಿದು ಅಂದರೂ ತಪ್ಪಲ್ಲ. ಅವರು ಮಾಡಿದ ಲಡ್ಡು ಮಾರುಕಟ್ಟೆಯ ಲಡ್ಡಿಗಿಂತ ಕೊಂಚ ಭಿನ್ನವಾಗಿ, ಅದಕ್ಕಿಂತ ಹೆಚ್ಚು ರುಚಿಯಾಗಿ ಇತ್ತು. ಬೆಲ್ಲದ ಪಾಕದ ಬದಲಾಗಿ ಜೇನು ಹಾಕಿ ಮಾಡಿದ್ದರಿಂದಲೋ ಏನೋ ಲಡ್ಡು ಮೆದುವಾಗಿ, ಸೆಕೆಂಡಿನೊಳಗೆ ಬಾಯೊಳಗೆ ಕರಗಿಹೋಗಿತ್ತು.

* * * *

ಧೀರಜ್‌ ರಾವತ್‌ ಮತ್ತು ಕುಶ ಇಬ್ಬರು ಚಿಗುರು ಮೀಸೆಯ ೧೮ರ ಹುಡುಗರು. ಹೆಸರೇನು ಅಂತ ಕೇಳಿದರೆ ನಾಚಿಕೆಯಿಂದ ಕುಶ ಎನ್ನುತ್ತಾ ನೆಲ ದಿಟ್ಟಿಸುವ ಹುಡುಗ. ಇಂಥ ಹುಡುಗರಿಬ್ಬರು ಆ ದಿನ ಒಲೆ ಮುಂದೆ ಕೂತರು. ಮಧ್ಯರಾತ್ರಿ ೨ ಗಂಟೆಯಿಂದ ಸಂಜೆ ನಾಲ್ಕರವರೆಗೆ ಪರ್ವತ ಹತ್ತಿಳಿದು, ಗೇಟರ್ಸ್‌, ಕ್ರಾಂಪಾನ್‌ಗಳಿದ್ದರೂ, ಎಷ್ಟೇ ಜಾಗರೂಕತೆಯಿಂದ ಕಾಲಿಟ್ಟರೂ ಜಾರಿ ಬೀಳುವಂಥ ಹಿಮದಲ್ಲಿ ನಡೆಯುತ್ತಾ ಇನ್ನೂ ಎರಡು ಗಂಟೆ ದಾರಿಯಿದೆ ಎಂದು ಗೊತ್ತಾಗುವಾಗ ಅಯ್ಯೋ ಅನಿಸತೊಡಗಿತ್ತು. ನಮ್ಮ ಜೊತೆಯಿದ್ದ ಅಶೋಕ್‌ ರಾವತ್‌ ಕೂಡಾ ೧೭ರ ಹರೆಯದ ಸೇನೆ ಸೇರಿ ದೇಶಸೇವೆ ಮಾಡುವ ಕನಸುಳ್ಳ ಪ್ರಥಮ ಪಿಯುಸಿ ಹುಡುಗ. ಎರಡು ಗಂಟೆ ಊಟದ ಬ್ರೇಕ್‌ ಬಿಟ್ಟರೆ ನಡೆದದ್ದೇ ನಡೆದದ್ದು.

ಮಧ್ಯರಾತ್ರಿಯೇ ಎದ್ದು ಶಿಖರವೇರಿದ್ದರಿಂದಲೋ ಏನೋ ಮಗನಿಗೆ ಮಧ್ಯಾಹ್ನ ಎರಡರ ಹೊತ್ತಿಗೆ ನಿದ್ದೆ ತೂಗಲು ಶುರುವಾಯ್ತು. ದಾರಿ ಮಧ್ಯೆ ಚಳಿಯ ಚುರುಕು ಬಿಸಿಲಿಗೆ ಹುಲ್ಲ ಮೇಲೆ ತಲೆಯಿಟ್ಟು ಸೂರ್ಯನಿಗೆ ಮುಖಕೊಟ್ಟು ನೀಲಾಕಾಶವೇ ಛಾವಣಿಯೆಂಬಂತೆ ಗಡದ್ದಾಗಿ ಒಂದು ಗಂಟೆ ನಿದ್ದೆ ಮಾಡಿ ಎದ್ದು ಉದಾಸೀನ ಅಪ್ಪಿಕೊಂಡು ನಡಿಗೆ ನಿಧಾನವಾಗತೊಡಗಿತ್ತು. ಅಷ್ಟರಲ್ಲಿ ಮಗನಿಗೆ ವಾಂತಿಯೂ ಆಗಿ, ಅಂದುಕೊಂಡಂತೆ ಇನ್ನೂ ಮೂರು ಗಂಟೆ ನಡೆಯೋದು ಇಂದಿಗೆ ಸಾಧ್ಯವಾಗುವ ಮಾತಲ್ಲ.

ಹಾಗಾಗಿ ಇಲ್ಲೇ ಎಲ್ಲಾದರೂ ಟೆಂಟ್‌ ಹಾಕಿಬಿಡುವ ಅಂದಾಗ, ಇನ್ನೊಂದು ಗಂಟೆ ನಡೆದರೆ ನಮ್ಮ ಶೆಡ್‌ ಸಿಗುತ್ತೆ. ಅಲ್ಲೇ ರಾತ್ರಿ ಕಳೆದರಾಯಿತು. ಬೆಳಗ್ಗೆದ್ದು ಎರಡು ಗಂಟೆ ನಡೆದರೆ ಸಾಂಕ್ರಿ ಬಂದುಬಿಡುತ್ತೆ. ಶೆಡ್‌ ನಿಮಗಿಷ್ಟವಾಗಬಹುದು ಎಂದಿದ್ದ ಅಶೋಕ್‌ ರಾವತ್. ಒಡನೆಯೇ ವಾಕಿಟಾಕಿಯಲ್ಲಿ ಸಾಂಕ್ರಿ (ಹಳ್ಳಿ) ಸಂಪರ್ಕಿಸಿ, ಕೂಡಲೇ ಇಬ್ಬರು ಹುಡುಗರನ್ನು ಶೆಡ್ಡಿಗೆ ಕಳುಹಿಸಿಕೊಡಿ ಎಂದು ಹೇಳಿದ್ದರಿಂದ ನಾವು ಅಲ್ಲಿ ಕೆಳಗಿಳಿದು ತಲುಪುವುದಕ್ಕೂ ಧೀರಜ್‌, ಕುಶ ಮೇಲೇರಿ ಬಂದು ತಲುಪುವುದಕ್ಕೂ ಸರಿಯಾಗಿತ್ತು.

ನಮ್ಮೂರಲ್ಲೆಲ್ಲ ತೋಟದ ಮನೆ ಎಂಬಂಥ ರಾತ್ರಿ ತೋಟ ಕಾಯುವ ಸೋಗೆ ಹಾಕಿದ ಪುಟಾಣಿ ಮನೆಗಳಿದ್ದಂತೆ ಇದು ಬೆಟ್ಟದ ಮೇಲಿದ್ದ ದನಕರು ಕುರಿ ಮೇಯಿಸುವ ಮಂದಿಗೆ ರಾತ್ರಿ ತಮ್ಮ ಪಶುಗಳನ್ನು ಇರಿಸಿಕೊಳ್ಳುವ, ಜೊತೆಗೆ ತಾವೂ ಮಲಗಿಕೊಳ್ಳಬಹುದಾದ ಪಕ್ಕಾ ಪರ್ವತನಾಡಿನ ಸಾಂಪ್ರದಾಯಿಕ ಶೈಲಿಯ ಮನೆಯಂಥ ವ್ಯವಸ್ಥೆ. ಹೊಟ್ಟೆಗೇನಾದರೂ ಹಾಕಿಕೊಳ್ಳಲೆಂದು ಪುಟ್ಟ ಒಲೆ ಬಿಟ್ಟರೆ, ಬೇರಾವ ವ್ಯವಸ್ಥೆಯೂ ಇಲ್ಲ. ಸೊಂಟದಿಂದಲೇ ಬೆನ್ನು ಬಗ್ಗಿಸಿ ಕಷ್ಟಪಟ್ಟು ಒಳಗೆ ನುಗ್ಗಬಹುದಾದಂಥ ಪುಟಾಣಿ ಬಾಗಿಲು, ಒಂದು ಸಣ್ಣ ಕಿಂಡಿ ಬಿಟ್ಟರೆ ಗಾಳಿ ಬೆಳಕು ಬರಲು ಯಾವುದೇ ದ್ವಾರಗಳಿರಲಿಲ್ಲ. ಮನೆಯ ಮುಂದೆ ಕೂತರೆ ಸಾಲು ಸಾಲು ಬೆಟ್ಟಗಳು ಕಣಿವೆಗಳಿರುವ ಸುಂದರ ಜಾಗ. ಆ ಚಳಿಯಲ್ಲಿ ಬೆಚ್ಚನೆಯ ಗೂಡು ಅದು. ಅಂಥ ಜಾಗದಲ್ಲಿ ಈ ಮೂರು ಮಕ್ಕಳು ಒಲೆ ಮುಂದೆ ಕೂತು ಒಂದೊಂದಾಗಿ ಅಡುಗೆ ಮಾಡಿದರು.

ಈ ಮಕ್ಕಳು ಅದೇನು ಅಡುಗೆ ಮಾಡ್ತಾರೋ ಪಾಪ ಅಂದುಕೊಂಡರೆ, ಅದು ನಮ್ಮ ಭ್ರಮೆಯಾಗಿತ್ತು. ಅದೆಷ್ಟು ರುಚಿಕಟ್ಟಾದ ರಾಜ್ಮಾ, ಅನ್ನ, ರೋಟಿ, ಆಲೂಗೋಬಿ ಸಬ್ಜಿ ಮಾಡಿ ಸರಿಯಾಗಿ ಎಂಟಕ್ಕೆ ನಮ್ಮ ಕೈಗೆ ತಟ್ಟೆ ಕೊಟ್ಟಿದ್ದರು. ಕೆಂಡದಲ್ಲಿ ಸುಟ್ಟ ರೊಟ್ಟಿ ಜೊತೆಗೆ ರಾಜ್ಮಾ ಅದೆಂಥ ರುಚಿಯಿತ್ತು ಅಂದರೆ ಸ್ವರ್ಗ. ಹೊರಗೆಷ್ಟೇ ಚಳಿಯಿದ್ದರೂ ರೊಟ್ಟಿ ಸುಟ್ಟ ಆ ಶೆಡ್ಡಿನೊಳಗೆ ಹಿತವಾದ ಬೆಚ್ಚನೆ. ಆ ಬೆಚ್ಚನೆ, ಹೊಟ್ಟೆಗೆ ಹಿತವಾದ ಊಟ ಸಿಕ್ಕಿ ಮಗನ ವಾಂತಿಯೂ ನಿಂತು ಮರುದಿನ ಮತ್ತೆ ಉಲ್ಲಾಸ.

* * * *

ಅದು ಒಂದೇ ದಿನದ ಚಾರಣ. ಹಿಮದ ಹಾದಿ. ನಾವು ಹೊರಟ ಮುನ್ನಾ ದಿನ ರಾತ್ರಿ ಭರಪೂರ ಸುರಿದಿದ್ದ ಹಿಮದಿಂದಾಗಿ, ಆ ಚಾರಣದುದ್ದಕ್ಕೂ ನಾಲ್ಕಡಿಯಷ್ಟು ಹಿಮ ಶೇಖರಣೆಯಾಗಿತ್ತು. ಇದು ಗೊತ್ತಿಲ್ಲದೆ ಹೊರಟುಬಿಟ್ಟಿದ್ದ ನಮಗೆ ಅಲ್ಲಿಗೆ ತಲುಪುವಷ್ಟರಲ್ಲಿ ಬಹಳಷ್ಟು ದಾರಿಗಳು ಮುಚ್ಚಿಹೋಗಿರುವುದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥವಾದುದರ ಬಗ್ಗೆಯೂ ತಿಳಿಯಿತು. ಇದರಿಂದ ದಿಕ್ಕೆಟ್ಟ ಆ ಊರಿನ ಅದ್ಯಾವುದೋ ದಾರಿಹೋಕರು ನಮ್ಮ ಗಾಡಿಗೆ ಕೈಹಿಡಿದು  ಹತ್ತಿದ್ದರು. ಅವರಿಂದಾಗಿ ನಾವು ಮೊದಲೇ ಕಾದಿರಿಸಿದ ಹೋಂಸ್ಟೇಗೆ ಹೋಗಲಾಗದು ಎಂದೂ, ನಾವು ಬೇರೆ ವ್ಯವಸ್ಥೆ ಮಾಡಬೇಕಾಗಬಹುದೆಂದೂ, ತಮಗೆ ಗೊತ್ತಿದ್ದವರ ನಂಬರನ್ನೂ ಕೊಟ್ಟು, ಏನೇ ಆದರೂ ಈ ರಾತ್ರಿಯಲ್ಲಿ ಹೆದರಬೇಡಿ, ನಾವಿದ್ದೇವೆ, ಕರೆ ಮಾಡಿ ಎಂದು ತಮ್ಮ ನಂಬರನ್ನೂ ಕೊಟ್ಟು ಕಾರಿಳಿದಿದ್ದರು.

ಅವರು ಕೊಟ್ಟ ನಂಬರಿಗೆ ಕರೆ ಮಾಡಿದರೆ, ಬೊಗಸೆ ತುಂಬ ಪ್ರೀತಿ ಕೊಡುವ ಹಿರಿಯ ದಂಪತಿಯ ಹೋಂಸ್ಟೇ ಅದು. ಇಬ್ಬರೂ ನಿವೃತ್ತ ಉಪನ್ಯಾಸಕರು. ರಾತ್ರಿಗೆ ತಮ್ಮ ಮನೆಯಡುಗೆಯನ್ನೇ ಉಣಬಡಿಸಿ ಬೆಳಿಗ್ಗೆ ಅಲ್ಲಿನ ಸ್ಪೆಷಲ್‌ ಪಕ್ವಾನ್‌ (ಒಳಗೆ ಬೇಳೆಗಳನ್ನು ತುಂಬಿಸಿ ಹಾಕಿ ಮಾಡಿದ ಪೂರಿಯಂಥ ಬೆಳಗಿನ ತಿಂಡಿ) ಮಾಡಿ ಕೊಟ್ಟು, ʻಮಕ್ಕಳೇ ನೀವು ಅಂದುಕೊಂಡಲ್ಲಿ ಚಾರಣ ಮಾಡೋದು ಬೇಡ ಅನಿಸುತ್ತೆ, ಸಿಕ್ಕಾಪಟ್ಟಿ ಹಿಮ ಸುರಿದು ದಾರಿ ಮುಚ್ಚಿಹೋಗಿದೆ. ಸುಮ್ಮನೆ ಹಳ್ಳಿಯಲ್ಲಿ ಸುತ್ತಾಡಿ ಬನ್ನಿʼ ಎಂದು ಕಾಳಜಿಯಿಂದ ಹೇಳಿದ್ದರು. ಖಂಡಿತ ಎಂದು ತಲೆಯಲ್ಲಾಡಿಸಿ ಪಕ್ವಾನ್‌ ಹೊಟ್ಟೆಗಿಳಿಸಿ ನಡೆದಿದ್ದೆವು. ಹೋದ ಮೇಲೆ ಚಾರಣ ಮಾಡಬಹುದು ಅನ್ನಿಸಿ ಚಾರಣ ಶುರು ಮಾಡಿ, ತುದಿ ಮುಟ್ಟಿ, ಇಳಿಯುವಾಗ ಗಂಟೆ ಎಂಟಾಗಿತ್ತು.

ಚಾರಣದ ಹಾದಿಯುದ್ದಕ್ಕೂ ನೆಟ್‌ವರ್ಕ್‌ ಇಲ್ಲದ್ದರಿಂದ ನಾವು ಚಾರಣ ಹೊರಟ ಬಗ್ಗೆಯೂ ಅವರಿಗೆ ಸಂದೇಶ ನೀಡಲಾಗಿರಲಿಲ್ಲ. ಇತ್ತ ನಾವು ಗಂಟೆ ಎಂಟಾದರೂ ಮನೆಗೆ ಬಾರದಿದ್ದುದನ್ನು ನೋಡಿ ಆ ದಂಪತಿಗಳು ಕಂಗಾಲು. ಕರೆ ಮೇಲೆ ಕರೆ ಮಾಡಿ, ಎಂಟರ ಹೊತ್ತಿಗೆ ಫೋನು ಚಾಲೂ ಆಗುತ್ತಿದ್ದಂತೆ, ಅವರ ಕರೆ ಮೊದಲು ಕನೆಕ್ಟ್‌ ಆಗಿತ್ತು. ಅತ್ತ ಕಡೆಯಿಂದ ʻಮಕ್ಕಳೇ, ಎಲ್ಲಿದ್ದೀರಿ? ನಮಗೆ ತುಂಬ ಭಯವಾಗಿಬಿಟ್ಟಿದೆʼ! ನಮ್ಮದೇ ಮನೆಯಿಂದ ಕರೆ ಬಂದಷ್ಟು ಬಾಯಿ ಕಟ್ಟಿ ಹೋಗಿತ್ತು, ಅವರ ಪ್ರೀತಿಗೆ, ಕಾಳಜಿಗೆ.

ಇವು ಕೆಲ ಉದಾಹರಣೆಗಳಷ್ಟೇ. ಇವಲ್ಲದೆ, ಲಾಂಗ್ಜಾದ ಬುದ್ಧನ ಪ್ರತಿಮೆಯ ಹಿಂದಿನ ಮನೆಯಾಕೆ ತನ್ನದೇ ಮನೆಯ ಅಡುಗೆ ಕೋಣೆಯ ಒಂದು ಬದಿಯಲ್ಲಿ ತನ್ನ ಮಕ್ಕಳನ್ನೂ ಈ ಬದಿಯಲ್ಲಿ ನಮ್ಮನ್ನೂ ಕೂರಿಸಿ ಒಲೆ ಮುಂದೆ ಕೂತು ಸುಟ್ಟು ಕೊಟ್ಟ ಚೋರು, ಹತ್ತಿ ಸುಸ್ತಾಗಿ ಕೂತಾಗ ಸರ್ಪ್ರೈಸಿನಂತೆ ಸಿಕ್ಕ ಗ್ರಹಣದ ಸ್ಪೆಷಲ್‌ ರುಚಿರುಚಿ ತಂದೂಕು, ಆಯಾ ಹಳ್ಳಿಗಳ ಹೂವಿಗನುಗುಣವಾಗಿ ವಿಧವಿಧ ರುಚಿಯ ಜೇನು, ಮಕ್ಕಿ ಕಾ ರೋಟಿ ಜೊತೆಗೆ ಬೆಲ್ಲದ ತುಂಡಿನ ಜೊತೆ ಕೊಡುವ ಚಳಿಗಾಲದ ಫೇವರಿಟ್ಟು ಸರ್‌ಸೋಂಕಾ ಸಾಗ್‌, ರೋಡೋಡೆಂಡ್ರಾನ್‌ ಹೂವಿನ ಜ್ಯೂಸು, ಪರ್ವತವೊಂದನ್ನೇರುವ ಮೊದಲು ತಾರಕಕ್ಕೇರಿದ್ದ ಶೀತ/ಗಂಟಲು ನೋವಿನ ಮಾತ್ರೆಯೂ ಮರೆತು ತಲೆಬಿಸಿಯಾದರೂ ದಾರಿಯಿಡೀ ಕುಡಿದ ಹಿಮ ಕರಗಿ ಹರಿವ ತೊರೆಯ ನೀರಿನಲ್ಲೇ ಮಂಗಮಾಯವಾದ ಶೀತ/ಗಂಟಲು ನೋವು, ಕೊಟ್ಟ ದುಡ್ಡಿಗೂ ಮೀರಿ ಹೊರಡುವಾಗ ಪ್ರೀತಿಯಿಂದ ದಾರಿಗಿರಲಿ ಮಗುವಿಗಾದರೂ ಎಂದು ಪ್ರೀತಿಯಿಂದ ಕಟ್ಟಿಕೊಡುವ ಆಲೂ ಪರಾಠಾ… ಹೀಗೆ ಪಟ್ಟಿ ಮಾಡಿದಷ್ಟೂ ನೆನಪುಗಳ ಮಾಲೆ.

ಅಪರಿಚಿತ ಊರು ಆಪ್ತ ಅನಿಸಲು, ಅಲ್ಲಿನವರ ಮನೆಯಲ್ಲಿ ಅವರಲ್ಲೊಬ್ಬರಾಗಿ ಒಂದಿನ ಇದ್ದು, ಅವರ ಊಟ ಒಂದು ಹೊತ್ತು ಉಂಡರೆ ಸಾಕು. ಅದು ಕೊಡುವ ಅನುಭವ, ಜೀವನ ಪ್ರೀತಿ ಬೇರೆಯದ್ದೇ. ಅದಕ್ಕೇ, ಬೆಟ್ಟದೂರು, ಸುರಿವ ಹಿಮ, ಚಾಯ್‌, ಮ್ಯಾಗಿ… ಅಷ್ಟೇ ಅಲ್ಲ!

‍ಲೇಖಕರು ರಾಧಿಕ ವಿಟ್ಲ

April 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: