ಶಾಂತಿ ಕೆ ಅಪ್ಪಣ್ಣ.
ಹೇಳಿಕೇಳಿ ಇದು ಮಾಘಿ. ಮದರಾಸಿನ ಮಹಾ ಬಿಸಿಲು ಸ್ವಲ್ಪ ಅಹಂಕಾರ ಬಿಟ್ಟುಕೊಟ್ಟು ತಗ್ಗಿಬಗ್ಗಿ ನಡೆಯುವ ಕಾಲ.ಇಂಥ ಸಮಯದಲ್ಲಿ..ಬೆಳಗಿನ ಸುಂದರ ಚಳಿಯಲ್ಲಿ ಹೊದಿಕೆಯೊಳಗೆ ತೂರಿ ಕಾಲು ಮುದುರಿಕೊಂಡು ಬೆಳಕಾಗಿದ್ದರೂ ಮರೆತು ಇನ್ನಷ್ಟು ಹೊತ್ತು ಮಲಗಿರುವ ಸುಖವೇ ಬೇರೆ.ಅದರಲ್ಲೂ ನನ್ನ ಕಥೆ ಕೇಳುತ್ತೀರಾ…ತಿಂಗಳಲ್ಲಿ ಎರಡು ವಾರಗಳು ನೈಟ್ ಡ್ಯೂಟಿ ಬೀಳುತ್ತದೆ.ಉಳಿದಂತೆ ನಡುವೆ ಬೆಳಗಿನ ಶಿಫ್ಟ್ ಬಂದರೆ ಆಗಲೂ ಬೆಳಗಿನ ಸಕ್ಕರೆ ನಿದ್ರೆಗೆ ಕತ್ತರಿ ಬೀಳುತ್ತದೆ.ನಿದ್ರೆಯ ನಿಜವಾದ ಸುಖದ ಅರಿವಾಗುವುದೇ ಹೀಗೆ ಅನಿವಾರ್ಯವಾಗಿ ನಿದ್ದೆಗೆಡುವ ಪರಿಸ್ಥಿತಿಗಳು ಬಂದಾಗ.ಅದಿರಲಿ,ಸಧ್ಯ ನಾ ಹೇಳಬೇಕಿನ್ದಿರುವ ಮುಖ್ಯ ವಿಷಯಕ್ಕೆ ಬರುತ್ತೇನೆ.ನಾನಿರುವುದು ಮದರಾಸಿನಲ್ಲೇ ಆದರೂ ನಮ್ಮ ಮನೆಯಿರುವುದುದು ಒಂದೊಳ್ಳೆ ಪ್ರಶಾಂತ ಸ್ಥಳದಲ್ಲಿ.ಸುತ್ತ ಮುತ್ತ ಮರಗಿಡಗಳು,ಹಕ್ಕಿಪಕ್ಷಿಗಳೂ..ಬೇಕಷ್ಟಿದ್ದು ,ಮನೆ ಕೂಡ ಹಳೆ ಮಾದರಿಯಲ್ಲಿ ಕಟ್ಟಿರುವುದರಿಂದ ಎಲ್ಲೋ ನಮ್ಮೂರಲ್ಲೇ ಇದ್ದೇನೇನೋ ಅಂತ ನಂಗೆ ಬಹಳಷ್ಟು ಬಾರಿ ಅನಿಸುವುದಿದೆ.ಒಂದು ವೇಳೆ ಹಾಗಿಲ್ಲವಾಗಿದ್ದರೆ ಈ ಮದರಾಸಿನ ಬಿಸಿಲಿಗೂ,ಪಟ್ಟಣದ ಬ್ಯುಸಿ ಬದುಕಿಗೂ ಹೆದರಿ ಯಾವತ್ತೋ ಪಲಾಯನ ಮಾಡಿರುತ್ತಿದ್ದೆ.ನಮ್ಮ ಮನೆಯಿರುವ ಸುತ್ತ ಮುತ್ತಲೂ ಹೀಗೆ ಸದ್ದುಗದ್ದಲವಿಲ್ಲದೆ ತಣ್ಣಗಿರುತ್ತದೆ..ಆದರೆ ಸ್ವಲ್ಪ ದೂರ ಹೋದರೆ ಸಾಕು ಅದೇ ಕಿಕ್ಕಿರಿದ ಇರುಕು ಬೀದಿಗಳು,ಮನೆಯೊಳಗೊಂದು ಮನೆಯಿದೆಯೇನೋ ಅನಿಸುವಂತೆ ಒಟ್ಟಾಗಿ ಕಟ್ಟಿ ಬಿಟ್ಟಿರುವ ಮನೆಗಳು,ಸದಾ ಗದ್ದಲ ಗಲಾಟೆ ,ಗಡಿಬಿಡಿ..! ಸುಮ್ಮನೊಮ್ಮೆ ಆ ಬೀದಿಯಲ್ಲಿ ಹಾದರೂ ನನಗೆ ಉಸಿರು ಕಟ್ಟಿದ ಹಾಗೆ ಅನಿಸುತ್ತದೆ.ಆದರೆ ಅಲ್ಲಿಯೂ ಅಷ್ಟೊಂದು ಖುಷಿಯಾಗಿ ,ನೆಮ್ಮದಿಯಾಗಿ ಬದುಕುತ್ತಿರುವವರನ್ನು ಕಂಡಾಗ ಅಚ್ಚರಿಯಾಗುತ್ತದೆ.ಎಲ್ಲ ಅಭ್ಯಾಸ ಬಲ.ಬದುಕಲೇ ಬೇಕೆಂಬ ತುಡಿತ ಎಂಥದ್ದನ್ನೂ ಅಭ್ಯಾಸ ಮಾಡಿಸುತ್ತದೆ.ಅಡ್ಜಸ್ಟ್ ಮಾಡಿಸುತ್ತದೆ.ಆ ಇರುಕು ಬೀದಿಯೊಳಗೆ ಒಂದು ದೊಡ್ಡ ಚರ್ಚು ,ಮಸೀದಿ ,ಪುಟ್ಟ ಗಣಪನ ಗುಡಿ ಪಕ್ಕಪಕ್ಕವೇ ಇವೆ.ಚರ್ಚಿನವರು ಭಾನುವಾರದ ಅರ್ಧ ದಿನವಿಡೀ ಜೋರಾಗಿ ಮೈಕು ಹಾಕಿಕೊಂಡು ಹಾಡು ಹಾಕುತ್ತಾರೆ.ಅದಲ್ಲದೆ ಏನಾದರೂ ಸ್ಪೆಶಲ್ ಪ್ರೇಯರ್ ಇದ್ದರೆ ಆಗಲೂ ಹೀಗೇ .ಆದರೆ ಅವೆಲ್ಲ ಸಾಮಾನ್ಯ ಬೆಳಗಿನ ಎಂಟು ಗಂಟೆಯ ನಂತರ ಶುರುವಾಗುತ್ತವೆ ಹಾಗಾಗಿ ಅಷ್ಟು ತೊಂದರೆ ಅನಿಸುವುದಿಲ್ಲ.ಇನ್ನು ಮಸೀದಿಯಿಂದ ಬಾಂಗಿನ ಕೂಗು ಕೇಳುತ್ತದಾದರೂ ಅದು ಕೆಲವೇ ನಿಮಿಷಗಳ ಪ್ರಾರ್ಥನೆ.ಹಾಗಾಗಿ ಅದೂ ತೊಂದರೆ ಅನಿಸುವುದಿಲ್ಲ.ಆದರೆ ಈಗ ಕೆಲದಿನಗಳಿಂದ ಗಣಪನ ಗುಡಿಯವರು ಬೆಳಬೆಳಗ್ಗೆ ಜೋರಾಗಿ ದೇವರ ಹಾಡು ಹಾಕತೊಡಗಿದರು.ಸಧ್ಯ ಗುಡಿಯಿಂದ ಯಾವ ತೊಂದರೆ ಇರಲಿಲ್ಲ ಈಗ ಅವರೂ ಶುರು ಮಾಡಿದರಲ್ಲಪ್ಪಾ..ಅಂತ ನನಗೆ ತಲೆ ಬಿಸಿಯಾಗ ತೊಡಗಿತು. ಬೆಳಗಿನ ಐದು ಘಂಟೆಗೆಲ್ಲ ದೇವರ ಹಾಡುಗಳನ್ನ ಹಾಕುತ್ತಿದ್ದಾರೆ .ಹೋಗಲಿ ಏನೋಮೆಲ್ಲಗೆ ಹಾಕುತ್ತಾರಾ ಅಂದರೆ ಇಲ್ಲ.ಅಷ್ಟು ಶಬ್ದ!.ತೀರ ನಮ್ಮನೆಯೊಳಗೆ ಮೈಕ್ ಹಾಕಿಟ್ಟಿದ್ದಾರೋ ಅನಿಸುವಷ್ಟು.ದೇವರು ಒಳ್ಳೆಯ ಕನಸುಗಳನ್ನೂ ,ಸುಂದರ ಸವಿ ನಿದ್ರೆಯನ್ನೂ ಕರುಣಿಸಿರುವುದೇ ಈ ಚುಮುಚುಮು ಮುಂಜಾವಿನಲ್ಲಿ ಅಂಥದ್ದರಲ್ಲಿ ಬೆಳ್ಳಂಬೆಳಗ್ಗೆ ಹೀಗೆ ಕಿವಿಗಡಚಿಕ್ಕುವಂಥ ಹಾಡುಗಳಿಂದಾಗಿ ನಿದ್ರೆ ಕಳಕೊ ಬೇಕಾಗಿ ಬಂದಾಗ ನಾನು ತುಂಬಾ ಹೈರಾಣಾದೆ . ಅಟ್ಲೀಸ್ಟ್ ಒಂದು ಆರೇಳು ಗಂಟೆಗಾದರೂ ಹಾಕಿದರೆ ಆಗಲ್ಲವಾ…ಅಂತ ಗೊಣಗಿಕೊಂಡು ಅಂದೇ ಬೆಳಗೆ ಹೋಗಿ ಆ ದೇವಸ್ಥಾನದ ಅರ್ಚಕರನ್ನು ಕಂಡು ‘ಅಲ್ಲಾ ಅರ್ಚಕರೇ ,ಏನಿದು ತೀರ ಅಷ್ಟು ಬೆಳಿಗ್ಗೆ ಅಷ್ಟು ಜೋರಾಗಿ ಹಾಡು ಹಾಕಿದರೆ ಹೇಗೆ?ನಾವೆಲ್ಲ ಮಲಗೋದು ಬೇಡವಾ? ರಾತ್ರಿ ಲೇಟಾಗಿ ಮಲಗಿದವ ಕಥೆ ಏನಾಗಬೇಕು,ನೋಡಿ ಒಂಚೂರು,ಸ್ವಲ್ಪ ಲೇಟ ಆಗಿ ಹಾಕಿ ಇಲ್ಲ ವಾಲ್ಯೂಮ್ ಆದರೂ ಕಡಿಮೆ ಇಡಿ’ಅಂದೆ .ಅದಕ್ಕವರು ‘ಇಲ್ಲಮ್ಮಾ, ನಿಜ ಹೇಳಬೇಕೂಂದ್ರೆ ಇನ್ನೂ ಸ್ವಲ್ಪ ಬೇಗ ಹಾಕಬೇಕು ನಾನೇ ಇರ್ಲೀಂತ ಐದು ಗಂಟೆಗೆ ಹಾಕ್ತಾ ಇದ್ದೀನಿ,ನೀನೂ ಅಷ್ಟೊತ್ತ್ಗೆಲ್ಲ ಎದ್ದು ದೇವರ ಪೂಜೆ ಮಾಡಮ್ಮ ಒಳ್ಳೆದಾಗುತ್ತೆ ‘ಅಂದಿದ್ದರು.ಅವರ ಮಾತು ಕೇಳಿ ಎದೆ ಧಸಕ್ಕೆಂದಿತು.ಇನ್ನೂ ಏನಾದರೂ ಅನ್ನಹೋದರೆ ಯಾಕೆ ಚರ್ಚಿನಲ್ಲಿ ಹಾಕಲ್ವಾ ,ಬಾಂಗು ಕೂಗಲ್ವಾ ಅಂತೇನಾದರೂ ಕೇಳಿದರೆ ಏನು ಹೇಳೋದು?ಸಧ್ಯ ವಿಷ್ಯ ಸೆನ್ಸಿಟಿವ್ ಆದರೆ ಇನ್ನೂ ಕಷ್ಟ,ಹೋಗಿ ಪಕ್ಕದ ಮನೆಯವರಿಗೂ ಹೇಳಿ ಅವರಿಂದಲೂ ಒಂದು ಮಾತು ಹೇಳಿಸಿದರೆ ಏನಿಲ್ಲವೆಂದರೂ ಜನಾಭಿಪ್ರಾಯಕ್ಕೆ ಬೆಲೆ ಕೊಟ್ಟು ಹಾಡು ಹಾಕದೇ ಬಿಡಬಹುದು ಅನಿಸಿ ಸೋತ ಕಾಲುಹಾಕಿ ವಾಪಾಸಾದೆ.ಮೊದಲು ಪಕ್ಕದ ಮನೆಯ ಆಂಟಿಯ ಜೊತೆ ಇದನ್ನೊಂದು ಸಮಸ್ಯೆಯಾಗಿ ಹೇಳಿಕೊಂಡರೆ ಅವರ ನಗುತ್ತ “ಎಲ್ಲರನ್ನ ಏಳಿಸಬೇಕು ಅಂತಾನೇ ಅವರು ಅಷ್ಟು ಬೇಗ ಹಾಡು ಹಾಕ್ತಾ ಇರೋದು,ಇದು ಮಾಘಿ ತಿಂಗಳಲ್ವಾ ಈ ತಿಂಗಳಲ್ಲಿ ಬೆಳಗಿನ ಬ್ರಾಹ್ಮೀ ಮಹೂರ್ತದಲ್ಲಿ ದೇವರನ್ನು ಪೂಜಿಸಿ ,ಪ್ರಾರ್ಥಿಸಿದರೆ ಎಲ್ಲ ನೆರವೇರುತ್ತದೆ ಅನ್ನೋ ನಂಬಿಕೆ ಇದೆ.ಅದಕ್ಕೇ ಅಷ್ಟು ಬೇಗ ಹಾಡು ಹಾಕಿ ದೇವರನ್ನ ಆರಾಧಿಸುತ್ತಾರೆ,ನೀನೂ ಬೆಳಗ್ಗೆ ನಾಲ್ಕಕ್ಕೆಲ್ಲ ಎದ್ದು ಪೂಜೆ ಮಾಡು ಒಳ್ಳೆದಾಗುತ್ತೆ “ಅಂದಿದ್ದರು. ಅಲ್ಲಿಗೆ ಮುಗಿಯಿತು.ತಮಿಳು ನಾಡಿನ ಜನತೆಗೆ ಭಯ ಭಕ್ತಿ ಎರಡೂ ಹೆಚ್ಚು.ದೇವರ ವಿಷಯವಾಗಿ,ಸಂಪ್ರದಾಯಗಳ ವಿಷಯವಾಗಿ ಯಾರೊಬ್ಬರೂ ಕಾಂಪ್ರಮೈಸ್ ಮಾಡಿಕೊಳ್ಳುವವರಾಗಿರಲಿಲ್ಲ .ಇನ್ನು ಮೇಲಿನ ಮನೆಯ ಟೀಚರ್ ಕ್ರಿಶ್ಚಿಯನ್ನರು.ಅವರ ಬಳಿ ಸುಮ್ಮನೆ ಹೇಳಿನೋಡಿದರೆ ಅವರೂ ಅಸಹಾಯಕತೆ ತೋಡಿಕೊಳ್ಳುತ್ತ ‘ಹೌದಪ್ಪ,ಏನು ಮಾಡೋದು,ಡಿಸ್ಟರ್ಬ್ ಆಗುತ್ತೆ ನಿಜ ಆದರೆ ಹಾಗಂತ ನಾನು ಹೇಳಿದರೆ ಅದು ಕಮ್ಯೂನಿಟಿ ಇಶ್ಯೂ ಆಗಿ ಬಿಡುತ್ತೆ ‘ಅಂದರು.ಇನ್ನು ಬೇರೆ ಯಾವ ದಾರಿಯೂ ಉಳಿದಿದೆ ಅಂತ ನನಗೂ ಅನಿಸಲಿಲ್ಲ.ಇನ್ನು ಇವರು ಅದೊಂದು ಸಮಸ್ಯೆಯೇ ಅಲ್ಲವೇನೋ ಅನ್ನುವಂತೆ ‘ಯಾಕೀಗ ಇದನ್ನ ದೊಡ್ಡದು ಮಾಡ್ತೀಯ ,ಈಗ ಎಲ್ಲರೂ ಇಲ್ವಾ? ಈ ಒಂದು ತಿಂಗಳು ತಾನೆ ಸುಮ್ಮನೆ ಇರು ಆಮೇಲೂ ಹೀಗೇ ಹಾಕ್ತಾ ಇದ್ದಾರೆ ಅಂದ್ರೆ ನೋಡೋಣ.’ಅಂದು ಬಿಟ್ಟರು.ಯಾಕೋ ಇದು ನನ್ನೊಬ್ಬಳನ್ನೇ ಕಾಡುತ್ತಿದೆಯೇನೋ ಅಂತ ನನಗೂ ಅನ್ನಿಸಿ ಸುಮ್ಮನಾದೆ.ಮಾರನೇ ದಿನ ಮತ್ತೆ ಐದು ಗಂಟೆಗೆ ಯಥಾ ಪ್ರಕಾರ ಹಾಡು ಹಾಕಲಾಗಿತ್ತು.ಒಂದು ಚುಟ್ಟಿ ಚೂರು ವಾಲ್ಯೂಮ್ ಕಮ್ಮಿ ಮಾಡಿದ್ದರೇನೋ ..ನಾನು ವಿಧಿಯಿಲ್ಲದೆ ಗೊಣಗುತ್ತ ಮಲಗುವ ಪ್ರಯತ್ನ ಮಾಡತೊಡಗಿದೆ.ಯಾಕೋ ಅಕ್ಕನ ವಚನವೂ ನೆನಪಿಗೆ ಬಂತು.
ಬೆಟ್ಟದಾ ಮೇಲೊಂದು ಮನೆಯ ಮಾಡಿ.
ಮೃಗಗಳಿಗೆ ಅಂಜಿದೊಡಂತೇನಯ್ಯಾ..
ಸರಿ ಹಾಗೇ ದಿನಗಳುರುಳಿದವು ,ಒಂದು,ಎರಡು ಮೂರು,ವಾರ..ನಡುವೆ ನಂಗೆ ಬೆಳಗಿನ ಶಿಫ್ಟ್ ಕೂಡ ಬಂತು.ಹಾಡು ಯಥಾ ಪ್ರಕಾರ ಬೆಳಗ್ಗೆ ಐದಕ್ಕೆ ತೊಡಗಿ ಒಂಭತ್ತು ಹತ್ತರ ತನಕ ನಡೆಯುತ್ತಲೇ ಇತ್ತು.ಕಿವಿಗಳೂ ಹಾಡಿಗೆ, ಅದರ ಸಶಬ್ದತೆಗೆ ಹೊಂದಿಕೊಂಡಿದ್ದವು . ಆದ್ರೆ ಈಗ ನಿನ್ನೆ ರಜೆ ಇತ್ತು ನೋಡಿ.ಆಗೊಂದು ಮೋಡಿ ನಡೆಯಿತು.ದಿನಾ ಬೆಳಗಿನ ಶಿಫ್ಟ್ ಗೆ ಹೋಗಲು ಬೇಗ ಎದ್ದೂ ಎದ್ದೂ ಸಾಕಾಗಿತ್ತು.ಇವತ್ತು ಒಂಚೂರು ಲೇಟ್ ಆಗಿ ಏಳಬೇಕು ಅಂತ ರಾತ್ರಿ ಮಲಗುವಾಗಲೇ ಅಂದುಕೊಂಡಿದ್ದೆ.ಆದರೆ ಒಳಗೊಳಗೇ ಎಲ್ಲಿ ಬೆಳಗ್ಗೆ ಕಚೇರಿ ಬೇರೆ ಶುರುವಾಗುತ್ತಲ್ಲ ಅಂತ ಗೊಣಗಿಕೊಂಡಿದ್ದೆ.ಆದ್ರೆ ಏನಾಶ್ಚರ್ಯ..!ಎಂದಿನಂತೇ ಬೆಳಗ್ಗೆ ಐದಕ್ಕೆ ತೊಡಗಿದ ಸಂಗೀತ ಆರು ಗಂಟೆಗೆಲ್ಲ ನಿಂತು ಹೋಯ್ತು.ಅಷ್ಟೂ ಹೊತ್ತು ಹಾಡಿಗೊಂದು ಕಿವಿಯಿಟ್ಟುಕೊಂಡು ಹಾಗೇ ಮಲಗಿ ನಿದ್ರಿಸುತ್ತಿದ್ದ ನನಗೆ ಈಗ ಫಳೀರನೆ ಎಚ್ಚರವಾಗಿತ್ತು.ಅಷ್ಟು ಹೊತ್ತು ಕಿವಿತುಂಬುತ್ತಿದ್ದ ಹಾಡು ನಿಂತು ಹೋದ ಒಡನೇ ಕಿವಿಯನ್ನು ಶೂನ್ಯವಾದಂತದ್ದೇನೋ ತುಂಬಿದ ಹಾಗೆನಿಸಿ ದಿಗಿಲಾಯ್ತು.ಅರೆರೆ..ನಿದ್ರೆ ಕೂಡ ಹಾರಿ ಹೋಯ್ತು.ಆಮೇಲೆ ನಿದ್ರೆ ಬಾರದೆ ನಾ ಹಾಸಿಗೆ ಬಿಟ್ಟೆದ್ದೆ ಅಂದುಕೊಳ್ಳಿ.ಆದರೆ ಮನಸು ಅಚ್ಚರಿಗೆ ಬಿತ್ತು ..
ಮನಸಿನ ಮೋಡಿ ನೋಡಿ..! ಮೊದಮೊದಲು ಡಿಸ್ಟರ್ಬ್ ಅನಿಸಿದ ವಿಷಯಕ್ಕೆ ಮನಸಾಗಲೇ ಹೊಂದಿಕೊಂಡು ಬಿಟ್ಟಿದೆ..ಈಗ ಅದಿಲ್ಲದೆ ಏನೋ ಖಾಲಿ ಖಾಲಿ ಭಾವ.ಯಾಕೋ ಚಿಕ್ಕಂದಿನಲ್ಲಿ ಓದಿದ ಮೀನಿನವಳ ಕತೆ ನೆನಪಾಯ್ತು.ಒಂದು ಊರಲ್ಲೊಬ್ಬ ಮೀನು ಮಾರುವವಳಿರುತ್ತಾಳೆ .ಬೆಳಗಾಗೆದ್ದು ಮೀನು ಮಾರ ಹೊರಟರೆ ಅವಳು ಮನೆ ಸೇರುವುದು ಸಂಜೆಗೇ .ದಿನಾ ಮೀನು ಮಾರಿದರೇನೇ ಆಕೆಯ ಬದುಕು.ಸದಾ ಅವಳ ಮೈಯಿಂದ ಮೀನಿನ ವಾಸನೆ ರಾಚುತ್ತಿರುತ್ತದೆ. ಆದರೆ ಅದೇ ಅವಳ ಬದುಕಲ್ಲವೇ..ಅವಳಿಗೆ ಅದೊಂದು ಸಮಸ್ಯೆಯೇ ಅನಿಸಿರುವುದಿಲ್ಲ.ಹಾಗಿರಲೊಮ್ಮೆ ದಾರಿ ಮಧ್ಯೆ ಕತ್ತಲಾಗಿ ಅವಳು ಮನೆ ತಲುಪಲಾರದೆ ಮಲ್ಲಿಗೆ ಮಾರುವವಳ ಮನೆಯಲ್ಲಿ ಮಲಗಬೇಕಾಗಿ ಬರುತ್ತದೆ ಆದರೆ ಆ ಸುವಾಸನೆಗೆ ಆಕೆಗೆ ನಿದ್ರೆಯೇ ಬರುವುದಿಲ್ಲ. ಮಲ್ಲಿಗೆಯ ಘಮಕ್ಕೆ ಅವಳು ಮುಖ ಕಿವುಚುತ್ತಾಳೆ.ನೋಡಿ..ಯಾವುದಾದರೊಂದು ವಿಷಯ ಅಭ್ಯಾಸವಾಗಿ ಬಿಟ್ಟರೆ ಹೇಗೆ ಅಂತ.ಅದಷ್ಟೇ ಅಲ್ಲ..ನಮ್ಮ ಮನಸು ಹೇಗೆ ನಮಗರಿವಿಲ್ಲದೆ ನಮ್ಮನ್ನ ಸಂಭಾಳಿಸುತ್ತದೆ ಅಂತ.!






ಚಂದದ ಲಹರಿ..
.ಅವಳಿಗೆ ಅದೊಂದು ಸಮಸ್ಯೆಯೇ ಅನಿಸಿರುವುದಿಲ್ಲ.ಹಾಗಿರಲೊಮ್ಮೆ ದಾರಿ ಮಧ್ಯೆ ಕತ್ತಲಾಗಿ ಅವಳು ಮನೆ ತಲುಪಲಾರದೆ ಮಲ್ಲಿಗೆ ಮಾರುವವಳ ಮನೆಯಲ್ಲಿ ಮಲಗಬೇಕಾಗಿ ಬರುತ್ತದೆ ಆದರೆ ಆ ಸುವಾಸನೆಗೆ ಆಕೆಗೆ ನಿದ್ರೆಯೇ ಬರುವುದಿಲ್ಲ. ಮಲ್ಲಿಗೆಯ ಘಮಕ್ಕೆ ಅವಳು ಮುಖ ಕಿವುಚುತ್ತಾಳೆ.ನೋಡಿ..ಯಾವುದಾದರೊಂದು ವಿಷಯ ಅಭ್ಯಾಸವಾಗಿ ಬಿಟ್ಟರೆ ಹೇಗೆ ಅಂತ.ಅದಷ್ಟೇ ಅಲ್ಲ..ನಮ್ಮ ಮನಸು ಹೇಗೆ ನಮಗರಿವಿಲ್ಲದೆ ನಮ್ಮನ್ನ ಸಂಭಾಳಿಸುತ್ತದೆ ಅಂತ.!
ನಿಮ್ಮ ಲೇಖನ ಓದುತಿದ್ದಂತೆ ಈ ನಮ್ಮ ಬದುಕಿನಲ್ಲಿ ನಡೆಯುವ ಅದೆಸ್ತೋ ಚಿಕ್ಕ ಚಿಕ್ಕ ಘಟನೆಗಳು ಕೂಡ ನಮ್ಮ ಕಣ್ಣನ್ನು ತೆರಸಬಲ್ಲವು ,ಅಸ್ತೆ ಅಲ್ಲ ನಮ್ಮನ್ನು ಹೊಸ ಆಲೋಚನೆ ಯತ್ತ ಕೊಂಡೊಯ್ಯಬಲ್ಲವು.. ನಮ್ಮ ಮನಸಿನ ಸ್ತಿತಿಯನ್ನು ಮತ್ತೊಂದು ದಿಕ್ಕಿನೆಡೆಗೆ ಸೆಳೆದೊಯ್ಯಬಲ್ಲವು.. ಕೆಲವೊಮ್ಮೆ ಸಣ್ಣ ಸಣ್ಣ ವಿಷಯಗಳ ಮನಸಿಗೆ ಕಿರಿಕಿರಿ ಮಾಡಿಕೊಂಡು ಅದೇ ದೊಡ್ಡ ರಾದ್ದಾಂತ ಮಾಡಿಕೊಂಡು ನಮ್ಮ ಬದುಕಿನ ಕುಶಿಯನ್ನು ನಾವೇ ಹಲವೊಮ್ಮೆ ಕಳೆದುಕೊಳ್ಳುತ್ತೇವೆ… ಜೆನ್ ಕಥೆಗಳ ಸಂದೇಶವೇ ಅದು…
ಆ ಕ್ಷಣದ ಸತ್ಯಗಳನ್ನು ಹೊರನಿಂಟು ನೋಡುವ ಕ್ರಿಯಾತ್ಮಕ ಮನಸಿಗೆ .ಇಂತಹ ಕ್ಷಣಗಳಲ್ಲಿ ಸೂಕ್ಷ್ಮವಾಗಿ ಸಂವೇದಿಸುವ, ಅದನ್ನು positive ಆಗಿ ಗ್ರಹಿಸುವ ..ಮನಸ್ತಿತಿ ಬೇಕು..ಅದು ತಾಳ್ಮೆ.ಸಂಯಮ. ಮತ್ತು ಬೇರೆಯವರ ಮನಸ್ತಿತಿ ಅರಿಯುವ ಪ್ರಜ್ಞೆ, ಹಾಗು ವಿಶಾಲತೆ ..ಇವ್ಗಳಿಂದ ಸಾದ್ಯ…
ನಿಮ್ಮ ಲೇಖನ ನನಗೆ ಕುಶಿ ನೀಡಿತು… ಬರೆಯುತ್ತಿರಿ….. ಆ ಮೂಲಕ ನಮ್ಮ ಒತ್ತಡದಿಂದ ,ಸಂಘರ್ಷಗಳಿಂದ, ಬೇಸರ, ದಿಂದ ಹೊರಬರಬಹುದು… ಅಸ್ತೆ ಅಲ್ಲ ಅದು ನಮ್ಮನ್ನು ಮಾನಸಿಕವಾಗಿ ಎಛರಾವಸ್ತೆಯಲ್ಲಿ ಹಾಗು ಕುಶಿಯಾಗಿದುತ್ತದೆ…
ರವಿವರ್ಮ ಹೊಸಪೇಟೆ
Good one!!
Kamal Hassan in Pushpaka Vimana!
ಬದುಕು ಕಲಿಸಿದಷ್ಟು ಪಾಠವನ್ನು ಬೇರೆ ಯಾರೂ ಕಲಿಸಲು ಸಾಧ್ಯವಿಲ್ಲ ಎನ್ನುವುದು ಇದಕ್ಕೇ.. ಆದರೆ ನಿಮ್ಮ ಲೇಖನ ಓದಿದ ಮೇಲೆ ಭ್ರಷ್ಟಾಚಾರ ಎನ್ನುವ ಭೂತಕ್ಕೆ ಜನ ಹೊಂದಿಕೊಂದರೆ ಕಷ್ಟವಲ್ಲವೇ ಎನಿಸುತ್ತಿದೆ…! ಆಗ ಬದುಕು ಬಲು ಭಾರ ಆಗಬಹುದಲ್ಲವೇ!? ಲೇಖನ ಚನ್ನಾಗಿದೆ. ಒಳ್ಳೆಯ ಬರಹ.
-ರಮೇಶ್ ಹಿರೇಜಂಬೂರು
Noorakke nooru sathya … lekhana sakattagide …