ಸೂರಿ
ಬೆಂಗಳೂರಲ್ಲಿ ನನ್ನಂತಹವನು ಒಬ್ಬನಿದ್ದ. ಜೀವನದ ಅರ್ಥ ಹುಡುಕಿಕೊಂಡು ಗುರುವಿನ ಬಳಿ ಹೋದ. ಸ್ವಯಂಪಾಕದ ಅಭ್ಯಾಸದ ಗುರು ಮಾತನಾಡದೇ ನನ್ನಂತಹ ಆ ಒಬ್ಬನಿಗೆ ಎದುರಿದ್ದ ಈರುಳ್ಳಿಯನ್ನು ಕೊಟ್ಟು ಸುಲಿಯುತ್ತಾ ಹೋಗು, ಏನು ಸಿಗತ್ತೋ ಅದರಲ್ಲಿ ನಂಗೂ ಒಂದು ಚೂರು ಕೊಡು ಅಂದ. ನನ್ನಂತಹ ಆ ಒಬ್ಬನು ಈರುಳ್ಳಿಯನ್ನು ಸುಲಿಯುತ್ತಾ ಹೋದ. ಸುಲಿಯುತ್ತ ಹೋದಂತೆಲ್ಲಾ ಈರುಳ್ಳಿ ಪದರ ಕಳಚಿಕೊಂಡಿತು. ಮುಷ್ಠಿಗಾತ್ರದ ಈರುಳ್ಳಿ ಸಣ್ಣಗಾಗುತ್ತಾ ಹೋಯಿತು. ಕೊನೆಯ ರೆಪ್ಪೆಯೂ ಹೋಯಿತು. ನನ್ನಂತಹ ಆ ಒಬ್ಬನ ಕೈ ಖಾಲಿಯಾಯಿತು. ಕೈ ಮೂಸಿ ನೋಡಿಕೊಂಡ, ಈರುಳ್ಳಿ ಬಿಚ್ಚಿದ ಘಮ ಇನ್ನೂ ಕೈ ಮೆತ್ತಿತ್ತು. ಆದರೆ ಹಿಡಿದಿಟ್ಟುಕೊಳ್ಳಲು ಕೈಯಲ್ಲಿ ಏನೂ ಇರಲಿಲ್ಲ. ಗುರುವಿನ ಮುಖ ನೋಡಿದ. ಏನೂ ಉಳೀಲಿಲ್ಲ ಅಂದ. ಗುರು ಮಾತನಾಡದೇ ಮುಗುಳ್ನಕ್ಕ. ನನ್ನಂತಹ ಆ ಒಬ್ಬನು ಅಲ್ಲಿಂದೆದ್ದು ಹೋದ.
ಇದು ಬೆಂಗಳೂರು. ಇದು ಇಲ್ಲಿನ ಜೀವನ. ಬೆಂಗಳೂರು ಯಾಕೆ, ಭಾರತದ ಯಾವುದೇ ನಗರದ ಜೀವನ. ನಮ್ಮ ಜೀವನ ಕೂಡಾ ನಮ್ಮ ಮುಷ್ಟಿಗೆ ದಕ್ಕುವುದಿಲ್ಲ. ಅದ್ಯಾರ್ಯಾರೋ ಅಪರಿಚಿತರ, ಸಂಬಂಧಿಗಳ, ಒಡಹುಟ್ಟಿದವರ, ಅಕ್ಕಪಕ್ಕದವರ ಮರ್ಜಿಯಲ್ಲಿ ಬದುಕುವ ಅನಿವಾರ್ಯತೆ ಇಲ್ಲಿ. ನೀವು ನಿಮ್ಮ ಮನೆ ಬಿಟ್ಟು, ನಿಮ್ಮ ಆಫೀಸಿಗೆ ಹೋಗಿ ಮತ್ತೆ ನಿಮ್ಮ ಮನೆ ತಲುಪುವವರೆಗೂ ಇನ್ನೊಬ್ಬರ ಮರ್ಜಿಯಲ್ಲಿ ಬದುಕುತ್ತಿರಲೇ ಬೇಕು. ನೀವು ಕರೆದ ಕಡೆ ಆಟೋ ಬರುವುದಿಲ್ಲ. ನಿಮ್ಮ ಹಾರನ್ನುಗಳಿಗೆ ತಲೆಯೇ ಕೆಡಿಸಿಕೊಳ್ಳದೇ, ನಿಮ್ಮ ಕಾರಿನ ಮುಂದೆಯೇ ಇನ್ನೊಬ್ಬ ಕಾರು ನಿಲ್ಲಿಸಿ ನಡುರಸ್ತೆಯಲ್ಲಿ ಕಾಫಿ ಕುಡಿಯುತ್ತಿರುತ್ತಾನೆ. ಅಪರೂಪಕ್ಕೆಂಬಂತೆ ತಲೆಗೆ ಎಣ್ಣೆ ತಟ್ಟಿಸಿಕೊಂಡು ಅಭ್ಯಂಜನಕ್ಕೆ ತಯಾರಾಗುತ್ತೀರಿ, ಇದ್ದಕ್ಕಿದ್ದಂತೇ ಕರೆಂಟು ಹೋಗಿ, ಸಂಜೆಯವರೆಗೂ ಮನೆ ತುಂಬಾ ಎಣ್ಣೆ ತೊಟ್ಟಿಕ್ಕಿಸುತ್ತಾ ಕಾಲ ಕಳೆಯಬೇಕು. ತರಕಾರಿ ಕೊಳ್ಳಲು ಚೌಕಾಸೀ ಮಾಡಲು ಪ್ರಯತ್ನಿಸಿ, ನಿಮ್ಮ ಕಡೆಗೆ ತಿರುಗಿಯೂ ನೋಡದಂತೆ, ನಿಮಗೆ ಕೇಳುವಂತೆ ಗೊಣಗುತ್ತಾ, ತರಕಾರಿ ಗಾಡಿಯವನು ಹೋಗಿಬಿಡುತ್ತಾನೆ. ಆರು ಗಂಟೆಗೆ ಬರಬೇಕಾದ ಪೇಪರ್ರು ಎಂಟು ಗಂಟೆಗೆ ಬಂದರೂ ಅವನಿಗೆ ನೀವು ಏನೂ ಹೇಳುವಂತಿಲ್ಲ. ನಾಲ್ಕು ರಸ್ತೆ ಸೇರುವಲ್ಲಿ ನಿಮ್ಮ ಕಾರೂ ಅಥವಾ ನಿಮ್ಮ ಬೈಕೂ ಸೇರಿದಂತೆ ಒಂದು ಇನ್ನೂರು ವಾಹನಗಳು ಕಿಕ್ಕಿರಿದು ನಿಂತಿದ್ದರೂ, ಅಲ್ಲಿರುವ ಒಬ್ಬನೇ ಪೋಲೀಸು, ಈ ಚಕ್ರವ್ಯೂಹದಿಂದ ಪಾರಾಗುವ ಜವಾಬ್ದಾರಿಯನ್ನು ನಿಮ್ಮ ತಲೆಗೇ ಕಟ್ಟಿ, ತನ್ನ ಸೆಲ್ ಫೋನಿನಲ್ಲಿ ಮಾತನಾಡುತ್ತಾ ಅದ್ಯಾವುದೋ ಮೂಲೆಯಲ್ಲಿ ನಿಂತಿರುತ್ತಾನೆ.

ಮುಸ್ಸಂಜೆಯಲ್ಲಿ ಬೆಂಗಳೂರಿನ ಯಾವುದೇ ನಿರ್ಜನ ರಸ್ತೆಯಲ್ಲಿ ನಿಂತು ಸುಮ್ಮನೆ ಸಾಧ್ಯವಾದಷ್ಟೂ ದೂರ ದೃಷ್ಟಿ ಹಾಯಿಸಿ. ನಿಮಗೆ ನೀವೇ ಅಪರಿಚಿತರಾಗುತ್ತೀರಿ. ನೀವು ನಿಂತ ನೆಲ ನಿಮ್ಮದಲ್ಲವೆನಿಸುತ್ತದೆ. ಅಲ್ಲಲ್ಲೇ ಬಿದ್ದು ಹೊರಳಾಡಿಕೊಂಡಿರುವ ನೆರಳುಗಳು ಅನಾಥ ಹೆಣಗಳಂತೆ ಕಾಣುತ್ತವೆ. ಕೇಳಿಬರುವ ಸದ್ದುಗಳಲ್ಲಿ ನಗರದ ಒಂದು ಯಾಂತ್ರಿಕ ಅಮಾನುಷ ಅಟ್ಟಹಾಸವನ್ನು ಕೇಳುತ್ತೀರಿ. ಆ ತುದಿಯಲ್ಲಿ ಪ್ರಕಟವಾದ ಒಬ್ಬ ಮನುಷ್ಯ ನಿಮ್ಮ ಹತ್ತಿರ ಹತ್ತಿರಕ್ಕೆ ಬಂದಂತೇ ನಿಮಗೆ ಭಯವಾಗುತ್ತದೆ. ಆತಂಕವಾಗುತ್ತದೆ. ಯಾರಾದರೊಬ್ಬರು ಸಿಕ್ಕಿದರಲ್ಲಾ ಎಂದು ಅಚ್ಚರಿಯಾಗುತ್ತದೆ. ಕೊಂಚ ಸಂತೋಷವೂ ಆಗಬಹುದು. ಇಂತಹ ಎಲ್ಲ ಭಾವನೆಗಳನ್ನು ಒಂದು ನಗರಜೀವನ ಮಾತ್ರ ಸಮೃದ್ಧವಾಗಿ, ಏಕಕಾಲದಲ್ಲೇ ಒದಗಿಸಬಲ್ಲದು. ಅರ್ಥ ಕಳೆದುಕೊಂಡಿದೆ ಈ ಬದುಕು ಎಂದು ಬೆಂಗಳೂರನ್ನು ಬಿಟ್ಟು ಹೋಗಲು ನೋಡಿ. ಸಾಧ್ಯವಾಗದು. ಇದ್ದು ಬಿಡುವ ಎಂದು ತೀರ್ಮಾನಿಸಿದರೋ, ಇರಲೂ ಆಗದು.
ಬೆಂಗಳೂರಿನ ಕಸ, ಬೆಂಗಳೂರಿನ ಮಾಲಿನ್ಯ, ಬೆಂಗಳೂರಿನ ಒಬ್ಬಂಟಿ ವೃದ್ಧೆಯರ ಕೊಲೆಗಳು, ಬೆಂಗಳೂರಿನ ಉದ್ಧಟತನದ ಆಟೋರಿಕ್ಷಾಗಳು, ಸಿಗ್ನಲ್ಲುಗಳನ್ನು ಬೇಕಾಬಿಟ್ಟಿ ದಾಟಿ ಎಗರಾಡುವ ಐಶಾರಾಮಿ ಕಾರುಗಳು, ಕಾನೂನು ಮೀರುವದರಲ್ಲೇ ಖುಶಿ ಕಾಣುವ ಪಡ್ಡೆ ಹುಡುಗರು ಎಲ್ಲವೂ ಒಂದಲ್ಲ ಒಂದು ಘಟ್ಟದಲ್ಲಿ ನಮಗೆ ಸಹ್ಯವಾಗಿಬಿಡುತ್ತಾರೆ. ಹೋಗಲಿ ಬಿಡು ಎನ್ನುವ ಇತ್ಯರ್ಥಕ್ಕೆ ಸಲೀಸಾಗಿ ಬಂದು ಬಿಡುತ್ತೇವೆ. ಇದು ಬೆಂಗಳೂರಿನ ಅಪಾಯ. ನಾವು ಬದುಕುವುದು ಮುಖ್ಯ, ನಮ್ಮ ಮಕ್ಕಳ ಮರಿಮಕ್ಕಳ ಕತೆ ಅವರೇ ನೋಡಿಕೊಳ್ಳುತ್ತಾರೆ ಎನ್ನುವ ಸ್ವಾರ್ಥಕ್ಕೆ ಶರಣಾಗಿ ಬಿಡುತ್ತೇವೆ.
ಬೆಂಗಳೂರು ಎಷ್ಟು ನಿರ್ಭಾವುಕ ನಗರ. ಒಂದು ಸಣ್ಣ ಕತೆ ಹೇಳುತ್ತೇನೆ.
ಅವನು ಮತ್ತು ಅವಳು. ಅವನು ಬೆಂಗಳೂರಿನ ಯಾವುದೋ ಒಂದು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಕೈ ತುಂಬಾ ಸಂಬಳ.
ತುಂಬು ಸಂಸಾರ, ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ ಮತ್ತು ತಂಗಿ. ಬೆಂಗಳೂರಿನ ಒಂದು ಅಪ್ಪಟ ಮಾದರಿ ಸಂಸಾರ. ಅವಳು ಉತ್ತರ ಭಾರತದಿಂದಲೋ, ಪೂರ್ವ ಭಾರತದಿಂದಲೋ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಅಸಂಖ್ಯಾತ ಹುಡುಗಿಯರಲ್ಲಿ ಒಬ್ಬಳು. ಯಾವುದೋ ಐಟಿ ಕಂಪನಿಯಲ್ಲಿ ಕೆಲಸ, ಹಾಗಾಗಿ ಕೈ ತುಂಬಾ ಸಂಬಳ. ಬೆಂಗಳೂರಿನ ಲಕ್ಷಾಂತರ ಅಪಾಟರ್್ಮೆಂಟ್ಗಳಲ್ಲಿ ಯಾವುದೋ ಒಂದರಲ್ಲಿ ಒಬ್ಬಳೇ ಇದ್ದಾಳೆ. ಸಿಗರೇಟು ಸೇದುವುದು, ಬೀರು ಕುಡಿಯುವುದು ಆಕೆಯ ಇಷ್ಟಗಳಲ್ಲಿ ಒಂದು. ನೆನಪಿರಲಿ, ಇಬ್ಬರಿಗೂ ಮತ್ತೊಬ್ಬರ ಪರಿಚಯವಿಲ್ಲ. ಅವರಿಬ್ಬರೂ ಒಮ್ಮೆ. ಒಂದು ಪಬ್ಬಿನಲ್ಲೋ, ಕಾಫೀ ಶಾಪಿನಲ್ಲೋ ಭೇಟಿಯಾಗುತ್ತಾರೆ. ಬೀರಿನ ಮೇಲೆ ಬೀರು ಕುಡಿದು ಅಥವಾ ಕಾಫಿಯ ಮೇಲೆ ಕಾಫಿ ಕುಡಿದು, ಮಾತಿಗೆ ಮಾತು ಬೆಳೆದು ಒಬ್ಬರನ್ನೊಬ್ಬರು ಅಪ್ಪಿ ಮುದ್ದಾಡುವ ಬಯಕೆ ಇಬ್ಬರಲ್ಲೂ ಏಕಕಾಲಕ್ಕೆ ಮೂಡುತ್ತದೆ. ಇಬ್ಬರೂ ಅವಳ ಮನೆಗೆ ಹೋಗುವುದು ಎಂದು ನಿಧರ್ಾರವಾಗುತ್ತದೆ. ಅವನು ಇಂದು ರಾತ್ರಿ ಕೆಲಸ ಬಿದ್ದಿದೆ, ಹಾಗಾಗಿ ಮನೆಗೆ ಬರುವುದು ಸಾಧ್ಯವಿಲ್ಲ ಎಂದು ಅಮ್ಮನಿಗೆ ತಿಳಿಸುತ್ತಾನೆ. ಮುಂದಿನ ಹತ್ತು ನಿಮಿಷಗಳಲ್ಲಿ ಒಂದು ಕ್ಯಾಬ್ ತರಿಸಿ ಇಬ್ಬರೂ ಅವಳ ಅವಳ ಅಪಾರ್ಟ್‌ಮೆಂಟಿಗೆ ಬರುತ್ತಾರೆ.
ಅಪಾರ್ಟ್‌ಮೆಂಟಿಗೆ ಬಂದ ಕೂಡಲೇ ಅಪ್ಪಿ ಮುದ್ದಾಡಿದ ಒಂದಷ್ಟು ಕ್ಷಣಗಳ ನಂತರ ಅವಳು ಕೇಳುತ್ತಾಳೆ, ಟೀ ಬೇಕಾ. ಅವನು ಹೂಂ ಅನ್ನುತ್ತಾನೆ. ನವಪ್ರೇಮಿಗಳು ಒಬ್ಬರಿಗೊಬ್ಬರು ಅಂಟಿಕೊಂಡೇ ಅಡುಗೆಮನೆಗೆ ಬರುತ್ತಾರೆ. ಹುಡುಕಿದಲ್ಲಿ ಹಾಲಿಲ್ಲ. ಟೀ ಇಲ್ಲ, ಯಾಕಂದ್ರೆ ಹಾಲಿಲ್ಲ ಅನ್ನುತ್ತಾಳೆ. ಅವನೊಳಗಿನ ಹೀರೋ ಜಾಗೃತನಾಗುತ್ತಾನೆ. ನಾನು ತರುತ್ತೇನೆ, ಎಲ್ಲಿ ಸಿಗತ್ತೆ ಹೇಳು ಎನ್ನುತ್ತಾನೆ. ಇಲ್ಲೇ ಗೇಟಿಂದ ಹೊರಗೆ ಎಡಕ್ಕೆ ತಿರುಗಿದರೆ ಒಂದರ್ಧ ಫರ್ಲಾಂಗು, ಡೈರಿ ಬೂತಿದೆ ಅನ್ನುತ್ತಾಳೆ. ಪ್ಯಾಂಟ್ ಏರಿಸಿದ ಅವನು ಐದು ನಿಮಿಷ ಬಂದೆ, ಎಂದು ಓಡುತ್ತಾನೆ. ಲಿಫ್ಟಿಗೂ ಕಾಯದೇ ಒಂದೇ ಉಸಿರಿನಲ್ಲಿ ಮೆಟ್ಟಿಲಿಳಿದು, ಓಡಓಡುತ್ತಾ ಗೇಟ್ ದಾಟಿ, ದಾಪುಗಾಲಿಕ್ಕಿ ಫರ್ಲಾಂಗು ನಡೆದು, ಹಾಲಿನ ಪ್ಯಾಕೆಟ್ಟನ್ನು ಕೈಲಿ ಹಿಡಿದು, ಓಡುತ್ತಾ ಮತ್ತೆ ಅಪಾರ್ಟ್‌ಮೆಂಟಿನ ಗೇಟಿನ ಬಳಿ ಬರುತ್ತಾನೆ. ಇರುವ ಒಂದು ಮೂರು ದೆವ್ವನಂಥಾ ಗೇಟುಗಳಲ್ಲಿ ಒಂದು ಗೇಟಿನ ಬಳಿ ಗರಬಡಿದವನಂತೆ ನಿಂತು ಬಿಡುತ್ತಾನೆ.
ಅದೊಂದು ಸುಮಾರು ಎರಡು ಸಾವಿರ ಅಪಾರ್ಟ್‌ಮೆಂಟುಗಳ ಸಮುಚ್ಛಯ. ಎಲ್ಲಾ ಕಟ್ಟಡಗಳಿಗೂ ಒಂದೇ ಬಣ್ಣ, ಒಂದೇ ಆಕಾರ, ಒಂದೇ ಅಳತೆ. ಸಾವಿರ ಕಿಟಿಕಿಗಳೂ, ಸಾವಿರ ಬಾಲ್ಕನಿಗಳೂ ಒಂದೇ ಆಕಾರ, ಒಂದೇ ಅಳತೆಯವು. ಈ ಇಟ್ಟಿಗೆ-ಕಾಂಕ್ರೀಟಿನ ಸಾಗರದಲ್ಲಿ ಅವಳ ಅಪಾರ್ಟ್‌ಮೆಂಟು ಯಾವುದು? ಅದಿರುವುದು ಯಾವ ಬ್ಲಾಕಿನಲ್ಲಿ? ಅವಳ ಹೆಸರೇನು? ಅವಳ ಫೋನ್ ನಂಬರ್ ಏನು? ಪ್ರತಿ ಅಪಾರ್ಟ್ಮೆಂಮೆಂಟಿನ ಬಾಗಿಲು ತಟ್ಟುತ್ತಾ ಅವಳನ್ನು ಹುಡುಕುವುದು ಸಾಧ್ಯವೇ? ಸುಮಾರು ಹೊತ್ತು ಹಾಗೇ ನಿಂತವನು, ಕೊನೆಗೆ ಮನೆಗೆ ಫೋನ್ ಮಾಡುತ್ತಾನೆ, ರಾತ್ರಿ ಪಾಳಿ ಕ್ಯಾನ್ಸಲ್ ಆಗಿದೆ, ಮನೆಗೆ ಬರುತ್ತಿದ್ದೇನೆ ಅಂತ. ಹಾಲಿನ ಪ್ಯಾಕೇಟನ್ನು ಅಲ್ಲೇ ಕಸದ ತೊಟ್ಟಿಗೆ ಹಾಕಿ, ಇನ್ನೊಂದು ಕ್ಯಾಬಿಗಾಗಿ ಕಾಯುತ್ತಾನೆ. ಕುದಿಯುತ್ತಿರುವ ನೀರಿನ ಜೊತೆಗೇ, ಬೆಚ್ಚಗಾಗಿರುವ ಒಂದು ಹೆಣ್ಣಿನ ದೇಹ ಅದ್ಯಾವುದೋ ಒಂದು ಅಪಾರ್ಟ್‌ಮೆಂಮೆಂಟಿನಲ್ಲಿ ಹಾಸಿಗೆಯ ಮೇಲೆ ಹೊರಳಾಡುತ್ತಾ ಕಾಯುತ್ತಿದೆ. ಇನ್ನೂ.
ಇದು ಬೆಂಗಳೂರು ನಮ್ಮ ನಡುವೆ ನುಸುಳುವ ಪರಿ. ಎಷ್ಟೇ ಪ್ರಯತ್ನಿಸಿದರೂ ಯಾವುದೂ ವೈಯಕ್ತಿಕವಾಗಿ ಉಳಿಯಲು ಸಾಧ್ಯವಿಲ್ಲ. ಎಲ್ಲವೂ ಸಾರ್ವಜನಿಕವಾಗಿಬಿಡುತ್ತವೆ. ಬೆಳಿಗ್ಗೆ ನಿಮ್ಮ ಬಚ್ಚಲು ಮನೆಯಲ್ಲಿ ಗಟ್ಟಿಯಾಗಿ ಹಾಡು ಹೇಳಿಕೊಂಡು ಸ್ನಾನ ಮಾಡಲು ನೋಡಿ, ನಿಮ್ಮ ಅಪಸ್ವರದ ಗಾಯನ ಸುಮಾರು ಎಂಟು ಮನೆಗಳಿಗೆ ಕೇಳಿರುತ್ತದೆ.
ಇಲ್ಲೀವರೆಗೂ ಅಂದರೆ ಸುಮಾರು ಹತ್ತು ಹದಿನೈದು ವರ್ಷಗಳವರೆಗೂ ಬೆಂಗಳೂರು ಒಂದು ದೊಡ್ಡ ಹಳ್ಳಿಯಾಗಿತ್ತು. ಅದು ಒಂದು ಮಹಾನಗರವೆಂದು ಯಾರೂ ಕರೆಯುತ್ತಿರಲಿಲ್ಲ. ಈ ಹದಿನೈದು ವರ್ಷಗಳಲ್ಲಿ ಬೆಂಗಳೂರು ತನ್ನ ಅಮಾಯಕ, ಮುಗ್ಧ ಬಣ್ಣ ಕಳಚಿ, ಮತ್ತೊಂದು ವೇಷ ಧರಿಸಿ ನಿಂತಿದೆ. ಅರ್ಬನ್ ಸಿಟಿಯಾಗಿದೆ. ಕೂತು ಉಸಿರಾಡಲೂ ಸಮಯವಿಲ್ಲ ಅದಕ್ಕೆ, ದಿನದ ಇಪ್ಪತ್ನಾಲ್ಕು ಗಂಟೆಗಳ ನಿರಂತರ ನಾಗಾಲೋಟ ಅದರದ್ದು. ಇದನ್ನು ಕೊಂಚವಾದರೂ ಸಹ್ಯವಾಗಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮದೂ ಕೂಡಾ.






That is Bangalore. Superb writing, thank you.
bengaloorina bannavannu chennagi bichhittiddira. lekana, nimma anisike chennagide.
Bengalurina idee essence ondu eerulliyalli hidididdeera………fantastic. Thank you for a good read suri.
ಹಬ್ಬಾ ಉಸಿರಾಡಲೂ ಸಮಯ ನೀಡದೆ ಓದಿ ಮುಗಿಸಿದೆ ಸಾರ್…ಬೆಂಗಳೂರಿನ ಯಾಂತ್ರಿಕ ಜೀವನದಂತೆ ನಿಮ್ಮ ಲೇಖನ ಎಲ್ಲಿಯೂ ನಿಲ್ಲಿಸದೆ ಓದಿ ಮುಗಿಸಿ ಉರಿರು ಬಿಟ್ಟೆ…ಅಪ್ಪಾ ನಿಜ ಈಗಿನ ನಮ್ಮ ಬೆಂಗಳೂರಿನ ಸ್ಥಿತಿಯನ್ನು ಬಹಳ ಚನ್ನಾಗಿ ಪುಷ್ಠಿಕೊಟ್ಟು ಬರೆದಿದ್ದಿರ ಬಹಳ ಚನ್ನಾಗಿದೆ ಸಾರ್…
aa putta kathenoo ista aitu…nice write up sir.
ಬಹಳ ಚೆಂದದ ಬರಹ ಸರ್.ಬಹಳ ಇಷ್ಟ ಆಯ್ತು