ಮೂಕನಹಳ್ಳಿ ರಂಗಸ್ವಾಮಿ
ಬಾರ್ಸಿಲೋನಾದಿಂದ
ಬೆಂಗಳೂರಿಗೆ ಹೋಗುವುದೆಂದರೆ ಏನೋ ಖುಷಿ. ಇಪ್ಪತ್ನಾಲ್ಕು ವರ್ಷದ ನೆನಪುಗಳ ಗಂಟು ಮರೆತು ಹೋಗುವಷ್ಟು ಚಿಕ್ಕವೇನಲ್ಲ ಬಿಡಿ. ಕಳೆದ 15 ವರ್ಷದಿಂದ ಬಾರ್ಸಿಲೋನಾ ಬಾಸಿಯಾಗಿದ್ದರೂ ಹಲವು ಬಾರಿ ಬೆಂಗಳೂರಿಗೆ ಪಯಣಿಸಿದ್ದೆ, ಆದರೆ ಈ ಬಾರಿ ಹಿಂದೆಂದಿಗಿಂತ ಉತ್ಸಾಹ. ಅಪ್ಪ-ಅಮ್ಮ, ಅತ್ತೆ-ಮಾವರಿಗೆ ಯೂರೋಪು ಸುತ್ತಿಸಿ ತೋರಿಸುವಲ್ಲಿ ಎರಡು ವರ್ಷ ಕಳೆದಿತ್ತು ನಾನು ಬೆಂಗಳೂರನ್ನು ಸ್ಪರ್ಶಿಸಿ. ಬಹುಶ: ಹೆಚ್ಚಿನ ಉತ್ಸಾಹಕ್ಕೆ ಇದೇ ಕಾರಣವಿರಬೇಕು.
ಪೂರ್ತಿ ಒಂದು ತಿಂಗಳು ಬೆಂಗಳೂರಿನಲ್ಲಿ ವಾಸಿಸಿ ಮತ್ತೆ ಬಾರ್ಸಿಲೋನಕ್ಕೆ ಜನವರಿಯಲ್ಲಿ ಮರಳಿದ ನನಗೆ ಅಲ್ಲಿ ನಡೆದ ಹಲವು ಹತ್ತು ಘಟನೆಗಳನ್ನು ದಾಖಲಿಸುವ ಹಂಬಲ. ಕೆಲಸ-ಕಡತ-ನಡೆತಗಳ ನಡುವೆ ಭೌತಿಕ ಸೋಮಾರಿತನವೂ ಸೇರಿಬಿಟ್ಟರೆ ಏನಾಗಬಹುದು? ಅದೇ ನನಗೂ ಆಗಿದೆ. ಅದಕ್ಕೆ ಈ ಪದಗಳು ಎರಡು ತಿಂಗಳು ತಡವಾಗಿ ಜನಿಸುತ್ತಿವೆ. ಇದರ ಪೂರ್ತಿ ತಪ್ಪು ನನ್ನದೇ. ನನ್ನ ಕೆಲಸ, ನಡೆತಗಳು ಕೇವಲ ಕಾರಣಗಳಷ್ಡೇ.
ಒಂದು ತಿಂಗಳಲ್ಲಿ ನಡೆದ ಎಲ್ಲ ಘಟನೆಗಳು, ಬೆಂಗಳೂರಿನ ಟ್ರಾಫಿಕ್, ಐಟಿ-ಬಿಟಿ, ಸೈಟುಬೆಲೆ, ಯುವಜನತೆಯ ನಡತೆ, ರಾಜಕೀಯ ದೊಂಬರಾಟ ಇದ್ಯಾವುದರ ಬಗ್ಗೆಯೂ ನಾನು ಬರೆಯುವುದಿಲ್ಲ. ತೀರ ಮನಸ್ಸಿಗೆ ತಟ್ಟುವ ನಾಲ್ಕಾರು ಘಟನೆಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇದು ಹೊಸದೇನಲ್ಲ. ದಿನ ನಿತ್ಯ ನೀವು ಕಂಡದ್ದೇ, ಕಾಣುತ್ತಿರುವುದೇ. ಆವು ಅಕ್ಷರ ರೂಪ ಪಡೆದಿವೆ ಅಷ್ಟೇ. ಇರಲಿ ಬನ್ನಿ ಘಟನೆಗಳ ಸುತ್ತ ಒಂದು ಸುತ್ತು ಹಾಕೋಣ.
ಘಟನೆ ಒಂದು : ಶಾಂತಿಸಾಗರ

ಬೆಂಗಳೂರಿಗೆ ಬಂದ ಎರಡನೇ ದಿನವೇ ನಾಲಗೆಯ ಚಪಲ ತೀರಿಸುವ ಸಲುವಾಗಿ ದೌಡಾಯಿಸಿದ್ದೆ ಶಾಂತಿಸಾಗರಕ್ಕೆ. ಈ ಮನುಷ್ಯನೇ ವಿಚಿತ್ರ, ತನ್ನೆಲ್ಲಾ ಅಭ್ಯಾಸಗಳ ಒಟ್ಟು ಮೊತ್ತ, ನೆನಪುಗಳ ಸುತ್ತಲೋ ಮನಸ್ಸು ಗಿರಿಕಿ ಹಾಕಿ, ಮತ್ತೆ ಮತ್ತೆ ಅದೇ ನೆನಪಿನ ಆನಂದವನ್ನು ಪಡೆಯಲು ಬಯಸುತ್ತದೆ. ಅದು ಸಹಜ ಕೂಡ. ಶಾಲೆ, ಕಾಲೇಜು ಕಲಿಯುವರಿಗೆಲ್ಲ ಸ್ನೇಹಿತರೊಂದಿಗೆ ದೋಸೆ, ಇಡ್ಲಿ ಮೆಲ್ಲುತ್ತಾ ಕಳೆದ ಆ ನೆನಪುಗಳು ಮತ್ತೆ ಶಾಂತಿಸಾಗರಕ್ಕೆ ನನ್ನ ಎಳೆತಂದಿದ್ದವು. ಅದೇ ಇಡ್ಲಿ, ದೋಸೆ, ಅದೇ ರುಚಿ.. ಆಹಾ.. ಒಮ್ಮೆಲೇ ಎಷ್ಟು ಪುಣ್ಯವಂತರು ಇಲ್ಲಿ ಬದುಕುವ ಜನ, ನಿತ್ಯವೂ ಇಷ್ಟು ರುಚಿಯಾದ ಊಟ ತಿನ್ನುತ್ತಾರಲ್ಲಾ ಅನ್ನಿಸಿ, ಲೈಟ್ ಆಗಿ ಹೊಟ್ಟೆಕಿಚ್ಚು ಕೂಡ ಬಂತು. ತಿಂಡಿಯೆಲ್ಲಾ ತಿಂದಾದ ನಂತರ ಮೂತ್ರ ವಿಸರ್ಜಿಸಿ ಬರುತ್ತೇನೆಂದು ಹೇಳಿಹೊರಟೆ. ಆಗಲೇ ರಮ್ಯ ಉಸುರಿದಳು `ಛುಲ್ಟಿ, ತುಂಬಾ ಅವಸರ ಆಗಿದ್ರೆ ಮಾತ್ರ ಹೋಗು. ಇಲ್ಲಾಂದ್ರೆ ಇನ್ನೊಂದು ಘಂಟೆಯಲ್ಲಿ ಮನೆ ಸೇರ್ತೀವಿ’. ನಾನು ಅವಳ ಮಾತಿಗೆ ಉತ್ತರಿಸದೆ ಟಾಯ್ಲೆಟ್ ಹುಡುಕಿ ಹೊರಟೆ.
ಟಾಯ್ಲೆಟ್ ಪ್ರವೇಶಿಸುತ್ತಿದ್ದಂತೆ ತೀರ ಗಬ್ಬು ವಾಸನೆ ಮೂಗಿಗಡರಿತು, ತಿಂದ ಆಹಾರ ಯಾವ ದ್ವಾರದಿಂದ ನನ್ನ ಹೊಟ್ಟೆ ಸೇರಿತ್ತೋ, ಅದೇ ದ್ವಾರದಿಂದ ರಭಸವಾಗಿ ಹೊರಬಿದ್ದವು, ಇಡ್ಲಿ, ದೋಸೆ ತುಂಡುಗಳು `ಬಡ್ಡಿ ಮಗ್ನೆ, ಅಗಿದಗಿದು ನಮ್ಮನ್ನು ಜಗಿದೆಯಲ್ಲಾ, ಈಗ ಅನುಭವಿಸು` ಎಂದು ನಕ್ಕಂತೆ ಅನ್ನಿಸಿತು. ಮರುಘಳಿಗೆಯಲ್ಲೇ ರಮ್ಯಳ ಮಾತು ಕೇಳಬೇಕಾಗಿತ್ತು, ಆಗ ಹೀಗಾಗುತ್ತಿರಲಿಲ್ಲ ಅನ್ನಿಸಿ ಮನಸ್ಸು ಪಿಚ್ಚೆನ್ನಿಸಿತು. ಬಾಯಿತೊಳೆದುಕೊಂಡು (ಕಷ್ಟಪಟ್ಟು) ನಮ್ಮ ಟೇಬಲ್ ಬಳಿ ಬಂದಾಗ, ಏನಾಯಿತೆಂದು ನನಗೆ ಹೇಳುವ ಪ್ರಮೇಯವೇ ಬರಲಿಲ್ಲ. ಅಮ್ಮ-ರಮ್ಯ ನನ್ನ ಮುಖದಲ್ಲಿ ಎಲ್ಲಾ ಬರೆದಿರುವಂತೆ, ಅದನ್ನು ಅವರು ಓದಿರುವಂತೆ ಕಂಡರು. ರಮ್ಯ ಮಾತ್ರ ನನ್ನ ಮಾತು ಯಾಕೆ ಕೇಳಲಿಲ್ಲ ಅಂತ ಹಂಗಿಸಲಿಲ್ಲ. ಬದಲಾಗಿ `ಗುಂಡು ಕಾಫಿ ಏನಾದ್ರೂ ಕುಡಿತೀಯಾ’ ಅಂತ ಕೇಳಿದ್ಲು. ಜಗಮಗಿಸುವ ಹೋಟೆಲ್ಲು, ಮಾಲ್ಗಳು, ಪಿ,ವಿ.ಆರ್.ಗಳು ಬಂದರೆ ಸಾಕೆ? ಮೂಲ ಸೌಕರ್ಯಗಳಿಗೆ ಯಾಕಿಷ್ಟು ಅಸಡ್ಡೆ? ಕೇವಲ ಶಾಂತಿಸಾಗರ್ ಒಂದೇ ಅಲ್ಲಾ, ತಿಂಗಳ ಅವಧಿಯಲ್ಲಿ ಕನಿಷ್ಠ ಹತ್ತಾರು ಹೆಸರಾಂತ ಹೋಟೆಲ್, ಆಸ್ಪತ್ರೆಗಳನ್ನು ತಡಕಾಡಿದ ನನಗೆ ಆದ ಅನುಭವ ಮಾತ್ರ ಶಾಂತಿ ಸಾಗರದ್ದೇ. ಎಲ್ಲಾ ಕಡೆಯೂ ಅಷ್ಟೇ, ಟಾಯ್ಲೆಟ್ಗಳೆಂದರೆ ಅಸಡ್ಡೆ, ಮೂಗು ಮುಚ್ಚಿ ಮುಗಿಸಿ ಬರುವ ಕ್ರಿಯೆ!
ಎಷ್ಟು ಬೇಡವೆಂದರೂ ಬಾರ್ಸಿಲೋನದ ಕಾಫಿ ಬಾರ್ಗಳು, ಮಾಲ್ಗಳು, ಥಿಯೇಟರ್ಗಳು ನೆನಪಾದವು. ಮಾಲ್ಗಳು ಪಿ.ವಿ.ಆರ್.ಗಳು ಇರುವುದರಿಂದ ಅದರ ತೂಕ, ಘನತೆ ಹೆಚ್ಚಿದವರಂತೆ ತಿರುಗಾಡುವ ಹುಡುಗ-ಹುಡುಗಿಯರು ಈ ಟಾಯ್ಲೆಟ್ನಲ್ಲಿ ಹೇಗೆ ಪ್ರವೇಶಿಸುತ್ತಾರೋ ನಾನು ಕಾಣೆ..! ಎಲ್ಲಕ್ಕೂ ಸಮಾಜವನ್ನು, ಸರಕಾರವನ್ನು, ವ್ಯವಸ್ಥೆಯನ್ನು ದೂರುವುದನ್ನು ಅಭ್ಯಾಸಮಾಡಿಕೊಂಡಿರುವ ಜನ ನಾವು. ಸಣ್ಣ ಸಣ್ಣ ಕೆಲಸಗಳನ್ನು, ವಿಷಯಗಳನ್ನು ನಿರ್ಲಕ್ಷಿಸುವ ಬದಲು ನಿಯತ್ತಾಗಿ ಅವುಗಳ ಬಗ್ಗೆ ಗಮನ ಹರಿಸಿದರೆ ಸಾಕು, ಬದಲಾವಣೆ ತನ್ನಷ್ಟಕ್ಕೆ ತಾನೇ ಅಗುತ್ತದೆ ಅನ್ನಿಸಿತು.
ಘಟನೆ 2 : ಕೋರಮಂಗಲಕ್ಕೆ ಪಯಣ
ಬಾಲ್ಯ ಅತ್ಯಮೂಲ್ಯವಾಗುವುದು ಕೇವಲ ಮುಗ್ಧತೆಯಲ್ಲಿ ನಾವು ಕಟ್ಟಿಕೊಳ್ಳುವ ಪ್ರಪಂಚದಿಂದ, ಇನ್ನೂ ಹಲವಾರು ಕಾರಣಗಳಿರಬಹುದು. ಆದರೆ ನನಗೆ ನನ್ನ ಬಾಲ್ಯ ಇಷ್ಟವಾಗುವುದು, ಕಳೆದ ಆ ನಿಷ್ಕಲ್ಮಷ ದಿನಗಳು, ಅದರ ನೆನಪುಗಳಿಂದ. ಅಂತಹ ನೆನಪುಗಳಲ್ಲಿ ಪ್ರಬಲವಾದ ನೆನಪುಗಳು ಕೆಲವೇ ಕೆಲವು. ಅವುಗಳಲ್ಲಿ ಕೋರಮಂಗಲಕ್ಕೆ ನಮ್ಮತ್ತೆ ಮನೆಗೆ ಹೋಗುವುದು ಮರೆಯಲಾಗದ್ದು, ವಿಶಾಲವಾದ ಹಾಲು, ವಿಫುಲವಾದ ಮನೆ, ನಮ್ಮೆಲ್ಲಾ ತರಲೆಗಳಿಗೆ ನಕ್ಕು ಪ್ರೀತಿಯಿಂದ ಸ್ಪಂದಿಸುತ್ತಿದ್ದ ಮಾವ-ಅತ್ತೆ, ಆಟೋಟಗಳಲ್ಲಿ ಭಾಗಿಯಾಗುತ್ತಿದ್ದ ನಮ್ಮತ್ತೆ ಮಗ ಸೀನಿ, ಮಗಳು ರಾಣಿ. . . ಇವು ನೆನಪು ಬಾಡದ ಭದ್ರ ಬುನಾದಿಗಳು ಎಂದೇ ನನ್ನ ಅನಿಸಿಕೆ. ಪ್ರತಿಬಾರಿ ಬೆಂಗಳೂರಿಗೆ ಹೋದಾಗ್ಲೂ ಅತ್ತೆ ಮನೆ ಭೇಟಿ ಇರಲೇ ಬೇಕು. ಅದೊಂದು ತೀರ ಅಲಿಖಿತ ಒಪ್ಪಂದ ಕೂಡ, ಹಾಗೂ ನನ್ನ ಆಸೆ ಸಹ.!
ಸಹಜವಾಗಿಯೇ ಈ ಬಾರಿ ಕೂಡ ಅತ್ತೆ ಮನೆಗೆ ಪ್ರಯಾಣ ಶುರುವಾಯ್ತು. ನಾಗರಬಾವಿಯ ನಮ್ಮ ಮನೆಯಿಂದ. ಅತ್ರೆ ಹತ್ತು ಸಾರಿ ಊಟಕ್ಕೆ ಬಾ ಅಂತ ಒಂದೇ ಸಮ ವರಾತ ಹಚ್ಚಿದ್ದರು. ಅವರ ಮನೇಲಿ ಊಟ ಹೊಸದೇನಲ್ಲ. ಕಳೆದ ದಿನಗಳು, ವರುಷಗಳು ಅತ್ತೆಯನ್ನು ಹಣ್ಣಾಗಿಸಿವೆ, ಅವರನ್ನು ದುಡಿಸುವುದು ನನಗಿಷ್ಟವಿರಲಿಲ್ಲ. ಹಾಗಾಗಿ ಫೋನಾಯಿಸಿದೆ ಸಪ್ರೈಸ್ ಮಾಡುವ ಉದ್ದೇಶದಿಂದ ಹೊರಟಿದ್ದೆ ರಮ್ಯಳ ಸಮೇತನಾಗಿ.
ನಮ್ಮನ್ನು ಕಂಡ ಅತ್ತೆಗೆ ಖುಷಿಯಾಯ್ತು. ಆದರೂ ಮುನಿಸಿನಿಂದ ಫೋನುಮಾಡಿ ಬಾ ಅಂದ್ರೆ ಹೀಗೆ ಬರೋದಾ ಅಂತ ಪ್ರೀತಿಯಿಂದ ಗದರಿದರು. ನಾನು ನಸುನಕ್ಕೆ, ನನ್ನ ಉದ್ದೇಶ ಅತ್ತೆಗೆ ಕಷ್ಟ ಕೊಡದಿರುವುದು, ಆದರೆ ಆ ಹಿರಿ ಜೀವ ಕೇಳಬೇಕಲ್ಲ, ಪಟಪಟನೆ ಈರುಳ್ಳಿ ಹೆಚ್ಚಿ, ಅವರೆಕಾಯಿ ಹಾಕಿ ಬಿಸಿಬಿಸಿ ಉಪ್ಪಿಟ್ಟು ತಯಾರಿಸೇಬಿಟ್ಟರು. ಬಲವಂತದಿಂದ ಎರಡನೇ ಬಾರಿ ಕೂಡ ಪೂರ್ತಿ ತಟ್ಟೆ ತುಂಬಿತು ಉಪ್ಪಿಟ್ಟು., ಎಲ್ಲಾ ಮುಗಿದು ಅತ್ತೆಯ ಪಾದ ಸ್ಪರ್ಶಿಸಿ, ಆಶೀರ್ವಾದ ಬೇಡಿ ಹೊರಟೆವು. ಅತ್ತೆ ತುಂಬಾ ಬಾವುಕರಾಗಿ ನುಡಿದರು `ರಂಗಾ, ವಿದೇಶಕ್ಕೆ ಹೋದೋರು ಏನೇನೋ ಬದಲಾಗಿ ಹೋಗ್ತಾರೆ, ಇಷ್ಟು ವರ್ಷ ಆದ್ರೂ ನೀನು ಮಾತ್ರ ಹಾಗೆ ಇದ್ದೀಯಾ.’ ಬದಲಾವಣೆ ಒಳಿತಿಗಾದರೆ ಸರಿ ಅಂದುಕೊಂಡು ಅತ್ತೆಯಿಂದ ಬೀಳ್ಕೊಟ್ಟೆವು. ಸುಮಾರು ಒಂದು ಕಿಲೋ ಮೀಟರು ಪ್ರಯಾಣಿಸಿರಬಹುದು, ಪ್ರತಿ ಸಂಭಾಷಣೆಗೊಂದು (ನನಗೆ) ನಾಮಕರಣ ಮಾಡುವ ರಮ್ಯ `ಮೋಂಟಿ, ನನ್ನ ಹ್ಯಾಂಡ್ ಬ್ಯಾಗ್ ಅತ್ತೆ ಮನೇಲಿ ಬಿಟ್ಟಿದ್ದೀನಿ’ ಅಂದಳು. `ಏನ್ಸಾ, ವಾಪಸ್ಸು ಹೊಡಿಲಾ ಗಾಡಿ’ ಅಂದ ನಮ್ಮ ಡ್ರೈವರ್ ನಾಗರಾಜ್. `ಸರಿಕಣಪ್ಪ’ ಅಂದೆ. ನನಗೆ ಕೋಪ ಬಂದಿದೆ ಅಂತ ರಮ್ಯಳಿಗೆ ಗೊತ್ತಾಗಿತ್ತು. ಮಾತಾಡದೆ ಮಗುಮ್ಮಾಗೆ ಕೂತಳು.
ಅತ್ತೆ ಮನೆಯಿಂದ ಬ್ಯಾಗ್ ತೆಗೆದುಕೊಂಡು ಹೊರಟೆವು. ಕಾರ್ನಲ್ಲಿ ಅರೆಕ್ಷಣ ಮೌನವೇ ಮಾತಾಗಿತ್ತು. ಮೌನ ಮುರಿದವನು ನಾಗರಾಜ `ಸರ್, ಇಲ್ಲೆಲ್ಲೂ ರೈಟ್ ಟರ್ನ್ ಇಲ್ಲ’ ಅಂದ. ನಾನು ಯಾವುದೋ ಯೋಚನೆಯಲ್ಲಿ `ಇಲ್ಲೇ ತಿರುಗಿಸ್ಕೋ ನಾಗರಾಜ, ಪೋಲಿಸ್ ಕಾಣ್ತಿಲ್ಲಾ’ ಅಂದೆ. ನಾಗರಾಜ, ರಮ್ಯ ಇಬ್ಬರೂ ಬೇಡವೆಂದರೂ ತಿರುಗಿಸಲು ಒತ್ತಾಯಿಸಿದೆ, ಒತ್ತಾಯಕ್ಕೆ ಕಟ್ಟುಬಿದ್ದು ನಾಗರಾಜ ಬಲಕ್ಕೆ ತಿರುಗಿಸಿದ. ಸೂಚನಾ ಫಲಕ` ಬಲತಿರುವಿಗೆ ನಿರ್ಬಂಧ’ ಅಂತ ಸೂಚಿಸುತ್ತಿತ್ತು. ಧುತ್ತನೆ ಪ್ರತ್ಯಕ್ಷನಾದ ಪೇದೆಯೊಬ್ಬ ವಿಸಲ್ ಹಾಕಿ ಕಾರನ್ನು ಪಕ್ಕಕ್ಕೆ ಹಾಕುವಂತೆ ಸೂಚಿಸಿದ. ನಾನು ಕಾರಿನಿಂದ ಇಳಿದು `ಸಾರಿ, ಗೊತ್ತಾಗ್ಲಿಲ್ಲ’ ಅಂದೆ. ಅದೆಲ್ಲಾ ಗೊತ್ತಿಲ್ಲಾರಿ, ಸ್ಪಾಟ್ ಫೈನ್ 300/- ರೂಪಾಯಿ ಆಗುತ್ತೆ ಅಂದ. ನಾನು ಮರುಮಾತನಾಡದೆ ಮುನ್ನೂರು ರೂಪಾಯಿ ಕೊಟ್ಟೆ. ನಂತರ ಎರಡು ನೋಟು ಹಿಂತಿರುಗಿಸಿ `ಇರಲಿ ಬಿಡಿ ಸಾ. . .ಮಿಸ್ಟೇಕ್ ಎಲ್ರೂ ಮಾಡ್ತಾರೆ. ಇನ್ನೊಂದ್ಸಾರಿ ನೋಡ್ಕಂಡು ಓಡ್ಸಿ’ ಅಂದು ಉದಾರತೆ ತೋರಿದ. ನಾವು ಪಯಣ ಮುಂದುವರಿಸಿದೆವು. ಸ್ವಲ್ಪ ಸಮಯ ಕಾರಿನಲ್ಲಿ ಮತ್ತೆ ಮೌನ.., ಈ ಬಾರಿಯೂ ಮೌನ ಮುರಿದವನು ನಾಗರಾಜನೇ. `ಸಾ, ನೀವು ಕಾರಾಗೆ ಕುಂತಿದ್ರೆ, ನಾನು ಐವತ್ತು ರೂಪಾಯಾಗೆ ಅವಯ್ಯನ್ನ ಪಟಾಯಿಸ್ತಿದ್ದೆ’ ಅಂದ. ಹೋಗ್ಲಿ ಬಿಡು ನಾಗರಾಜ ಅಂದೆ. ಮನಸ್ಸು ಮಾತ್ರ ಸರಿ-ತಪ್ಪುಗಳ ತೊಯ್ದಾಟದಲ್ಲಿ ಮಗ್ನವಾಗಿತ್ತು. ರಮ್ಯ ತನ್ನಿಂದಲೇ ಇಷ್ಟೆಲ್ಲಾ ಅಯ್ತೇನೋ ಎಂಬ ಮುಖ ಹಾಕಿ ಕುಳಿತಿದ್ದಳು.

ಘಟನೆ ಮೂರು : ಜನತಾ ಹೋಟೆಲ್ಲು, ಮಲ್ಲೇಶ್ವರಂ
ಜನತಾ ಹೋಟೆಲ್ ಮರೆಯೋದು ಅಸಾಧ್ಯ. ಕೆಲವೊಂದು ನೆನಪುಗಳು ಜೀವನದಲ್ಲಿ ಆ ರೀತಿ ಪ್ರಭಾವ ಬೀರುತ್ತವೆ. ಅಕಸ್ಮಾತ್ ಆ ನೆನಪು ಬಾಲ್ಯದೊಂದಿಗೆ ತಾಳೆ ಹಾಕಿಕೊಂಡಿದ್ದರೆ ಮುಗಿಯಿತು, ಮರೆಯುವ ಮಾತೇ ಇಲ್ಲ. 87 ರಿಂದ 89 ನನ್ನ ಹೈಸ್ಕೂಲು ದಿನಗಳು. ಒಂದೊಂದು ದಿನಗಳೂ ಒಂದೊಂದು ಮಹಕಾವ್ಯಗಳೇ ನನ್ನ ಪಾಲಿಗೆ. ಪಟ್ಟ ಆನಂದಕ್ಕೆ, ನಲಿದಾಡಿದ ಆ ದಿನಗಳಿಗೆ ಲೆಕ್ಕ ಮಾಡಿದ್ದರೆ ಕುವೆಂಪುರವರ ರಾಮಾಯಣ ದರ್ಶನಂನಷ್ಟೇ ದಪ್ಪ ಪುಸ್ತಕವಾಗುತ್ತಿತ್ತೇನೋ. ಇರಲಿ, ಅಂದಿನ ಆ ನೆನಪುಗಳು, ಜನತಾ ಹೋಟೆಲ್ಲಿನ ರವೆ ಇಡ್ಲಿ, ಮಸಾಲ ದೋಸೆ ನನ್ನನ್ನು ಸರಿಸುಮಾರು 11,000 ಕಿಲೋ ಮೀಟರು ದೂರದಿಂದಲೂ ಇಂದಿಗೂ ಸೆಳೆಯುವ ಆಕರ್ಷಣೆ ಉಳಿಸಿಕೊಂಡಿದೆ. ಅಂದಮೇಲೆ 8-10 ಕಿಲೋ ಮೀಟರ್ ನಾಗರಬಾವಿ ಯಾವ ಮಹಾದೂರ..! ಸೆಳೆದೇ ಬಿಟ್ಟಿತು ಒಂದು ಶನಿವಾರ, ನನ್ನ ಜೊತೆಗೆ ಅಮ್ಮ-ರಮ್ಯ..! ಮಲ್ಲೇಶ್ವರಂನ ರಸ್ತೆ ಬದಿಗಳಲ್ಲಿ ಓಡಾಡುವುದೇ ಒಂದು ಆನಂದ. ದೋಸೆ, ಕಾಫಿ ಹಿತವಾಗಿ ಬೆರತ ಸುವಾಸನೆ ಗಾಳಿಯಲ್ಲಿ ಪಸರಿಸಿ ನಡೆದಾಡುವವರ ಮೂಗಿನ ಹೊಳ್ಳೆಯ ಸೇರಿ ಎಂತಹವರನ್ನೂ ಹೋಟೆಲ್ಲಿಗೆ ಎಳೆದು ತರುವ ಅಗಾಧ ಶಕ್ತಿ. ಮೆಚ್ಚಿ ತಲೆದೂಗಲೇಬೇಕು. ತೂಕ ಹೆಚ್ಚಿದ ಮೇಲೆ ತಲೆ ಕೆರೆದುಕೊಳ್ಳುವುದು ಇದ್ದದ್ದೇ. ಅದು ಇಲ್ಲಿ ಸ್ಥಾನ ಪಡೆಯುವುದಿಲ್ಲ. ಹಾಗೆಯೇ ಹೂವುಗಳ ಸುವಾಸನೆ ಬಗ್ಗೆ ಹೇಳದಿದ್ದರೆ ಹೇಗೆ? ಒಟ್ಟಿನಲ್ಲಿ ಮಲ್ಲೇಶ್ವರಂನಲ್ಲಿ ಓಡಾಡಿ ಆನಂದ ಪಡಬೇಕು, ಆಸ್ವಾದಿಸಬೇಕು.
ಜನತಾ ಹೋಟೆಲ್ ಪ್ರವೇಶಿಸಿ, ಆರಾಮವಾಗಿ ವಿರಮಿಸಿ, ನಾನು ಇಡ್ಲಿಯನ್ನು, ಅಮ್ಮ ಮಸಾಲದೋಸೆಯನ್ನು, ರಮ್ಯ ಖಾಲಿ ದೋಸೆಯನ್ನು ತಿನ್ನಲು ಸಜ್ಜಾದೆವು. ನಮ್ಮ ಪಕ್ಕದ ಟೇಬಲ್ ಸರ್ವೆ ಮಾಡುವ ಮಾಣಿ ಕೈತಪ್ಪಿ ಏನೋ ಬೀಳಿಸಿದ. ಶುರುವಾಯ್ತು ನೋಡಿ ಸಹಸ್ರನಾಮ. ಗಲ್ಲಾ ಪೆಟ್ಟಿಗೆಯ ಮೇಲೆ ಕೂತ ಆಸಾಮಿ, ಬಹುಶಃ ಮಾಲೀಕನಿರಬಹುದು. `ಏಯ್, ಸರಿಯಾಗೆ ಸರ್ವೆ ಮಾಡೋಕೆ ಬರಲ್ವಾ? ಇಲ್ಲೇನು ಶಾ. . . .ತರಿಯೋಕೆ ಬಂದಿದಿಯಾ?’ ಇನ್ನೂ ಏನೇನೋ ತೀರವೇ ತುಚ್ಚವಾದ ಪದಗಳಿಂದ ಆ ವ್ಯಕ್ತಿಯನ್ನು ನಿಂದಿಸತೊಡಗಿದ. ಸುತ್ತಲ ಜನರೆಲ್ಲಾ ಯಾವುದಕ್ಕೂ ಪ್ರತಿಕ್ರಿಯಿಸದೆ ತಮ್ಮಪಾಡಿಗೆ ತಾವು ತಿನ್ನುವುದರಲ್ಲಿ ಮಗ್ನರಾಗಿದ್ದರು.., ನನ್ನ ಮನಸ್ಸು ಮಾತ್ರ ಬಾರ್ಸಿಲೋನಾದ ನೆನಪುಗಳೊಂದಿಗೆ ಬೆಸುಗೆ ಹಾಕತೊಡಗಿತು. ಅಕಸ್ಮಾತ್ (ಈ ರೀತಿ ಆಗೋದೇ ಇಲ್ಲ, ಅದಕ್ಕೆ ಅಕಸ್ಮಾತ್ ಪದ ಬಳಸಿದೆ)ಬಾರ್ಸಿಲೋನಾದಲ್ಲಿ ಏನಾದ್ರೂ ಮಾಲೀಕ ಈ ರೀತಿ ಕಿರುಚಾಡಿದ್ರ್ರೆ, ಕಾರ್ಮಿಕ ಸರಾಸರಿ ವರ್ಷದ ವೇತನ ಪಡೆದು ಮನೆಯಲ್ಲಿ ವಿರಮಿಸುತ್ತಿದ್ದ, ಸಾಲದ್ದಕ್ಕೆ ಸರ್ಕಾರ ಆತನ ಮನಸ್ಥಿತಿ ಬಗ್ಗೆ ವರದಿ ಒಪ್ಪಿಸಲು ತಿಂಗಳಿಗೊಮ್ಮೆ ಮನೋವೈದ್ಯರನ್ನು ಕಳಿಸುತ್ತಿದ್ದರು.. ಮಾಲೀಕನ ಅದೃಷ್ಟ ಕೆಟ್ಟು ಮನೋ ವೈದ್ಯನೇನಾದರೂ ಇನ್ನೊಂದು ವರ್ಷ ಈತ ಮಾನಸಿಕವಾಗಿ ಪೂರ್ಣ ಫಿಟ್ ಆಗಲ್ಲ ಕೆಲಸಮಾಡಲು ಅಂತ ಸರ್ಟಿಫಿಕೇಟ್ ಕೊಟ್ಟರೆ ಮುಗಿಯಿತು ಮಾಲೀಕನಿಗೆ ಸಜೆ, ಕಾರ್ಮಿಕನಿಗೆ ಭತ್ಯೆಯೊಂದಿಗೆ ರಜೆ.
ಅಷ್ಟೊಂದು ಗ್ರಾಹಕರೆದುರು ತನ್ನ ಕಾರ್ಮಿಕನನ್ನು ಈ ರೀತಿ ಹೀನಾಯ ಪದಗಳಿಂದ ನಿಂದಿಸುವ ಹಕ್ಕನ್ನು ಇವರಿಗೆ ಕೊಟ್ಟವರಾರು? ಬಡವನಾಗಿ ಹುಟ್ಟಿದ್ದೇ ಆತನ ಪಾಪವೆ? ಇಷ್ಟಕ್ಕೂ ಮಾಡಿದ ಮಹಾಪರಾಧವಾಧರೂ ಏನು? ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಒಮ್ಮಲೇ ಮುತ್ತಿಗೆ ಹಾಕಿದ್ದರಿಂದಲೋ ಏನೋ ಇಡ್ಲಿ ರುಚಿಸಲಿಲ್ಲ. ಅಮ್ಮ, ರಮ್ಯರ ಸ್ಥಿತಿ ನನಗಿಂತ ಭಿನ್ವಾಗಿರಲಿಲ್ಲ ಎಂಬುದು ಅವರ ಮುಖವೇ ಹೇಳುತ್ತಿತ್ತು.
ಅದು ಕನ್ನಡ, ನಮ್ಮ ಕರ್ನಾಟಕದಲ್ಲಿ ಬೆಂಗಳೂರಿನ ಬಗ್ಗೆ ಬಣ್ಣ ಬಣ್ಣದ ಚಿತ್ರಣಗಳ ಕಾಡು, ನಮ್ಮ ಬೆಂಗಳೂರು ಯಾರ್ಗೂ ಕಮ್ಮ್ಮಿ ಇಲ್ಲ ಅಂಥ ಬಾರ್ಸಿಲೋನದಲ್ಲಿ ಕೂತು ಉಬ್ಬುತ್ತಿದ್ದ ನನಗೆ ಒಮ್ಮಲೇ ಆಭಾಸವಾಯಿತು. ತೀರ ಇತ್ತೀಚಿನ ಘಟನೆ ಹೇಳ್ತೀನಿ, ಫೆಬ್ರವರಿ ಮಧ್ಯದಲ್ಲಿ ನನ್ನ ಕಚೇರಿಗೆ ಹೊಸದಾಗಿ `ಫ್ರಾನಸೆಸಿಯ’ ಎಂಬಾಕೆ ಕೆಲಸಕ್ಕೆ ಸೇರಿದಳು. ಆಕೆಗೆ ಕೊಟ್ಟಿದ್ದು ಆರು ತಿಂಗಳ `ವರ್ಕ್ ಕಾಂಟ್ರಾಕ್ಟ್’. ಈ ಭಾಗದಲ್ಲಿ ಬಹುಶಃ ಹೀಗೆ ಆರುತಿಂಗಳು, ವರ್ಷ, ಎರಡು ವರ್ಷ, ಕೆಲಸಕ್ಕೆ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುತ್ತಾರೆ. `ಜೀವಾವಧಿ’ ಕೆಲಸದ ಕಾಂಟ್ರಾಕ್ಟ್ ಇರುವವರ ಸಂಖ್ಯೆ ಬಹಳ ಕಡಿಮೆ.
ವಾರ ಕೆಲಸ ಮಾಡಿದ ಆಕೆ, ಮರುವಾರ ಬಂದವಳೇ ತನಗೆ ಕೂರಲು ಆಗುತ್ತಿಲ್ಲ ತೊಡೆಯ ಭಾಗದಲ್ಲಿ ಸಣ್ಣ ಕುರುವಾಗಿದೆ ಎಂದು ಡಾಕ್ಟರ್ ಸರ್ಟಿಫಿಕೇಟ್ ಕೊಟ್ಟು ಹೋದವಳು ಮಾರ್ಚ್ 18ರವರೆಗೆ ಮುಖ ತೋರಿಸಿಲ್ಲ. ಆಗಾಗ ಫೋನ್ ಮಾಡಿ ವಿಚಾರಿಸಿದರೆ, ಆದಾಗ ಬರ್ತೀನಿ ಅಂತ ನವಿರಾಗಿ ನುಲಿಯುತ್ತಾಳೆ.
ಇದೂ – ಜನತಾ ಹೋಟೆಲ್ಲಿನ ಮಾಣಿಯ ಘಟನೆ ಎರಡೂ ಮನದಲ್ಲಿ ಭತ್ತ ಕುಟ್ಟಿದಂತೆ ಕುಟ್ಟುತ್ತಲೇ ಇದೆ. ಎಲ್ಲಾ ಮಾಧ್ಯಮಗಳಲ್ಲೂ `ಅಮೆರಿಕಾದಿಂದ, ಯೂರೋಪಿನಿಂದ ಭಾರತೀಯರು ವಾಪಸ್ಸು ಬರುತ್ತಿದ್ದರೆ, ಅವರೆಲ್ಲರ ಕಣ್ಣು ಬೆಂಗಳೂರ ಮೇಲೆ’ ಇನ್ನೂ ಏನೇನೋ ರಂಗು ರಂಗಾಗಿ ವರ್ಣಿಸಿ ಬರೆಯುತ್ತಾರೆ. ಹತ್ತು ಸಾವಿರ ವೇತನ ಬಂದರೆ ಸಾಕೆ? ಮಾನವತೆಯೇ ಇಲ್ಲದೆ ಮೇಲೆ?
ಗಾಳಿಪಟವನ್ನು, ಮುಂಗಾರು ಮಳೆಯನ್ನು ನೋಡಿ.. ಬೆಂಗಳೂರಿನ ಮಾಲ್ನಲ್ಲಿ ನಲಿದಾಡಿ, ಸೈಬರ್ ಕೂಲಿಗಳಾಗಿ ದುಡಿದು ಇಂಗ್ಲಿಷ್ನಲ್ಲಿ ಮಾತಾಡಿ, ವಾರಾಂತ್ಯದಲ್ಲಿ ಪಬ್ನಲ್ಲಿ ಲೇಟ್ ನೈಟ್ ಪಾರ್ಟಿ ಮಾಡಿ ಮನಸ್ಸಿನಲ್ಲಿ ಅಂತ್ಕೋತಾರೆ – ಬೆಂಗಳೂರಿನಲ್ಲಿ ಏನಿಲ್ಲಾ? ನಾವ್ಯಾರಿಗೂ ಕಮ್ಮಿ ಇಲ್ಲಾ..!
ಜನತಾ ಹೋಟೆಲ್ಲಿನ ಮಾಣಿ ಮಾತ್ರ ಅಷ್ಟೆಲ್ಲಾ ಉಗಿಸಿಕೊಂಡು ನಿಮಿಷ ಕೂಡ ಬ್ರೇಕ್ ತೆಗೆದುಕೊಳ್ಳದೆ ಕೆಲಸದಲ್ಲಿ ತೊಡಗುತ್ತಾನೆ..! ಯಾಕೇಂದ್ರೆ, ಬೆಂಗಳೂರು ಬದಲಾಗಿರುವುದು ಕೇವಲ ಕೆಲವೇ ಕೆಲವರಿಗೆ, ಅವನಿಗಲ್ಲ .. ನೋಡಿ.
ಘಟನೆ ನಾಲ್ಕು : ನಾರಾಯಣ ನೇತ್ರಾಲಯ
ಹತ್ತನೇ ತರಗತಿ ಮುಗಿದು ಮೊದಲನೇ ಪಿ.ಯು.ಸಿ.ಗೆ ಕಾಲಿಡುವುದಕ್ಕೆ ಮುಂಚಿನಿಂದ ಉಪಯೋಗಿಸಲು ಪ್ರಾರಂಭಿಸಿದ್ದೆ ಕನ್ನಡಕವನ್ನು. ಸರಿ ಸುಮಾರು ಹದಿನೆಂಟು ವರ್ಷದ ಸಂಗಾತಿ, ದೇಹದ ಒಂದು ಅವಿಭಾಜ್ಯ ಅಂಗವೇ ಆಗಿಹೋಗಿರುವ ಈ ಕನ್ನಡಕವೆಂಬ ಗೆಳತಿಯನ್ನು ಬಿಡುವುದೆಂದು ತೀರ್ಮಾನಿಸುವುದು ಕಷ್ಟವೇ ಆಗಿತ್ತು. ಲೇಜಿಕ್ಸ್ ಸರ್ಜರಿಯೆಂಬ 10-12 ನಿಮಿಷದ ಶಸ್ತ್ರಕ್ರಿಯೆಯಿಂದ ನಮ್ಮ ಕಣ್ಣ ದೃಷ್ಟಿ ಸಾಧಾರಣವಾಗಿಸಬಹುದಂತೆ..! ಇದನ್ನು ನಾಲ್ಕಾರು ವರ್ಷದ ಹಿಂದೆಯೇ ಕೇಳಿದ್ದೆ. ಆದರೆ ನಾನು ಮಾಡಿಸಿಕೊಳ್ಳಬೇಕು ಅಂತ ಅನಿಸಿರಲಿಲ್ಲ. ಯಾಕೆ ಅಂತ ಗೊತ್ತಿಲ್ಲ. ಈ ಭಾರಿ ಇದ್ದಕ್ಕಿದ್ದಂತೆ ಈ ಆಸೆ ಗರಿಗೆದರಿ, ಸರಿ ಅದನ್ನು ನೋಡಿಯೇ ಬಿಡುವ ಎಂಬ ಭಾವದಲ್ಲಿ ನಾರಾಯಣ ನೇತ್ರಾಲಯಕ್ಕೆ ಅಮ್ಮನೊಂದಿಗೆ ಪ್ರವೇಶಿಸಿದೆ. ಪ್ರವೇಶ ದ್ವಾರದಲ್ಲೇ ನಮ್ಮನ್ನು ನವಿರಾಗಿ ತಡೆದು ರೋಗಿಯ ಗುರುತಿನ ಚೀಟಿ ಕೇಳಿದರು. ಇಲ್ಲವೆಂದಾಗ ಪ್ರಥಮ ಭೇಟಿಯೇ ಎಂದು ಪ್ರಶ್ನಿಸಿ, ಹಣ ಪಡೆದು ಹದಿನೈದು ನಿಮಿಷದಲ್ಲಿ ಸಣ್ಣ ಲ್ಯಾಮಿನೇಟ್ ಮಾಡಿದ ಕಾರ್ಡ್ ನೀಡಿದರು. ಅದು ಗುರುತಿನ ಚೀಟಿ. ನನ್ನನ್ನು ಡಾ. ಆನಂದ್ ಎಂಬವರ ಬಳಿಗೆ ಕಳುಹಿಸಿಕೊಟ್ಟರು. ಡಾ. ಆನಂದ್ ಅವರನ್ನು ಭೇಟಿ ಮಾಡುವುದಕ್ಕೆ ಮುಂಚೆ ಹತ್ತಾರು ಮಂದಿ ನನ್ನ ಕಣ್ಣನ್ನು ಪರೀಕ್ಷಿಸಿದರು. ಅಲ್ಲಿ ಕೆಲಸ ಮಾಡುವ ಬಹುಮಂದಿ ಹುಡುಗರು ಕನ್ನಡಿಗರು. ಸಹೃದಯಿಗಳು. ತುಂಬ ವಿನಯದಿಂದ ಮಾತನಾಡಿಸಿದರು. ಎಷ್ಟೆಂದರೆ ಕೆಲವೊಮ್ಮೆ ನಾನೇನು ಬೆಂಗಳೂರಿನಲ್ಲೇ ಇರುವೆನೋ ಎಂದು ಅನುಮಾನ ಬರುವಷ್ಟು. ಮನಸ್ಸು ಹಕ್ಕಿಯಂತೆ ಹಾರಲು ಇನ್ನೇನು ಬೆಕು ಹೇಳಿ. ಖುಷಿಯಿಂದ ಅಮ್ಮ ಅಲ್ಲಿಯ ಹುಡುಗರಿಗೆ `ವೀರ ಕನ್ನಡಿಗರು’ ಎಂದೇ ಹೆಸರಿಟ್ಟಳು.
ಸರಿಸುಮಾರು ಎರಡು ಗಂಟೆ ಅವರಿವರು ತಪಾಸಣೆ ನಡೆಸಿ ಕೊನೆಗೆ ಡಾ. ಆನಂದ್ ಬಳಿಗೆ ನನ್ನನ್ನು ಕರೆದೊಯ್ದರು. ಆನಂದ್ರವರ ರೂಂ ಪ್ರವೇಶಿಸುತ್ತಿದ್ದಂತೆ `ಗುಡ್ ಮಾರ್ನಿಂಗ್ ಡಾಕ್ಟರ್’ ಎಂದೆ. ಅಚ್ಚರಿಯಿಂದ ತಲೆಯೆತ್ತಿ ಧ್ವನಿಬಂದತ್ತ ದೃಷ್ಟಿ ಹಾಯಿಸಿದರು. `ಗುಡ್ ಮಾರ್ನಿಂಗ್’ ಬನ್ನಿ ಕುಳಿತುಕೊಳ್ಳಿ ಅಂದ್ರ್ರು. ಐದಾರು ನಿಮಿಷ ನನ್ನ ಕಣ್ಣನ್ನು `ಬೆಳಕು’ ಹಿಡಿದು ನೋಡಿ ಲೇಜಿಕ್ಸ್ ಮಾಡಬಹುದು. ಆದ್ರೆ ರೇಟಿನಾ ಸ್ಪೆಷಲಿಸ್ಟ್ ಹತ್ರ ಒಮ್ಮೆ ಸೆಕಂಡ್ ಒಪಿನಿಯನ್ ತಗೊಳ್ಳೊದು ಒಳ್ಳೆಯದು ಅಂದರು. ಸರಿ ಹಾಗೇ ಆಗಲಿ ಅಂದಳು ಅಮ್ಮ.
ರೇಟಿನಾ ಸ್ಪೆಷಲಿಸ್ಟ್ ನೋಡಿದವರು ` ಡ್ಯೂ ಟು ಮಯೋಫಿಯ ಬಲಗಣ್ಣಿನಲ್ಲಿ ರಂಧ್ರ ಆಗಿದೆ. ಆದರೆ ಅದೇನೂ ಸೀರಿಯಸ್ ಅಲ್ಲ. ಲೇಸರ್ ಟ್ರೀಟ್ಮೆಂಟ್ ನೀಡಿ ಅದನ್ನು ಮುಚ್ಚುತ್ತೇವೆ’ ಅಂದ್ರರು. ಸರಿ ಅನ್ನದೆ ನಮ್ಮ ಬಳಿ ಬೇರೆ ಯಾವುದೇ ದಾರಿ ಇರಲಿಲ್ಲ. ಒಮ್ಮೆ ಶರಣೆಂದು ಬಂದಾಯಿತು, ನಂಬಿ ಕೆಟ್ಟವರಿಲ್ಲವೋ ಎಂಬ ದಾಸರ ಪದವು ಜ್ಞಾಪಕಕ್ಕೆ ಬಂದು ಸರಿಯೆಂದೆವು.
ಲೇಸರ್ ಟ್ರೀಟ್ಮೆಂಟ್ ಕೂಡ ಐದಾರು ನಿಮಿಷವಷ್ಟೇ, ಸ್ವಲ್ಪ ನೋವಾಯಿತು. ಆದರೆ ತಡೆಯಲಾಗದಷ್ಟೇನಲ್ಲ. ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳಿ, ಆಮೇಲೆ ಲೇಜಿಕ್ಸ್ ಮಾಡಿಸ್ಕೋಬಹುದು ಅಂದರು. ಸರಿಯೆಂದು ಮನೆ ತಲಪಿದೆವು.
ತಿಂಗಳಿಗೆಂದು ಊರಿಗೆ ಬಂದಾಗ ಗೊತ್ತಾಗುತ್ತದೆ ತಿಂಗಳು ಎಷ್ಟು ಸಣ್ಣದೆಂದು. ಅದಕ್ಕೆ ಸರಿಯಾಗಿ ಈ ರೀತಿಯ ಯಾವುದಾದರೂ ಕೆಲಸ ಹಚ್ಚಿಕೊಂಡರಂತೂ ಮುಗಿದೇ ಹೋಯಿತು. ತಿಂಗಳೆಂಬುದು ಚಿಟಿಕೆಯಂತೆ ಕಳೆದುಬಿಡುತ್ತದೆ. ವಾರದ ನಂತರ ಮತ್ತೆ ನಾರಾಯಣ ನೇತ್ರಾಲಯಕ್ಕೆ ಹೋದೆವು. ಈ ಬಾರಿ ಅಮ್ಮ ಸ್ವಲ್ಪ ಆತಂಕಗೊಂಡವಳಂತೆ ಕಂಡಳು. `ಅಂತಾ ಚೆನ್ನಾಗಿ ಕನ್ನಡಕ ಹಾಕ್ಕೊಂಡು ಓಡಾಡಿಕೊಂಡಿರುವ ಮಗ ಯಾಕೆ ಇಲ್ಲದ ಉಸಾಬರಿ ಎಳ್ಕೊಂಡ’ ಅಂತ ಅಂದುಕೊಂಡಿರುತ್ತಾಳೆ ಖಂಡಿತ. ಆದರೆ ನನಗೆ ಹೇಳಲಿಲ್ಲ. ಮಗನ ಖುಷಿಗೆ ಏಕೆ ಅಡ್ಡಿ ಬರಬೇಕೆಂಬ ಭಾವ ಮಾತೃ ಹೃದಯದ್ದು.
ನನ್ನನು ಆಪರೇಷನ್ ರೂಂಗೆ ಕರೆದೊಯ್ದರು. ಆಪರೇಷನ್ ರೂಂಗೆ ಪ್ರವೇಶಿಸುವ ಮೊದಲು ನನ್ನ ಕೈಗೆ ಇಂಗ್ಲಿಷಿನಲ್ಲಿದ್ದ ಒಂದು ಹಾಳೆಯನ್ನು ಕೊಟ್ಟರು. ಅದರಲ್ಲಿ ಸಹಿ ಹಾಕಿ ಸಾರ್ ಅಂದ್ರು. ನನ್ನ ಜೀವದ ಗೆಳತಿ ಕನ್ನಡಕವಿಲ್ಲದೆ ಓದುವುದು ಕಷ್ಟವೇ ಆಯಿತು. ಅಮ್ಮ – ರಮ್ಯ ಕೂಡ ಜೊತೆಯಲ್ಲಿಲ್ಲ, ಕಷ್ಟಪಟ್ಟು ಓದತೊಡಗಿದೆ. ಅದರಲ್ಲಿದ್ದ ಸಾರಾಂಶ ಇಷ್ಟು :
ಡಾ. ಆನಂದ್ ಆಪರೇಷನ್ಗೂ ಮೊದಲೇ ಇದರಲ್ಲಿನ ಸಾಧಕ-ಬಾಧಕಗಳನ್ನು ರೋಗಿಗೆ ವಿವರವಾಗಿ ತಿಳಿಸಿರುತ್ತಾರೆ. ಈ ಸಂಬಂಧ ಮರುಪರೀಕ್ಷೆ ಮಾಡಬೇಕಾಗಬಹುದು, ಕಣ್ಣು ನವೆಯಾಗಬಹುದು, ದೃಷ್ಟಿ ಪೂರ್ಣ ಸರಿಹೋಗದೆ ಇರಬಹುದು. ಹೀಗಾದಾಗ ರೋಗಿ ಎರಡನೇ ಬಾರಿ ಆಪರೇಷನ್ ಮಾಡಿಸಿಕೊಳ್ಳಲು ಕೂಡ ಒಪ್ಪಿರುತ್ತಾರೆ ಇತ್ಯಾದಿ ಇತ್ಯಾದಿ.
ಮನಸ್ಸು ಯುದ್ಧ ಸಾರೆಂದಿತು. ಬುದ್ದಿ ನಿಧಾನಿಸು ಎಂದಿತು. ಆ ಪೇಪರ್ ಕೊಟ್ಟವನನ್ನು ಉದ್ದೇಶಿಸಿ `ಏನ್ರಿ ಇದು ಕೊನೆ ಘಳಿಗೆಯಲ್ಲಿ ಕೈಗೆ ಇಂಥ ಶಾಕ್ ಕೊಟ್ರಲ್ರಿ’ ಅಂದೆ. ಅಯ್ಯೋ ಅದೇನೂ ಇಲ್ಲಾ ಸಾರ್, ಜಸ್ಟ್ ಫಾರ್ಮಾಲಿಟಿ, ನೀವೇನೂ ಯೋಚನೆಮಾಡಬೇಡಿ, ಸಹಿ ಹಾಕಿ ಅಂದ. ಸ್ವಾಮಿ ಶ್ರೀ ಸೀಬಿ ನರಸಿಂಹ ನಿನ್ನ ಪಾದವೇ ಗತಿ ಅಂದು ಸಹಿ ಹಾಕಿದೆ. ನನ್ನ ಕಣ್ಣು ಚೆನ್ನಾಗಿದೆ, ಈ ಎಲ್ಲಾ ವಿವರಗಳನ್ನು ಬರೆಯಲು ಮಹತ್ತರ ಸಹಾಯವನ್ನು ಕೂಡ ನೀಡಿದೆ.
ನಾರಾಯಣ ನೇತ್ರಾಲಯದಂತಹ ಒಂದು ಸಂಸ್ಥೆಯವರು `ಈ ಒಂದು ಅವ್ಯವಸ್ಥೆ`ಯಲ್ಲಿ ಏಕೆ ಸಿಕ್ಕಿಹಾಕಿಕೊಂಡಿರುವರೋ ಅನ್ನಿಸಿತು. ರೋಗಿ ಆಪರೇಷನ್ ರೂಂನಲ್ಲಿ ಏನು ಅಂತ ತಾನೆ ತೀರ್ಮಾನ ತೆಗೆದುಕೊಳ್ಳೋಕೆ ಆಗುತ್ತೆ? ಡಾಕ್ಟರ್ ಆದವರು ಒಂದೈದು ನಿಮಿಷ ಪ್ರೀತಿಯಿಂದ ಹೀಗಿದೆ ಅಂತ ಬಾಯ್ಬಿಟ್ಟು ಹೇಳಿದರೆ ಕಳೆದುಕೊಳ್ಳುವುದಕ್ಕಿಂತ ಗಳಿಸುವುದೇ ಹೆಚ್ಚು. ರೋಗಿಯ ವಿಶ್ವಾಸ ಜಯಿಸಿಬಿಟ್ಟರೆ ಅರ್ಧ ಕೆಲಸವಾದಂತೆ ಎಂದು ತಿಳಿಯದವರೆ ನಾರಾಯಣ ನೇತ್ರಾಲಯದವರು?
ನನ್ನ ಕಣ್ಣು ಚೆನ್ನಾಗಿದೆ, ಅಲ್ಲಿನ ಸಿಬ್ಬಂದಿಯು ಜನರೊಂದಿಗೆ ನಡೆದುಕೊಂಡ ರೀತಿ ಕೂಡ ವಂದನೀಯವ. ಈ ಸಣ್ಣ ಲೋಪವೊಂದನ್ನು ಬಿಟ್ಟು. `ಮೈಯೆಲ್ಲಾ ಬಂಗಾರ, ಮೂಗು ಮಾತ್ರ ಹಿತ್ತಾಳೆ’ ಎನ್ನುವಂತಾಗಬಾರದಲ್ಲವೆ?
ನಾರಾಯಣ ನೇತ್ರಾಲಯ ಈ ವಿಷಯದತ್ತ `ಕಣ್ಣು’ ಬಿಟ್ಟು ನೋಡುವುದೆ?






Sir,
Now in india, everything is business, eye hospitals simply spoil good eyes of the patients just by operating, just to make money.so sad!
ಫೇಸ್ ಬುಕ್ ಗೋಡೆಯಿಂದ ನಮ್ಮ ರಂಗಸ್ವಾಮಿಯನ್ನು ಅವಧಿ ಅಂಗಳಕ್ಕೆ ಕರೆತಂದ ‘ಸಂಧ್ಯಾಕ್ಕ’ನಿಗೆ ವಂದನೆಗಳು.
Excellent Article. Very true. Nicely written. I live in the USA and this is what I experience when I go to India once in few years.