ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಂಗಳೂರು ಥಿಯೇಟರ್ ಕಂಪನಿಯಿಂದ ’ಚೆರ್ರಿ ತೋಟ’

ಬೆಂಗಳೂರು ಥಿಯೇಟರ್ ಕಂಪನಿ
ಮೂರು ನಾಲ್ಕು ಗೆಳೆಯರು ಸೇರಿ ,ಕನ್ನಡರಂಗಭೂಮಿಯಲ್ಲಿಉತ್ತಮ ನಾಟಕಗಳ ರಚನೆ, ನಿರ್ಮಾಣ ಮತ್ತು ಕನ್ನಡ ರಂಗಭೂಮಿಯಲ್ಲಿ ವೃತ್ತಿ ಪರತೆ ಮೂಡಿಸುವಲ್ಲಿ ಇಟ್ಟ ಮೊದಲ ಹೆಜ್ಜೆ ‘ಬೆಂಗಳೂರು ಥಿಯೇಟರ್ ಕಂಪನಿ’. ಈ ಯುವತಂಡದ ಮೊದಲ ಪ್ರಯತ್ನ ‘ಚೆರ್ರಿತೋಟ’
 
ನಾಟಕದ ಬಗ್ಗೆ:
ರಷ್ಯಾದ ಮಹಾನ್ ಲೇಖಕ, ನಾಟಕಕಾರ ಆಂಟನ್ ಚೆಕಾಫ್ 1904 ರಲ್ಲಿ ಬರೆದ ತನ್ನ ಕೊನೆಯ ನಾಟಕ `ದಿ ಚೆರ್ರಿ ಆರ್ಚರ್ಡ್ ವಿಶ್ವದ ಶ್ರೇಷ್ಟ ನಾಟಕ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.ಬದಲಾದ ಸಾಮಾಜಿಕ, ರಾಜಕೀಯ ವ್ಯವಸ್ಥೆಗಳು ತೋರಬಹುದಾದ ಪಲ್ಲಟಗಳು, ಸ್ಥಿತ್ಯಂತರಗಳನ್ನು ಒಂದು ಚೆರ್ರಿ ತೋಟದ ಪ್ರತಿಮೆಯ ಮೂಲಕ ಹೆಣೆದಿರುವ ಚೆಕಾಫ್ ಈ ನಾಟಕತನ್ನದೇಶ, ಕಾಲಗಳನ್ನು ಮೀರಿ ಪ್ರಸ್ತುತವಾಗಿದೆ.
ನಾಟಕದ ಕೇಂದ್ರವಾದ ಚೆರ್ರಿತೋಟ, ಹಲವು ಪ್ರತಿಮೆಗಳ ಸಂಕೇತವಾಗಿಕಾಣುತ್ತದೆ. ಬಾಲ್ಯದ ಸುಂದರ ನೆನಪುಗಳ ಪ್ರತೀಕವಾಗಿ ಒಮ್ಮೆ ಚೆರ್ರಿತೋಟ ಕಂಡರೆ, ಪರಿಸರ-ಪೃಕೃತಿಯ ಸುಂದರ ದೃಶ್ಯವಾಗಿ ಕೂಡ ಕಾಣುತ್ತದೆ.ಅಷ್ಟೇ ಅಲ್ಲದೆ, ಶತಮಾನಗಳ ಕಾಲ ಜನಸಮುದಾಯದಲ್ಲಿ ಬೇರು ಬಿಟ್ಟಿರುವ ನಂಬಿಕೆಯಾಗಿ ಕೂಡ ಚೆರ್ರಿ ತೋಟ ಗೋಚರಿಸುತ್ತದೆ. ಹೀಗೆ ಹಲವು ಧ್ವನಿಗಳನ್ನು, ಹಲವು ಅರ್ಥಗಳನ್ನು ಹೊಮ್ಮಿಸುತ್ತಾ ಸಾಗುವ ನಾಟಕ, ಭಾರತದಂತ ಭಿನ್ನ ವ್ಯವಸ್ಥೆಯಲ್ಲೂ ಪ್ರಸ್ತುತವಾಗಿ ಕಾಣುವ ಮೂಲಕ ಸಾರ್ವಕಾಲಿಕ ಶ್ರೇಷ್ಟ ನಾಟಕವೆಂದೆನಿಸಿಕೊಳ್ಳುತ್ತದೆ. ಒಂದು ಕಡೆ ಜಮೀನ್ದಾರಿ ಪದ್ದತಿಯ ಪಾಳೇಗಾರೀ ಮೌಲ್ಯಗಳನ್ನು ಉಳಿಸಿಕೊಳ್ಳುತ್ತ, ಪೋಷಿಸುತ್ತಾ, ಮತ್ತೊಂದು ಕಡೆ ಉದಾರೀಕರಣ, ಮುಕ್ತ ಮಾರುಕಟ್ಟೆಯ ಬಂಡವಾಳ ಷಾಹಿ ವ್ಯವಸ್ಥೆಗೆ ತನ್ನನ್ನು ತೆರೆದುಕೊಳ್ಳುತ್ತ, ಸಮಾಜವಾದದ ಕನಸನ್ನೂ ಕಾಣುತ್ತ ಸಾಗುತ್ತಿರುವ ಭಾರತದ ಪರಿಸ್ಥಿತಿಯಲ್ಲಿ, ಚೆರ್ರಿತೋಟವನ್ನು ಗಟ್ಟಿ ಬೇರು ಬಿಟ್ಟ ಸಾಮಾಜಿಕ ವ್ಯವಸ್ಥೆಯೊಂದರ ಪ್ರತೀಕವಾಗಿ ನೋಡಲು ನಾವು ಪ್ರಯತ್ನಿಸಿದ್ದೇವೆ.
 
 
ನಿರ್ದೇಶಕರ ಬಗ್ಗೆ
ಕಳೆದ 15ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿರುವ ವೆಂಕಟೇಶ್ ಪ್ರಸಾದ್, ಇತ್ತೀಚಿನ ವರ್ಷಗಳಲ್ಲಿ ಕನ್ನಡ ರಂಗಭೂಮಿಯಲ್ಲಿ ಪ್ರಮುಖವಾಗಿ ಕಾಣುತ್ತಿರುವ ನಟ ಮತ್ತ ಸಂಘಟಕ. ಬಹುಪಾಲು ರಂಗಭೂಮಿಯ ಸಾಂಗತ್ಯವನ್ನು ‘ಸಮುದಾಯ’ ಸಂಘಟನೆ ಜೊತೆ ಅಂದರೆ ಸುಮಾರು 10 ವರ್ಷಗಳ ಕಾಲ ಸಮುದಾಯದ ಜೊತೆ ಗುರುತಿಸಿಕೊಂಡಿರುವ ವೆಂಕಟೇಶ್ ಪ್ರಸಾದ್, ರಂಗಭೂಮಿಯ ಮತ್ತು ಸಂಘಟನೆಯ ಪಾಠಗಳನ್ನು ಕಲಿತಿದ್ದು ಸಮುದಾಯದಲ್ಲಿ. ಎಮ್ ಎಸ್ ಸತ್ಯು ಅವರ ‘ಕುರಿ’ ನಾಟಕದಲ್ಲಿ ಪಾತ್ರ ಮಾಡುವ ಮೂಲಕ ಸಮುದಾಯ ಪ್ರವೇಶಿಸಿದ ಇವರು, ಸಮುದಾಯದ ನಂತರದ ಎಲ್ಲಾ ಚಟುವಟಿಕೆಗಳ ಭಾಗವಾದ ಇವರು, ಸಂಘಟನೆಯಲ್ಲೂ ಪ್ರಮುಖ ಪಾತ್ರವಹಿಸುತ್ತ, ಕಳೆದ 3 ವರ್ಷಗಳಿಂದ ಸಮುದಾಯ, ಬೆಂಗಳೂರಿನ ಕಾರ್ಯದರ್ಶಿಯಾಗಿದ್ದರು. ಎಮ್ ಎಸ್ ಸತ್ಯು, ನಟರಾಜ್ಹೊನ್ನವಳ್ಳಿ, ಪ್ರಮೋದ್ ಶಿಗ್ಗಾಂವ್, ಪ್ರಕಾಶ್ ಬೆಳವಾಡಿ, ಶ್ರೀಪಾದ ಭಟ್, ಸ್ಯಾಮ್ಕುಟ್ಟಿ ಪಟ್ಟಂಕರಿ ಮುಂತಾದ ಪ್ರಮುಖ ನಿರ್ದೇಶಕರ ಜೊತೆ ಕೆಲಸ ಮಾಡಿರುವ ಇವರು, ಸಮುದಾಯದ ಪ್ರಮುಖ ನಾಟಕಗಳಾದ ‘ಕುರಿ’, ‘ಜುಗಾರಿಕ್ರಾಸ್”, ‘ಪಂಪಭಾರತ’, ಕತ್ತಲೆದಾರಿದೂರ’, ‘ಸುತ್ತಿಕೊಂಡರೆಸರ್ಪ’, ‘ಕಲ್ಯಾಣದ ಕೊನೆಯದಿನಗಳು’, ‘ನಮ್ಮ ರಾಬರ್ಟ್ ಕ್ಲೈವ್’, ‘ತುಘಲಕ್’ ಹೀಗೆ ಹಲವು ಮಹತ್ವದ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇವರು ಅಭಿನಯಿಸಿರುವ ಸಮುದಾಯದ ಇತ್ತೀಚಿನ ‘ತುಘಲಕ್’ ಕನ್ನಡ ರಂಗಭೂಮಿಯಲ್ಲೇ ವಿಶಿಷ್ಟವಾದ ಸಂಚಲನ ಮೂಡಿಸಿ ಅತಿ ಕಡಿಮೆ ಅವಧಿಯಲ್ಲಿ ಸುಮಾರು 40 ಪ್ರದರ್ಶನಗಳನ್ನು ಕಂಡಿದೆ. ಇವರ ತುಘಲಕ್ ಪಾತ್ರ ನಿರ್ವಹಣೆ ಪ್ರೇಕ್ಷಕರಿಂದಲೂ, ವಿಮರ್ಶಕರಿಂದಲೂ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ರಂಗಭೂಮಿಯಲ್ಲದೆ ಕಿರುತೆರೆ, ಸಿನಿಮಾಗಳಲ್ಲೂ ತೊಡಗಿಸಿಕೊಂಡಿರುವ ವೆಂಕಟೇಶ್ ಪ್ರಸಾದ್, ಟಿ ಎನ್ ಸೀತಾರಾಮ್ ರವರ ಬಹು ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.’ಭಗವತಿಕಾಡು’, ‘ಮಾಗಿಯಕಾಲ’ ದಂಥ ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಿದ್ದಲ್ಲದೆ ಇತ್ತೀಚಿಗಷ್ಟೆ ‘ಗಾಳಿ ಬೀಜ’ ಎಂಬ ಪ್ರಮುಖ ಪ್ರಯೋಗಾತ್ಮಕ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ರಂಗ ಭೂಮಿಯಲ್ಲಿನ ಹೊಸ ಹೆಜ್ಜೆಯೆಂಬಂತೆ, ಸಹೃದಯ ಗೆಳೆಯರೊಂದಿಗೆ ಈಗ ಹೊಸ ತಂಡ ‘ಬೆಂಗಳೂರು ಥಿಯೇಟರ್ ಕಂಪನಿ’ ಯ ಬುನಾದಿಯಾಗಿದ್ದಾರೆ.

 

‍ಲೇಖಕರು G

26 May, 2015

2 Comments

  1. narayan raichur

    venkatesha prasada mattu geleyarige shubha-harakegalu ;’ bengaluru theatre company’ naavinyateya KAMPANA vannu untu maadali – hosatanada KAMPANNU pasarisali !!- SHUBHASHAYAGALU – Narayan Raichur

    • ಸುಷ್ಮ

      ಧನ್ಯವಾದಗಳು ಸರ್ … ನಿಮ್ಮೆಲ್ಲರ ಬೆಂಬಲ ನಮಗೆ ಬಹಳ ಸ್ಪೂರ್ತಿ ತರುತ್ತದೆ.
      ಸುಷ್ಮ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading