ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಂಗಳೂರಿನಲ್ಲಿ ’ಮದರ್ ಟಂಗ್’

ಪರಮೇಶ್ವರ ಗುರುಸ್ವಾಮಿ

ಕೃಷ್ಣದೇವರಾಯನ ಆಸ್ಥಾನಕ್ಕೆ ಬಹು ಭಾಷಾಪಂಡಿತನೊಬ್ಬ ಬಂದು ತನ್ನ ಮಾತೃಭಾಷೆಯನ್ನು ಕಂಡು ಹಿಡಿಯುವಂತೆ ಸವಾಲೆಸೆಯುತ್ತಾನೆ. ಆಸ್ಥಾನ ಪಂಡಿತರೆಲ್ಲ ಪ್ರಯತ್ನಿಸಿ ಸೋತಾಗ ಎಂದಿನಂತೆ ನಮ್ಮ ತೆನಾಲಿ ರಾಮಕೃಷ್ಣ ಬಹು ಭಾಷಾಪಂಡಿತನಿಗೆ ಹೊಟ್ಟೆ ತುಂಬಾ ಗಡದ್ದಾಗಿ ಭೂರೀ ಭೊಜನ ತಿನ್ನಿಸಿ ಭೋಜನದ ಸಂತೃಪ್ತಿಯಲ್ಲಿ ಮತ್ತು ಹಿಡಿದವನಂತೆ ಮಲಗಿದ್ದ ಪಂಡಿತನ ಹೊಟ್ಟೆಯ ಮೇಲೆ ಜಟ್ಟಿಯೊಬ್ಬನ ಕೈಯಲ್ಲಿ ಬಲವಾಗಿ ಗುದ್ದು ಹಾಕಿಸಿದನಂತೆ. ಆಗ ಅಯ್ಯಯ್ಯೋ! ಅಮ್ಮ! ಅಂತ ಆ ಪಂಡಿತ ತನ್ನ ಮಾತೃಭಾಷೆಯಲ್ಲಿ ಸಂಕಟ ಪಟ್ಟನಂತೆ.
ಬೆಂಗಳೂರಿನಲ್ಲಿ ಈಗ ಅಷ್ಟೆಲ್ಲಾ ಕಷ್ಟ ಪಡಬೇಕಾಗಿಲ್ಲ. ಇಲ್ಲಿ ಕನ್ನಡೇತರರು ತಮ್ಮ ಮಾತೃಭಾಷೆಯನ್ನು ಬಿಟ್ಟು ಬೇರೇನನ್ನೂ ಮಾತನಾಡುವುದಿಲ್ಲ. ಅಗತ್ಯ ಬಿದ್ದರೆ ಮಾತ್ರ ಇಂಗ್ಲಿಷ್ ಬಳಸುತ್ತಾರೆ. ನಮ್ಮ ಯಜಮಾನರು ಬೆಂಗಳೂರಿಗೆ ಬಂದು ಮೂವತ್ತು ವರ್ಷಗಳಾದರೂ ತಮಿಳನ್ನು ಕಲಿತಿಲ್ಲ. ತಮಿಳುನಾಡಿನಿಂದ ಬಂದಿರುವ ನಮ್ಮ ಮನೆ ಕೆಲಸದವಳಿಗೆ ತಮಿಳು ಬಿಟ್ಟರೆ ಬೇರೆ ಬರುವುದಿಲ್ಲ. ಇವರಿಬ್ಬರ ಸಂಭಾಷಣೆ ನೀವು ನೋಡಬೇಕು! ನಮ್ಮ ಮನೆಯವರು ಮಲೈಶಿಯಾ (ಅನ್ಯ ಭಾಷೆಯ ಹೆಸರುಗಳ ಉಚ್ಚಾರಣೆ ಅಥವಾ ಬರವಣಿಗೆಯೊಂದು ಬಹಳ ಕಷ್ಟದ ಕೆಲಸ ಕಣ್ರಿ. ಒಡಿಶ್ಶಾ ಸರಿಯೋ ಒರಿಸ್ಸಾ ಸರಿಯೋ. ರಬೀಂದ್ರನಾಥ್ ಸರಿಯೋ ರವೀಂದ್ರನಾಥ್ ಸರಿಯೋ. ನನಗಂತೂ ತಲೆ ಕೆಟ್ಟು ಹೋಗುತ್ತದೆ.) ಇರಲಿ. ನಮ್ಮ ಮನೆಯವರು ಮಲೇಸಿಯಾಗೆ(!)ಗೆ ಹೋಗಿದ್ದಾಗ ಅಲ್ಲಿನ ತಮಿಳು ಮಾತನಾಡುವವರೆಲ್ಲ, ಏನು? ಬೆಂಗಳೂರಿನಲ್ಲಿದ್ದು ತಮಿಳು ಕಲಿತಿಲ್ಲವಾ? ಎಂದು ಆಶ್ಚರ್ಯ ಪಡುತ್ತಿದ್ದರಂತೆ!

ನಾನು ಹೇಳುವುದಕ್ಕೆ ಹೊರಟಿದ್ದು ಇದನ್ನಲ್ಲ. ವಿಷಯ ಏನೆಂದರೆ ಒಂದು ಸ್ವಯಂ ಸೇವಾ ಸಂಸ್ಥೆಯ ಕುರಿತು ಸಾಕ್ಷ್ಯಚಿತ್ರ ಮಾಡಬೇಕಿತ್ತು. ಪೂರ್ವಸಿದ್ಧತೆಗಾಗಿ ಅಲ್ಲಿನ ತಜ್ಞೆಯೊಬ್ಬರೊಡನೆ ಚಚರ್ಿಸಿ ಚಿತ್ರದ ರೂಪುರೇಶೆಯನ್ನು ಸಿದ್ಧಪಡಿಸಬೇಕಿತ್ತು. ಆಕೆಯ ತಜ್ಞತೆ ಯಾವುದರ ಬಗ್ಗೆ ಎಂದು ಹೇಳುವುದಿಲ್ಲ. ಯಾಕೆಂದರೆ ಆಕೆ ಯಾರೆಂದು ಗುರುತು ಸಿಕ್ಕಿ ಬಿಡಬಹುದು. ವಿಷಯದಲ್ಲಿ ಅವರು ಬಹಳ ಪರಿಣತೆ. ಸಮಸ್ಯೆಗಳ ಕುರಿತು ತಮ್ಮ ಸಹಾಯಕರೊಂದಿಗೆ ಚಚರ್ಿಸಿ ಸಲಹೆ ಸೂಚನೆಗಳನ್ನು ಕೊಡುತ್ತಿದ್ದುದನ್ನ ನೋಡಿದ್ದೆನಲ್ಲ. ಬಹಳ ಒಳ್ಳೆಯ ಮನಸ್ಸಿನ ಸೇವಾ ಮನೋಭಾವದ, ಕೆಲಸ ಚೆನ್ನಾಗಿ ಗೊತ್ತಿರುವ ಹೆಣ್ಣು ಮಗಳು. ಅವರ ಹೆಸರು ಸುಕನ್ಯಾ ಮಾರಪ್ಪ ಅಂತಲೋ ಸುಭದ್ರಾ ಭೊರಯ್ಯ ಅಂತಲೋ ಇರಬೇಕು. ಹೆಸರಿನಿಂದಾಗಿ ಅವರನ್ನು ಮೊದಲ ಸಲ ಭೇಟಿಯಾಗಲು ಹೊರಟಿದ್ದಾಗ ಒಬ್ಬ ಮಣ್ಣಿನ ಮಗಳನ್ನು ನಿರೀಕ್ಷಿಸಿದ್ದೆ. ಆದರೆ ಅವರು ‘ಟ್ರೇನ್ಡ್ ಇನ್ ಫಾರಿನ್, ರಿಟರ್ನಡ್ ಟು ಸವರ್್ ಇನ್ ಇಂಡಿಯಾ’! ಅಪ್ಪಟ ಕನ್ನಡಿತಿಯೊಂದಿಗೆ ಮಾತನಾಡಲು ಸಿದ್ಧವಾಗಿ ಹೋಗಿದ್ದವನಿಗೆ ಆಕೆಯ ವಿದೇಶಿ ಉಚ್ಚಾರಣೆಯ ಇಂಗ್ಲಿಷ್ನಿಂದ ಪ್ರೌಢಶಾಲೆಯ ನನ್ನ ಇಂಗ್ಲಿಷ್ ಕೀಳರಿಮೆ ತಲೆಯೆತ್ತಿ ತಬ್ಬಿಬ್ಬಾಗಿದ್ದೆ. ಒಂದೇ ಒಂದು ಕನ್ನಡ ಪದವಿಲ್ಲ. ಸಹಾಯಕರೊಂದಿಗೂ ಇಂಗ್ಲಿಷ್ನಲ್ಲೇ ಸಂವಾದ. ಅವರ ತಾಯಿ ತಂದೆ ಬಹಳ ವರ್ಷಗಳ ಹಿಂದೆಯೇ ವಿದೇಶಕ್ಕೆ ಹೋಗಿ ಅಲ್ಲಿಯೇ ನೆಲಸಿ ಈಕೆ ಅಲ್ಲಿಯೇ ಹುಟ್ಟಿ ಬೆಳದಿರಬೆಕು ಅಂದುಕೊಂಡೆ.
ಪೂರ್ವಸಿದ್ಧತೆಯ ಭಾಗವಾಗಿ ಅವರು ನನ್ನನ್ನು ಕಾರಿನಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ವಸತಿ ತರಬೇತಿ ಕೇಂದ್ರಕ್ಕೆ ಕರೆದೊಯ್ದರು. ಈಗ ಬೆಂಗಳೂರೇ ಆಗಿಬಿಟ್ಟಿರುವ ಮಾಜಿ ಹಳ್ಳಿಗಳಿದ್ದಾವಲ್ಲ. ಹಳ್ಳಿಯ ಧೋರಣೆಗಳನ್ನೂ ಉಳಿಸಿಕೊಂಡು ನಗರದ ಮನೋಭಾವಗಳನ್ನೂ ಬೆಳೆಸಿಕೊಂಡಿರುತ್ತವೆ ಇಂಥ ಹಳ್ಳಿಗಳು. ಅಂಥ ಒಂದು ಹಳ್ಳಿಯ ವಾಹನ ಮತ್ತು ಜನ ದಟ್ಟಣೆಯ ಕೂಡು ರಸ್ತೆಯಲ್ಲಿ ಕಾರಿನ ಮುಂದೆ ಒಬ್ಬ ಮನುಷ್ಯ ಅವನ ಮನೆಯೊಳಗೂ ಅಷ್ಟು ನಿರಾಳವಾಗಿ ನಡೆಯುವುದಿಲ್ಲ, ಹಾಗೆ ಕಾರಿಗೂ ದಾರಿ ಕೊಡದೆ ತಾನೂ ಮುಂದೆ ಸಾಗದೆ ಬಸವನಹುಳುವಿನ ಹಾಗೆ ಸಾಗಿಕೊಂಡೇ ಅಡ್ಡಿಯಾದ. ಇದ್ದಕ್ಕಿದ್ದ ಹಾಗೆ ಹವಾ ನಿಯಂತ್ರಿತ ಕಾರಿನೊಳಗೆ ನನ್ನ ಕಿವಿಗೆ ಬಿದ್ದ ಹೆಣ್ಣುಧ್ವನಿಯ ಮಾತುಗಳನ್ನು ತಕ್ಷಣಕ್ಕೆ ಭ್ರಮೆಯೆಂದುಕೊಂಡೆ. ಆ ಮಾತುಗಳು, ಏಯ್, ಜಲ್ದಿ ನಡಿಯೋ ಲೋಫರ್. ಅಳ್ಳಾಡ್ಸ್ಕೊಂಡ್ ಒಯ್ತಾ ಅವ್ನೆ. ಈ ಮಾತುಗಳನ್ನ ಹೊರಗೆ ಯಾರಾದರೂ ಆಡಿದರೆ ಎಂದು ನಾನು ಕಾರಿನ ಸುತ್ತ ಮುತ್ತ ಒಳಗಿಂದಲೇ ನಿರುಕಿಸಿದೆ. ಯಾರೂ ಆ ಥರದವರು ಕಾಣಲಿಲ್ಲ. ಇಷ್ಟರಲ್ಲಿ ಆ ಮನುಷ್ಯ ನಮ್ಮ ಕಾರಿಗೆ ದಾರಿ ಬಿಟ್ಟು ಕೊಟ್ಟಿದ್ದ. ಆದರೆ ತಲೆಯ ಮೇಲೆ ಹಸಿ ಹುಲ್ಲು ಹೊತ್ತುಕೊಂಡಿದ್ದ ಒಬ್ಬ ಹೆಂಗಸು ರಸ್ತೆ ದಾಟಲು ನಮ್ಮ ಕಾರಿನ ಮುಂದೆ ಅಡ್ಡಾದಳು. ಎದುರುಗಡೆಯಿಂದ ಸತತವಾಗಿ ವಾಹನಗಳು ಬರುತ್ತಿದ್ದುದರಿಂದ ದಾಟಲಾಗದೆ ನಮಗೆ ಅಡ್ಡವಾಗಿ ನಿಂತಿದ್ದಳು. ನನ್ನ ಪಕ್ಕದಲ್ಲಿ ಕಾರನ್ನು ನಡೆಸುತ್ತಿದ್ದ ‘ಫಾರಿನ್ ಬಾರ್ನ್’ ಮಹಿಳೆಯ ಬಾಯಿಂದ ಹೊರ ಬಿದ್ದ ಮಾತುಗಳು ಖಚಿತವಾಗಿ ನನಗೆ ಕೇಳಿಸಿತು ಮತ್ತು ಕಾಣಿಸಿತು ಸಹ, ಏಯ್ ಚಿನಾಲಿ. ದಾರಿ ಬಿಡೆ… ಕತ್ತೆ ಮುಂಡೆ.
ಈಗ ಹೇಳಿ. ಬೆಂಗಳೂರು ಜನರ ಮೂಲವನ್ನು ಹೊರಗೆಳೆಯುತ್ತದೆಯೋ ಇಲ್ಲವೋ.
ಸಂಕೋಚದ ಮಾತು: ಇಪ್ಪತ್ತು ವರ್ಷಗಳ ನಂತರ ಪುನಃ ಬೆಂಗಳೂರಿನಲ್ಲಿ ಕಾರನ್ನು ಓಡಿಸುತ್ತಿದ್ದೇನೆ. ಓಡಿಸುವಾಗ ನನ್ನ ಬಾಯಲ್ಲೂ ಸಂಸ್ಕೃತ ಮಾತುಗಳು ಹೊರಬೀಳುತ್ತವೆ. ಹುಟ್ಟಿದಾಗಿಂದ ನಾನು ಬಹಳ ಸುಸಂಕೃತ ಸಭ್ಯ ಮನುಷ್ಯ ಎಂದೇ ನಂಬಿಕೊಂಡಿದ್ದ ನನ್ನ ಪ್ರಬುದ್ಧ ಮಗಳೆದುರು ಮೊದಲ ಸಲ ನನ್ನ ಬಾಯಿಂದ ಸಂಸ್ಕೃತ ಹೊರಬಿದ್ದಾಗ ಏನಂದುಕೊಂಡಳೋ ಎಂದು ಮುಜುಗರ ಪಟ್ಟಿದ್ದೆ. ಈಗ ಅವಳಿಗೂ ರೂಢಿಯಾಗಿರಬಹುದು!
 

‍ಲೇಖಕರು G

10 June, 2014

3 Comments

  1. Anonymous

    Ayyo, naanu enella try maadidhru illi kannadadalli type maadokaagdhe irodhe dodd’ dhurantha! namm system softwaregalige kannada yaavaga nirargalavaagi baruttho gotthilla.
    -Kodagina Ganesh

  2. ಪರಮೇಶ್ವರ ಗುರುಸ್ವಾಮಿ

    Ganesh, I am using ‘panini keypad’ for mobile and for laptop, ‘baraha unicode ‘ for systems.

    • Anonymous

      prayathnisutthene!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading