
ಶತಶತಮಾನಗಳಿಂದಲೂ, ಎಲ್ಲಾ ಕಾಲಘಟ್ಟಗಳಲ್ಲಿಯೂ ಹೆಣ್ಣಿನ ದೇಹ ಮತ್ತು ಭೌತಿಕ ಸೌಂದರ್ಯವನ್ನು ಭೋಗಿಸಲು ಸದಾ ಹವಣಿಸುತ್ತಲೇ ಬಂದಿದೆ.
ಹೆತ್ತವರ ಗುರುತಿಲ್ಲದೆ ಬೆಳೆದ ಸಾಮಾನ್ಯ ಹೆಣ್ಣುಮಗಳೊಬ್ಬಳು ಹೇಗೆ ಇಡೀ ವ್ಯವಸ್ಥೆಯ ಭೋಗದ ಪ್ರತೀಕವಾಗಿ ನಿಲ್ಲುತ್ತಾಳೆ ಎನ್ನುವುದಕ್ಕೆ ಅಮ್ರಪಾಲಿ ಉದಾಹರಣೆಯಾಗುತ್ತಾಳೆ.
ಇದು ಚರಿತ್ರೆಗಳ ಕೇವಲ ದಾಖಲೆ ಮಾತ್ರವಲ್ಲ- ಎಂದೆಂದೂ ಮರುಕಳಿಸುವ ದುರಂತ ಸತ್ಯ.
ಒಂದು ಬೃಹತ್ ಮಾವಿನ ಮರದ ಮಡಿಲು.. ನವಜಾತ ಶಿಶುವಿನ ಅಳು ಕೇಳುತ್ತಿದೆ. ದಾರಿಯಲ್ಲಿ ಹೋಗುತ್ತಿದ್ದ ದಂಪತಿಗಳು ನೋಡುತ್ತಾರೆ. ಪೂರ್ಣ ಚಂದಿರನಂತಿದ್ದ ಮಗುವನ್ನು ತಂದು ಕಕ್ಕುಲತೆಯಿಂದ ಸಾಕುತ್ತಾರೆ ಬೆಳೆಯುತ್ತಲೇ ಅವಳು ನೃತ್ಯ ನಿಪುಣೆಯಾಗುತ್ತಾಳೆ. ಗಾನ ಗಾರುಡಿಗಳಾಗಿಯೂ ಪರಿಪೂರ್ಣವಾಗುತ್ತಾಳೆ.
ವರುಷಗಳು ಉರುಳುತ್ತವೆ. ಅವಳು ಯೌವ್ವನದ ಮೆರುಗುಗಳೊಂದಿಗೆ ಕೋರೈಸುವಂತಿರುತ್ತಾಳೆ. ಅವಳ ಸೌಂದರ್ಯ ವರ್ಣನೆಯಂತೂ ಎಷ್ಟು ಬಣ್ಣಿಸಿದರೂ ಮುಗಿಯದಾಗುತ್ತದೆ. ಹಾಲಿನ ಬಣ್ಣದ ಚರ್ಮ, ದಾಳಿಂಬೆಯ ತುಟಿಗಳು, ಕೆನ್ನೆಗಳು ಗುಲಾಬಿಯಂತೆ, ಗಿಳಿಯ ಮೂಗನ್ನು ಹೋಲುವ ಮೂಗು, ಕಮಲದ ಕಣ್ಣುಗಳು….
ಹೀಗೇ ಇವ್ಯಾವ ಶಬ್ದಗಳೂ ಅವಳ ಲೌಕಿಕವಾದ ಮೋಹಕತೆಯನ್ನು, ಅಪೂರ್ವ ಖನಿಯನ್ನು ವರ್ಣಿಸಲು ಸೋಲುತ್ತವೆ. ಯಾವ ಕಲಾವಿದನ ಕುಂಚಕ್ಕೂ ಅವಳ ದೇಹಸಿರಿಯನ್ನು ಅಭಿವ್ಯಕ್ತಿಗೊಳಿಸಲು ಸಾಧ್ಯವೇಇಲ್ಲ ಎಂದು ನಿಖರವಾಗಿ ಹೇಳಬಹುದಾದ ಮನಮೋಹಕತೆಯ ಆಗರವಾಗಿ ಬೆಳೆದು ನಿಂತಿದ್ದಾಳೆ…..
ದೇಹ ಸೌಂದರ್ಯದ ಜೊತೆಗೆ ಮಾನಸಿಕವಾಗಿಯೂ ಪ್ರಬುದ್ಧಳಾಗುತ್ತಾಳೆ.
ವಯೋಸಹಜವಾಗಿ ಒಬ್ಬ ಸುಂದರ ಯುವಕನನ್ನು ಪ್ರೀತಿಸುತ್ತಾಳೆ. ಅವರಿಬ್ಬರೂ ಜೊತೆಯಾಗಿ ಬದುಕಲು ನಿರ್ಧರಿಸಿ ವಿವಾಹವಾಗುತ್ತಾರೆ.
ಆ ದೇಶದ ರಾಜ ಆ ಯುವಕನನ್ನು ಆ ದಿನವೇ ಕೊಲ್ಲಿಸುತ್ತಾನೆ.
ಅಷ್ಟರಲ್ಲಿ ಆಗಲೇ ದೇಶದ ತುಂಬೆಲ್ಲಾ ಇವಳನ್ನು ಬಯಸಿ ಬಂದ ದೊಡ್ಡ ದಂಡೇ ಇರುತ್ತದೆ. ರಾಜರುಗಳು, ಮಂತ್ರಿಗಳು, ಶ್ರೀಮಂತರು, ಸೇನಾಧಿಕಾರಿಗಳು, ಸಾಮಂತರು, ಲಾರ್ಡ್ಸ, ವ್ಯಾಪಾರಿಗಳು ಇವಳನ್ನು ವರಿಸಲು ಮುಂದಾಗುತ್ತಾರೆ. ಆಮಿಷ, ಒತ್ತಡ, ಬೆದರಿಕೆಯ ಸುರಿಮಳೆಯಾಗುತ್ತದೆ.

ಈ ಅತೀವ ಚಲುವಿನ ಗಣಿ ಯಾರೊಬ್ಬರ ಸ್ವತ್ತಾದರೂ ದೇಶದಲ್ಲಿ ದಂಗೆಯಾಗುವುದು ಖಚಿತ ಎಂದು ಅರಿತ ಆ ದೇಶದ ಪ್ರಜಾಪ್ರಭುತ್ವ ಸಂಸತ್ತು ಗಂಭೀರವಾಗಿ ಚರ್ಚಿಸುತ್ತದೆ. ಚರಿತ್ರೆಯಲ್ಲಿ ಯುವತಿಯೋರ್ವಳ ವಿವಾಹದ ಕಗ್ಗಂಟಿನ ಬಗ್ಗೆ ಚರ್ಚೆಯಾದ ಮೊದಲ ದಾಖಲೆ ಇದಾಗುತ್ತದೆ. ಗಣ್ಯಾತಿಗಣ್ಯರು, ವೀರಾಧಿವೀರರು ಬಯಸಿರುವುದರಿಂದ ,ದೇಶದಲ್ಲಿ ಪ್ರತಿರೋಧಗಳು ಹೆಚ್ಚಿ ದೇಶವನ್ನೇ ಒಡೆಯಬಹುದು, ಏಕತೆಗೆ ಭಂಗ ತರಬಹುದು ಎನ್ನುವಷ್ಟರ ಮಟ್ಟಿಗೆ ಆತಂಕವಾಗುತ್ತದೆ.
ಅಂತಿಮವಾಗಿ ಸಂಸತ್ತು ಕಂಡುಕೊಂಡ ಪರಿಹಾರವೇ , ಆ ಅಪೂರ್ವ ಸುಂದರಿಯನ್ನು ʼನಗರವಧುʼ ಎಂದು ಘೋಷಿಸುತ್ತಾರೆ. ಹಾಗೆಂದು ಇತಿಹಾಸದಲ್ಲಿ ಒಂದು ಸಂಸತ್ತಿನಿಂದ ವೇಶ್ಯೆಯೆಂದು ಘೋಷಿಸಿಕೊಂಡ ಪ್ರಥಮ ಹೆಣ್ಣು ʼಅಮ್ರಪಾಲಿʼ.
ʼಆ ರಾಜ್ಯವೇ ವೈಶಾಲಿʼ
ವಿವಾಹದ ದಿನವೇ ಮದುಮಗನನ್ನು ಕೊಲ್ಲಿಸಿದ್ದ ವೈಶಾಲಿ ದೇಶದ ರಾಜ ಮನುದೇವನನ್ನೂ ಸೇರಿದಂತೆ , ಎಲ್ಲಾ ವಿಟರೂ ಅಮ್ರಪಾಲಿಯ ಲೌಕಿಕ ಸೌಂದರ್ಯವನ್ನು ಅನುಭವಿಸುತ್ತಾರೆ…..
ಇತ್ತ ಆ ರೂಪಸಿಯ ಅಂತರಂಗದ ಕನಸುಗಳೆಲ್ಲ ಛಿದ್ರಗೊಳ್ಳುತ್ತವೆ. ತನ್ನ ಕನಸಿನ ಬದುಕನ್ನು ಹೂತುಬಿಡುತ್ತಾಳೆ….
ಅಮ್ರಪಾಲಿಯ ರೂಪವೇ ಅವಳ ಬದುಕಿನ ಆರ್ದ್ರತೆಯ ಕ್ಷಣಕ್ಷಣಗಳನ್ನೂ ನುಂಗಿಹಾಕುತ್ತಲೇ ಇರುತ್ತದೆ. ಅಪಾರ ಸಂಪತ್ತು ಅವಳ ಕಾಲಡಿಯಲ್ಲಿ ರಾಶಿಯಾಗುತ್ತಿದ್ದರೂ ಅವಳ ಮನದೊಳಗಿನ ಜೀವಂತಿಕೆಗೆ ಜೀವವೊಂದರ ಹಂಬಲದಲ್ಲಿಯೇ ಇರ್ತಾಳೆ. ಆಗ ವೀಣಾವಾದಕನೊಬ್ಬನ ಪ್ರವೇಶವಾಗುತ್ತದೆ.
ಅವನ ಆಪ್ತತೆಗೆ, ಅವನ ಪ್ರೀತಿಗೆ ಮನಸೋಲುತ್ತಾಳೆ. ತಾನು ಕಳೆದುಕೊಂಡು ಹಲುಬುತ್ತಿದ್ದ ಪ್ರೀತಿ ದೊರೆತದ್ದಕ್ಕೆ ಹರ್ಷಿತಳಾಗ್ತಾಳೆ. ತನಗೊಲಿದ ಪ್ರೇಮಿಯ ಒಲವಿಗೆ ಅರ್ಪಿತಳಾಗ್ತಾಳೆ. ಅವನಿಗಾಗಿ ಒಂದು ಗಂಡು ಮಗುವನ್ನು ಹಡೆಯುತ್ತಾಳೆ. ಅಷ್ಟೊತ್ತಿಗೆ ಮತ್ತೊಂದು ಆಪತ್ತು ಅವಳ ಹೃದಯವನ್ನು ಗಾಯಗೊಳಿಸುತ್ತದೆ….. ಆ ವೀಣಾವಾದಕ ಬೇರಾರೂ ಅಲ್ಲ….

ವೈಶಾಲಿ ರಾಜ್ಯದ ಶತೃ ಮಗಧ ರಾಜ್ಯದ ರಾಜ ಬಿಂದುಸಾರನೆಂಬುದು ಬಯಲಾಗುತ್ತದೆ. ಅಮ್ರಪಾಲಿಯ ರೂಪರಾಶಿಯ ಬಗ್ಗೆ ಮೋಹಿತನಾದ ಬಿಂದುಸಾರ, ನೇರವಾಗಿ ಬರಲು ಸಾಧ್ಯವಿಲ್ಲದ್ದರಿಂದ , ಮಾರುವೇಷದಲ್ಲಿ ಬಂದು ಅವಳ ಪ್ರೀತಿಯಲ್ಲಿ ಮಿಂದಿರುತ್ತಾನೆ.
ಅಮ್ರಪಾಲಿಯ ಅಗಲಿಕೆ ಸಾಧ್ಯವಿಲ್ಲವೆಂದು ಅರಿತ ಅವನು ವೈಶಾಲಿ ಸಾಮ್ರಾಜ್ಯದ ಮೇಲೆ ಯುದ್ಧ ಸಾರಲು ಮುಂದಾಗುತ್ತಾನೆ. ಇದರಿಂದ ಆಘಾತಗೊಂಡ ಅಮ್ರಪಾಲಿ ಅವನ ಹುನ್ನಾರವನ್ನು ತಿರಸ್ಕರಿಸುತ್ತಾಳೆ…… ಅವನನ್ನು ಯುದ್ಧ ನಿಲ್ಲಿಸಿ ಹಿಂದಿರುಗುವಂತೆ ಕೇಳಿಕೊಳ್ಳುತ್ತಾಳೆ. ಪ್ರೀತಿಯೇ ಮೇಲಾಗುತ್ತದೆ. ಅವಳ ಕೋರಿಕೆಗೆ ಮಾನ್ಯ ಮಾಡಿ ಅವನು ಹಿಂತಿರುಗುತ್ತಾನೆ…..
ಇತಿಹಾಸದ ದಾಖಲೆ ಅಲ್ಲಿಗೇ ನಿಲ್ಲುವುದಿಲ್ಲ… ಬಿಂದುಸಾರನ ಮತ್ತೋರ್ವ ಹೆಂಡತಿಯ ಮಗ ಅಜಾತಶತ್ರು ತನ್ನ ತಂದೆಯ ಕೃತ್ಯ ಹೇಡಿತನದ್ದು ಎಂದು ಜರೆಯುತ್ತಾನೆ. ಸ್ವತಃ ತಾನೇ ವೈಶಾಲಿ ರಾಜ್ಯದ ಮೇಲೆ ದಂಡೆತ್ತಿ ಅದನ್ನು ವಶಪಡಿಸಿಕೊಳ್ಳುತ್ತಾನೆ..
ಯಾವ ರಾಜಪ್ರಭುತ್ವದಿಂದಲೇ ವೇಶ್ಯೆಯಾಗಿದ್ದ ಅಮ್ರಪಾಲಿ ಅದೆಷ್ಟೋ ರಾಜಕೀಯ ಕ್ಷೋಭೆಗಳಿಗೂ ತನ್ನದಲ್ಲದ ಕಾರಣಗಳಿಂದ ನೆಪವಾಗಿಬಿಡುತ್ತಾಳೆ.
ಅವಳು ಮಾತ್ರ ಎಂದೂ ತನ್ನದೆಂಬ ಭಾವನೆಗಳ ಸ್ಪರ್ಶಿಸಲು ವ್ಯವಸ್ಥೆ ಬಿಡುವುದೇ ಇಲ್ಲ. ಮನಸ್ಸು ನೆಮ್ಮದಿಯನ್ನು ಅರಸುತ್ತಲೇ ಇರುತ್ತದೆ. ಯಾವ ಸುಖ, ಸಂಪತ್ತುಗಳೂ ಅವಳನ್ನು ಸಾಂತ್ವನಗೊಳಿಸುವುದೇ ಇಲ್ಲ….. ಎಲ್ಲವೂ ಇದ್ದು ಏನೂ ಇಲ್ಲದ ಮನಸ್ಥಿತಿಯಲ್ಲಿ ತೊಳಲಾಡುತ್ತಾಳೆ.
ಅಂತಹ ವ್ಯಾಕುಲತೆಯ ಸಂದಿಗ್ಧ ದಲ್ಲಿದ್ದಾಗಲೇ ವೈಶಾಲಿಗೆ ʼಬುದ್ಧʼ ನ ಆಗಮನವಾಗುತ್ತದೆ.

ಕಪಿಲವಸ್ತು ಸಾಮ್ರಾಜ್ಯದ ಯುವರಾಜ ಗೌತಮ ಸಕಲ ರಾಜ ಐಶ್ವರ್ಯಗಳನ್ನು ತೊರೆದು ಬುದ್ಧನಾದ ವಿಷಯ ಆಮ್ರಪಾಲಿ ಗಮನಕ್ಕೂ ಬರುತ್ತದೆ. ಮಾನವ ಕಲ್ಯಾಣದ ಬೋಧನೆಯನ್ನು ಹರಡುತ್ತಾ ಹೊರಟ ಬುದ್ಧನನ್ನು ಬೇಟಿಯಾಗಲು, ಆತನ ಮಾತುಗಳನ್ನು ಆಲಿಸಲು ಅಮ್ರಪಾಲಿ ಬಯಸುತ್ತಾಳೆ. ಆಮ್ರಪಾಲಿ ಮನೆಗೆ ಬಂದ ಓರ್ವ ಯುವ ಬೌದ್ಧ ಭಿಕ್ಷುವಿನ ಸಲಹೆಯ ಮೇರೆಗೆ ಬುದ್ಧನನ್ನು ಭೇಟಿಯಾಗುತ್ತಾಳೆ.
ಬುದ್ಧನಿಗೆ ಅವನ ಶಿಷ್ಯನಿಂದ ಅಮ್ರಪಾಲಿಯ ಬಗ್ಗೆ ತಿಳಿದಿರುತ್ತದೆ. ಬುದ್ಧನಿಗೆ ನಮಸ್ಕರಿಸಿ ನನ್ನ ಬದುಕನ್ನು ನಿಮ್ಮ ಬಿಕ್ಷುಗಳ ಶ್ರೇಯೋಭಿವೃದ್ಧಿಗೆ ಅರ್ಪಿಸಲು ಹಾಗೂ ನನ್ನ ಬದುಕಿನ ಎಲ್ಲವನ್ನೂ ತ್ಯಜಿಸಿ ನಿಮ್ಮ ಮಾನವ ಕಲ್ಯಾಣದ ಆಶಯಗಳೊಂದಿಗೆ ಉಳಿದಿರುವ ಬದುಕನ್ನು ಕಳೆಯಲು ಇಚ್ಛಿಸಿರುವೆನೆಂದು ವಿನಂತಿಸುತ್ತಾಳೆ. ದಯಮಾಡಿ ನನ್ನನ್ನು ನಿಮ್ಮ ಶಿಷ್ಯೆಯಾಗಿ ಸ್ವೀಕರಿಸಬೇಕೆಂದು ಒತ್ತಾಯಿಸುತ್ತಾಳೆ.
ಪುರುಷರಿಗಷ್ಟೇ ಪ್ರವೇಶವಿದ್ದ ಸಂಘದೊಳಗೆ ಮಹಿಳೆ ಅಮ್ರಪಾಲಿಯನ್ನು ಒಳಗೊಳ್ಳಲು ಬುದ್ಧನು ಒಪ್ಪಲು ಸಾಧ್ಯವಿರಲಿಲ್ಲ. ಮಹಿಳೆಯರು ಬೌದ್ಧ ಭಿಕ್ಷುಗಳ ಏಕಾಗ್ರತೆಗೆ ಭಂಗ ಮಾಡಬಹುದೆಂದು ಅಭಿಪ್ರಾಯಪಡುತ್ತಾನೆ. ಈ ನಿಲುವನ್ನು ತೀವ್ರವಾಗಿ ಟೀಕಿಸಿದ ಆಮ್ರಪಾಲಿ ʼಕೇವಲ ಮಹಿಳಾ ಇರುವಿಕೆ, ಸ್ಪರ್ಶದಿಂದ ಭಂಗ ಅನುಭವಿಸುವಷ್ಟು ನಿಮ್ಮ ಶಿಷ್ಯ ಪರಂಪರೆ ದುರ್ಬಲರೇ’ ಎಂದು ಸವಾಲು ಹಾಕುತ್ತಾಳೆ. ಅವಳ ಪ್ರೌಢಿಮೆಯನ್ನು, ಬದ್ಧತೆಯನ್ನು, ಗಂಭೀರತೆಯನ್ನು ಮನನ ಮಾಡಿಕೊಂಡ ಬುದ್ಧ ಆಮ್ರಪಾಲಿ ಗೆ ಬೌದ್ಧ ಸಂಘದಲ್ಲಿ ಪ್ರವೇಶ ನೀಡುತ್ತಾನೆ.
ಅಮ್ರಪಾಲಿಯೆಂಬ ಜಗದ ಚೆಲುವೆ ಬೌದ್ಧ ಬಿಕ್ಷುಣಿಯಾಗಿ, ಸಂಘದ ಮುಖ್ಯಸ್ಥೆಯಾಗಿ ನೇಮಕವಾಗುವುದೂ ಒಂದು ಐತಿಹಾಸಿಕ ದಾಖಲೆಯಾಗುತ್ತದೆ. ಅಲ್ಲಿಂದ ಬೌದ್ಧ ಪಡೆಗೆ ಮಹಿಳೆಯರೂ ಸೇರ್ಪಡೆಗೊಳಿಸುವ ದಿವ್ಯದರ್ಶನ ನೀಡಿದ ಕೀರ್ತಿ ಅಮ್ರಪಾಲಿ ಗೆ ಸಲ್ಲುತ್ತದೆ.
ಜಗತ್ ಪರಿವರ್ತಕ ಗೌತಮ ಬುದ್ಧನ ಮನಪರಿವರ್ತನೆಗೂ ಕಾರಣಳಾದ, ಮನುಷ್ಯ ಸಮಾನತೆಯ ಪ್ರತಿಪಾದಿಸಿದ ಆಮ್ರಪಾಲಿ ಮಹಿಳಾ ಸ್ವಾಭಿಮಾನ ಸಾಧನೆಯ ಸಂಕೇತವಾಗುತ್ತಾಳೆ. ʼಬುದ್ಧ ಮಾರ್ಗದಲ್ಲೊಂದು ಕೆಂಪು ‘ದೀಪ’ ಪ್ರಜ್ವಲಿಸುತ್ತದೆʼ.






0 Comments