ಬುದ್ಧಭೂಮಿಯಲ್ಲಿ ಕೇಡು ಹುತ್ತ ಕಟ್ಟಿದೆ ನೋಡಾ!

“ಕೇಡು ಕಳಚಿ
ಪ್ರೇಮ ತಬ್ಬಿದಾಗ
ಅಲ್ಲಿ ಬುದ್ಧ ಹುಟ್ಟುತ್ತಾನೆ.”

ಶಾಕ್ಯಕುಲದ ಶುದ್ದೋಧನ ಮತ್ತು ಮಹಾಮಾಯಾ ಅವರಿಗೆ ಹುಟ್ಟಿದ (ಕ್ರಿ.ಪೂ.೫೬೩) ಸಿದ್ದಾರ್ಥ ಜಗತ್ತಿನ ಪಾಲಿಗೆ ಗೌತಮ ಬುದ್ದನಾಗಿ ತೇಜೊಮಯಗೊಂಡದ್ದು ಅಪೂರ್ವ ಸಂಗತಿ.

ಬುದ್ಧ ಕತ್ತಲಿನಿಂದ ಬೆಳಕಿನಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ, ಕೇಡಿನಿಂದ ಪ್ರೇಮದ ಕಡೆಗೆ, ದುಃಖದಿಂದ ಬಿಡುಗಡೆಯ ಧಮ್ಮದ ಕಡೆಗೆ ಮಹಾಮಾರ್ಗವನ್ನು ತೋರಿದ ಸಂತ. ಬುದ್ದ ದೇವರಲ್ಲ. ಮೋಕ್ಷದ ಮಾರ್ಗದರ್ಶಕನಲ್ಲ, ಕಾಲ ಜ್ಞಾನಿಯೂ ಅಲ್ಲ. ಅವನೊಬ್ಬ ಸದಾ ಎಚ್ಚರಿಸುವ ಅರಿವು.

ಇಂತಹ ಬುದ್ದನನ್ನು ಭಾರತೀಯ ಚರಿತ್ರೆ ಕಂಡುಕೊಂಡ ಮತ್ತು ವಿವರಿಸಲ್ಪಟ್ಟ ಬಗೆಯೇ ವಂಚನೆಯಿಂದ ಕೂಡಿದ್ದು, ಬುದ್ದ ವಿಷ್ಣುವಿನ ಅವತಾರವೆಂದು ‘ಸಾಂಸ್ಕೃತಿಕ ಅಪಹರಣ’ ಗೊಳಿಸಿದ ಸಂಚನ್ನೇ ನಂಬಿಸಲ್ಪಡುತ್ತಿರುವ ಈ ಹೊತ್ತಿನಲ್ಲಿ ಬುದ್ದನನ್ನು ಬುದ್ದನಂತೆಯೇ, ಬಯಲ ಬೆಳಕಿನ ಚಿತ್ರದಂತೆ ಎದುರುಗೊಳ್ಳುವ , ಎದೆಗಿಳಿಸಿಕೊಳ್ಳುವ ತುರ್ತು ಇದೆ.

ಜೀವನದ ಪಾವಿತ್ರ್ಯ ಅಡಗಿರುವುದು ಉಡುಗೆ, ತೊಡುಗೆ, ಅಧಿಕಾರ, ಐಷಾರಾಮಿ ಭೌತಿಕ ವಸ್ತುಗಳಿಂದಲ್ಲ. ಬದಲಾಗಿ ಸುಳ್ಳು, ಕೇಡು, ಅಸೂಯೆ, ವಂಚನೆ, ಹಿಂಸೆಯನ್ನು ತ್ಯಜಿಸುವುದರಲ್ಲಿ ಅಡಗಿರುತ್ತದೆ ಎಂದು ಭೋಧಿಸಿದನಷ್ಟೇ ಅಲ್ಲ. ಅದರಂತೆ ಬದುಕಿದ ಬುದ್ಧ ಮನುಕುಲದ ಮಹಾಬೆಳಕು.

ಮನುಷ್ಯ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅದೆಷ್ಟೆ ಎತ್ತರಕ್ಕೇರಿದರೂ ಆತನೊಳಗೆ ಸತ್ಯ, ದಾನ, ಶೀಲ, ಧೈರ್ಯ, ಕರುಣ, ಮೈತ್ರಿ, ಉಪೇಕ್ಖಾ, (ರಾಗದ್ವೇಷಗಳಿಲ್ಲದ ಮಾನಸಿಕ ಸ್ಥಿತಿ), ನಿಕ್ಖಾಮ (ಇಂದ್ರಿಯ ಸುಖಭೋಗಗಳ ತ್ಯೇಜಿಸುವುದು) ಸಹನೆ, ಆದಿಥಾನ (ಪ್ರತಿಜ್ಞೆ) ಇಲ್ಲದೆ ಹೋದರೆ ಆತ ಎಂದಿಗೂ ಪರಿಪೂರ್ಣನಲ್ಲ.

ಬುದ್ಧನಿಂದ ಪ್ರಭಾವಿತಗೊಂಡ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಭಾರತದ ಸಂವಿಧಾನ ಇಂತಹ ಬುದ್ದನ ಜ್ಞಾನ ಮಾರ್ಗಗಳಿಂದ ನಿರೂಪಿತಗೊಂಡಿದೆ. ಹೀಗಾಗಿಯೇ ಭಾರತದ ಸಂವಿಧಾನ ಈ ದೇಶದ ಎಲ್ಲಾ ಜನರನ್ನು ತಾರತಮ್ಯವಿಲ್ಲದೆ ತಾಯಿಯಂತೆ ಕಾಣುತ್ತದೆ. ಅದನ್ನು ಅನುಷ್ಠಾನಗೊಳಿಸುವವರ ಎದೆಯಲ್ಲಿ ಮಾತ್ರ ಕಾರ್ಕೊಟಕ ವಿಷ ಜಿನುಗುತ್ತಿದೆ.

ಧರ್ಮ ಎಂಬುದು ಈಗ ಮನುಷ್ಯನ ಆಧ್ಯಾತ್ಮಿಕ ಸೂತ್ರವಾಗಿ, ಜ್ಞಾನ ಮಾರ್ಗವಾಗಿ ಉಳಿದಿಲ್ಲ. ಅದೀಗ ರಾಜಸತ್ತೆಯ ನಂಟು ಬೆಸೆದುಕೊಂಡು ಅಧಿಕಾರದ ರುಚಿಯಲ್ಲಿ ಬಾಯಿ ಚಪ್ಪರಿಸುತ್ತಿದೆ. ಇದಕ್ಕೆ ಯಾವ ಧರ್ಮಗಳೂ ಹೊರತಲ್ಲ. ಭಾರತದಲ್ಲಂತೂ ಧರ್ಮರಾಜಕಾರಣವೆಂಬ ಹೊಸತೊಂದು ರಾಜನೀತಿ ಸೂತ್ರವಾಗಿ ಕಟ್ಟಲ್ಪಟ್ಟಿರುವುದು ಮತ್ತು ಮುಂದುವರೆಯುತ್ತಿರುವುದು ರಾಜಕಾರಣ ಮತ್ತು ಧರ್ಮದ ಎರಡರಲ್ಲಿನ ಸಾರವೂ ಮಲೆತು ಹೋಗಿದೆ. ರಾಜಕಾರಣದಲ್ಲಿ ಧರ್ಮ ಉಳಿದಿಲ್ಲ. ಬದಲಾಗಿ ಧರ್ಮವೇ ರಾಜಕಾರಣವಾಗಿ ವಿಜೃಂಬಿಸುತ್ತಿದೆ.

ಇಂತಹ ಸಂದರ್ಭದಲ್ಲಿ ಲೌಕಿಕ ಬದುಕಿನ ಮೋಹ ಮತ್ತು ಪಾಡುಗಳಿಂದ ಮುಕ್ತನಾಗಿ ನಿರ್ವಾಣ (ನಿಬ್ಬಾಣ) ಸ್ಥಿತಿಯ ಬದುಕಿನಲ್ಲಿ ಪರಿಪೂರ್ಣತೆ ಕಾಣುವ ಬುದ್ಧ ನೆನಪಾಗುತ್ತಾನೆ. ವರ್ತಮಾನದ ಪ್ರಭುತ್ವದಲ್ಲಿ ಪ್ರಶ್ನಿಸುವುದು ದೇಶದ್ರೋಹವಾಗಬಲ್ಲದು, ಪ್ರೀತಿಸುವುದು ಅಪರಾಧವಾಗಬಲ್ಲದು, ಜೊತೆಗೂಡಿ ನಡೆಯುವ ಮೈತ್ರಿಯೂ ಧರ್ಮದ್ರೋಹವಾಗಬಲ್ಲದು, ಅಹಿಂಸೆಯೂ ದೌರ್ಬಲ್ಯವಾಗಿ ಹಿಂಸೆಯಿಂದ ಇರಿಯಬಲ್ಲದು. ಸತ್ಯವನ್ನು ಮೆಟ್ಟಿ ಸುಳ್ಳಾಡುವುದೇ ವೇದವಾಗಬಲ್ಲದು. ಬುದ್ಧಭೂಮಿಯಲ್ಲಿ ಈಗ ಕೇಡು ಹುತ್ತ ಕಟ್ಟಿ ಬೆಳೆದು ನಿಂತಿದೆ.

ಭಾರತದ ಚಾತುರ್ವರ್ಣ ಧರ್ಮದ ವಿರುದ್ದ ಪ್ರತಿಕ್ರಾಂತಿ ಸಿದ್ದಾಂತವನ್ನು ಪ್ರತಿಪಾದಿಸಿದ ಬುದ್ಧ ಅಹಿಂಸೆ, ಸತ್ಯ, ಪ್ರೇಮದ ಬುನಾದಿಯ ಮೇಲೆ ಮನುಷ್ಯಕುಲದ ಉನ್ನತೀಕರಣದ ಮಹಾಮಾರ್ಗವನ್ನು ಪ್ರತಿಪಾದಿಸಿದ. ಅದೇ ಚಾತುರ್ವರ್ಣ ಧರ್ಮ ವ್ಯವಸ್ಥೆ ಬುದ್ದ ಧರ್ಮದ ವಿರುದ್ದ ಹಿಂಸಾ ಮನೋಧರ್ಮದಿಂದ ತನ್ನ ಅಸ್ತಿತ್ವನ್ನು ಕಾಪಾಡಿಕೊಂಡು ಬಂದಿದೆ. ವೈದಿಕ ಧರ್ಮದ ಉಳಿವಿಗಾಗಿ ಭೌದ್ಧ ಧರ್ಮವನ್ನು ಹತ್ತಿಕ್ಕಿದ್ದು ಈಗ ಇತಿಹಾಸ. ಬುದ್ಧನನ್ನು ನಿರಾಕರಿಸುವುದು ಎಂದರೆ ಮನುಷ್ಯನೊಳಗಿನ ಜನ್ಮಜಾತ ಪ್ರೇಮವನ್ನು, ಸಹಬಾಳ್ವೆಯನ್ನು ನಿರಾಕರಿಸಿದಂತೆಯೇ.

ಶಾಕ್ಯವಂಶಕ್ಕೆ ಹತ್ತಿರವಾಗಿದ್ದ ಮಗಧ ಸಾಮ್ರಾಜ್ಯದ ದೊರೆ ಬಿಂಬಸಾರ ಪರಿವ್ರಾಜಕನಾಗಿ ತನ್ನ ದೇಶಕ್ಕೆ ಬಂದ ಬುದ್ಧನನ್ನು ಕಂಡು ಈ ವಯಸ್ಸಿನಲ್ಲಿ ಸನ್ಯಾಸತ್ವ ಸಲ್ಲದು, ತನ್ನ ಸಾಮ್ರಾಜ್ಯದ ಬಹುಭಾಗವನ್ನೆ ಬಿಟ್ಟುಕೊಡುತ್ತೇನೆ. ಯೌವ್ವನದ ಸೌಂದರ್ಯ ಕರಗಿ ಮುಪ್ಪು ಆವರಿಸುವ ಮುನ್ನ ಸುಖ -ಸಂತೋಷಗಳನ್ನು ಅನುಭವಿಸು, ಯುದ್ಧಗಳನ್ನು ನಡೆಸಿ ಸಾಮ್ರಾಜ್ಯ ವಿಸ್ತರಣೆ ಮಾಡಿಕೊಂಡು ಸಾರ್ವಭೌಮನಾಗು ಎಂದು ನೀಡಿದ ಆಹ್ವಾನವನ್ನು ಅಷ್ಟೇ ವಿನಮ್ರವಾಗಿ, ನಿರ್ಮೋಹಕವಾಗಿ ನಿರಾಕರಿಸಿದ ತಥಾಗತ ಬುದ್ಧ ವರ್ತಮಾನಕ್ಕೂ, ಭವಿಷ್ಯಕ್ಕೂ ಮಾದರಿಯಾಗಬಲ್ಲನು.

ಆದರೆ ಇಂದು ಅಧಿಕಾರದ ಗಳಿಕೆ -ಉಳಿಕೆಗಾಗಿ ಸುಳ್ಳು-ಹಿಂಸೆಯನ್ನೆ ಧರಿಸಿ ಹೋರಾಡುವುದು ನಮ್ಮ ಕಣ್ಣ ಮುಂದೆ ಇದೆ. ಶಾಕ್ಯರು ಮತ್ತು ಕೋಲಿ ಸಾಮ್ರಾಜ್ಯದ ನಡುವೆ ಕುಡಿಯುವ ನೀರಿನ ಹಂಚಿಕೆಯ ವಿವಾದ ತಲೆ ಎತ್ತಿ ಕೋಲಿಯರ ವಿರುದ್ದ ಯುದ್ಧ ತೀರ‍್ಮಾನಗೊಂಡ ತನ್ನ ತಂದೆ ಶಾಕ್ಯದೊರೆಯ ಹಿಂಸೆಯ ನಿರ್ಧಾರವನ್ನು ಪ್ರತಿಭಟಿಸಿ ಗಡೀಪಾರುಗೊಂಡು ರಾಜ್ಯ ತ್ಯಜಿಸಿ ಪರಿವ್ರಾಜಕನಾಗಿ ಅಹಿಂಸೆ, ಪ್ರೇಮ, ಸತ್ಯದ ಪ್ರತೀಕವೇ ಆದ ಇದೇ ಬುದ್ಧನನ್ನು ಭಾರತದ ರಾಜಕಾರಣ ಮನುಕುಲದ ನಾಶದ ವಿನಾಶಕಾರಿ ಅಸ್ತ್ರವಾದ ಅಣುಬಾಂಬ್ ಪರೀಕ್ಷೆಗೆ (ಬುದ್ದ ನಕ್ಕ) ನಾಮಾಂಕಿತಗೊಳಿಸಿದ್ದು ಮತ್ತು ಇಂದು ಧರ್ಮ ರಕ್ಷಣೆಯ ನೆಪದಲ್ಲಿ ಹಿಂಸೆ, ಕರುಣ, ಸತ್ಯ, ಮೈತ್ರಿಯಂತಹ ಬುದ್ಧನ ಜ್ಞಾನಮಾರ್ಗಗಳಿಗೆ ವಿರುದ್ದವಾಗಿ ನಡೆಯುತ್ತಿರುವುದು ದೊಡ್ಡ ವೈರುಧ್ಯ.

ಜಾತಿ, ಧರ್ಮ, ಮಂದಿರ, ಮಸೀದಿಗಳ ಹೆಸರಿನಲ್ಲಿ ಭಾರತವಿಂದು ಕ್ಷೋಭೆಯಡೆಗೆ ಮಗ್ಗಲು ಹೊರಳಿರುವುದು ಧರ್ಮಪತನದ ಸಂಕೇತ. ಅಧಿಕಾರ ರಾಜಕಾರಣವು ದೇಶದ ಜನರ ಮನಸ್ಸು, ಮೆದುಳಿಗೆ ವಿಷಪ್ರೋಕ್ಷಣೆ ಮಾಡಿ ಕಾರ್ಯಸಾಧು ಮಾಡಿಕೊಳ್ಳುವ ಸದಾ ಸಂಚಿನಲ್ಲೇ ಇದೆ. ಜಾತಿ ಆಧಾರಿತ ದಲಿತರ ಹತ್ಯೆಗಳು, ಧರ್ಮ ಪ್ರೇರಿತ ಜನಾಂಗೀಯ ಮಾರಣಹೋಮಗಳು ಈ ಬುದ್ದನ ನಾಡಿನಲ್ಲಿ ನಿತ್ಯ ನಡೆಯುತ್ತಲೇ ಇವೆ. ಭಾರತ ಸಮಾಜ ಬುದ್ಧನನ್ನು ಆಲಂಗಿಸಿಕೊಳ್ಳುವ ಕಾಲ ಈಗ ಎದುರಾಗಿದೆ. ಹೀಗಿರುವಾಗ..

ಭಗವಾನ್ ಬುದ್ಧನು ವಾರಣಾಸಿಯ ಗಂಗಾತಟದಲ್ಲಿನ ಧರ್ಮಶಾಲಾದಲ್ಲಿ ಆಗಮಿಸಿ ತಂಗಿದ ವಿಷಯವನ್ನು ತಿಳಿದ ಪ್ರಧಾನ ಮಂತ್ರಿಗಳು ಪರಿವಾರ (?!) ಸಮೇತವಾಗಿ ಹೋಗಿ ಕೈಮುಗಿದು ಮಹಾತ್ಮನಲ್ಲಿ ಹೀಗೆ ಭಿನ್ನಹಿಸಿಕೊಂಡರು.

ನಿಮ್ಮ ಆಗಮನದಿಂದ ನನ್ನ ಸಾಮ್ರಾಜ್ಯಕ್ಕೆ ಅದೃಷ್ಟ ಒದಗಿ ಬಂದಿದೆ. ಧರ್ಮ, ಸತ್ಯ ಮತ್ತು ಪ್ರೇಮದ ದೊರೆಗಳಾದ ನೀವು ಇಲ್ಲಿರುವಾಗ ಯಾವುದೆ ವಿಪತ್ತುಗಳು,ಅಪಾಯಗಳು ನನ್ನ ದೇಶಕ್ಕೆ ಹೇಗೆ ಬರಲುಸಾಧ್ಯ?
ಲೌಕಿಕ ಜಗತ್ತಿನ ಲಾಭವು ಅಸ್ಥಿರವಾದದ್ದು, ನಶ್ವರವಾದದ್ದು ಆದರೆ ಧಾರ್ಮಿಕ ಲಾಭವು ಅಮರವಾದದ್ದು, ಅಕ್ಷಯವಾದದ್ದು, ನಾನೀಗ ಪ್ರಧಾನಿಯಾಗಿಯೂ ಕಷ್ಟದಲ್ಲಿ ಮುಳುಗಿದ್ದೇನೆ. ಸಾಮಾನ್ಯರಾದವರು ಅದೆಷ್ಟು ಸಂತೋಷಗಳಿಂದ ಕೂಡಿರುತ್ತಾರೆಎಂದು ನಿವೇದಿಸಿಕೊಳ್ಳುತ್ತಾರೆ.

ಬಾಹ್ಯ ಒತ್ತಡಗಳಿಂದ ಜರ್ಝರಿತಗೊಂಡಿರುವ ಪ್ರಧಾನಮಂತ್ರಿಗಳ ಮನೋಃಸ್ಥಿತಿಯನ್ನು ಕಂಡ ಬುದ್ಧ ಹೀಗೆ ಹೇಳುತ್ತಾ ಹೋಗುತ್ತಾನೆ..

ನಾವು ಮಾಡಿದ ಒಳ್ಳೆಯ ಅಥವಾ ಕೆಟ್ಟ ಕೆಲಸಗಳು ನಮ್ಮನ್ನು ಸದಾ ನೆರಳಿನಂತೆ ಹಿಂಬಾಲಿಸುತ್ತವೆ . ನಮಗೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ಪ್ರೇಮಮಯವಾದ ಹೃದಯ ಮತ್ತು ಮನಸ್ಸು. ನಾವು ನಮಗಿರುವ ಒಬ್ಬನೇ ಪುತ್ರನನ್ನು ನಾವು ಅಕ್ಕರೆಯಿಂದ ನೋಡಿಕೊಳ್ಳುವಂತೆ ನಮ್ಮ ಪ್ರಜೆಗಳನ್ನು ನೋಡಿಕೊಳ್ಳಬೇಕು. ಅವರನ್ನು ದಮನ ಮಾಡುವುದಾಗಲಿ, ನಾಶ ಮಾಡುವುದಾಗಲಿ ಬೇಡ, ನಿನ್ನ ದೇಹದ ಪ್ರತಿಯೊಂದು ಅಂಗವನ್ನೂ ಸರಿಯಾಗಿ ಇಟ್ಟುಕೊಳ್ಳಬೇಕು, ಸುಳ್ಳಾಡಬಾರದು, ಸದಾಚಾರವಿಲ್ಲದ ಸಿದ್ದಾಂತವನ್ನು ಮರೆತು ಬಿಡಬೇಕು. ಬೇರೆಯವರನ್ನು ತುಳಿದು ನಿನ್ನನ್ನು ನೀನು ವಿಜೃಂಭಿಸಿಕೊಳ್ಳಬೇಡ. ಹೊಗಳು ಭಟ್ಟರ ಮೃದು ವಚನಗಳನ್ನು ಕೇಳಿಸಿಕೊಳ್ಳಬೇಡ. ನಾನು ಕೇಡನ್ನು ಎಸಗುವುದಿಲ್ಲ ಎಂಬ ನಮ್ಮ ಯೋಚನೆಯನ್ನು ಪರೀಕ್ಷಿಸಿಕೊಳ್ಳೋಣ. ಏಕೆಂದರೆ ನಾವು ಬಿತ್ತಿದ್ದನ್ನೆ ಬೆಳೆಯುತ್ತೇವೆ. ಒಳ್ಳೆಯ ವರ್ತನೆಗಳು ಹಾಗೂ ವಿವೇಕದ ಮೂಲಕ ನಿಜವಾದ ಬದುಕಿನ ಶ್ರೇಷ್ಠತೆಯನ್ನು ಪ್ರದರ್ಶಿಸು.

ಬುದ್ಧ ಮಹಾತ್ಮನ ಈ ಮಾತುಗಳನ್ನು ಗೌರವದಿಂದ ಆಲಿಸಿ ಪ್ರಭಾವಿತರಾದ ಪ್ರಧಾನಮಂತ್ರಿಗಳು ಓರ್ವ ಅಸಾಧಾರಣ ಶಿಷ್ಯರಾಗಿ ದೀಕ್ಷೆ ಪಡೆದು ತಮ್ಮ ದುಬಾರಿ ಪೋಷಾಕು ಕಳಚಿ ಕಷಾಯ ಬಟ್ಟೆ ತೊಟ್ಟು ಪಾರ್ಲಿಮೆಂಟ್ ಭವನದಿಂದ ಪರಿವ್ರಾಜಕರಾಗಿ ಹೊರ ಹೊರಟರು.., ನಾನು ಅವರನ್ನು ಬಿಕ್ಕುವಾಗಿ ಹಿಂಬಾಲಿಸತೊಡಗಿದೆ.!

ಢಣಢಣ ಗಂಟೆ ಯ ಸದ್ದಾಯಿತು. ಸ್ವಾಮೀ ಕಸ ಕೊಡಿ.., ಎಂದು ಒಂದೇ ಸಮನೇ ಬಾಗಿಲು ಬಡಿಯತೊಡಗಿದ್ದ ಅವನು. ಒಂದೇ ಸಾರಿ ವಾರಣಾಸಿಯ ಧರ್ಮಶಾಲಾದಿಂದ ಹೊರನೂಕಿದಂತಾಯಿತು.
ಥೋ..ತ್ತೇರಿಕೆ !, ಈ ಕಸ ಒಯ್ಯುವ ಗಂಟೆ ಗಾಡಿ ಆಸಾಮಿ. ಮನೆ ಬಾಗಿಲಲ್ಲಿ ನಿಂತು ಬೆಚ್ಚು ನೀರು ಬಡಿದಂತೆ ಗಂಟೆ ಬಾರಿಸಿ ಎಚ್ಚರಿಸಿಬಿಟ್ಟ. ಓ… ಇದು ಕನಸು.! ಕನಸು ಎಂದು ಖಾತರಿಯಾದರೂ ನಿಜವೆಂಬಂತೆ ಮನಸ್ಸು ಒಪ್ಪಿಕೊಳ್ಳಲು ಪರದಾಡುತ್ತಿತ್ತು.

ಭಾರತವನ್ನು ಕನಸಿನಲ್ಲಾದರೂ ಬುದ್ಧಭೂಮಿಯಾಗಿ ಕಾಣುವ ಅವಕಾಶವನ್ನು ಕಸದ ಗಾಡಿಯವನು ಭಗ್ನ ಮಾಡಿಬಿಟ್ಟ. ಬಾಗಿಲು ತೆಗೆದಿದ್ದೆ ತಡ, ಸರಸರನೆ ಮನೆಯ ಡಬ್ಬದಲ್ಲಿದ್ದ ಕಸ ಬಾಚಿಕೊಂಡು ನೆರೆಮನೆ ಕಡೆಗೆ ಹೊರಟ ಪೌರಕಾರ್ಮಿಕನನ್ನೆ ದಿಟ್ಟಿಸಿ ನೋಡತೊಡಗಿದೆ. ನನ್ನ ಪ್ರಧಾನಿ ಮತ್ತು ಬುದ್ಧ ದೇವನಿಗೂ ಸಂಬಂಧವೇ ಇಲ್ಲದೆ ತನ್ನ ಕಾಯಕವನ್ನು ನಿಷ್ಠೆಯಿಂದ , ಪ್ರಾಮಾಣಿಕವಾಗಿ ಮಾಡುತ್ತಿದ್ದ ಅವನು ಬುದ್ಧನ ಪರಮ ಅನುಯಾಯಿ ಸುನೀತನಂತೆ ಕಾಣುತ್ತಿದ್ದ. ಎಲ್ಲಿಯ ಸುನೀತ….. ? ಎಲ್ಲಿಯ ಪ್ರಧಾನಿ…?

ಎಲ್ಲರಿಗೂ ಬುದ್ಧಪೂರ್ಣಿಮೆಯ ಶುಭಾಶಯಗಳು.

ಈ ಲೋಕದಲ್ಲಿ ಯಾರೊಬ್ಬರೂ ಸುಳ್ಳು ಮಾತುಗಳನ್ನು ಆಡದಿರಲಿ, ಮತ್ತೊಬ್ಬರು ಸುಳ್ಳುಗಳನ್ನು ಹೇಳಲು ದಾರಿ ತೋರದಿರಲಿ, ಸುಳ್ಳು ಹೇಳುವವನ ಕೃತ್ಯವನ್ನು ಯಾರು ಅನುಮೋದಿಸದಿರಲಿ, ಎಲ್ಲ ಬಗೆಯ ಸುಳ್ಳುಗಳೂ ನಿಮ್ಮಿಂದ ದೂರ ಸರಿಯಲಿ.”

-ಭಗವಾನ್ ಬುದ್ಧ

‍ಲೇಖಕರು avadhi

May 16, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: