ಬುದ್ಧನ ಜ್ಞಾನೋದಯವೂ.. ಯಶೋಧರೆಯೊಡಲ ಕುದಿತವೂ..

ಇಂದು ಬುದ್ಧ ಜಯಂತಿ.

ಸುಧಾ ಆಡುಕಳ  ಅವರ ವಿಶೇಷ ಲೇಖನ ನಿಮಗಾಗಿ

ಈ ಲೇಖನವನ್ನೊಳಗೊಂಡ ಕೃತಿ ‘ಬಕುಲದ ಬಾಗಿಲಿನಿಂದ’ ಪುಸ್ತಕವಾಗಿ ಲಭ್ಯ.

ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ


“ಅಮ್ಮಾ, ನೀವು ನಿಜಕ್ಕೂ ಪುಣ್ಯವಂತರು. ಅದೆಂತಹ ತ್ಯಾಗವನ್ನು ಮಾಡಿಬಿಟ್ಟಿರಿ? ನಿಮ್ಮ ಕೈಯ್ಯೊಳಗಿನ ಮಾಣಿಕ್ಯವನ್ನು ಜಗದ ಬೆಳಕಾಗಲು ಬಿಟ್ಟಿರಿ. ಅವರ ಮುಖದ ಕಾಂತಿಯ ಬೆಳಕಲ್ಲಿ ಇಡಿಯ ಪ್ರಜಾಜನವೇ ತಮ್ಮ ಮನದ ಕತ್ತಲೆಯನ್ನು ಕಳಕೊಳ್ಳುವಂತೆ ಕಾಣುತ್ತದೆ. ಅವರು ಹೋದೆಡೆಯೆಲ್ಲ ಪ್ರೀತಿಯ ಬೆಳಕು ತಂತಾನೇ ಹರಿಯುತ್ತದೆ. ಅಮ್ಮಾ, ನೀವೊಮ್ಮೆ ಅವರನ್ನು ನೋಡಿ, ನಿಮ್ಮೊಳಗೂ ಪ್ರೀತಿಯ ಬೆಳಕು ತುಂಬಿಹೊಗದಿದ್ದರೆ ಮತ್ತೆ ಹೇಳಿ.” ಚಂದದ ಮಾತುಗಾತಿ ಅಂಬಿಕೆ ಯಶೋಧರೆಗೆ ಬುದ್ಧಚರಿತೆಯನ್ನು ವಿವರಿಸುತ್ತಿದ್ದಳು.

ಯಶೋಧರೆಗೆ ಭೂತವನ್ನು ಕೆದಕುವ ಮನಸ್ಸಿರಲಿಲ್ಲ. ಲಘುವಾಗಿ ತೇಲಿಸಿ ಹೇಳಿದಳು, “ನೋಡು ಅಂಬಿಕಾ, ಅವರು ಇಲ್ಲಿರುವಷ್ಟು ಕಾಲ ನಿನ್ನ ಗಂಡನನ್ನು ಭದ್ರಮಾಡಿಕೊ. ಮತ್ತೆ ಅವನೂ ಅವರ ಹಾದಿಯನ್ನೇ ಹಿಡಿದು ಹೋದಾನು!” ಅಂಬಿಕೆಗೆ ಅವಳ ಮಾತು ಹಿಡಿಸಲಿಲ್ಲ. “ಅವರಂತೆ ಜ್ಞಾನಿಯಾಗುವರೆಂದಾದರೆ ನನ್ನ ಗಂಡ ಇಂದೇ ಹೋಗಲಿ. ವರ್ಷಕ್ಕೊಂದು ಹೆತ್ತು ಹೈರಾಣಾಗುವ ನನ್ನ ಭವಣೆಯಾದರೂ ತೀರುವುದು.” ಅವಳ ಕೋಪದ ನುಡಿಗೆ ಯಶೋಧರೆ ವಿಷಾದದ ನಗೆ ನಕ್ಕಳು. ಅದರಿಂದ ಪ್ರೇರಿತಳಾದಂತೆ ಅಂಬಿಕೆ ಮತ್ತೆ ಉತ್ಸಾಹದಿಂದ ನುಡಿದಳು, “ಅಮ್ಮಾ, ನಿಜವಾಗಲೂ ನೀವು ಅವರನ್ನು ನೋಡಲು ಹೋಗುವುದಿಲ್ಲವೇನು?” ಯಶೋಧರೆ ಅವಳ ಕೈಹಿಡಿದು ಹೇಳಿದಳು, “ಇಲ್ಲ ಅಂಬಿಕೆ, ಅವರೇ ನನ್ನನ್ನು ನೋಡಲು ಬರುತ್ತಾರೆ, ನೊಡುತ್ತಿರು.”

ಅವರನ್ನು ನೋಡುವ ಯಾವ ಉತ್ಸಾಹವೂ ಯಶೋಧರೆಯಲ್ಲಿ ಉಳಿದಿರಲಿಲ್ಲ. ಜಗವೆಲ್ಲ ಕೊಂಡಾಡುವ ಅವನಲ್ಲಿ ಅವಳು ಹಂಚಿಕೊಳ್ಳುವ ಯಾವ ವಿಷಯವೂ ಇರಲಿಲ್ಲ. ಹೌದು, ಜಗದ ಜನರೆಲ್ಲ ತಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಲು ಅವನೆದುರು ಸಾಲುಗಟ್ಟಿ ನಿಲ್ಲುತ್ತಾರೆಂಬುದನ್ನು ಅವಳು ಕೇಳಿದ್ದಾಳೆ. ಆದರೆ ತನ್ನ ಎಲ್ಲ ಕಷ್ಟಗಳ ಮೂಲವೂ ಅವನೇ ಆಗಿರುವಾಗ ಪರಿಹಾರವನ್ನು ಅವನಲ್ಲಿಯೇ ಕೇಳಲಾಗದು. ಅವಳು ಮಾತ್ರವೇ ಇಂದು ಅವನ ಪ್ರಭಾವಲಯದಿಂದ ಈಚೆಗೆ ನಿಂತು ಅವನನ್ನು ನೋಡುತ್ತಿದ್ದಾಳೆ.

ಅಷ್ಟಕ್ಕೂ ಅವನು ಸೂಚಿಸುವ ಪರಿಹಾರವಾದರೂ ಏನು? ‘ತನ್ನ ಮುಗುವನ್ನು ಬದುಕಿಸಿಕೊಡು’ ಎಂದು ಗೋಳಾಡಿದ ಕಿಸಾಗೌತಮಿಗೆ ‘ಸಾವಿರದ ಮನೆಯ ಸಾಸಿವೆಯ ತಾ’ ಎಂದನಂತೆ. ಅವಳೋ ಸಾವಿರ ಮನೆಗಳನ್ನು ತಿರುಗಿ ಸಾಸಿವೆಯ ರಾಶಿಯನ್ನೇ ತಂದು ಸುರಿದಾಗ ತನ್ನ ಮಾತಿನ ಅರ್ಥ ‘ಸಾವು ಇರದ ಮನೆಯ ಸಾಸಿವೆ’ ಎಂದು ಮುಗುಳ್ನಕ್ಕನಂತೆ. ಸಾವಿರ ಮನೆಯ ಸುತ್ತಿ ಬರುವ ವೇಳೆಗಾಗಲೇ ಅವಳ ದುಃಖದ ಕಾವು ಆರಿರಬೇಕು. ಹಾಗಾಗಿ ಅವಳು ತನ್ನ ಮನವನ್ನು ತಾನೇ ಸಂತೈಸಿಕೊಂಡು ಮಗುವಿನ ಸಂಸ್ಕಾರ ಮಾಡಿರಬೇಕು. ಈ ಗಂಡುಗಳ ಲೋಕವೇ ವಿಚಿತ್ರ! ಮಹಿಮಾನ್ವಿತರಾಗಲು ಕಾದು ಕುಳಿತಿರುತ್ತಾರೆ.

ಹೆಣ್ಣೆಂದರೆ ಸಾಕು, ಕೀಟವನ್ನು ಆಕರ್ಷಿಸುವ ಮೋಹಕ ಬಲೆಯೆಂಬಂತೆ ದೂರ ಸರಿಯುವ ಅವರೆಲ್ಲರ ಮನೋನಿಗ್ರಹದ ಸಡಿಲತೆ ಯಶೋಧರೆಯನ್ನು ಸದಾ ಕಾಡುವುದು. ಇಲ್ಲವಾದಲ್ಲಿ ಪ್ರಾಣ ಹೋಗುವ ಸ್ಥಿತಿಯಲ್ಲಿದ್ದ ತನ್ನನ್ನು ಅನ್ನಾಹಾರ ನೀಡಿ ಪೋಷಿಸಿದ್ದ ಸುಜಾತೆ, ‘ತನಗೂ ದೀಕ್ಷೆ ನೀಡು ಗುರುವೆ’ ಎಂದು ಗೋಗರೆದಾಗ ಈ ಗುರು ಹೇಳಿದ್ದಾದರೂ ಏನು? “ನಿನ್ನ ಮನೋನಿಗ್ರಹದ ಬಗೆಗೆ ನನಗೆ ಸಂಶಯವಿಲ್ಲ. ಆದರೆ ಎಲ್ಲರಿಗೂ ನಿನ್ನ ದೃಢತೆ ಸುಲಭ ಸಾಧ್ಯವಲ್ಲ. ನಿನ್ನ ಆಗಮನದಿಂದಾಗಿ ಇತರ ಭಿಕ್ಷುಗಳ ಮನೋದಾಢ್ರ್ಯಕ್ಕೆ ಧಕ್ಕೆಯಾಗಬಹುದು. ದೀಕ್ಷೆ ನೀಡಲಾರೆ” ಎಂದರಂತೆ. ಹೆಣ್ಣ ಕಂಡೊಡನೆ ಸಡಿಲಗೊಳ್ಳುವ ಕಟ್ಟಡದ ಸುಭದ್ರತೆಯ ಬಗೆಗೇ ಸಂಶಯ ಅವಳಿಗೆ. ಎಲ್ಲರೂ ಸಮೂಹ ಸನ್ನಿ ಹಿಡಿದವರಂತೆ ಅವರ ಹಿಂದೆ ಧಾವಿಸುವಾಗ ತಾನೊಬ್ಬಳೇ ಹೀಗೆ ಭಿನ್ನ ಬಗೆಯಲ್ಲಿ ಯೋಚಿಸುವ ಬಗೆ ಅವಳಿಗೇ ಕೆಲವೊಮ್ಮೆ ಅಚ್ಚರಿಯನ್ನುಂಟುಮಾಡುತ್ತದೆ. ತಾನು ಬಾಲ್ಯದಲ್ಲಿ ಪಡೆದ ಶಿಕ್ಷಣವೇ ಇದಕ್ಕೆಲ್ಲ ಕಾರಣವೇನೋ ಎಂದು ಅವಳು ಯೋಚಿಸುತ್ತಿರುತ್ತಾಳೆ.

ಮಂತ್ರಿ ದಂಡಪಾಣಿಯ ಮಗಳು ಯಶೋಧರೆ. ಆ ಕಾಲಕ್ಕೆ ಅಪರೂಪವೆನಿಸಿದಂತೆ ಬಾಲ್ಯದಲ್ಲಿಯೇ ಸಂಸ್ಕøತ ಶಿಕ್ಷಣ ಅವಳಿಗೆ ದೊರೆತಿತ್ತು. ವೇದ, ಪುರಾಣ, ಶಾಸ್ತ್ರಗಳ ಬಗ್ಗೆ ಚರ್ಚಿಸುವಷ್ಟು ಪ್ರಾವೀಣ್ಯತೆ ಅವಳಲ್ಲಿತ್ತು. ಆದರೆ ಅಂತಹ ಅವಕಾಶಗಳು ದೊರೆತಿರಲಿಲ್ಲ ಅಷ್ಟೆ. ಅಂಥದೊಂದು ದಿವ್ಯ ಸಾಂಗತ್ಯಕ್ಕಾಗಿ ಅವಳು ಗೌತಮನಿಗೆ ಎಂದೆಂದಿಗೂ ಆಭಾರಿಯಾಗಿರುತ್ತಾಳೆ. ಅದು ಒದಗಿ ಬಂದದ್ದು ತೀರ ಆಕಸ್ಮಿಕವಾಗಿ. ಅಂದು ರಾಜಸಭೆಯಲ್ಲಿ ವೇದಾಂತದ ಚರ್ಚೆಯಿದೆಯೆಂದೇನೂ ಅವಳಿಗೆ ಗೊತ್ತಿರಲಿಲ್ಲ. ಮನೆಯಲ್ಲಿರಲಾರದೇ ತಂದೆಯೊಂದಿಗೆ ರಾಜಸಭೆಗೆ ಹೋಗಿದ್ದಳಷ್ಟೆ. ಅಲ್ಲಿ ನಡೆಯುವ ಚರ್ಚೆಯಲ್ಲಿ ವಿಷಯಗಳೆಲ್ಲವೂ ನಗಣ್ಯವಾಗಿ, ‘ಅಬ್ರಾಹ್ಮಣರಲ್ಲದವರು ಸಂಸ್ಕøತ ಕಲಿಯುವುದು ಸರಿಯೇ?’ ಎಂಬುದೇ ಪ್ರಾಮುಖ್ಯತೆಯನ್ನು ಪಡೆದು….. ಅದಕ್ಕೆ ವಿವರಣೆ ನೀಡಿದ ಪಂಡಿತರೋರ್ವರು “ಬ್ರಹ್ಮನ ಮುಖದಿಂದ ಬ್ರಾಹ್ಮಣರೂ, ತೋಳುಗಳಿಂದ ಕ್ಷತ್ರಿಯರೂ, ಹೊಟ್ಟೆಯಿಂದ ವೈಶ್ಯನೂ, ಕಾಲುಗಳಿಂದ ಶೂದ್ರರೂ ಹುಟ್ಟಿದ್ದರಿಂದಾಗಿ ವೇದ ಮಂತ್ರಗಳ ಕಲಿಕೆಗೆ ಬ್ರಾಹ್ಮಣರು ಮಾತ್ರವೇ ಹಕ್ಕುದಾರರು” ಎಂದು ಪ್ರತಿಪಾದಿಸುತ್ತಿದ್ದಾಗ ಯಶೋಧರೆ ಅವಳಿಗರವಿಲ್ಲದೇ ಎದ್ದುನಿಂತು, “ಗುರುಗಳೇ, ಹಾಗಾದರೆ ಸ್ತ್ರೀಯರು ಬ್ರಹ್ಮನ ಯಾವ ಭಾಗದಿಂದ ಹುಟ್ಟಿದರು?” ಎಂದು ಪ್ರಶ್ನಿಸಿ ಅವರನ್ನು ಕಕ್ಕಾಬಿಕ್ಕಿಯಾಗಿಸಿದಳು. ಸ್ತ್ರೀಯರಿಗೆ ಬ್ರಹ್ಮದಲ್ಲಿ ಜನಿಸುವ ಅರ್ಹತೆಯಿಲ್ಲವೆಂದು ಅವರು ಉತ್ತರಿಸುತ್ತಿರುವಂತೆಯೇ ಗೌತಮ ನಡುವೆ ಬಾಯಿಹಾಕಿ, “ಗಾರ್ಗಿ,ಮೈತ್ರೇಯಿ, ಸೂರ್ಯ, ಘೋಷ, ವೇದವತಿ ಇವರೆಲ್ಲ ವೇದವನ್ನು ರಚಿಸಲಿಲ್ಲವೆ?” ಎಂದು ಪ್ರಶ್ನಿಸಿದ್ದ. ಯಾಕೋ ಚರ್ಚೆ ವಿಷಮಘಟ್ಟಕ್ಕೆ ಹೋಗುವ ಸೂಚನೆ ಸಿಕ್ಕಿದ್ದರಿಂದ ಮಹಾರಾಜ ಶುದ್ಧೋದನ ವೇದಗೋಷ್ಠಿಯನ್ನು ತನ್ನ ಅನಾರೋಗ್ಯದ ನೆಪವೊಡ್ಡಿ ಮುಂದೂಡಿದ. ಕೋಪಗೊಂಡ ಬ್ರಾಹ್ಮಣರೆಲ್ಲಿಯಾದರೂ ಮಗನನ್ನು ಶಪಿಸಿದರೆ ಎಂಬ ಚಿಂತೆ ಅವನದ್ದು.

ಯಾರ ಬಗ್ಗೆಯೂ, ಯಾವುದರ ಬಗ್ಗೆಯೂ ವಿಚಾರಿಸದೇ ನಿರ್ಲಿಪ್ತನಾಗಿರುತ್ತಿದ್ದ ಗೌತಮ ಅಂದು ಯಶೋಧರೆಯ ಬಗ್ಗೆ ತಂದೆಯಲ್ಲಿ ವಿಚಾರಿಸಿದ್ದ. ಅದನ್ನೇ ಪ್ರೀತಿಯೆಂದು ಬಗೆದ ದೊರೆ ಅವರಿಬ್ಬರ ವಿವಾಹವನ್ನು ವಿಜ್ರಂಭಣೆಯಿಂದ ಮಾಡಿ ಮುಗಿಸಿದ್ದ. ಅಂದು ದೊರೆಗೆ ಅದೆಂಥದ್ದೋ ವಿಘ್ನವನ್ನು ಗೆದ್ದ ನಿರಾಳತೆ. ಹೌದು, ಅಪರೂಪವಾಗಿ ಹುಟ್ಟಿದ ಗೌತಮನ ಜಾತಕವನ್ನು ನೋಡಿದ ರಾಜಗುರುಗಳು ಭವಿಷ್ಯ ನುಡಿದಿದ್ದರು. ‘ಒಂದೋ ಇವನು ಜಗವನ್ನಾಳುವ ದೊರೆಯಾಗುತ್ತಾನೆ, ಇಲ್ಲವಾದಲ್ಲಿ ಜಗಕೆಲ್ಲ ಬೆಳಕು ತೋರುವ ಗುರುವಾಗುತ್ತಾನೆ.’ ಯಾವ ರಾಜ ತಾನೆ ತನ್ನ ಮಗ ಸನ್ಯಾಸಿಯಾಗಬೇಕೆಮದು ಬಯಸುತ್ತಾನೆ?

ಬಂದ ವಿಘ್ನವೊಂದು ಯಶೋಧರೆಯಿಂದಾಗಿ ದೂರವಾಯಿತೆಂಬ ನಿರಾಳತೆ ರಾಜನಿಗಾದರೆ, ಯಶೋಧರೆಯ ತಾಯಿ ಯಶೋಮತಿಯ ಚಿಂತೆಯೇ ಬೇರೆ. ಎಲ್ಲಿಯಾದರೂ ರಾಜಕುಮಾರ ಮದುವೆಯ ನಂತರ ಸಂನ್ಯಾಸಕ್ಕೆಳಸಿ ಓಡಿಹೋದನೆಂದರೆ ಮಗಳ ಬಾಳು ಮೂರಾಬಟ್ಟೆ. ಅದನ್ನವಳು ತನ್ನ ಗಂಡನಿಗೂ ಹೇಳಿದ್ದಾಳೆ. ಆದರವನಿಗೆ ಅದರ ಗೊಡವೆಯಿಲ್ಲ. ‘ಹೋದರೇನು? ನಿನ್ನ ಮಗಳು ಮಹಾರಾಣಿಯಾಗುತ್ತಾಳೆ ಬಿಡು’ ಎಂದು ನಗುತ್ತಾನೆ. ಗಂಡಸರದ್ದೆಂದಿದ್ದರೂ ಗದ್ದುಗೆಯ ಮೇಲೆಯೇ ಕಣ್ಣು! ತಾಯಿಹೃದಯ ಮಗಳ ಸುಖವನ್ನು ಹಂಬಲಿಸುತ್ತದೆ. ತನ್ನ ತವರಿನಿಂದ ಚೆಂದದ ಕುದುರೆಯನ್ನೂ, ಜೊತೆಗೊಬ್ಬ ಮೋಜುಗಾರ ಸವಾರನನ್ನು ಕರೆಸಿದ ಅವಳು ಮದುವೆಯ ಉಡುಗೊರೆಯೆಂದು ಅಳಿಯನಿಗೆ ನೀಡಿದಳು. ಇವೆಲ್ಲ ಸುಖಭೋಗಗಳು ಅವನನ್ನು ವೈರಾಗ್ಯದ ದಾರಿಗೆಳೆಯದ ಗುರಾಣಿಗಳೆಂದು ಅವಳ ಗ್ರಹಿಕೆ. ಅಂದಿನಿಂದ ಕುದುರೆ ಕಂಥನ ಮತ್ತು ಗೆಳೆಯ ಚೆನ್ನ ಗೌತಮನ ಅನುದಿನದ ಸಂಗಾತಿಯಾದವು.

ಯಶೋಧರೆಗೆ ಗೌತಮನ ಅರಮನೆಯೇ ಒಂದು ಬೆರಗು! ಅಲ್ಲಿ ದಕ್ಕದ ಸೌಲಭ್ಯಗಳೇ ಇಲ್ಲ. ವಜ್ರದ ಬೆಳಕಿನಲ್ಲಿಯೇ ಭೋಜನ, ಕಣ್ಣುಕುಕ್ಕುವ ಶೃಂಗಾರ ಸಾಧನಗಳ ಓರಣ, ಬಗೆಬಗೆಯ ಚಿತ್ರಗಳ ಜೋಡಣೆ. ಅಬ್ಬಾ……… ಲೋಕದ ಸೊಗವನ್ನು ಮಾತ್ರವೇ ಭಟ್ಟಿಯಿಳಿಸಿ ಜೋಡಿಸಿದಂತಿತ್ತು! ಇವೆಲ್ಲವುಗಳ ನಡುವಿರುವ ಗೌತಮ ಮಾತ್ರ ಅಪ್ಪಟ ಮನುಷ್ಯನಾಗಿದ್ದ. ಅವಳ ಪ್ರತಿಯೊಂದು ಹಾವಭಾವಕ್ಕೂ ಅವನು ಅಚ್ಛರಿಗೊಳ್ಳುವ ಪರಿ ಅವಳನ್ನು ಬೆಚ್ಚಿಬೀಳಿಸುತ್ತಿತ್ತು. ಅವಳೊಮ್ಮೆ ಬೇಸರದಲ್ಲಿರುವಾಗ ಅವನು ಕೇಳಿದ್ದ, “ಏಕೆ ನೀನು ಎಂದಿನಂತಿಲ್ಲ?” ಅವಳು ತನ್ನನ್ನು ಕಾಡುವ ತವರಿನ ಬಗೆಗೆ ಹೇಳಿದಳು. ಅವನು ಬೇಸರವೇನೆಂದು ಕೇಳಿದ. ಅವಳು ಭಯ, ದುಃಖ, ಬೇಸರ, ಸಂತೋಷ ಎಲ್ಲವನ್ನೂ ಉದಾಹರಣೆಯೊಂದಿಗೆ ವಿವರಿಸತೊಡಗಿದಳು. “ಈಗ ನೋಡಿ, ನಿಮ್ಮ ತಾಯಿ ಮಾಯಾವತಿ ನಿಮ್ಮನ್ನು ಬಾಲ್ಯದಲ್ಲಿಯೇ ಅಗಲಿದರು. ಅವರ ನೆನಪಾದಾಗ ನಿಮಗೆ ದುಃಖವಾಗುವುದಿಲ್ಲವೆ?” ಅವನಿಗೆ ತಾಯಿಯ ಬಗೆಗೆ ತಿಳಿದೇ ಇರಲಿಲ್ಲ. “ಪ್ರಜಾಪತಿದೇವಿಯಲ್ಲವೆ ನನ್ನ ತಾಯಿ?” ಎಂದು ಮುಗ್ಧವಾಗಿ ಪ್ರಶ್ನಿಸಿದ. “ಮರಣ…….! ಹಾಗಂದರೇನು?” ಎಂದು ಅವಳಿಂದ ಕೇಳಿ ತಿಳಿದ. “ಹಾಗಾದರೆ ಯಶೂ… ನೀನೂ ಒಂದು ದಿನ ಮರಣ ಹೊಂದುವೆಯಾ?” ಎಂದು ಪುಟ್ಟ ಮಗುವಿನಂತೆ ಅವಳ ಮಡಿಲಿನಲ್ಲಿ ಬಿಕ್ಕಳಿಸಿದ. ಯಶೋಧರೆಗೆ ಪರಮಾಶ್ಚರ್ಯ! ಏನೊಂದನ್ನೂ ತಿಳಿಸದೇ ಬೆಳೆಸಿದ ಮಗುವಿದು ಎಂಬುದು ಅವಳಿಗೆ ಮನದಟ್ಟಾಯಿತು. ಅವಳು ಅವನ ನಿಜವಾದ ಗುರುವಾದಳು.

ಅಂದವಳಿಗೆ ಮುಟ್ಟಿನ ಸ್ರಾವ. ಬಿಡದೇ ಕಾಡುವ ನೋವು. ಪ್ರೀತಿಯಿಂದ ಬಳಿ ಬಂದ ಗೌತಮನಿಗೆ ಹುಟಿನ್ಟ ಗುಟ್ಟಿನ ಪಾಠವನ್ನು ತಾಳ್ಮೆಯಿಂದ ಹೇಳಿದಳು. ದೇಹಕ್ಕೂ ನೋವಿದೆಯೆಂಬುದನ್ನು ಅವನಿಗೆ ಮನದಟ್ಟುಮಾಡಿಕೊಟ್ಟಳು. ವಿಶ್ರಾಂತಿ ಪಡೆಯುವಂತೆ ಹೇಳಿದ ಗೌತಮ ಗೆಳೆಯ ಚೆನ್ನನೊಂದಿಗೆ ಇಡಿಯ ರಾಜಧಾನಿಯನ್ನು ಸುತ್ತಿ ಬಂದಿದ್ದ. ಅಲ್ಲಿ ಕಂಡಿದ್ದ ಮುದುಕ ಮತ್ತು ರೋಗಿಯ ಬಗೆಗೆ ದಿನಗಟ್ಟಲೆ ಅವಳಲ್ಲಿ ಮಾತನಾಡಿದ್ದ. ಹೀಗೆ ಗೌತಮ ಬೆಳೆಯುತ್ತಿರುವಂತೆ ಯಶೋಧರೆಯ ಒಡಲಿನಲ್ಲಿ ರಾಹುಲನೂ ಬೆಳೆಯುತ್ತಿದ್ದ. ಇತ್ತ ದೊರೆಗೆ ತನ್ನ ಸೊಸೆಯ ರೂಪ, ಲಾವಣ್ಯ, ಬುದ್ದಿವಂತಿಕೆಯ ಬಗ್ಗೆ ಎಷ್ಟು ಹೊಗಳಿದರೂ ಸಾಲದು. ಎಲ್ಲರಲ್ಲಿಯೂ ಅವಳದೇ ಗುಣಗಾನ.

ರಾಹುಲನಿಗೀಗ ಹತ್ತು ತಿಂಗಳ ಪ್ರಾಯ. ಅವನ ಆರೈಕೆಯಲ್ಲಿ ಯಶೋಧರೆಗೆ ಹೊತ್ತು ಹೋದದ್ದೇ ತಿಳಿಯುವುದಿಲ್ಲ. ಗೌತಮನಿಗೂ ಈಗ ಚೆನ್ನನೊಂದಿಗೆ ದೇಶ ಸುತ್ತುವ ಹಂಬಲ. ಅಲ್ಲಿ ಕಂಡದ್ದೆಲ್ಲವನನ್ನೂ ಅವನೀಗ ತನ್ನೊಂದಿಗೆ ಹಂಚಿಕೊಳ್ಳುತ್ತಿಲ್ಲ ಎಂಬುದು ಯಶೋಧರೆಯ ಗಮನಕ್ಕೂ ಬಂದಿದೆಯಾದರೂ ಅವಳದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಂದು ರಾತ್ರಿ ಮಲಗುವಾಗ ಗೌತಮ ಅವಳ ಕೈಯನ್ನು ತನ್ನ ಅಂಗೈಯಲ್ಲಿಟ್ಟು ಹೇಳಿದ್ದ, “ಯಶೂ, ಜಗದ ನೋವನ್ನೆಲ್ಲ ಮರೆಸುವ ಮಾಯದ ಹರಳೊಂದು ಅಂಗೈಯಲ್ಲಿರುವಂತಿದ್ದರೆ ಎಷ್ಟು ಚೆನ್ನಿತ್ತಲ್ಲವೆ? ಆಗ ಎಲ್ಲರೂ ಸುಖವಾಗಿರಬಹುದಿತ್ತು” ಅವಳು ಅವನ ತೋಳುಗಳನ್ನು ನೇವರಿಸುತ್ತ ನುಡಿದಿದ್ದಳು, “ಹೌದು. ಆದರೆ ರಾಜ್ಯದ ಎಲ್ಲ ಪ್ರಜೆಗಳನ್ನು ಸುಖವಾಗಿಡುವ ಅವಕಾಶ ನಿಮ್ಮೆದುರು ಕಾಲೂರಿ ಕುಳಿತಿದೆ. ಮತ್ತೆ ನೀವದನ್ನು ಯಶಸ್ವಿಯಾಗಿ ಮಾಡುವಿರೆಂಬ ನಂಬಿಕೆಯೂ ನನಗಿದೆ.” ಅದಕ್ಕವನು ಬೇರೆಯೇ ಮಾತನ್ನಾಡಿದ್ದ, “ರಾಜ್ಯ, ದೇಶದ ಗೆರೆಗಳನ್ನು ಅಳಿಸಿಬಿಡು. ನಾನು ಇಡಿಯ ಮಾನವ ಲೋಕದ ಬಗ್ಗೆ ಯೊಚಿಸುತ್ತಿರುವೆ. ಯಶೂ, ನೀನು ನನ್ನನ್ನು ಆ ಹಾದಿಯಲ್ಲಿ ಹೋಗಗೊಡುವೆಯಾ?” ಆರ್ತನಾಗಿ ಕೇಳಿದ ಅವನ ನೆತ್ತಿಯನ್ನು ಚುಂಬಿಸಿ ಅವಳು ಹೇಳಿದ್ದಳು, “ಅದೆಷ್ಟೇ ಕಷ್ಟದ ಹಾದಿಯಾದರೂ ನಾನು ನಿಮ್ಮ ಜೊತೆಗಿರುವೆ.”

ಆ ಘಟನೆ ನೆನಪಾದಾಗಲೆಲ್ಲ ಅಶಾಂತ ಕೊಳವಾಗುತ್ತಾಳೆ ಯಶೋಧರೆ. ಆ ರಾತ್ರಿಯ ಮಾರನೆಯ ಬೆಳಗು ಅರಮನೆಯಲ್ಲಿ ಗೌತಮನಿರಲಿಲ್ಲ, ಕಂಥನವೂ ಮಾಯ, ಚೆನ್ನನೂ ಕಾಣೆ. ಕುದುರೆಯೇರಿ ಹೋದವನ ಹುಡುಕಿ ತರುವ ಹಂಬಲ ದೊರೆ ಶುದ್ಧೋಧನನಿಗೆ. ಸೈನಿಕರಿಗೆ ಆದೇಶಿಸಿದ, “ಕೂಡಲೇ ಎಲ್ಲಿದ್ದರೂ ಹುಡುಕಿ ತನ್ನಿ ನನ್ನ ಮಗನನ್ನು. ಗಲ್ಲಿಗೇರಿಸಿ ಅವನನ್ನು ಕೊಂಡೊಯ್ದ ಚೆನ್ನನನ್ನು!” ಯಶೋಧರೆ ತಡೆದಳು, “ಬೇಡ, ಹುಡುಕಿದರೂ ಅವರು ಸಿಗಲಾರರು, ಸಿಕ್ಕಿದರೂ ಮರಳಿ ಬರಲಾರರು. ಬಿಡಿ ಅವರನ್ನು.” ಮಾವನ ಸಿಟ್ಟು ಸೊಸೆಯೆಡೆಗೆ ತಿರುಗಿತ್ತು. ಅದುವರೆಗೆ ಕಂಗೊಳಿಸಿದ ಅವಳ ರೂಪ ಅಂದು ಅವಹೇಳನಕ್ಕೆ ಒಳಗಾಯಿತು. ಅದು ಅಪರೂಪದ್ದಾದರೆ ಗಂಡನನ್ನು ಸೆಳೆದು ಹಿಡಿದಿರಬೇಕಿತ್ತು. ಅವಳ ಬುದ್ದಿವಂತಿಗೆ ಹೀಗಳೆಯಲ್ಪಟ್ಟಿತ್ತು. ಪತಿಯ ಸಂನ್ಯಾಸತ್ವವನ್ನು ತಪ್ಪಿಸಲು ಸೋತ ಬುದ್ದಿವಂತಿಕೆಗೆ ಕವಡೆಯ ಬೆಲೆಯೂ ಇರಲಿಲ್ಲ. ಎಲ್ಲರ ಚಿತ್ತವೂ ನೆಟ್ಟಿದ್ದದದ್ದು ಮಗ ರಾಹುಲನ ಮೇಲೆ. ಅಂತೂ ವಂಶಕ್ಕೊಂದು ಕುಡಿಯನ್ನು ಹೆತ್ತುಕೊಟ್ಟಿದ್ದಕ್ಕೆ ಇಡಿಯ ಅರಮನೆ ಅವಳಿಗೆ ಕೃತಜ್ಞವಾಗಿತ್ತು.

ಇನ್ನೂ ಅವಳಿಗೆ ಅರ್ಥವಾಗದ ಕಹಿಸತ್ಯವೆಂದರೆ ಇದು. ಗೌತಮದ ಎಲ್ಲ ಕಾರ್ಯಗಳಲ್ಲಿಯೂ ಜೊತೆಯಾಗಿರುವೆನೆಂದು ಪ್ರಮಾಣಿಸಿದ ಮೇಲೂ ತನ್ನನ್ನು ಒಂಟಿಯಾಗಿಸಿದ ಆತನ ಕ್ರೌರ್ಯ ಅವಳನ್ನು ಹಗಲಿರುಳು ಕಾಡುತ್ತಿತ್ತು. ಅಗ್ನಿಸಾಕ್ಷಿಯಾಗಿ ಒಂದಾದ ಅವರು ಬೇರೆಯಾಗುವುದು ಅವನ ಆಯ್ಕೆ ಮಾತ್ರವೇ ಎಂದಾದರೆ ತನ್ನ ಅಸ್ತಿತ್ವಕ್ಕೆ ಬೆಲೆಯೆಲ್ಲಿ? ಎಂದವಳು ಹಗಲು ರಾತ್ರಿ ಚಿಂತಿಸುವಳು. ತಾನೂ ಅವನಂತೆ ಸಂನ್ಯಾಸಿಯಾಗಿ ಬದುಕಬಲ್ಲೆನೆಂಬ ಸ್ಥೈರ್ಯ ಅವಳಲ್ಲಿದೆ. ಆದರೆ ಅರಮನೆಯ ಆವರಣ ಅದಕ್ಕೆ ಸಮ್ಮತಿಸದು. ಅವಳು ಪ್ರತಿದಿನವೂ ಯುವರಾಣಿಯಂತೆ ಶೃಂಗಾರಗೊಂಡು ಮಗು ರಾಹುಲನೊಂದಿಗೆ ರಾಜಸಭೆಗೆ ಹೋಗಲೇಬೇಕು. ಅರಮನೆಯ ಎಲ್ಲ ಉತ್ಸವಗಳಲ್ಲಿ ಪಾಲುದಾರಳಾಗಲೇಬೇಕು. ಸುಪ್ಪತ್ತಿಗೆಯ ಮೇಲೆ ಮಲಗಲೇಬೇಕು. ಆದರೆ ಅವಳೊಳಗಿನ ಬೆಂಕಿಯನ್ನು ಉರಿಯಬಿಡಬೇಕು. ಗಂಡನಿಲ್ಲದ ಏಕಾಂತವನ್ನು ಸಹಿಸಲೇಬೇಕು. ಜೀವಂತ ಉರಿಯುವ ಈ ಬದುಕು ಅವಳ ಆಯ್ಕೆಯಲ್ಲ. ಆದರೆ ಅದನ್ನು ಅನಿವಾರ್ಯವಾಗಿಸಿ ಹೋದ ಗೌತಮ. ಒಂದು ಮಾತು ಹೇಳಿದರೆ ಅದೆಂತಹ ದುರ್ಗಮ ನಡಿಗೆಯಾದರೂ ಅವನನ್ನು ಹಿಂಬಾಲಿಸಲು ಅವಳು ತುದಿಗಾಲಲ್ಲಿ ನಿಂತಿದ್ದಳು. ಬರಿಯ ಅವನ ದೈಹಿಕ ಜೊತೆಗಾತಿಯಲ್ಲ ಅವಳು, ಆತ್ಮಸಂಗಾತಕ್ಕೂ ಅರ್ಹಳಾದವಳು. ಅವಳು ಇದಕ್ಕಾಗಿ ಅವನನ್ನೆಂದಿಗೂ ಕ್ಷಮಿಸಲಾರಳು. ಅದಕ್ಕೆಂದೇ ಅರಮನೆಗೆ ಬಂದ ಗೌತಮನನ್ನು ಎರಡು ದಿನಗಳಾದರೂ ಅವಳು ಸಂಧಿಸಿಲ್ಲ. ಬೇಕಾದರೆ ಅವನೇ ಬರುತ್ತಾನೆ ಎಂಬ ಉದಾಸೀನ ಭಾವದಿಂದಿದ್ದಾಳೆ.

ಮೂರನೇ ದಿನ ಬಂದ ಬುದ್ಧ. ಅವಳ ಅಂತಃಪುರದಲ್ಲಿಯೇ ಅವಳನ್ನು ಸಂಧಿಸಿದ. ಮಾತು ಸೊತ ಗಳಿಗೆಯಲ್ಲಿ ತಾನೇ ಮಾತಾದ.
“ಕ್ಷಮಿಸುವಿಯೇನು ನನ್ನ?”
“ಖಂಡಿತ ಇಲ್ಲ.” ಸಿಡಿದು ನುಡಿದಳು ಅವಳು.
“ಅನಿವಾರ್ಯವಿತ್ತದು. ಸಂಸಾರದ ಜಂಜಡವ ಮೀರದೇ ಜ್ಞಾನಿಯಾಗುವುದು ಸಾಧ್ಯವಿರಲಿಲ್ಲ”
“ಅಸಹಾಯಕತೆ ಅದು. ಅನಿವಾರ್ಯವಲ್ಲ. ನನ್ನನ್ನು ಒಳಗೊಳ್ಳದಷ್ಟು ಅಮೂಲ್ಯವಾದುದೇನಾಗಿರಲಿಲ್ಲ ನಿಮ್ಮ ತಿಳುವಳಿಕೆ.”
“ಸತ್ಯ. ಆದರೆ ನೀನೆಂದರೆ ನೀನು ಮಾತ್ರವಲ್ಲ. ನಿನ್ನೊಂದಿಗೆ ಸುತ್ತಿ ಬರುವ ಎಲ್ಲ ಬಂಧನಗಳನ್ನೂ ಕಳಚಬೇಕೆಂದರೆ ನಿನ್ನನ್ನು ಅಗಲುವುದು ಅನಿವಾರ್ಯವೆನಿಸಿತು.”
“ನಿಮ್ಮ ವಿಚಾರ ನಿಮ್ಮದು. ನನ್ನ ಲೋಕದ ತಲ್ಲಣಗಳ ಗೊಡವೆ ನಿಮಗೇಕೆ? ಮತ್ತೆ ಭೇಟಿಯಾಗುವುದೇನೂ ಅನಿವಾರ್ಯವಲ್ಲವಲ್ಲ?”
“ನಾನು ನಿನ್ನಲ್ಲಿ ಕ್ಷಮೆ ಕೇಳಬೇಕಿದೆ. ಜಗವೆಲ್ಲ ಇಂದು ಹೇಳುತ್ತಿದೆ, ಬುದ್ಧನಿಗೆ ಜ್ಞಾನೋದಯವಾದುದು ಬೋಧವೃಕ್ಷದ ಅಡಿಯಲ್ಲಿ ಎಂದು. ಆದರೆ ಅದು ಭಾಗಶಃ ಸತ್ಯ. ಜ್ಞಾನದ ಲೋಕದ ಮೊದಲ ಬಾಗಿಲನ್ನು ನನ್ನೆದುರು ತೆರೆದವಳು ನೀನು.” ಯಶೋಧರೆಯ ಕಣ್ಣಂಚು ಒದ್ದೆಯಾಗಿತ್ತು. ವಿಷಯ ಬದಲಿಸುವಂತೆ ಹೇಳಿದಳು,
“ಅಂಗುಲಿಯನ್ನೂ ಮಣಿಸಿದಿರಂತೆ, ಕೇವಲ ನೋಟದಲ್ಲಿಯೆ!”
“ಅದನ್ನೇ ಹೇಳಲು ನಿನ್ನವರೆಗೂ ಬಂದೆ. ಹತ್ತು ವರ್ಷಗಳ ಕಾಲ ಚಿಂತಿಸಿದ್ದೇನೆ. ನಿನ್ನ ನೋಟವನ್ನು ಎದುರಿಸುವುದು ಹೇಗೆಂದು? ಎಲ್ಲ ಸಿದ್ಧಿಯ ನಂತರವೂ ನೀನು ನನ್ನೆದುರು ಇಡುವ ಪ್ರಶ್ನಾರ್ಥಕ ನೋಟವೊಂದಕ್ಕೆ ಉತ್ತರಿಸುವ ಜ್ಞಾನ ನನಗೆ ಸಿಗಲಿಲ್ಲ. ನಿನ್ನ ನೋಟದ ಹರಿತದೆದುರು ಅಂಗುಲಿಯ ಕ್ರೌರ್ಯ ನಗಣ್ಯವೆನಿಸಿಹೋಯ್ತು. ಇಂದಿವನ ನೊಟದಲ್ಲಿಯೇ ಮಣಿಸಿದರೆ ಮಾತ್ರವೇ ನಿನ್ನನ್ನು ನಾನೆದುರಿಸಬಲ್ಲೆ ಅಂದುಕೊಂಡೆ. ಹಾಗೆ ನಿರ್ಲಿಪ್ತನಾಗಿ ಅವನೆಡೆಗೆ ನೋಡುತ್ತಾ ನಡೆದೆ. ನಿನ್ನೊಳಗಿನ ತಳಮಳ ಅದೆಷ್ಟು ಆಳ ನೋಡು? ಅವನೂ ಬೆಚ್ಚಿದ ನನ್ನ ಕರುಣೆಯ ನೋಟಕ್ಕೆ. ಅವನ ಎದುರಿಸಿದ ಹಿಂದಿನ ದೃಢತೆ ನೀನು ಯಶೂ…” ಬುದ್ಧನೂ ಬಿಕ್ಕಳಿಸಿದ.

ಅದೆಷ್ಟೋ ಹೊತ್ತು ಮಾತಿಗೆ ಕೆಲಸವಿರಲಿಲ್ಲ ಅಲ್ಲಿ. ಹೆಪ್ಪುಗಟ್ಟಿದ್ದ ಭಾವಗಳೆಲ್ಲ ಗಾಳಿಯೊಂದಿಗೆ ಕಲಸಿಹೊಗುತ್ತಿದ್ದವು. ದೀರ್ಘಮೌನದ ಬಳಿಕ ಬುದ್ಧ ಸ್ಥಿತಪ್ರಜ್ಞನಾಗಿ ಹೇಳಿದ, “ಯಶೋಧರಾ, ರಾಜ್ಯದ ಎಲ್ಲರೂ ನನಗೆ ಭಿಕ್ಷೆಯಿತ್ತಿದ್ದಾರೆ. ಆದರೆ ಈ ಬಡ ಸಂನ್ಯಾಸಿ ನಿನ್ನ ಕೈಯ್ಯ ಭಿಕ್ಷೆಗಾಗಿ ಕಾದಿದ್ದಾನೆ.”

ಯಶೋಧರೆ ಹೊರಬಾಗಿಲಲ್ಲಿ ನಿಂತು ಸಖಿಯರಿಗೆ ಏನೋ ಸನ್ನೆ ಮಾಡಿದಳು. ಅವರು ರಾಹುಲನನ್ನು ಕರೆದುತಂದರು. ನೀಡಿದ ಗೌತಮನ ಕೈಯ್ಯಲ್ಲಿ ಮಗನನ್ನು ಇಟ್ಟು ನಿರಾಳವಾದಳು!

ಒಂದೇ ಗಾದೆ ‘ಪ್ರತಿಯೊಂದು ಯಶಸ್ವೀ ಗಂಡಿನ ಹಿಂದೆ ಒಬ್ಬಳು ಹೆಣ್ಣಿರುತ್ತಾಳೆ.’ ಇದೊಂದೇ ಮಾತಿಗಾಗಿ ಎಷ್ಟೊಂದು ಕನಸುಗಳು ಕಮರಿಹೋಗಿರಬಹುದು ಇಲ್ಲಿ ಲೆಕ್ಕವಿಟ್ಟವರ್ಯಾರು? ತನ್ನ ಸಾಧನೆಯ ದಾರಿಯಲ್ಲಿ ಗಂಡನ್ನು ಯಾವ ಬಂಧನವೂ ಬಾಧಿಸದು. ಆದರೆ ತೊರೆದು ಹೋದ ಹೆಣ್ಣುಗಳು? ಕೇವಲ ವೈರಾಗ್ಯದ ಮಾತಲ್ಲವಿದು. ಸಾಲವಾಯಿತೆಂದೋ…, ಸಂಸಾರ ಗೊಂದಲದ ಗೂಡಾಯಿತೆಂದೋ, ಬೇರೆಯ ಯಾವುದೋ ಆಕರ್ಷಣೆ ಸೆಳೆಯಿತೆಂದೋ ದಿನಬೆಳಗಾಗುವುದರೊಳಗೆ ಕಣ್ಮರೆಯಾಗಿಬಿಡುವ ಗಂಡು ಲೋಕಕ್ಕೆ ಸಂಸಾರವೆಂಬುದು ಕೆಸುವಿನೆಲೆಯ ಮೇಲಿನ ನೀರಿನಂತೆ ಸುಲಭ.

ಆದರೆ ಹೆಣ್ಣು ಅದನ್ನು ಅಂಟಿಕೊಂಡ ನಂಟಂತೆ ಕೊನೆಯವರೆಗೂ ಎಳೆಯುತ್ತಲೇ ಇರುತ್ತಾಳೆ. ಹಾಗೆ ಹೋದ ಗಂಡು ಮತ್ತೆ ಬಯಸಿದರೆ ತನ್ನದೇ ಇನ್ನೊಂದು ಸಂಸಾರವನ್ನು ಸೃಜಿಸಿಕೊಳ್ಳಬಲ್ಲ. ಹೆಣ್ಣಿಗೆ ಅಂತಹ ಸ್ವಾತಂತ್ರ್ಯ ಬಹುತೇಕ ಕನ್ನಡಿಯೊಳಗಿನ ಗಂಟು. ಅದಕ್ಕೇ ಇರಬೇಕು, ಮದುವೆಯಾದದ್ದಕ್ಕೆ ಹೆಣ್ಣಿನ ಮೈಮೇಲೆ ಹತ್ತಾರು ಕುರುಹುಗಳು. ಗಂಡಿನ ಮೈ ಮಾತ್ರ ಬೋಳು, ಬೋಳು. ಗಂಡಿಗೆ ಕಾಮನೆಗಳು ಹಕ್ಕು ಮತ್ತು ಆಯ್ಕೆಯಾದರೆ ಹೆಣ್ಣಿಗೆ ಅವುಗಳನ್ನೆಲ್ಲ ಜಯಿಸುವುದೇ ಸಾರ್ಥಕತೆ ಎನ್ನುತ್ತದೆ ನಮ್ಮ ಸಮಾಜ. ಹಾಗಾಗಿಯೇ ಆಲಿಸಬೇಕಾದ ಎಷ್ಟೋ ನಿಟ್ಟುಸಿರುಗಳನ್ನು ನಮ್ಮೆದುರು ತೆರೆದಿಟ್ಟು ಮೌನವಾಗುತ್ತಾಳೆ ಯಶೋಧರೆ.

ಜ್ಞಾನೋದಯಕ್ಕಾಗಿ ಬುದ್ಧ ಹಂಬಲಿಸುವಾಗಲೆಲ್ಲ ಯಶೋಧರೆಯ ಒಡಲೊಳಗಿನ ಕುದಿತ ಮರುಕಳಿಸುತ್ತಲೇ ಇರುತ್ತದೆ.

‍ಲೇಖಕರು avadhi

May 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

6 ಪ್ರತಿಕ್ರಿಯೆಗಳು

  1. Sudha Hegde

    ಇಷ್ಟು ಚೆಂದದ ಚಿತ್ರಗಳನ್ನು ಹೆಕ್ಕಿತರುವ
    ಅವಧಿಗೆ ಧನ್ಯವಾದಗಳು

    ಪ್ರತಿಕ್ರಿಯೆ
  2. Ahalya Ballal

    ಒಂದೊಂದು ಪಾತ್ರದ ಮನೋಲಹರಿಯಲ್ಲೂ ಪರ ಹಾಗೂ ವಿರುದ್ಧವಾಗಿ ಯೋಚಿಸ್ತೀರಲ್ಲ ಸುಧಾ. ಖುಶಿಯಾಗುತ್ತೆ ಓದುವಾಗ.

    ಪ್ರತಿಕ್ರಿಯೆ
  3. kadameblog

    ಐತಿಹಾಸಿಕ ಕಥನವೊಂದರ ಮರುಸೃಷ್ಟಿಯನ್ನು ಎಷ್ಟು ಸೊಗಸಾಗಿ ಮಾಡಿದ್ದೀರಿ ಸುಧಾ, ವ್ಯವಸ್ಥೆಯೇ ನಿರ್ಮಿಸಿದ ಸಂಪ್ರದಾಯಕ್ಕೆ ತುತ್ತಾದ ಸ್ತ್ರೀಪಾತ್ರವೊಂದರ ಮನೋವಿಶ್ಲೇಷಣೆಗಳು ವ್ಯವಸ್ಥೆಯನ್ನೇ ಬೊಟ್ಟು ಮಾಡಿ ತೊರಿಸುವ ಹಾಗೆ ಎಷ್ಟು ಪ್ರಬುದ್ಧವಾಗಿ ನಿರೂಪಿಸಿದ್ದೀರಿ ಸುಧಾ, ಅಷ್ಟರ ಮಟ್ಟಿಗೆ ಬುದ್ಧನನ್ನು ಯಶೋಧರೆ ಕ್ಷಮಿಸಿಯಾಳು ಅನಿಸುತ್ತದೆ.. ಈ ಬರಹ ವೈದೇಹಿಯವರ ‘ಶಕುಂತಲೆಯೊಂದಿಗೆ ಒಂದು ಅಪರಾಹ್ನ ‘ ದಂತೆ ಒಂದು ಸ್ವತಂತ್ರ ಕತೆಯೇ ಆಗಿದೆ.. ತುಂಬ ಹೆಮ್ಮೆ ಎನಿಸಿತು..
    -ಸುನಂದಾ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: