ಬುದ್ಧನೊಂದಿಗಿನ ಗುದ್ದಾಟ

ಎನ್ ಪಾರ್ವತಿ

ಮೌನದ ಮೊರೆ ಹೋದೆ ನೀನು,
ಮಾತಿನ ಮೊನಚಿಗೆ ಸಿಗಬಾರದೆಂದೆ?
ನಿನ್ನೊಳಗಿನ ದ್ವಂದ್ವವನ್ನು
ಮೀರಲು ಪ್ರೇರೇಪಿಸಿತ್ತೆಂದೆ?
ಏನೋ ಗೊತ್ತಿಲ್ಲ
ಸಾಮಾನ್ಯ ಗಂಡಿನ ಮೌನವನ್ನೇ
ಅರಿಯಲಾರದ
ಎಲ್ಲವನ್ನೂ ಬಡಬಡಿಸಿಬಿಡುವ
ಸಾಮಾನ್ಯ ಹೆಣ್ಣು ನಾನು.

ಗಂಡಿನ ಅಸಾಧಾರಣ
ಮೌನದಿಂದ ಕಂಗೆಟ್ಟು
ಹಲ್ಲುಕಚ್ಚಿ ಸಹಿಸಿ, ಸಹಿಸಿ
ಕೊನೆಗೊಮ್ಮೆ ಮೌನವನ್ನು
ಭೇದಿಸಲೇಬೇಕಾದ
ಅಸಹಾಯಕತೆಗೆ ಬಲಿಯಾಗಿ
ಮನದ ಎಲ್ಲಾ ತುಮುಲವನ್ನೂ
ಒಟ್ಟಿಗೇ ಕಕ್ಕಿಬಿಟ್ಟು ಕಂಗಾಲಾಗುವ
ಸಾಮಾನ್ಯ ಮನೆಯೊಡತಿ ನಾನು.

ಪ್ರಶ್ನೆಯನ್ನೇ ಕೇಳದೆ
ಎದುರುತ್ತರವನ್ನೇ ಕೊಡದೆ
ಆಡಬೇಕಿದ್ದ ಎಲ್ಲ ಮಾತುಗಳನ್ನು
ಅನಾದಿಕಾಲದಿಂದಲೂ ಗರ್ಭದಲ್ಲೇ
ಹೂತಿಟ್ಟುಕೊಂಡು ಬಂದಿದ್ದರೂ
ಮೌನಯುದ್ಧದ ಘಳಿಗೆಯಲ್ಲಿ
ಉಸಿರುಗಟ್ಟಿದ ಕ್ಷಣ
ಕಟ್ಟೆಯೊಡೆದು ನುಗ್ಗಿದ
ಭಾವನೆಗಳ ಮಹಾಪೂರದಲ್ಲಿ
ಕೊಚ್ಚಿಹೋಗಿ ತತ್ತರಿಸಿ ಹೋದ
ಕೋಪದ ಹೆಣ್ಣು ನಾನು.

ಮೌನವೆಂಬೋ ಆಯುಧವೂ ಕೂಡ
ಎರಡೂ ಕಡೆಯೂ ಮೊನಚು;
ಅದು ನಿಷ್ಕರುಣೆಯಿಂದ
ನಿರ್ಮೋಹದಿಂದ ಕೆಣಕಿದವರನ್ನು
ಕೊಚ್ಚಿ ಕೊಲ್ಲಬಲ್ಲದು ಎಂಬುದನ್ನು
ಅಸಾಹಾಯಕ ಘಳಿಗೆಗಳಲ್ಲಿ
ಅನುಭವದಿಂದಲೇ
ಕಂಡುಕೊಂಡ ಲೌಕಿಕದ ಹೆಣ್ಣು ನಾನು.

ಮೌನವೆಂಬೋ ಉತ್ತರವನ್ನು
ಒಡೆಯಬೇಕಿದೆ ಬುದ್ಧ ;
ನನ್ನ ನಿಲುವನ್ನು ಸಮರ್ಥಿಸಿಕೊಳ್ಳಬೇಕಿದೆ
ನನ್ನ ಬಯಕೆಗಳನ್ನು ಬಯಲಾಗಿಸಬೇಕಿದೆ
ಹಾರಬೇಕಿದೆ, ಈಜಬೇಕಿದೆ,
ನಿರಾಳವಾಗಿ ಉಸಿರಾಡಬೇಕಿದೆ
ಎಂಬೆಲ್ಲಾ ಕನಸುಗಳ ಹೊತ್ತಿರುವ
ಕಾಡಿನ ಜೀವಂತಿಕೆಯನ್ನೇ ಉಸಿರಾಡುವ
ಈ ಭೂಮಿಯ ಬೆರಗು ನಾನು.

ಅಳಲಾರದ, ಸ್ಪಂದಿಸಲಾರದ,
ಜೊತೆಗೂಡಿ ಕುಣಿಯಲಾರದ,
ಎಲ್ಲಕ್ಕೂ ಮೌನದಲ್ಲೇ ತಲೆದೂಗಿಬಿಡುವ,
ಆಯುಧವಿಲ್ಲದೇ ಕೊಲ್ಲಬಲ್ಲ,
ನಿರ್ವಿಕಾರದಿಂದ ನಡೆಯಬಲ್ಲ ಗಂಡಿನೊಂದಿಗೆ
ಕೊನೆವರೆಗೂ ಜೊತೆಸೇರಿ ನಡೆಯಲು,
ಆ ಪುರುಷನೊಂದಿಗೆ ನಕ್ಕುನಲಿಯಬಲ್ಲ
ಅಳಬಲ್ಲ, ಅಪ್ಪಿ ಮುದ್ದಾಡಬಲ್ಲ,
ಪೊರೆಯಬಲ್ಲ, ಕುಣಿಸಬಲ್ಲ
ಮಣಿಸಬಲ್ಲ, ಅಸಾಮಾನ್ಯ ಶಕ್ತಿಯ
ಪ್ರತಿರೂಪ ನಾನು.

‍ಲೇಖಕರು avadhi

May 1, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: